Site icon Vistara News

ರಾಜ ಮಾರ್ಗ ಅಂಕಣ | ಈಗಿನ ಯುವಜನರು ಕೆಟ್ಟೋಗ್ತಿದಾರೆ ಅಂತ ಅಂದ್ಕೊಬೇಡಿ, ಇದು ಸುಳ್ಳು, ಇಲ್ಲಿವೆ ಏಳು ಸತ್ಯಗಳು!

young inda ರಾಜ ಮಾರ್ಗ

ಜನಪ್ರಿಯ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ ‘ಅಗ್ನಿಯ ರೆಕ್ಕೆಗಳು’ ಪುಸ್ತಕದಲ್ಲಿ ಅವರು 2020ರಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದು ಹೇಗೆ? ಎಂದು ಅವರನ್ನು ಕೇಳಿದಾಗ ಅವರು ಹೇಳಿದ್ದು – ನಮ್ಮ ದೇಶದಲ್ಲಿ 18-30 ವಯೋಮಾನದ ಯುವಕ ಯುವತಿಯರು 60% ಇದ್ದಾರೆ. ಇಷ್ಟೊಂದು ಯುವಜನತೆ ಯಾವ ದೇಶದಲ್ಲಿಯೂ ಇಲ್ಲ! ಅವರು ದೇಶದ ಆಸ್ತಿ.

ನಮ್ಮ ದೇಶದ ಯುವಕ ಯುವತಿಯರು ಚೀನಾದ ಯುವಕ ಯುವತಿಯರಿಗಿಂತ ಉತ್ತಮವಾಗಿ ಇಂಗ್ಲಿಷ್ ಭಾಷೆಯನ್ನು ಮಾತಾಡುತ್ತಾರೆ. ಅದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ಪಾರಮ್ಯ ಸಾಧಿಸುತ್ತಾರೆ. ವಿಜ್ಞಾನವನ್ನು ತುಂಬಾ ಚೆನ್ನಾಗಿ ಕಲಿಯುತ್ತಾರೆ. ಪರಿಣಾಮವಾಗಿ 2020ರಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರ ಆಗುವುದು ಖಂಡಿತ ಎಂದು ಬರೆದಿದ್ದರು.

ಆದರೆ 2020ರ ಹೊತ್ತಿಗೆ ಭಾರತದಲ್ಲಿ ಕೊರೊನಾ ತೀವ್ರವಾಗಿ ಕಾಡಿತು. ಅದರಿಂದಾಗಿ ಭಾರತದ ಪ್ರಗತಿಯ ಸರಿಯಾದ ಸಮೀಕ್ಷೆ ಮಾಡಲು ಸಾಧ್ಯ ಆಗಲಿಲ್ಲ. ಆದರೆ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ, ಉದ್ಯಮಶೀಲತೆಯ ರಂಗಗಳನ್ನು ಪರಿಗಣಿಸಿದಾಗ ಭಾರತವು ವಿಶ್ವ ಗುರು ಆಗುವ ಕಡೆಗೆ ವೇಗವಾಗಿ ಓಡುತ್ತ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವಳಿ ಹೆಚ್ಚಾಗಿದೆ. ‘ಮೇಡ್ ಇನ್ ಇಂಡಿಯಾ’ ಇಂದು ಬಹಳ ದೊಡ್ಡ ಬ್ರಾಂಡ್ ಆಗಿ ಹೊರಹೊಮ್ಮುತ್ತಿದೆ.

ಈ ಕೆಳಗಿನ ಏಳು ಅಂಶಗಳು ಭಾರತದ ಪ್ರಭಾವಳಿಯನ್ನು ಎತ್ತರಿಸಿದವು! ಒಮ್ಮೆ ಓದಿ.

1) ಭಾರತೀಯರ ಭಾಷಾ ಜ್ಞಾನದ ವೈಭವ!
ಭಾರತೀಯರು ಯಾವುದೇ ಭಾಷೆಯನ್ನು ಸುಲಭವಾಗಿ ಕಲಿಯಬಲ್ಲರು. ಅದಕ್ಕೆ ನಮ್ಮ ಜೀನ್ ಮೂಲಕ ಹರಿದು ಬಂದ ಸಂಸ್ಕೃತ ಭಾಷೆಯು ಕಾರಣ ಆಗಿರಬಹುದು. ಭಾರತೀಯ ಯುವಜನತೆಯ ಭಾಷಾಜ್ಞಾನವು ಅನುಪಮ ಆಗಿದೆ. ಇಂದು ಜರ್ಮನ್, ಚೈನೀಸ್, ಇಟಾಲಿಯನ್, ರಷ್ಯನ್ ಭಾಷೆಯ ಅಧ್ಯಯನ ಮತ್ತು ಭಾಷಾಂತರ ವಿಭಾಗಗಳಲ್ಲಿ ಭಾರತೀಯರೇ ಮುಂದಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು, ಅಂದರೆ 3500 ಜೀವಂತ ಆದ ಭಾಷೆಗಳು ಇವೆ! ಈ ಭಾಷೆಗಳೇ ನಮ್ಮ ಸಂಸ್ಕೃತಿಯ ಕೊಂಡಿಗಳಾಗಿ ಮುಂದುವರಿದವು.

2) ಭಾರತೀಯ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿ!
ಅಂದಾಜು ಎರಡು ಶತಮಾನಗಳ ಬ್ರಿಟಿಷರ ಆಳ್ವಿಕೆಯು ಭಾರತದ ಒಂದಷ್ಟು ಸಂಸ್ಕೃತಿಯನ್ನು ನಾಶ ಮಾಡಿದರೂ ಆ ಬ್ರಿಟಿಷ್ ಆಳ್ವಿಕೆಯ ಅವಧಿಯು ಭಾರತದ ನಿಜವಾದ ಅಂತಃಸತ್ವವನ್ನು ಸಶಕ್ತವಾಗಿ ಹೊರತಂದಿತು. ಮುಂದೆ ಬಂದ ಸುದೀರ್ಘ ಸರಕಾರಗಳು ಈ ಅಂತಃಸತ್ವವನ್ನು ಉದ್ದೀಪನ ಮಾಡಿ ಶಿಕ್ಷಣದ ಮೂಲಕ ಅದನ್ನು ಮಾರ್ಕೆಟ್ ಮಾಡಿದ್ದರೆ ಭಾರತವು ಇಪ್ಪತ್ತು ವರ್ಷಗಳ ಹಿಂದೆಯೇ ʻವಿಶ್ವಗುರುʼ ಆಗಿಬಿಡುತ್ತಿತ್ತು. ಆದರೂ ನಿಜವಾದ ಸ್ವಾತಂತ್ರ್ಯದ ಕಿಡಿಗಳಾದ ನೇತಾಜಿ, ಭಗತ್ ಸಿಂಗ್, ತಿಲಕ್, ಸಾವರ್ಕರ್ ಮೊದಲಾದವರು ಆಗಾಗ ಪ್ರಕಾಶಕ್ಕೆ ಬರುತ್ತಲೇ ಇದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ದೇಶದ ಐಕಾನ್ ಆಗುವ ದಿನ ಹತ್ತಿರ ಬರುತ್ತಿದೆ ಅನ್ನಿಸುತ್ತಿದೆ.

3) ಐಟಿ ಕಂಪನಿಗಳ ಮೂಲಕ ಕ್ರಿಯೇಟ್ ಆಗಿರುವ ಉದ್ಯೋಗಾವಕಾಶಗಳು!
1990ರ ವರೆಗೆ ಭಾರತೀಯ ಯುವಕರು ನಾಲ್ಕು ಅಂಕೆಯ ಸಂಬಳ ಪಡೆಯಲು ಕಷ್ಟ ಪಡುತ್ತಿದ್ದರು. ಆದರೆ ಯಾವಾಗ ಗ್ಯಾಟ್ ಒಪ್ಪಂದದ ಫಲಶ್ರುತಿ ಆಗಿ ಭಾರತಕ್ಕೆ ಜಾಗತಿಕ ಮಟ್ಟದ ಐಟಿ, ಬಿಟಿ ಕಂಪೆನಿಗಳು ಬರಲು ಆರಂಭ ಆಯಿತೋ ಭಾರತದ ಯುವಕ ಯುವತಿಯರು ಕೈತುಂಬಾ ಸಂಬಳ ಪಡೆಯುವಂತಾಯಿತು. ಈ ಉದ್ಯೋಗಗಳನ್ನು ಪಡೆಯಲು ಸ್ಪರ್ಧೆ ಹೆಚ್ಚಾಗಿದ್ದ ಕಾರಣ ನಮ್ಮ ಯುವಜನತೆಯು ಹೆಚ್ಚು ಅಧ್ಯಯನದಲ್ಲಿ ಫೋಕಸ್ ಆದರು. ನಾವು ವಿದ್ಯಾರ್ಥಿ ಆಗಿದ್ದಾಗ ವರ್ಷಕ್ಕೆ ಕನಿಷ್ಠ ಹತ್ತು ಬಾರಿ ವಿದ್ಯಾರ್ಥಿಗಳು ಕ್ಲಾಸ್ ತೊರೆದು ಬೀದಿಗೆ ಇಳಿದು ಪ್ರತಿಭಟನೆ, ಸ್ಟ್ರೈಕ್ ಮಾಡುತಿದ್ದರು. ಈಗ ಒಳ್ಳೆ ಕಾರಣಕ್ಕೆ ಒಂದೇ ಒಂದು ಯಾವುದೇ ಕಾಲೇಜಿನಲ್ಲಿ ಸ್ಟ್ರೈಕ್ ಆದ ವರದಿಗಳು ಬಂದಿವೆಯಾ? ಭಾರತದ ಯುವಜನತೆ ಇಂದು ಶಿಕ್ಷಣವನ್ನು ಹೆಚ್ಚು ಆದ್ಯತೆಯಾಗಿ ತೆಗೆದುಕೊಳ್ಳುತ್ತಿದ್ದಾರೆ.

4) ತಂತ್ರಜ್ಞಾನ ಮತ್ತು ವೈಜ್ಞಾನಿಕ ಬೆಳವಣಿಗೆಯಲ್ಲಿ ಅಗ್ರಣಿ ಭಾರತ!
ಒಂದು ಕಾಲದಲ್ಲಿ ಚೀನಾ, ಜಪಾನ್ ದೇಶಗಳ ಉತ್ಪನ್ನಗಳು ಜಾಗತಿಕ ಮಾರ್ಕೆಟನ್ನು ಆಳುತ್ತಿದ್ದವು. ಕ್ರಮೇಣ ಚೈನಾ ಉತ್ಪನ್ನಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡವು. ಭಾರತೀಯ ಉತ್ಪನ್ನಗಳು ಇಂದು ಜಪಾನ್ ಉತ್ಪನ್ನಗಳಿಗೆ ನೇರ ಸವಾಲು ಒಡ್ಡುತ್ತಿವೆ. ಪರಿಣಾಮವಾಗಿ ಭಾರತೀಯರಲ್ಲಿ ಸ್ವದೇಶಿ ಜಾಗೃತಿ ಮತ್ತೆ ಆರಂಭ ಆಗಿದೆ ಎಂಬುದನ್ನು ಗಮನಿಸಿ. ಮಂಗಳಯಾನವನ್ನು ಕೈಗೊಂಡ ಮೊದಲ ರಾಷ್ಟ್ರ ಭಾರತ ಎಂಬಲ್ಲಿಗೆ ಮತ್ತು ಭಾರತ ನಿರ್ಮಿತ ಉಪಗ್ರಹಗಳನ್ನು ಭಾರತದಲ್ಲಿಯೇ ಉಡಾವಣೆ ಮಾಡುತ್ತಿದ್ದೇವೆ ಎಂಬಲ್ಲಿಗೆ ಭಾರತ ವೈಜ್ಞಾನಿಕ ರಂಗದಲ್ಲಿ ದಾಪುಗಾಲು ಇಟ್ಟು ಮುಂದೆ ಹೋಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಬಹುದು.

5) ಮತ್ತೆ ಸಾಂಸ್ಕೃತಿಕ ಪರಾಕಾಷ್ಠೆಯ ಕಡೆಗೆ ಯುವಜನತೆ
‘ಬ್ಯಾಕ್ ಟು ರೂಟ್ಸ್’ ಅನ್ನುವುದು ಜನಪ್ರಿಯ ನಂಬಿಕೆ. ಅದರ ಪ್ರಕಾರ ನಮ್ಮ ಯುವಜನತೆಯು ನಮ್ಮ ಸಾಂಸ್ಕೃತಿಕ ಅಸ್ಮಿತೆಗಳ ಕಡೆಗೆ ಮರಳುತ್ತಿರುವುದು ಅಚ್ಚರಿಯ ಬೆಳವಣಿಗೆ! ಇಂದು ಭಾರತೀಯ ಸಂಗೀತ, ಭಾರತೀಯ ನೃತ್ಯ ಪ್ರಕಾರ, ಭಾರತೀಯ ಜಾನಪದ ಎಲ್ಲ ವಿಭಾಗಗಳಲ್ಲಿ ಯುವ ಸಾಧಕರು ಇದ್ದಾರೆ. ಶಾಸ್ತ್ರೀಯ ಸಂಗೀತದ ತರಗತಿಗಳು ಯುವಜನತೆಯಿಂದ ಭರ್ತಿ ಆಗುತ್ತಿವೆ. ಎಷ್ಟೋ ಯುವಕ ಯುವತಿಯರು ತಮ್ಮ ಐಟಿ ಉದ್ಯೋಗಗಳಿಗೆ ರಾಜೀನಾಮೆ ಕೊಟ್ಟು ಕ್ಲಾಸಿಕಲ್ ಪರ್ಫಾರ್ಮಿಂಗ್ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕ್ಲಾಸಿಕಲ್ ಸಂಗೀತ ಮತ್ತು ನೃತ್ಯಗಳ ಕಾರ್ಯಕ್ರಮಕ್ಕೆ ಮೊದಲು ತುಂಬ ಪ್ರಾಯದವರು ಬರ್ತಾ ಇದ್ದರು. ಈಗ ಮುಕ್ಕಾಲು ಸಭಾಂಗಣ ಯುವಜನತೆಯಿಂದ ತುಂಬಿರುತ್ತದೆ. ಕರಾವಳಿಯಲ್ಲಿ ಸಾವಿರಾರು ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಯಕ್ಷಗಾನವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡುತ್ತಿದ್ದಾರೆ! ಇವೆಲ್ಲವೂ ಸಾಂಸ್ಕೃತಿಕ ಜಾಗೃತಿಯ ಅಸ್ಮಿತೆಗಳು.

6) ಬಲವಾಗುತ್ತಿದೆ ಡೆಮಾಕ್ರಸಿ – ಯುವಜನತೆ ರಾಜಕೀಯದತ್ತ!
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದಾಗ ನನಗೆ ಭಾರತದ ಯುವಜನತೆಯಲ್ಲಿ ನಂಬಿಕೆ ಇದೆ ಎಂದಿದ್ದರು! ಆದರೆ ಮುಂದೆ ದೇಶದಲ್ಲಿ ಮತ್ತು ರಾಜ್ಯಗಳಲ್ಲಿ ಅಸ್ಥಿರ ಸರಕಾರಗಳು ಬಂದಾಗ ರಾಜೀವ್ ಅವರ ನಂಬಿಕೆ ಸುಳ್ಳು ಆಯ್ತಾ ಎಂಬ ಯೋಚನೆ ಬಂದಿತ್ತು. ಆದರೆ ಮುಂದೆ ಎಲ್ಲವೂ ತಿಳಿ ಆಯಿತು. ಐದು ವರ್ಷಗಳ ಪೂರ್ಣಾವಧಿಯ ಸರಕಾರಗಳು ಬಂದವು. ಸಮ್ಮಿಶ್ರ ಸರ್ಕಾರಗಳು ಕೂಡ ಉತ್ತಮ ಆಡಳಿತ ನಡೆಸಿದವು. ಅದಕ್ಕಿಂತ ಹೆಚ್ಚಾಗಿ ರಾಜಕೀಯ ಕ್ಷೇತ್ರವನ್ನು ಹೇಸಿಗೆ ಎನ್ನುತ್ತಿದ್ದ ಯುವಜನತೆಯು ಇಂದು ರಾಜಕೀಯ ಕ್ಷೇತ್ರಕ್ಕೆ ಸ್ವಯಂ ಆಸಕ್ತಿಯಿಂದ ಬರುತ್ತಿದ್ದಾರೆ. ವಿದ್ಯಾವಂತರು ಬರುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳು ಕೆಲವು ಕಡೆ ಭ್ರಷ್ಟ ಅನ್ನಿಸಿದರೂ ಇನ್ನೊಂದೆಡೆ ರಾಜ್ಯದ ಮುಖ್ಯಮಂತ್ರಿಗಳು ಕೂಡ ಆರೋಪಿತರಾಗಿ ಸೆರೆಮನೆಗೆ ಹೋಗುವ ಉದಾಹರಣೆಗಳು ಕಣ್ಣ ಮುಂದೆ ಇವೆ. ಇವೆಲ್ಲವೂ ಡೆಮಾಕ್ರಸಿ ಮತ್ತೆ ಎದ್ದು ಬರುವ ಲಕ್ಷಣಗಳು! ಅದರ ಜೊತೆಗೆ ಭಾರತದ ಪಾರ್ಲಿಮೆಂಟನಲ್ಲಿ 50% ಯುವಜನತೆ ಕಾಣಿಸುವ ದಿನಕ್ಕಾಗಿ ನಾನು ಕಾಯುತ್ತ ಇದ್ದೇನೆ.

7) ಭಾರತೀಯ ಮೌಲ್ಯಗಳು ಮತ್ತೆ ಮುನ್ನೆಲೆಗೆ!
ದಾನ ಸಂಸ್ಕೃತಿಯ ಭಾರತದಲ್ಲಿ ಇಂದು ರಕ್ತದಾನ, ನೇತ್ರದಾನ, ದೇಹದಾನ ಮೊದಲಾದವುಗಳ ಬಗ್ಗೆ ಅರಿವು ಹೆಚ್ಚಾಗುತ್ತಿದೆ ಮತ್ತು ಯುವಜನತೆ ಈ ಕಡೆಗೆ ಒಲವು ತೋರುತ್ತಿದ್ದಾರೆ. ಒಂದು ಕಡೆ ಕೌಟುಂಬಿಕ ವ್ಯವಸ್ಥೆ ಶಿಥಿಲ ಆಗುತ್ತಾ ಇದೆ ಎಂಬ ಆತಂಕವಾದರೆ ಮತ್ತೊಂದೆಡೆ ನಮ್ಮ ಯುವಜನತೆ ನಿಧಾನವಾಗಿ ತಮ್ಮ ಮೂಲ, ಕುಟುಂಬ, ದೇವರು, ದೈವಗಳ ಕಡೆಗೆ ಹುಡುಕಿಕೊಂಡು ಬರುತ್ತಿದ್ದಾರೆ. ಕಾಂತಾರದಂತಹ ಸಿನೆಮಾಗಳು ಹಿಟ್ ಆಗುತ್ತಿವೆ. ವಿದೇಶದ ಹುದ್ದೆಗಳಿಗೆ ರಾಜೀನಾಮೆ ನೀಡಿ ಭಾರತಕ್ಕೆ ಬಂದು ಕೃಷಿ ಮಾಡುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತೀಯ ಯೋಗ ಇಂದು ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಂಡಾಗಿದೆ. ಕಂಪ್ಯೂಟರ್ ಸಾಫ್ಟವೇರ್‌ಗೆ ಸಂಸ್ಕೃತವು ಹೆಚ್ಚು ಸೂಟ್ ಆಗ್ತದೆ ಎಂದು ವಿದೇಶದ ಪತ್ರಿಕೆಗಳು ಒಪ್ಪಿಕೊಂಡಿವೆ. ಆಯುರ್ವೇದದ ಕಡೆಗೆ ನಿಧಾನವಾಗಿ ಭಾರತದ ಒಲವು ಹೆಚ್ಚುತ್ತಿದೆ. ಸಾವಯವ ಕೃಷಿ, ಭಾರತೀಯ ಉತ್ಪನ್ನಗಳ ಕಡೆಗೆ ಭಾರತೀಯ ಯುವಜನತೆ ಮರಳುತ್ತಿರುವುದು ಆಶಾದಾಯಕ ಬೆಳವಣಿಗೆ. ಶಾಲೆಗಳನ್ನು, ಆಸ್ಪತ್ರೆಗಳನ್ನು ಕಟ್ಟುವ ದಾನಿಗಳು ಹೆಚ್ಚುತ್ತಿದ್ದಾರೆ ಮತ್ತು ಈ ದಾನಿಗಳಲ್ಲಿ ಯುವಜನತೆಯ ಸಂಖ್ಯೆ ಹೆಚ್ಚಾಗುತ್ತಿದೆ.

ಇವೆಲ್ಲವನ್ನೂ ಅವಲೋಕನ ಮಾಡಿದಾಗ ಭಾರತಕ್ಕೆ ‘ಶುಭಂ ಭೂಯಾತ್’ ಎಂದು ಹೇಳಬಹುದು ಅಲ್ಲವೇ? ಹಾಗೆಯೇ ಅದಕ್ಕೆ ಕಾರಣ ಆಗುತ್ತಿರುವ ಯುವಜನತೆಗೆ ಒಂದು ಸೆಲ್ಯೂಟ್ ಕೂಡ ಹೇಳಬಹುದು ತಾನೇ?

ಇದನ್ನೂ ಓದಿ | ರಾಜ ಮಾರ್ಗ ಅಂಕಣ | Incredible: ಜಗತ್ತಿನ 50 ನಂಬಲಸಾಧ್ಯ ರೋಮಾಂಚಕ ಸಂಗತಿಗಳು!

Exit mobile version