Site icon Vistara News

ರಾಜಮಾರ್ಗ ಅಂಕಣ : ಬ್ರಿಟಿಷ್ ವಿಜ್ಞಾನಿಗಳು ವಿಷ ಎಂದು ಕೊಟ್ಟ ದ್ರಾವಣವನ್ನು ಆ ಭಾರತೀಯ ವಿಜ್ಞಾನಿ ಗಟಗಟನೆ ಕುಡಿದಿದ್ದರು!

Jagadeeschandra bose

#image_title

1910ರ ಇಸವಿ ಮೇ 10ನೇ ತಾರೀಕು. ಲಂಡನ್ನಿನ ಅತ್ಯಂತ ವೈಭವದ ರಾಯಲ್ ಸೊಸೈಟಿ ಸಭಾಂಗಣ!
ಇಂಗ್ಲೆಂಡಿನ ಶ್ರೇಷ್ಠ ವಿಜ್ಞಾನಿಗಳೆಲ್ಲ ಅಲ್ಲಿ ಸೇರಿ ಭಾರತೀಯ ವಿಜ್ಞಾನಿ ಒಬ್ಬರ ಪ್ರಯೋಗದ ಪ್ರಾತ್ಯಕ್ಷಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಕೂತಿದ್ದರು. ಇಡೀ ಸಭಾಂಗಣದಲ್ಲಿ ಗಾಢ ಮೌನವು ಆವರಿಸಿತ್ತು.

ಕ್ರೆಸ್ಕೊಗ್ರಾಫ್ ಎಂಬ ಮಾಯಾ ಯಂತ್ರ!

ಅವರು ತಾವೇ ಸಂಶೋಧನೆ ಮಾಡಿದ್ದ ಕ್ರೆಸ್ಕೊಗ್ರಾಫ್ ಎಂಬ ಯಂತ್ರದ ಮೂಲಕ ಸಸ್ಯಗಳಿಗೆ ಜೀವ ಮತ್ತು ಸಂವೇದನೆಗಳು ಇವೆ ಎಂದು ತೋರಿಸುವ ಪ್ರಯೋಗ ಮಾಡುತ್ತಿದ್ದರು. ಸಸ್ಯಗಳು ಸಂಗೀತ, ಬೆಳಕಿನ ಕಿರಣ, ವಯರ್‌ಲೆಸ್‌ ಕಿರಣ, ವಿದ್ಯುತ್ಕಾಂತೀಯ ಕಿರಣ ಮೊದಲಾದುವುಗಳ ಸೂಕ್ಷ್ಮ ಸಂವೇದನೆಗಳಿಗೆ ಕೂಡ ಸ್ಪಂದಿಸುತ್ತವೆ ಎಂದು ಅವರು ಭಾರತದಲ್ಲಿ ಸಾಬೀತು ಮಾಡಿ ತೋರಿಸಿಯಾಗಿತ್ತು! ಹಾಗೆಯೇ ವಿಷವನ್ನು ಹಾಕಿದರೆ ಸಸ್ಯಗಳು ಮನುಷ್ಯರಂತೆ ನರಳಿ ಸಾಯುತ್ತವೆ ಎಂದು ಕೂಡ ಅವರು ಸಾಬೀತು ಮಾಡಿದ್ದರು. ಅದೇ ಪ್ರಯೋಗವನ್ನು ಅವರು ಇಂಗ್ಲೆಂಡಿನಲ್ಲಿ ಪ್ರಾತ್ಯಕ್ಷಿಕೆ ಮಾಡುತ್ತಿದ್ದರು! ಅವರು ಒಂದು ಹಸಿರು ಗಿಡವನ್ನು ತಮ್ಮ ಯಂತ್ರಕ್ಕೆ ಕನೆಕ್ಟ್ ಮಾಡಿ ಅಲ್ಲಿನ ವಿಜ್ಞಾನಿಗಳಿಗೆ ಬ್ರೊಮೈಡ್ ದ್ರಾವಣ ತರಲು ಹೇಳಿದರು. ಅದು ವಿಷದ ದ್ರಾವಣ!

ಬ್ರಿಟಿಷ್ ವಿಜ್ಞಾನಿಗಳು ಬಿಸಿ ದ್ರಾವಣವನ್ನು ತಂದುಕೊಟ್ಟರು!

ಆಗ ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲ. ಒಬ್ಬ ಭಾರತೀಯ ವಿಜ್ಞಾನಿಯು ಕೀರ್ತಿ ಪಡೆಯುವುದು ಅಲ್ಲಿದ್ದ ವಿಜ್ಞಾನಿಗಳಿಗೆ ಒಂದಿಷ್ಟೂ ಇಷ್ಟ ಇರಲಿಲ್ಲ. ಅವರನ್ನು ಅಪಮಾನ ಮಾಡಲು ಅವರು ಒಂದು ಉಪಾಯ ಮಾಡಿದರು. ಬಿಸಿ ಸಕ್ಕರೆಯ ದ್ರಾವಣವನ್ನು ತಂದು ಅವರ ಕೈಯ್ಯಲ್ಲಿ ಕೊಟ್ಟು ಬ್ರೋಮೈಡ್ ದ್ರಾವಣ ಅಂದರು!

ಅದನ್ನು ಸಸ್ಯಗಳ ಮೇಲೆ ಈ ವಿಜ್ಞಾನಿ ಪ್ರಯೋಗ ಮಾಡುತ್ತ ಹೋದಂತೆ ಸಸ್ಯವು ಯಾವ ಸ್ಪಂದನೆಯನ್ನೂ ಕೊಡಲಿಲ್ಲ! ಹಸಿರು ಗಿಡವು ನರಳುವುದು ಗೋಚರ ಆಗಲೇ ಇಲ್ಲ!

ಆ ವಿಜ್ಞಾನಿಯು ಹಿಂದೆ ಮುಂದೆ ನೋಡದೆ ಆ ಬಿಸಿ ದ್ರಾವಣವನ್ನು ಗಟಗಟನೆ ಕುಡಿದೇ ಬಿಟ್ಟರು!

ಆ ಭಾರತೀಯ ವಿಜ್ಞಾನಿಗೆ ತಾನು ಮೋಸ ಹೋದದ್ದು ಕೂಡಲೇ ಗೊತ್ತಾಯ್ತು. ಅವರು ಮೈಕ್ ತೆಗೆದುಕೊಂಡು ಸಿಡಿಗುಂಡಿನ ಹಾಗೆ ನುಡಿದೇ ಬಿಟ್ಟರು. “ನನಗೆ ನನ್ನ ಸಂಶೋಧನೆಯ ಮೇಲೆ ನಂಬಿಕೆ. ನೀವು ಕೊಟ್ಟ ವಿಷವು ನನ್ನ ಸಸ್ಯವನ್ನು ಸಾಯಿಸಿಲ್ಲ ಅಂದರೆ ಅದು ನನ್ನನ್ನೂ ಏನೂ ಮಾಡದು!” ಎಂದು ಆ ಬಿಸಿ ದ್ರಾವಣವನ್ನು ಎಲ್ಲರ ಮುಂದೆ ಗಟಗಟನೆ ಕುಡಿದೇ ಬಿಟ್ಟರು! ಅದು ಬಿಸಿ ಸಕ್ಕರೆಯ ದ್ರಾವಣ ಆಗಿತ್ತು!

“ಇನ್ನು ಮುಂದೆ ಯಾವುದೇ ಭಾರತೀಯ ವಿಜ್ಞಾನಿಯನ್ನೂ ಕೂಡ ಮೋಸ ಮಾಡಲು ಹೋಗಬೇಡಿ!” ಎಂದು ಹೇಳಿ ಅವರು ತಮ್ಮ ಪ್ರಯೋಗವನ್ನು ಮುಂದುವರಿಸಿದರು ಮತ್ತು ತನ್ನ ಶ್ರೇಷ್ಠ ಸಂಶೋಧನೆಯು ಎಷ್ಟು ಗಟ್ಟಿ ಇದೆ ಎಂದು ಜಗತ್ತಿಗೆ ತೋರಿಸಿಕೊಟ್ಟರು. ಮುಂದೆ ಅದೇ ಇಂಗ್ಲೆಂಡಿನ ರಾಯಲ್ ಸೊಸೈಟಿ ಅವರಿಗೆ ತನ್ನ ಫೆಲೋಶಿಪ್ ಗೌರವ ನೀಡಿತ್ತು ಅಂದರೆ ಅದು ಭಾರತದ ಗೆಲುವು!

ಅವರೇ ಭಾರತದ ಶ್ರೇಷ್ಠ ಸಸ್ಯ ವಿಜ್ಞಾನಿ ಡಾಕ್ಟರ್ ಜಗದೀಶ್ ಚಂದ್ರ ಬೋಸ್! ಅವರು ನಿಜವಾಗಿ ಭಾರತದ ಹೆಮ್ಮೆ.

ಕೇಂಬ್ರಿಜ್ ವಿವಿಯಲ್ಲಿ ಅವರು ಕಲಿತು ಬಂದಿದ್ದರು!

ಡಾಕ್ಟರ್ ಜಗದೀಶ್ ಚಂದ್ರ ಬೋಸರು ಹುಟ್ಟಿದ್ದು 1858ನೇ ಇಸವಿ ನವೆಂಬರ್ 30ರಂದು. ವೈದ್ಯಕೀಯ ಪದವಿ ಪಡೆಯಲು ಕೇಂಬ್ರಿಜ್ ವಿವಿಯಲ್ಲಿ ಓದಲು ಲಂಡನ್ನಿಗೆ ಹೋಗಿದ್ದ ಅವರು ಅನಾರೋಗ್ಯದ ಕಾರಣ ತಮ್ಮ ಕೋರ್ಸ್ ಬದಲಾವಣೆ ಮಾಡಬೇಕಾಯಿತು. ಅವರು ಸ್ನಾತಕೋತ್ತರ ವಿಜ್ಞಾನದ ಪದವಿಯನ್ನು ಪಡೆದು ಭಾರತಕ್ಕೆ ಮರಳಿದರು. ಬ್ರಿಟಿಷ್ ಆಡಳಿತದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓರ್ವ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಅವರು ನೇಮಕ ಪಡೆದರು. ಒಳ್ಳೆಯ ಪ್ರಾಧ್ಯಾಪಕ ಎಂಬ ಕೀರ್ತಿ ಕೂಡ ಪಡೆದರು.

ಆದರೆ ಆ ಕಾಲೇಜಿನಲ್ಲಿ ಬ್ರಿಟಿಷ್ ಅಧ್ಯಾಪಕರಿಗೆ ಕೊಡುತ್ತಿದ್ದ ವೇತನದ 2/3 ವೇತನವನ್ನು ಭಾರತೀಯ ಪ್ರಾಧ್ಯಾಪಕರಿಗೆ ಅಲ್ಲಿ ನೀಡಲಾಗುತ್ತಿತ್ತು. ಸ್ವಾಭಿಮಾನಿ ಆದ ಬೋಸರು ಇದನ್ನು ಪ್ರತಿಭಟನೆ ಮಾಡಿ ವೇತನವಿಲ್ಲದೆ ದುಡಿಯಲು ಆರಂಭ ಮಾಡಿದರು! ಮೂರು ವರ್ಷಗಳತನಕ ಅವರ ಈ ಪ್ರತಿಭಟನೆ ಮುಂದುವರಿಯಿತು. ಕೊನೆಗೆ ಕಾಲೇಜು ಆಡಳಿತ ಮಂಡಳಿ ಅವರಿಗೆ ಸರೆಂಡರ್ ಆಗಿ ಸಮಾನ ವೇತನ ನೀಡಲು ಒಪ್ಪಿತು, ಮಾತ್ರವಲ್ಲ ಅವರ ಮೂರು ವರ್ಷಗಳ ವೇತನವನ್ನು ಬಡ್ಡಿ ಸಹಿತ ಪಾವತಿ ಮಾಡಿತು!

ವಯರ್‌ಲೆಸ್ ಸಂಶೋಧನೆ ಅವರು ಮಾಡಿದರೂ ಪೇಟೆಂಟ್ ಪಡೆಯಲಿಲ್ಲ!

ಬೋಸರು 1895ದಲ್ಲಿ ‘ವಯರಲೆಸ್ ತಂತ್ರಜ್ಞಾನದ’ ಸಂಶೋಧನೆ ಮಾಡಿದ್ದರು. ಆದರೆ ಅದನ್ನು ಪೇಟೆಂಟ್ ಮಾಡಲಿಲ್ಲ!

ಯಾವುದೇ ವಿಜ್ಞಾನದ ಸಂಶೋಧನೆ ದುಡ್ಡು ಮಾಡಲು ಅಲ್ಲ. ಅದು ಲೋಕ ಕಲ್ಯಾಣಕ್ಕಾಗಿ ಇರಬೇಕು ಎಂದವರು ಹೇಳಿದ್ದರು! ಮುಂದೆ ಎರಡು ವರ್ಷಗಳ ನಂತರ ಅಂದರೆ 1897ರಲ್ಲಿ ಗೂಗ್ಲಿಮೋ ಮಾರ್ಕೊನಿ ಅದೇ ವಯರ್ ಲೆಸ್ ತಂತ್ರಜ್ಞಾನವನ್ನು ಸಂಶೋಧನೆ ಮಾಡಿ ಪೇಟೆಂಟ್ ಪಡೆದರು! ಅದರಿಂದಾಗಿ ಒಬ್ಬ ಭಾರತೀಯ ವಿಜ್ಞಾನಿಗೆ ದೊರಕಬೇಕಿದ್ದ ವಿಶ್ವ ಮಟ್ಟದ ಕೀರ್ತಿಯು ಸಿಗದೇ ಹೋಯಿತು! ಆದರೆ ಇದರಿಂದ ಬೋಸರು ಒಂದು ಎಳ್ಳಿನ ಮೊನೆಯಷ್ಟು ಕೂಡ ಬೇಸರ ಪಡಲಿಲ್ಲ!

‘ಪ್ರಯೋಗ ಶಾಲೆಯೇ ನನ್ನ‌ ದೇವಾಲಯ’ ಎಂದು ಹೇಳಿದ ಮತ್ತು ಅದರಂತೆ ಬದುಕಿದ ಬೋಸರು 1937 ನವೆಂಬರ್ 23ರಂದು ಈ ಲೋಕದಿಂದ ನಿರ್ಗಮಿಸಿದರು. ಅವರ ಕೊಡುಗೆಗಳನ್ನು ಗಟ್ಟಿಯಾಗಿ ಸ್ಮರಿಸೋಣ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಆ ನೀಲಿ ಕಡಲು ಮತ್ತು ಮಹಾ ಸಂಶೋಧನೆಯೊಂದು ಹುಟ್ಟಿದ ದಿನ!

Exit mobile version