Site icon Vistara News

ರಾಜ ಮಾರ್ಗ ಅಂಕಣ: ಕ್ರಿಕೆಟ್‌ನಲ್ಲಿ ಮೊದಲ ವಿಶ್ವಕಪ್‌ ಗೆದ್ದ ಐತಿಹಾಸಿಕ ಘಟನೆಗೆ 40 ವರ್ಷ!

Kapil Dev

I Wasn't Invited For ICC World Cup 2023 Final: Claims Kapil Dev

1983- ಜೂನ್ 25 ಭಾರತ ಕ್ರಿಕೆಟ್ ತಂಡ (Indian cricket team) ಇತಿಹಾಸ ಬರೆದಿತ್ತು! ನನಗೆ ಈ ದೃಶ್ಯವು ಕೊಟ್ಟಷ್ಟು ಪ್ರೇರಣೆಯನ್ನು ಬೇರೆ ಯಾವುದೂ ಕೊಡಲು ಸಾಧ್ಯವೇ ಇಲ್ಲ. ಕಾರ್ಕಳದ ನಮ್ಮ ಮನೆಯ ಜಗಲಿಯಲ್ಲಿ ನಾವು ಒಂದಿಷ್ಟು ಗೆಳೆಯರು ಕಿವಿಗೆ ಪುಟ್ಟ ರೇಡಿಯೋ ಹಚ್ಚಿ ವೀಕ್ಷಕ ವಿವರಣೆ ಕೇಳಿದ ನೆನಪು ಮರೆತು ಹೋಗುವುದಿಲ್ಲ! ಭಾರತ ಗೆದ್ದಾಗ (India wins cricket world cup in 1983) ಮಧ್ಯರಾತ್ರಿಯ ಹೊತ್ತು ಎಲ್ಲರೂ ಸೇರಿ ಒಂದಿಷ್ಟು ದುಡ್ಡನ್ನು ಒಟ್ಟು ಮಾಡಿ ಕಾರ್ಕಳದ ಪಟಾಕಿ ಅಂಗಡಿಯವರನ್ನು ಎಬ್ಬಿಸಿ ಪಟಾಕಿ ತಂದು ರಸ್ತೆಯುದ್ದಕ್ಕೂ ಸಿಡಿಸಿದ ಸಂಭ್ರಮ (ರಾಜ ಮಾರ್ಗ ಅಂಕಣ) ಮರೆಯಲು ಸಾಧ್ಯವೇ ಇಲ್ಲ!

ಆ ಘಟನೆ ನಡೆಯದೆ ಹೋಗಿದ್ದರೆ!

ಭಾರತ ಲಿಫ್ಟ್ ಮಾಡಿದ ಮೊತ್ತ ಮೊದಲ ಕ್ರಿಕೆಟ್ ವಿಶ್ವಕಪ್ ಟ್ರೋಫಿ (Cricket world cup) ಅದು! ಅದರಿಂದಾಗಿ ಮುಂದೆ ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಥೆ ಆಯಿತು. ಭಾರತದ ಕ್ರಿಕೆಟಿಗರು ಶ್ರೀಮಂತ ಆದರು! ಸಚಿನ್, ವಿರಾಟ್, ಕುಂಬ್ಳೆ, ಜಾವಗಲ್ ಶ್ರೀನಾಥ್, ಧೋನಿ, ಯುವರಾಜ್, ಸೆಹವಾಗ್, ರೋಹಿತ್ ಶರ್ಮಾ, ದ್ರಾವಿಡ್, ಗಂಗೂಲಿ, ಗಂಭೀರ್ ಮೊದಲಾದ ತಾರಾ ಮೌಲ್ಯದ ನೂರಾರು ಆಟಗಾರರು ಮುಂದೆ ಭಾರತದಲ್ಲಿ ಮೆರೆಯಲು ಆ ಘಟನೆಯು ಕಾರಣ ಆಯಿತು.

ಎಲ್ಲಕ್ಕಿಂತ ಮುಖ್ಯವಾಗಿ ಅಂದು ಕಪಿಲ್ (cricketer Kapil dev) ಹುಡುಗರು ಗೆಲ್ಲದೇ ಹೋಗಿದ್ದರೆ ಐಪಿಎಲ್ ಪಂದ್ಯಾಟವು ಭಾರತದಲ್ಲಿ ಆರಂಭ ಆಗುತ್ತಲೇ ಇರಲಿಲ್ಲ! ಇನ್ನೂ ಪ್ರಮುಖವಾಗಿ ಹೇಳಬೇಕೆಂದರೆ ಅಂದು ಆ ಘಟನೆ ನಡೆಯದೆ ಹೋದರೆ ಭಾರತದಲ್ಲಿ ಕ್ರಿಕೆಟ್ ‘ಒಂದು ಧರ್ಮ’ ಆಗುತ್ತಲೇ ಇರಲಿಲ್ಲ!

ಆ ಟೂರ್ನಿಯು ಆರಂಭ ಆಗುವ ಮೊದಲು ಭಾರತ ಅಂಡರ್ ಡಾಗ್ ಆಗಿತ್ತು!

1983ರ ವಿಶ್ವಕಪ್ ಆರಂಭ ಆಗುವ ಮೊದಲು ಭಾರತ ತಂಡದ ಮೇಲೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಕಾರಣ ಹಿಂದಿನ ಎರಡು ವಿಶ್ವಕಪ್ ಪಂದ್ಯಗಳಲ್ಲಿ ನಮ್ಮ ಭಾರತದ ನಿರ್ವಹಣೆಯು ತುಂಬಾನೇ ಕಳಪೆ ಆಗಿತ್ತು. ಭಾರತೀಯ ಆಟಗಾರರು ಟೆಸ್ಟ್ ಮಾದರಿಯ ಡಿಫೆನ್ಸಿವ್ ಆದ ಮೈಂಡ್ ಸೆಟ್‌ನಿಂದ ಹೊರಬರಲು ಕಷ್ಟ ಪಡುತ್ತಿದ್ದರು!

ಮತ್ತೊಂದು ಕಡೆ ಬಲಿಷ್ಠ ವೆಸ್ಟ್ ಇಂಡೀಸ್ ಹಿಂದಿನ ಎರಡೂ ವಿಶ್ವಕಪ್ ಟ್ರೋಫಿಗಳನ್ನು ಎತ್ತಿ ಹಿಡಿದ ಕೀರ್ತಿ ಪಡೆದಿತ್ತು. ಹೆಚ್ಚು ಕಡಿಮೆ ಅದೇ ಸ್ಟಾರ್ ಆಟಗಾರರು ಆ ತಂಡದಲ್ಲಿ ಇದ್ದರು. ಕ್ಲೈವ್ ಲಾಯ್ಡ್ ಎಂಬ ಬಲಾಢ್ಯ ಕ್ಯಾಪ್ಟನ್ ಕಟ್ಟಿದ ತಂಡ ಅದು. ಜಗತ್ತಿನ ಅತ್ಯಂತ ಶ್ರೇಷ್ಠ ವೇಗದ ಬೌಲರ್‌ಗಳು ಮತ್ತು ಬ್ಯಾಟಿಂಗ್ ಡೈನಾಸಾರ್‌ಗಳು ಅವರ ತಂಡದಲ್ಲಿ ಇದ್ದರು!

ಭಾರತ ತಂಡಕ್ಕೆ ಹೊಸ ಕ್ಯಾಪ್ಟನ್ ಕಪಿಲ್‌ ದೇವ್ ಸಾರಥ್ಯ! ಯಾವ ಆಟಗಾರನಿಗೂ ಸ್ಟಾರ್ ವ್ಯಾಲ್ಯೂ ಇರಲಿಲ್ಲ. ಆದರೆ ಹೆಚ್ಚಿನವರು ಆಲ್ರೌಂಡರ್ ಆಟಗಾರರು. ಫೈಟಿಂಗ್ ಸ್ಪಿರಿಟ್ ಇದ್ದವರು. ಆದರೆ…

1983ರ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಆಡಿದ ಭಾರತ ತಂಡ

ಕಪಿಲ್ ನಾಯಕತ್ವವೇ ಅದ್ಭುತ!

ತನ್ನ ಯುವ ಪಡೆಯನ್ನು ಇಂಗ್ಲೆಂಡ್‌ಗೆ ತಂದು ಇಳಿಸಿದಾಗ ಕಪಿಲ್ ದೇವ್ ಹೇಳಿದ ಮಾತು ತುಂಬಾ ಪ್ರೆರಣಾದಾಯಿ ಆಗಿತ್ತು: “ನನ್ನ ಹುಡುಗರೇ. ನಮ್ಮ ತಂಡದ ಮೇಲೆ ಯಾರಿಗೆ ಕೂಡ ದೊಡ್ಡ ನಿರೀಕ್ಷೆ ಇಲ್ಲ. ಸೋತರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ! ಆದರೆ ವೆಸ್ಟ್ಇಂಡೀಸ್ ಚಾಂಪಿಯನ್ ತಂಡ. ಅವರಿಗೆ ಟ್ರೋಫಿ ಉಳಿಸಿಕೊಳ್ಳುವ ಒತ್ತಡ ಇದೆ. ಅದೇ ನಮಗೆ ಈ ಬಾರಿ ಬಂಡವಾಳ ಆಗಬೇಕು!” ಎಂದಿದ್ದರು.

ಅದೇ ನಮ್ಮ ತಂಡಕ್ಕೆ ಟಾನಿಕ್ ಆಗಿತ್ತು. ಇಡೀ ವಿಶ್ವಕಪ್ ಟೂರ್ನಿಯಲ್ಲಿ ಕಪಿಲ್‌ ದೇವ್ ಅವರ ಸ್ಫೂರ್ತಿಯುತವಾದ ನಾಯಕತ್ವವೇ ಭಾರತವನ್ನು ಗೆಲ್ಲಿಸಿದ್ದು ಎಂದು ಖಚಿತವಾಗಿ ಹೇಳಬಹುದು.

ಮರೆಯಲಾಗದ ಜಿಂಬಾಬ್ವೆ ಪಂದ್ಯ!

ಆ ಟೂರ್ನಿಯಲ್ಲಿ ಇದ್ದ ತಂಡಗಳು ಒಟ್ಟು ಎಂಟು. ಅದರಲ್ಲಿ ದುರ್ಬಲ ತಂಡ ಅಂದರೆ ಜಿಂಬಾಬ್ವೆ. ಆದರೆ ಭಾರತಕ್ಕೆ ಆ ಜಿಂಬಾಬ್ವೆ ವಿರುದ್ಧದ ಪಂದ್ಯವೇ ಬಿಸಿ ತುಪ್ಪ ಆಯಿತು.

ಮೊದಲು ಬ್ಯಾಟ್ ಮಾಡಿದ ಭಾರತ ಒಂದು ಹಂತದಲ್ಲಿ 17 ರನ್ನಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು! ಉಳಿದವರು ಕೇವಲ ಮತ್ತು ಕೇವಲ ಬಾಲಂಗೋಚಿಗಳು. ಆಗ ಬ್ಯಾಟ್ ಹಿಡಿದು ಬಂದ ಕಪಿಲ್ ದೇವ್ ಮೈಯ್ಯಲ್ಲಿ ಅಂದು ಆವೇಶ ಬಂದ ಹಾಗಿತ್ತು!

ಮೈದಾನದ ಎಲ್ಲ ಕಡೆ ಚೆಂಡನ್ನು ಡ್ರೈವ್ ಮಾಡುತ್ತಾ ಕಪಿಲ್ ಅಂದು ಗಳಿಸಿದ್ದು ಅಜೇಯ 175 ರನ್! 16 ಬೌಂಡರಿಗಳು ಮತ್ತು 6 ಮನಮೋಹಕ ಸಿಕ್ಸರ್‌ಗಳು! ಅಂದು ಭಾರತ ಸೋತಿದ್ದರೆ ಭಾರತಕ್ಕೆ ಗಂಟು ಮೂಟೆ ಕಟ್ಟಬೇಕಾಗಿತ್ತು! ಆದರೆ ತನ್ನ ವಿರೋಚಿತ ಇನ್ನಿಂಗ್ಸ್ ಮೂಲಕ ಕಪಿಲದೇವ್ ಭಾರತವನ್ನು ಗೆಲ್ಲಿಸಿದ್ದರು!

ಆಗ ವಿಶ್ವಕಪ್ ಟೂರ್ನಿಯ ಎಲ್ಲಾ ಪಂದ್ಯಗಳು ಟಿವಿಯಲ್ಲಿ ನೇರಪ್ರಸಾರ ಆಗುತ್ತಿದ್ದವು. ಆದರೆ ಜಿಂಬಾಬ್ವೆ ಪಂದ್ಯದ ದಿನ ಬಿಬಿಸಿಯ ಸ್ಟಾಫ್ ಮುಷ್ಕರ ಹೂಡಿದ್ದ ಕಾರಣ ಆ ಪಂದ್ಯದ ವೈಭವ ಮತ್ತು ಕಪಿಲ್ ದೇವ್ ಅವರ ಸಾಹಸವನ್ನು ಕ್ರಿಕೆಟ್ ಜಗತ್ತು ನೋಡಲು ಸಾಧ್ಯ ಆಗಲಿಲ್ಲ!

ಸೆಮಿಫೈನಲ್ ಪಂದ್ಯಗಳು!

ಒಂದು ಕಡೆ ವಿಂಡೀಸ್ ನಿರೀಕ್ಷೆ ಮಾಡಿದ ಹಾಗೆ ಪಾಕ್ ತಂಡವನ್ನು ಸೋಲಿಸಿ ಫೈನಲ್ ಟಿಕೆಟ್ ಪಡೆಯಿತು. ಮತ್ತೊಂದು ಕಡೆ ಭಾರತ ತಂಡವು ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡವನ್ನು ಅವರದೇ ನೆಲದಲ್ಲಿ ಆರು ವಿಕೆಟಗಳ ಅಂತರದಲ್ಲಿ ಬಗ್ಗು ಬಡಿದು ಫೈನಲ್ ಪ್ರವೇಶ ಪಡೆಯಿತು.‌ ವಿಂಡೀಸ್ ತಂಡಕ್ಕೆ ಅದು ಮೂರನೇ ಫೈನಲ್. ಭಾರತಕ್ಕೆ ಅದು ಚೊಚ್ಚಲ ಫೈನಲ್!

1983ರ ಜೂನ್ 25ರಂದು ಏನಾಯಿತು?

ಅದು “ಕ್ರಿಕೆಟ್ ಸ್ವರ್ಗ”ಎಂದು ಕರೆಸಿಕೊಂಡಿದ್ದ ಲಾರ್ಡ್ಸ್ ಮೈದಾನ! ಅಂದು ಇಡೀ ಮೈದಾನದ ತುಂಬಾ ವಿಂಡೀಸ್ ಬೆಂಬಲಿಗರು ತುಂಬಿದ್ದರು. ಭಾರತದ ಬೆಂಬಲಿಗರು 10% ಕೂಡ ಇರಲಿಲ್ಲ. ಭಾರತ ಟ್ರೋಫಿ ಗೆಲ್ಲುವ ಭರವಸೆಯು ಭಾರತೀಯರಿಗೇ ಇರಲಿಲ್ಲ!

ಆ ಟೂರ್ನಿಯಲ್ಲಿ ನಡೆದ ಪ್ರತೀ ಪಂದ್ಯವೂ 60 ಓವರ್ ಪಂದ್ಯ ಆಗಿತ್ತು. ಟಾಸ್ ಗೆದ್ದ ವಿಂಡೀಸ್ ಭಾರತವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನ ಮಾಡಿತು. ಭಾರತ ಕುಂಟುತ್ತ ಕುಂಟುತ್ತ 183 ರನ್ ಮಾಡಿತು. ಶ್ರೀಕಾಂತ್ 38 ಮಾಡಿದ್ದೇ ಗರಿಷ್ಠ ಸ್ಕೋರ್. ಸಂದೀಪ್ ಪಾಟೀಲ್ ಮತ್ತು ಮೋಹಿಂದರ್ ಅಮರನಾಥ್ ತಕ್ಕಮಟ್ಟಿಗೆ ಆಡಿದರು.

ಅದಕ್ಕೆ ಕಾರಣ ವಿಂಡೀಸ್ ತಂಡದ ವೇಗದ ಬೌಲಿಂಗ್ ಬ್ಯಾಟರಿ. ಆಂಡಿ ರಾಬರ್ಟ್ಸ್, ಮಾಲ್ಕಮ್ ಮಾರ್ಷಲ್, ದೈತ್ಯ ಜಾಯಲ್ ಗಾರ್ನರ್, ಲಾರಿ ಗೋಮ್ಸ್ ಇವರೆಲ್ಲರೂ ಅಂದು ಭಾರತೀಯ ತಂಡವನ್ನು ಕಟ್ಟಿ ಹಾಕಿದ್ದರು!

ವಿಂಡೀಸ್‌ ತಂಡ ದೈತ್ಯ ಆರಂಭಿಕ ಆಟಗಾರರಾದ ಗಾರ್ಡನ್ ಗ್ರಿನೀಜ್ ಮತ್ತು ಡೆಸ್ಮಂಡ್ ಹೇನ್ಸ್ ಆ ಕಾಲಕ್ಕೆ ವಿಶ್ವದಾಖಲೆ ಹೊಂದಿದ್ದವರು. ಗ್ರೀನೀಜ್ ಕ್ರೀಸಿಗೆ ಹೋಗುವಾಗ ತನ್ನ ತಂಡದ ಇತರ ಸಹ ಆಟಗಾರರಿಗೆ ‘ನೀವು ಪ್ಯಾಡ್ ಕಟ್ಟುವ ಅಗತ್ಯವೇ ಇಲ್ಲ. ನಾವಿಬ್ಬರೇ ಮ್ಯಾಚನ್ನು ಗೆಲ್ಲಿಸಿ ಬರುತ್ತೇವೆ’ ಎಂದು ಹೇಳಿ ಕ್ರೀಸಿಗೆ ಬಂದಿದ್ದ!

ಆದರೆ ಭಾರತದ ಯುವ ಬೌಲರ್‌ಗಳು ಅಂದು ಅದ್ಭುತವನ್ನೇ ಮಾಡಿದರು. ಮೊದಲ ವಿಕೆಟ್ ಅಗ್ಗದಲ್ಲಿ ಉರುಳಿದಾಗ ಭಾರವಾದ ಬ್ಯಾಟ್ ಹಿಡಿದು ಕ್ರೀಸಿಗೆ ಬಂದವನು ವಿಂಡೀಸ್ ಬ್ಯಾಟಿಂಗ್ ಲೆಜೆಂಡ್ ವಿವ್ ರಿಚರ್ಡ್ಸ್!

ನಿರಂತರ ಬೌಂಡರಿಗಳು ಸದ್ದು ಮಾಡಿದಾಗ ವಿಂಡೀಸ್ ಮೂರನೇ ಟ್ರೋಫಿ ಎತ್ತಿ ಬಿಟ್ಟಿತ್ತು ಅನ್ನಿಸಲು ತೊಡಗಿತ್ತು! ಆದರೆ ಕಪಿಲ್ ದೇವ್ ಸುಮಾರು 30 ಹೆಜ್ಜೆ ಹಿಂದಕ್ಕೆ ಓಡಿ ಹಿಡಿದ ಒಂದು ಕ್ಯಾಚ್ ವಿವ್ ರಿಚರ್ಡ್ಸ್ ಕತೆ ಮುಗಿಸಿತು!

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಬಾರ್‌ ಡ್ಯಾನ್ಸರ್‌ to ಕಥೆಗಾರ್ತಿ; ಲೇಖಕಿ ಶಗುಫ್ತ ರಫೀಕ್ ಬರ್ಬಾದಿ ಬದುಕಿನ ರೋಚಕ ಕಥೆ!

ಅಲ್ಲಿಂದ ಮುಂದೆ ನಡೆದದ್ದು ಭಾರತದ್ದೇ ಕಾರುಬಾರು!

ಚಾಂಪಿಯನ್ ವಿಂಡೀಸ್ ತಂಡ 140ಕ್ಕೆ ಆಲೌಟ್! ಭಾರತ ತಂಡಕ್ಕೆ 43 ರನ್ ವಿಜಯ! ಅಂದು ಮದನಲಾಲ್ ಮತ್ತು ಮೋಹಿಂದರ ಅಮರನಾಥ್ ತಲಾ ಮೂರು ವಿಕೆಟ್ ಪಡೆದಿದ್ದರು.

ಟೂರ್ನಿ ಆರಂಭ ಆಗುವ ಮೊದಲು ಅಂಡರ್ ಡಾಗ್ ಎಂದು ಕರೆಸಿಕೊಂಡಿದ್ದ ಭಾರತೀಯ ಯುವ ತಂಡವು ಕ್ರಿಕೆಟ್ ದೈತ್ಯರಾದ ವಿಂಡೀಸ್ ತಂಡವನ್ನು ಲಾರ್ಡ್ಸ್ ಮೈದಾನದಲ್ಲಿ ಹೆಡೆಮುರಿ ಕಟ್ಟಿಬಿಟ್ಟಿತ್ತು! ಇದು ಯಾರೂ ಊಹೆ ಕೂಡ ಮಾಡದ ಗೆಲುವು ಎಂದೇ ಹೇಳಬಹುದು.

ಲಾರ್ಡ್ಸ್ ಮೈದಾನದ ಗ್ಯಾಲರಿಯಲ್ಲಿ ಕಪಿಲ್‌ ದೇವ್ ನೀಲಿ ಬಣ್ಣದ ಬ್ಲೇಜರ್ ಧರಿಸಿ ಪ್ರುಡೆನ್ಶಿಯಲ್ ಕಪ್ ಎತ್ತಿಹಿಡಿದ ಫೋಟೋ ಇಡೀ ಭಾರತೀಯ ಕ್ರಿಕೆಟ್ ರಂಗದ ವೈಭವದ ಮುನ್ಸೂಚನೆ ಆಗಿತ್ತು!

ವಿಶ್ವ ಕಪ್‌ ಗೆದ್ದ ಭಾರತೀಯ ತಂಡಕ್ಕೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅಭಿನಂದನೆ

ಭಾರತಕ್ಕದು ನಿಜವಾಗಿ ಸ್ಫೂರ್ತಿಯ ಸೆಲೆ!

ಭಾರತೀಯ ಹಾಕ್ಕಿ ತಂಡವು ಅದರ ಮೊದಲೇ ಎಂಟು ಬಾರಿ ಒಲಿಂಪಿಕ್ಸ್ ಚಿನ್ನವನ್ನು ಗೆದ್ದ ಸಾಧನೆ ಮಾಡಿ ಆಗಿತ್ತು! ಹಾಕ್ಕಿ ಮಾಂತ್ರಿಕ ಧ್ಯಾನ ಚಂದ್ ಅವರು ಆಗಲೇ ಭಾರತದ ಐಕಾನ್ ಆಗಿದ್ದರು.

ಹಾಗೆಯೇ ಮುಂದೆ ಭಾರತದ ಕ್ರಿಕೆಟ್ ತಂಡವು ಹಲವು ವಿಶ್ವಮಟ್ಟದ ಟ್ರೋಫಿಗಳನ್ನು ಗೆದ್ದಿತು! ಭಾರತೀಯ ಕ್ರಿಕೆಟ್ ತಂಡದಲ್ಲಿ ಮಹಾ ಮಹಾ ಆಟಗಾರರು ಬಂದರು. ಆದರೆ ಆ ಚೊಚ್ಚಲ ವಿಶ್ವಕಪ್ ವಿಜಯವು ಭಾರತಕ್ಕೆ ಒಂದು ಚಿನ್ನದ ಪ್ರಭಾವಳಿ! ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದು ನಮಗೆಲ್ಲ ಸ್ಮರಣೀಯ!

ಅದರ ಪೂರ್ತಿ ಶ್ರೇಯಸ್ಸು ಕಪಿಲ್ ದೇವ್ ಮತ್ತು ಅವರ ಹುಡುಗರಿಗೆ ಸಲ್ಲಬೇಕು.

Exit mobile version