23 ವರ್ಷಗಳ ಸುದೀರ್ಘ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ (Longest serving Chief minister of West Bengal) ಆಗಿದ್ದ ಜ್ಯೋತಿ ಬಸು (Jyoti Basu) ಅವರ ಇಡೀ ಬದುಕು ಒಂದು ಅದ್ಭುತ ಹೋರಾಟ. ಪ್ರೇರಣೆ ನೀಡುವ ಯಶೋಗಾಥೆ. ಬಂಗಾಳದ ಜೊತೆಗೆ ಹೊಸೆದುಕೊಂಡಿರುವ ಎಪ್ಪತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನದ ರೋಮಾಂಚಕ ಇತಿಹಾಸ (ರಾಜ ಮಾರ್ಗ ಅಂಕಣ). ಇಂದು (ಜುಲೈ 8) ಅವರ ಹುಟ್ಟುಹಬ್ಬ. ಅವರು ನಮ್ಮನ್ನು ಆಗಲಿ 13 ವರ್ಷಗಳು ಸಂದರೂ ಅವರ ನೆನಪು ನ್ಯಾಯಪರ ಹೋರಾಟಗಾರರಿಗೆ ಇಂದಿಗೂ ರಕ್ತ ಬಿಸಿ ಮಾಡುವಂಥದ್ದು.
ಹೋರಾಟಕ್ಕೆ ಇಳಿದಾಗ ಮನೆಯವರ ವಿರೋಧ ಇತ್ತು!
ಲಂಡನ್‌ನಲ್ಲಿ ಬ್ಯಾರಿಸ್ಟರ್ ಪದವಿಯನ್ನು ಪಡೆದು ಭಾರತಕ್ಕೆ ಮರಳಿದ ಕೂಡಲೇ ಅವರು ಕಾರ್ಮಿಕರ ಪರವಾದ ಹೋರಾಟಕ್ಕೆ ಇಳಿದರು. ಕಮ್ಯುನಿಸ್ಟ್ ಪಕ್ಷವು ಅವರ ನಾಯಕತ್ವಕ್ಕೆ ದೊಡ್ಡ ವೇದಿಕೆ ನೀಡಿತು. ಮನೆಯವರ ವಿರೋಧ ಎದುರಾದರೂ ಅವರ ಹೋರಾಟದ ಕಸುವು ಕಡಿಮೆ ಆಗಲಿಲ್ಲ.
ಬ್ರಿಟಿಷರು ಕಮ್ಯುನಿಸ್ಟ್ ಪಕ್ಷವನ್ನು ಕಾನೂನು ವಿರೋಧಿ ಎಂದು 1940ರಲ್ಲಿ ಘೋಷಣೆ ಮಾಡಿದಾಗ ಪೊಲೀಸರ ಕೈಗೆ ಸಿಗದೆ ಭೂಗತರಾಗಿ ಕಾರ್ಮಿಕ ಹೋರಾಟ ಸಂಘಟನೆ ಮಾಡಿದವರು ಜ್ಯೋತಿ ಬಸು. ಈಸ್ಟ್ ಇಂಡಿಯಾ ಕಂಪನಿಯ ಆಡಳಿತಕ್ಕೆ ಒಳಪಟ್ಟ ಹತ್ತಿಯ ಗಿರಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಬ್ರಿಟಿಷರ ತುಳಿತಕ್ಕೆ ಒಳಗಾದಾಗ ಅವರ ಪರವಾಗಿ ನಿಂತವರು ಜ್ಯೋತಿ ಬಸು ಅವರು. ಲಾಲ್ ಝಂಡಾ ಹಿಡಿದು ಅವರು ಭಾಷಣಕ್ಕೆ ನಿಂತರೆ ಯಾರಿಗೂ ಹೆದರುವ ಗುಂಡಿಗೆ ಅವರದ್ದು ಆಗಿರಲಿಲ್ಲ. ಅವರು ಕಾರ್ಲ್ ಮಾರ್ಕ್ಸ್, ಲೆನಿನ್ ಅವರ ಪುಸ್ತಕಗಳನ್ನು ಚೆನ್ನಾಗಿ ಓದಿಕೊಂಡಿದ್ದರು. ತಾನು ನಂಬಿದ ಸಿದ್ಧಾಂತಗಳಿಂದ ಅವರೆಂದಿಗೂ ವಿಚಲಿತ ಆಗಲಿಲ್ಲ ಅನ್ನೋದು ಗ್ರೇಟ್!
1977-2000 ಅವರು ಬಂಗಾಳದ ಯಶಸ್ವೀ ಮುಖ್ಯಮಂತ್ರಿ ಆದರು
ಸ್ವಾತಂತ್ರ್ಯದ ನಂತರ ಬಂಗಾಳದಲ್ಲಿ ಒಂದಲ್ಲ ಒಂದು ವಿಪ್ಲವಗಳು, ದಂಗೆಗಳು, ಕ್ಷೋಭೆಗಳು ಸಾಮಾನ್ಯ ಆಗಿದ್ದವು. 1977ರಲ್ಲಿ ಅಂತಹದ್ದೇ ಒಂದು ಸ್ಥಿತಿ ನಿರ್ಮಾಣ ಆಗಿತ್ತು. ವಿಧಾನಸಭಾ ಚುನಾವಣೆಗಳು ಘೋಷಣೆ ಆಗಿದ್ದವು. ಆಗಿನ ನವೋದಿತ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಹಲವು ಬೈಠಕ್ ಮಾಡಿದ್ದರೂ ಮೈತ್ರಿ ಸಾಧಿಸಲು ವಿಫಲ ಆಗಿದ್ದವು. ಆಗ ಮೂರನೇ ರಂಗವಾಗಿ ಜ್ಯೋತಿ ಬಸು ಅವರು ಕಮ್ಯುನಿಸ್ಟ್ ಪಕ್ಷವನ್ನು ರಂಗಕ್ಕೆ ಇಳಿಸಿದರು. ಫಲಿತಾಂಶ ಬಂದಾಗ ಕಮ್ಯುನಿಸ್ಟ್ ಪಕ್ಷವು ಅತೀ ದೊಡ್ಡ ಬಹುಮತ ( 230/290) ಪಡೆದು ಅಧಿಕಾರಕ್ಕೆ ಬಂದಿತು. ಜ್ಯೋತಿ ಬಸು ಮೊದಲ ಬಾರಿಗೆ ಬಂಗಾಳದ ಮುಖ್ಯಮಂತ್ರಿ ಆದರು.
ಜನಪರವಾದ ಕಾಳಜಿ, ಹೋರಾಟದ ಮನೋಭಾವ, ಆರ್ಥಿಕ ಶಿಸ್ತು, ಅಭಿವೃದ್ಧಿಪರ ಯೋಜನೆಗಳು ಮುಂದೆ ಅವರನ್ನು ಬಂಗಾಳದ ಮುಖ್ಯಮಂತ್ರಿ ಗಾದಿಯಲ್ಲಿ ಶಾಶ್ವತವಾಗಿ ಕೂರಿಸಿದವು.
ಯಾವ ಚುನಾವಣೆಯಲ್ಲಿಯೂ ಜ್ಯೋತಿ ಬಸು ಸೋಲು ಕಾಣಲೇ ಇಲ್ಲ. ಅವರ ಅಧಿಕಾರದ ಅವಧಿಯಲ್ಲಿ 12 ರಾಜ್ಯಪಾಲರು ಬದಲಾದರು. ಆದರೆ ಮುಖ್ಯಮಂತ್ರಿ ಬದಲಾಗಲೇ ಇಲ್ಲ. ಹನ್ನೊಂದು ಬಾರಿ ಅವರು ಸತತವಾಗಿ ವಿಧಾನಸಭಾ ಚುನಾವಣೆಯನ್ನು ಗೆದ್ದರು. ಅವರು ಅಧಿಕಾರದಿಂದ ಇಳಿಯುವಾಗ ಭಾರತದ ಅತ್ಯಂತ ದೀರ್ಘಾವಧಿ ಆಳಿದ ಮುಖ್ಯಮಂತ್ರಿ ಆಗಿ ಅವರು ರಾಷ್ಟ್ರೀಯ ದಾಖಲೆ ಬರೆದಾಗಿತ್ತು.
ನಾಲ್ಕು ಬಾರಿ ಪ್ರಧಾನಿ ಪಟ್ಟ ಅವರ ಮನೆಬಾಗಿಲಿಗೆ ಬಂದಿತ್ತು!
ಅವರ ಅಧಿಕಾರ ಅವಧಿಯ ಉದ್ದಕ್ಕೂ ಅವರು ಎಷ್ಟು ಪ್ರಭಾವಶಾಲಿ ನಾಯಕ ಆಗಿದ್ದರು ಅಂದರೆ ನಾಲ್ಕು ಬಾರಿ ದೇಶದ ಪ್ರಧಾನಿ ಆಗುವ ಪ್ರಸ್ತಾಪವು ಅವರ ಮನೆಬಾಗಿಲಿಗೆ ಬಂದಿತ್ತು.
1990ರ ವರ್ಷದಲ್ಲಿ ಅಯೋಧ್ಯಾ ಯಾತ್ರೆ ಮಾಡಿದ ಲಾಲ್ ಕೃಷ್ಣ ಆಡ್ವಾಣಿ ಅವರು ಅರೆಸ್ಟ್ ಆದಾಗ ವಿ.ಪಿ ಸಿಂಗ್ ಸರಕಾರ ಪತನ ಆಗಿತ್ತು. ಆಗ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿ ಪಟ್ಟಕ್ಕೆ ಜ್ಯೋತಿ ಬಸು ಅವರನ್ನು ಆಹ್ವಾನ ನೀಡಿದ್ದರು. ಆಗ ಈ ಪ್ರಸ್ತಾವಕ್ಕೆ ಕಮ್ಯುನಿಸ್ಟ್ ಪಕ್ಷವು ಒಪ್ಪಲಿಲ್ಲ!
ಏಳು ತಿಂಗಳ ನಂತರ ಮತ್ತೆ ಚಂದ್ರಶೇಖರ್ ಸರಕಾರ ಪತನ ಆದಾಗ ಮತ್ತೆ ಕಾಂಗ್ರೆಸ್ ಅವರನ್ನು ಪ್ರಧಾನಿ ಪೀಠಕ್ಕೆ ಆಹ್ವಾನ ನೀಡಿತು. ಆದರೆ ಲಾಲ್ ಝಂಡಾ ಪಕ್ಷ ಒಪ್ಪಲೇ ಇಲ್ಲ!
ಮೂರನೇ ಬಾರಿಗೆ 1996ರಲ್ಲಿ ವಾಜಪೇಯಿ ಸರಕಾರ ವಿಶ್ವಾಸ ಮತ ಕಳೆದುಕೊಂಡಾಗ ಸರ್ವ ವಿಪಕ್ಷಗಳ ನಿಯೋಗವು ಒಕ್ಕೊರಲಿನಿಂದ ಜ್ಯೋತಿ ಬಸು ಅವರ ಹೆಸರನ್ನು ಸೂಚಿಸಿತು. ಆಗಲೂ ಪಕ್ಷ ನೋ ಎಂದು ಹೇಳಿತು!
ನಾಲ್ಕನೇ ಬಾರಿಗೆ 1999ರಲ್ಲಿ ಮತ್ತೆ ವಾಜಪೇಯಿ ಸರಕಾರ ಸಂಖ್ಯಾಬಲದ ಕೊರತೆಯಿಂದ ಅಧಿಕಾರ ಕಳೆದುಕೊಂಡಿತು. ಈ ಬಾರಿ ವಿಪಕ್ಷಗಳು ಒಂದೇ ಧ್ವನಿಯಿಂದ ಅವರಿಗೆ ಆಹ್ವಾನ ನೀಡಿದವು. ಈ ಬಾರಿ ಬಸು ಒಪ್ಪಿದರು. ಪಕ್ಷವೂ ಒಪ್ಪಿತು. ಆದರೆ ಕಾಂಗ್ರೆಸ್ ಪಕ್ಷ ಒಪ್ಪಲೇ ಇಲ್ಲ!
ಐತಿಹಾಸಿಕ ಪ್ರಮಾದ ಎಂದರು ಜ್ಯೋತಿ ಬಸು
ನಾಲ್ಕು ಬಾರಿ ಪ್ರಧಾನಿ ಪಟ್ಟಕ್ಕೆ ಕರೆ ಬಂದರೂ ಜ್ಯೋತಿ ಬಸು ದೇಶದ ಪ್ರಧಾನಿ ಆಗಲೇ ಇಲ್ಲ. ಪಕ್ಷ ನಿಷ್ಠೆ ಅವರನ್ನು ಕಟ್ಟಿಹಾಕಿತು. ಪಕ್ಷದ ರಾಷ್ಟ್ರೀಯ ಪಾಲಿಟ್ ಬ್ಯುರೋ ಚೀಫ್ ಆಗಿದ್ದ ಅವರಿಗೆ ತನ್ನ ಪಕ್ಷವನ್ನು ಒಪ್ಪಿಸುವುದು ಕಷ್ಟ ಆಗಿರಲಿಲ್ಲ. ಆದರೆ ಜ್ಯೋತಿ ಬಸು ಆ ನಾಲ್ಕೂ ಸಂದರ್ಭಗಳಲ್ಲಿ ಮೌನವಾಗಿ ಬಿಟ್ಟರು.
ಮುಂದೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ನಂತರ ‘ಅದೊಂದು ಐತಿಹಾಸಿಕ ಪ್ರಮಾದ ಆಗಿತ್ತು. ಪ್ರಧಾನಿಯ ಗಾದಿ ನನ್ನ ಮನೆಯ ಅಂಗಳಕ್ಕೆ ಬಂದಾಗ ನಾನು ನಿರಾಕರಣೆ ಮಾಡಲೇ ಬಾರದಿತ್ತು. ಆ ಅವಕಾಶ ಎಲ್ಲರಿಗೂ ಸಿಗುವುದಿಲ್ಲ’ ಎಂದಿದ್ದರು.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಕೈಲಾಶ್ ಖೇರ್ @50; ಇದು ಕಾಪಿ ಮಾಡಲಾಗದ ಧ್ವನಿ, ಮೋದಿಯೂ ಇವರ ಅಭಿಮಾನಿ!
ಈ ವಿಷಾದ, ಗೌರವ, ಸ್ವಾಭಿಮಾನ, ಹೋರಾಟ, ಬಡವರ ಪರವಾದ ಕಾಳಜಿ, ನೆವರ್ ಕಾಂಪ್ರೋ ಧೋರಣೆಗಳ ಜೊತೆಗೆ ಅವರು 2010ರ ಜನವರಿ ಒಂದರಂದು ಕೆಂಪು ಬಾವುಟ ಹೊದ್ದು ಈ ಜಗದಿಂದ ನಿರ್ಗಮಿಸಿದರು. ಅವರಿಗೆ ಭಾರತ ಸರಕಾರವು ರಾಷ್ಟ್ರೀಯ ಗೌರವವನ್ನು ನೀಡಿತು.
ಇಡೀ ಜೀವನದಲ್ಲಿ ಹುಟ್ಟುಹಬ್ಬ ಆಚರಣೆ ಮಾಡದೇ ಇದ್ದ ಜ್ಯೋತಿ ಬಸು ಅವರಿಗೆ ಇಂದು ಹುಟ್ಟಹಬ್ಬ. ನಾವು ಅವರಿಗೆ ಶುಭಾಶಯ ಹೇಳೋದು ಹೇಗೆ?