ಕಿರಣ್ ಬೇಡಿ ಐಪಿಎಸ್!
ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ ಆಗಿ ಅವರು ವಿವಿಧ ಪೊಲೀಸ್ ಅಧಿಕಾರಿಯ ಹುದ್ದೆಗಳನ್ನು 35 ವರ್ಷ ನಿಭಾಯಿಸಿದ ರೀತಿಗೆ ಇಡೀ ದೇಶವೇ ಸೆಲ್ಯೂಟ್ ಹೊಡೆದಿತ್ತು! ಯಾವ ಹುದ್ದೆ ದೊರೆತರೂ ಅದನ್ನು 200% ಬದ್ಧತೆಯ ಜೊತೆಗೆ ಅವರು ಕೆಲಸ ಮಾಡಿ ಎಲ್ಲ ಕಡೆಯಲ್ಲಿಯೂ ಗೆದ್ದಿರುವುದು ನಮಗೆ ಗೊತ್ತಿದೆ.
ಭಾರತದ ವಿವಿಧ ಭಾಷೆಗಳಲ್ಲಿ ಅವರ ಹೆಸರಲ್ಲಿ ಬಂದಿರುವ ಪೊಲೀಸ್ ಸಿನೆಮಾಗಳು ಬೇರೆ ಯಾರ ಹೆಸರಲ್ಲಿ ಕೂಡ ಬಂದಿರುವ ಉದಾಹರಣೆ ಇಲ್ಲ. ೭೩ನೇ ವರ್ಷದಲ್ಲಿರುವ ಆಕೆ ಇವತ್ತು ಇಡೀ ದೇಶದ ಯೂತ್ ಐಕಾನ್. ಹೆಣ್ಮಕ್ಕಳ ಪಾಲಿಗಂತೂ ಆತ್ಮವಿಶ್ವಾಸದ ಪ್ರತೀಕ. ಯಾವುದೇ ಮಹಿಳಾ ಚರ್ಚೆ ಆಕೆಯ ಹೆಸರೆತ್ತದೆ ಮುಕ್ತಾಯವಾಗುವುದು ಸಾಧ್ಯವೇ ಇಲ್ಲ.
ನಾನಿಂದು ಅವರ ಬೇರೆ ಯಾವ ಸಾಧನೆಗಳ ಬಗ್ಗೆ ಕೂಡ ಬರೆಯುವುದಿಲ್ಲ. ಅವರು ಏಷಿಯಾದ ಅತೀ ದೊಡ್ಡ ಸೆರೆಮನೆ ಆದ ತಿಹಾರ್ ಜೈಲಿನಲ್ಲಿ ಮಾಡಿದ ಕ್ರಾಂತಿಕಾರಕ ಬದಲಾವಣೆಗಳನ್ನು ಮಾತ್ರ ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ.
180 ಎಕರೆ ವಿಸ್ತೀರ್ಣದ ಈ ಸೆರೆಮನೆಯಲ್ಲಿ 2000ದಷ್ಟು ನಿವಾಸಿಗಳಿಗೆ ಜಾಗ ಇತ್ತು. ಆದರೆ 1992-93ರ ಹೊತ್ತಿಗೆ ಅಲ್ಲಿ 10,000ದಷ್ಟು ಮಂದಿಯನ್ನು ತಂದು ತುರುಕಲಾಗಿತ್ತು!ಅದರಲ್ಲಿ 500 ಹೆಂಗಸರು ಇದ್ದರು! ಆ ಹೆಂಗಸರ ಜೊತೆಗೆ ಏನೂ ಅಪರಾಧ ಮಾಡದ ಅವರ ಮುಗ್ಧ ಮಕ್ಕಳು ಸೆಲ್ ಒಳಗೆ ಇದ್ದರು!
‘ONCE A CRIMINAL IS ALWAYS A CRIMINAL! ‘ ಅನ್ನುವುದು ತಿಹಾರ್ ಜೈಲಿಗೆ ತುಂಬಾ ಹೊಂದಾಣಿಕೆ ಆಗುತ್ತಿತ್ತು. ಒಮ್ಮೆ ಆ ಜೈಲಿನ ಒಳಗೆ ಬಂದರೆ ಮತ್ತೆ ಹೊರಗೆ ಹೋಗುವ ಎಲ್ಲ ಅವಕಾಶಗಳು ಮುಚ್ಚಿ ಹೋಗುತ್ತಿದ್ದವು. ವರ್ಷಾನುಗಟ್ಟಲೆ ವಿಚಾರಣೆಯೇ ಇಲ್ಲ! ಕತ್ತಲೆಯ ಕೋಣೆಗಳು, ಅನಾರೋಗ್ಯಕರ ವಾತಾವರಣ, ಕ್ರೂರವಾಗಿ ಹೊಡೆಯುವ ಜೈಲು ಅಧಿಕಾರಿಗಳು, ಲಂಚ ಸ್ವೀಕರಿಸುವ ಪೊಲೀಸರು, ಸೆಲ್ ಒಳಗೆ ಮದ್ಯಪಾನ, ಗಾಂಜಾ ಸೇವನೆ, ಜೂಜು, ಅನೈತಿಕ ಚಟುವಟಿಕೆಗಳು… ಹೀಗೆ ಎಲ್ಲ ರೀತಿಯಿಂದಲೂ ತಿಹಾರ್ ಜೈಲು ಕುಖ್ಯಾತಿ ಪಡೆದಿತ್ತು!
ಅಂತಹ ಜೈಲಿಗೆ 1993ರಲ್ಲಿ ಕಾರಾಗೃಹದ ಐಜಿಪಿ ಆಗಿ ಕಿರಣ್ ಬೇಡಿಯ ಆಗಮನ ಆಗಿತ್ತು. ಆಕೆಯ ಮುಂದೆ ಬೆಟ್ಟದಷ್ಟು ಸವಾಲುಗಳು ಇದ್ದವು! ಅವುಗಳನ್ನು ಗೆಲ್ಲಲು ಆಕೆ ನಿರ್ಧಾರ ಮಾಡಿ ದೃಢ ಹೆಜ್ಜೆ ಇಟ್ಟು ಆಗಿತ್ತು! ಬೆಟ್ಟದಷ್ಟು ಆತ್ಮವಿಶ್ವಾಸವೂ ಜೊತೆಗಿತ್ತು!
ಮೊದಲು ಆಕೆ ಸರಿ ಮಾಡಿದ್ದು ಜೈಲಿನ ಭ್ರಷ್ಟರಾದ ಅಧಿಕಾರಿಗಳನ್ನು. ಅವರಲ್ಲಿ ಹಲವರ ತಲೆದಂಡ ಆಯಿತು! ಇನ್ನೂ ಹಲವರ ವರ್ಗಾವಣೆ ನಡೆಯಿತು! ಇನ್ನು ಹಲವರಿಗೆ ಎಚ್ಚರಿಕೆ ಕೊಡಲಾಯಿತು. ಜೈಲ್ ನಿವಾಸಿಗಳನ್ನು ಕ್ರೂರವಾಗಿ ಹೊಡೆಯುವುದು, ಹಿಂಸಾತ್ಮಕವಾಗಿ ದುಡಿಸಿಕೊಳ್ಳುವುದು ನಿಂತು ಹೋಯಿತು. ಜೈಲ್ ಒಳಗೆ ಸಲೀಸಾಗಿ ಬರುತ್ತಿದ್ದ ಮಾದಕ ವಸ್ತುಗಳನ್ನು ಪೂರ್ತಿ ತಡೆಯಲಾಯಿತು. ಲಂಚ ಸ್ವೀಕರಿಸುತ್ತಿದ್ದ ಪೊಲೀಸರು ಗೇಟ್ ಪಾಸ್ ಪಡೆದರು. ಕಿರಣ್ ಬೇಡಿ ದುರ್ಗೆಯ ಅವತಾರವನ್ನು ತಾಳಿದ್ದರು!
ಜೈಲಿನ ನಿವಾಸಿಗಳಿಗೆ ಮೊದಲ ಬಾರಿಗೆ ಆಮೂಲಾಗ್ರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಅವರಿಗೆ ಉಚಿತವಾದ ಶುಶ್ರೂಷೆಯ ವ್ಯವಸ್ಥೆ ಆಯಿತು. ಹೋಮಿಯೋಪತಿ ಚಿಕಿತ್ಸೆಗೆ ಹೆಚ್ಚು ಆದ್ಯತೆ ಕೊಡಲಾಯಿತು. ವಿವಿಧ ಸರಕಾರೇತರ ಸಂಸ್ಥೆಗಳ ಸಹಾಯದಿಂದ ಅತ್ಯಾಧುನಿಕ ಕೌನ್ಸೆಲಿಂಗ್ ಕೇಂದ್ರವು ಜೈಲಿನ ಒಳಗೆ ಆರಂಭ ಆಯಿತು. ಇದು ಜಗತ್ತಿನಲ್ಲಿಯೇ ಮೊದಲು!
ಸೆರೆಮನೆಯ ನಿವಾಸಿಗಳಿಗೆ ಯೋಗ, ಪ್ರಾಣಾಯಾಮ, ಭಗವದ್ಗೀತೆ, ಧಾರ್ಮಿಕ ಪಠನದ ತರಗತಿಗಳು ಆರಂಭವಾದವು. ಮಾನಸಿಕ ದೃಢತೆ ಹೆಚ್ಚು ಮಾಡಲು ಈ ರೀತಿಯ ತರಗತಿಗಳು ನೆರವಾದವು.
ನಿಜವಾದ ಸಮಸ್ಯೆಗಳು ಇನ್ನೂ ಜೀವಂತವಾಗಿ ಇದ್ದವು. ಮಾದಕ ವಸ್ತುಗಳ ಕಳ್ಳ ಸಾಗಾಟದ ಕೇಸ್ ಮೇಲೆ ಅರೆಸ್ಟ್ ಆದ ವಿದೇಶದ ಕೆಲವು ಆಪಾದಿತರು 10-15 ವರ್ಷಗಳಿಂದ ಸೆರೆಮನೆಯಲ್ಲಿಯೇ ಇದ್ದರು. ಯಾಕೆಂದ್ರೆ ಅವರ ವಿಚಾರಣೆಯೇ ಆಗಿರಲಿಲ್ಲ. ಅವರು ತುಂಬಾ ಅಗ್ರೆಸ್ಸಿವ್ ಆಗಿದ್ದರು. ಅವರ ಮನವನ್ನು ಒಲಿಸಿ ಅವರಿಗೆ ಗಿಟಾರ್, ಪಿಯಾನೋ, ಪಿಟೀಲು ಕ್ಲಾಸಗಳು ಆರಂಭ ಆದವು. ಅವರ ತುರ್ತು ವಿಚಾರಣೆಗೆ ವ್ಯವಸ್ಥೆ ಮಾಡಲಾಯಿತು. ಜಾಮೀನು ದೊರೆಯುವ ಸಾಧ್ಯತೆ ಇದ್ದ ನಿವಾಸಿಗಳಿಗೆ ತುರ್ತು ಜಾಮೀನು ವ್ಯವಸ್ಥೆ ಮಾಡಿ ಹೊರಗೆ ಕಳುಹಿಸಲಾಯಿತು.
ಕೈದಿಗಳಿಗೆ ಸ್ವಚ್ಛತಾ ಪ್ರಜ್ಞೆಯ ಬಗ್ಗೆ ಶಿಕ್ಷಣ ಕೊಡಲಾಯಿತು. ಸಿಕ್ಕಿದ್ದಲ್ಲಿ ಉಗುಳುವ, ಮೂತ್ರ ಮಾಡುವ ಆಪಾದಿತರಿಗೆ ಸಣ್ಣ ಸಣ್ಣ ಶಿಕ್ಷೆ ನೀಡಿ ಅವರ ಮನಸ್ಸಿನ ಪರಿವರ್ತನೆಗೆ ತೀವ್ರ ಪ್ರಯತ್ನ ಮಾಡಲಾಯಿತು.
ಇನ್ನೂ ದೊಡ್ಡದಾದ ಸವಾಲು ಎದುರಾದದ್ದು ಏನೆಂದರೆ ಆ ಸೆರೆಮನೆಯಲ್ಲಿ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನ 1000ಕ್ಕಿಂತ ಅಧಿಕ ಬಾಲಾಪರಾಧಿಗಳು ಇದ್ದರು. ಅವರನ್ನು ರಿಮಾಂಡ್ ಹೋಮ್‌ನಲ್ಲಿ ಪ್ರತ್ಯೇಕ ಇಡಬೇಕು ಎಂಬ ಕಾಯ್ದೆ ಇದ್ದರೂ ತಿಹಾರ್ ಜೈಲಿನಲ್ಲಿ ಅದಕ್ಕೆ ವ್ಯವಸ್ಥೆ ಇರಲಿಲ್ಲ. ಅದಕ್ಕಾಗಿ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರ ಹೆಸರಲ್ಲಿ ಎರಡು ವಿನೂತನ ಆದ ವಾರ್ಡ್‌ಗಳ ನಿರ್ಮಾಣ ಮಾಡಲಾಯಿತು. ಅವರಿಗೆ ಓದುವ ಮತ್ತು ಬರೆಯುವ ವ್ಯವಸ್ಥೆಗಳು ಆದವು. ಪಾಠ ಮಾಡಲು ಜೈಲಿನ ಒಳಗೆ ಇದ್ದ ಕೆಲವು ವಿದ್ಯಾವಂತರ ಸಹಾಯ ಪಡೆಯಲಾಯಿತು. ಪಾಠ ಮಾಡುವ ಶಿಕ್ಷಕರಿಗೆ ದಿನಕ್ಕೆ 200 ರೂಪಾಯಿ ವೇತನವನ್ನು ನೀಡಲಾಯಿತು. ತಿಹಾರ್ ಜೈಲು ನಿಧಾನಕ್ಕೆ ಶಾಲೆಯಾಗಿ ಹೊಮ್ಮಿತು!
ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ, ಎಂಬ್ರಾಯ್ಡರಿ, ಕಸೂತಿ ತರಗತಿಗಳು ಆರಂಭ ಆದವು. ಅವರ ಜೊತೆಗೆ ಇದ್ದ ನಿರಪರಾಧಿಗಳಾದ 40 ಪುಟ್ಟ ಮಕ್ಕಳಿಗೆ ಶಾಲೆಗಳ ವ್ಯವಸ್ಥೆಯು ಆಯಿತು. ಅವರಿಗೆ ತಿಂಗಳಿಗೆ ಒಮ್ಮೆ ಕಿರು ಪ್ರವಾಸದ ವ್ಯವಸ್ಥೆ ಆಯಿತು.
ಜೈಲಿನ ಒಳಗೆ ಇಂದಿರಾ ಗಾಂಧಿ ಮುಕ್ತ ವಿವಿಯ ( ಇಗ್ನೌ) ಅಧ್ಯಯನ ಕೇಂದ್ರದ ಶಾಖೆಯು ಆರಂಭ ಆಯಿತು. ಕಲಿಯಲು ಆಸಕ್ತಿ ಇರುವ ಮಂದಿಗೆ ಪಠ್ಯಪುಸ್ತಕ, ವಿಡಿಯೊ, ಆಡಿಯೊ ಉಚಿತವಾಗಿ ಒದಗಿಸಲಾಯಿತು. ಕಂಪ್ಯೂಟರ್ ತರಬೇತಿಯು ಆರಂಭವಾಯಿತು. ಹಲವು ಯುವಕ, ಯುವತಿಯರು ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಪಡೆದು ಹೊರಬಂದರು.
ವಿಚಾರಣಾಧೀನ ಕೈದಿಗಳಿಗೆ ಕಾನೂನು ಮಾಹಿತಿ ಶಿಬಿರಗಳು ನಡೆದವು. ಅವರ ಮನಸ್ಸು ಪರಿವರ್ತನೆಗೆ ಕೌನ್ಸೆಲಿಂಗ್ ಕೇಂದ್ರಗಳು ಶ್ರಮಿಸಿದವು! ಜೈಲಿನ ಒಳಗೆ ಕೈಮಗ್ಗದ ಒಂದು ಘಟಕವು ಉದ್ಘಾಟನೆ ಆಯಿತು. ಮುಂದೆ ಸಾಬೂನು ತಯಾರಿಕೆ, ಖಾದಿ ಬಟ್ಟೆ ತಯಾರಿ, ಬೇಕರಿ ಉತ್ಪನ್ನಗಳ ತಯಾರಿ ಘಟಕಗಳು ಆರಂಭ ಆದವು.
ಅವರ ಉತ್ಪನ್ನಗಳಿಗೆ ಮಾರ್ಕೆಟ್ ಬೇಕಲ್ಲಾ? ಅದಕ್ಕಾಗಿ ಕಿರಣ್ ಬೇಡಿ ಅವರು ನಗರದಲ್ಲಿ ಹಲವು ಮಾರಾಟ ಕೇಂದ್ರಗಳನ್ನು ತೆರೆದರು. ಅದಕ್ಕೆ ‘ತಿಹಾರ್ ಉತ್ಪನ್ನಗಳ ಮಾರಾಟ ಮಳಿಗೆ ‘ ಎಂಬ ಬೋರ್ಡುಗಳನ್ನು ಬರೆಸಲಾಯಿತು. ಗುಣಮಟ್ಟ ಚೆನ್ನಾಗಿ ಇದ್ದ ಕಾರಣ ವ್ಯಾಪಾರ ಭರ್ಜರಿ ಆಯಿತು. ಅದರ ಲಾಭವನ್ನು ನೇರವಾಗಿ ಕೈದಿಗಳ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಕಿರಣ್ ಮೇಡಂ ಮಾಡಿದರು.
ಇದು ಸೆರೆಮನೆ ನಿವಾಸಿಗಳ ಬದುಕಿನಲ್ಲಿ ಭಾರೀ ಬದಲಾವಣೆ ತಂದಿತು!
ವಿಪಷ್ಯನ ಯೋಗ ಶಿಬಿರಗಳು ಸೆರೆಮನೆಯಲ್ಲಿ ಭಾರೀ ಬದಲಾವಣೆ ತಂದವು. ಮೊದ ಮೊದಲು ಪ್ರತಿಭಟನೆ ಮಾಡಿದ ಆಪಾದಿತರು ನಿಧಾನವಾಗಿ ಕಿರಣ್ ಮೇಡಂ ಅವರ ಸಹಜ ಪ್ರೀತಿಗೆ ಮನ ಸೋತರು. ಆಕೆಯು ಮಧ್ಯಾಹ್ನ ಸ್ವತಃ ಜೈಲಿಗೆ ಬಂದು ಎಲ್ಲ ಕೈದಿಗಳಿಗೆ ಮೊದಲು ಊಟ ಬಡಿಸಿ ಕೊನೆಗೆ ಅವರ ಜೊತೆ ಊಟ ಮಾಡುತ್ತಿದ್ದರು! ಕೈದಿಗಳು ಉಣ್ಣುತ್ತಿದ್ದ ಅನ್ನವನ್ನೇ ಅವರು ದಿನವೂ ಊಟ ಮಾಡುತ್ತಿದ್ದರು. ಕೈದಿಗಳು ಅವರನ್ನು ಪ್ರೀತಿಯಿಂದ ‘ಕಿರಣ್ ದೀದಿ’ ಎಂದು ಕರೆಯಲು ಆರಂಭ ಮಾಡಿದರು. ಅವರ ಉದಾತ್ತವಾದ ಆಶಯಗಳಿಗೆ ಬೆಂಬಲವಾಗಿ ನಿಂತರು.
ಪ್ರತಿಯೊಬ್ಬ ಕೈದಿಯು ವಿಚಾರಣೆ ಮುಗಿದು ತೀರ್ಪು ಪಡೆದು ಹಿಂದೆ ಹೊರಟಾಗ ಅವರ ಮನೆಯವರನ್ನು ಕರೆದು ಅವರ ಸಮ್ಮುಖದಲ್ಲಿ ಬುದ್ಧಿವಾದ ಹೇಳಿ ಬೀಳ್ಕೊಡುತ್ತಿದ್ದರು. ಇನ್ನು ಯಾವತ್ತೂ ಇಲ್ಲಿಗೆ ಬರಬೇಡಿ ಎನ್ನುತ್ತಿದ್ದರು ಕಿರಣ್ ಬೇಡಿ. ಅವರ ಮಾನವೀಯ ಸ್ಪರ್ಶಕ್ಕೆ ಕಠೋರ ಹೃದಯದ ಕ್ರಿಮಿನಲ್ ಅಪರಾಧಿಗಳು ಕೂಡ ಕರಗಿ ಹೋಗುತ್ತಿದ್ದರು.
ಕಿರಣ್ ಬೇಡಿ ಮಾಡಿದ ಈ ಜೈಲು ಸುಧಾರಣೆಯ ಕ್ರಮಗಳು ಜಗತ್ತಿನಲ್ಲಿಯೇ ವಿನೂತನ ಆಗಿದ್ದವು. ಅದರಿಂದ ದೇಶದ, ವಿದೇಶದ ಮಾಧ್ಯಮಗಳು ಆಕೆಯ ಬಗ್ಗೆ, ತಿಹಾರ್ ಜೈಲಿನ ಸುಧಾರಣ ಕ್ರಮಗಳ ಬಗ್ಗೆ ಲೀಡ್ ಲೇಖನ ಬರೆದವು. ಆಗ ಭಾರೀ ಇಂಪ್ರೆಸ್ ಆದ ಅಮೆರಿಕಾದ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಆಕೆಗೆ ಪತ್ರ ಬರೆದು ಶುಭಾಶಯ ಹೇಳಿದರು. ಮತ್ತು ಅವರ ಜೊತೆ ಒಮ್ಮೆ ಊಟ ಮಾಡಬೇಕು ಅಂತ ಆಸೆ ವ್ಯಕ್ತ ಪಡಿಸಿದರು! ಆಕೆಗೆ ಜಾಗತಿಕ ಮಟ್ಟದ ‘ಮ್ಯಾಗ್ಸೆಸೆ ಪ್ರಶಸ್ತಿ’ಯು ದೊರೆಯಿತು. ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತು. ಮುಂದೆ ನಿವೃತ್ತರಾದ ನಂತರ ಅವರು ಪಾಂಡಿಚೇರಿಯ ಮೊದಲ ಮಹಿಳಾ ಗವರ್ನರ್ ಆಗಿ ಸೇವೆ ಸಲ್ಲಿಸಿದರು.
ಕಿರಣ್ ಬೇಡಿ ಅವರ ಆತ್ಮಚರಿತ್ರೆಯ ಪುಸ್ತಕ DARE TO BE GREAT ಓದುತ್ತಾ ಹೋದಂತೆ ನಮಗೆ ಅವರ ಅಗಾಧವಾದ ವ್ಯಕ್ತಿತ್ವವು ನಮ್ಮ ಕಣ್ಣ ಮುಂದೆ ಬರುತ್ತದೆ. ಆಕೆ ನಿಜವಾಗಿಯೂ ಗ್ರೇಟ್ ಎಂದು ನನ್ನ ಭಾವನೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಜೂಲನ್ ಗೋಸ್ವಾಮಿ ಎಂಬ ಫೈಟಿಂಗ್ ಸ್ಪಿರಿಟ್! ಇಂದು ಚಕಡಾ ಎಕ್ಸ್‌ಪ್ರೆಸ್‌ನ ಕೊನೇ ಓಟ!