Site icon Vistara News

ರಾಜ ಮಾರ್ಗ ಅಂಕಣ : ಹ್ಯಾಪಿ ಬರ್ತ್‌ ಡೇ ಸಿಂಗಂ ಸೂರ್ಯ!; ಅವನು ಕೇವಲ ಸ್ಟಾರಲ್ಲ, ನಿಜಕ್ಕೂ ಧರೆಗಿಳಿದ ನಕ್ಷತ್ರ!

Actor surya HBD

ಇಂದು (ಜುಲೈ 23) ತಮಿಳು ಸೂಪರ್ ಸ್ಟಾರ್ ಸೂರ್ಯ (Actor surya) ಹುಟ್ಟಿದ ಹಬ್ಬ. ರಜನೀಕಾಂತ್ (Actor Rajanikant) ಬಿಟ್ಟರೆ ತಮಿಳುನಾಡಿನಲ್ಲಿ ಸೂರ್ಯನಿಗೆ ಇರುವಷ್ಟು ಅಭಿಮಾನಿಗಳು ಈಗ ಬೇರೆ ಯಾವ ನಟನಿಗೂ ಇಲ್ಲ. ಸಂಭಾವನೆಯಲ್ಲಿಯೂ ಆತನಿಗೆ ಸ್ಪರ್ಧಿಗಳು ಇಲ್ಲ. ಖ್ಯಾತ ತಮಿಳು ನಟ ಶಿವಕುಮಾರ್ (Son of actor Shivakumar) ಅವರ ಮಗನಾದ ಸೂರ್ಯ ತಮ್ಮ ತಂದೆಯ ಹೆಸರನ್ನು ಎಲ್ಲಿಯೂ ಉಪಯೋಗ ಮಾಡದೆ ಸ್ವಂತ ಪ್ರತಿಭೆಯಿಂದಲೇ ಮೇಲೆ ಬಂದವರು. ಪಾತ್ರಗಳ ಆಯ್ಕೆಯಲ್ಲಿಯೂ ಸೂರ್ಯ ಯಾವುದೇ ಇಮೇಜಿಗೆ ಅಂಟಿಕೊಳ್ಳುವ ನಟ ಅಲ್ಲ. ರೋಮಾನ್ಸ್, ಆಕ್ಷನ್, ರಿಯಲಿಸ್ಟಿಕ್, ವಿಲನ್, ಕಂಟೆಂಟ್,
ಎಕ್ಸ್‌ ಪರಿಮೆಂಟಲ್…. ಹೀಗೆ ಎಲ್ಲ ರೀತಿಯ ಸಿನಿಮಾಗಳಿಗೆ ಸೂಟ್ ಆಗುವ ನಟ ಅಂದರೆ ಅದು ಸೂರ್ಯ (ರಾಜ ಮಾರ್ಗ ಅಂಕಣ)!

ನಾನು ಸ್ಟಾರ್ ಅಲ್ಲ, ಕೇವಲ ಕಲಾವಿದ ಅನ್ನುತ್ತಾರೆ ಸೂರ್ಯ!

ತಮಿಳುನಾಡಿನಲ್ಲಿ ಮತ್ತು ಕರ್ನಾಟಕದಲ್ಲಿ ಸೂರ್ಯನಿಗೆ ಭಾರೀ ಎನ್ನುವ ಫ್ಯಾನ್ ಬೇಸ್ ಇದೆ. 1997ರಲ್ಲಿ ‘ನೇರಕ್ಕು ನೇರ್’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಸೂರ್ಯ 25 ವರ್ಷಗಳಲ್ಲಿ ಅಭಿನಯಿಸಿದ್ದು ಕೇವಲ 45 ಸಿನಿಮಾಗಳಲ್ಲಿ! ಅಂದರೆ ವರ್ಷಕ್ಕೆ ಒಂದೆರಡು ಸಿನಿಮಾಗಳು ಮಾತ್ರ! ಆದರೆ ಅವುಗಳಲ್ಲಿ ಎಲ್ಲವೂ ಸ್ಮರಣೀಯ ಹಿಟ್ ಸಿನಿಮಾಗಳು. ನಂದಾ, ಕಾಕ್ಕ ಕಾಕ್ಕ (kaakha Kaakha), ಪಿತಾಮಗನ್ (Pithamagan), ಗಝಿನಿ (Ghajini), ಸಿಂಗಮ್ (Singam), ಏಳಾಮ್ ಅರಿವು (7 aum arivu), ಸೂರರೈ ಪೊಟ್ರು (soorarai potru), ಜೈ ಭೀಮ್… ಇವುಗಳು ಅವರಿಗೆ ಭಾರೀ ಕೀರ್ತಿ ತಂದುಕೊಟ್ಟ ಸಿನಿಮಾಗಳು.

ಪಿತಾಮಗನ್‌ ಸಿನಿಮಾದಲ್ಲಿ

ಸೆಲೆಬ್ರಿಟಿ ನಟ ಎಂಬ ಕೀರ್ತಿ

ಅವರಿಗೆ ಎರಡು ಬಾರಿ ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ, ಆರು ಬಾರಿ ಫಿಲಂಫೇರ್ ಪ್ರಶಸ್ತಿ, ಮೂರು ಬಾರಿ ತಮಿಳುನಾಡು ರಾಜ್ಯದ ಪ್ರಶಸ್ತಿ, ಎರಡು ಬಾರಿ ದಕ್ಷಿಣ ಭಾರತ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಫೋರ್ಬ್ಸ್ ಪತ್ರಿಕೆಯ ಟಾಪ್ 100 ಸೆಲೆಬ್ರಿಟಿ ಭಾರತೀಯರ ಪಟ್ಟಿಯಲ್ಲಿ ಆರು ಬಾರಿ ಕಾಣಿಸಿಕೊಂಡ ಏಕೈಕ ನಟ ಅಂದರೆ ಅದು ಸೂರ್ಯ.

ಅವರ ಸಿನಿಮಾಗಳು ನೂರಾರು ಕೋಟಿ ಬಜೆಟಲ್ಲಿ ಸಿದ್ಧವಾಗುತ್ತವೆ ಮತ್ತು ಅವೆಲ್ಲವೂ ಅದರ ಹತ್ತು ಪಟ್ಟು ಸಂಪಾದನೆ ಮಾಡುತ್ತವೆ ಅನ್ನುವುದು ಸೂರ್ಯ ಅವರ ಹೆಗ್ಗಳಿಕೆ! ತನ್ನ ಸಹ ನಟಿ ಜ್ಯೋತಿಕಾ ಅವರನ್ನು 2006ರಲ್ಲಿ ಮದುವೆ ಆಗಿರುವ ಸೂರ್ಯ ಅವರದ್ದು ಆದರ್ಶ ದಾಂಪತ್ಯ ಎಂದು ಅವರ ಅಭಿಮಾನಿಗಳು ಹೇಳುತ್ತಾರೆ. ಸೂರ್ಯ ಅವರ ಕಿರಿಯ ಸೋದರ ಕಾರ್ತಿ ಕೂಡ ತಮಿಳುನಾಡಿನಲ್ಲಿ ಸ್ಟಾರ್ ನಟ ಆಗಿದ್ದಾರೆ.

Actor surya as Ghajini

ಅಗರಮ್ ಫೌಂಡೇಶನ್ (Aragam Foundation) ಮೂಲಕ ಶ್ರೇಷ್ಠ ಸಮಾಜಸೇವೆ

ತಮ್ಮ ತಂದೆ ಶಿವಕುಮಾರ್ ಅವರಿಂದ ಸ್ಫೂರ್ತಿ ಪಡೆದು ಸೂರ್ಯ ಅವರು 2006ರಲ್ಲಿ ಅಗರಮ್ ಫೌಂಡೇಶನ್ ಎಂಬ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅದರಲ್ಲಿ ಸೂರ್ಯ, ಕಾರ್ತಿ ಸೇರಿ ಇತರ ಐದು ಮಂದಿ ಟ್ರಸ್ಟೀಗಳು ಇದ್ದಾರೆ. ಗ್ರಾಮೀಣ ಭಾಗದಲ್ಲಿ ಅವಕಾಶ ವಂಚಿತರಾದ ಸಾವಿರಾರು ಬಡ ವಿದ್ಯಾರ್ಥಿಗಳ ಶಿಕ್ಷಣದ ನೆರವಿಗೆ ಅವರು ಯಾವುದೇ ಪ್ರಚಾರ ಇಲ್ಲದೆ ಬಹಳ ದೊಡ್ಡ ಮಟ್ಟದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ತಮ್ಮ 30 ಕೋಟಿ ಬೆಲೆ ಬಾಳುವ ಬೃಹತ್ ಬಂಗಲೆಯನ್ನು ಮಾರಿ ಆ ದುಡ್ಡನ್ನು ಅನಾಥ ಮಕ್ಕಳ ಶಿಕ್ಷಣಕ್ಕೆ ಅವರು ವಿನಿಯೋಗ ಮಾಡಿದಾಗ ಅದು ರಾಷ್ಟ್ರ ಮಟ್ಟದ ಸುದ್ದಿ ಆಗಿತ್ತು! ಉತ್ತರಾಖಂಡದ ನೈಸರ್ಗಿಕ ಪ್ರಕೋಪ ಸಂತ್ರಸ್ತರಿಗೆ 2013ರಲ್ಲಿ ಅವರು ದೊಡ್ಡ ಮೊತ್ತದ ದಾನವನ್ನು ಮಾಡಿದ್ದಾರೆ.

ಸೂರ್ಯ ಅವರು ಸ್ಥಾಪಿಸಿದ ಅರಗಂ ಫೌಂಡೇಷನ್

2017ರಲ್ಲಿ 400 ಸರಕಾರಿ ಶಾಲೆಗಳ ನವೀಕರಣವನ್ನು ಅವರೇ ಮುಂದೆ ನಿಂತು ಪೂರ್ತಿ ಮಾಡಿದ್ದಾರೆ. 2020ರಲ್ಲಿ ತಮಿಳುನಾಡಿನ ಕೋವಿಡ್ ಸಂತ್ರಸ್ತರಿಗಾಗಿ ತಂಜಾವೂರು ಆಸ್ಪತ್ರೆಯನ್ನು ಸ್ವಂತ ದುಡ್ಡಲ್ಲಿ ನವೀಕರಣ ಮಾಡಿ ಕೊಟ್ಟಿದ್ದಾರೆ. ಶ್ರೀಲಂಕಾದಿಂದ ನಿರ್ವಸಿತರಾಗಿ ಭಾರತಕ್ಕೆ ಬಂದ ನಿರಾಶ್ರಿತರಿಗೆ ನೂರಾರು ಚಂದದ ಮನೆಗಳನ್ನು ಕಟ್ಟಿಕೊಟ್ಟಿದ್ದಾರೆ. ತಮಿಳುನಾಡು ಸರಕಾರದ ‘ಸೇವ್ ಟೈಗರ್’ ಅಭಿಯಾನಕ್ಕೆ ದೊಡ್ಡ ಮೊತ್ತ ನೀಡಿ ಕೈ ಜೋಡಿಸಿದ್ದಾರೆ.

ಬುಡಕಟ್ಟು ಜನಾಂಗದ ಮಕ್ಕಳ ಶಿಕ್ಷಣದ ಉದ್ದೇಶಕ್ಕೆ ಒಂದು ಕೋಟಿ ರೂಪಾಯಿ ಸರಕಾರಕ್ಕೆ ದಾನ ಮಾಡಿದ್ದಾರೆ.

ವಿಧೈ (ಬೀಜ) ಮೂಲಕ ಸಾವಿರಾರು ಕಾಲೇಜು ಮಕ್ಕಳ ದತ್ತು ಸ್ವೀಕಾರ!

ಸೂರ್ಯ ತನ್ನ ಅಗರಮ್ ಫೌಂಡೇಶನ್ನಿನ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಇದನ್ನು ರೂಪಿಸಿದ್ದಾರೆ. ಅತ್ಯಂತ ಬಡ ಕುಟುಂಬಗಳ 3000 ಕಾಲೇಜು ಮಕ್ಕಳನ್ನು ವಿವಿಧ ದಾನಿಗಳ ನೆರವಿನಿಂದ ಶೈಕ್ಷಣಿಕವಾಗಿ ದತ್ತು ಸ್ವೀಕಾರ ಮಾಡಿದ್ದಾರೆ! ಅವರ ಶಿಕ್ಷಣ, ಊಟೋಪಚಾರ, ಪುಸ್ತಕ, ಕಾಲೇಜು ಫೀಸ್ ಮತ್ತು ಕೋಚಿಂಗ್ ಖರ್ಚು ಎಲ್ಲವನ್ನೂ ಅವರ ಫೌಂಡೇಶನ್ ಭರಿಸುತ್ತಿದೆ. ಆ ವಿದ್ಯಾರ್ಥಿಗಳ ಕೋಚಿಂಗ್ ಮತ್ತು ಮೆಂಟರಿಂಗ್ ನೆರವಿಗೆ ರಾಜ್ಯದಾದ್ಯಂತ ಹತ್ತು ಲರ್ನಿಂಗ್ ಸೆಂಟರ್ ಅವರು ನಿರ್ಮಿಸಿದ್ದಾರೆ.

ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಕೂಡ ಅವರಲ್ಲಿ ಇರುವ ಇತರ ಪ್ರತಿಭೆ ಹಾಗೂ ಕೌಶಲಗಳನ್ನು ಅಭಿವೃದ್ದಿ ಪಡಿಸುವ ಯೋಜನೆಯು ಈಗ ಜನಪ್ರಿಯ ಆಗುತ್ತಿದೆ.

ಸೂರ್ಯ ಮತ್ತು ಅವರ ಪತ್ನಿ ಜ್ಯೋತಿಕಾ ಸ್ವತಃ ಮುಂದೆ ನಿಂತು ಮಕ್ಕಳ ಆಯ್ಕೆ, ತರಬೇತು, ಮೆಂಟರಿಂಗ್ ಹೊಣೆಗಳನ್ನು ತೆಗೆದುಕೊಂಡಿದ್ದಾರೆ. ಅವರ ನೂರಾರು ಅಭಿಮಾನಿಗಳು ದಾನಿಗಳಾಗಿ ಅವರ ಫೌಂಡೇಶನ್ನಿನ ನೆರವಿಗೆ ನಿಂತಿದ್ದಾರೆ.

ಅರಗಮ್ ಫೌಂಡೇಶನ್ ಹುಟ್ಟು ಹಾಕಿದ ಯಶೋಗಾಥೆಗಳು!

ಒಂದಾಗಿ ಬಾಳುವ ಸೂರ್ಯ -ಜ್ಯೋತಿಕಾ ಜೋಡಿ

ಸೂರ್ಯ ಅವರು ಸ್ಥಾಪಿಸಿದ ಅರಗಮ್ ಫೌಂಡೇಶನ್ ಮೂಲಕ ಈವರೆಗೆ ಸಾವಿರಾರು ಪದವೀಧರರು, 54 ವೈದ್ಯರು, 1160 ಎಂಜಿನಿಯರಿಂಗ್ ಪದವೀಧರರು ಯಶಸ್ವೀ ಆಗಿ ಹೊಮ್ಮಿದ್ದಾರೆ ಅಂದರೆ ಗ್ರೇಟ್! ಮತ್ತು ಇವರೆಲ್ಲ ಅವರ ಕುಟುಂಬದ ಮೊದಲನೇ ಜನರೇಶನ್ ಪದವೀಧರರು ಅಂದರೆ ಅದು ಇನ್ನೂ ಗ್ರೇಟ್! ಕರ್ನಾಟಕದಲ್ಲಿ ಪುನೀತ್ ರಾಜಕುಮಾರ್ ಅವರು ಮಾಡಿದ ಸೇವಾ ಕಾರ್ಯಗಳ ಮಾದರಿಯಲ್ಲಿ ಸೂರ್ಯ ತಮಿಳುನಾಡಿನಲ್ಲಿ ಅದ್ಭುತವಾದ ಮತ್ತು ಪ್ರಚಾರವಿಲ್ಲದ ಶಿಕ್ಷಣ ಸೇವೆಯನ್ನು ನಡೆಸುತ್ತಿದ್ದಾರೆ.

ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಸಾಮಾಜಿಕ ಅಸಮಾನತೆಯನ್ನು ನಿವಾರಣೆ ಮಾಡಲು ಸಾಧ್ಯ ಎಂದು ಸೂರ್ಯ ಹೇಳುವಾಗ ಅವರ ಕಣ್ಣಲ್ಲಿ ಆತ್ಮವಿಶ್ವಾಸದ ನಗು ತುಳುಕುತ್ತಿತ್ತು! ಅರಗಮ್ ಫೌಂಡೇಶನ್ನಿನ ಯಶೋಗಾಥೆಗಳ ಬಗ್ಗೆ ಹಲವು ಒಳ್ಳೆಯ ತಮಿಳು ಪುಸ್ತಕಗಳನ್ನು ಅವರು ಪ್ರಕಟಿಸಿದ್ದಾರೆ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ‘ಸಿಂಗಂ ಸ್ಟಾರ್ ‘ ಸೂರ್ಯ ಅವರಿಗೆ ಹ್ಯಾಪಿ ಬರ್ತ್‌ ಡೇ ಹೇಳೋಣ ಅಲ್ಲವೇ?

ರಾಜ ಮಾರ್ಗ ಅಂಕಣ : ರಾಜ ಮಾರ್ಗ ಅಂಕಣ: ಆದಿವಾಸಿಗಳ ಆರಾಧ್ಯ ದೈವ ಬಿರ್ಸಾ ಮುಂಡಾ; ಬಿಹಾರದ ರಕ್ತ ಕ್ರಾಂತಿಯ ಕಿಡಿ

Exit mobile version