Site icon Vistara News

ರಾಜ ಮಾರ್ಗ ಅಂಕಣ : ರಾಮಾಯಣ ಹುಟ್ಟಿದ್ದು ಹೇಗೆ? ಶೋಕ ವಾಕ್ಯವು ಶ್ಲೋಕ ವಾಕ್ಯವಾಗಿ ಬದಲಾದದ್ದು ಹೇಗೆ?

sage and poet valmiki

ಮಾ ನಿಷಾದ ಪ್ರತಿಷ್ಠಾ ತ್ವಮಗಮಹ ಶಾಶ್ವತೀ ಸಮಾ:
ಯತ್ ಕ್ರೌಂಚ ಮಿಥುನಾದೇಕಮವಧೀ ಕಾಮಮೋಹಿತಂ
(ಮಿಥುನ ಪ್ರಕ್ರಿಯೆಯಲ್ಲಿದ್ದ ಹಕ್ಕಿಯನ್ನು ಅಕಾರಣವಾಗಿ ಕೊಂದ ಹೇ ಅನ್ಯಾಯಿ, ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ)!


ಅತ್ಯಂತ ಜನಪ್ರಿಯವಾದ ಈ ಶ್ಲೋಕವು ಆದಿಕಾವ್ಯ ರಾಮಾಯಣದ ಉಗಮಕ್ಕೆ ಕಾರಣವಾದದ್ದು ಹೇಗೆ? ಪ್ರತಿಯೊಬ್ಬ ಭಾರತೀಯನೂ ಇದನ್ನು ತಿಳಿಯಬೇಕು.

ಜೋಡಿ ಕ್ರೌಂಚ ಪಕ್ಷಿಯ ಪ್ರೀತಿಯು ಋಷಿಯ ಮನ ಕಲುಕಿದ್ದು ಹೀಗೆ!

ಅತ್ಯಂತ ಗಾಢವಾಗಿ ತಪಸ್ಸನ್ನು ಆಚರಣೆ ಮಾಡುತ್ತ ತನ್ನ ಸುಪ್ತ ಮನಸ್ಸಿನ ಪ್ರಜ್ಞೆಯಲ್ಲಿ ವಿಹರಿಸುತ್ತಿದ್ದ ವಾಲ್ಮೀಕಿಯು ತನ್ನ ಮುಂದೆ ಕ್ರೌಂಚ ಮಿಥುನ ಪಕ್ಷಿಗಳ ಪ್ರಣಯವನ್ನು ಒಳಗಣ್ಣಿನಿಂದ ನೋಡುತಿದ್ದರು. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಓರ್ವ ಬೇಡನು ಬಾಣವನ್ನು ಬಿಟ್ಟು ಗಂಡು ಕ್ರೌಂಚ ಪಕ್ಷಿಯನ್ನು ಹೊಡೆದು ಉರುಳಿಸುತ್ತಾನೆ. ಇದರಿಂದ ಆಕ್ರೋಶಗೊಂಡ ವಾಲ್ಮೀಕಿಯು ಬೇಡನಿಗೆ ಮೇಲೆ ಬರೆದಂತೆ ಶಾಪ ಕೊಡುತ್ತಾನೆ ಮತ್ತು ತಕ್ಷಣವೇ ಸ್ವತಃ ಬೆಚ್ಚಿ ಬೀಳುತ್ತಾನೆ.

ರಾಮಾಯಣ ಕಥನ ಬರೆಯಲು ಮೂಲವಾದ ಕ್ರೌಂಚ ಪಕ್ಷಿಗಳ ಸಾವಿನ ಶೋಕ ಕಥನ

ಕಾರಣವು ಏನೆಂದರೆ ವಾಲ್ಮೀಕಿಯು ಯಾವ ಯೋಚನೆಯನ್ನು ಕೂಡ ಮಾಡದೆ ನುಡಿದ ಆ ವಾಕ್ಯವು ಛಂದೋಬದ್ಧವಾಗಿ ಹೊರಬಂದಿತ್ತು! ಅದು ಅತ್ಯಂತ ಸುಂದರವಾದ ಸಂಸ್ಕೃತದ ಅನುಷ್ಟುಪ್ ಛಂದಸ್ಸಲ್ಲಿ ಬದ್ಧವಾಗಿತ್ತು! ವಾಲ್ಮೀಕಿಯು ನೋವು ಮತ್ತು ಸಿಟ್ಟಿನಲ್ಲಿ ಹೊರಹಾಕಿದ ಆ ಆಕ್ರೋಶವು ಮುಂದೆ 24,000 ಶ್ಲೋಕಗಳು ಇರುವ ರಾಮಾಯಣ ಎಂಬ ಜಗತ್ತಿನ ಅತೀ ಶ್ರೇಷ್ಠವಾದ ಮಹಾಕಾವ್ಯದ ಉಗಮಕ್ಕೆ ನಾಂದಿ ಹಾಡಿತು ಅಂದರೆ ಅದು ಅದ್ಭುತ! ಅದು ಜಗತ್ತಿನ ಮೊದಲ ಮಹಾ ಕಾವ್ಯ. ಆದ್ದರಿಂದ ಆದಿ ಕಾವ್ಯ ಎಂಬ ಹೆಸರು ಬಂದಿತು.

ಮಾ ನಿಷಾದ ಅನ್ನುವುದೇ ರಾಮಾಯಣದ ಮೊದಲ ಶ್ಲೋಕ!

ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ವಾಲ್ಮೀಕಿಯು ಮಹರ್ಷಿ ಆಗುವ ಮೊದಲು ರತ್ನಾಕರ ಎಂಬ ಹೆಸರಿನ ದರೋಡೆಕೋರ ಆಗಿದ್ದರು. ಆಗ ಆ ಬೇಡನು ಮಾಡಿದ್ದಕ್ಕಿಂತ ಹೆಚ್ಚು ರಕ್ತಪಾತ ಮತ್ತು ಹಿಂಸೆಗಳನ್ನು ಸ್ವತಃ ಮಾಡಿದ್ದರು! ಆಮೇಲೆ ಒಂದು ಸಣ್ಣ ಘಟನೆಯಿಂದ ಪರಿವರ್ತನೆ ಆಗಿ ತಪಸ್ಸನ್ನು ಆಚರಿಸಿ ಮಹರ್ಷಿ ಆದವರು. ಅಂತಹ ಹಿನ್ನೆಲೆ ಇರುವ ವಾಲ್ಮೀಕಿಯು ಒಂದು ಸಣ್ಣ ಪಕ್ಷಿಯ ಸಾವಿಗೆ ಆ ರೀತಿ ಸ್ಪಂದನೆ ನೀಡಿದರು ಅಂದರೆ ಅವರಲ್ಲಿ ಎಂತಹ ಪರಿವರ್ತನೆ ಆಗಿರಬೇಕು! ಸುಪ್ತ ಮನಸ್ಸಿನ ಪರಾಕಾಷ್ಠೆ ಆಗಿರುವ ತಪಸ್ಸಿನ ಸ್ಥಿತಿಯಲ್ಲಿಯೂ ಕ್ರೌಂಚ ಪಕ್ಷಿಗಳ ಪ್ರಣಯದ ಬಗ್ಗೆ ಕವಿಯು ಗಮನಿಸಿದರು ಎಂದರೆ ಎಂತಹ ಪರಿವರ್ತನೆ! ಸಹಾನುಭೂತಿಯ ತುದಿಬಿಂದು ಈ ಪರಿವರ್ತನೆ!

raja marga column how ramayana was created by valmiki

ಹಿಂಸೆ ಮತ್ತು ನೋವು ನೀಡಿದ ಕವಿಯ ಪ್ರತಿಸ್ಪಂದನೆ!

ಇನ್ನೊಂದು ರೀತಿಯಿಂದ ನೋಡಿದರೆ ಆ ಬೇಡನು ಮಾಡಿದ್ದರಲ್ಲಿ ಏನು ತಪ್ಪಿತ್ತು? ಬೇಟೆಯು ಅವನ ಹೊಟ್ಟೆಪಾಡು ಆಗಿತ್ತು. ವಾಲ್ಮೀಕಿ ಅದರ ಬಗ್ಗೆ ಕೂಡ ಯೋಚನೆ ಮಾಡದೆ ಸಣ್ಣ ಒಂದು ಹಿಂಸೆಗೆ ಆ ರೀತಿಯ ತೀವ್ರವಾದ ಸ್ಪಂದನೆ ನೀಡಿದರು ಎಂದಾದರೆ ಅದೆಂತಹ ಪರಿವರ್ತನೆ!

ಕಳಿಂಗ ಯುದ್ಧವನ್ನು ಉನ್ಮಾದದಲ್ಲಿ ಗೆದ್ದ ಅಶೋಕ ಚಕ್ರವರ್ತಿಯು ಮರುಗಳಿಗೆಯಲ್ಲಿ ಆ ಹೆಣದ ರಾಶಿ, ರಕ್ತಪಾತ ನೋಡಿ ಎಲ್ಲವನ್ನೂ ತ್ಯಜಿಸಿ ವಿರಕ್ತನಾಗಿ ಹೊರಟನು ಎಂದರೆ ಅದೆಂತಹ ಪರಿವರ್ತನೆ! ಬಂದೂಕಿನ ನಳಿಕೆಯಲ್ಲಿ ಪಾರಿವಾಳವು ಗೂಡು ಕಟ್ಟಲು ಸಾಧ್ಯವೇ ಇಲ್ಲ ಎನ್ನುವುದು ಸಾಮ್ರಾಟ್ ಅಶೋಕನಿಗೆ ಆಗಲೇ ಅರ್ಥ ಆಗಿತ್ತು! ಅಂದರೆ ಹಿಂಸೆಯಿಂದ ಶಾಂತಿಯನ್ನು ಸ್ಥಾಪನೆ ಮಾಡಲು ಸಾಧ್ಯವೇ ಇಲ್ಲ ಅನ್ನುವುದು ಅಶೋಕನಿಗೆ ಮನವರಿಕೆ ಆಗಿತ್ತು. ಅದರಿಂದ ಸಾಧ್ಯ ಆದದ್ದು ಪರಿವರ್ತನೆ!

ಬದಲಾವಣೆ ಮತ್ತು ಪರಿವರ್ತನೆ!

ಬದಲಾವಣೆಗಳು ನಮ್ಮ ಜೀವನದಲ್ಲಿ ನಿರಂತರವಾಗಿ ಘಟಿಸುವ ಸಂಗತಿಗಳು. ಯಾರೂ ಕೂಡ ಇದ್ದ ಹಾಗೆ ಇರಲು ಸಾಧ್ಯ ಇಲ್ಲ. ನಮ್ಮ ಮಾತು, ನಡವಳಿಕೆ, ಭಾವನೆ ಮತ್ತು ವರ್ತನೆಗಳಲ್ಲಿ ಬದಲಾವಣೆಗಳು ನಮ್ಮ ಗಮನಕ್ಕೆ ಬಾರದ ಹಾಗೆ ನಡೆದೇ ನಡೆಯುತ್ತವೆ. ಕೆಲವು ಸಲ ನಾವು ಆತ್ಮಪೂರ್ವಕ ಆಗಿ ಬದಲಾವಣೆಯನ್ನು ತಂದು ಕೊಳ್ಳುತ್ತೇವೆ. ಪ್ರತೀ ಕ್ಷಣವೂ ಆತ್ಮಾವಲೋಕನ ಮಾಡಿಕೊಳ್ಳುವ ಅಭ್ಯಾಸ ನಮ್ಮಲ್ಲಿದೆ ಎಂದರೆ ಬದಲಾವಣೆಗಳು ಹೆಚ್ಚು ಧನಾತ್ಮಕ ಆಗುತ್ತವೆ.

ನಮ್ಮಲ್ಲಿ ಸಂಭವಿಸುವ ಸಮಗ್ರ ಬದಲಾವಣೆಗಳ ಒಟ್ಟು ಮೊತ್ತವೇ ಪರಿವರ್ತನೆ (Transformation)! ವಾಲ್ಮೀಕಿ, ಅಶೋಕ, ಬಾಹುಬಲಿ ಇವರೆಲ್ಲರಲ್ಲಿ ಆಗಿರುವುದು ಕೂಡ ಪರಿವರ್ತನೆಯೇ!

ಬದಲಾವಣೆಗಳು ತಾತ್ಕಾಲಿಕ. ಆದರೆ ಪರಿವರ್ತನೆಯು ಶಾಶ್ವತ! ಅದು ನಮ್ಮ ಭಾವನೆ, ಯೋಚನೆ, ವರ್ತನೆ, ಮಾತು, ನಡವಳಿಕೆ ಮತ್ತು ಯೋಚನಾ ವಿಧಾನ ಎಲ್ಲದರಲ್ಲಿಯೂ ಸಮಗ್ರವಾದ ಬದಲಾವಣೆಯನ್ನು ತರುತ್ತದೆ ಮತ್ತು ಅದು ಶಾಶ್ವತವಾಗಿ ನಮ್ಮ ವ್ಯಕ್ತಿತ್ವದ ಭಾಗವಾಗುತ್ತದೆ.

ಪರಿವರ್ತನೆ ಯಾವಾಗಲೂ ನಮ್ಮಲ್ಲಿ ಧನಾತ್ಮಕ ಬದಲಾವಣೆಗಳ ಪ್ರವಾಹವನ್ನು ಉಂಟುಮಾಡುತ್ತದೆ. ಪರಿವರ್ತನೆ ಆದ ನಂತರ ನಾವು ಮೊದಲಿನ ಹಾಗೆ ಇರುವುದೇ ಇಲ್ಲ. ಅದು ನಮ್ಮಲ್ಲಿ ಮಾತ್ರವಲ್ಲ, ನಮ್ಮ ಸುತ್ತ ಇರುವ ಜನರಿಗೂ ಆನಂದವನ್ನು ತರುತ್ತದೆ. ಅಂತಹ ಪರಿವರ್ತನೆಗಳು ನಮ್ಮೊಳಗೆ ನಿರಂತರ ಸಂಭವಿಸಲಿ ಎನ್ನುವುದು ನಮ್ಮ ಆಶಯವಾಗಲಿ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ: ನನ್ನ ಭಾರತವನ್ನು ಪ್ರೀತಿ ಮಾಡಲು ನೂರಾರು ಕಾರಣಗಳು!

Exit mobile version