ತಾನು ಪ್ರೀತಿ ಮಾಡಿದ ಹುಡುಗಿಯು ಈಗ ತನ್ನ ಜೊತೆ ಇತ್ತೀಚೆಗೆ ಸರಿಯಾಗಿ ಮಾತಾಡುತ್ತಾ ಇಲ್ಲ ಎಂಬ ಸಣ್ಣ ಕಾರಣಕ್ಕೆ ಅವನು ಹರಿತವಾದ ಬ್ಲೇಡಿನಿಂದ ತನ್ನ ಕೈಯ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ (Attempt to suicide) ಪ್ರಯತ್ನ ಪಟ್ಟಿದ್ದ. ಯಾರದ್ದೋ ಪುಣ್ಯಕ್ಕೆ ಬದುಕಿದ! ಪೊಲೀಸರು ಆಸ್ಪತ್ರೆಗೆ ಬಂದು ಕೇಸ್ ರಿಜಿಸ್ಟರ್ ಮಾಡಿ ಹೋಗಿದ್ದರು (Raja Marga Column).
ಅಪ್ಪ ಅಮ್ಮನ ಕನಸು ಆತನ
ಹೆಗಲಿನ ಮೇಲೆ ಸೋತು ಮಲಗಿತ್ತು!
ಅವನು ಅಪ್ಪ ಅಮ್ಮನ ಒಬ್ಬನೇ ಮಗ. ತನ್ನ ಹೆತ್ತವರ ನೂರಾರು ಕನಸುಗಳನ್ನು ತನ್ನ ಹೆಗಲಿನ ಮೇಲೆ ಹೊತ್ತ ಅವನು ಈಗ ಆಸ್ಪತ್ರೆಯಲ್ಲಿ ನೋವು ಪಡುತ್ತ ಮಲಗಿದ್ದ.
ಅವನ ಪ್ರೀತಿಯ ಅಮ್ಮ ಆಸ್ಪತ್ರೆಗೆ ಅವನ ಪಕ್ಕದಲ್ಲಿ ಬಂದು ಕೂತವರು ಎರಡು ದಿನದಿಂದಲೂ ಎದ್ದಿರಲೇ ಇಲ್ಲ. ಪಾಪ, ಯಾರು ಬಂದು ಮಾತಾಡಿಸಿದರೂ ಅವರ ಕಣ್ಣಾಲಿ ತುಂಬಿಬರುತ್ತಿದೆ. ಅವನ ಅಪ್ಪಯ್ಯ ಆಸ್ಪತ್ರೆಯ ಬಿಲ್ ಕಟ್ಟಲು ತನ್ನ ಹೆಂಡತಿಯ ಚಿನ್ನವನ್ನು ಅಡವಿಡಲು ಚಿನ್ನದ ಅಂಗಡಿಗೆ ಹೋಗಿದ್ದಾರೆ. ಅವನ ಅನೇಕ ಗೆಳೆಯ, ಗೆಳತಿಯರು ಬಂದು ಮಾತಾಡಿಸಿ ಧೈರ್ಯ ಹೇಳಿದ್ದಾರೆ. ಆದರೆ ಅವಳು ಬರಲಿಲ್ಲ ಎಂದು ಅವನಿಗೆ ಬೇಸರ! ನಾನು ಹೋಗಿ ಭುಜ ತಟ್ಟಿದೆ.
“ಸಾರಿ ಸರ್, ತಪ್ಪು ಮಾಡಿದೆ” ಎಂದ! ಅವನು ನಿಜವಾಗಿ ಅಳುತ್ತಿದ್ದ. ನಾನು ಅವನ ಕಣ್ಣೀರು ಒರೆಸಿದೆ. ಅವನು ತುಂಬಾ ಪ್ರತಿಭಾವಂತ ಹುಡುಗ. ಕಲಿಕೆಯಲ್ಲಿ ಯಾವಾಗಲೂ ಮುಂದೆ. ಇತರ ವಿಭಾಗಗಳಲ್ಲಿಯೂ ಉತ್ಸಾಹದ ಚಿಲುಮೆ ಅವನು. ಆದರೆ ಅವಳ ಕಾರಣಕ್ಕೆ ಅವನು ಇತ್ತೀಚೆಗೆ ಡಲ್ ಆಗಿದ್ದ.
“ಈ ಸಲ ಪರೀಕ್ಷೆ ಮಿಸ್ ಆಯ್ತು ಸರ್. ನನ್ನ ಲೈಫ್ ನಾನೇ ಹಾಳು ಮಾಡಿಕೊಂಡೆ. ನಾನು ಅವಳಿಗೊಸ್ಕರ ಏನೆಲ್ಲಾ ಮಾಡಿದೆ! ನಂಬಿದೆ ಸರ್ ಅವಳನ್ನು. ನಾನು ಈ ನೋವಿನಲ್ಲಿ ಒದ್ದಾಡುತ್ತಿದ್ದರೂ ಒಮ್ಮೆ ಕೂಡ ಅವಳು ನೋಡಲು ಬರಲಿಲ್ಲ! ಸ್ವಾರ್ಥಿ ಸರ್ ಅವಳು” ಅಂದ.
“ಅಲ್ವೋ ಹುಡುಗ. ಯಾಕೆ ನೀನು ಕೈಯ ನರವನ್ನು ಕೊಯ್ದು ಕೊಂಡೆ?” ಅಂದೆ ನಾನು.
ಅವಳಿಗೆ ಬುದ್ದಿ ಕಲಿಸಬೇಕು ಸರ್!
“ಅವಳಿಗೆ ಬುದ್ಧಿ ಕಲಿಸಬೇಕು ಸರ್. ಅಪ್ಪನಿಗೆ ಸುಳ್ಳು ಹೇಳಿ ದುಡ್ಡು ತೆಗೆದುಕೊಂಡು ಹೋಗಿ ಅವಳಿಗೆ ಹೊಸತು ಮೊಬೈಲ್ ಕೊಡಿಸಿದ್ದೆ. ಕರೆನ್ಸಿ ನಾನೇ ಹಾಕ್ತಾ ಇದ್ದೆ!”
ಅವನ ಅಪ್ಪ ಆಗಲೇ ಬಾಗಿಲ ಬಳಿ ಬಂದು ನಿಂತು ಅಳಲು ಆರಂಭ ಮಾಡಿದ್ದರು.
ನಾನು ತಣ್ಣನೆ ಕೇಳಿದೆ “ಅಲ್ವೋ ಮಾರಾಯ, ಅವಳಿಗೆ ಬುದ್ಧಿ ಕಲಿಸಲು ನೀನ್ಯಾಕೆ ಸಾಯಬೇಕು? ಬೇರೆ ನಿಂಗೆ ಯಾವುದೂ ದಾರಿ ಇರಲಿಲ್ಲವಾ? ನೀನು ಸತ್ತಿದ್ದರೆ ನಿನಗೆ ಮಾತ್ರ ಶಿಕ್ಷೆಯೋ? ಅಪ್ಪ ಮತ್ತು ಅಮ್ಮನ ಬಗ್ಗೆ ಯೋಚನೆ ಮಾಡಿದ್ದೀಯಾ?”
ಬಾಣ ತಲುಪಬೇಕಾದ ಕಡೆ ತಲುಪಿತ್ತು. ಹುಡುಗ ಈಗ ಬ್ಲಾಸ್ಟ್ ಆದ. “ಇಲ್ಲಾ ಸರ್, ಇನ್ನು ಸಾಯುವುದಿಲ್ಲ. ನಾನು ಖಂಡಿತ ಬದುಕಿ ತೋರಿಸುತ್ತೇನೆ. ಮುಂದಿನ ಸಲ ಹಾರ್ಡ್ ವರ್ಕ್ ಮಾಡಿ ಪರೀಕ್ಷೆ ಬರೆಯುತ್ತೇನೆ. ಫಸ್ಟ್ ರ‍್ಯಾಂಕ್ ಬರ್ತೇನೆ. ನಾನು ಏನು ಅಂತ ಅವಳಿಗೆ ತೋರಿಸುತ್ತೇನೆ ಸರ್” ಅಂದ.
“ಪ್ರೀತಿ ಮಾಡೋದು ಖಂಡಿತ ತಪ್ಪಲ್ಲ ಕಣೋ ಹುಡುಗ. ಪ್ರೀತಿ ನಿನ್ನ ಕಲಿಕೆಗೆ ಸ್ಫೂರ್ತಿ ಕೊಡಬೇಕು. ಅದು ಬಿಟ್ಟು ನಿನಗೆ ನೋವು ಕೊಡಬಾರದು. ನಿನ್ನ ಪ್ರೀತಿಗೆ ಅವಳು ವರ್ಥ್ ಅಲ್ಲ. ಕಲಿಕೆಯಲ್ಲಿ ಸಾಧನೆ ಮಾಡಿ ತೋರಿಸು. ಜೀವನದಲ್ಲಿ ಸೆಟಲ್ ಆಗು. ಮತ್ತೆ ಪ್ರೀತಿ ಮಾಡುವುದು ಇದ್ದೇ ಇದೆ.”
ಅವನು ‘ಸರಿ ಸಾರ್. ನಿಮಗೆ ಥ್ಯಾಂಕ್ಸ್ ‘ ಅಂದ. ಅವನ ಕಣ್ಣಲ್ಲಿ ಈಗ ಗಿಲ್ಟ್ ಹೋಗಿ ದೃಢ ನಿರ್ಧಾರ ಬಂದಿತ್ತು. ಅವನ ಬೆನ್ನು ತಟ್ಟಿ, ಅವನ ಅಪ್ಪನ ಕೈಗೆ ಒಂದು ಕೆಂಪು ನೋಟು ಕೊಟ್ಟು ಆಸ್ಪತ್ರೆಯಿಂದ ಹೊರಬಂದೆ.
ಇದನ್ನೂ ಓದಿ : Raja Marga Column : ವಹೀದಾ ರೆಹಮಾನ್; ಆಕೆಯ ಬದುಕು ಸ್ವಾಭಿಮಾನದ ಯಶೋಗಾಥೆ
ಅವನಿಗೆ ಅದೊಂದನ್ನು ಹೇಳಲಿಲ್ಲ!
ನೂರು ಬಾರಿ ಹೇಳಬೇಕು ಅಂತ ನನ್ನ ನಾಲಗೆಯ ತುದಿಗೆ ಬಂದರೂ ನಾನು ಅವನಿಗೆ ಒಂದು ವಿಷಯ ಹೇಳಲಿಲ್ಲ. ನಾನು ಆಸ್ಪತ್ರೆಯ ಒಳಗೆ ಹೋಗುವಾಗ ಅದೇ ಹುಡುಗಿ, ಹೌದು ಅವಳೇ! ಕಾಲೇಜಿನ ಇನ್ನೊಬ್ಬ ಪೊರ್ಕಿ ಹುಡುಗನಿಗೆ ಜ್ಯೂಸ್ ಅಂಗಡಿಯಲ್ಲಿ ಅಂಟಿಕೊಂಡು ಕೂತಿದ್ದಳು ಮತ್ತು ಗಟ್ಟಿಯಾಗಿ ನಗುತ್ತಾ ತಣ್ಣನೆ ಜ್ಯೂಸ್ ಕುಡಿಯುತ್ತಾ ಇದ್ದಳು!