ಭಾಷಣ ಅನ್ನುವುದು ಒಂದು ಶ್ರೇಷ್ಠವಾದ ಕಲೆ. ಒಬ್ಬ ಒಳ್ಳೆಯ ಭಾಷಣಕಾರ ಒಂದು ಇಡೀ ಸಮೂಹವನ್ನು ಪ್ರಭಾವಿತಗೊಳಿಸಬಲ್ಲ. ಏಕಕಾಲದಲ್ಲಿ ಸಾವಿರಾರು ಮಂದಿಗೆ ಪ್ರೇರಣೆ ಕೊಡಬಲ್ಲ. ಮಾಹಿತಿಗಳ ರವಾನೆಗೆ ಭಾಷಣವು ಅತ್ಯುತ್ತಮ ಮಾಧ್ಯಮ. ಭಾಷಣದ ಮೂಲಕ ಮನರಂಜನೆ ನೀಡುವ ಒಳ್ಳೆಯ ಭಾಷಣಕಾರರ ಸಂಖ್ಯೆ ಕೂಡ ತುಂಬಾ ದೊಡ್ಡದಿದೆ. ಒಬ್ಬ ಪ್ರಬುದ್ಧ ಭಾಷಣಕಾರ ವೇದಿಕೆಯಲ್ಲಿ ನಿಂತು ಮಾತಾಡುವಾಗ ಪ್ರೇಕ್ಷಕ ಸಮೂಹ ಮೈಮರೆತು ಕೇಳುವ ವಾತಾವರಣವನ್ನು ಸೃಷ್ಟಿ ಮಾಡಬಲ್ಲ. ಒಳ್ಳೆಯ ಭಾಷಣಕಾರರಿಗೆ ಅತೀ ಹೆಚ್ಚು ಬೇಡಿಕೆ ಇರುತ್ತದೆ. ಆದರೆ, ಸಭಾ ಕಂಪನ (Stage fright) ಅದೆಷ್ಟೋ ಒಳ್ಳೆಯ ಭಾಷಣಕಾರರನ್ನು ಕೊಂದು ಹಾಕಿದೆ. ಈ ಕಂಪನವನ್ನು ಮೀರಿ ನಿಲ್ಲಲು ಸಾಧ್ಯವೇ?
ಸಭಾಕಂಪನ ಎಂಬ ಒತ್ತಡ!
ನಮ್ಮ ಒತ್ತಡವನ್ನು ಕಳೆಯುವ ಎರಡು ಸ್ಥಳಗಳು ಇವೆ. ಒಂದು ಶೌಚಾಲಯ. ಇನ್ನೊಂದು ಭಾಷಣದ ವೇದಿಕೆ ಎಂದು ಸಾಕ್ರೆಟಿಸ್ ಹೇಳಿದ್ದನು! ಭಾಷಣವನ್ನು ಮಾಡಲು ವೇದಿಕೆ ಏರಿದಾಗ ಕಣ್ಣಲ್ಲಿ ಭಯ ಕಾಣಿಸುವುದು, ಹೃದಯ ಬಡಿತ ವೇಗವಾಗುವುದು, ಮೈ ಇಡೀ ಬಿಸಿ ಆಗುವುದು, ಕಣ್ಣ ಮುಂದೆ ಕತ್ತಲೆಯ ಪರದೆ ಕಾಣಿಸುವುದು, ಕಾಲರ್ ಹಿಂದೆ ಬಿಸಿ ಆಗುವುದು, ಸಿದ್ಧತೆ ಮಾಡಿದ ಅಂಶಗಳು ಮರೆತುಹೋಗುವುದು, ಗಂಟಲ ಪಸೆ ಆರಿಹೋಗುವುದು, ಮೈ ಎಲ್ಲ ಬೆವರುವುದು……….ಮೊದಲಾದ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಿರಬಹುದು. ಈ ಲಕ್ಷಣಗಳಿಗೆ ‘ಸಭಾ ಕಂಪನ’ ಎಂದು ಹೆಸರು. ಅವುಗಳು ಸಿಂಪ್ಟಮ್ (ರೋಗ ಚಿಹ್ನೆ) ಅಲ್ಲ! ಸಭಾಕಂಪನ ನಿಮ್ಮಲ್ಲಿ ಇದೆ ಎಂದಾದರೆ ನಿಮ್ಮ ಆರೋಗ್ಯ ಸರಿ ಇದೆ ಎಂದರ್ಥ!
ಆ ಸಭಾ ಕಂಪನವನ್ನು ಯಾರೂ ಗೆದ್ದವರಿಲ್ಲ. ಎಂತಹ ಮಹಾನ್ ಭಾಷಣಕಾರರು ಕೂಡ ತಮ್ಮ ಆರಂಭಿಕ ದಿನಗಳಲ್ಲಿ ಸಭಾ ಕಂಪನವನ್ನು ಎದುರಿಸಿದವರೇ ಆಗಿದ್ದಾರೆ! ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ 1893ರಲ್ಲಿ ಮಾಡಿದ ಭಾಷಣವು ವಿಶ್ವಮಟ್ಟದ ಕೀರ್ತಿಯನ್ನು ಪಡೆಯಿತು ಎಂದು ನಮಗೆ ಗೊತ್ತಿದೆ. ಆದರೆ ಅದರ ಹಿಂದಿನ ರಾತ್ರಿ ಸ್ವಾಮೀಜಿ ಆತಂಕದಲ್ಲಿ ನಿದ್ದೆ ಕೂಡ ಮಾಡಿರಲಿಲ್ಲ ಎನ್ನುವುದು ಬಹಳ ಮಂದಿಗೆ ಗೊತ್ತಿಲ್ಲ! ನಾನು ಇಷ್ಟಪಡುವ ಅನೇಕ ಶ್ರೇಷ್ಠರಾದ ಭಾಷಣಕಾರರು, ಅಟಲ್ ಬಿಹಾರಿ ವಾಜಪೇಯಿಯಂತವರು ಕೂಡ, ತಮಗೆ ಸಭಾಕಂಪನವು ಇದೆ ಒಪ್ಪಿಕೊಂಡಿದ್ದಾರೆ!
ಸಭಾಕಂಪನ ಉಂಟಾಗುವುದು ಯಾಕೆ?
ಯಾವುದೇ ಹೊಸ ಸನ್ನಿವೇಶವನ್ನು ನಾವು ಎದುರಿಸುವಾಗ ಅದಕ್ಕೆ ಪೂರಕವಾಗಿ ನಮ್ಮ ದೇಹವನ್ನು ಸಿದ್ಧಪಡಿಸುವ ಒಂದು ಆರೋಗ್ಯಪೂರ್ಣ ವ್ಯವಸ್ಥೆ ನಮ್ಮ ದೇಹದಲ್ಲಿದೆ. ನಮ್ಮ ದೇಹದಲ್ಲಿ ಇರುವ ಅಡ್ರಿನಲ್ ಎಂಬ ಗ್ರಂಥಿಯು ಅಡ್ರಿನಲಿನ್ ಎಂಬ ಹಾರ್ಮೋನನ್ನು ಸೃವಿಸುವುದು ಇದಕ್ಕೆ ಕಾರಣ. ಈ ಹಾರ್ಮೋನ್ ನಮ್ಮ ರಕ್ತದಲ್ಲಿ ಹರಿದು ನಮ್ಮ ದೇಹದಲ್ಲಿ ಮೇಲೆ ಉಲ್ಲೇಖ ಮಾಡಿದ ಲಕ್ಷಣಗಳನ್ನು ಉಂಟುಮಾಡುತ್ತದೆ. ಅಂದರೆ ಆ ಹಾರ್ಮೋನ್ ನಮ್ಮನ್ನು ಒಳ್ಳೆಯ ಭಾಷಣಕ್ಕೆ ಸಿದ್ಧಪಡಿಸುತ್ತದೆ ಹೊರತು ನಿಮ್ಮನ್ನು ಖಾಲಿ ಮಾಡುವುದಿಲ್ಲ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ! ಈ ಲಕ್ಷಣಗಳು ಭಾಷಣದ ಆರಂಭದಲ್ಲಿ ಮಾತ್ರ ಕಾಣಿಸುವ ಅಂಶಗಳು. ಆದರೆ ನಾವು ಅನವಶ್ಯಕವಾಗಿ ಭಯಪಟ್ಟು ಅದನ್ನು ಭಾಷಣದ ಕೊನೆಯವರೆಗೆ ಎಳೆದುಕೊಂಡು ಹೋಗುತ್ತೇವೆ. ಇನ್ನೂ ಕೆಲವರು ಭಾಷಣವನ್ನೇ ಆರಂಭ ಮಾಡದೆ ಈ ಒತ್ತಡವನ್ನು ಫೀಲ್ ಮಾಡಿ ಕುಸಿಯುತ್ತಾರೆ!
ಈ ಸಭಾಕಂಪನವು ಸಾವಿರಾರು ಭಾಷಣದ ಪ್ರತಿಭೆಗಳನ್ನು ಉಸಿರುಗಟ್ಟಿಸಿದೆ.
ಸಭಾಕಂಪನವನ್ನು ಗೆಲ್ಲುವುದು ಹೇಗೆ?
ಈ ಸಭಾಕಂಪನವನ್ನು ಗೆಲ್ಲುವುದು ಸಾಧ್ಯವೇ ಇಲ್ಲ! ಆದರೆ ಕೆಲವು ಮಾನಸಿಕ ಸಿದ್ಧತೆಗಳನ್ನು ಮಾಡಿಕೊಂಡರೆ ಅದನ್ನು ತಕ್ಕಮಟ್ಟಿಗೆ ನಿರ್ವಹಣೆ ಮಾಡಲು ಕಲಿಯಬಹುದು. ಅದು ಕೂಡ ನಿರಂತರ ಪ್ರಯತ್ನದ ಮೂಲಕ ಸಾಧ್ಯ ಆಗುತ್ತದೆ. ನಾನು ಮಾಡಿದ ಸಾವಿರಾರು ಭಾಷಣ ಕಲೆಯ ಕಾರ್ಯಾಗಾರಗಳ ಅನುಭವದ ಆಧಾರದ ಮೇಲೆ ಸಭಾಕಂಪನದ ನಿರ್ವಹಣೆಯ ಈ ಟಿಪ್ಸ್‌ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಇಲ್ಲಿವೆ ಸಭಾ ಕಂಪನ ಗೆಲ್ಲುವ ಸಲಹೆಗಳು
1. ಸಭಾಕಂಪನ ಅನುಭವಿಸುವವರಲ್ಲಿ ನೀವು ಮೊದಲಿಗರೂ ಅಲ್ಲ. ಕೊನೆಯವರೂ ಅಲ್ಲ! ಅದು ನಿಮ್ಮನ್ನು ಉತ್ತಮ ಭಾಷಣಕ್ಕೆ ಸಿದ್ಧಪಡಿಸುವ ಒಂದು ಇನ್ ಬಿಲ್ಟ್ ಸಿಸ್ಟಮ್ ಎಂದು ತಿಳಿದಾಗ ನಿಮ್ಮ ಆತಂಕವು ಸಹಜವಾಗಿ ಕಡಿಮೆ ಆಗುತ್ತದೆ.
2. ಭಾಷಣಕ್ಕೆ ಉತ್ತಮ ತಯಾರಿಯು ನಿಮ್ಮ ಸಹಜ ಆತಂಕವನ್ನು ಕಡಿಮೆ ಮಾಡುತ್ತದೆ. ಸಾವಿರಾರು ಭಾಷಣಗಳನ್ನು ಮಾಡಿದ ನಂತರವೂ ಸರಿಯಾದ ಸಿದ್ಧತೆ ಮಾಡದೇ ಭಾಷಣ ಮಾಡಬೇಡಿ. ಸರಿಯಾದ ರಿಹರ್ಸಲ್ ಕೂಡ ಅಷ್ಟೇ ಮುಖ್ಯ.
3. ತಯಾರಿಯ ಹಂತದಲ್ಲಿ ನೀವು ನಿಮ್ಮ ಇಡೀ ಭಾಷಣವನ್ನು ವಿಷುವಲೈಸ್ ಮಾಡಿಕೊಳ್ಳುವುದು ಕೂಡ ತುಂಬಾ ಅಗತ್ಯ.. ಉದಾಹರಣೆಗೆ ನೀವು ವೇದಿಕೆಯಲ್ಲಿ ಅತಿಥಿಗಳ ನಡುವೆ ಕುಳಿತಿರುತ್ತೀರಿ, ನಿಮ್ಮ ಹೆಸರನ್ನು ಉದ್ಘೋಷಕರು ಘೋಷಣೆ ಮಾಡುತ್ತಾರೆ, ನೀವು ಎದ್ದು ಪೋಡಿಯಮ್ ಕಡೆಗೆ ಹೋಗುತ್ತೀರಿ, ಮೈಕ್ ಎತ್ತರವನ್ನು ಹೊಂದಿಕೆ ಮಾಡಿಕೊಳ್ಳುತ್ತೀರಿ…….ಇತ್ಯಾದಿ!
4. ಸಿದ್ಧತೆಯ ಹಂತದಲ್ಲಿಯೇ ನಿಮ್ಮ ಭಾಷಣಕ್ಕೆ ಒಂದು ಉತ್ತಮ ಆರಂಭವನ್ನು ಪ್ಲ್ಯಾನ್ ಮಾಡಿಕೊಳ್ಳಿ. ಒಂದು ಒಳ್ಳೆಯ ಗಾದೆ, ನುಡಿಕಟ್ಟು, ಕೊಟೇಶನ್, ಸದಭಿರುಚಿಯ ಜೋಕ್, ಒಂದು ಕವಿತೆಯ ಸಾಲು, ಒಂದು ಒಳ್ಳೆಯ ಸ್ಟೋರಿ ನಿಮ್ಮನ್ನು ಖಂಡಿತವಾಗಿ ಗೆಲ್ಲಿಸುತ್ತದೆ. ಆದರೆ ಇವೆಲ್ಲವೂ ನಿಮ್ಮ ಅಂದಿನ ಭಾಷಣದ ಮುಖ್ಯ ಥೀಮ್‌ಗೆ ಪೂರಕ ಆಗಿರಬೇಕು ಅನ್ನುವುದು ಬಾಟಮ್ ಲೈನ್!
5. ಸಭೆ ನಡೆಯುವ ಸ್ಥಳಕ್ಕೆ ಸಾಕಷ್ಟು ಮುಂಚಿತವಾಗಿ ಹೋಗಿ ಅಲ್ಲಿ ಪ್ರೇಕ್ಷಕರ ಜೊತೆಗೆ ಒಂದಿಷ್ಟು ಹೊತ್ತು ಬೆರೆತು ಮಾತಾಡಿದರೆ ನಿಮ್ಮ ಒತ್ತಡ ಕಡಿಮೆ ಆಗುವುದು ಖಂಡಿತ. ನೀವು ಆ ಸನ್ನಿವೇಶಕ್ಕೆ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳುವುದು ತುಂಬಾ ಅಗತ್ಯ.
6. ನಿಮ್ಮ ಭಾಷಣಕ್ಕಿಂತ ಮೊದಲು ವೇದಿಕೆಯಲ್ಲಿ ಕುಳಿತ ಇತರ ಅತಿಥಿಗಳ ಜೊತೆಗೆ ನಿಮ್ಮ ಆಪ್ತ ಮಾತುಗಳು ನಿಮ್ಮ
ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ.
7. ನಿಮ್ಮ ಭಾಷಣದ ಆರಂಭವು ಅತ್ಯುತ್ತಮ ಆಗಿರಬೇಕು ಎಂದು ನೀವು ನಿರ್ಧಾರ ಮಾಡಿ. ತಯಾರಿಯ ಹಂತದಲ್ಲಿಯೇ ಅದನ್ನು ಪ್ಲ್ಯಾನ್ ಮಾಡಿ. ನಿಮ್ಮ ಭಾಷಣದ ಆರಂಭದ ಒಂದೆರಡು ನಿಮಿಷಗಳು ತುಂಬಾನೇ ಪ್ರಾಮುಖ್ಯ. ಆ ಅವಧಿಯಲ್ಲಿ ಪ್ರೇಕ್ಷಕರನ್ನು ನಿಮ್ಮ ಭಾಷಣದ ಕಡೆಗೆ ಸೆಳೆಯುವ ಪ್ರಯತ್ನ ಆಗಬೇಕು. ಆರಂಭದ ಬ್ಲಾಸ್ಟ್ ಚೆನ್ನಾಗಿ ಬಂತು ಎಂದರೆ ನೀವು ಅರ್ಧ ಗೆಲ್ಲುತ್ತೀರಿ (ವಿವೇಕಾನಂದರ ಅಮೆರಿಕಾದ ಐತಿಹಾಸಿಕ ಭಾಷಣದ ಆರಂಭ ನೆನಪು ಮಾಡಿಕೊಳ್ಳಿ). ಈ ಸುಂದರವಾದ ಒಂದೆರಡು ನಿಮಿಷಗಳನ್ನು ಅವರೇ, ಇವರೇ…. ಎಂದು ಉದ್ದಕ್ಕೆ ಸಂಬೋಧನೆ ಮಾಡುತ್ತಾ ಹಾಳು ಮಾಡಬೇಡಿ! ಅಧ್ಯಕ್ಷರೇ, ಅತಿಥಿಗಳೇ ಮತ್ತು ಸಭಾಸದರೇ… ಇಷ್ಟು ಸಾಕು!
8. ಉತ್ತಮವಾದ ಧ್ವನಿಯು ಭಾಷಣಕಾರನ ಪ್ರಬಲವಾದ ಅಸ್ತ್ರ. ಅದನ್ನು ಉತ್ತಮ ತರಬೇತಿಯ ಮೂಲಕ ಹುರಿಗೊಳಿಸಲು ಸಾಧ್ಯ ಇದೆ. ನಿಮ್ಮ ನಾಭಿಯಿಂದ ಹೊರಡುವ ಬೇಸ್ ವಾಯ್ಸ್ ನಿಮ್ಮನ್ನು ಗೆಲ್ಲಿಸುತ್ತದೆ.
9. ಧ್ವನಿವರ್ಧಕದ ಸೂಕ್ತವಾದ ಬಳಕೆಯು ಅತೀ ಅಗತ್ಯ. ಅದನ್ನು ಕಲಿಯಲು ತುಂಬಾ ಕಷ್ಟ ಇಲ್ಲ. ನಿಮ್ಮ ತುಟಿಗಳಿಂದ ಕನಿಷ್ಠ ಒಂದು ಅಡಿ ದೂರ ಇರುವ ಹಾಗೆ ನೋಡಿಕೊಂಡರೆ ಉತ್ತಮ. ಅದು ನಿಮ್ಮ ಮುಖಕ್ಕಿಂತ ಒಂದೆರಡು ಇಂಚು ಕೆಳಗೆ ಇರುವ ಹಾಗೆ ನೋಡಿಕೊಳ್ಳಿ.
10. ನೀವು ಮಾತಾಡುವಾಗ ನಿಮ್ಮ ಶಬ್ದಗಳಿಗಿಂತ ನಿಮ್ಮ ದೇಹ ಭಾಷೆಯು ಹೆಚ್ಚು ಪ್ರಭಾವಶಾಲಿ ಆಗಿರುತ್ತದೆ ಎಂದು ನಿಮಗೆ ತಿಳಿದಿರಲೆಬೇಕು. ಅದರ ಬಗ್ಗೆ ಸ್ವಲ್ಪ ತರಬೇತು ನಿಮಗೆ ಬೇಕು.
11. ನೀವು ನಿಮ್ಮ ಒಳಗೆ ಇರುವುದಕ್ಕಿಂತ ಹೊರಗೆ ಹೆಚ್ಚು ಕಾನ್ಫಿಡೆಂಟ್ ಆಗಿ ಕಾಣಿಸುತ್ತೀರಿ ಅನ್ನುವುದು ಬೇಸಿಕ್ ಸೈಕಾಲಜಿ. ಆದ್ದರಿಂದ ಭಯದ ಕಲ್ಪನೆ ಕೂಡ ಮಾಡಬೇಡಿ.
12.) ನಿಮ್ಮ ಪ್ರೇಕ್ಷಕರ ಜೊತೆ ನಿಮ್ಮ ದೃಷ್ಟಿ ಸಂಪರ್ಕವು (Eye Contact) ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ನಗುವು ಜಗತ್ತಿನ ಅತ್ಯಂತ ಪ್ರಬಲ ಸಂವಹನ ಮಾಧ್ಯಮ! ನಿಮ್ಮ ನಗುಮುಖದ ಅಪಿಯರೆನ್ಸ್ ನಿಮ್ಮನ್ನು ಖಂಡಿತ ಗೆಲ್ಲಿಸುತ್ತದೆ! ಹಾಗೆಯೇ ಕಾರ್ಯಕ್ರಮದ ಆಶಯಕ್ಕೆ ಪೂರಕವಾದ ಡ್ರೆಸ್ ಕೋಡ್ ಕೂಡ!
13) ಹೆಚ್ಚು ಹೆಚ್ಚು ಭಾಷಣಗಳನ್ನು ಮಾಡುತ್ತಾ ಹೋದಂತೆ ನೀವು ತಕ್ಕಮಟ್ಟಿಗೆ ಒತ್ತಡ ನಿರ್ವಹಣೆ ಮಾಡುವುದನ್ನು ಕಲಿಯುತ್ತೀರಿ.
ಸದ್ಯಕ್ಕಿಷ್ಟು…! ಗೆಲ್ಲಬೇಕು ಎಂದು ನೀವು ನಿರ್ಧಾರ ಮಾಡಿ ಹೊರಟರೆ ಯಾವ ಶತ್ರುವೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ! ಆಲ್ ದ ಬೆಸ್ಟ್.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ವ್ಹಾ.. ಉಸ್ತಾದ್.. ; ತಬಲಾ ಸಾಮ್ರಾಟ್ ಉಸ್ತಾದ್ ಝಾಕೀರ್ ಹುಸೇನರಿಗೆ 72