Site icon Vistara News

ರಾಜ ಮಾರ್ಗ ಅಂಕಣ: ನಿಮ್ಮ ಮಕ್ಕಳಿಗೆ ಭಯ ಕಾಡ್ತಿದೆಯಾ? ಫೋಬಿಯಾ ಗೆಲ್ಲೋದು ಹೇಗೆ?

phobia

#image_title

ನನ್ನ ಪರಿಚಯದ ಒಬ್ಬಳು ಕಾಲೇಜು ವಿದ್ಯಾರ್ಥಿನಿ (College student) ತನ್ನ ತಾಯಿಯ ಜೊತೆಗೆ ನನ್ನ ಬಳಿ ಮನಶ್ಯಾಸ್ತ್ರೀಯ ಸಲಹೆ ಪಡೆಯಲು ಬಂದಿದ್ದರು. ಆ ಹುಡುಗಿಯ ಸಮಸ್ಯೆ ಎಂದರೆ ನೀರು ಕಂಡರೆ ಭಯ! ಹರಿಯುವ ನೀರು, ಮಳೆ, ತೋಡು, ನದಿ ಎಲ್ಲವೂ ಕಂಡರೆ ಭಯ! ಕನಸಲ್ಲಿಯೂ ನೀರಿನಲ್ಲಿ ಮುಳುಗಿದ ಭಯ(Phobia)!

ನೀರು ಕಂಡರೆ ಬೆಚ್ಚಿ ಬೀಳುವ ಈ ಹುಡುಗಿ ಮಳೆಗಾಲದಲ್ಲಿ ಮನೆಯಿಂದ ಹೊರಗೆ ಬರುವುದಿಲ್ಲ. ಒಮ್ಮೆ ರಸ್ತೆಯಲ್ಲಿ ರಭಸವಾಗಿ ನೀರು ಹರಿಯುವುದನ್ನು ಕಂಡು ಕಿಟಾರನೆ ಕಿರುಚಿ ಮೂರ್ಛೆ ಹೋದ ಹುಡುಗಿ ಅವಳು! ಜೋರು ಮಳೆ ಬಂತು ಅಂದರೆ ಆಕೆ ಕಾಲೇಜಿಗೆ ಹೋಗುವುದಿಲ್ಲ ಅನ್ನುವುದು ಅಮ್ಮನ ಆತಂಕ!

ಆಕೆಗೆ ಇತ್ತು ಹೈಡ್ರೋ ಫೋಬಿಯಾ!

ನಾನು ಸುಮಾರು ಹೊತ್ತು ಮಗಳ ಹಾಗೂ ಅಮ್ಮನ ಜೊತೆ ಮಾತಾಡಿದಾಗ ಒಂದು ಮುಖ್ಯ ವಿಷಯ ಹೊರಗೆ ಬಂತು. ಆ ಹುಡುಗಿಗೆ ಐದಾರು ವರ್ಷ ಪ್ರಾಯ ಇದ್ದಾಗ ಮನೆಯ ಮುಂದೆ ಹರಿಯುತ್ತಿದ್ದ ಒಂದು ಸಣ್ಣ ತೋಡಿಗೆ ಬಿದ್ದು ಅವಳು ತುಂಬ ದೂರ ಕೊಚ್ಚಿಕೊಂಡು ಹೋಗಿದ್ದಳು. ಯಾರೋ ಆಕೆಯ ಪ್ರಾಣ ರಕ್ಷಣೆ ಮಾಡಿದ್ದರು ಎಂದರು ಅಮ್ಮ. ಅಂದಿನಿಂದ ಆಕೆಗೆ ನೀರು ಅಂದರೆ ವಿಪರೀತ ಭಯ (Hydrophobia)!

ಆಕೆಯನ್ನು ಈಜು ತರಗತಿಗೆ ಕಳುಹಿಸಲು ಹೇಳಿದೆ!

ಪರಿಹಾರ ಬೇಕು ಎಂದು ಆಕೆಯ ಅಮ್ಮ ಕೇಳಿದಾಗ ನಾನು ಹೇಳಿದೆ – ಆಕೆಯನ್ನು ಸ್ವಿಮ್ಮಿಂಗ್ ಕ್ಲಾಸಿಗೆ ಕಳುಹಿಸಿ! ಅಮ್ಮ ಬೆಚ್ಚಿ ಬಿದ್ದರು. ಏನು ಹೇಳುತ್ತೀರಿ ಸಾರ್ ನೀವು? ಇದೆಲ್ಲ ಸಾಧ್ಯ ಆಗಬಹುದಾ? ನನ್ನ ಮಗಳು ನೀರಿಗೆ ಇಳಿಯುವುದು ಸಾಧ್ಯವೇ ಇಲ್ಲ! ಅಂದರು.

ನಿಮ್ಮ ಮಗಳ ಭಯ ತೆಗೆಯಲು ಬೇರೆ ಯಾವುದೇ ವಿಧಾನ ಇಲ್ಲ. ಇದೊಂದೇ ಪರಿಹಾರ! ಎಂದು ಅವರನ್ನು ನಮಸ್ಕರಿಸಿ ಕಳುಹಿಸಿಕೊಟ್ಟೆ. ಅಮ್ಮನಿಗೆ ನನ್ನ ಮಾತಿನ ಮೇಲೆ ಭರವಸೆ ಬರಲಿಲ್ಲ. ಮುಂದೆ ಯಾರ್ಯಾರೋ ಮಾನಸಿಕ ತಜ್ಞರನ್ನು ಭೇಟಿ ಆದರು. ಅವರೆಲ್ಲರೂ ನಾನು ಹೇಳಿರುವುದ್ದನ್ನೇ ಹೇಳಿದರು.

ಆಕೆಯ ನೀರಿನ ಭಯ ಹೊರಟೇ ಹೋಯಿತು!

ಕೊನೆಗೂ ಮಗಳು ಒಳ್ಳೆಯ ಕೋಚ್ ಸಹಾಯ ಪಡೆದು ಸ್ವಿಮ್ಮಿಂಗ್ ಕ್ಲಾಸಿಗೆ ಸೇರಿಸಿದರು. ಈಗ ಮೂರು ತಿಂಗಳ ಕ್ಲಾಸ್ ಪೂರ್ತಿ ಆಗಿದೆ. ಮೊನ್ನೆ ಅಮ್ಮ ನನಗೆ ಫೋನ್ ಮಾಡಿ ಥ್ಯಾಂಕ್ಸ್ ಹೇಳಿದರು. “ನೀವು ಹೇಳಿದ್ದು ಸರಿ ಸರ್. ಈಗ ನನ್ನ ಮಗಳ ನೀರಿನ ಭಯ ಹೋಗಿದೆ. ನಿಮಗೆ ಥ್ಯಾಂಕ್ಸ್” ಅಂದರು!

ಈ ಫೋಬಿಯಾ ಅಂದರೆ ಏನು?

ಸ್ನೇಹಿತರೆ, ಈ ಭಯ ಅನ್ನುವುದು ಒಂದು ವಸ್ತು, ಒಂದು ಸ್ಥಿತಿ, ಒಂದು ವ್ಯಕ್ತಿಯನ್ನು ಅವಲಂಬಿಸಿ ಇರುವಂತದ್ದು. ಆ ಭಯ ಸಾಮಾನ್ಯ ಆಗಿದ್ದಾಗ ಆತಂಕ ಅಗತ್ಯವಿಲ್ಲ .ಆದರೆ ಅದು ಆಳಕ್ಕೆ ಇಳಿದು Sub Conscious Mind ಮಟ್ಟದವರೆಗೆ ಹೋದಾಗ ಅದಕ್ಕೆ ಸಣ್ಣ ಮಟ್ಟದ ಚಿಕಿತ್ಸೆಯು ಬೇಕಾಗಬಹುದು. ಕೆಲವೊಮ್ಮೆ ಒಂದು ಮನೋವೈಜ್ಞಾನಿಕವಾದ ಕೌನ್ಸೆಲಿಂಗ್ ಬೇಕಾಗಬಹುದು. ಹದಿಹರೆಯದಲ್ಲಿ ಮನಸ್ಸಿನ ಆಳದಲ್ಲಿ ರೂಟ್ ಆದ ಫೋಬಿಯಾ ತೆಗೆಯುವುದು ಖಂಡಿತ ಸುಲಭ ಅಲ್ಲ. ಅದಕ್ಕೆ ಪೋಷಕರ, ಶಿಕ್ಷಕರ ಸಹಕಾರ, ಬೆಂಬಲಗಳು ಬೇಕಾಗಬಹುದು.

ಫೋಬಿಯಾ ನಿವಾರಣೆ ಹೇಗೆ?

ಯಾರಿಗಾದರೂ ಭಾಷಣದ ವೇದಿಕೆಯ ಭಯ ಅಂತಾದರೆ ಅದನ್ನು ತೆಗೆಯಲು ನೀವು ಭಾಷಣದ ವೇದಿಕೆ ಏರಲೆ ಬೇಕು! ಯಾರಿಗಾದರೂ ತುಂಬಾ ಜನ ಕಂಡರೆ ಭಯ ಅಂತ ಆದರೆ ಜನರ ಮಧ್ಯೆ ಹೋಗುವುದೇ ಪರಿಹಾರ! ಹಾಗೆಯೇ ಒಬ್ಬ ಹುಡುಗನಿಗೆ ಹುಡುಗಿ (ಅಥವಾ ಹುಡುಗಿಗೆ ಹುಡುಗ) ಕಂಡರೆ ಭಯ ಅಂತಾದರೆ ಓರಗೆಯ ಗೆಳತಿಯರ ಅಥವಾ ಗೆಳೆಯರ ಜೊತೆ ಬೆರೆಯುವುದೇ ಪರಿಹಾರ. ಪರೀಕ್ಷೆಯ ಬಗ್ಗೆ ವಿಪರೀತವಾದ ಭಯ ಇರುವ ಮಂದಿಗೆ ಫಲಿತಾಂಶದ ಅಪೇಕ್ಷೆ ಮಾಡದೆ ಹೆಚ್ಚು ಪರೀಕ್ಷೆ ಎದುರಿಸುವ ಧೈರ್ಯವನ್ನು ತುಂಬಬೇಕು. ಕತ್ತಲೆ ಕಂಡರೆ ಭಯ ಅನ್ನುವವರು ದಿನದ ಕೆಲವು ಹೊತ್ತಾದರೂ ಕತ್ತಲೆಯಲ್ಲಿ ಕಳೆಯಲು ಸಾಧ್ಯ ಆದರೆ ಆ ಭಯ ಅಡ್ರೆಸ್ ಇಲ್ಲದೆ ನಾಶ ಆಗುತ್ತದೆ!

ಎಷ್ಟೋ ಭಯಗಳಿಗೆ ಹೆತ್ತವರು ಮತ್ತು ಶಿಕ್ಷಕರು ಕಾರಣ!

ಇವತ್ತು ಮಕ್ಕಳು ಎದುರಿಸುತ್ತಿರುವ ಹೆಚ್ಚಿನ ಭಯಗಳಿಗೆ ಕೆಲವು ಹೆತ್ತವರು ಮತ್ತ ಶಿಕ್ಷಕರು ಪರೋಕ್ಷವಾಗಿ ಕಾರಣ ಆಗಿರುತ್ತಾರೆ. ಈ ಭಯಗಳು ಯಾವುದೂ ಮಕ್ಕಳು ಕ್ರಿಯೇಟ್ ಮಾಡಿದವು ಅಲ್ಲ. ತಮ್ಮ ಮಕ್ಕಳನ್ನು ಅತಿಯಾಗಿ ಮುದ್ದು ಮಾಡಿ ಬೆಳೆಸುವ ಪೋಷಕರು ತಮ್ಮ ಅತಿಯಾದ ಕಾಳಜಿಯ ನೆಪದಲ್ಲಿ ತಮಗೆ ಗೊತ್ತಿಲ್ಲದಂತೆ ಮಕ್ಕಳನ್ನು ಭಯಕ್ಕೆ ದೂಡುತ್ತಾರೆ!

ಒಂದು ಉದಾಹರಣೆ ಕೊಡುತ್ತೇನೆ ಕೇಳಿ. ಒಂದು ಸಣ್ಣ ಮಗು ಗೋಡೆ ಹಿಡಿದು ನಡೆಯಲು ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಕೆಳಗೆ ಬಿದ್ದರೆ ಯಾಕೆ ಅಳುತ್ತದೆ?

ನೋವಿನಿಂದ ಅಥವ ಅಪಮಾನದಿಂದ ಮಗು ಅಳುವುದು ಅಲ್ಲವೇ ಅಲ್ಲ! ಮಗು ಬಿದ್ದ ಶಬ್ದಕ್ಕೆ ಬೆಚ್ಚಿ ಬಿದ್ದ ಅಮ್ಮ ಅಡಿಗೆ ಮನೆಯಲ್ಲಿ ಸೌಟನ್ನು ದಡಾರ್ ಎಂದು ಬಿಸಾಡಿ ಏನಾಯ್ತೋ ಮಗಾ! ಏನಾಯ್ತೋ ಮಗಾ! ಎಂದು ಭಯಪಟ್ಟು ಓಡುತ್ತಾ ಬಂದಾಗ ತಾಯಿಯ ಮುಖದಲ್ಲಿ ಪ್ರಿಂಟ್ ಆಗಿರುವ ಭಯದ ಭಾವನೆ ನೋಡಿಕೊಂಡು ಮಗು ಅಳುತ್ತದೆಯೇ ಹೊರತು ನೋವಿನಿಂದ ಅಲ್ಲ! ಒಂದೊಮ್ಮೆ ಮಗು ಬಿದ್ದಾಗ ತಾಯಿ ಹತ್ತಿರ ಬಾರದಿದ್ದರೆ ಆ ಮಗು ಒಂದಿಷ್ಟೂ ಅಳದೆ ಎದ್ದು ನಡೆಯದಿದ್ದರೆ ಮತ್ತೆ ಹೇಳಿ!

ಮಕ್ಕಳ ಭಯದಲ್ಲಿ ಕೆಲವು ಶಿಕ್ಷಕರ ಕೊಡುಗೆ!

ಹಾಗೆಯೇ ಮಕ್ಕಳಿಗೆ ಗಣಿತ ಕಷ್ಟ, ಇಂಗ್ಲಿಷ್ ಕಷ್ಟ ಹೀಗೆಲ್ಲ ಭಯವನ್ನು ಹುಟ್ಟಿಸುವುದು ಶಿಕ್ಷಕರು. ಹಾಗೆ ಪರೀಕ್ಷೆಯ ಭಯವನ್ನು ಮಕ್ಕಳಲ್ಲಿ ಹುಟ್ಟಿಸುವುದೆ ಶಿಕ್ಷಕರು ಮತ್ತು ಪೋಷಕರು. ಅಷ್ಟು ಅಂಕ ಬರಲೇ ಬೇಕು, ತರಗತಿಗೆ ಪ್ರಥಮ ಬರಲೇ ಬೇಕು. ಆಚೆ ಮನೆಯ ಹುಡುಗಿಯನ್ನು ಹಿಂದೆ ಹಾಕಲೇ ಬೇಕು ಅನ್ನುವ ಹೆತ್ತವರು ತಮಗೆ ಅರಿವಿಲ್ಲದಂತೆ ಮಕ್ಕಳಲ್ಲಿ ಭಯ ಹುಟ್ಟಿಸುತ್ತಾರೆ.

ಹಾಗೆಯೇ ಅಷ್ಟು ಅಂಕ ತೆಗೆಯಬೇಕು, ಇಷ್ಟು ಅಂಕ ತೆಗೆಯಬೇಕು, ನಿನ್ನ ಅಣ್ಣ ಅಷ್ಟು ಅಂಕ ತೆಗೆದಿದ್ದ, ನಿನ್ನ ಅಕ್ಕ ಇಷ್ಟು ಅಂಕ ತೆಗೆದಿದ್ದಳು, ನಿನ್ನ ಓರಗೆಯ ಹುಡುಗಿ ಅಷ್ಟು ಗಂಟೆ ಓದುತ್ತಿದ್ದಳು, ನೀನು ಫೇಲ್ ಆದರೆ ನಮ್ಮ ರಿಸಲ್ಟ್‌ಗೆ ತೊಂದರೆ! ಎಂದೆಲ್ಲ ಹೇಳುವ ಕೆಲವು ಶಿಕ್ಷಕರು ಮಕ್ಕಳಲ್ಲಿ ಅವ್ಯಕ್ತ ಭಯಕ್ಕೆ ಕಾರಣ ಆಗುತ್ತಾರೆ!

ಮಕ್ಕಳಿಗೆ ಸಹಜ ಪ್ರೋತ್ಸಾಹದ ವಾತಾವರಣ ನೀಡಿ

ಮಕ್ಕಳಿಗೆ ಸಹಜವಾದ ಮತ್ತು ಪ್ರೋತ್ಸಾಹದಾಯಕ ಆದ ವಾತಾವರಣ ಕೊಟ್ಟು ನೋಡಿ. ಹೆತ್ತವರ ಮತ್ತು ಶಿಕ್ಷಕರ ಪ್ರೋತ್ಸಾಹ ಮತ್ತು ಪಾಸಿಟಿವ್ ಅಪ್ರೋಚ್ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಹಾಗೆ ಆದಾಗ ನಿಮ್ಮ ಮಕ್ಕಳು ಮಿರಾಕಲ್ ಕ್ರಿಯೇಟ್ ಮಾಡದಿದ್ದರೆ ಮತ್ತೆ ಹೇಳಿ!

ಮಕ್ಕಳಿಗೆ ನೀವು ಹೇಳಲೇ ಬೇಕಾದ ಎಂಟು ಮಾತುಗಳು

1) ನನಗೆ ನಿನ್ನ ಮೇಲೆ ನಂಬಿಕೆ ಇದೆ.
2) ನನಗೆ ನಿನ್ನ ಬಗ್ಗೆ ತುಂಬಾ ನಿರೀಕ್ಷೆ ಇದೆ.
3) ನಿನ್ನಲ್ಲಿ ಅಪರಿಮಿತವಾದ ಸಾಮರ್ಥ್ಯಗಳು ಇವೆ.
4) ನೀನು ನೀನೇ. ನಿನ್ನನ್ನು ನಾನು ಯಾರ ಜೊತೆಗೂ ಹೋಲಿಕೆ ಮಾಡುವುದಿಲ್ಲ.
5) ಫಲಿತಾಂಶದ ಬಗ್ಗೆ ಹೆಚ್ಚು ಯೋಚನೆ ಮಾಡದೆ ನಿನ್ನ ಪರಿಶ್ರಮ ಹಾಕು.
6) ಏನಾದರೂ ನಿನ್ನ ನಂಬಿಕೆ ಕಳೆದುಕೊಳ್ಳಬೇಡ.
7) ನನ್ನ ಪ್ರೀತಿ ನೀನು ಪಡೆಯುವ ಮಾರ್ಕ್ಸ್ ಮೇಲೆ ಅವಲಂಬಿತ ಆಗಿಲ್ಲ.
8) ನಾನು ನಿನ್ನ ಜೊತೆ ಇರುತ್ತೇನೆ ಯಾವಾಗಲೂ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ: You Cant believe, ಅವನು ಮೊದಲ ರನ್‌ ಗಳಿಸಲು ಆರು ಇನಿಂಗ್ಸ್‌ ಒದ್ದಾಡಿದ್ದ!

Exit mobile version