Site icon Vistara News

ರಾಜ ಮಾರ್ಗ ಅಂಕಣ | ತಮಿಳುನಾಡಿನ ಚಹರೆಯನ್ನೇ ಬದಲಾಯಿಸಿದ ಮಹಾನಾಯಕ ಪುರಚ್ಚಿ ತಲೈವರ್‌ ಎಂ.ಜಿ.ಆರ್

MGR - Jayalalitha

ತಮಿಳುನಾಡಿನ ಸಿನಿಮಾ ರಂಗ, ರಾಜಕೀಯ ಮತ್ತು ಸಾಂಸ್ಕೃತಿಕ ಅಸ್ಮಿತೆಗಳ ಚಹರೆಯನ್ನು ಬದಲಾಯಿಸಿದ ಒಂದು ಹೆಸರು ಇದ್ದರೆ ಅದು ಎಂ.ಜಿ. ರಾಮಚಂದ್ರನ್. ಅವರ ಬದುಕಿನ ಪ್ರತೀ ಪುಟವೂ ಅವರ ಸಿನಿಮಾಗಳ ಹಾಗೆ ವರ್ಣರಂಜಿತ ಮತ್ತು ಸ್ಫೂರ್ತಿದಾಯಕ ಸಂಗತಿ!

ಅನಾಥವಾದ ಬಾಲ್ಯದ ಅಸಹಾಯಕತೆ
ನಿಮಗೆ ಆಶ್ಚರ್ಯ ಆಗಬಹುದು ಏಕೆಂದರೆ ಎಂ.ಜಿ.ಆರ್ ಹುಟ್ಟಿದ್ದು ತಮಿಳುನಾಡಿನಲ್ಲಿ ಅಲ್ಲ. ಅವರು ಹುಟ್ಟಿದ್ದು ಶ್ರೀಲಂಕಾದ ಕ್ಯಾಂಡಿಯಲ್ಲಿ! ಅದೂ ಮಲಯಾಳಿ ಕುಟುಂಬದಲ್ಲಿ! ಎರಡೂವರೆ ವರ್ಷ ಪ್ರಾಯದಲ್ಲಿ ಅಪ್ಪನನ್ನು ಕಳೆದುಕೊಂಡಾಗ ತನ್ನ ಇಬ್ಬರು ಗಂಡು ಮಕ್ಕಳನ್ನು ಎದೆಗೆ ಅವುಚಿಕೊಂಡು ಅಮ್ಮ ಸತ್ಯಭಾಮ ಮಾಡದ ಕೆಲಸ ಇಲ್ಲ! ಈ ಕಷ್ಟಗಳ ನಡುವೆ ಅಣ್ಣ ತಮ್ಮಂದಿರಾದ ರಾಮಚಂದ್ರನ್ ಮತ್ತು ಚಕ್ರಪಾಣಿ ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಡ್ರಾಪ್ ಔಟ್ ಆದರು. ಹೊಟ್ಟೆಪಾಡಿಗೆ ಅವರು ಸೇರಿದ್ದು ನಾಟಕ ಮಂಡಳಿಯನ್ನು. ಆರಂಭದಲ್ಲಿ ರಾಮಚಂದ್ರನ್ ಮಾಡಿದ್ದು ಸ್ತ್ರೀ ಪಾತ್ರಗಳನ್ನು. ಮುಂದೆ ಅವರಿಬ್ಬರೂ ಪ್ರಸಿದ್ಧ ನಾಟಕ ಕಲಾವಿದರಾದರು.

೧೯ನೇ ವಯಸ್ಸಿಗೇ ಸಿನೆಮಾ ಹೀರೋ ಆದರು
1936ರಲ್ಲಿ ಸತೀ ಶೀಲವತಿ ಎಂಬ ಸಿನಿಮಾದ ಮೂಲಕ ತಮಿಳು ಸಿನಿಮಾ ರಂಗವನ್ನು ಪ್ರವೇಶ ಮಾಡಿದಾಗ ಅವರಿಗೆ ಕೇವಲ 19 ವರ್ಷ! ಯಾವುದೇ ಗಾಡ್ ಫಾದರ್ ಅಥವಾ ಸಪೋರ್ಟರ್ ಇಲ್ಲದೆ ಅವರು ಸಿನಿಮಾ ರಂಗದಲ್ಲಿ ಅರ್ಧ ಶತಕಗಳ ಕಾಲ ಸೂಪರ್ ಸ್ಟಾರ್ ಆಗಿ ಮಿಂಚಿದ್ದು ಸ್ವಂತ ಪ್ರತಿಭೆಯಿಂದ! ಆಗ ಅವರಿಗೆ ಚಿತ್ರಕತೆ ಮತ್ತು ಸಂಭಾಷಣೆ ಬರೆಯುತ್ತಿದ್ದ ಕರುಣಾನಿಧಿ ಮುಂದೆ ಅವರ ರಾಜಕೀಯ ವೈರಿ ಆದರು ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಕೂಡ ಆದರು!

ರಾಜಕೀಯ ಗುರು ಅಣ್ಣಾದೊರೈ ಅವರ ದಟ್ಟ ಪ್ರಭಾವ!
ಒಂದರ ಹಿಂದೆ ಒಂದು ಸಿನಿಮಾ ಸೂಪರ್ ಹಿಟ್ ಆಗುತ್ತಾ ಹೋದಹಾಗೆ ರಾಮಚಂದ್ರನ್ ತಮಿಳು ಸಿನಿಮಾದಲ್ಲಿ ‘ಡೆಮಿ ಗಾಡ್ ‘ ಎಂದು ಕರೆಸಿಕೊಂಡರು. ಅವರಿಗೆ ತಮಿಳುನಾಡಿನಲ್ಲಿ ಕೋಟಿ ಕೋಟಿ ಅಭಿಮಾನಿಗಳು. ಜನರು ಅವರಿಗೆ ಇಟ್ಟ ಹೆಸರು ಪುರಚ್ಚಿ ತಲೈವರ್ (ಕ್ರಾಂತಿಕಾರಿ ನಾಯಕ)! ಅವರು ಜನಪ್ರಿಯತೆಯ ಶಿಖರದಲ್ಲಿ ಇರುವಾಗಲೇ ಅವರು ರಾಜಕೀಯ ರಂಗ ಪ್ರವೇಶಿಸಿದರು. ಆಗ ತಮಿಳುನಾಡಿನ ರಾಜಕೀಯ ಪಿತಾಮಹ ಆದ ಅಣ್ಣಾದೊರೈ ಅವರ ಪ್ರಭಾವಕ್ಕೆ ಒಳಗಾಗಿ ಎಂ.ಜಿ.ಆರ್ ಅವರು ಅಣ್ಣಾ ದೊರೈ ಅವರ ದ್ರಾವಿಡ ಮುನ್ನೇತ್ರ ಕಳಗಮ್ ಪಕ್ಷದ ಯುವರಾಜ ಆದರು! ಅಣ್ಣಾ ದೊರೈ ಮತ್ತು ರಾಮಚಂದ್ರನ್ ಅವರ ಗುರು ಶಿಷ್ಯರ ಸಂಬಂಧವು ಕೊನೆಯವರೆಗೆ ಮಧುರವಾಗಿಯೇ ಇತ್ತು! ಮುಂದೆ ಅಣ್ಣಾ ದೊರೈ ತೀರಿದ ಬಳಿಕ ರಾಜಕೀಯ ಪಕ್ಷದಲ್ಲಿ ಕರುಣಾನಿಧಿ ಕಾರುಬಾರು ಹೆಚ್ಚಾದ ಹಾಗೆ ಎಂ.ಜಿ.ಆರ್ ಅವರು ಪಕ್ಷದಿಂದ ಹೊರಗೆ ಬಂದು ಆಲ್ ಇಂಡಿಯಾ ಅಣ್ಣಾ ಡಿಎಂಕೆ ಎಂಬ ಹೊಸ ಪಕ್ಷದ ಸ್ಥಾಪನೆ ಮಾಡಿದರು. ಮುಂದೆ ಅವರೇ ಆ ಪಕ್ಷದ ಗೆಲ್ಲುವ ಕುದುರೆ ಆದರು. ಸತತವಾಗಿ ವಿಧಾನಸಭೆಗೆ ಆಯ್ಕೆ ಆದರು. ಸೋಲಿಲ್ಲದ ಸರದಾರ ಆದರು. ಜಯಲಲಿತಾ ಮೊದಲಾದವರನ್ನು ರಾಜಕೀಯಕ್ಕೆ ಕರೆದುಕೊಂಡು ಬಂದರು.

ಕರುಣಾನಿಧಿ vs ಎಂ.ಜಿ.ಆರ್
ಅವರಿಬ್ಬರ ವಿರಸ ಅನ್ನುವುದು ತಮಿಳುನಾಡು ರಾಜಕೀಯದ ವರ್ಣರಂಜಿತ ಅಧ್ಯಾಯ ಎಂದು ಮೊದಲೇ ಹೇಳಿದ್ದೇನೆ. ಆರಂಭದಲ್ಲಿ ಕರುಣಾನಿಧಿ ಬರೆದುಕೊಡುತ್ತಿದ್ದ ಸಂಭಾಷಣೆಗಳನ್ನು ಸಿನಿಮಾದಲ್ಲಿ ಹೇಳುತ್ತಿದ್ದ ಎಂ.ಜಿ. ಆರ್ ಮುಂದೆ ತಮ್ಮ ಪವರ್‌ಫುಲ್ ಭಾಷಣಗಳ ಮೂಲಕ ಕರುಣಾನಿಧಿಯವರನ್ನು ತಿವಿಯುತ್ತ ಹೋದರು. ಕರುಣಾನಿಧಿ ಏನು ಕಡಿಮೆ ತಾಕತ್ತಿನವರೇ? ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಬೃಹತ್ ರ‍್ಯಾಲಿಗಳು ಉರಿಚೆಂಡಿನ ಭಾಷಣಗಳನ್ನು ಕೇಳಿದವು. ಮುಂದೆ ಎಂ ಜಿ ಆರ್ ಅವರು 1977ರಿಂದ 1987ರವರೆಗೆ ತಮಿಳುನಾಡಿನ ಮುಖ್ಯಮಂತ್ರಿ ಕೂಡ ಆದರು. ಅವರಿಬ್ಬರ ಸಂಘರ್ಷವನ್ನು ಕ್ಯಾನ್ವಾಸ್ ಮಾಡಿಕೊಂಡು ಮಣಿರತ್ನಂ ಅವರು ಮುಂದೆ ‘ಇರುವರ್ ‘ ಎಂಬ ಸಿನೆಮಾ ಕೂಡ ಮಾಡಿದರು.

ದಾಖಲೆಯ ಮೇಲೆ ದಾಖಲೆ!
ಒಂದು ಕಡೆಯಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆ ಆದ ಮೊದಲ ಸಿನಿಮಾ ನಟ ಎಂಬ ಕೀರ್ತಿ! ಇನ್ನೊಂದೆಡೆ ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಸಿನಿಮಾ ನಟ! ತಮಿಳುನಾಡಿನಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಸಿನಿಮಾಗಳ ನಟ! ಅವರ ಉಲಗಮ್ ಸುಟ್ರು ವಾಲಿಬನ್, ಕಾವಲ ಕಾರನ್, ರಿಕ್ಷಾಕಾರನ್ ಮೊದಲಾದ ಸಿನಿಮಾಗಳು ಭಾರೀ ಜನಪ್ರಿಯತೆಯನ್ನು ಪಡೆದವು. ರಿಕ್ಷಾಕಾರನ್ ಸಿನೆಮಾದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಅವರಿಗೆ ದೊರೆಯಿತು. ಅವರ ಮತ್ತು ಜಯಲಲಿತಾ ಅವರ ಜೋಡಿ ತಮಿಳಿನಲ್ಲಿ ಸೂಪರ್ ಹಿಟ್ ಜೋಡಿ ಆಯ್ತು. ಅವರ ಉದ್ದುದ್ದ ಸಂಭಾಷಣೆ ಒಪ್ಪಿಸುವ ರೀತಿ, ಫೈಟಿಂಗ್ ದೃಶ್ಯಗಳು, ಭಾವನಾತ್ಮಕ ಅಭಿನಯ… ಎಲ್ಲದರಲ್ಲೂ ಅವರು ಗೆದ್ದು ಬಂದರು. ತಮಿಳುನಾಡಿನ ಆರಾಧ್ಯ ದೇವರು ಆಗಿಬಿಟ್ಟರು.

ಆ ಕಾಲದಲ್ಲಿ ತಮಿಳುನಾಡಿನ ಪ್ರತೀ ಮನೆಯಲ್ಲಿಯೂ ದೇವರ ಕೋಣೆಯಲ್ಲಿ ಎಂ.ಜಿ.ಆರ್ ಫೋಟೋ ಇಟ್ಟು ಜನರು ಪೂಜೆ ಮಾಡುತ್ತಿದ್ದರು! ಅದಕ್ಕೆ ಕಾರಣ ಅವರ ಅಭಿನಯ ಸಾಮರ್ಥ್ಯ, ಜನಪರ ಕಾಳಜಿ ಮತ್ತು ಸೇವಾ ಮನೋಭಾವಗಳು ಎಂದು ನನ್ನ ಅನಿಸಿಕೆ. ಹನ್ನೊಂದು ವರ್ಷಗಳ ದೀರ್ಘ ಅವಧಿಗೆ ತಮಿಳುನಾಡಿನ ಮುಖ್ಯಮಂತ್ರಿ ಆಗಿ ತನ್ನ ಬಜೆಟ್ಟಿನ 60% ದುಡ್ಡನ್ನು ಬಡವರ ಏಳಿಗೆಗೆ ಮೀಸಲು ಇಟ್ಟರು. 1987ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೆ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದರು. ಅವರು ಆಗಲಿ ಎಷ್ಟೋ ವರ್ಷಗಳ ನಂತರವೂ ಎಐಎಡಿಎಂಕೆ ರ‍್ಯಾಲಿಗಳಿಗೆ ಜನರು ಅವರನ್ನು ಹುಡುಕಿಕೊಂಡು ಬರುತ್ತಿದ್ದರು. ಅವರಿಗೆ ಮರಣೋತ್ತರವಾಗಿ ಮುಂದೆ ರಾಜೀವ್ ಗಾಂಧಿ ಸರಕಾರವು ಭಾರತರತ್ನ ಪ್ರಶಸ್ತಿಯನ್ನು ಕೂಡ ಘೋಷಣೆ ಮಾಡಿತು!

ತಮಿಳರ ಹೃದಯದಲ್ಲಿ ಈಗಲೂ ಬದುಕಿದ್ದಾರೆ!
ಇಂದು ತಮಿಳುನಾಡಿನ ಎಲ್ಲ ನಗರಗಳಲ್ಲಿ ಅವರ ಆಳೆತ್ತರದ ಮೂರ್ತಿಗಳನ್ನು ಸ್ಥಾಪನೆ ಮಾಡಲಾಗಿದೆ. ಅವರ ಹೆಸರಿನಲ್ಲಿ ನೂರಾರು ರಸ್ತೆಗಳು, ರೈಲ್ವೆ ಸ್ಟೇಷನ್‌ಗಳು, ವಿಮಾನ ನಿಲ್ದಾಣಗಳು, ಬಸ್ ಸ್ಟಾಂಡ್‌ಗಳು ತಮಿಳುನಾಡಿನಲ್ಲಿ ಇವೆ! ಜನರು ಈಗಲೂ ಮುಗಿಬಿದ್ದು ಅವರ ಸಿನೆಮಾ ನೋಡುತ್ತಿದ್ದಾರೆ. ಅವರ ಬದುಕಿನ ಬಗ್ಗೆ 400ಕ್ಕಿಂತ ಹೆಚ್ಚು ಪುಸ್ತಕಗಳು ಬಂದಿವೆ ಮತ್ತು ಎಲ್ಲವೂ ಜನಪ್ರಿಯ ಆಗಿವೆ.

ತಮಿಳುನಾಡಿನ ಭಾವುಕ ಅಭಿಮಾನಿಗಳು ತಮಿಳುನಾಡಿನಲ್ಲಿ ಜನಿಸಿರದ, ತಮಿಳನೂ ಅಲ್ಲದ ಒಬ್ಬ ಸಿನಿಮಾ ಸ್ಟಾರನ್ನು ಲೆಜೆಂಡ್ ಮಾಡಿ ಪೂಜೆ ಮಾಡಿದ್ದು ಒಂದು ಅದ್ಭುತವೇ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ನಮ್ಮ ನಮ್ಮ ಇಮೇಜ್‌ಗಳಿಂದ ಹೊರಬರುವುದು ಅಷ್ಟು ಸುಲಭದ ಮಾತೇನೂ ಅಲ್ಲ

Exit mobile version