1980ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ತೆಲುಗು ಸಿನಿಮಾ ‘ಶಂಕರಾಭರಣಂ’ ಯಾರಾದರೂ ಮರೆಯಲು ಸಾಧ್ಯ ಇದೆಯಾ? ಅದು ಉಂಟುಮಾಡಿದ ಸಂಗೀತದ ಅಲೆಗಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ! ಸೋಮಯಾಜಲು ಎಂಬ ಪ್ರಭಾವೀ ಹಿರಿಯ ನಟ, ಮಂಜು ಭಾರ್ಗವಿ ಎಂಬ ಖ್ಯಾತ ನೃತ್ಯಗಾತಿ ಮತ್ತು ನಟಿ, ಎಸ್ ಪಿ ಬಾಲಸುಬ್ರಹ್ಮಣ್ಯಮ್ ಎಂಬ ಲೆಜೆಂಡ್ ಗಾಯಕ ಇವರಿಗೆಲ್ಲ ಭಾರಿ ಇಮೇಜ್ ಕೊಟ್ಟ ಸಿನಿಮಾ ಅದು. ಸಂಗೀತಪ್ರಿಯರು ಆ ಸಿನಿಮಾವನ್ನು ಮತ್ತೆ ಮತ್ತೆ ನೋಡಿದರು. ಅದರ ಎಲ್ಲ ಹಾಡುಗಳೂ ಇಂದಿಗೂ ಅದ್ಭುತವಾದ ಫೀಲ್ ಕೊಡುತ್ತವೆ. ಆ ಸಿನಿಮಾದ ಶ್ರೇಷ್ಠ ನಿರ್ದೇಶಕ ಕೆ.ವಿಶ್ವನಾಥ್ ಶುಕ್ರವಾರ (ಫೆ. ೨, ೨೦೨೩) ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ಪ್ರಾಯ ಆಗಿತ್ತು.
ಸೌಂಡ್ ಎಂಜಿನಿಯರ್ ಆಗಿ ವೃತ್ತಿ ಜೀವನದ ಆರಂಭ!
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿದ (1930) ಕೆ. ವಿಶ್ವನಾಥ್ ಅವರು ಕೃಷ್ಣಾ ನದಿಯ ದಡದಲ್ಲಿ ತಮ್ಮ ಬಾಲ್ಯವನ್ನು ಕಳೆದವರು. ವಿಜ್ಞಾನದಲ್ಲಿ ಪದವಿ ಪಡೆದ ನಂತರ ಅವರು ಸೌಂಡ್ ಎಂಜಿನಿಯರ್ ಆಗಿ ತೆಲುಗು ಸಿನಿಮಾಗಳಲ್ಲಿ ತಮ್ಮ ವೃತ್ತಿ ಜೀವನ ಆರಂಭ ಮಾಡಿದರು. ಮುಂದೆ ಇನ್ನೊಬ್ಬ ಲೆಜೆಂಡ್ ಸಿನಿಮಾ ನಿರ್ದೇಶಕರಾದ ಕೆ. ಬಾಲಚಂದರ್ ಅವರ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತ ಸಿನಿಮಾ ಭಾಷೆಯನ್ನು ಕಲಿತರು. 1965ರಲ್ಲಿ ‘ ‘ಆತ್ಮ ಗೌರವಂ’ ಎಂಬ ಸಿನಿಮಾ ನಿರ್ದೇಶನ ಮಾಡುತ್ತಾ ತನ್ನ ಮೊದಲ ಹೆಜ್ಜೆಯನ್ನು ಇಟ್ಟರು.
ಮುಂದೆ ಬಂದವು ಸೂಪರ್ ಹಿಟ್ ಸಿನಿಮಾಗಳು!
ಅಲ್ಲಿಂದ ಮುಂದೆ ಅವರನ್ನು ತೆಲುಗು, ತಮಿಳು, ಹಿಂದಿ ಸಿನಿಮಾ ರಂಗಗಳಲ್ಲಿ ಹಿಡಿಯುವವರೇ ಇರಲಿಲ್ಲ. 60 ವರ್ಷಗಳಲ್ಲಿ 57 ಸ್ಮರಣೀಯ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದರು! ಅವುಗಳಲ್ಲಿ 90% ಸಿನಿಮಾಗಳು ಭರ್ಜರಿ ಯಶಸ್ಸು ಕಂಡವು.
ಅದಕ್ಕೆ ಕಾರಣ ಅವರು ಆರಿಸಿಕೊಳ್ಳುತ್ತಿದ್ದ ಕಂಟೆಂಟ್! ಪ್ರತೀ ಬಾರಿಯೂ ಅವರು ಕ್ರಾಂತಿಕಾರಿ ಕಂಟೆಂಟ್ ಆಯ್ದುಕೊಂಡು ಬರುತ್ತಿದ್ದರು. ಕಲಾತ್ಮಕ ಎನ್ನಿಸಬಹುದಾದ ಒಂದು ಸ್ಕ್ರಿಪ್ಟ್ ಬರೆದು ಅದನ್ನು ಹೇಗೆ ಸೂಪರ್ ಹಿಟ್ ಮಾಡಬಹುದು ಎನ್ನುವ ಕಲೆಯು ಅವರನ್ನು ಗೆಲ್ಲಿಸುತ್ತಾ ಹೋಯಿತು! ಅವರ ಫಿಲಂಗಳು ಆಫ್ ಬೀಟ್ ಸಿನಿಮಾಗಳಾಗಿ ಜನಪ್ರಿಯ ಆದವು. ಎಲ್ಲಕ್ಕಿಂತ ಹೆಚ್ಚಾಗಿ ಮ್ಯೂಸಿಕ್ ಅವರ ಸಿನಿಮಾಗಳನ್ನು ಗೆಲ್ಲಿಸುತ್ತಿತ್ತು. ಎಸ್ಪಿ ಬಾಲು ಅವರು ವಿಶ್ವನಾಥ್ ಅವರ ಕಸಿನ್ ಬ್ರದರ್ ಆಗಿದ್ದರು ಅನ್ನುವುದು ಉಲ್ಲೇಖನೀಯ. ಹೆಚ್ಚು ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡದ ಬಾಲು ಸರ್ ಅವರಿಂದ ಅಮೋಘವಾದ ಕ್ಲಾಸಿಕಲ್ ಹಾಡುಗಳನ್ನು ಹಾಡಿಸಿದ್ದು ವಿಶ್ವನಾಥ್ ಅವರ ತಾಕತ್ತು!
ಸಾಗರ ಸಂಗಮಂ, ಸಿರಿ ಸಿರಿ ಮುವ್ವ, ಸ್ವಾತಿ ಮುತ್ತು…. ಇತ್ಯಾದಿ
ಅವರ ಎಲ್ಲ ಸಿನಿಮಾಗಳು ಒಂದಲ್ಲ ಒಂದು ಸಾಮಾಜಿಕ ಉದ್ದೇಶವನ್ನು ಹೊಂದಿದ್ದವು. ಲಿಂಗ ಸಮಾನತೆ, ಸಾಕ್ಷರತೆ, ಮದ್ಯಪಾನ, ವಿಧವಾ ಪುನರ್ ವಿವಾಹ, ಲೈಂಗಿಕ ಶೋಷಣೆ, ಸಂಗೀತದ ಮಹಾನತೆ.. ಹೀಗೆ ಒಂದಲ್ಲ ಒಂದು ಕಂಟೆಂಟ್ ಕತೆಯನ್ನು ಹೆಣೆದು ಅವರು ಸಿನೆಮಾಗಳನ್ನು ಮಾಡುತ್ತ ಹೋದರು.
ಕಮಲಹಾಸನ್ ಕುಡುಕನಾಗಿ ಅಭಿನಯ ಮಾಡಿದ ಸಾಗರ್ ಸಂಗಮಂ ಅದ್ಭುತ ಅನುಭವ ಕೊಡುವ ಸಿನಿಮಾ. ಇಳಯರಾಜ ಅವರ ಸಂಗೀತ ಇದರ ಹೈಲೈಟ್. ಬುದ್ಧಿಮಾಂದ್ಯ ಹುಡುಗನೊಬ್ಬ ವಿಧವೆಯನ್ನು ಪ್ರೀತಿ ಮಾಡುವ ಕತೆ ಇರುವ ಸ್ವಾತಿ ಮುತ್ಯಂ ಭಾರತದ ಎಲ್ಲ ಭಾಷೆಗಳಲ್ಲಿ ಹುಡಿಹಾರಿಸಿತು. ಕನ್ನಡದಲ್ಲಿ ಸುದೀಪ್ ಆ ಪಾತ್ರವನ್ನು ಅದ್ಭುತವಾಗಿ ಮಾಡಿದರು.
ಒಬ್ಬ ಸಂಗೀತ ಮಾಸ್ಟರ್ ಕತೆ ಇದ್ದ ಸಿರಿ ಸಿರಿ ಮುವ್ವ, ಸ್ತ್ರೀ ಸಮಾನತೆಯ ಮಹಾಕಾವ್ಯ ಶಾರದಾ, ಕಲಾರಾಧನೆಯ ರಸಪಾಕವಾದ ಶುಭ ಸಂಕಲ್ಪಮ್, ಶುಭಾಲೇಖಂ, ಅಮರ ಪ್ರೇಮದ ಯಶೋಗಾಥೆಯಾದ ಶ್ರುತಿ ಲಯಲು…. ಹೀಗೆ ಅವರ ಎಲ್ಲ ತೆಲುಗು ಸಿನಿಮಾಗಳು ದಾಖಲೆಯನ್ನು ಬರೆದವು. ಹೆಚ್ಚಿನ ಎಲ್ಲ ಚಿತ್ರಗಳು ರಷ್ಯನ್ ಭಾಷೆಗೆ ಡಬ್ ಆಗಿ ಮಾಸ್ಕೋದಲ್ಲಿ ತೆರೆ ಕಂಡವು. ಅವರ ಹೆಚ್ಚಿನ ತೆಲುಗು ಸಿನಿಮಾಗಳು ಭಾರತದ ಎಲ್ಲ ಭಾಷೆಗೆ ಡಬ್ ಅಥವಾ ರಿಮೇಕ್ ಆದವು.
ಹಿಂದಿಯಲ್ಲಿ ಸರ್ಗಮ್, ಕಾಮಚೋರ್, ಶುಭ ಕಾಮನಾ, ಜಾಗ್ ಉಠಾ ಇನ್ಸಾನ್, ಸಂಜೋಗ, ಈಶ್ವರ್ ಮೊದಲಾದ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿ ಎಲ್ಲವನ್ನೂ ಹಿಟ್ ಮಾಡಿದರು. ಜಯಪ್ರದಾ, ಅನಿಲ್ ಕಪೂರ್, ರಾಕೇಶ್ ರೋಷನ್ ಮತ್ತು ಮ್ಯೂಸಿಕ್ ಅವರ ಸಿನಿಮಾಗಳನ್ನು ಸೂಪರ್ ಹಿಟ್ ಮಾಡಿದವು.
ದಾಖಲೆ ಸಂಖ್ಯೆಯ ಪ್ರಶಸ್ತಿ ಅವರಿಗೆ ದೊರೆಯಿತು!
ಭಾರತೀಯ ಸಿನಿಮಾ ರಂಗದಲ್ಲಿ ಅವರಷ್ಟು ಪ್ರಶಸ್ತಿ ಪಡೆದ ಇನ್ನೊಬ್ಬ ನಿರ್ದೇಶಕರು ಇಲ್ಲ! ಐದು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಅವರದ್ದು. ಏಳು ಬಾರಿ ತೆಲುಗಿನ ಮಹೋನ್ನತ ನಂದಿ ಅವಾರ್ಡ್, ಹತ್ತು ಬಾರಿ ದಕ್ಷಿಣದ ಫಿಲ್ಮ್ ಫೇರ್ ಪ್ರಶಸ್ತಿಗಳು, ಮಾಸ್ಕೋ ಚಿತ್ರೋತ್ಸವದಲ್ಲಿ ಮತ್ತು ಫ್ರಾನ್ಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಅವರಿಗೆ ಲಭಿಸಿದೆ.
ಅದರ ಜೊತೆಗೆ ಪ್ರತೀ ವರ್ಷವೂ ಕೇವಲ ಒಬ್ಬ ಸಿನೆಮಾ ಸಾಧಕರಿಗೆ ಕೊಡುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು ಅವರಿಗೆ ದೊರೆಯಿತು. ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ ಅವರಿಗೆ ಅರ್ಜಿ ಹಾಕದೆ ದೊರೆಯಿತು.
ಒಂದಕ್ಕಿಂತ ಒಂದು ಅದ್ಭುತವಾದ, ಮುತ್ತಿನಂತಹ 5೭ ಸಿನಿಮಾಗಳನ್ನು ನಮ್ಮ ಮಡಿಲಲ್ಲಿ ಇರಿಸಿ ಲೆಜೆಂಡ್ ನಿರ್ದೇಶಕ ಕೆ.ವಿಶ್ವನಾಥ್ ಅವರಿಗೆ ನಮ್ಮ ಶ್ರದ್ಧಾಂಜಲಿ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಮಗನಿಗಾಗಿ ಭತ್ತದ ಗದ್ದೆಯಲ್ಲೇ ಕ್ರಿಕೆಟ್ ಪಿಚ್ ಮಾಡಿಕೊಟ್ಟಿದ್ದರು ಶುಭಮನ್ ಗಿಲ್ ತಂದೆ!