Site icon Vistara News

ರಾಜ ಮಾರ್ಗ ಅಂಕಣ : ಜಿ.ಆರ್.‌ ವಿಶ್ವನಾಥ್‌ ಆ ನಿರ್ಧಾರದಿಂದ ಭಾರತ ಸೋತಿತ್ತು, ಆದರೆ, ಕ್ರಿಕೆಟ್‌ ಗೆದ್ದಿತ್ತು!

#image_title

ಫೆಬ್ರವರಿ 19, 1980.
ಮುಂಬೈಯ ವಿಶಾಲವಾದ ವಾಂಖೆಡೆ ಸ್ಟೇಡಿಯಂ!
ಅಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಒಂದು ಐತಿಹಾಸಿಕ ಕ್ರಿಕೆಟ್ ಟೆಸ್ಟ್ ಪಂದ್ಯ ಏರ್ಪಟ್ಟಿತ್ತು.
ಅದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ)ಯ ಸುವರ್ಣ ಮಹೋತ್ಸವದ ಸ್ಮರಣೀಯ ಪಂದ್ಯವಾಗಿತ್ತು. ಆ ಪಂದ್ಯವನ್ನು ವೀಕ್ಷಣೆ ಮಾಡಲು ವಾಂಖೆಡೆ ಕ್ರೀಡಾಂಗಣವು ಭರ್ತಿ ಆಗಿತ್ತು.
ಮತ್ತೂ ವಿಶೇಷ ಏನೆಂದರೆ ಅದುವರೆಗೆ ಐವತ್ತು ವರ್ಷಗಳ ಅವಧಿಯಲ್ಲಿ ಭಾರತೀಯ ತಂಡದಲ್ಲಿ ಆಡಿದ್ದ ಮತ್ತು ಅದುವರೆಗೆ ಜೀವಂತವಾಗಿದ್ದ ಎಲ್ಲ ಭಾರತೀಯ ಕ್ರಿಕೆಟರ್‌ಗಳನ್ನು ಅಲ್ಲಿ ಅತಿಥಿಗಳಾಗಿ ಕರೆಯಲಾಗಿತ್ತು!

ಭಾರತೀಯ ಕ್ರಿಕೆಟ್ ತಂಡದ ನಾಯಕ ಆಗಿದ್ದವರು ಆಗಿನ ಕಾಲದ ಶ್ರೇಷ್ಠ ಬ್ಯಾಟರ್ ಗುಂಡಪ್ಪ ವಿಶ್ವನಾಥ್ ಅವರು. ಅವರು ಕರ್ನಾಟಕದ ಭದ್ರಾವತಿಯವರು ಎನ್ನುವುದು ನಮಗೆ ಹೆಮ್ಮೆಯ ಸಂಗತಿ! ಅವರ ಕ್ರಿಕೆಟ್ ಸಾಧನೆಯ ಬಗ್ಗೆ ಮುಂದೆ ಬರೆಯುತ್ತೇನೆ. ಆದರೆ ಅವರು ಆ ಟೆಸ್ಟ್ ಪಂದ್ಯದಲ್ಲಿ ತೋರಿದ ಕ್ರೀಡಾ ಮನೋಭಾವವು ಇಂದಿಗೂ ನಮಗೆ ಅದ್ಭುತವೇ ಆಗಿದೆ!
ಆದರೆ ಆ ಕಾಲಕ್ಕೆ ಅವರು ವಿಲನ್ ಆಗಿ ಎಲ್ಲರಿಂದ ಬೈಗುಳ ತಿನ್ನಬೇಕಾಯಿತು ಎನ್ನುವುದು ಕೂಡ ಅಷ್ಟೇ ನಿಜ!

ಓವರ್ ಟು ವಾಂಖೆಡೆ….

ಭಾರತೀಯ ಕ್ರಿಕೆಟ್ ತಂಡ ಮೊದಲು ಬ್ಯಾಟಿಂಗ್‌ ಮಾಡಿ 24೨ ರನ್ ಮಾಡಿತ್ತು. ಅದು ಆ ಕಾಲಕ್ಕೆ ಸವಾಲಿನ ಮೊತ್ತವೇ ಆಗಿತ್ತು. ನಂತರ ಬ್ಯಾಟಿಂಗ್ ಮಾಡಲು ಇಳಿದ ಇಂಗ್ಲೆಂಡ್ ಒಂದು ಹಂತಕ್ಕೆ 58/5 ಮೊತ್ತಕ್ಕೆ ಕುಸಿದಿತ್ತು. ಆಗ ಜೊತೆ ಆದವರು ಆಲ್ರೌಂಡರ್ ಇಯಾನ್ ಬಾಥಮ್ ಮತ್ತು ಕೀಪರ್ ಬಾಬ್ ಟೇಲರ್. ಅವರಿಬ್ಬರೂ ನಿಧಾನಕ್ಕೆ ರನ್ ಪೇರಿಸುತ್ತ 85/5 ಹಂತಕ್ಕೆ ತಲುಪಿದ್ದರು. ಆಗ ಕಪಿಲ್ ದೇವ್ ಎಸೆದ ಒಂದು ವೇಗದ ಬಾಲ್ ಬಾಬ್ ಟೇಲರ್ ಬ್ಯಾಟಿಗೆ ಮುತ್ತಿಟ್ಟು ವಿಕೆಟ್ ಕೀಪರ್ ಕಿರ್ಮಾನಿಯವರ ಗ್ಲೌಸ್ ಒಳಗೆ ಸೇರಿತು (ಅಥವಾ ಹಾಗೆ ಅನ್ನಿಸಿತು!). ಬೌಲರ್ ಮತ್ತು ಕೀಪರ್ ಇಬ್ಬರೂ ಬಲವಾಗಿ ಅಪೀಲ್ ಮಾಡಿದರು. ಅಂಪೈರ್ ಹನುಮಂತ ರಾವ್ ಹಿಂದೆ ಮುಂದೆ ಯೋಚಿಸದೆ ಬೆರಳು ಎತ್ತಿ ಔಟ್ ಕೊಟ್ಟರು.

ಬಾಬ್ ಟೇಲರ್ ಅಸಮಾಧಾನದಿಂದ ಭಾರವಾದ ಹೃದಯದಿಂದ ಪೆವಿಲಿಯನ್ ಕಡೆಗೆ ನಡೆಯತೊಡಗಿದರು.

ಆಗ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ಗುಂಡಪ್ಪ ವಿಶ್ವನಾಥ್ ತನ್ನ ಇತರ ಫೀಲ್ಡರ್‌ಗಳ ಜೊತೆಗೆ ಒಂದರೆ ನಿಮಿಷ ಚರ್ಚೆ ಮಾಡಿದರು. ನಂತರ ಅಂಪೈರ್ ಹನುಮಂತ ರಾವ್ ಅವರ ಬಳಿ ಹೋಗಿ ʻನಮ್ಮ ಅಪೀಲ್ ಹಿಂದೆ ಪಡೆಯುತ್ತೇವೆ. ಬಾಬ್ ಟೇಲರ್ ಔಟ್ ಇಲ್ಲʼ ಎಂದರು! ಅಂಪೈರ್ ತಮ್ಮ ತೀರ್ಪನ್ನು ವಾಪಸ್ ಪಡೆದರು. ಬಾಬ್ ಟೇಲರ್ ಮತ್ತೆ ಕ್ರೀಸಿಗೆ ಬಂದು ಬ್ಯಾಟಿಂಗ್ ಮುಂದುವರಿಸಿದರು. ಎಲ್ಲವೂ ಕ್ಷಣಾರ್ಧದಲ್ಲಿ ನಡೆದುಹೋಯಿತು! ಕ್ರೀಡಾಂಗಣ ಒಮ್ಮೆ ಸ್ತಬ್ಧವಾಯಿತು.

ಆಗ ಥರ್ಡ್ ಅಂಪೈರ್ ಕಾಲ ಆಗಿರಲಿಲ್ಲ! ಅಂಪೈರ್ ಔಟ್ ಕೊಟ್ಟರೆ ಅದನ್ನು ಪ್ರಶ್ನೆ ಮಾಡಲು ಯಾವ ವ್ಯವಸ್ಥೆ ಕೂಡ ಇರಲಿಲ್ಲ. ವಿಶ್ವನಾಥ್ ಸುಮ್ಮನೆ ಕೂತರೂ ಬಾಬ್ ಟೇಲರ್ ಹಿಂದೆ ಬರಲು ಅವಕಾಶವೇ ಇರಲಿಲ್ಲ!

ವಿಶ್ವನಾಥ್ ಅವರ ಆ ನಿರ್ಧಾರ ತುಂಬಾ ದುಬಾರಿ ಆಯ್ತು!

ಮುಂದೆ ಟೇಲರ್ ಮತ್ತು ಇಯಾನ್ ಬಾಥಮ್ 171 ರನ್ ಜೊತೆಯಾಟ ಕಟ್ಟಿದರು. ಬಾಬ್ ಟೇಲರ್ 275 ನಿಮಿಷ ಹಲ್ಲು ಕಚ್ಚಿ ಆಡಿ 43 ರನ್ ಮಾಡಿದರು. ಬಾಥಮ್ ಅತ್ಯುತ್ತಮ ಶತಕ (೧೧೪) ಹೊಡೆದರು. ಆ ಜೊತೆಯಾಟದ ಕಾರಣದಿಂದಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ೨೯೬ ರನ್‌ ಸೇರಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಭಾರತ ಕೇವಲ ೧೪೯ ರನ್‌ ಪೇರಿಸಲು ಶಕ್ತವಾಯಿತು. ಗೆಲುವಿಗೆ ಬೇಕಾಗಿದ್ದ ೯೮ ರನ್‌ಗಳನ್ನು ಇಂಗ್ಲೆಂಡ್‌ ವಿಕೆಟ್‌ ಕಳೆದುಕೊಳ್ಳದೆಯೇ ಸೇರಿಸಿತು. ಇಂಗ್ಲೆಂಡ್ ಆ ಪಂದ್ಯವನ್ನು ಹತ್ತು ವಿಕೆಟ್‌ಗಳಿಂದ ಗೆದ್ದಿತು. ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಆಗಿದ್ದ ನಾಯಕ ಗುಂಡಪ್ಪ ವಿಶ್ವನಾಥ್ ಅಂದು ಇಡೀ ಭಾರತದ ವಿಲನ್ ಆದರು! ಅವರಿಗೆ ನೂರಾರು ಬೆದರಿಕೆ ಕರೆಗಳು ಬಂದವು. ಬೈಗುಳದ ಸುರಿಮಳೆ ಆಯ್ತು! ಗ್ರೌಂಡಲ್ಲಿ ಫೀಲ್ಡ್ ಮಾಡುವಾಗ ಅವರು ಕಿಡಿಗೇಡಿಗಳ ಆಕ್ರೋಶಗಳನ್ನು ಎದುರಿಸಬೇಕಾಯಿತು!

ಆದರೆ ಬಾಬ್ ಟೈಲರ್ ನಿಜವಾಗಿ ಔಟ್ ಆಗಿರಲಿಲ್ಲ!

ಗುಂಡಪ್ಪ ವಿಶ್ವನಾಥ್ ಮುಂದೆ ಪತ್ರಿಕಾಗೋಷ್ಠಿಯಲ್ಲಿ ತನ್ನ ನಿರ್ಧಾರವು ಸರಿ ಇತ್ತು ಎಂದರು. ಸ್ಲಿಪ್ ಬಳಿಯಿದ್ದ ಇತರ ಫೀಲ್ಡರ್‌ಗಳು ಕೂಡ ಅವರ ಬೆಂಬಲಕ್ಕೆ ನಿಂತರು. ಕ್ರಿಕೆಟ್ ಇತಿಹಾಸವನ್ನು ಬರೆಯುವ ಮಂದಿ ಕೂಡ ಟೇಲರ್ ಔಟ್ ಆಗಿರಲಿಲ್ಲ, ಗುಂಡಪ್ಪ ವಿಶ್ವನಾಥ್ ಮಾಡಿದ ನಿರ್ಧಾರ ಸರಿ ಇತ್ತು ಎಂದರು!

ಶತಮಾನಗಳ ಕಾಲ ಬ್ರಿಟಿಷರಿಂದ ಆಳಲ್ಪಟ್ಟ ಭಾರತೀಯರಿಗೆ ವಿಶ್ವನಾಥ್ ಆ ಕ್ಷಣಕ್ಕೆ ಆ ನಿರ್ಧಾರ ತೆಗೆದುಕೊಂಡು ಇಂಗ್ಲೆಂಡನ್ನು ಗೆಲ್ಲಿಸಿದ್ದು ದೀರ್ಘಕಾಲ ಸರಿ ಎಂದು ಅನ್ನಿಸಲೇ ಇಲ್ಲ! ಆದರೆ ನಮ್ಮ ಕರ್ನಾಟಕದ ಗುಂಡಪ್ಪ ವಿಶ್ವನಾಥ್ ಅವರು ಅಂದು ಕ್ರೀಡೆಗಿಂತ ಕ್ರೀಡಾ ಮನೋಭಾವ ದೊಡ್ಡದು ಎಂದು ಸಾಬೀತುಪಡಿಸಿದ್ದರು!

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ರತನ್ ಟಾಟಾ ಕಾಯಿಲೆ ಬಿದ್ದ ನಾಯಿಗಳನ್ನು ನೋಡಿಕೊಳ್ಳಲು ಇಂಗ್ಲೆಂಡ್‌ನ ರಾಯಲ್‌ ಸನ್ಮಾನವನ್ನೇ ಮಿಸ್‌ ಮಾಡಿದ್ದರು!

Exit mobile version