1936 ಬರ್ಲಿನ್ ಒಲಿಂಪಿಕ್ಸ್ ಕೂಟ ಆರಂಭ ಆಗಿತ್ತು! ಹಿಟ್ಲರ್ನ ಸರ್ವಾಧಿಕಾರದ ಶಿಖರ ಬಿಂದುವಿನ ಕಾಲ ಅದು! ಅಮೇರಿಕಾವನ್ನು ನಖಶಿಖಾಂತ ದ್ವೇಷ ಮಾಡುತ್ತಿದ್ದ ಹಿಟ್ಲರ್ ಆ ಕೂಟದಲ್ಲಿ ಅಮೆರಿಕಕ್ಕೆ ಒಂದೇ ಒಂದು ಪದಕವು ಕೂಡ ದೊರೆಯಬಾರದು ಎಂದು ಯೋಜನೆ ಮಾಡಿದ್ದ! ಅಮೆರಿಕದ ಕ್ರೀಡಾಪಟುಗಳಿಗೆ ಯಾವ ಕನಿಷ್ಠ ಕ್ರೀಡಾ ಸೌಲಭ್ಯ ನೀಡಿರಲಿಲ್ಲ! ಅವರಿಗೆ ತೊಂದರೆ ಕೊಡಬೇಕು ಎಂದು ನಿಬಿಡ ವೇಳಾಪಟ್ಟಿಯನ್ನು ಮಾಡಿಸಿದ್ದ. ಅವರಿಗೆ ಸರಿಯಾದ ಆಹಾರ ಕೊಡಲಿಲ್ಲ. ಅಮೆರಿಕದ ಹೆಚ್ಚಿನ ಕ್ರೀಡಾಪಟುಗಳು ಶೂ ಕೂಡ ಇಲ್ಲದೆ ಬರಿಗಾಲಲ್ಲಿ, ಹಸಿದ ಹೊಟ್ಟೆಯಲ್ಲಿ ಓಡಬೇಕಾಯಿತು!
ಹಿಟ್ಲರನ ಅಹಂಕಾರ ಮುರಿಯಲು ಎಂಬಂತೆ ಆ ನೀಗ್ರೋ ಅಲ್ಲಿಗೆ ಬಂದಿದ್ದ!
ಆತನ ಹೆಸರು ಜೆಸ್ಸಿ ಓವೆನ್ಸ್. ಬಡತನದಲ್ಲಿ ಬೆಂದವನು. ಆತನ ಹೆತ್ತವರಿಗೆ ಹತ್ತು ಮಕ್ಕಳು. ಈತನೇ ಕಿರಿಯವನು. ವರ್ಣದ್ವೇಷದ ಪರಾಕಾಷ್ಠೆಯ ಕಾಲ ಅದು. ಆತನ ಅಜ್ಜ, ಅಪ್ಪ ಎಲ್ಲರೂ ಗುಲಾಮರೇ ಆಗಿದ್ದವರು! ಜೆಸ್ಸಿ ಯೌವ್ವನಕ್ಕೆ ಕಾಲಿಡುವ ಮೊದಲೇ ಧಾನ್ಯಗಳ ಕ್ವಿಂಟಾಲ್ ತೂಕದ ಮೂಟೆಗಳನ್ನು ಹೊತ್ತು ಹೊಟ್ಟೆಪಾಡು ಮಾಡುತ್ತಿದ್ದ!
ಆದರೆ ಆತನಿಗೆ ಓಡುವುದು ಅಂದರೆ ಭಾರೀ ಪ್ರೀತಿ. ಒಬ್ಬ ಕ್ರೀಡಾಪಟುವಿಗೆ ಬೇಕಾದ ಉಕ್ಕಿನ ಮಾಂಸಖಂಡಗಳು, ಉದ್ದವಾದ ಕಾಲುಗಳು ಆತನಿಗೆ ಇದ್ದವು. ಅಂತಹ ಜೆಸ್ಸಿ ಹಿಟ್ಲರನ ಅಹಂಕಾರ ಮುರಿಯಲೋ ಎಂಬಂತೆ ಅಮೆರಿಕಾದಿಂದ ಹಡಗನ್ನು ಏರಿ ಬರ್ಲಿನ್ ಒಲಿಂಪಿಕ್ಸ್ ಮೈದಾನಕ್ಕೆ ಬಂದಿದ್ದ ಬರಿಗಾಲಲ್ಲಿ ಓಡುವ ಸಂಕಲ್ಪದ ಜೊತೆಗೆ!
ಆತ ಆಗಲೇ ವಿಶ್ವ ಚಾಂಪಿಯನ್ ಆಗಿದ್ದ!
ಕೇವಲ ಒಂದು ವರ್ಷದ ಹಿಂದೆ ಅಂದರೆ 1935ರ ಮೇ 25ರಂದು ಮಿಚಿಗನ್ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಆತನು ಕೇವಲ 45 ನಿಮಿಷಗಳಲ್ಲಿ ಐದು ವಿಶ್ವದಾಖಲೆ ಮಾಡಿ ಕೀರ್ತಿಯ ಶಿಖರವನ್ನು ತಲುಪಿದ್ದ! ಅದರ ಜೊತೆಗೆ ಒಂದು ವಿಶ್ವದಾಖಲೆ ಕೂಡ ಅವನು ಸರಿಗಟ್ಟಿದ್ದ. ಈ ಸಾಧನೆಯನ್ನು ಜಗತ್ತಿನಲ್ಲಿ ಬೇರೆ ಯಾರೂ ಅದುವರೆಗೆ ಮಾಡಿರಲಿಲ್ಲ. ಆದ್ದರಿಂದ ಒಲಿಂಪಿಕ್ಸ್ ಕೂಟ ಆರಂಭ ಆಗುವ ಮೊದಲೇ ಆತ ‘ವಿಶ್ವದಾಖಲೆಯ ವೀರ’ ಎಂದು ಪ್ರಚಾರ ಪಡೆದಿದ್ದ!
ಆದ್ದರಿಂದ ಅವನನ್ನು ನೋಡಲು ಬರ್ಲಿನ್ ಕ್ರೀಡಾಂಗಣದಲ್ಲಿ 80,000 ಜನರು ಕಿಕ್ಕಿರಿದು ಸೇರಿದ್ದರು! ಇಡೀ ಕ್ರೀಡಾಂಗಣದಲ್ಲಿ ಜೆಸ್ಸಿ ಜೆಸ್ಸಿ ಜೆಸ್ಸಿ……ಎಂಬ ಉದ್ಘೋಷವು ಸಮುದ್ರದ ಅಲೆಗಳ ಹಾಗೆ ಅನುರಣನ ಆಗುತ್ತಿತ್ತು.
ಓವರ್ ಟು ಬರ್ಲಿನ್!
1936ರ ಆಗಸ್ಟ್ 3ರಂದು ಬರ್ಲಿನ್ ಮೈದಾನದಲ್ಲಿ ಪ್ರೇಕ್ಷಕರ ಚಪ್ಪಾಳೆಗಳ ಸುರಿಮಳೆಯ ನಡುವೆ ಜೆಸ್ಸಿ ಟ್ರಾಕ್ ಪ್ರವೇಶ ಮಾಡಿದ್ದನು. ಅದು ನೂರು ಮೀಟರ್ ಇವೆಂಟ್. 10.3 ಸೆಕೆಂಡ್ಸ್ ಟೈಮಿಂಗ್ಸ್ ಮೂಲಕ ಆತ ಚಿನ್ನದ ಪದಕವನ್ನು ಗೆದ್ದಾಗಿತ್ತು!
ಮರುದಿನ ಆತ ಲಾಂಗ್ ಜಂಪ್ ಹಾರಬೇಕಾಗಿತ್ತು. ಕಾಲಿಗೆ ಶಕ್ತಿ ಉಡುಗಿದ ಹಾಗೆ ಆಗಿತ್ತು. ಆತ್ಮವಿಶ್ವಾಸವು ಕುಸಿದು ಹೋಗಿತ್ತು. ಆಗ ಅದೇ ಹಿಟ್ಲರನ ಜರ್ಮನಿಯ ಇನ್ನೊಬ್ಬ ಲಾಂಗ್ ಜಂಪರ್, ಲೂಝ್ ಲಾಂಗ್ ಅಂತ ಅವನ ಹೆಸರು, ಜೆಸ್ಸಿಯ ನೆರವಿಗೆ ಬರುತ್ತಾನೆ. ಆತನ ತಪ್ಪುಗಳನ್ನು ಗುರುತು ಮಾಡಿಕೊಡುತ್ತಾನೆ. ಧೈರ್ಯ ತುಂಬಿಸುತ್ತಾನೆ. ಆಗ ಧೈರ್ಯ ತುಂಬಿಕೊಂಡ ಜೆಸ್ಸಿ 26 ಅಡಿ 5 ಇಂಚು ದೂರ ಹಾರಿ ಎರಡನೇ ಚಿನ್ನದ ಪದಕ ಪಡೆದ!
ಆಗ ಇದೇ ಅಮೆರಿಕಾದ ಕರಿಯ ಆಟಗಾರ ಮತ್ತು ಅದೇ ಹಿಟ್ಲರನ ಜರ್ಮನಿಯ ಬಿಳಿಯ ಆಟಗಾರರು ಪರಸ್ಪರ ಅಪ್ಪಿಕೊಂಡು ಅಭಿನಂದಿಸಿದಾಗ ಹಿಟ್ಲರ್ ಅದನ್ನು ನೋಡಲಿಕ್ಕೆ ಆಗದೆ ಗ್ಯಾಲರಿಯಿಂದ ಎದ್ದು ಹೋದ ಅನ್ನುತ್ತದೆ ಇತಿಹಾಸ!
ಆಗಸ್ಟ್ 5-1936 ಮೂರನೇ ಚಿನ್ನ!
ಮೂರನೇ ಚಿನ್ನಕ್ಕಾಗಿ ಆತ 200 ಮೀಟರ್ ದೂರ ಓಡಿದಾಗ ಮತ್ತೆ ವಿಶ್ವದಾಖಲೆ ನಿರ್ಮಾಣ ಆಯಿತು. ಚಿನ್ನದ ಪದಕ ಕೊರಳಲ್ಲಿ ಕೂತಿತು! ಅದು 20.7 ಸೆಕೆಂಡ್ ಟೈಮಿಂಗ್ಸ್!
ಆಗಸ್ಟ್ ಒಂಬತ್ತರಂದು ನಾಲ್ಕನೇ ಚಿನ್ನಕ್ಕಾಗಿ ಆತ ಅಮೆರಿಕಾದ 4×100 ಮೀಟರ್ ರಿಲೆ ತಂಡವನ್ನು ಲೀಡ್ ಮಾಡಬೇಕಾಯಿತು. ಅಲ್ಲಿ ಕೂಡ ಚಿನ್ನದ ಪದಕ ದೊರೆಯಿತು!
ಜೆಸ್ಸಿ ಓವೆನ್ಸ್ ಇತಿಹಾಸ ಬರೆದಿದ್ದ!
ಅದುವರೆಗೆ ಯಾವ ಕ್ರೀಡಾಪಟು ಕೂಡ ಒಂದೇ ಒಲಿಂಪಿಕ್ ಕ್ರೀಡಾಕೂಟದ ಟ್ರ್ಯಾಕ್ ಇವೆಂಟಿನಲ್ಲಿ ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಪಡೆದಿರಲಿಲ್ಲ! ಬರ್ಲಿನ್ ಒಲಿಂಪಿಕ್ಸ್ ಆತನ ಮಹೋನ್ನತ ಸಾಧನೆಗೆ ಸಾಕ್ಷಿ ಆಯಿತು. ಅದರ ಜೊತೆಗೆ ಸರ್ವಾಧಿಕಾರಿ ಹಿಟ್ಲರನ ಅಹಂಕಾರ ನಾಶವಾಗಿತ್ತು!
ಆ ಒಲಿಂಪಿಕ್ಸ್ ದಾಖಲೆಯು ಮುಂದಿನ 48 ವರ್ಷಗಳ ಕಾಲ ಅಬಾಧಿತ ಆಗಿತ್ತು ಎಂದರೆ ಜೆಸ್ಸಿ ಸಾಧನೆಯ ಎತ್ತರ ನಮಗೆ ಗೊತ್ತಾದೀತು. 1984ರ ಒಲಿಂಪಿಕ್ಸ್ ಕೂಟದಲ್ಲಿ ಕಾರ್ಲ್ ಲೂಯಿಸ್ ಮತ್ತೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಜೆಸ್ಸಿಯ ಸಾಧನೆಯನ್ನು ಸರಿಗಟ್ಟುತ್ತಾನೆ.
1999ರಲ್ಲಿ ಬಿಬಿಸಿಯು ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ಜೆಸ್ಸಿ ‘ಶತಮಾನದ ಆರು ಮಹೋನ್ನತ ಕ್ರೀಡಾಪಟುಗಳ’ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆಯುತ್ತಾನೆ! ಅಮೆರಿಕಾ ಆತನಿಗೆ ‘ನ್ಯಾಷನಲ್ ಹೀರೋ’ ಎಂಬ ಗೌರವವನ್ನು ನೀಡಿತು. ಇದೆಲ್ಲದರ ಜೊತೆಗೆ 1936ರ ಬರ್ಲಿನ್ ಒಲಿಂಪಿಕ್ಸ್ ಕೂಟದಲ್ಲಿ ಹಿಟ್ಲರನ ಸೊಕ್ಕು ಮುರಿದ ಕಾರಣಕ್ಕೆ ಆತ ಜಗತ್ತಿನ ಕಣ್ಮಣಿ ಆಗಿದ್ದ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಜೋಹಾರಿ ವಿಂಡೋ: ಇದು ನಮ್ಮ ವ್ಯಕ್ತಿತ್ವದ ಅಂತರ್ ದರ್ಶನ ಮಾಡಿಸುವ ಮಹಾ ಕಿಟಕಿ!