Site icon Vistara News

ರಾಜ ಮಾರ್ಗ ಅಂಕಣ : ಮಹತ್ವಾಕಾಂಕ್ಷೆಯ ಮತ್ತೊಂದು ಹೆಸರು; ಹ್ಯಾಪಿ ಬರ್ತ್‌ಡೇ ಪುರಚ್ಚಿ ತಲೈವಿ ಜಯಲಲಿತಾ!

Jayalalitha

#image_title

ತಮಿಳುನಾಡು ರಾಜಕಾರಣದ ಎರಡನೇ ಅತೀ ದೊಡ್ಡ ಹೆಸರು ಜಯಲಲಿತಾ. ಆಕೆಯ ದಿಟ್ಟತನ, ಮಹತ್ವಾಕಾಂಕ್ಷೆ ಮತ್ತು ಚಾಲಾಕಿತನಗಳಿಗೆ ಮಿತಿಯೇ ಇರಲಿಲ್ಲ! ತನ್ನ ಮೇಲೆ ವಿರೋಧಿಗಳು ಎಸೆದ ಅಷ್ಟೂ ಕಲ್ಲುಗಳಿಂದ ಮಹತ್ವಾಕಾಂಕ್ಷೆಯ ಸೌಧವನ್ನು ಹೇಗೆ ಕಟ್ಟಬೇಕು ಎಂದು ಯಾರಾದರೂ ಆಕೆಯಿಂದ ಕಲಿಯಬೇಕು! ಬೆರಳು ತೋರಿಸಿದರೆ ಹಸ್ತವನ್ನೇ ನುಂಗುವ ಆಕೆಯ ಬುದ್ಧಿವಂತಿಕೆ ಮತ್ತು ಅನನ್ಯ ಪ್ರತಿಭೆಗಳು ಖಂಡಿತವಾಗಿ ನಮಗೆ ಮಾದರಿ ಆಗಬೇಕು!

ಇಂದು ನಾನು ಆಕೆಯ ಭ್ರಷ್ಟಾಚಾರದ ಮುಖಗಳ ಬಗ್ಗೆ, ಸಮಯ ಸಾಧಕತನದ ಬಗ್ಗೆ, ತನ್ನ ಮಹತ್ವಾಕಾಂಕ್ಷೆ ಈಡೇರಿಸಲು ಆಕೆ ಆರಿಸಿಕೊಂಡ ಅಡ್ಡ ದಾರಿಗಳ ಬಗ್ಗೆ ಖಂಡಿತವಾಗಿಯೂ ಬರೆಯುವುದಿಲ್ಲ. ‘ಹಿಪೊಕ್ರೆಸಿ ತುಂಬಿರುವ ತಮಿಳುನಾಡು ರಾಜಕಾರಣದಲ್ಲಿ ನಾನು ಮಾಡಿದೆಲ್ಲವೂ ಅಗತ್ಯವಾಗಿತ್ತು’ ಎಂದು ಆಕೆ ಒಂದು ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ! ಅವುಗಳ ಬಗ್ಗೆ ನಾನು ಸಮರ್ಥನೆ ಮಾಡಲೂ ಹೊರಡುವುದಿಲ್ಲ!

ಆಕೆ ಮಹಾ ಪ್ರತಿಭಾವಂತೆ!

ನಮ್ಮ ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಒಂದು ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಆಕೆ ಸಿನೆಮಾ ನಟಿ ಆಗಿದ್ದ ತನ್ನ ತಾಯಿ ಸಂಧ್ಯಾರ ಸೆರಗು ಹಿಡಿದುಕೊಂಡು ತಮಿಳುನಾಡಿಗೆ ಹೋದವರು. ತನ್ನ ಎರಡನೇ ವರ್ಷಕ್ಕೆ ಅಪ್ಪನನ್ನು ಕಳೆದುಕೊಂಡ ನತದೃಷ್ಟೆ ಆಕೆ. ಹಾಗೆ ಅವಳಿಗೆ ಅಮ್ಮನೇ ಆದರ್ಶ. ಅಮ್ಮನೇ ಮಾದರಿ!

ಎಸೆಸೆಲ್ಸಿ ಪರೀಕ್ಷೆಯಲ್ಲಿ ತಮಿಳುನಾಡು ರಾಜ್ಯಕ್ಕೇ ಆಕೆ ಪ್ರಥಮ ಸ್ಥಾನ ಪಡೆದವರು! ಆದರೆ ಅಮ್ಮನ ಜೊತೆಗೆ ಫಿಲ್ಮ್ ಶೂಟಿಂಗ್ ನೋಡಲು ಬರುತ್ತಿದ್ದ ಹುಡುಗಿಗೆ ಓದು ಬೇಡವಾಯಿತು. ಸಿನಿಮಾ ಆಕರ್ಷಣೆಯು ಜಾಸ್ತಿ ಆಯಿತು. ಸಿನಿಮಾದ ಅಭಿನಯಕ್ಕಾಗಿ ಕರ್ನಾಟಕ ಸಂಗೀತ, ಭರತ ನಾಟ್ಯ, ಕೂಚಿಪುಡಿ, ಪಿಯಾನೋ ನುಡಿಸುವುದು, ವೆಸ್ಟರ್ನ್ ಡ್ಯಾನ್ಸ್, ಮೋಹಿನಿಯಾಟ್ಟಮ್ ಎಲ್ಲವನ್ನೂ ಆಕೆ ಕಲಿತವರು. ಆರಂಭದಲ್ಲಿ ಐದು ಕನ್ನಡ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು. ಆದರೆ ಮುಂದೆ ತಮಿಳು, ತೆಲುಗು ಸಿನೆಮಾಗಳಲ್ಲಿ ಸೂಪರ್ ಸ್ಟಾರ್ ಆದ ನಂತರ ತಾನು ಕನ್ನಡಿಗಳು ಅಲ್ಲವೇ ಅಲ್ಲ ಎಂದು ಗಟ್ಟಿಯಾಗಿ ಹೇಳಿದವರು ಇದೇ ಜಯಲಲಿತಾ!

ದಕ್ಷಿಣ ಭಾರತದ ಮೊದಲ ಮಹಿಳಾ ಸ್ಟಾರ್!

ಆಕೆ ಅಭಿನಯ ಮಾಡಿದ ನೂರಕ್ಕೂ ಹೆಚ್ಚು ತಮಿಳು, ತೆಲುಗು ಸಿನಿಮಾಗಳಲ್ಲಿ ಸಕ್ಸಸ್ ರೇಟ್ 80-90% ಇದೆ ಅಂದರೆ ಆಕೆಯ ಸ್ಟಾರ್‌ಗಿರಿಗೆ ಯಾರಾದರೂ ಸೆಲ್ಯೂಟ್ ಹೊಡೆಯಲೇ ಬೇಕು! ಆಕೆಯ 28 ಸಿನಿಮಾಗಳು ಸಿಲ್ವರ್ ಜ್ಯುಬಿಲಿ ಕಂಡವು. ತಮಿಳುನಾಡಿನ ಸೂಪರ್ ಸ್ಟಾರ್ ಎಂಜಿಆರ್ ಜೊತೆಗೆ ಅತಿ ಹೆಚ್ಚು (28) ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದವರು ಅವರು. ಎನ್‌ಟಿಆರ್‌ ಜೊತೆ 12, ಅಕ್ಕಿನೇನಿ ನಾಗೇಶ್ವರ ರಾವ್ ಜೊತೆಗೆ 8, ಶಿವಾಜಿ ಗಣೇಶನ್ ಜೊತೆಗೆ 17 ಸಿನೆಮಾಗಳು ದಾಖಲೆ ಬರೆದವು.
60/70/80ರ ದಶಕಗಳಲ್ಲಿ ಜಯಲಲಿತಾ ಅವರನ್ನು ಹಿಡಿಯುವವರೇ ಇರಲಿಲ್ಲ. ಎಷ್ಟೋ ಬಾರಿ ಹೀರೋ ಪಡೆದ್ದಕ್ಕಿಂತ ಹೆಚ್ಚು ಸಂಭಾವನೆಯನ್ನು ಅವರು ಪಡೆಯುತ್ತಿದ್ದರು! ನಿರ್ಮಾಪಕರನ್ನು ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಾ ಇದ್ದರು.

ಎಂಜಿಆರ್ ನನ್ನ ತಂದೆ ಎಂದರು ಜಯಲಲಿತ!

ತನ್ನ ಜೊತೆ ಅತಿ ಹೆಚ್ಚು ಪ್ರಭಾವ ಬೀರಿದ್ದ ಮತ್ತು ತನ್ನ ಗಾಡ್ ಫಾದರ್ ಆಗಿದ್ದ ಎಂಜಿಆರ್ ಅವರು ಸಿನಿಮಾ ಬಿಟ್ಟು ರಾಜಕೀಯಕ್ಕೆ ಪ್ರವೇಶ ಮಾಡಿದಾಗ ಜಯಲಲಿತಾ ಅವರು ಕೂಡ ರಾಜಕೀಯಕ್ಕೆ ಪ್ರವೇಶ ಮಾಡಿದರು. ತನ್ನ ಗುರು ಆದ ಎಂಜಿಆರ್ ಅವರನ್ನು ತನ್ನ ತಂದೆಯ ಸ್ಥಾನದಲ್ಲಿ ಕೂರಿಸಿದರು. ಇಬ್ಬರೂ ಸೇರಿ ತಮಿಳುನಾಡಿನಲ್ಲಿ ಎಐಡಿಎಂಕೆ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದರು. ಎಂಜಿಆರ್ ಮುಖ್ಯಮಂತ್ರಿ ಆಗಿ ಭಾರಿ ಜನಪ್ರಿಯ ಆದರು. ಜಯಲಲಿತಾ ಪಕ್ಷದ ಹೊಣೆ ಹೊತ್ತು ದುಡಿದರು. ಆಕೆ ಮಹಾ ಚಾಣಾಕ್ಷೆ! ಆಕೆಗೆ ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ, ಇಂಗ್ಲಿಷ್ ಭಾಷೆಗಳಲ್ಲಿ ಅದ್ಭುತ ಕಮಾಂಡ್ ಇತ್ತು! ಆಕೆಯ ತಮಿಳು ಅಸ್ಮಿತೆಯ ಭಾಷಣಗಳು ಕ್ಲಿಕ್ ಆದವು! ತಮಿಳಿಗರು ಆಕೆಯ ಮೂಲ ತಮಿಳು ಅಲ್ಲ ಎಂಬುದನ್ನು ಮರೆತೇ ಬಿಟ್ಟರು!

ಅಂದ ಹಾಗೆ ತಮಿಳುನಾಡಿನಲ್ಲಿ ಲೆಜೆಂಡ್ ಆದ ಎಂಜಿಆರ್, ಜಯಲಲಿತಾ ಮತ್ತು ರಜನೀಕಾಂತ್ ಮೂವರೂ ಮೂಲ ತಮಿಳರು ಅಲ್ಲ!

‘ಪುರಚ್ಚಿ ತಲೈವಿ’ ಎಂದು ಆಕೆಯನ್ನು ಕರೆದರು ತಮಿಳು ಜನ!

1987ರಲ್ಲೀ ಎಂಜಿಆರ್ ನಿಧನರಾಗುವವರೆಗೆ ಪರದೆಯ ಹಿಂದೆ ಇದ್ದ ಆಕೆ ಅದೇ ಕ್ಷಣದಲ್ಲಿ ಪಕ್ಷ ಮತ್ತು ಸರ್ಕಾರದ ನೇತೃತ್ವ ವಹಿಸಿದರು. ಆಕೆಗೆ ಭಾವನಾತ್ಮಕ ಆಗಿ ಮಾತನಾಡುವುದು ಗೊತ್ತಿತ್ತು. ಆಕೆಯ ಎಲ್ಲ ಭಾಷಣಗಳು ಎಂಜಿಆರ್ ಅವರ ಹೊಗಳುವಿಕೆಯಿಂದ ಆರಂಭ ಆಗಿ ಕಣ್ಣೀರಿನಿಂದ ಮುಕ್ತಾಯ ಆಗುತ್ತಿದ್ದವು! ಜನರು ಕ್ರಮೇಣ ಆಕೆಯಲ್ಲಿ ಎಂಜಿಆರ್ ಅವರನ್ನೇ ಕಂಡರು! ಅವರನ್ನು ಪದೇಪದೆ ಅಧಿಕಾರಕ್ಕೆ ತಂದರು! ಪುರಚ್ಚಿ ತಲೈವಿ ( ಕ್ರಾಂತಿಕಾರಿ ನಾಯಕಿ) ಇದು ಆಕೆಗೆ ತಮಿಳು ಜನರು ಕೊಟ್ಟ ಅನ್ವರ್ಥ ನಾಮ ಆಗಿತ್ತು!

14 ವರ್ಷ ತಮಿಳುನಾಡಿನ ಮುಖ್ಯಮಂತ್ರಿ ಆದರು!

ಅತ್ಯಂತ ದೀರ್ಘಾವಧಿಗೆ ಆಕೆಯನ್ನು ತಮಿಳಿಗರು ಅಧಿಕಾರಕ್ಕೆ ತಂದರು. ಆಕೆಯ ಪಕ್ಷ ಆರು ಬಾರಿ ಅಧಿಕಾರಕ್ಕೆ ಬಂದಿತು. ಆದರೆ ಸಿಂಹಾಸನ ಆಕೆಗೆ ಮುಳ್ಳಿನ ಕುರ್ಚಿಯೇ ಆಯಿತು.

ಎಂಜಿಆರ್ ಅವರ ಧರ್ಮಪತ್ನಿ ಜಾನಕಿ ಆಕೆಯ ಮೊದಲ ತೊಡರುಗಾಲು ಆದರು. ಮುಂದೆ ಡಿಎಂಕೆ ಪಕ್ಷ, ಅದರ ಅಧಿನಾಯಕ ಕರುಣಾನಿಧಿ ಆಕೆಯ ನಿದ್ದೆ ಕೆಡುವಂತೆ ಮಾಡಿದರು. ಆಕೆ 1996ರಲ್ಲಿ ಅಧಿಕಾರ ಕಳೆದುಕೊಂಡಾಗ ಕರುಣಾನಿಧಿ ಸರಕಾರ ಆಕೆಯ ಮೇಲೆ 40 ಭ್ರಷ್ಟಾಚಾರದ ಕೇಸ್ ಜಡಿದು ಸೆರೆಮನೆಗೆ ಅಟ್ಟಿತ್ತು! ಆಕೆಯ ಕೋಟಿ ಕೋಟಿ ಬೆಲೆಯ ಆಸ್ತಿ ಮುಟ್ಟುಗೋಲು ಹಾಕಲು ಮುಂದಾಯಿತು! ಮುಂದೆ ಅದೇ ಜಯಲಲಿತಾ ಅವರಿಗೆ ಅದೇ ಅನುಕಂಪದ ಅಧಿಕಾರ ನೀಡಿತು!

ವಾಜಪೇಯಿ ಸರಕಾರದ ಪತನಕ್ಕೂ ಆಕೆ ಕಾರಣ ಆದರು!

ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದು ಎನ್ನುವ ಜಾಯಮಾನದ ಆಕೆ ತನ್ನ ಪಕ್ಷದ ಬೆಂಬಲವನ್ನು ವಾಪಸ್ ಪಡೆದು ವಾಜಪೇಯಿ ಸರಕಾರದ ಪತನಕ್ಕೂ ಕಾರಣ ಆದರು! ಆಕೆಯ ಆತ್ಮಚರಿತ್ರೆಯ ಪುಸ್ತಕದಲ್ಲಿ ಆಕೆಗೆ ಪ್ರಧಾನಿ ಆಗುವ ಮಹತ್ವಾಕಾಂಕ್ಷೆ ಇತ್ತು ಎಂದು ಉಲ್ಲೇಖ ಇದೆ!

ಆಡಳಿತದಲ್ಲಿ ಆಕೆ ಸರ್ವಾಧಿಕಾರಿ ಧೋರಣೆ ಹೊಂದಿದ್ದರು! ಆಕೆಯ ಸರಕಾರದ ಮಂತ್ರಿಗಳು ಆಕೆಯ ಪಾದ ಮುಟ್ಟಿ ಆಶೀರ್ವಾದ ಪಡೆದು ಪ್ರಮಾಣ ತೆಗೆದುಕೊಳ್ಳುತ್ತಿದ್ದರು. ಆಕೆಯ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದರು. ಭ್ರಷ್ಟಾಚಾರದ ವಿಷಯದಲ್ಲಿ ಆಕೆ ಅಧಿಕಾರದ ತ್ಯಾಗ ಮಾಡಬೇಕಾದಾಗ ತನ್ನ ಬಾಲಬಡುಕ ಪನ್ನೀರ್ ಸೆಲ್ವಂ ಅವರನ್ನು ಅಧಿಕಾರದಲ್ಲಿ ಕೂರಿಸಿದರು. ಆ ಆಸಾಮಿ ಪ್ರತೀ ದಿನವೂ ಆಕೆಯ ಮನೆಗೆ ಹೋಗಿ ಆಕೆಯ ಪಾದಸ್ಪರ್ಶ ಮಾಡಿ ನಂತರ ಆಫೀಸಿಗೆ ಹೋಗುತ್ತಿದ್ದ!

ಆಕೆಯ ದಿಟ್ಟ ನಿರ್ಧಾರಗಳು ಭಾರಿ ಜನಪ್ರಿಯತೆ ಪಡೆದವು!

ಸರ್ವಾಧಿಕಾರಿ ಆದ ಆಕೆ ಯಾರ ಮಾತೂ ಕೇಳದೆ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ತುಂಬಾ ಗಟ್ಟಿ ಆಗಿದ್ದವು. ಯಾರನ್ನು ಹೇಗೆ ಹೆಡೆಮುರಿ ಕಟ್ಟಬೇಕು, ಯಾರನ್ನು ಹೇಗೆ ಮೌನವಾಗಿಸಬೇಕು ಎಲ್ಲವೂ ಆಕೆಗೆ ತಿಳಿದಿತ್ತು! ವೀರಪ್ಪನ್ ಅಂತಹ ಮಹಾನ್‌ ದರೋಡೆಕೋರ, ನರಹಂತಕನನ್ನು ಮುಗಿಸಲು ಆಕೆಯು ಕೈಗೊಂಡ ದಿಟ್ಟ ಕ್ರಮಗಳು ಕಾರಣ ಎಂದು ಇತಿಹಾಸ ಒಪ್ಪುತ್ತದೆ! ಅದೇ ರೀತಿ ಬಡವರ ಪರವಾಗಿ ಎಂಜಿಆರ್ ತೆಗೆದುಕೊಂಡ ನಿಲುವುಗಳು ಮತ್ತು ಯೋಜನೆಗಳನ್ನು ಆಕೆ ಮುಂದುವರಿಸಿ ತುಂಬಾ ಜನಪ್ರಿಯ ಮಾಡಿದರು. ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟೀನ್ ತುಂಬಾ ಜನಪ್ರಿಯ ಆಯಿತು!

ಜಿದ್ದು, ಹಠವಾದಿತನ, ಮುಂಗೋಪ ಇವುಗಳ ನಡುವೆ ಕೂಡ ಆಕೆಯ ಸಾಮಾಜಿಕ ಕಾಳಜಿ ಮತ್ತು ಪ್ರತಿಭೆಗಳ ಬಗ್ಗೆ ನನ್ನ ಮೆಚ್ಚುಗೆ ಇದೆ! ಅವರು ಅಧಿಕಾರ ಪಡೆದ ದಾರಿ ತಪ್ಪಾಗಿರಬಹುದು! ಆದರೆ ಅವರ ದಿಟ್ಟತನ ಹಾಗೂ ಧೈರ್ಯ ನನಗೆ ಭಾರೀ ವಿಸ್ಮಯ ಮೂಡಿಸಿದೆ! 2016ರಲ್ಲಿ ಅವರು ಅಗಲುವ ತನಕ ಪಕ್ಷ ಮತ್ತು ಸರಕಾರದ ನಿಯಂತ್ರಣ ಅವರ ಕೈಯ್ಯಲ್ಲಿಯೇ ಇತ್ತು. ಬದುಕಿದ್ದಾಗ ಒಂದಲ್ಲ ಒಂದು ವಿವಾದದ ನಡುವೆ ಬದುಕಿದ ಆಕೆಯ ಸಾವು ಕೂಡ ಒಂದು ವಿವಾದ ಆದದ್ದು ನಿಜಕ್ಕೂ ಅಚ್ಚರಿ!

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಇದು ಪಂಚತಂತ್ರದ ಕಥೆಯಲ್ಲ, ಜಗತ್ತನ್ನೇ ಮಂತ್ರಮುಗ್ಧಗೊಳಿಸಿದ ಪಂಚತಂತ್ರ ಎಂಬ ಮಹಾಕಲ್ಪನೆ ಹುಟ್ಟಿದ ಕಥೆ!

Exit mobile version