Site icon Vistara News

Raja Marga Column: ಬೆಲೆ ಕಟ್ಟಲಾಗದ ಬೆಟ್ಟದ ಜೀವ; ಡಾ. ಕಾರಂತರ ಜನ್ಮ ದಿನ ಇಂದು

Kota Shivarama Karanta

ಕನ್ನಡ ಸಾಹಿತ್ಯದ ಆಲದ ಮರ ಶಿವರಾಮ ಕಾರಂತರಿಗೆ ನುಡಿನಮನ- ಭಾಗ 1

95 ವರ್ಷ ಬದುಕಿದ್ದ ಕೋಟ ಶಿವರಾಮ ಕಾರಂತರು (Kota Shivarama karanta) ತನ್ನ ಬರಹ, ಬದುಕು, ಹೋರಾಟ ಮತ್ತು ಮಾನವೀಯ ಮೌಲ್ಯಗಳಿಂದ ಕನ್ನಡದ ಸಾರಸ್ವತ ಲೋಕವನ್ನು ಶ್ರೀಮಂತವಾಗಿ ಬೆಳಗಿದವರು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೈಯಾಡಿಸಿದ ಕಾರಂತರು ನಿರಂತರ 65 ವರ್ಷ ಬರೆದರು. ಬರೆದ ಹಾಗೆ ಬದುಕಿದರು. ಮುಖವಾಡ ಇಲ್ಲದೆ ಬಾಳಿದರು. ಯಾರ ಮುಲಾಜಿಗೂ ಕ್ಯಾರೇ ಅನ್ನದೆ ಬರೆದರು. ಕಾರಂತರಿಗೆ ಉಪಮೆ ಕಾರಂತರು ಮಾತ್ರ (Raja Marga Column)!

ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳು

ಕಾರಂತರು ತಮ್ಮ ಜೀವನದಲ್ಲಿ ಬರೆದದ್ದು ಬರೋಬ್ಬರಿ 427 ಶ್ರೇಷ್ಠ ಕೃತಿಗಳನ್ನು! ಇಷ್ಟೊಂದು ವಿಸ್ತಾರವಾಗಿ ಮತ್ತು ವೈವಿಧ್ಯಮಯವಾಗಿ ಬರೆದ ಇನ್ನೊಬ್ಬ ಲೇಖಕರು ನಮಗೆ ಕನ್ನಡದಲ್ಲಿ ದೊರೆಯುವುದಿಲ್ಲ. ಅವರು ಬರೆದದ್ದು 46 ಕಾದಂಬರಿಗಳು, 24 ನಾಟಕಗಳು, 3 ಕಥಾ ಸಂಕಲನಗಳು, 6 ಪ್ರಬಂಧಗಳು, 9 ಕಲಾ ಗ್ರಂಥಗಳು, 5 ಆತ್ಮ ಕಥನಗಳು, 25 ಮಕ್ಕಳ ಸಾಹಿತ್ಯ ಕೃತಿಗಳು, 10ಕ್ಕಿಂತ ಹೆಚ್ಚು ವೈಜ್ಞಾನಿಕ ಕೃತಿಗಳು……ಈ ಪಟ್ಟಿ ಮುಗಿಯುವುದೇ ಇಲ್ಲ. ಕನ್ನಡದ ಕಾವ್ಯ ಪ್ರಪಂಚ ಬಿಟ್ಟು ಬೇರೆಲ್ಲಾ ವಿಭಾಗದಲ್ಲಿ ಕಾರಂತರು ಶ್ರೇಷ್ಠವಾದ ಕೃತಿಗಳನ್ನು ರಚನೆ ಮಾಡಿದ್ದಾರೆ.

ಕಾರಂತರು ಒಬ್ಬ ಪರಿಸರ ಹೋರಾಟಗಾರ, ಕವಿ, ಕಾದಂಬರಿಕಾರ, ನಾಟಕಗಾರ, ಅನುವಾದಕ, ವೈಚಾರಿಕ ಬರೆಹಗಾರ, ವೈಜ್ಞಾನಿಕ ಚಿಂತಕ, ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಸಿರಿಗನ್ನಡ ಅರ್ಥಕೋಶ ಮೊದಲಾದ ಮಹಾಕೃತಿಗಳ ಲೇಖಕ, ಸಿನಿಮಾ ನಟ, ಯಕ್ಷಗಾನದ ಸಂಶೋಧಕ, ಯಕ್ಷಗಾನ ಬ್ಯಾಲೆಗಳ ನಿರ್ದೇಶಕ, ಶಿಕ್ಷಣ ತಜ್ಞ….. ನೀವು ಅವರನ್ನು ಯಾವ ಹೆಸರಿನಿಂದ ಕರೆಯುತ್ತೀರೋ ಕಾರಂತರು ಆ ಎರಕಕ್ಕೆ ಹೊಂದಿಕೊಳ್ಳುತ್ತಾರೆ. ಅವರ ಕಲಿಯುವ ಆಸಕ್ತಿ ಮತ್ತು ಜಗತ್ತನ್ನು ಕುತೂಹಲದಿಂದ ಗಮನಿಸುವ ಮುಗ್ಧತೆ ಇವುಗಳು ಅವರನ್ನು ಲೆಜೆಂಡ್ ಪಟ್ಟಕ್ಕೆ ಏರಿಸಿದವು.

ಆ ಕಾರಣಕ್ಕೆ ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಎಂದು ಖಚಿತವಾಗಿ ಹೇಳಬಹುದು.

ಕನ್ನಡದ ಶ್ರೇಷ್ಠ ಕಾದಂಬರಿಕಾರರು

ಕಾರಂತರು 46 ಕಾದಂಬರಿ ಬರೆದು ಲೋಕಾರ್ಪಣೆ ಮಾಡಿದ್ದಾರೆ. ಕಾರಂತರ ಕಾದಂಬರಿಗಳು ಅತಿರಂಜಿತ ಮೆಲೋಡ್ರಾಮಾಗಳು ಅಲ್ಲ. ತಮ್ಮ ಸಹಜವಾದ ನಿರೂಪಣೆ, ವ್ಯಕ್ತಿತ್ವಗಳ ಅನಾವರಣ, ಸುಂದರ ಮತ್ತು ಸರಳವಾದ ಕಥನ, ಗ್ರಾಮ ಜೀವನಗಳ ಬವಣೆಗಳು ಮತ್ತು ಮಾನವೀಯ ಮೌಲ್ಯಗಳ ಸ್ಪರ್ಶ, ಆಧುನಿಕ ಬದುಕಿನ ಮುಖವಾಡಗಳು, ಮನುಷ್ಯನ ಸೋಗಲಾಡಿ ವ್ಯಕ್ತಿತ್ವದ ಅಣಕು ಇವೆಲ್ಲದರಿಂದ ಅವರ ಕಾದಂಬರಿಗಳು ತುಂಬಾ ಶ್ರೀಮಂತವಾಗಿವೆ. ಕುವೆಂಪು ಅವರ ಹಾಗೆ ಹೆಚ್ಚು ಅಲಂಕಾರ, ದೀರ್ಘ ವಾಕ್ಯಗಳು, ವರ್ಣನೆಗಳು ಕಾರಂತರ ಕಾದಂಬರಿಯಲ್ಲಿ ಬರುವುದೇ ಇಲ್ಲ. ಆದರೆ ಬದುಕಿನ ಮೌಲ್ಯಗಳ ಬಗ್ಗೆ ಕೊರತೆಯೇ ಇಲ್ಲ.

ಮೂರು ತಲೆಮಾರುಗಳ ಕಥೆ ಆದ ‘ಮರಳಿ ಮಣ್ಣಿಗೆ ‘ ಅವರ ಮಾಸ್ಟರ್ ಪೀಸ್ ಕಾದಂಬರಿ. ಅದು ಪರ್ಲ್ ಬಕ್ ಎಂಬವರ ಇಂಗ್ಲಿಷ್ ಕಾದಂಬರಿ ‘ಗುಡ್ ಅರ್ತ್’ ಅದರಿಂದ ಪ್ರಭಾವಿತ ಆದದ್ದು. ಆದರೆ ನಿರೂಪಣೆಗೆ ಬಂದಾಗ ಅದು ಕಾರಂತರದ್ದೆ ಶೈಲಿಯ ಕಾದಂಬರಿ. ಗ್ರಾಮಾಂತರ ಬದುಕಿನಲ್ಲಿ ಆಗುತ್ತಿರುವ ಪಲ್ಲಟಗಳ ಬಗ್ಗೆ ಅವರಷ್ಟು ಚೆನ್ನಾಗಿ ಬೇರೆ ಯಾರೂ ಬರೆಯಲು ಸಾಧ್ಯವೇ ಇಲ್ಲ. ‘ಚಿಗುರಿದ ಕನಸು’ ಯುವಜನತೆಗೆ ಪ್ರೇರಣೆ ನೀಡುವ ಕಾದಂಬರಿ. ದೊಡ್ಡ ಸಂಬಳ ಪಡೆಯುತ್ತಿರುವ ಒಬ್ಬ ಎಂಜಿನಿಯರ್ ಉಸಿರು ಕಟ್ಟುವ ವ್ಯವಸ್ಥೆಯಿಂದ ಭ್ರಮ ನಿರಸನವಾಗಿ ತನ್ನ ಹಳ್ಳಿಗೆ ಬಂದು ಅದನ್ನು ಅಭಿವೃದ್ಧಿಪಡಿಸುವ ಕಥೆಯನ್ನು ಹೊಂದಿದೆ.

‘ಚೋಮನ ದುಡಿ’ ಅದು ಕ್ಲಾಸಿಕ್. ಚೋಮ ಎಂಬ ತುಳಿತಕ್ಕೆ ಒಳಗಾದ ಜನಾಂಗದ ಪ್ರತಿನಿಧಿ, ಅವನ ಮೇಲೆ ಮುಂದುವರಿದ ಸಮಾಜದ ಕ್ರೌರ್ಯವನ್ನು ಕಾರಂತರು ತುಂಬಾ ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ‘ಮೂಕಜ್ಜಿಯ ಕನಸು’ ಕಾದಂಬರಿಯು ಭಾರತದ ಶ್ರೇಷ್ಠ ಕಾದಂಬರಿಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಅದರಲ್ಲಿ ಬರುವ ವಿಧವೆ ಮೂಕಾಂಬಿಕೆಯು ಮುಂದೆ ಜನರ ಬಾಯಲ್ಲಿ ಮೂಕಿ ಆಗುವ, ಮೂಕಜ್ಜಿ ಆಗುವ ರೂಪಾಂತರಗಳು, ಮೌಢ್ಯಗಳ ವಿರುದ್ಧ ಆಕೆಯ ಮೌನ ಹೋರಾಟ, ಆಕೆಯ ಇತಿಹಾಸ ಪ್ರಜ್ಞೆ ಎಲ್ಲವೂ ಓದುಗರನ್ನು ಥಟ್ಟನೆ ಸೆಳೆದು ಬಿಡುತ್ತವೆ.

‘ಬೆಟ್ಟದ ಜೀವ’ ನನಗೆ ಇಷ್ಟವಾದ ಕಾದಂಬರಿ. ಗೋಪಾಲ ಭಟ್ಟ ಮತ್ತು ಶಂಕರಿ ಎಂಬ ವೃದ್ಧ ದಂಪತಿಗಳನ್ನು ಕಾಡುವ ಒಬ್ಬಂಟಿತನ, ಖಿನ್ನತೆ, ಮತ್ತೆ ಜೀವನೋತ್ಸಾಹದ ಮೂಲಕ ಎದ್ದು ನಿಲ್ಲುವ ಪಾಸಿಟಿವ್ ಚಿಂತನೆ…. ಎಲ್ಲವನ್ನೂ ಬಹಳ ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ತೋರಿಸಿರುವ ಕಾದಂಬರಿ ಅದು.

‘ಸರಸಮ್ಮನ ಸಮಾಧಿ’ ಆ ಕಾಲಕ್ಕೆ ಕ್ರಾಂತಿ ಮಾಡಿದ ಕಥೆಯನ್ನು ಹೊಂದಿದೆ. ರಾಜಕೀಯದ ವಿಡಂಬನೆ ಇರುವ ‘ಔದಾರ್ಯದ ಉರುಳಲ್ಲಿ’ ಎಲ್ಲ ಕಾಲಕ್ಕೆ ಸಲ್ಲುವ ಕೃತಿ. ಕಾರಂತರ ಕಾದಂಬರಿಗಳಲ್ಲಿ ಅವರ ಸ್ತ್ರೀ ಪರವಾದ ನಿಲುವುಗಳು, ಭೃಷ್ಟ ಸಾಮಾಜಿಕ ವ್ಯವಸ್ಥೆಯ ವಿರುದ್ಧವಾದ ಸಾತ್ವಿಕ ಸಿಟ್ಟು, ಗೊಡ್ಡು ಸಂಪ್ರದಾಯಗಳ ವಿರುದ್ಧ ಮೌನ ಕ್ರಾಂತಿ, ವೈಜ್ಞಾನಿಕ ಮನೋಭಾವ, ಜಾತಿ ವ್ಯವಸ್ಥೆಯಿಂದ ಸಮಾಜ ದಾರಿ ತಪ್ಪುತ್ತಿರುವ ಬಗ್ಗೆ ಎಚ್ಚರ…ಇವೆಲ್ಲವೂ ಕಾರಂತರನ್ನು ಭಾರತದ ಶ್ರೇಷ್ಠ ಕಾದಂಬರಿಕಾರರ ಸಾಲಿನಲ್ಲಿ ಪ್ರತಿಷ್ಠೆ ಮಾಡಿವೆ.

‘ನಾನು ದೇವರನ್ನು ನೋಡಿಲ್ಲ. ಆದ್ದರಿಂದ ದೇವರನ್ನು ನಂಬುವುದಿಲ್ಲ’ ಎನ್ನುವುದು ಅವರ ನಿಲುವು. ಆದರೆ ಆ ನಂಬಿಕೆಯನ್ನು ಅವರು ಯಾರ ಮೇಲೆ ಕೂಡ ಹೇರುವ ಪ್ರಯತ್ನ ಮಾಡಿಲ್ಲ ಅನ್ನುವುದು ಕಾರಂತರ ಹಿರಿಮೆ.

ಕಾರಂತರ ಕಾದಂಬರಿಗಳು ಭಾರತದ ಹೆಚ್ಚಿನ ಭಾಷೆಗಳಿಗೆ ಅನುವಾದ ಆಗಿವೆ. ಅದರಲ್ಲಿ ಬೆಟ್ಟದ ಜೀವ, ಚಿಗುರಿದ ಕನಸು, ಚೋಮನ ದುಡಿ ಮೊದಲಾದ ಕಾದಂಬರಿಗಳು ಸಿನಿಮಾ ಆಗಿ ಹಲವು ಪ್ರಶಸ್ತಿಗಳನ್ನು ಪಡೆದಿವೆ. ಚೋಮನ ದುಡಿ ರಾಷ್ಟ್ರಪ್ರಶಸ್ತಿ ಪಡೆಯಿತು. ಆ ಸಿನಿಮಾಕ್ಕೆ ಸಂಭಾಷಣೆ ಕೂಡ ಕಾರಂತರೇ ಬರೆದಿದ್ದಾರೆ. ಚೋಮನ ಪಾತ್ರ ಮಾಡಿದ ವಾಸುದೇವ ರಾವ್ ಅವರಿಗೆ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯು ಒಲಿದು ಬಂದಿತ್ತು. ಹಲವಾರು ಉತ್ಸಾಹಿಗಳು ಕಾರಂತರ ಕಾದಂಬರಿಗಳ ಬಗ್ಗೆ ಸಂಶೋಧನೆ ಮಾಡಿ ತಮ್ಮ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಬಾಲವನದಲ್ಲಿ ಕಾರಂತಜ್ಜ – ಚಿಣ್ಣರ ಅಚ್ಚುಮೆಚ್ಚು

ಕಾರಂತರು ಪ್ರೌಢ ಕಾದಂಬರಿ ಬರೆದಷ್ಟೆ ಸಲೀಸಾಗಿ ಮಕ್ಕಳ ಸಾಹಿತ್ಯವನ್ನು ಕೂಡ ಬರೆದರು. ಅವರು ಬರೆದ 24 ನಾಟಕಗಳು ಮಕ್ಕಳಿಗಾಗಿ ಬರೆದ ಹಾಗೆ ನನಗೆ ಅನ್ನಿಸುತ್ತದೆ. ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಸಿರಿಗನ್ನಡ ಅರ್ಥ ಕೋಶ, ಯಕ್ಷಗಾನ ಬಯಲಾಟ, ಚಿತ್ರಮಯ ದಕ್ಷಿಣಕನ್ನಡ ಇವೆಲ್ಲವೂ ಮಕ್ಕಳ ಜ್ಞಾನವನ್ನು ಹೆಚ್ಚಿಸುವ ಅದ್ಭುತ ಕೃತಿಗಳು. ವಿಜ್ಞಾನ ಪ್ರಪಂಚ ಕಾರಂತರ ದಶಕಗಳ ನಿರಂತರ ಅಧ್ಯಯನದ ಫಲ. ಹತ್ತಕ್ಕೂ ಅಧಿಕ ವಿಜ್ಞಾನದ ಕೃತಿಗಳನ್ನು ಅವರು ಬರೆದಿದ್ದಾರೆ.

ಪದವಿಯ ಆಸೆಯನ್ನು ತೊರೆದು ಸ್ವಾತಂತ್ರ್ಯದ ಹೋರಾಟಕ್ಕೆ ಧುಮುಕಿದ ಕಾರಂತರು ಮುಂದೆ ಅಷ್ಟೊಂದು ಜ್ಞಾನವನ್ನು ಸಂಪಾದನೆ ಮಾಡಿಕೊಂಡದ್ದು ನಿರಂತರ ಅಧ್ಯಯನದ ಮೂಲಕ .

‘ಮಕ್ಕಳ ಸಾಹಿತ್ಯ ತುಂಬಾ ಕಷ್ಟ’ ಎಂದು ಒಪ್ಪಿಕೊಳ್ಳುವ ಕಾರಂತರು ಇಷ್ಟೊಂದು ಮಕ್ಕಳ ಕೃತಿಗಳನ್ನು ರಚನೆ ಮಾಡಿದ್ದು ನಿಜವಾಗಿ ಗ್ರೇಟ್. ತರಂಗ ವಾರಪತ್ರಿಕೆಯಲ್ಲಿ ಕಾರಂತರು ದೀರ್ಘವಾಗಿ ಬರೆದ ‘ಬಾಲವನದಲ್ಲಿ ಕಾರಂತಜ್ಜ’ ಮಕ್ಕಳ ಕುತೂಹಲದ ಪ್ರಶ್ನೆಗಳಿಗೆ ಅಜ್ಜನಾಗಿ ಕಾರಂತರು ಸರಸವಾಗಿ ಉತ್ತರಿಸುವ ಸರಣಿಗಳು. ಅವು ತುಂಬಾ ಜನಪ್ರಿಯ ಆಗಿದ್ದವು.

(ನಾಳೆಗೆ ಮುಂದುವರಿಯುತ್ತದೆ)

Exit mobile version