ಮಹಾಭಾರತದಲ್ಲಿ (Mahabharatha Epic) ಕರ್ಣನ ಪಾತ್ರವನ್ನು ಗಮನಿಸಿ. ಆತನ ಬಳಿ ಅರ್ಜುನನಿಗಿಂತ ಹೆಚ್ಚು ಶಕ್ತಿ, ಧೈರ್ಯ, ಬಿಲ್ವಿದ್ಯಾ ಸಾಮರ್ಥ್ಯ ಎಲ್ಲವೂ ಇತ್ತು. ಆದರೂ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಸೋತನು. ಅದಕ್ಕೆ ಕಾರಣವೇನೆಂದರೆ ಆತನ ಸುಪ್ತ ಮನಸ್ಸಿನ ಮೂಲೆಯಲ್ಲಿ ಹೂತು ಹೋಗಿದ್ದ ಒಂದು ಜಂಕ್ ಥಾಟ್ (Junk thought) ಅಂದರೆ ನಿಮಗೆ ಆಶ್ಚರ್ಯ ಆಗಬಹುದು. ಹೌದು, ತಾನು ಸೂತ ಪುತ್ರ ಎಂದು ಅವನ ಸುಪ್ತ ಮನಸ್ಸು ಅವನಿಗೆ ಪದೇಪದೆ ಹೇಳುತ್ತಿತ್ತು. ಅವನನ್ನು ಅಂಗ ರಾಜ ಎಂದು ಕರೆದು ದುರ್ಯೋಧನನು ಆ ಥಾಟ್ ತೆಗೆಯಲು ಪ್ರಯತ್ನ ಪಟ್ಟಿದ್ದನು (ರಾಜ ಮಾರ್ಗ ಅಂಕಣ). ಆದರೆ ಅರ್ಜುನ, ದ್ರೋಣಾಚಾರ್ಯ, ಭೀಷ್ಮ ಎಲ್ಲರೂ ಅವನನ್ನು ಪದೇಪದೆ ಸೂತ ಪುತ್ರ ಎಂದು ಕರೆದು ಅವನ ಸುಪ್ತ ಮನಸನ್ನು ತಂಗಳು ಪೆಟ್ಟಿಗೆ ಮಾಡಿ ಬಿಟ್ಟರು. ಇದು ಅವನ ಸೋಲಿಗೆ ಕಾರಣ ಆಯಿತು.
ಆ ದುರ್ಯೋಧನನ ತಲೆಯಲ್ಲಿಯೂ ಒಂದು ಹುಳ ಇತ್ತು
ಮಹಾ ಶಕ್ತಿಶಾಲಿ ಆದ ದುರ್ಯೋಧನನ ತಲೆಯಲ್ಲಿಯೂ ಒಂದು ಹುಳ ಗೂಡು ಕಟ್ಟಿತ್ತು. ಚಿಕ್ಕಂದಿನಿಂದ ಭೀಮನ ಪರಾಕ್ರಮದ ಮುಂದೆ ಸೋಲುತ್ತ ಬಂದ ದುರ್ಯೋಧನನಿಗೆ ಭೀಮನ ಮುಂದೆ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕು ಎಂಬ ಹಠ ಅವನ ಅವನತಿಗೆ ಕಾರಣ ಆಯಿತು.
ಆ ರಾವಣನ ತಲೆಯಲ್ಲಿಯೂ ತಂಗಳು ಯೋಚನೆ ಇತ್ತು!
ತ್ರೇತಾಯುಗದ ಮಹಾ ಶಕ್ತಿಶಾಲಿ ಎನಿಸಿದ ರಾವಣ ಪರಾಕ್ರಮದಲ್ಲಿ ರಾಮನಿಗೆ ಯಾವುದರಲ್ಲಿಯೂ ಕಡಿಮೆ ಇರಲಿಲ್ಲ. ಆದರೆ ಸ್ವಯಂವರ ಮಂಟಪದಲ್ಲಿ ತನ್ನನ್ನು ಧಿಕ್ಕರಿಸಿ ರಾಮನ ಕೈ ಹಿಡಿದ ಸೀತೆಯ ಅಹಂಕಾರವನ್ನು ಮುರಿಯಬೇಕು ಎನ್ನುವ ತಂಗಳು ಯೋಚನೆ ಅವನನ್ನು ಕೊನೆಯವರೆಗೆ ಕಾಡಿತು. ಸೀತೆಯನ್ನು ಅನುಭವಿಸಬೇಕು ಎಂದಾತನು ನಿರ್ಧಾರ ಮಾಡಿದ್ದರೆ ಅವನನ್ನು ತಡೆಯುವವರು ಯಾರೂ ಲಂಕೆಯಲ್ಲಿ ಇರಲಿಲ್ಲ! ಆದರೆ ಆತನಿಗಿದ್ದ ವಿಚಿತ್ರ ಹಠ ಎಂದರೆ ಸೀತೆಯ ಅಹಂಕಾರವನ್ನು ಮುರಿಯಬೇಕು ಎನ್ನುವುದು. ಅದು ಬೆಂಕಿಯಾಗಿ ಮುಂದೆ ಅವನನ್ನು ಸುಟ್ಟಿತು.
ಹೀಗೆ ನಮ್ಮ ಸುಪ್ತ ಮನಸ್ಸಿನ ಮೂಲೆಯಲ್ಲಿ ಹೂತು ಹೋಗಿರುವ ಎಷ್ಟೋ ನೆಗೆಟಿವ್ ಯೋಚನೆಗಳು ನಮ್ಮ ಮತ್ತು ನಿಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಮಾರಕವಾಗಿ ಬಿಡುತ್ತವೆ ಎನ್ನುವುದು ಕನ್ನಡಿ ಬರಹದಷ್ಟೆ ಸತ್ಯ. ನೀವೇನಾದರೂ ಉತ್ಸಾಹದಿಂದ ಮಾಡಲು ಹೊರಟಾಗ ನಮ್ಮನ್ನು ಹಿಂದಕ್ಕೆ ಎಳೆಯುವುದು ಅಂತದ್ದೇ ಯೋಚನೆಗಳು.
ಅಂತಹ ಕೆಲವು ತಂಗಳು ಯೋಚನೆಗಳ ಸಾಂಪಲ್ ಇಲ್ಲಿವೆ
1) ನನ್ನನ್ನು, ನನ್ನ ಕೆಲಸವನ್ನು ಯಾರೂ ಗುರುತಿಸುತ್ತಾ ಇಲ್ಲ.
2) ನನ್ನ ಅರ್ಹತೆಯನ್ನು ನಾನು ಹೇಗಾದರೂ ಪ್ರೂವ್ ಮಾಡಿಕೊಳ್ಳಬೇಕು.
3) ನಾನು ಅವನ/ಅವಳ ಅಹಂಕಾರವನ್ನು ಮುರಿಯಬೇಕು.
4) ನಾನು ಏನು ಮಾಡಲು ಹೊರಟರೂ ನೂರಾರು ಮಂದಿ ನನ್ನ ಕಾಲು ಎಳೆಯುತ್ತಾರೆ.
5) ನನ್ನ ಅದೃಷ್ಟವೇ ಸರಿ ಇಲ್ಲ. ಅದರಿಂದ ಮುಟ್ಟಿದ್ದೆಲ್ಲ ಮಣ್ಣಾಗುತ್ತಿದೆ.
6) ನನ್ನ ವಿರುದ್ಧ ಎಲ್ಲರೂ ಒಟ್ಟಾಗಿ ನಿಂತ ಹಾಗಿದೆ.
7) ನಾನು ಇಂಗ್ಲಿಷಿನಲ್ಲಿ ವೀಕೂ! ನನ್ನ ಗ್ರಾಮರ್ ಜೀವನದಲ್ಲಿ ಉದ್ಧಾರ ಆಗೋದಿಲ್ಲ.
8) ಸಾಧನೆ ಏನಿದ್ದರೂ ಮುಂದಿನ ಬೆಂಚಿನ ಹುಡುಗರದ್ದು. ನಮ್ಮದೇನಿದ್ದರೂ ಗಾಂಧಿ ಕ್ಲಾಸು!
9) ಚಿಕ್ಕಂದಿನಿಂದ ನನ್ನ ಭಾವನೆಗಳನ್ನು ಯಾರೂ ಗಮನಿಸಲಿಲ್ಲ.
10) ಗುಂಪಿನಲ್ಲಿ ಗುರುತಿಸಿಕೊಳ್ಳಬೇಕು ಎಂದು ಆಸೆ. ಆದರೆ ದುರದೃಷ್ಟ ನನಗಿಂತ ಮುಂದಿದೆ.
11) ಯಾವ ಬಿಸಿನೆಸ್‌ಗೆ ಕೈ ಹಾಕಿದರೂ ಲಾಸ್ ಆಗ್ತಾ ಇದೆ. ನನ್ನ ನಕ್ಷತ್ರದಲ್ಲಿ ದೋಷ ಇದೆಯೆಂದು ಪುರೋಹಿತರು ಹೇಳಿದ್ದಾರೆ.
12) ನಾನು ಪರೀಕ್ಷೆಯಲ್ಲಿ ಮಾರ್ಕ್ ಕಡಿಮೆ ತೆಗೆದುಕೊಂಡರೆ ನನ್ನ ಅಪ್ಪ, ಅಮ್ಮ ಬೇಜಾರು ಮಾಡಿಕೊಳ್ಳುತ್ತಾರೆ. ನನ್ನ ಗುರುಗಳು ಖಂಡಿತ ಬೇಜಾರು ಮಾಡುತ್ತಾರೆ.
13) ವೇದಿಕೆಯಲ್ಲಿ ಭಾಷಣ ಮಾಡುವುದು ನನ್ನ ಜನ್ಮದಲ್ಲಿ ಸಾಧ್ಯ ಇಲ್ಲ. ನಮ್ಮ ಕುಟುಂಬದಲ್ಲಿ ಯಾರೂ ಭಾಷಣಕಾರರು ಇಲ್ಲ.
14) ನನ್ನ ಗಂಡ ನನಗೆ ಸಪೋರ್ಟ್ ಮಾಡಿದ್ದರೆ ನಾನೂ ಎಲ್ಲರ ಹಾಗೆ ಖುಷಿ ಆಗಿರುತ್ತಿದ್ದೆ.
15) ನಾನು ಹೆಣ್ಣಾಗಿ ಹುಟ್ಟಿದ್ದ ಕಾರಣ ಸ್ವಾತಂತ್ರ್ಯ ಕಳೆದುಕೊಂಡೆ.
16) ಈ ತೀರ್ಪುಗಾರರು ಯಾವಾಗಲೂ ಪಕ್ಷಪಾತವನ್ನೇ ಮಾಡುವುದು.
17) ನನಗೆ ಸಿಗದ ಅವಳ ಪ್ರೀತಿ ಯಾರಿಗೂ ಸಿಗಬಾರದು.
18) ನಾನು ಒಬ್ಬಂಟಿ ಆಗಿರುವುದೇ ನನಗೆ ಇಷ್ಟ.
19) ಅದೊಂದು ನೋವು ನಾನು ಸಾಯುವವರೆಗೂ ಬಿಟ್ಟು ಹೋಗುವುದಿಲ್ಲ.
20) ನಾನು ಯಾರ ಹಂಗಿನಲ್ಲಿಯೂ ಇಲ್ಲ. ನಾನು ಸೆಲ್ಫ್ ಮೇಡ್ ಪರ್ಸನ್!
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಶೂನ್ಯ ಬಂಡವಾಳದಿಂದ DOSA PLAZA ಸಾಮ್ರಾಜ್ಯ ಕಟ್ಟಿದ ಪ್ರೇಮ್ ಗಣಪತಿ
ಭರತವಾಕ್ಯ
ಈ ತಂಗಳು ಯೋಚನೆಗಳು ನಿಮ್ಮ ಮನಸಿನಲ್ಲಿ ಇವೆ ಅಂತಾದರೆ ನಿಮ್ಮನ್ನು ಸೋಲಿಸಲು ಹೊರಗಿನ ಶತ್ರು ಬೇಡ. ನಿಮ್ಮ ಮೊಬೈಲಿನಿಂದ ಅನಗತ್ಯವಾದ ಆ್ಯಪ್‌ಗಳನ್ನು ಡಿಲೀಟ್ ಮಾಡುವ ಹಾಗೆ ಅವುಗಳನ್ನು ಕೂಡ ಡಿಲೀಟ್ ಮಾಡಿ ಮುಂದೆ ಹೊರಡಿ. ನಿಮಗೆ ಒಳ್ಳೆದಾಗಲಿ.