Site icon Vistara News

ರಾಜ ಮಾರ್ಗ ಅಂಕಣ | ನೀವು ಉತ್ತಮ ಭಾಷಣಕಾರರು ಆಗಬೇಕೆ? ಈ ಸರಳ ಟಿಪ್ಸ್‌ಗಳನ್ನು ಪಾಲಿಸಿ ಸಾಕು!

public speaking

1) ಯಾರೂ ಜನ್ಮತಃ ಭಾಷಣಕಾರ ಆಗಿ ಹುಟ್ಟುವುದಿಲ್ಲ. ಪ್ರಯತ್ನ ಮಾಡಿದರೆ ಯಾರು ಕೂಡ ಒಳ್ಳೆಯ ಭಾಷಣಕಾರ ಆಗಬಹುದು.
2) ಒಳ್ಳೆಯ ಭಾಷಣಕಾರರಿಗಿಂತ ಪ್ರಭಾವಿ ಭಾಷಣಕಾರರಿಗೆ ಈಗ ಹೆಚ್ಚು ಡಿಮಾಂಡ್ ಇದೆ. ಪ್ರಭಾವ ಅಂದರೆ ನಿಮ್ಮ ಭಾಷಣದ ಪರಿಣಾಮ.
3) ಸಿದ್ಧತೆ ಮಾಡದೆ ಯಾವ ಭಾಷಣವನ್ನು ಮಾಡಬಾರದು. ಒಂದು ಗಂಟೆಯ ಭಾಷಣಕ್ಕಿಂತ ಒಂದು ನಿಮಿಷದ ಭಾಷಣಕ್ಕೆ ಹೆಚ್ಚು ಸಿದ್ಧತೆಯು ಬೇಕು.
4) ಭಾಷಣಕ್ಕೆ ಸಿದ್ಧತೆ ಮಾಡಲು ಹೊರಡುವ ಮುನ್ನ ಇಷ್ಟನ್ನು ಖಾತರಿ ಪಡಿಸಿಕೊಳ್ಳಿ – ಯಾರು ಪ್ರೇಕ್ಷಕರು? ಯಾವ ಸಂದರ್ಭ? ಮತ್ತು ಎಷ್ಟು ಸಮಯ?
5) ನಿರಂತರ ಓದುವಿಕೆ ಮತ್ತು ಬರೆಯುವಿಕೆಗಳು ನಿಮ್ಮನ್ನು ಒಳ್ಳೆಯ ಭಾಷಣಕಾರರನ್ನಾಗಿ ರೂಪಿಸಬಲ್ಲವು.

ಶಬ್ದಕ್ಕಿಂತ ಭಾವನೆಗಳು ಮುಖ್ಯ
6) ಬೇರೆಯವರ ಭಾಷಣಗಳನ್ನು ಆಲಿಸದೆ ನೀವು ಒಳ್ಳೆಯ ಭಾಷಣಕಾರರು ಆಗುವುದಿಲ್ಲ.
7) ಸಾಮಾನ್ಯ ವಿಷಯಗಳನ್ನು ಕೂಡ ಸ್ವಾರಸ್ಯಕರವಾಗಿ ನಿರೂಪಣೆ ಮಾಡುವ ಕೌಶಲವು ಬೇಕು. ಅದು ನಿರಂತರ ಅಭ್ಯಾಸದ ಮೂಲಕ ಬರುತ್ತದೆ.
8) ವಿಷಯಗಳು ನಿಮ್ಮ ಭಾಷಣದ ದೇಹ. ಆದರೆ ಭಾವನೆಗಳು ನಿಮ್ಮ ಭಾಷಣದ ಆತ್ಮ. ಶಬ್ದಗಳಿಗಿಂತ ಭಾವನೆಗಳು ಹೆಚ್ಚು ವೇಗವಾಗಿ ಚಲಿಸುತ್ತವೆ.
9) ವೇದಿಕೆಯಲ್ಲಿ ನಾವು ಬಳಸುವ ಶಬ್ಧಗಳು ಹೆಚ್ಚು ತೂಕದ್ದು ಆಗಿರಬೇಕು. ಪ್ರಬುದ್ಧ ಮಾತುಗಳು ನಮ್ಮ ಭಾಷಣದ ತೂಕವನ್ನು ಹೆಚ್ಚಿಸುತ್ತವೆ. ಸರಳವಾದ ಮತ್ತು ಸಾಹಿತ್ಯಪೂರ್ಣವಾದ ಭಾಷೆಯು ನಿಮ್ಮ ಭಾಷಣದ ಸೌಂದರ್ಯವನ್ನು ಹೆಚ್ಚಿಸುತ್ತದೆ.
10) ಹಿತಮಿತವಾದ ತಿಳಿಹಾಸ್ಯ, ಅಶ್ಲೀಲತೆ ಇಲ್ಲದ ಮತ್ತು ಯಾರನ್ನೂ ನೋಯಿಸದ ಹಾಸ್ಯಪ್ರಜ್ಞೆಗಳು ನಿಮ್ಮ ಭಾಷಣವನ್ನು ಸರ್ವಾಂಗಸುಂದರವಾಗಿ ಮಾಡುತ್ತವೆ. ಗಂಭೀರ ಭಾಷಣಕಾರರು ಯಾರಿಗೂ ಇಷ್ಟ ಆಗುವುದಿಲ್ಲ.

ಆರಂಭ ಚೆನ್ನಾಗಿರಬೇಕು, ವಿಮಾನದ ಟೇಕಾಫ್‌ ಥರ!

11) ನೀವು ಆ ದಿನ ತೊಡುವ ವೇಷ ಭೂಷಣವು ಆ ಸಂದರ್ಭಕ್ಕೆ ಮತ್ತು ನಿಮ್ಮ ಮಾತುಗಳಿಗೆ ಪೂರಕ ಆಗಿರಬೇಕು. ಅತ್ಯಂತ ಸರಳವಾದ ಮತ್ತು ಸದಭಿರುಚಿಯ ಡ್ರೆಸ್ ನಿಮ್ಮ ವ್ಯಕ್ತಿತ್ವದ ಕೈಗನ್ನಡಿ ಆಗುತ್ತದೆ.
12) ನೀವು ಯಾವಾಗಲೂ ಒಳಗೆ ಇರೋದಕ್ಕಿಂತ ಹೊರಗೆ ಹೆಚ್ಚು ಕಾನ್ಫಿಡೆಂಟ್ ಆಗಿ ಕಾಣುತ್ತೀರಿ. ನಿಮ್ಮ ಸಕಾರಾತ್ಮಕ ಯೋಚನೆಗಳು ನಿಮ್ಮನ್ನು ಹೆಚ್ಚು ಕಾನ್ಫಿಡೆಂಟ್ ಮಾಡುತ್ತವೆ
13) ಭಾಷಣದಲ್ಲಿ ಈ ಅಂಶಗಳನ್ನು ಆದಷ್ಟು ಅವಾಯ್ಡ್ ಮಾಡಿ. ನಿಂದನೆ, ಅತಿಯಾದ ಭರವಸೆ, ತುಷ್ಟೀಕರಣ, ಯಾರದೇ ಖಾಸಗಿ ವಿಷಯಗಳು, ವೈಯಕ್ತಿಕ ವಿಷಯಗಳು, ತಪ್ಪು ಮಾಹಿತಿಗಳು ಮತ್ತು ಉದ್ರೇಕಕಾರಿ ಅಂಶಗಳು!
14) ಯಾವುದೇ ಭಾಷಣದ ಆರಂಭ ಉತ್ತಮ ಆಗಿರಬೇಕು. ಅದು ಒಂದು ವಿಮಾನದ ಟೇಕ್ ಆಫ್ ಇದ್ದ ಹಾಗೆ! ಅದು ಪ್ರೇಕ್ಷಕರ ಗಮನ ನಿಮ್ಮ ಕಡೆ ಸೆಳೆಯಲು ಸಹಾಯ ಮಾಡುತ್ತದೆ. ಒಂದು ಒಳ್ಳೆಯ ಸುಭಾಷಿತ, ಒಂದು ಕೊಟೇಶನ್, ಒಂದು ನೈಜ ಘಟನೆಯ ಮೂಲಕ ನೀವು ಭಾಷಣವನ್ನು ಆರಂಭ ಮಾಡಬಹುದು. ಆದರೆ ಅವುಗಳನ್ನು ನಿಮ್ಮ ಭಾಷಣದ ಮುಂದಿನ ಥೀಮಗೆ ಕನೆಕ್ಟ್ ಮಾಡುವುದು ಅತೀ ಮುಖ್ಯ! ಆದರೆ ಭಾಷಣದ ಆರಂಭದಲ್ಲಿ ವೇದಿಕೆಯಲ್ಲಿ ಕೂತವರನ್ನೆಲ್ಲ ಅವರೇ, ಇವರೇ… ಎಂದು ಸಂಬೋಧನೆ ಮಾಡುತ್ತ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ.

ಮಾತಿನ ನಡುವೆ ವಿರಾಮ ಬೇಕು
15) ಶಬ್ದಗಳ ನಡುವೆ ಒಂದು ಶಬ್ದ ವಿರಾಮ, ವಾಕ್ಯಗಳ ನಡುವೆ ಒಂದು ಉಸಿರು ತೆಗೆದುಕೊಳ್ಳುವ ವಿರಾಮ ಇರಬೇಕು. ಮಾತಿನ ವೇಗ ನಿಮ್ಮ ಮೆದುಳಿನ ವೇಗಕ್ಕಿಂತ ಹೆಚ್ಚಾದರೆ ತೊಂದರೆ! ಪ್ರೇಕ್ಷಕರ ಗ್ರಹಣ ಶಕ್ತಿಯನ್ನು ಹೊಂದಿಕೊಂಡು ನಿಮ್ಮ ಭಾಷಣದ ವೇಗವನ್ನು ನೀವು ಹೆಚ್ಚು ಅಥವಾ ಕಡಿಮೆ ಮಾಡಬಹುದು.
16) ಪ್ರತೀ ಭಾಷಣಕ್ಕೆ ಒಂದು ಆತ್ಮ ಇರುತ್ತದೆ.
ಉದಾಹರಣೆಗೆ ‘ ಶಿಕ್ಷಣದ ಮೂಲಕ ರಾಷ್ಟ್ರನಿರ್ಮಾಣ’ ಇದು ನಿಮ್ಮ ಭಾಷಣದ ಆತ್ಮ ಆದರೆ ನೀವು ಕೊಡುವ ಉದಾಹರಣೆಗಳು, ವಿಷಯ ಮಂಡನೆ ಎಲ್ಲವೂ ಆ ಆತ್ಮದ ಸುತ್ತ ಇರುವ ಹಾಗೆ ನೋಡಿಕೊಳ್ಳಬೇಕು. ಎಲ್ಲಿಯೂ ವಿಷಯಾಂತರ ಆಗದ ಹಾಗೆ ನೋಡಿಕೊಳ್ಳಬೇಕು.

ಮುಖದ ಭಾವನೆ, ಧ್ವನಿಗಳು ಪ್ರಬಲ ಅಸ್ತ್ರ

17) ಭಾಷಣದ ಉದ್ದಕ್ಕೂ ನಿಮ್ಮ ಮುಖದ ಭಾವನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಭಾವನೆಗಳು ನಿಮ್ಮ ಭಾಷಣದ ವಿಷಯವನ್ನು ಬಹಳ ಸುಂದರವಾಗಿ ಕ್ಯಾರಿ ಮಾಡುತ್ತವೆ. ನೀವು ಹೇಳುವ ಪ್ರತೀಯೊಂದು ಶಬ್ದಗಳು ನಿಮ್ಮ ಭಾವನೆಗಳ ವಾಹನದಲ್ಲಿ ಪ್ರೇಕ್ಷಕರಿಗೆ ತುಂಬ ಸುಲಭವಾಗಿ ತಲುಪುತ್ತವೆ.
18) ಯಾವುದೇ ಭಾಷಣಕಾರನ ಪ್ರಬಲವಾದ ಅಸ್ತ್ರವು ಆತನ ಧ್ವನಿ! ನಾಭಿಯಿಂದ ಬರುವ ಬೇಸ್ ವಾಯ್ಸ್ ಧ್ವನಿವರ್ಧಕದ ಮೂಲಕ ಬಹಳ ಅದ್ಭುತ ಇಂಪ್ಯಾಕ್ಟ್ ಉಂಟುಮಾಡುತ್ತದೆ. ಕಿರುಚುವ ಧ್ವನಿಯು ಯಾರಿಗೂ ಇಷ್ಟ ಆಗುವುದಿಲ್ಲ. ಅದೇ ರೀತಿ ಶ್ವಾಸಕೋಶದ ಮೂಲಕ ಹೊರಡುವ ಧ್ವನಿಯು ಉತ್ತಮ ಭಾವನೆಗಳನ್ನು ಹರಡಲು ಸಹಾಯ ಮಾಡುತ್ತದೆ.

ನಿಮ್ಮ ಮಾತು ಮೊದಲು ನಿಮಗೆ ಕೇಳಲಿ
19) ಧ್ವನಿವರ್ಧಕದ ಸರಿಯಾದ ನಿರ್ವಹಣೆ ಕಲಿಯುವುದು ಬಹಳ ಮುಖ್ಯ. ಸಾಮಾನ್ಯವಾದ ಕಂಡೀಷನ್‌ಗಳಲ್ಲಿ ನಿಮ್ಮ ತುಟಿ ಮತ್ತು ಮೈಕ್ರೋಫೋನ್ ನಡುವೆ ಒಂದು ಅಡಿಯಷ್ಟು ಅಂತರ ಇರುವುದು ಒಳ್ಳೆಯದು. ನೀವು ಮೈಕ್ರೋಫೋನ್ ಹಿಡಿದು ಮಾತಾಡುವಾಗ ಅದು ನಿಮ್ಮ ಭುಜಕ್ಕಿಂತ ಕೆಳಗೆ ಇರುವ ಹಾಗೆ ನೋಡಿಕೊಳ್ಳಿ. ಆಗಲೂ ಮೈಕ್ ಮತ್ತು ತುಟಿಗಳ ನಡುವೆ ಒಂದು ಅಡಿ ಅಂತರ ಇರಬೇಕು. ಅದರ ಜೊತೆಗೆ ಒಳ್ಳೆಯ ಭಾಷಣಕ್ಕೆ ಒಳ್ಳೆಯ ಮಾನಿಟರ್ ಬ್ಯಾಕಪ್ ತುಂಬ ಮುಖ್ಯ. ಅಂದರೆ ನಿಮ್ಮ ಮಾತುಗಳು ನಿಮಗೆ ಸರಿಯಾಗಿ ಹಿಂದೆ ಕೇಳಿದರೆ ನೀವು ಗೆಲ್ಲುತ್ತೀರಿ.
20) ನಿಮ್ಮ ಭಾಷಣದ ಮೊದಲ ಪ್ರೇಕ್ಷಕರು ನೀವೇ ಆಗಿರುತ್ತೀರಿ. ನಿಮ್ಮ ಭಾಷಣವನ್ನು ನೀವೇ ಆನಂದಿಸದೆ ಬೇರೆ ಯಾರೂ ಇಷ್ಟ ಪಡಲು ಸಾಧ್ಯವೇ ಇಲ್ಲ!
21) ಭಾಷಣದ ಪ್ರಭಾವ ಹೆಚ್ಚು ಮಾಡಲು ಧೃಕ್ ಶ್ರವಣ ಮಾಧ್ಯಮಗಳನ್ನು( LCD, ಚಾರ್ಟ್, ಮ್ಯಾಪ್, ಪೋಸ್ಟರ್, ವಿಡಿಯೋ, ಆಡಿಯೋ) ಮೊದಲಾದವುಗಳನ್ನು ಖಂಡಿತ ಬಳಸಬಹುದು.

ಪ್ರೇಕ್ಷಕರ ಜತೆ ಸಂವಹನ ಅಗತ್ಯ
22) ಭಾಷಣ ಮಾಡುವಾಗ ಪ್ರೇಕ್ಷಕರ ಜೊತೆಗೆ ನಿಮ್ಮ ದೃಷ್ಟಿ ಸಂಪರ್ಕ( Eye Contact)ವು ಉತ್ತಮ ಭಾವನೆಗಳನ್ನು ಹರಡುತ್ತದೆ. ಪ್ರತೀ ಪ್ರೇಕ್ಷಕರ ಜೊತೆ ನೀವು ದೃಷ್ಟಿ ಸಂಪರ್ಕದಲ್ಲಿ ಸಂವಹನ ಮಾಡುತ್ತ ಹೋದಾಗ ಪ್ರೇಕ್ಷಕರೂ ನಿಮ್ಮ ಹಾಗೆ ಭಾಷಣದಲ್ಲಿ ಇನ್ವಾಲ್ವ್ ಆಗಲು ಸಾಧ್ಯ ಆಗುತ್ತದೆ. ಆದರೆ ದೊಡ್ಡ ಸಭೆ ಇದ್ದಾಗ ಇದು ಕಷ್ಟಸಾಧ್ಯ!
23) ನಿಮ್ಮ ಭಾಷಣದ ಉದ್ದಕ್ಕೂ ನಿಮ್ಮ ಆಂಗಿಕ ಅಭಿನಯ (ವಿಶೇಷ ನಿಮ್ಮ ಕೈಗಳು ಮತ್ತು ಭುಜ) ನಿಮ್ಮ ಭಾಷಣದ ಮೌಲ್ಯವನ್ನು ಹೆಚ್ಚಿಸುತ್ತವೆ. ತೆರೆದ ಭುಜಗಳು, ನೀವು ಹೇಳಿದ್ದನ್ನು ಅಭಿವ್ಯಕ್ತ ಮಾಡುವ ಕೈಗಳು ನಿಮ್ಮ ಪ್ರಬಲ ಆಯುಧಗಳು ಆಗುತ್ತವೆ.

ನಿಲ್ಲುವುದು ಹೇಗೆ?
24) ಭಾಷಣಕಾರನಾಗಿ ವೇದಿಕೆಯಲ್ಲಿ ನಿಮ್ಮ ನಿಲುವು ಸಂತುಲಿತ ಆಗಿರಬೇಕು. ನಿಮ್ಮ ಇಡೀ ದೇಹದ ಭಾರವನ್ನು ಎದುರು ಇರುವ ಸ್ಟಾಂಡ್ ಮೇಲೆ ಹೊರಿಸಿ ನಿಲ್ಲುವುದು ಒಳ್ಳೆಯದಲ್ಲ. ಇಲ್ಲಿ ಕೂಡ ನಿಮ್ಮ ಅಗಲವಾದ ಭುಜಗಳು ನಿಮಗೆ ಬಲಿಷ್ಠವಾದ ನಿಲುವು ಒದಗಿಸುತ್ತದೆ.
ಭಾಷಣದ ಸ್ಟಾಂಡ್ ಇಲ್ಲದೆ ಇದ್ದಾಗ ನಿಮ್ಮ ಎರಡು ಕಾಲುಗಳ ಮೇಲೆ ಸಮಾನವಾದ ಭಾರವನ್ನು ಹಾಕಿ ನಿಲ್ಲುವುದು ನಿಮಗೆ ಬ್ಯಾಲೆನ್ಸ್ ಕೊಡುತ್ತದೆ. ಎರಡು ಕಾಲುಗಳ ನಡುವೆ ಕನಿಷ್ಠ ಹತ್ತು ಇಂಚುಗಳ ಅಂತರವು ಇರಬೇಕು. ಹಾಗೆಯೇ ನಿಮ್ಮ ದೇಹದ ಮೇಲ್ಭಾಗವು ಒಂದು ಇಂಚು ಮುಂದಕ್ಕೆ ಬಗ್ಗಿದ್ದರೆ ಪ್ರೇಕ್ಷಕರಲ್ಲಿ ಸಹಜವಾದ ಕುತೂಹಲ ಉಂಟಾಗುತ್ತದೆ ಅನ್ನುತ್ತದೆ ಮನಶ್ಶಾಸ್ತ್ರ.

ಮುಕ್ತಾಯಕ್ಕೆ ಭಾವನಾತ್ಮಕ ಟಚ್
25) ನಿಮ್ಮ ಭಾಷಣದ ಆರಂಭದಷ್ಟೆ ಮುಖ್ಯವಾದದ್ದು ಅದರ ಮುಕ್ತಾಯ. ವಿಮಾನದ ಫ್ಲೈಟ್ ಎಷ್ಟು ಮುಖ್ಯವೋ ಅದರ ಲ್ಯಾಂಡಿಂಗ್ ಅಷ್ಟೇ ಮುಖ್ಯ! ಇಲ್ಲಿ ಕೂಡ ಶ್ಲೋಕ, ಸುಭಾಷಿತ, ಘೋಷಣೆ, ಕೊಟೇಶನ್ ಮೂಲಕ ನಿಮ್ಮ ಮಾತು ಮುಗಿಸಬಹುದು. ಸಾಧ್ಯವಾದರೆ ಒಂದು ಭಾವನಾತ್ಮಕ ಟಚ್ ಕೊಟ್ಟರೆ ತುಂಬಾ ಒಳ್ಳೇದು. ಇಡೀ ಭಾಷಣದ ಸಾರಾಂಶವನ್ನು ಒಂದೆರಡು ವಾಕ್ಯಗಳಲ್ಲಿ ನೀಡಿ ಒಂದು ಸಂದೇಶ ನೀಡಿದರೆ ಇನ್ನೂ ಒಳ್ಳೆಯದು. ಮಾತು ಮುಗಿಸುವಾಗ ಪ್ರೇಕ್ಷಕರಿಗೆ ಮತ್ತು ಸಂಘಟಕರಿಗೆ ಕೃತಜ್ಞತೆ ಹೇಳುವುದು ಅಗತ್ಯ. ಅದು ನಿಮ್ಮ ಸಜ್ಜನಿಕೆಯ ಪ್ರತೀಕ ಆಗುತ್ತದೆ.
ಈ ಅಂಶಗಳು ನಿಮ್ಮನ್ನು ಉತ್ತಮ ಭಾಷಣಕಾರರಾಗಿ ರೂಪಿಸುವುದು ಖಂಡಿತ. ಏನೇ ಆದರೂ ನಿಮ್ಮ ನಿರಂತರ ಪ್ರಯತ್ನ ಇದ್ದರೆ ಮಾತ್ರ ನಿಮಗೆ ಈ ಭಾಷಣ ಕಲೆಯು ಒಲಿಯುತ್ತದೆ.
ಆಲ್ ದ ಬೆಸ್ಟ್. ಮಾತಿನಲ್ಲಿ ಗೆದ್ದು ಬನ್ನಿ!
(ಲೇಖಕರು ಜೇಸಿಐ ಸಂಸ್ಥೆಯ ರಾಷ್ಟ್ರಮಟ್ಟದ ತರಬೇತುದಾರರು)

ಇದನ್ನೂ ಓದಿ | ರಾಜ ಮಾರ್ಗ ಅಂಕಣ |ಮೌಲ್ಯಗಳನ್ನು ಬೋಧನೆ ಮಾಡದೆ ಅವುಗಳನ್ನೇ ಬದುಕಿದ ಮಹಾ ಗುರು ಪ್ರೊ. ಎಚ್.‌ ನರಸಿಂಹಯ್ಯ

Exit mobile version