Site icon Vistara News

ರಾಜ ಮಾರ್ಗ ಅಂಕಣ | ಎಂಥಾ ‌ ತ್ಯಾಗ? ಕೋಟ್ಯಧಿಪತಿ ಆಗಿದ್ದ ಕಾರ್ನಾಡ್‌ ಸದಾಶಿವ ರಾವ್ ಬಳಿ ಕೊನೆಗೆ ಒಂದು ಟೀ ಕುಡಿಯಲೂ ದುಡ್ಡಿರಲಿಲ್ಲ!

ಕಾರ್ನಾಡು ಸದಾಶಿವ ರಾಯರು

ಡಾ. ಸೂರ್ಯನಾಥ ಕಾಮತ್ ಅವರು ಬರೆದ ʻತ್ಯಾಗ ವೀರʼ ಪುಸ್ತಕವನ್ನು ಓದುತ್ತಾ ಹೋದಂತೆ ಕಣ್ತುಂಬ ಅಣೆಕಟ್ಟು ಒಡೆದು ನೀರು ಹರಿಯಿತು! ತನ್ನ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ನಿಂತ, ಸ್ವಾತಂತ್ರ್ಯ ಹೋರಾಟದ ಬೆಂಕಿಗೆ ಹವಿಸ್ಸಾಗಿ ತನ್ನನ್ನು ಸಂಪೂರ್ಣವಾಗಿ ಸಮರ್ಪಣೆ ಮಾಡಿದ ಕಾರ್ನಾಡ್ ಸದಾಶಿವ ರಾವ್ ಅವರ ಬಗ್ಗೆ ಕಾಮತರು ಬರೆದ ಪುಸ್ತಕ ಅದು! ಕಾರ್ನಾಡ್ ಸದಾಶಿವ ರಾವ್ ಅವರನ್ನು ‘ದಕ್ಷಿಣ ಭಾರತದ ಗಾಂಧಿ’ ಎಂದು ಇತಿಹಾಸವು ಕರೆದಿದೆ. ಅದು ನೂರಕ್ಕೆ ನೂರರಷ್ಟು ಸತ್ಯ.

ಅವರು ಜನಿಸಿದ್ದು ಕರಾವಳಿಯ ಅತ್ಯಂತ ಪ್ರಸಿದ್ದ, ಹೆಸರಾಂತ ಮತ್ತು ಆಗರ್ಭ ಶ್ರೀಮಂತರ ಕುಟುಂಬದಲ್ಲಿ (1881). ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಕಾರ್ನಾಡು ಅವರ ಊರು. ಮಂಗಳೂರಿನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡೆದ ನಂತರ ಅವರು ಮದ್ರಾಸಿನ ಅತ್ಯಂತ ಪ್ರಸಿದ್ಧವಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಅದರ ನಂತರ ಮುಂಬೈಯಲ್ಲಿ ಕಾನೂನು ಪದವಿಯನ್ನು ಯಶಸ್ವೀ ಆಗಿ ಪಡೆದು ಅವರು ಮಂಗಳೂರಿನಲ್ಲಿ ವಕೀಲಿಕೆಯ ಪ್ರಾಕ್ಟೀಸ್ ಆರಂಭ ಮಾಡಿದರು.

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೆ ಅವರು ಕುದ್ಮುಲ್ ರಂಗರಾಯರು ಮಂಗಳೂರಿನಲ್ಲಿ ಆರಂಭ ಮಾಡಿದ ‘ದಲಿತೋದ್ಧಾರ’ ಚಳುವಳಿಯಿಂದ ಪ್ರಭಾವಿತ ಆಗಿದ್ದರು. ತಮ್ಮ ಪುಸ್ತಕಗಳು, ಬಟ್ಟೆ, ಚೀಲ ಎಲ್ಲವನ್ನೂ ದಲಿತರಿಗೆ ಹಂಚಿ ಬಿಡುತ್ತಿದ್ದರು. ಆಗ ಮಂಗಳೂರಿನ ದೇರೆಬೈಲಿನ ತಮ್ಮ ಸ್ವಂತ ಜಮೀನಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ದಲಿತರಿಗೆ ಒಂದು ವಸತಿ ಕಾಲನಿಯನ್ನೆ ಸದಾಶಿವರಾಯರು ಮಾಡಿಕೊಟ್ಟರು. ದಲಿತರ ಶಿಕ್ಷಣಕ್ಕೆ ಸಹಾಯ ಮಾಡಲು ‘ತಿಲಕ್ ವಿದ್ಯಾಲಯ’ ಎಂಬ ಶಾಲೆಯನ್ನು ಸ್ಥಾಪನೆ ಮಾಡಿದರು. ಮನೆಯ ಅಂಗಳಕ್ಕೆ ಬರಲು ಕೂಡ ಹೆದರುತ್ತಿದ್ದ ದಲಿತರನ್ನು ತನ್ನ ಮನೆಯ ಒಳಗೆ ತನಕವೂ ಕರೆದುಕೊಂಡು ಹೋಗಿ ಹೊಟ್ಟೆ ತುಂಬಾ ಊಟ ಬಡಿಸುತ್ತಿದ್ದರು. ಅವರ ಧರ್ಮಪತ್ನಿ ಶಾಂತಾಬಾಯಿ ಕೂಡ ಪತಿಯ ಎಲ್ಲಾ ಸೇವಾಕಾರ್ಯಗಳಲ್ಲಿ ತುಂಬು ರೀತಿಯ ಸಹಕಾರ ನೀಡಿದರು.

ಗೋಕರ್ಣದಿಂದ ಆರಂಭಿಸಿ ಕೇರಳದವರೆಗೆ ಇರುವ ಎಲ್ಲಾ ದೇವಸ್ಥಾನಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶ ನೀಡಲು ಅಂದಿನ ಸ್ವಾಮೀಜಿಯಿಂದ ಅನುಮತಿ ಪತ್ರವನ್ನು ಪಡೆದುಕೊಂಡು ಬಂದರು. ಅದೇ ಹೊತ್ತಿಗೆ ಸಂತ್ರಸ್ತರಾದ ಮತ್ತು ತಮ್ಮ ಧ್ವನಿಯನ್ನು ಕಳೆದುಕೊಂಡ ಮಹಿಳೆಯರ ಪೂರ್ಣ ಪ್ರಮಾಣದ ಪ್ರಗತಿಯನ್ನು ಸಾಧಿಸಲು ʻಮಹಿಳಾ ಸಭಾʼ ಎಂಬ ಒಂದು ಸಂಸ್ಥೆಯನ್ನು ಅವರು ಸ್ಥಾಪನೆ ಮಾಡಿದರು. ಅವರು ಮತ್ತು ಅವರ ಪತ್ನಿ ಇಬ್ಬರೂ ಅಲ್ಲಿಗೆ ಬರುವ ಬಾಲ ವಿಧವೆಯರಿಗೆ ಮತ್ತು ಬಡ ಹೆಣ್ಣು ಮಕ್ಕಳಿಗೆ ನೂಲುವ ಮತ್ತು ನೇಯುವ ಕಲೆಯನ್ನು ಕಲಿಸಿ ಕೊಟ್ಟು ಅವರನ್ನು ಪೂರ್ಣ ಸ್ವಾವಲಂಬಿಯಾಗಿ ಮಾಡುವ ಪ್ರಯತ್ನವನ್ನು ಮಾಡಿದರು.

ಅಷ್ಟು ಹೊತ್ತಿಗೆ ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಮಂಗಳೂರಿಗೆ ವ್ಯಾಪಿಸಿತ್ತು. ಆಗ ಮಹಾತ್ಮಾ ಗಾಂಧೀಜಿಯವರ ದಟ್ಟ ಪ್ರಭಾವಕ್ಕೆ ಕಾರ್ನಾಡರು ಒಳಗಾಗುತ್ತಾರೆ. ತನ್ನ ಮನೆಯಲ್ಲಿದ್ದ ಅಷ್ಟೂ ಬಂಗಾರ, ಆಭರಣ, ವಸ್ತ್ರಗಳು, ಧಾನ್ಯ ಎಲ್ಲವನ್ನೂ ಬಡವರಿಗೆ ದಾನ ಮಾಡಿದರು. ಪಿತ್ರಾರ್ಜಿತ ಆಗಿ ಬಂದ ತುಂಬಾ ಬೆಲೆಬಾಳುವ ಆಸ್ತಿ, ಜಮೀನು ಎಲ್ಲವನ್ನೂ ಬಡವರಿಗೆ ಧಾರೆ ಎರೆದರು.

ತಾವೇ ತಯಾರಿಸಿದ ಖಾದಿಯ ಬಟ್ಟೆಯನ್ನು ತೊಟ್ಟು ಕಾರ್ನಾಡರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದುಬಿಟ್ಟರು. ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. ‘ಪ್ರತೀ ಮನೆ ಕೂಡ ಕಾಂಗ್ರೆಸ್ ಮನೆ’ ಇದು ಕಾರ್ನಾಡರ ಆ ಕಾಲದ ಜನಪ್ರಿಯ ಘೋಷಣೆ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ರಾಜ್ಯ ಉಪಾಧ್ಯಕ್ಷರಾಗಿ ಅವರದ್ದು ದೀರ್ಘ ಅವಧಿಗೆ ಸೇವೆ. ಅತ್ಯಂತ ಸರಳ ಮತ್ತು ಶಿಸ್ತುಬದ್ಧವಾದ ಜೀವನ. ಉಪ್ಪಿನ ಸತ್ಯಾಗ್ರಹ ನಡೆಸಿ ಅರೆಸ್ಟ್ ಆಗಿ ಕಠಿಣ ಜೈಲುವಾಸ ಕೂಡ ಅವರು ಅನುಭವಿಸಿದ್ದರು.

ಗಾಂಧಿ, ಕಸ್ತೂರ್ಬಾ, ನೆಹರೂ, ಶಾಸ್ತ್ರೀಜಿ ಮೊದಲಾದ ಕಾಂಗ್ರೆಸ್‌ನ ಹಿರಿಯ ನಾಯಕರು ಕರಾವಳಿಗೆ ಬಂದಾಗ ಕಾರ್ನಾಡರ ಮನೆಯಲ್ಲಿಯೇ ವಾಸ್ತವ್ಯ ಮತ್ತು ಆತಿಥ್ಯ ಪಡೆಯುತ್ತಿದ್ದರು. ಅವರ ಮನೆಯು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಧರ್ಮಛತ್ರವೇ ಆಗಿ ಹೋಗಿತ್ತು. ಅವರ ಪತ್ನಿ ಮನೆಗೆ ಎಷ್ಟು ಜನ ಅತಿಥಿಗಳು ಬಂದರೂ ಊಟ, ಉಪಚಾರವನ್ನು ಒಂದಿಷ್ಟು ದಣಿವು ಇಲ್ಲದೆ ಪೂರೈಸುತ್ತಿದ್ದರು.

ಕಾರ್ನಾಡರ ಅಂತ್ಯವೂ ಅತ್ಯಂತ ದಾರುಣವೇ ಆಗಿತ್ತು. ಅವರ ಪತ್ನಿ, ಸಣ್ಣ ಮಗಳು ಅವರನ್ನು ಆಗಲಿದಾಗ ಅವರು ಒಂದು ಕ್ಷಣ ವಿಚಲಿತರಾಗಿ ಬಿಟ್ಟರು. ಬಹಳ ನೊಂದುಕೊಂಡರು. ಅಹಮದಾಬಾದ್‌ವರೆಗೆ ಹೋಗಿ ಗಾಂಧೀಜಿಯವರ ಆಶ್ರಮದಲ್ಲಿ ಹಲವು ತಿಂಗಳು ಕಾಲ ಉಳಿದರು. ಗಾಂಧೀಜಿಯವರು ಅವರಿಗೆ ಧೈರ್ಯ ತುಂಬಿಸಿ ಮತ್ತೆ ಸ್ವಾತಂತ್ರ್ಯ ಹೋರಾಟಕ್ಕೆ ಅವರನ್ನು ಸಿದ್ಧಪಡಿಸಿದರು.

1937ರಲ್ಲಿ ಮುಂಬೈ ಮಹಾನಗರದಲ್ಲಿ ಕಾರ್ನಾಡರು ಕಾಂಗ್ರೆಸ್ ಅಧಿವೇಶನಕ್ಕೆ ಹೋಗಿದ್ದಾಗ ಅವರ ಆರೋಗ್ಯವು ತೀವ್ರವಾಗಿ ಕುಸಿಯಿತು. ಶಿವರಾಮ ಕಾರಂತರು ಆಗ ಅವರ ಜೊತೆಯಲ್ಲಿ ಇದ್ದರು.

ಒಮ್ಮೆ ತುಂಬಾ ಹಸಿವಿನಿಂದ ಬಳಲುತ್ತಿದ್ದ ಹಾಗೂ ಜ್ವರದಲ್ಲಿ ಒದ್ದಾಡುತ್ತಿದ್ದ ಸದಾಶಿವರಾಯರು ಕಾರಂತರ ಬಳಿ ಸ್ವಲ್ಪ ದುಡ್ಡನ್ನು ಸಾಲ ಕೇಳಿದರು. ಕಾರಂತರು ಗಟ್ಟಿಯಾಗಿ ನಕ್ಕು “ನಿನಗೇನು ಮಾರಾಯಾ ಹಣಕಾಸು ತೊಂದ್ರೆ? ನಿನ್ನದು ಆಗರ್ಭ ಶ್ರೀಮಂತರ ಕುಟುಂಬ ಅಲ್ವಾ?” ಅಂದು ತಮಾಷೆ ಮಾಡಿದ್ದರು! ಕಾರ್ನಾಡರ ಸಂಕಟ ಕಾರಂತರಿಗೆ ಆ ಹೊತ್ತಿಗೆ ಅರ್ಥ ಆಗಲಿಲ್ಲ ಅನ್ನುವುದು ದುರಂತ.

ಗಾಂಧೀಜಿ, ಎಚ್.‌ ನರಸಿಂಹಯ್ಯ (ಬಾಲಕ) ಮತ್ತು ಬಲ ತುದಿಯಲ್ಲಿ ಕಾರ್ನಾಡು

ಮುಂಬೈಯ ಬಹು ತೀವ್ರವಾದ ಚಳಿಯಲ್ಲಿ ಬೆಳಿಗ್ಗೆ ಟೀ ಕುಡಿಯಲು ಕೂಡ ಹಣ ಇಲ್ಲದೆ ಸದಾಶಿವ ರಾಯರು ತಲೆ ತಿರುಗಿ ಬಿದ್ದ ಪ್ರಸಂಗವೂ ಹಲವು ಬಾರಿ ನಡೆದಿತ್ತು! ಅದೇ ವರ್ಷ ಜನವರಿ 9ರಂದು ಅವರು ಆಸ್ಪತ್ರೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ದುರಂತವೆಂದರೆ ಅವರ ಅಂತ್ಯಕ್ರಿಯೆಗೆ ಕೂಡ ಹಣವಿಲ್ಲದ ಕಾರಣ ಅವರ ಮೂವರು ಗೆಳೆಯರು ಸೇರಿ ಅವರ ಅಪರ ಕರ್ಮಗಳನ್ನು ಅತ್ಯಂತ ಸರಳವಾಗಿ ನಡೆಸಬೇಕಾಯಿತು!

ಅತ್ಯಂತ ಆಗರ್ಭ ಶ್ರೀಮಂತರ ಕುಟುಂಬದಲ್ಲಿ ಜನ್ಮತಾಳಿದ ಮತ್ತು ಮಂಗಳೂರಿನಲ್ಲಿ ಬಹು ದೊಡ್ಡ ವಕೀಲರಾದ ಕಾರ್ನಾಡ್ ಸದಾಶಿವ ರಾಯರು ಎಷ್ಟು ವೈಭವದಲ್ಲಿ ಬೇಕಾದರೂ ಬದುಕಬಹುದಿತ್ತು. ಆದರೆ ರಾಷ್ಟ್ರಕ್ಕೆ ಸರ್ವಸ್ವವನ್ನೂ ಧಾರೆ ಎರೆದ ಅವರು ಕಣ್ಮುಚ್ಚಿದಾಗ ತಮಗಾಗಿ ಬಿಡಿಗಾಸನ್ನು ಕೂಡ ಉಳಿಸಿರಲಿಲ್ಲ. ಅವರು ಸಾಯುವ ಹೊತ್ತಲ್ಲಿ ಕೂಡ ಅವರ ಅಮ್ಮ ಬದುಕಿದ್ದು, ಮಗನ ದಾರಿ ಕಾಯುತ್ತಾ ಮಂಗಳೂರಿನಲ್ಲಿ ಕಣ್ಣೀರು ಸುರಿಸುತ್ತಿದ್ದರು!

ಅಮರರಾದ ನಂತರ ಕಾರ್ನಾಡರ ಹೆಸರಿನ ಒಂದು ಬಡಾವಣೆಯೇ ಬೆಂಗಳೂರಿನಲ್ಲಿ ನಿರ್ಮಾಣ ಆಗಿದೆ. ಅದು ಸದಾಶಿವ ನಗರ ಬಡಾವಣೆ. ಮಂಗಳೂರಿನಲ್ಲಿ ಒಂದು ಪ್ರಮುಖ ರಸ್ತೆಗೆ (ಕೆ.ಎಸ್.ರಾವ್ ರಸ್ತೆ)ಅವರ ಹೆಸರಿಡಲಾಗಿದೆ. ಮೂಲ್ಕಿಯಲ್ಲಿ ಅವರ ಒಂದು ಬಹು ಸುಂದರವಾದ ಪ್ರತಿಮೆಯು ಅನಾವರಣ ಆಗಿದೆ.

ಶಿವರಾಮ ಕಾರಂತರು ಕಾರ್ನಾಡರನ್ನು ‘ಧರ್ಮರಾಜ’ ಎಂದು ಕರೆದರು. ಕಾರ್ನಾಡರು ಬದುಕಿದ ರೀತಿಯೇ ಹಾಗಿತ್ತು!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಈಗಿನ ಯುವಜನರು ಕೆಟ್ಟೋಗ್ತಿದಾರೆ ಅಂತ ಅಂದ್ಕೊಬೇಡಿ, ಇದು ಸುಳ್ಳು, ಇಲ್ಲಿವೆ ಏಳು ಸತ್ಯಗಳು!

Exit mobile version