Site icon Vistara News

ರಾಜ ಮಾರ್ಗ ಅಂಕಣ : ಕೈಲಾಶ್‌ ಖೇರ್‌ @50; ಇದು ಕಾಪಿ ಮಾಡಲಾಗದ ಧ್ವನಿ, ಮೋದಿಯೂ ಇವರ ಅಭಿಮಾನಿ!

Kailash kher

ಭಾರತೀಯ ಜಾನಪದ ಸಂಗೀತ, ಸೂಫಿ ಸಂಗೀತ, ಘಜಲ್ ಹಾಡುಗಳು ಇವುಗಳನ್ನು ಅರೆದು ಕುಡಿದು ಇಂದು ಜನಪ್ರಿಯತೆಯ ತುತ್ತತುದಿಯಲ್ಲಿ (ರಾಜ ಮಾರ್ಗ ಅಂಕಣ) ವಿಹರಿಸುತ್ತಿರುವ ಕೈಲಾಶ್ ಖೇರ್ (Kailash Kher) ಅವರಿಗೆ ಇಂದು (ಜುಲೈ 7) ಐವತ್ತನೇ ಹುಟ್ಟುಹಬ್ಬದ ಸಂಭ್ರಮ. ಅವರ ಧ್ವನಿ ಇಂದು ಭಾರತವನ್ನು ಸಮ್ಮೋಹನ ಮಾಡಿದೆ ಎಂಬಲ್ಲಿಗೆ ಅವರು ಲೆಜೆಂಡ್ ಸಿಂಗರ್ (Indian musical singer) ಆಗಿದ್ದಾರೆ.

ಗುರು ಇಲ್ಲದ ಸಂಗೀತ ವಿದ್ಯೆ

ಉತ್ತರ ಪ್ರದೇಶದ ಮೀರತ್ ನಗರದಲ್ಲಿ 1973ರ ಜುಲೈ ಏಳರಂದು ಜನಿಸಿದ ಕೈಲಾಶ್ ಅವರದ್ದು ಕಾಶ್ಮೀರಿ ಕುಟುಂಬ. ಅವರ ತಂದೆ ಮೆಹರ್ ಸಿಂಘ್ ಖೇರ್ ಅವರು ಜನಪ್ರಿಯ ಜಾನಪದ ಗಾಯಕ ಆಗಿದ್ದರು. ಅದರಿಂದಾಗಿ ಸಂಗೀತ ಹುಡುಗನಿಗೆ ರಕ್ತದಲ್ಲಿಯೇ ಬಂದಿತ್ತು. ವೇದಿಕೆಯಲ್ಲಿ ಮೊದಲ ಬಾರಿ ಹಾಡಿದಾಗ ಆತನಿಗೆ ಕೇವಲ ನಾಲ್ಕು ವರ್ಷ! ಸಂಗೀತದ ಗುರುವನ್ನು ಹುಡುಕುತ್ತಾ ಹದಿನಾಲ್ಕನೇ ವರ್ಷಕ್ಕೆ ಕೈಲಾಸ್ ಮನೆ ಬಿಟ್ಟಾಗಿತ್ತು.

Kailash Kher with Modi

ಆದರೆ ಆತನ ಅಭಿರುಚಿಗೆ ಹೊಂದುವ ಗುರುವು ಸಿಗದೇ ಹೋದಾಗ ಹುಡುಗ ನಿರಾಶನಾಗದೆ ಪಂಡಿತ್ ಕುಮಾರ ಗಂಧರ್ವ, ಹೃದಯನಾಥ್ ಮಂಗೇಷ್ಕರ್, ಭೀಮಸೇನ್ ಜೋಷಿ, ಲತಾ ಮಂಗೇಷ್ಕರ್, ನುಸೃತ್ ಫತೆ ಆಲಿ ಖಾನ್ ಅವರ ಹಾಡುಗಳನ್ನು ಕೇಳುತ್ತಾ ಏಕಲವ್ಯನ ಹಾಗೆ ಬೆಳೆದನು. ಆದರೆ ಯಾರನ್ನೂ ಅನುಕರಣೆ ಮಾಡಲು ಹೋಗದೆ ತನ್ನದೇ ಸಿಗ್ನೇಚರ್ ಶೈಲಿಯನ್ನು ಕಾಪಾಡಿಕೊಂಡದ್ದು ಸಂಗೀತ ಲೋಕದ ಅದೃಷ್ಟ ಎಂದೇ ಹೇಳಬಹುದು. ಹೊಟ್ಟೆಪಾಡಿಗಾಗಿ ಸಣ್ಣ ಮಕ್ಕಳಿಗೆ ಸಂಗೀತ ಕ್ಲಾಸ್ ಮಾಡುತ್ತಾ ಅವಕಾಶಗಳಿಗೆ ಚಾತಕ ಪಕ್ಷಿಯಂತೆ ಕಾದುಕೂತವನು ಕೈಲಾಶ್. ಅದರ ನಡುವೆ ಕರಕುಶಲ ವಸ್ತುಗಳ ರಫ್ತು ಉದ್ಯಮವನ್ನು ಮಾಡಲು ಹೋಗಿ ಲಾಸ್ ಆಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.

2001ರಲ್ಲಿ ಭಾಗ್ಯದ ಬಾಗಿಲು ತೆರೆಯಿತು

ಹಿನ್ನೆಲೆ ಗಾಯಕನಾಗುವ ಕನಸು ಹೊತ್ತು ಮುಂಬೈಗೆ ಬಂದ ಕೈಲಾಶ್ ಅಲ್ಲಿ ಕೂಡ ಹಲವು ವರ್ಷ ಕಾಯಬೇಕಾಯಿತು. ನಿನ್ನ ಧ್ವನಿಯಲ್ಲಿ ಮಾಧುರ್ಯದ ಎಳೆಯೇ ಇಲ್ಲ ಎಂದು ಬೈದು ಕಳುಹಿಸಿದ ಮಂದಿ ಎಷ್ಟೋ ಇದ್ದರು. ಆದರೆ ಅಂದಾಜ್ ಸಿನೆಮಾದಲ್ಲಿ ಅವರು ಹಾಡಿದ ‘ರಬ್ಬಾ ಇಷ್ಕ್ ನಾ ಹೋವೇ’ ಹಾಡು ಭಾರೀ ಹಿಟ್ ಆಯಿತು.

ಮುಂದೆ ಮಂಗಲ್ ಪಾಂಡೆ, ಕಾರ್ಪೊರೇಟ್, ಸಲಾಂ ಏ ಇಷ್ಕ್, ಚಾಂದಿನಿ ಚೌಕ್ ಟು ಚೀನಾ, ಕಾಲ್, ಟ್ರಾಫಿಕ್ ಸಿಗ್ನಲ್ ಮೊದಲಾದ ಸಿನಿಮಾಗಳಲ್ಲಿ ಖೈಲಾಸ್ ಹಾಡಿದ ಅಷ್ಟೂ ಹಾಡುಗಳು ಜನಪ್ರಿಯತೆ ಪಡೆದವು. ಅವರು ಹಲವು ಹಾಡುಗಳನ್ನು ಬರೆದರು. ಹಲವು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಕೂಡ ಮಾಡಿದರು. ಇಂದು ಅವರು ಭಾರತದ ಅತೀ ಹೆಚ್ಚು ಬೇಡಿಕೆಯ ಗಾಯಕ ಅನ್ನುವುದು ನೂರಾರು ಬಾರಿ ಸಾಬೀತು ಆಗಿದೆ.

ಕೈಲಾಶ್ ಖೇರ್ ಭಾರತದ 22 ಭಾಷೆಗಳಲ್ಲಿ ಹಾಡಿದ್ದಾರೆ!

Kailash Kher with Modi

ಈ ಲೆಜೆಂಡ್ ಗಾಯಕ ಕನ್ನಡವನ್ನೂ ಸೇರಿಸಿ ಭಾರತದ 22 ಭಾಷೆಗಳಲ್ಲಿ ಹಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರು ಕೈಲಾಶ್ ಧ್ವನಿಯನ್ನು ಸ್ವರ್ಗೀಯ ಮತ್ತು ಕಾಪಿ ಮಾಡಲು ಆಗದ ಧ್ವನಿ ಎಂದು ಕರೆದಿದ್ದಾರೆ. ನಾನು ಆಗಲೇ ಹೇಳಿದ ಹಾಗೆ ಜಾನಪದ, ಸೂಫಿ ಮತ್ತು ಗಝಲ್ ಹಾಡುಗಳಿಗೆ ಇಂದಿಗೂ ಸೂಟ್ ಆಗುವ ಬೆಸ್ಟ್ ವಾಯ್ಸ್ ಅಂದರೆ ಅದು ಕೈಲಾಶ್ ಖೇರ್ ಅವರದ್ದು.

ಬಾಹುಬಲಿ 2 ಸಿನೆಮಾದಲ್ಲಿ ಅವರು ಹಾಡಿದ ಜಯ ಜಯ ಕರಾ ಮತ್ತು ಜಲ್ ರಹೀ ಹೈ ಚಿತಾ ಹಾಡುಗಳನ್ನು ಕೇಳಿ ನೋಡಿದಾಗ ಕೈಲಾಶ್‌ ಅವರ ಧ್ವನಿಯ ಗುಣಮಟ್ಟ ನಮಗೆ ಅರಿವಾಗುತ್ತದೆ. ಅವರ ಧ್ವನಿಯನ್ನು ಬೇರೆ ಯಾರೂ ಕಾಪಿ ಮಾಡಲು ಸಾಧ್ಯವೇ ಇಲ್ಲದಿರುವುದರಿಂದ ಅವರ ಡಿಮ್ಯಾಂಡ್ ಇಷ್ಟು ವರ್ಷಗಳ ಅವಧಿಯಲ್ಲಿ ಏರುಗತಿಯಲ್ಲಿಯೇ ಇದೆ. ವಿದೇಶದ ನೂರಾರು ವೇದಿಕೆಗಳಲ್ಲಿ ಅವರು ಹಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಮೂಡಬಿದ್ರೆಯ ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ಅವರು ಎರಡುವರೆ ಘಂಟೆ ಹಾಡಿದಾಗ ಮುಂದೆ ಕೂತು ರೋಮಾಂಚನ ಪಟ್ಟ ಲಕ್ಷ ಮಂದಿಯಲ್ಲಿ ನಾನೂ ಒಬ್ಬ. ಕೈಲಾಶ್ ಖೇರ್ ಆರ್ಕೆಸ್ಟ್ರಾ ಅಂದರೆ ಅದು ಭರ್ಜರಿ ಮನರಂಜನೆಯ ರಸದೌತಣ ಎಂದು ನನಗೆ ಅಂದು ಅನಿಸಿತ್ತು.

ಪ್ರಧಾನಿ ಮೋದಿ ಅವರ ಜತೆ ಕೈಲಾಶ್‌ ಖೇರ್‌

ಭಾರತೀಯ ಸಂಗೀತದ ರಾಯಭಾರಿ ಎಂದರು ಪ್ರಧಾನಿ ಮೋದಿ

ಕೈಲಾಶ್ ಖೇರ್ ಅವರ ಹಾಡುಗಳನ್ನು ಭಾರೀ ಮೆಚ್ಚಿಕೊಂಡ ಪ್ರಧಾನಿ ಮೋದಿ ಅವರನ್ನು ಭಾರತೀಯ ಜಾನಪದ ಸಂಗೀತದ ರಾಯಭಾರಿ ಎಂದು ಕರೆದರು. ಕಾಶ್ಮೀರದ ದಾಲ್ ಸರೋವರದ ಮೇಲೆ ತೇಲಿ ಬರುವ ಮಂದಾನಿಲದ ಹಿತಾನುಭವ ಅವರ ಧ್ವನಿ ಎನ್ನುವುದು ಮೋದಿ ಹೇಳಿದ ರೂಪಕ. 2015ರಲ್ಲಿ ಮೋದಿಜಿ ಅವರು ಮೊದಲ ಬಾರಿಗೆ ಅಮೆರಿಕಾ ಪ್ರವಾಸ ಮಾಡುವಾಗ ಕೈಲಾಸ್ ಅವರನ್ನು ಜೊತೆಗೆ ಕರೆದುಕೊಂಡು ಹೋಗಿ ಹಾಡಿಸಿದ್ದರು. ಪ್ರಧಾನಿಯವರ ಸ್ವಚ್ಛ ಭಾರತದ ಯಶೋಗಾಥೆಯ ಹಾಡು ‘ಸ್ವಚ್ಛ ಭಾರತ ಇರಾದಾ ಕರ್ ಲಿಯಾ’ ಹಾಡನ್ನು ಇದೇ ಕೈಲಾಶ್‌ ಖೇರ್ ಅವರು ಸಂಭಾವನೆ ಪಡೆಯದೆ ಹಾಡಿದ್ದಾರೆ.

ಅದೇ ರೀತಿ 2011ರ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಅಭಿಯಾನದ ಹಾಡು ‘ಅಂಬರ್ ತಕ್ ಎ ನಾದ್ ಗೂಂಜೆಗಾ’ ಇಡೀ ದೇಶದಲ್ಲಿ ಸಮುದ್ರದ ಅಲೆಗಳನ್ನು ಉಂಟು ಮಾಡಿತ್ತು.

ಕನ್ನಡದಲ್ಲಿಯೂ ಖೇರ್ ನೂರಾರು ಹಾಡು ಹಾಡಿದ್ದಾರೆ.

ಕೈಲಾಶ್ ಖೇರ್ ಕಳೆದ ಹತ್ತು ವರ್ಷಗಳಲ್ಲಿ ನೂರಾರು ಕನ್ನಡದ ಹಾಡುಗಳನ್ನು ಹಾಡಿದ್ದಾರೆ. ಅವೆಲ್ಲವೂ ಜನಪ್ರಿಯ ಆಗಿವೆ ಅನ್ನೋದು ಕನ್ನಡದ ಹೆಗ್ಗಳಿಕೆ.

ಎನ್ ಚಂದಾನೇ ಹುಡುಗಿ, ರೆ ರೇ ರೇ ಭಜರಂಗಿ, ಮೋಸ ಮಾಡಲೆಂದು ನೀನು ಬಂದೆಯ, ಟಿಕ್ ಟಿಕ್ ಟಿಕ್ (ವಿಲನ್), ವಜ್ರ ಬಲ್ಲಾಳ ರಾಯ (ಸಾರಥಿ), ನೋಡಯ್ಯ ಗುರಿಕಾರ, ಒಂದೂರಲ್ಲಿ ಒಬ್ಬ ಯಜಮಾನ, ಭೂಮಿಯೇ ಮಂಟಪ, ಎಕ್ಕಾ ರಾಜಾ ರಾಣಿ (ಜಾಕಿ), ಹಳೆ ಪಾತ್ರೆ ಹಳೆ ಕಬ್ಬಿಣ (ಜಂಗ್ಲಿ) ………. ಅವರು ಹಾಡಿದ ಅತ್ಯಂತ ಜನಪ್ರಿಯ
ಕನ್ನಡದ ಹಾಡುಗಳು. ಕನ್ನಡದಲ್ಲಿ ಈಗಲೂ ಕೈಲಾಶ್‌ ಖೇರ್ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗ ಇದೆ.

ಇದನ್ನೂಓದಿ: ರಾಜ ಮಾರ್ಗ ಅಂಕಣ : ಉಳಿಸಿಕೊಳ್ಳುವ ಬದ್ಧತೆ ಇಲ್ಲದವರು ಯಾಕ್ರೀ ಪ್ರೀತಿ ಮಾಡ್ತೀರಾ?

ನೂರಾರು ಪ್ರಶಸ್ತಿಗಳು ಒಲಿದಿವೆ

ಹಿಂದಿಯಲ್ಲಿ ಫನಾ ಸಿನಿಮಾದ ಹಾಡಿಗೆ ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಕೈಲಾಸ್ ಮುಂದೆ ತೆಲುಗಿನ ಮಿರ್ಚಿ, ಕನ್ನಡದ ಜಾಕಿ ಸಿನಿಮಾಗಳಿಗೂ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. ನೂರಾರು ಆಲ್ಬಂ ಹಾಡುಗಳು, ಸಾವಿರಾರು ಜಾಹೀರಾತು ಜಿಂಗಲ್ಸ್ ಹಾಡಿರುವ ಅವರಿಗೆ ದೇಶ ವಿದೇಶದ ವೇದಿಕೆಗಳಲ್ಲಿ ಇತರ ನೂರಾರು ಪ್ರಶಸ್ತಿಗಳು ಲಭಿಸಿವೆ. 2017ರಲ್ಲಿ ಅವರಿಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಅಂತಹ ಲೆಜೆಂಡ್ ಗಾಯಕ ತನ್ನ ಸಿಗ್ನೇಚರ್ ಧ್ವನಿಯ ಜೊತೆಗೆ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದವರಿಗೆ ಐವತ್ತನೇ ಹುಟ್ಟುಹಬ್ಬ. ಒಂದು ರೀತಿಯಲ್ಲಿ ಜಾನಪದ ಸಂಗೀತದ ಮಹೋತ್ಸವ.

ಕೈಲಾಸ್ ಖೇರ್ ಮತ್ತವರ ಹಾಡುಗಳು ನೂರ್ಕಾಲ ಬಾಳಲಿ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ | ಪರಮ ಸ್ವಾಭಿಮಾನಿ: ಲತಾ ಮಂಗೇಷ್ಕರನ್ನು ಧಿಕ್ಕರಿಸಿಯೂ ಮೆರೆದ ಸ್ಟಾರ್‌ ಸಂಗೀತ ನಿರ್ದೇಶಕ ಓ.ಪಿ. ನಯ್ಯರ್

Exit mobile version