Site icon Vistara News

ರಾಜ ಮಾರ್ಗ ಅಂಕಣ | ನೀವೂ ಆತಂಕದಲ್ಲಿ ಇದ್ದೀರಾ? ಹಾಗಿದ್ದರೆ ಅದನ್ನು ನಿರ್ವಹಿಸುವ ದಾರಿ ಹುಡುಕೋಣ!

anixiety

ಇತ್ತೀಚೆಗೆ ವಿಜ್ಞಾನಿಗಳು ಒಂದು ಪ್ರಯೋಗವನ್ನು ಮಾಡಿದರು. ಒಂದು ಸಣ್ಣ ಪ್ರಾಯದ ಇಲಿಯನ್ನು ಒಂದು ಬೋನಿನಲ್ಲಿ ಹಾಕಿದರು. ಅದಕ್ಕೆ ಭಯ ಹುಟ್ಟಿಸುವ ಬೆಕ್ಕಿನ ಕರ್ಕಶ ಧ್ವನಿಗಳನ್ನು ಪದೇ ಪದೇ ಕೇಳಿಸಿದರು. ಅದಕ್ಕೆ ಹೆದರಿಕೆ ಹುಟ್ಟಿಸುವ ಇನ್ನೂ ಕೆಲವು ಸಂಗತಿಗಳನ್ನು ರಿಪೀಟ್ ಮಾಡುತ್ತಲೇ ಇದ್ದರು. ಒಂದೆರಡು ವಾರಗಳ ನಂತರ ಆ ಪುಟ್ಟ ಇಲಿಯ ಉದರವನ್ನು ಬಗೆದು ಒಳಗಿನ ದೇಹದ ಭಾಗಗಳನ್ನು ಪರೀಕ್ಷೆ ಮಾಡಿದಾಗ ವಿಜ್ಞಾನಿಗಳಿಗೆ ಆಶ್ಚರ್ಯ ಕಾದಿತ್ತು!

ಆ ಸಣ್ಣ ಪ್ರಾಯದ ಇಲಿಗೆ ಅಕಾಲ ಮುಪ್ಪು ಆವರಿಸಿತ್ತು!
ಇಲಿಯ ದೇಹದ ಒಳಗಿನ ಪ್ರತಿಯೊಂದು ಭಾಗವು ದಣಿದು ಸುಸ್ತಾಗಿದ್ದವು. ಇಲಿಗೆ ಹೆಚ್ಚು ಪ್ರಾಯ ಆದ ಹಾಗೆ ಅದರ ಒಳ ಅಂಗಗಳು ದುರ್ಬಲ ಆಗಿದ್ದವು. ಯಾಕೆ ಹೀಗಾಯಿತು? ಅದಕ್ಕೆ ಕಾರಣ ಆತಂಕ, ಆತಂಕ ಮತ್ತು ಆತಂಕ ಮಾತ್ರ!

ಆತಂಕ ಎಂಬ ನಿಧಾನ ವಿಷ!
ನಮ್ಮ ಜೀವನದಲ್ಲಿ ಕೂಡ ಈ ಆತಂಕ ಎಂಬ ನಿಧಾನ ವಿಷವು ನಮ್ಮನ್ನು ಖಾಲಿ ಮಾಡ್ತಾ ಇದೆ ಅಲ್ವಾ?
ಅದರಲ್ಲಿ ಕೂಡ ಸಣ್ಣ ಸಣ್ಣ ಕಾರಣಕ್ಕೆ ಡಿಪ್ರೆಸ್ ಆಗುವವರು, ಎಲ್ಲವನ್ನೂ ಭಾವನಾತ್ಮಕ ಆಗಿ ತೆಗೆದುಕೊಳ್ಳುವವರು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ.

ಆತಂಕ ಒಂದು ಮೈಂಡ್ ಸೆಟ್! ಆದರೆ ಅದರ ನೇರ ಪರಿಣಾಮ ಆಗುವುದು ನಮ್ಮ ದೇಹದ ಮೇಲೆ! ವಿಶೇಷವಾಗಿ ಹೃದಯದ ಮೇಲೆ. ಆತಂಕಪಟ್ಟಾಗ ನಮ್ಮ ರಕ್ತದ ವೇಗ ಹೆಚ್ಚಾಗುತ್ತದೆ. ಹೃದಯದ ಮೇಲೆ ಹೆಚ್ಚು ಒತ್ತಡವು ಉಂಟಾಗುತ್ತದೆ. ಊಟ ತಿಂಡಿ ಸೇರುವುದಿಲ್ಲ. ನಿದ್ರೆಯು ದೂರ ಆಗುತ್ತದೆ. ಕೆಲಸ ಮಾಡುವ ಉತ್ಸಾಹವು ಕಡಿಮೆ ಆಗುತ್ತದೆ. ಪದೇಪದೆ ಕಾರಣ ಇಲ್ಲದೆ ಸಿಟ್ಟು ಬರುತ್ತದೆ. ಕೆಲಸದ ಮೇಲೆ ಏಕಾಗ್ರತೆಯು ಹೊರಟು ಹೋಗುತ್ತದೆ. ಇವೆಲ್ಲವೂ ಆತಂಕದ ಲಕ್ಷಣಗಳು.

ಆತಂಕದ ಕಾರಣಗಳು ನೂರಾರು!
ಅಂತವರನ್ನು ಮಾತಾಡಿಸಿದಾಗ ಆತಂಕದ ಕಾರಣಗಳು ಬೇರೆ ಬೇರೆ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಮುಖ್ಯವಾಗಿ ಆರ್ಥಿಕ ಸಮಸ್ಯೆ, ಸಾಮಾಜಿಕ ಸಮಸ್ಯೆ, ಪರೀಕ್ಷೆ ಇತ್ಯಾದಿ ಒತ್ತಡಗಳು, ಉಸಿರುಗಟ್ಟುವ ಕೌಟುಂಬಿಕ ವ್ಯವಸ್ಥೆ, ನಿತ್ಯ ಜೀವನದ ಒತ್ತಡಗಳು, ಬದುಕಿನ ಏಕತಾನತೆ, ಕಾಡುವ ಒಬ್ಬಂಟಿತನ, ಪದೇಪದೆ ಸೋಲುಗಳು, ನಿರಾಸೆ, ಅತಿಯಾದ ಆಸೆ, ಶಿಸ್ತು ಇಲ್ಲದ ಜೀವನ ಪದ್ಧತಿ, ಹೆಚ್ಚು ಟಾರ್ಗೆಟ್ ಇರುವ ಉದ್ಯೋಗಗಳು, ತುಂಬಾ ಸ್ಪರ್ಧಾತ್ಮಕ ಜೀವನ ಹೀಗೆ ನೂರಾರು ಕಾರಣಗಳು!

ಕೆಲವರ ಕಾರಣಗಳು ನಿಜವಾದ ಕಾರಣಗಳು ಆಗಿರುತ್ತವೆ. ಇನ್ನೂ ಕೆಲವರದ್ದು ತುಂಬಾ ಸಿಲ್ಲಿ ಅಂತ ನಮಗೆ ಅನ್ನಿಸುತ್ತದೆ. ಆದರೆ ಅವರನ್ನು ಮಾತಾಡಿಸಿದಾಗ ಅವರು ಸಣ್ಣ ಕಾರಣಗಳನ್ನು ಬೆಟ್ಟ ಮಾಡಿ ಸಮರ್ಥನೆಗೆ ಇಳಿಯುತ್ತಾರೆ. ನನಗೆ ಸಂಬಂಧಗಳಲ್ಲಿ ವಿಶ್ವಾಸವೇ ಇಲ್ಲ ಎಂದೆಲ್ಲ ಮಾತಾಡುತ್ತಾರೆ. ಇನ್ನೂ ಕೆಲವರು ತಮ್ಮ ಭವಿಷ್ಯದ ಬಗ್ಗೆ ಅತಿಯಾಗಿ ಯೋಚನೆ ಮಾಡಿ ಆತಂಕವನ್ನು ತಾವೇ ಕ್ರಿಯೇಟ್ ಮಾಡುತ್ತಾರೆ. ಇನ್ನೂ ಕೆಲವರಿಗೆ ಅಭದ್ರತೆಯ ಭಾವನೆ, ತೀವ್ರವಾದ ಸಂಶಯ ಪ್ರವೃತ್ತಿಗಳು ಕಾಡುತ್ತವೆ.

ಆತಂಕ ಅತಿಯಾದರೆ ಕಷ್ಟ!
ಒಂದು ಸಣ್ಣ ಮಟ್ಟದ ಆತಂಕವನ್ನು ನಮ್ಮ ದೇಹವು ತಡೆದುಕೊಳ್ಳುತ್ತದೆ. ಆದರೆ ಮಿತಿ ಮೀರಿ ಹೋದಾಗ ತಡೆದುಕೊಳ್ಳುವುದು ಕಷ್ಟ. ಅಧ್ಯಯನಗಳ ಪ್ರಕಾರ ಹೆಚ್ಚು ಶಿಸ್ತಿನ ಜೀವನ ನಡೆಸುವವರು, ಅತಿಯಾದ ಸ್ವಾಭಿಮಾನ ಇರುವವರು, ತುಂಬಾ ಅಂತರ್ಮುಖಿಗಳು, ಹೆಚ್ಚು ಏಕತಾನತೆಯ ಕೆಲಸ ಮಾಡುವವರು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ.

ಆತಂಕವು ನಿರಂತರ ಹೆಚ್ಚಾಗುತ್ತ ಹೋಗಿ ಮುಂದೆ ಡಿಪ್ರೆಶನ್ ಹಂತಕ್ಕೆ ಹೋದರೆ ಹಿಂದೆ ಬರುವುದು ಕಷ್ಟ ಆಗಬಹುದು. ಸೂಕ್ಷ್ಮ ಮನಸ್ಸಿನವರು ಆತ್ಮಹತ್ಯೆಗೂ ಪ್ರಯತ್ನವನ್ನು ಮಾಡಬಹುದು. ಆದ್ದರಿಂದ ಆತಂಕವನ್ನು ಮೊದಲ ಹಂತದಲ್ಲಿಯೇ ನಿವಾರಣೆ ಮಾಡಲು ಪ್ರಯತ್ನ ಅಗತ್ಯ. ಅದೇ ರೀತಿ ಅಂತವರ ಸಹವರ್ತಿಗಳು, ಗೆಳೆಯರು, ಕುಟುಂಬದವರು ಅವರಿಗೆ ಸ್ವಲ್ಪ ಸಾಂತ್ವನ ನೀಡಿ ಧೈರ್ಯವನ್ನು ತುಂಬುವುದು ಅತೀ ಅಗತ್ಯ.

ಆತಂಕದ ನಿವಾರಣೆಗೆ ಹತ್ತಾರು ಪರಿಹಾರಗಳು!
1) ನಿಮ್ಮ ಜೊತೆಗೆ ಇರುವ ವ್ಯಕ್ತಿಗಳ ಮೇಲೆ ಇರುವ ನಂಬಿಕೆಯನ್ನು ಗಟ್ಟಿ ಮಾಡಿ. ಜಗತ್ತಿನಲ್ಲಿ ಎಲ್ಲರೂ ಸ್ವಾರ್ಥಿಗಳೆ ಆಗಿರುವುದಿಲ್ಲ.
2) ತುಂಬಾ ಸರಳವಾಗಿ ಬದುಕುವುದನ್ನು ಅಭ್ಯಾಸ ಮಾಡಿದರೆ ಆರ್ಥಿಕ ಅಭದ್ರತೆ ಕಾಡುವುದಿಲ್ಲ.
3) ತುಂಬಾ ಭಾವನಾತ್ಮಕವಾಗಿ ಯೋಚನೆ ಮಾಡುವುದನ್ನು ಕಡಿಮೆ ಮಾಡಿ. ಜೀವನದಲ್ಲಿ ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಲು ಕಲಿಯಿರಿ.
4) ಯಾವುದೇ ವ್ಯಕ್ತಿಯ ಮೇಲೆ ಹೆಚ್ಚು ಭಾವನಾತ್ಮಕವಾಗಿ ಅವಲಂಬನೆ ಮಾಡಬೇಡಿ.
5) ಅತಿಯಾದ ನಿರೀಕ್ಷೆ ಬೇಡ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡರೆ ಒಳ್ಳೆಯದು.

6) ಒಬ್ಬಂಟಿತನ ಯಾವುದೇ ವಯಸ್ಸಿನವರಿಗೂ ಬಹು ದೊಡ್ಡ ಶಾಪ. ಆದಷ್ಟು ಗುಂಪಿನಲ್ಲಿ ಕೆಲಸ ಮಾಡಲು ಯೋಜನೆ ಮಾಡಿ.
7) ನಿಮ್ಮ ಖಾಲಿತನವನ್ನು ತುಂಬುವ ಸಂಗೀತ, ನೃತ್ಯ, ಪೈಂಟಿಂಗ್, ಕ್ರೀಡೆ ಮೊದಲಾದ ಹವ್ಯಾಸಗಳು ನಿಮ್ಮನ್ನು ಆತಂಕದಿಂದ ಹೊರತರುತ್ತವೆ. ಪುಸ್ತಕ ಓದುವ ಹವ್ಯಾಸವು ಎಲ್ಲಕ್ಕಿಂತ ಉತ್ತಮ. ಶಾಸ್ತ್ರೀಯ ಸಂಗೀತಕ್ಕೆ ಆತಂಕವನ್ನು ಕಡಿಮೆ ಮಾಡುವ ಶಕ್ತಿ ಇದೆ.
8) ಯೋಗ, ಪ್ರಾಣಾಯಾಮ, ಧ್ಯಾನ ಇವುಗಳಲ್ಲಿ ಯಾವುದಾದರೊಂದನ್ನು ಅಳವಡಿಸಿದರೆ ಉತ್ತಮ. ಇವುಗಳಿಗೆ ಆತಂಕವನ್ನು ಹೀಲ್ ಮಾಡುವ ಶಕ್ತಿ ಇದೆ.
7) ಯಾವುದೇ ಕೆಲಸವನ್ನು ಆರಂಭ ಮಾಡುವ ಮೊದಲೇ ಕಾನ್ಸಿಕ್ವೆನ್ಸ್ ಬಗ್ಗೆ ಹೆಚ್ಚು ಯೋಚನೆ ಮಾಡಬೇಡಿ. ಬಂದದ್ದನ್ನು ಬಂದ ಹಾಗೆ ಎದುರಿಸಲು ಕಲಿಯುವುದು ಒಳ್ಳೇದು.
8) ನಿಮ್ಮ ಜೀವನದಲ್ಲಿ ಹಿಂದೆ ಆಗಿರುವ ಕಹಿ ಘಟನೆಗಳನ್ನು ಮರೆಯಲು ಪ್ರಯತ್ನ ಪಟ್ಟಷ್ಟು ಅದು ಹಿಂಸೆ ಕೊಡಲು ಆರಂಭ ಆಗ್ತದೆ. ನಿಮಗೆ ಎರಡು ದಾರಿ ಇದೆ. ಒಂದು ಆ ಘಟನೆಗಳನ್ನು ನಿಮ್ಮ ಅತ್ಯಂತ ಆತ್ಮೀಯರ ಜೊತೆಗೆ ಶೇರ್ ಮಾಡಿ ಅದನ್ನು ನಿಮ್ಮ ಸುಪ್ತ ಮನಸಿನಿಂದ ಹೊರಹಾಕುವುದು. ಇನ್ನೊಂದು ಆ ಕಹಿ ಘಟನೆಗಳನ್ನು ನಿಮ್ಮ ಜೀವನದ ಭಾಗ ಎಂದು ಭಾವಿಸಿ ಮುನ್ನಡೆಯುವುದು. ಎರಡನೇ ದಾರಿಯೇ ಹೆಚ್ಚು ಶ್ರೇಯಸ್ಕರ!
9) ಯಾವುದೇ ವ್ಯಸನಗಳು ನಿಮ್ಮನ್ನು ಖಾಲಿ ಮಾಡುತ್ತವೆ. ಆದ್ದರಿಂದ ವ್ಯಸನಗಳಿಗೆ ನಿಮ್ಮ ಜೀವನದಲ್ಲಿ ಸ್ಪೇಸ್ ಕೊಡಬೇಡಿ.
10) ಆತಂಕದ ಸರಿಯಾದ ಕಾರಣ ಟ್ರೇಸ್ ಮಾಡಿದರೆ ಅದನ್ನು ಸ್ವ ನಿಯಂತ್ರಣದ ಮೂಲಕ ನಿರ್ವಹಣೆ ಮಾಡಬಹುದು. ಆತಂಕಕ್ಕೆ ಕಾರಣರಾದ ವ್ಯಕ್ತಿಗಳಿಂದ (ಅವರು ಎಷ್ಟೇ ಹತ್ತಿರದವರಾದರೂ) ಸ್ವಲ್ಪ ದೂರ ಇರಲು ಪ್ರಯತ್ನ ಮಾಡಿ.

11) ತಪ್ಪಿತಸ್ಥ ಭಾವನೆ ನಿಮ್ಮಲ್ಲಿ ಆತಂಕವನ್ನು ಹೆಚ್ಚು ಮಾಡುತ್ತದೆ. ಕ್ಷಮಾಯಾಚನೆ (ಕನ್ಫೆಷನ್) ಮೊದಲಾದ ವಿಧಾನಗಳಿಂದ ಗಿಲ್ಟನಿಂದ ಹೊರಬರಬಹುದು.
12) ಜೀವನದಲ್ಲಿ ಹೆಚ್ಚು ಕ್ರಿಯೇಟಿವ್ ಆದ ಕೆಲಸಗಳನ್ನು ಒಪ್ಪಿಕೊಳ್ಳಿ ಮತ್ತು ಪ್ರೀತಿಯಿಂದ ಮಾಡಿ.
13) ನಿಮ್ಮ ಇತಿ ಮಿತಿಗಳನ್ನು ಒಪ್ಪಿಕೊಳ್ಳಿ ಮತ್ತು ನೀವು ತುಂಬಾ ಸ್ಟ್ರಾಂಗ್ ಎಂದು ಪ್ರೂವ್ ಮಾಡಲು ಹೋಗಬೇಡಿ.
14) ಪ್ರತೀಯೊಂದು ಕೆಲಸದಲ್ಲೂ ಪರಿಪೂರ್ಣತೆ ಹುಡುಕುವವರು (perfectionists) ಆತಂಕದ ಗಂಗೋತ್ರಿಗಳು. ಆ ಮೈಂಡ್ ಸೆಟನಿಂದ ಬೇಗ ಹೊರಬನ್ನಿ.
15) ಆತಂಕ ನಿರ್ವಹಣೆಗೆ ತಾರಕ ಮಂತ್ರ ಅಂದರೆ ಪಾಸಿಟಿವ್ ಥಿಂಕಿಂಗ್. ನಾನು ಚೆನ್ನಾಗಿದ್ದೇನೆ, ನನ್ನ ಯೋಚನೆಗಳು ಸರಿ ಇವೆ, ನಾನು ಉತ್ತಮವಾದ ಆತ್ಮವಿಶ್ವಾಸ ಹೊಂದಿದ್ದೇನೆ….. ಹೀಗೆ ಯೋಚನೆ ಮಾಡುತ್ತಾ ಹೋದರೆ ಆತಂಕವು ನಮ್ಮ ಹತ್ತಿರಕ್ಕೂ ಬರುವುದಿಲ್ಲ!

ಯೋಚನೆ ಮಾಡಿ ಮತ್ತು ಅನುಷ್ಠಾನ ಮಾಡಿ ಆಯ್ತಾ. ನಿಮಗೆ ಶುಭವಾಗಲಿ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಹಾಕಿ ಕ್ಯಾಪ್ಟನ್ ರಾಣಿ ರಾಂಪಾಲ್ ಎಂಬ ಹುಟ್ಟು ಹೋರಾಟಗಾರ್ತಿ, ಆಕೆ ಹುಟ್ಟಿದ್ದೇ ಕುರುಕ್ಷೇತ್ರದಲ್ಲಿ!

Exit mobile version