2008ರಲ್ಲಿ ಬಿಡುಗಡೆಯಾಗಿ ಯಶಸ್ವಿ ಆದ, ರಾಜ್ಯ ಪ್ರಶಸ್ತಿ ಕೂಡ ಪಡೆದ, ಶಶಾಂಕ್ ನಿರ್ದೇಶನದ ‘ಮೊಗ್ಗಿನ ಮನಸ್ಸು’ (Moggina Manasu Movie) ಸಿನಿಮಾದ ಒಂದು ದೃಶ್ಯವು ನನಗೆ ಯಾವತ್ತೂ ಮರೆತುಹೋಗುವುದಿಲ್ಲ. ಅದನ್ನು ಸಂಕ್ಷಿಪ್ತವಾಗಿ ಇಲ್ಲಿ ಬರೆಯುತ್ತೇನೆ (Raja Marga Column).
ಆ ಚಂದದ ಕಥಾನಾಯಕಿ ಒಂದು ಕಾಲೇಜಿನಲ್ಲಿ ಕಲಿಯುತ್ತಿರುತ್ತಾಳೆ. ಆಕೆಗೆ ಒಬ್ಬ ಲೆಕ್ಚರರ್ ಮೇಲೆ ಭಾರಿ ಕ್ರಷ್. ಅವರು ಪಾಠ ಮಾಡುವ ಶೈಲಿ, ಅವರ ವ್ಯಕ್ತಿತ್ವ, ಅವರ ಜ್ಞಾನ ಎಲವೂ ಬೆರಗು ಹುಟ್ಟಿಸುತ್ತದೆ. ಆಕೆ ಒಂದು ದಿನ ಒಂದು ಲವ್ ಲೆಟರ್ ಬರೆದು ಅವರಿಗೆ ಧೈರ್ಯವಾಗಿ ನೀಡುತ್ತಾಳೆ. ನಿಮ್ಮನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದು ಅಳುತ್ತಾಳೆ.
ಆಗ ಆ ಸರ್ ಗಟ್ಟಿಯಾಗಿ ನಗುತ್ತಾ ಹೇಳುವ ಮಾತು ತುಂಬಾ ಪರಿಣಾಮಕಾರಿ ಆಗಿತ್ತು. ಅವರು ಹೇಳುತ್ತಾರೆ – ‘ನೋಡಮ್ಮ, ಇದು ನಿಜವಾದ ಪ್ರೀತಿ ಅಲ್ಲ. ಇದು ಹದಿಹರೆಯದ ಆಕರ್ಷಣೆ (Infatuation) ಅಷ್ಟೇ. ಅದು ತುಂಬಾ ದಿನ ಇರೋದಿಲ್ಲ. ಈ ಪತ್ರವನ್ನು ಹಾಗೆಯೇ ಜಾಗ್ರತೆ ಮಾಡಿ ಒಂದು ಕಡೆ ತೆಗೆದಿಡು. ಮುಂದೆ ಕೆಲವು ವರ್ಷ ಆದ ನಂತರ, ಮನಸ್ಸು ಮಾಗಿದ ನಂತರ ಆ ಪತ್ರ ಮತ್ತೆ ಓದು. ಆಗ ನೀನೇ ನೆಗಾಡಿ ಅದನ್ನು ಹರಿದು ಹಾಕುತ್ತೀಯಾ! ‘
ಈ ಆಕರ್ಷಣೆ ಯಾರನ್ನೂ ಬಿಡುವುದು ಇಲ್ಲ!
ಹದಿಹರೆಯದಲ್ಲಿ ಉಂಟಾಗುವುದು ಕೇವಲ ಆಕರ್ಷಣೆ ಮಾತ್ರ. ಅದು Infatuation. ಅದನ್ನು ಕಾಲೇಜು ಮಕ್ಕಳ ಕ್ರಷ್ ಎಂದು ಕರೆಯುತ್ತಾರೆ. ಅದು ಉಂಟಾಗುವುದು ಕಣ್ಣಲ್ಲಿ. ನಂತರ ಅದು ನಿಧಾನಕ್ಕೆ ದೇಹಕ್ಕೆ ಇಳಿದು ತಣ್ಣಗಾಗುತ್ತದೆ. ಹೃದಯದವರೆಗೆ, ಸುಪ್ತ ಮನಸ್ಸಿನವರೆಗೆ ಹೋಗುವುದೇ ಇಲ್ಲ! ಆ ಆಕರ್ಷಣೆಯಲ್ಲಿ ಜವಾಬ್ದಾರಿ ಇರುವುದಿಲ್ಲ. ಅದರಲ್ಲಿ 80% ಆಕರ್ಷಣೆ ಮುಂದೆ ಪ್ರೀತಿಯಾಗಿ ಮುಂದುವರಿಯುವುದಿಲ್ಲ!
12-22 ವಯಸ್ಸಿನ ಮಕ್ಕಳು (ಹುಡುಗರು, ಹುಡುಗಿಯರು ಸೇರಿ) ಅನುಭವಿಸುವ ಸಹಜವಾದ ಮಾನಸಿಕ ಸ್ಥಿತಿ ಇದು. ಅದನ್ನು ಯಾರೂ ತಪ್ಪಿಸಿಕೊಳ್ಳುವ ಹಾಗೇ ಇಲ್ಲ! ಆ ಪ್ರಾಯದಲ್ಲಿ ನೀವು ಪ್ರೀತಿ ಮಾಡಿಲ್ಲ ಅಂದರೆ ನಿಮ್ಮ ಆರೋಗ್ಯ ಸರಿ ಇಲ್ಲ ಎಂದು ಅರ್ಥ!
ನಿಯಂತ್ರಣ ತಪ್ಪಿದರೆ ಕಷ್ಟ!
ಕೆಲವೊಮ್ಮೆ ಇದು ವಿಪರೀತ ಎನಿಸುವಷ್ಟು ಕಂಟ್ರೋಲ್ ತಪ್ಪುವುದು ಉಂಟು. ಬಾಲ್ಯದಲ್ಲಿ ಮತ್ತು ಹದಿಹರೆಯದಲ್ಲಿ ಅಪ್ಪ ಮತ್ತು ಅಮ್ಮನ ಪ್ರೀತಿ ವಂಚಿತರಾದವರು ಈ ಹದಿಹರೆಯದ ಆಕರ್ಷಣೆಗೆ ಬೇಗ ವಿಕ್ಟಿಮ್ ಆಗುತ್ತಾರೆ. ಅದು ಭಾವ ತೀವ್ರತೆಯ ಮಾನಸಿಕ ಸ್ಥಿತಿ. ಒಬ್ಬರನ್ನು ಒಬ್ಬರು ಬಿಟ್ಟಿರಲು ಸಾಧ್ಯವೇ ಆಗದ ಸ್ಥಿತಿ. ಅವರ ಹಸಿವು ಮತ್ತು ನಿದ್ದೆ ಕೆಡಿಸುವ ಚಾಂಚಲ್ಯ. ಇದರಿಂದ ಮಕ್ಕಳು ಓದಿನ ಮೇಲೆ ಗಮನ ಕಳೆದುಕೊಳ್ಳುತ್ತಾರೆ. ಪ್ರೀತಿ ನಿಯಂತ್ರಣ ತಪ್ಪಿತು ಅಂತಾದರೆ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗುತ್ತದೆ. ಎಷ್ಟೋ ಬಾರಿ ಏಕಮುಖ ಪ್ರೀತಿಗಳು ಅವರಿಗೆ ತುಂಬಾ ನೋವು ಕೊಡುತ್ತವೆ. ವಿವೇಚನೆ ಕಳೆದುಕೊಂಡ ಆ ಎಳೆಯ ಜೀವಗಳು ದುರಂತವನ್ನು ಮೈ ಮೇಲೆ ಎಳೆದುಕೊಂಡ ನೂರಾರು ಅನುಭವಗಳು ನನ್ನ ಗಮನಕ್ಕೆ ಬಂದಿವೆ.
ನಾನೇ ವಿಕ್ಟಿಮ್ ಆದದ್ದು ಇದೆ!
ನಾನು ವ್ಯಕ್ತಿತ್ವ ವಿಕಸನದ ತರಬೇತಿಗಾಗಿ ಕಾಲೇಜುಗಳಿಗೆ ಹೋದಾಗ ಇಂತಹ ಘಟನೆಗಳಿಗೆ ನಾನೇ ಕೆಲವು ಬಾರಿ ವಿಕ್ಟಿಮ್ ಆದದ್ದು ಇದೆ. ಒಬ್ಬಳು ಕಾಲೇಜು ಹುಡುಗಿ ನನ್ನ ತರಬೇತಿ ಆದ ನಂತರ ನನ್ನ ವಿಳಾಸ ತೆಗೆದುಕೊಂಡು ನನಗೆ ಲವ್ ಯು ಎಂದು ರಕ್ತದಲ್ಲಿ ಬರೆದು ಪೋಸ್ಟ್ ಮಾಡಿದ್ದಳು. ಅವಳ ಮನೆಗೇ ಹೋಗಿ ಬುದ್ಧಿ ಹೇಳಿದ್ದೆ. ಅವಳೀಗ ಮದುವೆಯಾಗಿ ಎರಡು ಮಕ್ಕಳ ತಾಯಿ ಆಗಿದ್ದಾಳೆ. ಅಪರೂಪಕ್ಕೊಮ್ಮೆ ಕಾಲ್ ಕೂಡ ಮಾಡಿ ಸರ್ ಎಂದು ಗೌರವದಲ್ಲಿ ಮಾತಾಡುತ್ತಾಳೆ!
ಇನ್ನೊಬ್ಬ ಹುಡುಗಿ ನನ್ನ ತರಬೇತಿಯ ನಂತರ ನನ್ನ ಮುಂದೆ ಬಂದು ನಿಂತು ಕಣ್ಣಲಿ ಕಣ್ಣಿಟ್ಟು
‘ನಾನು ನಿಮಗೋಸ್ಕರ ಏನು ಬೇಕಾದರೂ ಕಳೆದುಕೊಳ್ಳಲು ರೆಡಿ ಇದ್ದೇನೆ ‘ಎಂದಿದ್ದಳು!
ʻʻನನಗೆ ಮದುವೆ ಆಗಿದೆ ಹುಡುಗಿʼʼ ಎಂದಾಗ, ʻʻಪರವಾಗಿಲ್ಲ ಸರ್, ನನಗೆ ನೀವು ಬೇಕುʼʼ ಎಂದು ಜೋರಾಗಿ ಕಣ್ಣೀರು ಹಾಕಿದ್ದಳು. ಅಂತಹವರನ್ನು ನೋಡಿದಾಗ ನನಗೆ ಅಯ್ಯೋ ಪಾಪ ಅನ್ನಿಸುತ್ತದೆ. ಮರುಕ ಉಂಟಾಗುತ್ತದೆ.
ಒಮ್ಮೆ ಏನಾಯಿತು ಅಂದರೆ…
ಸುಮಾರು 35 ವರ್ಷಗಳ ಹಿಂದೆ ನಾನು ಕಲಿತ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಒಂದು ಘಟನೆ ನಡೆಯಿತು. ಒಬ್ಬಳು ಹುಡುಗಿ, ಒಬ್ಬ ಹುಡುಗ ತೀವ್ರವಾದ ಪ್ರೀತಿಯ ಬಲೆಗೆ ಬಿದ್ದಿದ್ದರು. ಅವರಿಬ್ಬರೂ ಬೇರೆ ಬೇರೆ ಸಮುದಾಯದವರು. ಒಮ್ಮೆ ಹುಡುಗಿಯು ಬರೆದ ಪತ್ರ ಪ್ರಿನ್ಸಿಪಾಲ್ ಅವರ ಕೈಗೆ ದೊರೆಯಿತು. ಅವರು ತುಂಬಾ ಸ್ಟ್ರಿಕ್ಟ್ ಆದ ಪ್ರಿನ್ಸಿಪಾಲ್. ಮಿಲಿಟರಿ ಶಿಸ್ತಲ್ಲಿ ಬೆಳೆದವರು. ಅವರು ಇಬ್ಬರನ್ನೂ ತನ್ನ ಚೇಂಬರಿಗೆ ಕರೆದು ಸುದೀರ್ಘವಾದ ವಿಚಾರಣೆ ಮಾಡಿದರು. ಇಬ್ಬರೂ ತಮ್ಮ ಪ್ರೀತಿ ಒಪ್ಪಿಕೊಂಡರು. ಆಗ ಪ್ರಿನ್ಸಿಪಾಲ್ ಅವರಿಗೆ ಒಂದು ಸವಾಲು ಹಾಕಿದರು.
‘ನೀವು ಪ್ರೀತಿ ಮಾಡೋದು ಖಂಡಿತ ತಪ್ಪಲ್ಲ. ಆದರೆ ಸ್ಟಡೀಸ್ ಮೇಲೆ ಫೋಕಸ್ ಕಳೆದುಕೊಳ್ಳಬೇಡಿ. ಇಬ್ಬರೂ ಚೆನ್ನಾಗಿ ಓದಿ ನಿಮ್ಮ ಲೈಫಲ್ಲಿ ಸೆಟಲ್ ಆಗಿ. ಒಳ್ಳೆ ಉದ್ಯೋಗ ಸಂಪಾದನೆ ಮಾಡಿಕೊಂಡು ನನ್ನ ಮುಂದೆ ಬಂದು ನಿಲ್ಲಿ. ನಾನು ನಿಮ್ಮ ಹೆತ್ತವರ ಮನಸನ್ನು ಒಲಿಸಿ ನಿಮಗೆ ಮದುವೆ ಮಾಡಿಸುತ್ತೇನೆ!’ ಎಂದರು. ಅವರು ಒಪ್ಪಿಕೊಂಡು ಹೋದರು. ಮುಂದೆ ಚೆನ್ನಾಗಿ ಓದಿದರು. ಅವರು ಅದೇ ಪ್ರೀತಿಯನ್ನು ತಮ್ಮ ಪ್ರೇರಣೆಯಾಗಿ ತೆಗೆದುಕೊಂಡು ಒಳ್ಳೆ ಅಂಕ ತೆಗೆದುಕೊಂಡರು. ಉದ್ಯೋಗವನ್ನು ಪಡೆದುಕೊಂಡು ತಮ್ಮ ಲೈಫಲ್ಲಿ ಸೆಟಲ್ ಆದರು. ಆಗ ಅದೇ ಪ್ರಿನ್ಸಿಪಾಲ್ ಅವರ ಮನೆಗೆ ಹೋಗಿ ಅವರ ಹೆತ್ತವರ ಹತ್ತಿರ ಮಾತಾಡಿ ಅವರಿಗೆ ಮದುವೆ ಮಾಡಿಸಿದ್ದರು ಎನ್ನುವುದು ನಿಜವಾಗಿಯೂ ಅದ್ಭುತ! ಅದು ನಿಜವಾದ ಮೆಂಟರಿಂಗ್. ಇಂತಹ ಮಾರ್ಗದರ್ಶನ ಹದಿಹರೆಯದ ಮಕ್ಕಳಿಗೆ ಖಂಡಿತವಾಗಿ ಬೇಕು.
ಆ ಕಾಲ ಹೇಳಿ ಕೇಳಿ ಲವ್ ಲೆಟರಗಳ ಕಾಲ
ಈಗ ಸಾಮಾಜಿಕ ಜಾಲತಾಣಗಳ ಕಾಲ. ಪ್ರೀತಿ ಕೂಡ 5G, 6G ಹಂತವನ್ನು ದಾಟಿ ಮುಂದೆ ಹೋಗಿದೆ. ಯಾವುದೇ ಹುಡುಗ, ಯಾವುದೇ ಹುಡುಗಿಯನ್ನು ತಲುಪುವುದು ಈಗ ಸುಲಭ ಆಗಿದೆ. ಮನಸಿನ ಭಾವನೆಗಳನ್ನು ಹಂಚಿಕೊಳ್ಳಲು ನೂರಾರು ಆಪ್ ಗಳು ಇವೆ. ಖಾಸಗಿಯಾಗಿ ತಿರುಗಾಡಲು ನೂರಾರು ಸ್ಥಳಗಳು ಇವೆ. ಖರ್ಚು ಮಾಡಲು ಹೆತ್ತವರು ಕೊಡುವ ಸಮೃದ್ಧ ಪಾಕೆಟ್ ಮನಿ ಇದೆ. ಟಿವಿ ಧಾರಾವಾಹಿಗಳು, ಸಿನೆಮಾಗಳು ಹೆಚ್ಚು ದಾರಿ ತಪ್ಪಿಸುತ್ತವೆ. ಪ್ರೀತಿ ಕಣ್ಣಲ್ಲಿ ಆರಂಭವಾಗಿ ಹೃದಯಕ್ಕೆ ಇಳಿಯಬೇಕಾದದ್ದು ನೇರವಾಗಿ ದೇಹಕ್ಕೆ ಇಳಿಯುತ್ತಿದೆ.
ಯುವ ಹೃದಯಗಳು ಎಚ್ಚರ ತಪ್ಪುತ್ತಿವೆ
ಯಾವುದಕ್ಕೂ ಹೆದರದ, ನೈತಿಕ ಮೌಲ್ಯಗಳ ಪರಿಚಯವೇ ಇಲ್ಲದ ಯುವಜನತೆ ಇಂದು ದೇಹ ಹಂಚಿಕೊಳ್ಳಲು ಹಿಂದೆ ಮುಂದೆ ನೋಡುತ್ತಾ ಇಲ್ಲ. ಇದೆಲ್ಲ ಕಾಮನ್ ಕಣೇ, ಇದೆಲ್ಲ ಕಾಮನ್ ಕಣೋ ಎಂದು ಎಷ್ಟೋ ಹುಡುಗಿಯರು, ಎಷ್ಟೋ ಹುಡುಗರು ಹೇಳುವುದನ್ನು ನಾನು ಕೇಳಿದ್ದೇನೆ!
ಎಷ್ಟೋ ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಪಾತವು ಇದು ದಂಧೆಯ ಮಟ್ಟಕ್ಕೆ ತಲುಪಿದೆ ಎಂದರೆ ಹೆತ್ತವರು ಬೆಚ್ಚಿ ಬೀಳಬಹುದು. ಆದರೆ ಅದು ವಾಸ್ತವ. ಆಧುನಿಕತೆಯ ಸೋಗಿನಲ್ಲಿ ಬದುಕುತ್ತಿರುವ, ತಮಗೆ ಅರಿವಿಲ್ಲದೆ ಕಾರ್ಪೊರೇಟ್ ಕನಸುಗಳನ್ನು ಕಾಣುತ್ತಿರುವ ಯುವಜನತೆಯ ದುರಂತ ಕಥೆ ಇದು. ಮುಂದೆ ಗಿಲ್ಟ್ ಅಂತಹವರನ್ನು ಇಂಚಿಂಚೂ ಸಾಯಿಸುತ್ತದೆ.
‘ಒಬ್ಬ ಹುಡುಗ ತನಗೆ ಲೈಫ್ ಕೊಡುತ್ತಾನೆ ಎಂದು ಪ್ರಾಮಿಸ್ ಕೊಟ್ಟ’ ಎಂಬ ಭರವಸೆಯ ಮೇಲೆ ಹುಡುಗಿಯರು ತಪ್ಪು ಕೆಲಸಕ್ಕೆ ಮುಂದಾಗುತ್ತಾರೆ. ‘ನಿನಗೆ ನನ್ನ ಮೇಲೆ ನಂಬಿಕೆ ಇಲ್ಲವಾ?’ ಎಂದು ಭಾವನಾತ್ಮಕ ಮಾತುಗಳಿಂದ ಹುಡುಗರು ಹೇಳಿದರೆ ಕರಗುವ ಹುಡುಗಿಯರು ಇದ್ದಾರೆ. ಎಷ್ಟೋ ಬಾರಿ ಹುಡುಗಿಯರು ತಾವು ತುಂಬ ಅಡ್ವಾನ್ಸಡ್ ಎಂದು ತೋರಿಸಿಕೊಳ್ಳಲು ಹುಡುಗರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ.
ಹೆತ್ತವರು ಹೀಗೆ ಹೇಳಿದರೆ ಹೇಗೆ?
‘ನನಗೆ ನನ್ನ ಮಕ್ಕಳ ಮೇಲೆ ನಂಬಿಕೆ ಇದೆ. ನಮ್ಮ ಕಾಲದಲ್ಲಿ ನಮಗೆಲ್ಲಿ ಪ್ರೈವೆಸಿ ಇತ್ತು? ನಾವು ನಮ್ಮ ಗಂಡನ/ ಹೆಂಡತಿಯ ಮುಖ ನೋಡಿದ್ದು ಮದುವೆ ಮಂಟಪದಲ್ಲಿಯೇ. ಇದು ಆಧುನಿಕ ಕಾಲ. ಮಕ್ಕಳು ಸ್ವಲ್ಪ ದಿನ ಗಮ್ಮತ್ತು ಮಾಡಲಿ ಬಿಡಿ. ಮತ್ತೆ ಅವರೇ ಜೀವನದಲ್ಲಿ ಸೀರಿಯಸ್ ಆಗ್ತಾರೆ!’ ಎಂದು ಎಷ್ಟೋ ಹೆತ್ತವರು ಹೇಳುವುದನ್ನು ನಾನು ಕೇಳಿದ್ದೇನೆ. ಈ ಮಕ್ಕಳ ಹದಿಹರೆಯದ ಆಕರ್ಷಣೆಗೆ ಗೈಡ್ ಮಾಡುವುದನ್ನು ಬಿಟ್ಟು ಮಕ್ಕಳ ಸಪೋರ್ಟ್ಗೆ ನಿಲ್ಲುವ ಹೆತ್ತವರು ಇದ್ದಾರೆ.
‘ಅವರಿಬ್ಬರೂ ಬರೇ ಫ್ರೆಂಡ್ಸ್ ಮಾತ್ರ’ ಎಂದು ಮಕ್ಕಳನ್ನು ಪೂರ್ತಿಯಾಗಿ ನಂಬುವ, ನಾವೆಷ್ಟೇ ಬುದ್ಧಿ ಹೇಳಿದರೂ ತಮ್ಮ ಮಕ್ಕಳ ಪರವಾಗಿ ನಿಲ್ಲುವ ಹೆತ್ತವರಿಗೆ ನಾನು ಏನೂ ಹೇಳುವುದಿಲ್ಲ.
ಇದನ್ನೂ ಓದಿ : Raja Marga Column : ಮಹಾನ್ ಕಾದಂಬರಿ ಪರ್ವ ಹುಟ್ಟಿದ್ದು ಹೇಗೆ?; ಭೈರಪ್ಪರ ಸಿದ್ಧತೆ ಹೇಗಿತ್ತು?
ಹೆತ್ತವರಿಗೆ ಕಿವಿಮಾತು
ಹದಿಹರೆಯದ ಮಕ್ಕಳ ಹೆತ್ತವರಿಗೆ ನಾನು ಹೇಳುವ ಈ ಅಂಶಗಳನ್ನು ಪಾಲಿಸಿದರೆ ಇಂತಹ ದುರಂತಗಳನ್ನು ತಪ್ಪಿಸಬಹುದು.
1. ನಿಮ್ಮ ಮಕ್ಕಳ ಜೊತೆಗೆ ಮುಕ್ತವಾಗಿ ಮಾತಾಡಿ. ಅವರಿಗೂ ಮಾತಾಡಲು ಅವಕಾಶ ಕೊಡಿ. ಅವರ ಭಾವನೆಗಳನ್ನು ಆಲಿಸಿ.
2. ಪ್ರೀತಿ ಮಾಡೋದು ಖಂಡಿತ ತಪ್ಪಲ್ಲ. ಆದರೆ ಜವಾಬ್ದಾರಿ ಹೊರುವ ಪ್ರೀತಿಯೇ ನಿಜವಾದ ಪ್ರೀತಿ ಎಂದವರಿಗೆ ಮನವರಿಕೆ ಮಾಡಿ.
3. ಆಕರ್ಷಣೆ ಮತ್ತು ಪ್ರೀತಿಗಳ ನಡುವಿನ ವ್ಯತ್ಯಾಸಗಳನ್ನು ಅವರಿಗೆ ಪ್ರೀತಿಯಿಂದ ಹೇಳಿ.
4. ಆ ಪ್ರಾಯದ ಮಕ್ಕಳಿಗೆ ಭಾವನಾ ನಿರ್ವಹಣೆ ಬಹಳ ಕಷ್ಟ. ಅವರಿಗೆ ಇಲ್ಲಿ ತುಂಬಾ ಗೈಡೆನ್ಸ್ ಬೇಕು.
5. ನಿಮ್ಮ ಮಕ್ಕಳನ್ನು ಎಷ್ಟು ನಂಬಬೇಕು? ಎಷ್ಟು ಮಾತ್ರ ನಂಬಬೇಕು? ಎಂದು ನೀವು ನಿರ್ಧಾರ ಮಾಡಿ.
6. ಮಕ್ಕಳಿಗೆ ಅಗತ್ಯಕ್ಕಿಂತಲೂ ಹೆಚ್ಚು ಪಾಕೆಟ್ ಮನಿ ಕೊಡಬೇಡಿ. ಅದರ ಲೆಕ್ಕ ಇಡುವುದನ್ನು ಕೂಡ ಅವರಿಗೆ ಕಲಿಸಿ.
7. ಮಕ್ಕಳಿಗೆ ಬಿಡುವಿನ ಒಳ್ಳೆಯ ಹವ್ಯಾಸಗಳನ್ನು ಕಲಿಸಿ. ಅವರನ್ನು ಯಾವುದಾದರೂ ಚಟುವಟಿಕೆಯಲ್ಲಿ ಎಂಗೇಜ್ ಮಾಡಿ.
8. ನಿಮ್ಮ ಮಕ್ಕಳು ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎಂದು ನಿಮ್ಮ ಗಮನಕ್ಕೆ ಬಂದಾಗ ಬೆಚ್ಚಿಬೀಳಬೇಡಿ. ಆ ಸನ್ನಿವೇಶವನ್ನು ತುಂಬಾ ನಾಜೂಕಾಗಿ ಹ್ಯಾಂಡಲ್ ಮಾಡಿ.
9. ನಿಮ್ಮ ಮಕ್ಕಳ ಸೋಷಿಯಲ್ ಮೀಡಿಯಾ ಫ್ರೆಂಡ್ಸ್ ಯಾರು? ಅವರು ಎಂತವರು ಎಂದು ಸ್ವಲ್ಪ ಗಮನಿಸಿ. ಆದರೆ ಪತ್ತೇದಾರಿಕೆ ಮಾಡಬೇಡಿ.
10. ಹೆತ್ತವರ ಸಹಜ ಪ್ರೀತಿ ದೊರೆತ ಮಕ್ಕಳು ಎಂದಿಗೂ ತಪ್ಪು ಕೆಲಸ ಮಾಡೋದಿಲ್ಲ. ಇದು ಹೆತ್ತವರು ಗಮನಿಸಬೇಕಾದ ಮುಖ್ಯ ಅಂಶ.
ಸದ್ಯಕ್ಕೆ ಇಷ್ಟು ಸಾಕು. ನಮ್ಮ ಮಕ್ಕಳು ಚೆನ್ನಾಗಿರಲಿ ಎಂಬುದು ಮಾತ್ರ ನನ್ನ ಕಾಳಜಿ.