(ನಿನ್ನೆಯ ಸಂಚಿಕೆಯಿಂದ ಮುಂದುವರಿದಿದೆ)
೧೭) ಸಂಗೀತಕ್ಕೆ, ಅದರಲ್ಲಿಯೂ ಶಾಸ್ತ್ರೀಯ ಸಂಗೀತಕ್ಕೆ ನೆನಪನ್ನು ಹೆಚ್ಚಿಸುವ ಶಕ್ತಿ ಇದೆ. ಓದುವ ಮೊದಲು ಹದಿನೈದು ನಿಮಿಷ ಶಾಸ್ತ್ರೀಯ ಸಂಗೀತವನ್ನು (ಅದರಲ್ಲಿಯೂ ಸಿತಾರ್ ಮೊದಲಾದ ವಾದ್ಯ ಸಂಗೀತ) ಆಲಿಸುವುದರಿಂದ ನಮ್ಮ ಏಕಾಗ್ರತೆ ಹೆಚ್ಚುವುದು ಮಾತ್ರವಲ್ಲ ಮೆಮೊರಿ ಕೂಡ ಹೆಚ್ಚಾಗುತ್ತದೆ.
೧೮) ಒತ್ತಡದಲ್ಲಿ ಕಲಿತ ವಿಷಯಗಳಿಗಿಂತ ಖುಷಿ ಪಟ್ಟು ಕಲಿತ ವಿಷಯಗಳು ಹೆಚ್ಚು ನೆನಪಲ್ಲಿ ಉಳಿಯುತ್ತವೆ.
೧೯) ಬೆಳಗಿನ ಜಾವದ ವಾಕಿಂಗ್ ನಮ್ಮ ಮೆಮೊರಿ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಅದರಲ್ಲಿಯೂ ಹಸಿರು ಹುಲ್ಲಿನ ಮೇಲೆ ನಡೆದರೆ ನಮ್ಮ ಮೆಮೊರಿ ಶಕ್ತಿ 20% ಹೆಚ್ಚಾಗುವುದು ವೈಜ್ಞಾನಿಕವಾಗಿ ಸಾಬೀತು ಆಗಿದೆ.
೨೦) ಕಿವಿಗಳಿಂದ ಕೇಳಿದ ಆಡಿಯೊ ಮೆಮೊರಿ ಹೆಚ್ಚು ಇಂಪ್ಯಾಕ್ಟ್ ಕೊಡುತ್ತದೆ. ಗಮನವಿಟ್ಟು ಕೇಳುವುದಕ್ಕೆ ಆಲಿಸುವುದು (listening) ಎನ್ನುತ್ತಾರೆ. ಅದು ನಿಮ್ಮ ಮೆಮೋರಿಯ ನಿಜವಾದ ಬೂಸ್ಟರ್! ಯಾವುದೋ ದೀರ್ಘವಾದ ಉತ್ತರ, ಪದ್ಯ, ಪ್ರಬಂಧಗಳನ್ನು ಹೀಗೇ ಓದುತ್ತಾ ಹೋಗುವುದಕ್ಕಿಂತ ಅವುಗಳನ್ನು ನಿಮ್ಮ ಮೊಬೈಲ್‌ಗಳಲ್ಲಿ ನಿಮ್ಮ ಧ್ವನಿಯಲ್ಲಿ ರೆಕಾರ್ಡಿಂಗ್ ಮಾಡಿ ನಂತರ ಬಿಡುವು ಮಾಡಿಕೊಂಡು ಕೇಳಿದರೆ ದೀರ್ಘ ಕಾಲ ನೆನಪಲ್ಲಿ ಉಳಿಯುತ್ತದೆ!
೨೧) ದೃಶ್ಯರೂಪಕ್ಕೆ ಪರಿವರ್ತಿಸಿದರೆ ಸೂಪರ್ ಸೇಫ್
ಘಟನೆಗಳನ್ನು ದೃಶ್ಯಗಳಾಗಿ ಪರಿವರ್ತನೆ ಮಾಡುವುದು ತುಂಬಾ ಪರಿಣಾಮಕಾರಿ. ಉದಾಹರಣೆಗೆ 1919ರ ಜಲಿಯನ್ ವಾಲಾ ಬಾಗ್ ಘಟನೆಯನ್ನು ಸುಮ್ಮನೆ ಒಂದು ಕಡೆ ಕೂತು ಬಾಯಿ ಪಾಠ ಮಾಡುವುದಕ್ಕಿಂತ ಆ ಘಟನೆಯ ವಿಡಿಯೊ ನೋಡಿದರೆ ಹೆಚ್ಚು ಪರಿಣಾಮಕಾರಿ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಲಿಯನ್ ವಾಲಾಬಾಗ್ ಎಂಬ ವಿಶಾಲವಾದ ಮೈದಾನಕ್ಕೆ ಹೋಗಿ ಅದರ ಮಧ್ಯೆ ಕುಳಿತುಕೊಳ್ಳುವುದು. ಆ ಘಟನೆಯ ದೃಶ್ಯಗಳನ್ನು ನಡೆದ ಹಾಗೆ ವಿಷುವಲೈಸ್ ಮಾಡಲು ಪ್ರಯತ್ನಿಸಿ. ನಿಮ್ಮ ಕಣ್ಣಿನ ಮುಂದೆ ಘಟನೆ ನಡೆಯುತ್ತಿದೆ, ನಿಮ್ಮ ಕಿವಿ ಹತ್ತಿರ ಸಾಂಡರ್ಸ್ ಎಸೆದ ಗುಂಡುಗಳು ತೂರಿಕೊಂಡು ಹೋಗುತ್ತಿವೆ ಎಂದು ಕಲ್ಪಿಸಿಕೊಂಡರೆ ಅದು ಲೈಫ್ ಟೈಮ್ ಮೆಮೊರಿ ಆಗಬಲ್ಲದು!
೨೨) ವಿಜ್ಞಾನದ ಚಿತ್ರಗಳನ್ನು ಕಲಿಯುವಾಗ ಅದನ್ನು ಪಠ್ಯಪುಸ್ತಕದ ಗಾತ್ರಕಿಂತ ಮೂರು ನಾಲ್ಕು ಪಟ್ಟು ದೊಡ್ಡದಾಗಿ ಬಿಡಿಸಿ, ಅವುಗಳಿಗೆ ಬಣ್ಣ ಹಚ್ಚಿ ನೀವು ಓದಲು ಕುಳಿತುಕೊಳ್ಳುವ ಟೇಬಲ್ ಎದುರು ಇರುವ ಗೋಡೆಯಲ್ಲಿ ಒಂದು ದಿನ ಪೂರ್ತಿ ಅಂಟಿಸಿ ಇಟ್ಟರೆ ಆ ಚಿತ್ರ ಮತ್ತೆ ಮರೆತು ಹೋಗೋದಿಲ್ಲ!
೨೩) ಮಧ್ಯೆ ಮಧ್ಯೆ ಬೇರೆ ಚಟುವಟಿಕೆ ಮಾಡಿದ್ರೆ ಸೂಪರ್
ವೇಗವಾಗಿ ಕೆಲಸ ಮಾಡುವ ಯಂತ್ರಗಳಿಗೆ ಹೇಗೆ ಕಾಲಕಾಲಕ್ಕೆ ಗ್ರೀಸಿಂಗ್, ವಿಶ್ರಾಂತಿ ಇತ್ಯಾದಿ ಮಾಡುತ್ತಾರೋ ಹಾಗೆ ಮೆದುಳಿಗೆ ಒಂದಿಷ್ಟು ವಿಶ್ರಾಂತಿ, ಮನರಂಜನೆ ಅಗತ್ಯವಾಗಿ ಬೇಕು. ಒಂದು ಗಂಟೆ ಓದಿನ ನಂತರ ಐದರಿಂದ ಹತ್ತು ನಿಮಿಷಗಳ ಮೂಲಕ ರಿಲಾಕ್ಸ್ ಮಾಡುವುದು ಅಗತ್ಯ. ಇಡೀ ದಿನ ಕೂತು ಓದುವಾಗ ದಿನಕ್ಕೊಂದು ಗಂಟೆ ಆದರೂ ಲಘುವಾದ ಆಟಗಳು, ಟಿವಿ ವಾಚ್ ಮಾಡುವುದು, ಮ್ಯೂಸಿಕ್ ಕೇಳುವುದು, ಹಾಡುವುದು ಮೊದಲಾದ ಚಟುವಟಿಕೆಗಳಿಗೆ ಸಮಯ ಹೊಂದಿಸಿ.
೨೪) ಯಾವುದೇ ವಸ್ತುವನ್ನು ಒಂದೆಡೆ ಇಟ್ಟು ಆ ವಸ್ತುವನ್ನು ಆ ಜಾಗದ ಸಮೇತ ಒಂದರ್ಧ ಕ್ಷಣ ಏಕಾಗ್ರತೆಯಿಂದ ನೋಡಿದರೆ ಆ ವಸ್ತು ನಮ್ಮಿಂದ ಮಿಸ್ ಆಗುವುದಿಲ್ಲ. ಯಾವುದೇ ವಸ್ತುವನ್ನು (ಉದಾಹರಣೆಗೆ ಬೀಗದ ಕೈ) ದಿನವೂ ಒಂದೇ ಕಡೆ ಇಡುವ ಅಭ್ಯಾಸ ಮಾಡಿದರೆ ಅವುಗಳನ್ನು ಮತ್ತೆ ಮತ್ತೆ ಹುಡುಕುವ ಅಗತ್ಯ ಬರುವುದಿಲ್ಲ.
೨೫) VIBGYOR ರೀತಿ ನಿಮ್ಮದೇ ಅಕ್ರೋನಿಮ್ ಮಾಡ್ಕೊಳ್ಳಿ
ಕೆಲವು ವಸ್ತುಗಳನ್ನು ನೆನಪಿಟ್ಟುಕೊಳ್ಳುವ ಅನಿವಾರ್ಯತೆ ಬಂದಾಗ ಅವುಗಳ ಮೊದಲ ಅಕ್ಷರಗಳನ್ನು ಜೋಡಿಸಿ ಒಂದು ಎಕ್ರೋನಿಮ್(Acronym) ರಚಿಸಿ ನೆನಪು ಇಟ್ಟುಕೊಳ್ಳಬಹುದು. ಉದಾಹರಣೆಗೆ ಕಾಮನಬಿಲ್ಲಿನ ಏಳು ಬಣ್ಣಗಳನ್ನು ನೆನಪಲ್ಲಿ ಇಟ್ಟುಕೊಳ್ಳಲು ನಾವು VIBGYOR ಎಂಬ ಎಕ್ರೋನಿಮ್ ಬಳಸುತ್ತೇವೆ. ಕನ್ನಡ ವ್ಯಾಕರಣದಲ್ಲಿ ಸ್ವರ ಪ್ರಸ್ತಾರ ಮತ್ತು ಗಣವಿಭಜನೆ ನೆನಪಲ್ಲಿ ಇಟ್ಟುಕೊಳ್ಳಲು ‘ಯಮಾತಾರಾಜಬಾನಸಲಗಮ್’ ಎಂಬ ಸೂತ್ರವನ್ನು ಕಲಿತದ್ದು ನೆನಪಿದೆಯಾ? ಅಂತಹ ನೂರಾರು ಎಕ್ರೋನಿಮ್ ನೀವೇ ರಚಿಸಬಹುದು!
೨೬) ಸೃಜನಶೀಲತೆಗೆ (Creativity) ಮತ್ತು ಮೆಮೊರಿಗೆ ನಿಕಟ ಸಂಬಂಧ ಇದೆ! ಹೊಸ ವಿಧಾನದಿಂದ ಕಲಿತದ್ದು ಮರೆತುಹೋಗುವುದಿಲ್ಲ. ಮೌನವಾಗಿ ಓದುವುದು, ಗಟ್ಟಿಯಾಗಿ ಓದುವುದು, ಬರೆದು ಕಲಿಯುವುದು, ಗುಂಪು ಚರ್ಚೆ, ಚಿತ್ರಗಳ ಮೂಲಕ ಕಲಿಯುವುದು.. ಹೀಗೆ ಕಲಿಯುವ ನೂರಾರು ವಿಧಾನಗಳಿವೆ.
೨೭) ಹೋಲಿಕೆ ಮಾಡಿ ಕಲಿಯುವುದು ಅದ್ಭುತವಾದ ವಿಧಾನ. ಉದಾಹರಣೆಗೆ ಡೈನಮೋ ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಮಾರ್ಪಾಟು ಮಾಡುತ್ತದೆ. ಅದೇ ರೀತಿ ಮೋಟಾರ್ ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಮಾರ್ಪಾಟು ಮಾಡುತ್ತದೆ.
ಬೆಳಕು ಒಂದು ಮಾಧ್ಯಮದಿಂದ ಹೊರಟು ಅದೇ ಮಾಧ್ಯಮಕ್ಕೆ ಹಿಂದೆ ಬಂದರೆ ಅದು ಪ್ರತಿಫಲನ. ಒಂದು ಮಾಧ್ಯಮದಿಂದ ಹೊರಟು ಇನ್ನೊಂದು ಮಾಧ್ಯಮಕ್ಕೆ ಹೋಗುವಾಗ ಬೆಂಡ್ ಆದರೆ ಅದು ವಕ್ರೀಭವನ.
ಹೀಗೆ ನೂರಾರು ಹೋಲಿಕೆಗಳನ್ನು ನಿಮ್ಮ ವಿಜ್ಞಾನ, ಸಮಾಜ, ಗಣಿತ ಪಾಠಗಳಲ್ಲಿ ಮಾಡಲು ಸಾಧ್ಯ ಇದೆ!
೨೮) ಭಾವನಾತ್ಮಕ ಕಲಿಕೆ ಲೈಫ್ ಟೈಮ್ ಮೆಮೊರಿ
ನಾನು ಹಿಂದೆ ಹೇಳಿದ ಹಾಗೆ ಭಾವನಾತ್ಮಕವಾಗಿ ಕಲಿತದ್ದು ಲೈಫ್ ಟೈಮ್ ಮೆಮೊರಿ ಆಗುತ್ತದೆ. ಅದರ ಬಗ್ಗೆ ತುಂಬಾ ಉದಾಹರಣೆ ಕೊಡಬಹುದು. ಒಂದು ಉದಾಹರಣೆ ಕೊಡಬೇಕು ಅಂದರೆ ಇಂಗ್ಲಿಷ್ ಭಾಷೆಯಲ್ಲಿ MOTHER ಪದ್ಯವನ್ನು ಕಲಿಯುವಾಗ ಅದು ಶೇಕ್ಸಪಿಯರ್ ಅಮ್ಮ ಎಂದು ಕಲ್ಪನೆ ಮಾಡಿಕೊಂಡು ಓದಿದರೆ ಅದು ಮರೆತು ಹೋಗಬಹುದು. ಆದರೆ ಅದು ನಿಮ್ಮ ಅಮ್ಮ ಎಂದು ಕಲ್ಪನೆ ಮಾಡಿಕೊಂಡು ಓದಿದರೆ ಭಾವನೆಗಳು ಸ್ಫೋಟವಾಗುತ್ತವೆ ಮತ್ತು ಮೆಮೊರಿಯು ಖಾತರಿ ಆಗುತ್ತದೆ. ಭಾವನಾತ್ಮಕವಾಗಿ ಓದುವವರು ಮತ್ತೆ ಮತ್ತೆ ಓದುವ ಅಗತ್ಯ ಬೀಳುವುದಿಲ್ಲ!
೨೯) ಯಾವುದನ್ನಾದರೂ ಓದುವಾಗ ‘ಸಮಗ್ರ ಪಠ್ಯ’ ಆಗಿ ಓದುವುದು ತುಂಬಾ ಮುಖ್ಯ. ಉದಾಹರಣೆಗೆ ಒಂದು ಪತ್ರಿಕೆಯನ್ನು ಓದುವಾಗ ಒಮ್ಮೆ ಆರಂಭದಿಂದ ಅಂತ್ಯದವರೆಗೆ ಕಣ್ಣಾಡಿಸಿ, ನಂತರ ಎರಡನೇ ಬಾರಿ ನಮಗೆ ಬೇಕಾದ ಶೀರ್ಷಿಕೆಯ ಸುದ್ದಿ ಮಾತ್ರ ವಿಸ್ತಾರವಾಗಿ ಓದಬಹುದು. ಒಂದು ಪಾಠವನ್ನು ಓದುವಾಗಲೂ ಅದನ್ನು ಮೊದಲು ಸಮಗ್ರವಾಗಿ ಓದಿ ಮತ್ತು ಎರಡನೆಯ ಓದಿನಲ್ಲಿ ಅರ್ಥವಾಗದ ಅಂಶಗಳನ್ನು ಓದಿ.
೩೦) ಬಾಯಿಪಾಠ ಮಾಡುವುದು ಕೂಡ ಒಂದು ಪ್ರತಿಭೆ. ಒಂದಕ್ಷರ ಬಿಡದೆ ಪುಟಗಟ್ಟಲೆ ಬಾಯಿಪಾಠ ಮಾಡುವವರು ಇದ್ದಾರೆ. ಆದರೆ ಅದನ್ನೇ ಅರ್ಥ ಮಾಡಿಕೊಂಡು ಓದಿದರೆ ಅದು ದೀರ್ಘಕಾಲ ನೆನಪಲ್ಲಿ ಉಳಿಯುತ್ತದೆ.
(ನಾಳೆ ಮತ್ತೆ ಮುಂದುವರಿಯುತ್ತದೆ)
ಮೊದಲ ಭಾಗ | ರಾಜ ಮಾರ್ಗ ಅಂಕಣ| ಗೋಲ್ಡನ್ ಮೆಮೊರಿ ಪವರ್ ನಿಮ್ಮದಾಗಬೇಕೆ?: ಈ ಸರಳ ಅಂಶಗಳನ್ನು ಗಮನಿಸಿ ಸಾಕು