Site icon Vistara News

ರಾಜ ಮಾರ್ಗ ಅಂಕಣ : ಪ್ರಾಥಮಿಕ ಶಿಕ್ಷಣ ಪೂರ್ತಿ ಮಾಡದ ಈ ವ್ಯಕ್ತಿ ರಾಷ್ಟ್ರಮಟ್ಟದಲ್ಲಿ ಕಿಂಗ್ ಮೇಕರ್ ಆದದ್ದು ಹೇಗೆ?

Kamaraj Nadar

#image_title

ಅವರ ಪ್ರಾಥಮಿಕ ಶಿಕ್ಷಣ 11ನೇ ವರ್ಷಕ್ಕೆ ನಿಂತು ಹೋಗಿತ್ತು! ಕಾರಣ ತಂದೆಯ ಸಾವು. ಅವರಿಗೆ ತಮಿಳು ಬಿಟ್ಟರೆ ಬೇರೆ ಯಾವ ಭಾಷೆ ಬರುತ್ತಲೇ ಇರಲಿಲ್ಲ. ಇಂಗ್ಲಿಷ್ ಅಥವಾ ಹಿಂದಿ ಭಾಷೆ ಗೊತ್ತೇ ಇರಲಿಲ್ಲ! ಆದರೆ ರಾಜಕೀಯದಲ್ಲಿ ಅವರಷ್ಟು ಪರಿಣತರು ಇರಲು ಸಾಧ್ಯವೇ ಇರಲಿಲ್ಲ! ಪಕ್ಷ ನಿಷ್ಠೆ ಹಾಗೂ ಸಿದ್ಧಾಂತಗಳಲ್ಲಿ ಕೂಡ ಅವರಿಗೆ ಅವರೇ ಸಾಟಿ ಆಗಿದ್ದರು. ಪರಿಣಾಮವಾಗಿ ಎರಡು ಅವಧಿಗಳಿಗೆ ಅಂದರೆ ನಾಲ್ಕು ವರ್ಷ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಆದರು ಮತ್ತು ದೆಹಲಿ ಮಟ್ಟದ ಕಿಂಗ್ ಮೇಕರ್ ಆದರು!

ಅವರೇ ಕೆ. ಕಾಮರಾಜ್!

ನೆಹರೂ ನಂತರ ಪ್ರಧಾನಿ ಯಾರು ಎಂದು ಪ್ರಶ್ನೆ ಬಂದಾಗ ಪಟ್ಟು ಹಿಡಿದು ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಆಯ್ಕೆ ಮಾಡಿದ್ದು ಅದೇ ಕಾಮರಾಜ್! ಶಾಸ್ತ್ರಿ ರಷ್ಯಾದಲ್ಲಿ ನಿಧನರಾದಾಗ ಮತ್ತೆ ದೊಡ್ಡ ಸಂಘರ್ಷ ಏರ್ಪಟ್ಟಿತ್ತು. ಮುಂದೆ ಪ್ರಧಾನಿ ಯಾರು? ಎಂಬ ಪ್ರಶ್ನೆ ಬಂದಾಗ ಹಿಡಿದ ಪಟ್ಟು ಬಿಡದೆ ಇಂದಿರಾ ಗಾಂಧಿಯವರನ್ನು ಪ್ರಧಾನಿ ಮಾಡಿದ್ದು ಇದೇ ಕಾಮರಾಜ್! ಆ ಅವಧಿಯಲ್ಲಿ ಅವರಷ್ಟು ಶಕ್ತಿಶಾಲಿ ನಾಯಕ ರಾಷ್ಟ್ರಮಟ್ಟದಲ್ಲಿ ಬೇರೆ ಯಾರೂ ಇರಲಿಲ್ಲ! ಇಂಗ್ಲಿಷ್ ಅಥವಾ ಹಿಂದಿ ಭಾಷೆ ಬರುತ್ತಿದ್ದರೆ ಶಾಸ್ತ್ರಿಯವರ ನಂತರ ಅವರೇ ಪ್ರಧಾನಿ ಆಗುವ ಅವಕಾಶ ಇತ್ತು ಎಂದು ಅನೇಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ!

ಅವರ ಬಾಲ್ಯ ಅತ್ಯಂತ ದಾರುಣ ಆಗಿತ್ತು!

1903ನೇ ಜುಲೈ 15ರಂದು ತಮಿಳುನಾಡಿನ ರಾಮನಾಥಪುರ ಜಿಲ್ಲೆಯ ವಿರುಧುನಗರದಲ್ಲಿ ಜನಿಸಿದ ಕೆ. ಕಾಮರಾಜ್ ತನ್ನ 11ನೇ ವಯಸ್ಸಿಗೇ ತನ್ನ ಅಪ್ಪನನ್ನು ಕಳೆದುಕೊಳ್ಳಬೇಕಾಯಿತು. ಅಲ್ಲಿಗೆ ಅವರ ಶಾಲೆಯು ಮುಗಿಯಿತು! ಸಣ್ಣ ಪ್ರಾಯದಲ್ಲಿಯೇ ಸೋದರಮಾವನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ ಹುಡುಗ ಮುಂದೆ ರಾಜಕೀಯದಲ್ಲಿ ಆಸಕ್ತಿ ತಾಳುತ್ತಾರೆ. ಪ್ರತೀ ದಿನವೂ ‘ಸ್ವದೇಶ ಮಿತ್ರನ್’ ಎಂಬ ತಮಿಳು ಪತ್ರಿಕೆ ಓದುವುದು, ರಾಜಕೀಯದ ಸಭೆಗಳಿಗೆ ಅಟೆಂಡ್ ಮಾಡುವುದು, ಗಾಂಧಿ ಅವರ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸುವುದು ಅವರ ದಿನಚರಿ ಆಯಿತು. ಆಗ ಜೈಲುವಾಸ ಕೂಡ ಅವರು ಅನುಭವಿಸುತ್ತಾರೆ.

ಲೋಕಸಭೆಯ ಪ್ರವೇಶ

1946ರಿಂದ 1954ರವರೆಗೆ ಅವರು ಮದ್ರಾಸು ರಾಜ್ಯದಿಂದ ಚುನಾವಣೆ ಗೆದ್ದು ಲೋಕಸಭೆಗೆ ಪ್ರವೇಶವನ್ನು ಪಡೆದರು. ಅಲ್ಲಿ ರಾಜಕೀಯದ ಎಲ್ಲ ಪಟ್ಟುಗಳನ್ನು ಅವರು ಕಲಿತರು. ಲೋಕಸಭೆಯಲ್ಲಿ ತಮಿಳು ಭಾಷೆಯಲ್ಲಿ ಮಾತನ್ನಾಡಿದರು. ನೆಹರೂ ಮುಂದೆ ಕೂತು ಹತ್ತಾರು ಯೋಜನೆಗಳನ್ನು ತನ್ನ ರಾಜ್ಯಕ್ಕೆ ತಂದುಕೊಟ್ಟರು.

ತಮಿಳುನಾಡಿನ ಪವರ್‌ಫುಲ್ ಮುಖ್ಯಮಂತ್ರಿ!

1954-63ರ ಅವಧಿಯಲ್ಲಿ ತನ್ನ ರಾಜ್ಯದ ಅತ್ಯುತ್ತಮ ಮುಖ್ಯಮಂತ್ರಿ ಆದರು. ಅವರ ಅಧಿಕಾರದ ಅವಧಿಯಲ್ಲಿ ಅವರ ರಾಜ್ಯಕ್ಕೆ ತಮಿಳುನಾಡು ಎಂದು ಹೆಸರು ಬಂದಿತು. ಆ ರಾಜ್ಯವನ್ನು ಅತ್ಯಂತ ಬಲಿಷ್ಠ ರಾಜ್ಯವನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು!

ಬಾಲ್ಯದಲ್ಲಿ ಶಿಕ್ಷಣ ವಂಚಿತರಾಗಿದ್ದ ಅವರು ತಮಿಳುನಾಡಿನಲ್ಲಿ ಮೊದಲ ಬಾರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ತಂದರು. ಇಡೀ ದೇಶದಲ್ಲಿ ಮೊದಲ ಬಾರಿಗೆ ಶಾಲೆಯ ಮಕ್ಕಳಿಗೆ ಉಚಿತ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ ಕೀರ್ತಿ ಅವರಿಗೇ ಸಲ್ಲುತ್ತದೆ!

ಎರಡು ಅವಧಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದರು!

ನೆಹರೂ ಅವರಿಗೆ ಅತ್ಯಾಪ್ತರಾಗಿದ್ದರು ಕಾಮರಾಜ್

ಮುಂದೆ ನಾಲ್ಕು ವರ್ಷಗಳ ಅವಧಿಗೆ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದರು. ಶಾಸ್ತ್ರೀ ಮತ್ತು ಇಂದಿರಾ ಗಾಂಧಿ ಅವರನ್ನು ಪ್ರಧಾನಿ ಮಾಡುವಲ್ಲಿ ಅವರ ಪಾತ್ರವೇ ನಿರ್ಣಾಯಕ ಆಗಿತ್ತು! ವಿಶೇಷವಾಗಿ ಇಂದಿರಾ ಗಾಂಧಿ ಅವರ ಆಯ್ಕೆಯ ಹೊತ್ತಿಗೆ ಅವರು ಸಾಕಷ್ಟು ಪ್ರತಿರೋಧ ಎದುರಿಸಬೇಕಾಯಿತು. ಎಲ್ಲ ಕಡೆಯಲ್ಲಿಯೂ ಕಾಮರಾಜ್ ಅವರ ನಿಲುವುಗಳೇ ಗೆದ್ದವು!

ಇಂದಿರಾಗಾಂಧಿ ವಿರುದ್ಧವೂ ಗೆದ್ದರು ಕಾಮರಾಜ್!

ಶಕ್ತಿಶಾಲಿ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ನೀಲಂ ಸಂಜೀವ ರೆಡ್ಡಿ ಅವರನ್ನು ನಿಲ್ಲಿಸಿದಾಗ ಕಾಮರಾಜ್ ಮುನಿಸಿಕೊಂಡರು. ಸಂಜೀವ್ ರೆಡ್ಡಿ ವಿರುದ್ಧ ವಿ.ವಿ ಗಿರಿಯವರನ್ನು ನಿಲ್ಲಿಸಿ ಚುನಾವಣೆಯಲ್ಲಿ ಗೆಲ್ಲಿಸಿಯೇ ಬಿಟ್ಟರು ಕಾಮರಾಜ್! ಅದರಿಂದ ಇಂದಿರಾ ಗಾಂಧಿ ಅವರ ಆಕ್ರೋಶಕ್ಕೆ ಗುರಿ ಆದರು.

ಇಂದಿರಾ ಗಾಂಧಿ ನಮಿಸುತ್ತಿರುವ ರೀತಿಯೇ ಕಾಮರಾಜ್‌ ಶಕ್ತಿಯನ್ನು ತೋರಿಸುತ್ತದೆ.

1975ರ ಅಕ್ಟೋಬರ್ ಎರಡರಂದು ಅವರು ಇಹಲೋಕದ ವ್ಯಾಪಾರ ಮುಗಿಸಿದರು. 1976ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೀವನವಿಡೀ ‘ನೆವರ್ ಕಾಂಪ್ರೋಮೈಸ್’ ನಿಲುವುಗಳ ಜೊತೆಗೆ ಬದುಕಿದ ಕಾಮರಾಜ್ ಅವರ ಬದುಕೇ ಒಂದು ಅಚ್ಚರಿಗಳ ಮೂಟೆ!

ಇದನ್ನೂ ಓದಿ : ರಾಜ ಮಾರ್ಗ ಅಂಕಣ : `ನನ್ನ ಸಹೋದರಿ’ ಅಭಿಯಾನದ ಮೂಲಕ 350ಕ್ಕೂ ಅಧಿಕ ಬಡ ಹೆಣ್ಮಕ್ಕಳ ಮದುವೆ ಮಾಡಿಸಿದ ಪುಣ್ಯಾತ್ಮ!

Exit mobile version