Site icon Vistara News

ರಾಜ ಮಾರ್ಗ ಅಂಕಣ : ಇಂಚಿಂಚಾಗಿ ಕೊಲ್ಲುವ ಖಿನ್ನತೆ, ಅದರಿಂದ ಹೊರಬರಲು ಇಲ್ಲಿವೆ ಸರಳ ಸೂತ್ರಗಳು

depression

ಇತ್ತೀಚಿನ ದಿನಗಳಲ್ಲಿ ಬದುಕು ಹೆಚ್ಚು ಸ್ಪರ್ಧಾತ್ಮಕ ಆಗುತ್ತಾ ಇದೆ. ಯುವಜನತೆ ಹೆಚ್ಚು ಹೆಚ್ಚು ದುಡ್ಡು, ಅಧಿಕಾರ, ಕೀರ್ತಿ, ಯಶಸ್ಸುಗಳ ಹಿಂದೆ ಓಡುತ್ತಾ ಇದ್ದಾರೆ. ಪರಿಣಾಮವಾಗಿ ಸಣ್ಣ ಪ್ರಾಯದಲ್ಲಿಯೇ ಹತಾಶೆ, ನಿರಾಸೆ, ಒತ್ತಡಗಳ ಮೂಟೆಯನ್ನು ತಮ್ಮ ಭಾವಕೋಶಕ್ಕೆ ತಮಗೆ ಅರಿವು ಇಲ್ಲದಂತೆಯೇ ಸೇರಿಸಿಕೊಳ್ಳುತ್ತಿದ್ದಾರೆ. ಇಂದಿನ ಯುವಜನತೆ ತಮ್ಮ ವೃತ್ತಿ, ಕುಟುಂಬ ಮತ್ತು ಇತರ ಹೊಣೆಗಳನ್ನು ನಿಭಾಯಿಸಲು ವಿಪರೀತವಾಗಿ ಹೆಣಗುತ್ತಿದ್ದಾರೆ. ಪರಿಣಾಮವಾಗಿ ಎಲ್ಲರೂ ಇಂದು ಒಂದು ಸಾಮಾನ್ಯ ಮಾನಸಿಕ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಅದರ ಹೆಸರು ಖಿನ್ನತೆ!

ಖಿನ್ನತೆಯು ನಮ್ಮನ್ನು ಇಂಚಿಂಚೂ ಕೊಲ್ಲುತ್ತಿದೆ!

ಯಾವುದೇ ವ್ಯಕ್ತಿಯು ಖಿನ್ನತೆಯ ಮಟ್ಟಕ್ಕೆ ಹೋಗುವ ಮೊದಲೇ ಈ ಕೆಳಗಿನ ಕೆಲವು ಅಂಶಗಳನ್ನು ಪಾಲಿಸಿದರೆ ಅದನ್ನು ಖಂಡಿತವಾಗಿ ತಡೆಯಬಹುದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಇಲ್ಲಿವೆ ಕೆಲವು ಸರಳ ಸಲಹೆಗಳು.

೧) ಹೆಚ್ಚು ಟಾರ್ಗೆಟ್ ಇರುವ ವೃತ್ತಿಗಳಿಂದ ಹೊರಬನ್ನಿ.

೨) ದಿನಕ್ಕೆ ಸ್ವಲ್ಪ ಹೊತ್ತು ಸಂಗೀತವನ್ನು ಕೇಳುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು. ಸಂಗೀತಕ್ಕೆ ಒತ್ತಡ ಶಮನ ಮಾಡುವ ಸಾಮರ್ಥ್ಯ ಇದೆ.

೩) ಇಡೀ ದಿನ ವರ್ಕ್‌ಹಾಲಿಕ್ ಆಗಬೇಡಿ. ಕೆಲಸ, ಕೆಲಸ, ಕೆಲಸ ಎಂಬ ಮಂತ್ರ ಬೇಡ.

೪) ಪೂರ್ವಾಹ್ನ ಅಥವಾ ಸಂಜೆ ಸೂರ್ಯನಿಗೆ ಮುಖ ಮಾಡಿ ಒಂದರ್ಧ ಗಂಟೆ ನಡೆದರೆ ಮನಸ್ಸು ಆಹ್ಲಾದ ಪಡೆಯುತ್ತದೆ. ಹಸಿರು ಹುಲ್ಲಿನ ಮೇಲೆ ನಡೆದರೆ ಇನ್ನೂ ಹೆಚ್ಚು ಪರಿಣಾಮ ಆಗುತ್ತದೆ.

೫) ದಿನಕ್ಕೆ ಸ್ವಲ್ಪ ಹೊತ್ತು ಮೆಡಿಟೇಶನ್ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ.

೬) ನೀವು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ಸಂಬಂಧ, ಹೊಂದಾಣಿಕೆ ಇದ್ದರೆ ತುಂಬಾ ಖುಷಿಯಿಂದ ಕೆಲಸ ಮಾಡಬಹುದು. ಕೆಲಸವನ್ನು ಹಂಚಿಕೊಂಡು ಮಾಡುವುದರಿಂದ ಒತ್ತಡ ಕಡಿಮೆ ಆಗುತ್ತದೆ.

೭) ಪ್ರೀತಿ ಪಾತ್ರ ಗೆಳೆಯ, ಗೆಳತಿಯರ ಜೊತೆ ಮನಸ್ಸು ಬಿಚ್ಚಿ ಮಾತಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಆದರೆ ಯಾರ ಜೊತೆ ಎಷ್ಟು ಹೇಳಬೇಕು, ಏನು ಹೇಳಬೇಕು, ಎಷ್ಟು ಮಾತ್ರ ಹೇಳಬೇಕು ಅನ್ನುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.

೮) ಯಾವುದಾದರೊಂದು ಹವ್ಯಾಸವನ್ನು ಬೆಳೆಸುತ್ತಾ ಹೋದರೆ ಒಳ್ಳೆಯದು. ಗಾರ್ಡನಿಂಗ್, ಮ್ಯೂಸಿಕ್, ಪೇಂಟಿಂಗ್, ಜಿಮ್ ಚಟುವಟಿಕೆಗಳು.. ಹೀಗೆ ಯಾವುದಾದರೊಂದು ಹವ್ಯಾಸ ನಿಮ್ಮ ಖುಷಿಯನ್ನು ಹೆಚ್ಚು ಮಾಡುತ್ತದೆ.

೯) ರಾತ್ರಿ ಮಲಗುವ ಮೊದಲು ದಿನಕ್ಕೆ ಅರ್ಧ ಗಂಟೆ ನಿಮ್ಮ ಆಸಕ್ತಿಗೆ ಅನುಗುಣವಾದ ಒಳ್ಳೆಯ ಪುಸ್ತಕ ಓದುವ ಅಭ್ಯಾಸವು ನಮ್ಮನ್ನು ಜೀವಂತ ಆಗಿ ಇಡುತ್ತದೆ.

೧೦) ತುಂಬಾ ಗಂಭೀರವಾಗಿ ಇರುವವರು, ಅಂತರ್ಮುಖಿ ಆಗಿರುವವರು ಹೆಚ್ಚು ಒತ್ತಡವನ್ನು ಎರವಲು ಪಡೆಯುತ್ತಾರೆ. ಆ ಮೈಂಡ್ ಸೆಟ್‌ಗಳಿಂದ ಆದಷ್ಟು ಬೇಗ ಹೊರಬನ್ನಿ.

೧೧) ಯುವಜನತೆಗೆ ಒಬ್ಬಂಟಿತನ ಒಂದು ಶಾಪ. ಆದಷ್ಟು ಗೆಳೆಯ, ಗೆಳತಿಯರ ಜೊತೆ ಇರಲು ಪ್ರಯತ್ನ ಮಾಡಿ.

೧೨) ಒತ್ತಡದ ಕೆಲಸಗಳ ನಡುವೆ ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ಕೆಲವು ಕ್ರಿಯೇಟಿವ್ ಕೆಲಸ ಮಾಡಿ. ಉದಾಹರಣೆಗೆ ಕ್ರಾಸ್ ವರ್ಡ್ ಪಝಲ್, ಸುಡೊಕೂ, ಪದಬಂಧ ಇತ್ಯಾದಿ.

೧೩) ನಮ್ಮ ಏಕತಾನತೆಯ ಕೆಲಸಗಳನ್ನು ಹೆಚ್ಚು ಕ್ರಿಯೇಟಿವ್ ಕೆಲಸವಾಗಿ ಪರಿವರ್ತನೆ ಮಾಡುವ ಮೂಲಕ ಕೆಲಸಗಳನ್ನು ಎಂಜಾಯ್ ಮಾಡುತ್ತಾ ಮಾಡಲು ಕಲಿಯಿರಿ.

೧೪) ಬಿಡುವಿನ ವೇಳೆಯಲ್ಲಿ ಯು ಟ್ಯೂಬ್ ವೇದಿಕೆಗಳ ಮ್ಯೂಸಿಕ್, ಭಾಷಣ, ಟೆಡ್ ಟಾಕ್ ಮೊದಲಾದ ವಿಡಿಯೊಗಳನ್ನು ನೋಡುವುದರಿಂದ ಒಳಗಿನಿಂದ ಪ್ರೇರಣೆ ದೊರೆತು ಕೆಲಸದ ವೇಗ ಹೆಚ್ಚುತ್ತದೆ.

೧೫) ವೃತ್ತಿ ಆಧಾರಿತ ತರಬೇತಿ ಹೆಚ್ಚು ಪಡೆಯುವ ಕಾರಣ ಕೆಲಸದ ಕ್ಷಮತೆಯು ಹೆಚ್ಚು ಆಗುತ್ತದೆ. ಆಗ ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯ ಆಗುತ್ತದೆ.

೧೬) ವಾರಾಂತ್ಯದಲ್ಲಿ ದುರಭ್ಯಾಸ, ಗುಂಡು ಪಾರ್ಟಿ, ರೆಸಾರ್ಟ್ ಜೀವನ ಮಾಡುವುದಕ್ಕಿಂತ ಒಳ್ಳೆಯ ನಾಟಕ, ಒಳ್ಳೆಯ ಸಿನಿಮಾ, ಒಳ್ಳೆಯ ಯಕ್ಷಗಾನ, ಒಳ್ಳೆಯ ಸಂಗೀತ ಕಾರ್ಯಕ್ರಮಗಳನ್ನು ಪ್ರತ್ಯಕ್ಷವಾಗಿ ವೀಕ್ಷಣೆ ಮಾಡಿ.

೧೭) ಯಾವುದೇ ಆಫೀಸ್ ಕೆಲಸಗಳನ್ನು ಮನೆಗೆ ತಂದು ಮನೆಯನ್ನು ಆಫೀಸ್ ಮಾಡಬೇಡಿ. ಆಫೀಸ್ ಕೆಲಸಗಳನ್ನು
ಆಫೀಸಿನಲ್ಲಿಯೇ ಮಾಡಿ.

೧೮) ರಾತ್ರಿ ಕನಿಷ್ಠ 7-8 ಘಂಟೆ ಆರೋಗ್ಯಪೂರ್ಣ ನಿದ್ರೆ ಮಾಡಿ. ಸತತ ನಿದ್ದೆ ಬಿಟ್ಟು ಕೆಲಸ ಮಾಡುವುದರಿಂದ ಕೆಲಸದ ಮೇಲೆ ಏಕಾಗ್ರತೆಯು ಕಡಿಮೆ ಆಗುತ್ತದೆ. ಪರಿಣಾಮ ಕೆಲಸದ ಕ್ಷಮತೆ ಕಡಿಮೆ ಆಗುತ್ತದೆ.

೧೯) ನಕಾರಾತ್ಮಕತೆ ಇರುವ ಸ್ಥಳ, ಓರಗೆಯವರು, ವ್ಯಕ್ತಿಗಳಿಂದ ದೂರ ಇರಿ.

೨೦) ಬಿಡುವು ದೊರೆತಾಗ ಸಣ್ಣ ಮಕ್ಕಳ ಜೊತೆ, ಅನಾಥ ಮಕ್ಕಳ ಜೊತೆ, ವೃದ್ಧಾಶ್ರಮದ ಮಂದಿಯ ಜೊತೆ ಸ್ವಲ್ಪ ಹೊತ್ತು ಸಮಯ ಕಳೆಯುವುದರಿಂದ ನಮ್ಮ ಇಗೋ ನಾಶವಾಗುತ್ತದೆ ಮತ್ತು ನಮಗೆ ಹೆಚ್ಚು ಜನರನ್ನು ಪ್ರೀತಿ ಮಾಡಲು ಸಾಧ್ಯ ಆಗುತ್ತದೆ.

ಅದ್ಭುತವಾದ ಮಾನಸಿಕ ಆರೋಗ್ಯ ನಿಮ್ಮದಾಗಲಿ ಅನ್ನುವುದು ನಮ್ಮ ಹಾರೈಕೆ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಕ್ಷಮಿಸುವುದರಿಂದ ಯಾರೂ ದೇವರಾಗಬಹುದು; ಆದರೆ, ಕ್ಷಮಿಸುವುದು ಅಷ್ಟು ಸುಲಭ ಅಲ್ಲ!

Exit mobile version