Site icon Vistara News

Raja Marga Column : ಕುವೆಂಪು ಎಂಬ ನಿತ್ಯ ಚೇತನ; ಯುಗದ ಕವಿ, ಜಗದ ಕವಿಗೆ ಇಂದು ಜನುಮ ದಿನ

Kuvempu birth day

ಭಾರತದ ಯಾವ ಭಾಷೆಯಲ್ಲಿಯೂ ಇಷ್ಟೊಂದು ವಿಸ್ತಾರವಾದ ಹಾಗೂ ಇಷ್ಟೊಂದು ಜನಪ್ರಿಯವಾದ ಸಾಹಿತ್ಯದ ರಚನೆ ಮಾಡಿದ ಕವಿಯು ನಮಗೆ ದೊರೆಯುವುದಿಲ್ಲ. ಆದ್ದರಿಂದ ಅವರು ಕೇವಲ ಕನ್ನಡದ ಕವಿ ಮಾತ್ರ ಅಲ್ಲ, ಇಡೀ ರಾಷ್ಟ್ರದ ಕವಿ! ಈ ಮಾತುಗಳು ಕುವೆಂಪು ಅವರ ದೈತ್ಯ ಸಾಹಿತ್ಯ ಸಾಧನೆಗೆ ಕನ್ನಡಿ ಹಿಡಿಯುತ್ತವೆ. ಅವರು ಕನ್ನಡದ ಮೊದಲ ಜ್ಞಾನಪೀಠ ವಿಜೇತ (Jnanapeeta Awardee) ಕವಿ. ಎರಡನೆಯ ರಾಷ್ಟ್ರಕವಿ. ಕನ್ನಡಿಗರು ಇಂದು ಎದೆ ಉಬ್ಬಿಸಿ ನಡೆಯಲು ಕಾರಣರಾದ ಕವಿಗಳಲ್ಲಿ ಕುವೆಂಪು (Writer Kuvempu) ಒಂದು ಎತ್ತರದ ಹೆಸರು ಅನ್ನುವುದು ಹೆಚ್ಚು ನಿಜ (Raja Marga Column).

ಕುವೆಂಪು ಎಂದರೆ ಸುಂದರವಾದ ಭಾವಗೀತೆಗಳು

ಕನ್ನಡದಲ್ಲಿ ಕುವೆಂಪು ಬರೆದಷ್ಟು ಶ್ರೀಮಂತವಾದ ಭಾವಗೀತೆಗಳನ್ನು ಬೇರೆ ಯಾರೂ ಬರೆದಿಲ್ಲ. ನಮಗೆ ಬಾಲ್ಯದಲ್ಲಿ ಅವರು ಪರಿಚಯ ಆದದ್ದೇ ಕವನಗಳ ಮೂಲಕ. ಅವರ ಹಾಡುಗಳು ಸುಂದರ ಪದ ಲಾಲಿತ್ಯದ ಬಂಧವನ್ನು ಹೊಂದಿರುವ ಜೊತೆಗೆ ಗೇಯತೆ ಹೊಂದಿರುವ ಕಾರಣ ಯಾವ ರಾಗದಲ್ಲಿಯೂ ಹಾಡಲು ಅನುಕೂಲ ಆದವುದಳು. ಬಾ ಇಲ್ಲಿ ಸಂಭವಿಸು ಕವಿತೆಯು ವಿವೇಕಾನಂದರಿಂದ ಪ್ರಭಾವಿತವಾದರೆ, ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಹಂಪೆಯಿಂದ ಪ್ರಭಾವಿತ ಆಗಿತ್ತು. ಬಾರಿಸು ಕನ್ನಡ ಡಿಂಡಿಮವ ನಮ್ಮ ಸ್ವಾಭಿಮಾನ ಬಡಿದೆಬ್ಬಿಸಿದ ಹಾಡು. ಅಗಣಿತ ತಾರಾ ಗಣಗಳ ನಡುವೆ ಗುರುವಿಗೆ ಸಮರ್ಪಣೆ ಆದ ಹಾಡು. ದೇವರು ರುಜು ಮಾಡಿದನು ಪ್ರಕೃತಿ ಮಾತೆಯ ಪರಿಪೂರ್ಣತೆಯ ಗುಣಗಾನ. ಓ ನನ್ನ ಚೇತನಾ ಅನಿಕೇತನದ ಸುಂದರ ಹಾಡು. ಆನಂದಮಯ ಈ ಜಗ ಹೃದಯ ನಮ್ಮೊಳಗಿನ ಆನಂದದ ಅನ್ವೇಷಣೆಯ ಹಾಡು. ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ ಒಂದು ರೊಮ್ಯಾಂಟಿಕ್ ಪ್ರಸ್ತುತಿ.

ಎಲ್ಲಾದರೂ ಇರು ಎಂತಾದರೂ ಇರು ಡಾಕ್ಟರ್ ರಾಜಕುಮಾರ್ ಧ್ವನಿಯಲ್ಲಿ ಅಮರತ್ವ ಪಡೆದ ಗೀತೆ. ದೋಣಿ ಸಾಗಲಿ ಮುಂದೆ ಹೋಗಲಿ ಒಂದು ಭಾವಪೂರ್ಣ ಗೀತೆ. ಇನ್ನು ನಾಡಗೀತೆ, ರೈತಗೀತೆ ಎರಡೂ ಕನ್ನಡಕ್ಕೆ ಅವರು ಕೊಟ್ಟ ಶ್ರೇಷ್ಠವಾದ ಕೊಡುಗೆಗಳು. ಒಟ್ಟು 23 ಕವನ ಸಂಕಲನಗಳನ್ನು ಅವರು ಬರೆದಿದ್ದು ಅವುಗಳಲ್ಲಿ ಅನಿಕೇತನ, ಕೊಳಲು, ಪಕ್ಷಿ ಕಾಶಿ, ಚಂದ್ರ ಮಂಚಕೆ ಬಾ ಚಕೋರಿ ಇವುಗಳು ತುಂಬಾ ಜನಪ್ರಿಯ ಆಗಿವೆ.

ಆರಂಭದಲ್ಲಿ ಬರೆದದ್ದು ಇಂಗ್ಲಿಷ್‌ ಕವಿತೆಗಳನ್ನು

ಆಧುನಿಕ ಆಂಗ್ಲ ಕವಿಗಳ ಪ್ರಭಾವದಿಂದ ಆರಂಭದಲ್ಲಿ ಅವರು ಬರೆದದ್ದು ಆರು ಇಂಗ್ಲೀಷ್ ಕವಿತೆಗಳನ್ನು. ಅವುಗಳನ್ನು ತೆಗೆದುಕೊಂಡು ಹೋಗಿ ತನ್ನ ಗುರುಗಳಾದ ಜೇಮ್ಸ್ ಕಸಿನ್ ಅವರಿಗೆ ತೋರಿಸಿದ್ದರು. ಅವರು ಬ್ರಿಟಿಷ್ ಶಿಕ್ಷಕರು. ಅವರು ‘ನಿನ್ನ ಕವಿತೆಗಳು ಚೆನ್ನಾಗಿವೆ. ನೀನ್ಯಾಕೆ ನಿನ್ನ ಮಾತೃಭಾಷೆಯಲ್ಲಿ ಬರೆಯಬಾರದು?’ ಹೇಳಿದ್ದೇ ಆರಂಭ. ಅಲ್ಲಿಂದ ಮುಂದೆ ಕುವೆಂಪು ಬರೆದದ್ದು ಎಲ್ಲವೂ ಕನ್ನಡ ಮತ್ತು ಕನ್ನಡದಲ್ಲಿ. ಆ ಕಾರಣಕ್ಕೆ ಆ ಆಂಗ್ಲ ಅಧ್ಯಾಪಕರಿಗೆ ನಾವು ಋಣಿ ಆಗಿರಬೇಕು.

ಎರಡು ಮಹಾ ಕಾದಂಬರಿಗಳು

ಭಾರತದ ಯಾವ ಭಾಷೆಯಲ್ಲಿ ಕೂಡ ಅಗ್ರಪಂಕ್ತಿಯ ಕಾದಂಬರಿಗಳಾಗಿ ನಿಲ್ಲುವ ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿ ಎಂಬ ಎರಡು ಕಾದಂಬರಿಗಳನ್ನು ಬರೆದವರು ಅವರು. ಇವುಗಳಲ್ಲಿ ಅಳವಡಿಕೆ ಆಗಿರುವ ಮಲೆನಾಡಿನ ಪ್ರಕೃತಿ ಸೌಂದರ್ಯ ಮತ್ತು ಮಾನವೀಯ ಅಂತಃಕರಣದ ಪಾತ್ರಗಳು ನಿಜವಾಗಿಯೂ ಅದ್ಭುತ. ಅದರಲ್ಲಿಯೂ ಮೊದಲನೆಯ ಕಾದಂಬರಿ ಸಿನೆಮಾ ಆಗಿ, ಒಂಬತ್ತು ಘಂಟೆಯ ಅವಧಿಯ ನಾಟಕ (ಪ್ರಸ್ತುತಿ ಮೈಸೂರು ರಂಗಾಯಣ) ಆಗಿ ಭಾರೀ ಜನಪ್ರಿಯ ಆಯಿತು.

ಅವರ ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ ‘ಶ್ರೀ ರಾಮಾಯಣ ದರ್ಶನಂ’ ಅವರ ಒಂಬತ್ತು ವರ್ಷಗಳ ಅಧ್ಯಯನದ ಫಲದಿಂದ ಹುಟ್ಟಿದ ಮಹಾಕಾವ್ಯ. ಅದು ಮೂಲ ರಾಮಾಯಣದ ಕೃತಿಗೆ ಒಂದು ಭಾಷ್ಯ ಬರೆದಷ್ಟು ಸುಂದರವಾಗಿದೆ. ಅದು ಕವಿಯ ಕೈಬರಹದಲ್ಲಿ ಕೂಡ ಲಭ್ಯವಾದ ಕೃತಿ. ಅದು ಆಧುನಿಕ ಚಿಂತನೆಗಳ ರಸಪಾಕ ಆಗಿದೆ. ಉದಾಹರಣೆಗೆ ಅಲ್ಲಿ ಸೀತೆಯೊಂದಿಗೆ ರಾಮನೂ ಅಗ್ನಿಪ್ರವೇಶ ಮಾಡುವ ಸನ್ನಿವೇಶ ಬರುತ್ತದೆ! ಅಷ್ಟರ ಮಟ್ಟಿಗೆ ಅದು ಕುವೆಂಪು ಅವರ ಸಮಾಜದ ಸಮಾನತೆಯ ಕನ್ನಡಿ. ಕುವೆಂಪು ಒಟ್ಟು 12 ನಾಟಕಗಳನ್ನು ಬರೆದಿದ್ದು ಅವುಗಳಲ್ಲಿ ರಕ್ತಾಕ್ಷಿ, ಶೂದ್ರ ತಪಸ್ವಿ , ಸ್ಮಶಾನ ಕುರುಕ್ಷೇತ್ರಮ್, ಬೆರಳ್‌ಗೆ ಕೊರಳ್‌ ನಾಟಕಗಳು ಸಾವಿರಾರು ವೇದಿಕೆಯ ಪ್ರಯೋಗ ಕಂಡು ಜನಪ್ರಿಯ ಆಗಿವೆ. ಶೂದ್ರ ತಪಸ್ವಿ ನಾಟಕವಂತೂ ಸಮಾಜದ ತಾರತಮ್ಯ ನೀತಿಯ ಬಗ್ಗೆ ಧ್ವನಿ ಎತ್ತಿದ ನಾಟಕ.

ಕ್ರಾಂತಿಕಾರಕ ಯೋಚನೆಗಳ ಕವಿ

ಕುವೆಂಪು ತನ್ನ 90ಕ್ಕೂ ಹೆಚ್ಚು ಕೃತಿಗಳಲ್ಲಿ ಪ್ರತಿಪಾದನೆ ಮಾಡಿದ್ದು ಕ್ರಾಂತಿಕಾರಕ ವಿಚಾರಧಾರೆಗಳನ್ನು.

‘ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮುಟ್ಟ ಕೀಳಬನ್ನಿ’ ಎಂದು ಬರೆಯಲು ಅವರಿಗೆ ಮಾತ್ರ ಸಾಧ್ಯ ಆಗುವಂತದ್ದು. ಪ್ರಬಲ ಸಮಾಜವನ್ನು ಎದುರು ಹಾಕಿಕೊಳ್ಳಲು ಅವರು ಹಿಂದೆ ಮುಂದೆ ನೋಡಲಿಲ್ಲ. ಮೌಢ್ಯವನ್ನು ಖಂಡಿಸದೇ ಮುಂದೆ ಹೋಗಲಿಲ್ಲ. ಮಂತ್ರ ಮಾಂಗಲ್ಯದ ಮೂಲಕ ವಿವಾಹ ಅವರ ಯೋಚನೆಗಳ ರಸಪಾಕ. ಕವಿಶೈಲದ ಈ ಕವಿಗೆ ಸಮಾಜವನ್ನು ತನ್ನ ಕೃತಿಗಳ ಮೂಲಕ ತಿದ್ದುವ ಕಾಳಜಿ ಎದ್ದುಕಾಣುತ್ತದೆ. ಕುವೆಂಪು ಅವರ ಸಾಹಿತ್ಯ ಕೃತಿ ಮತ್ತು ಬದುಕು ಎರಡೂ ಒಂದೇ ಆಗಿದ್ದವು. ಕುವೆಂಪು ಅವರ ಮಗ ಪೂರ್ಣ ಚಂದ್ರ ತೇಜಸ್ವಿ ಮುಂದೆ ಅಪ್ಪನ ಸಾಹಿತ್ಯದ ಪರಂಪರೆಯನ್ನು ಅಷ್ಟೇ ಸಮರ್ಥವಾಗಿ ಮುಂದುವರಿಸಿದರು.

ಕುವೆಂಪು ಜನ್ಮದಿನವನ್ನು ‘ವಿಶ್ವ ಮಾನವ ದಿನ’ವಾಗಿ ಆಚರಣೆ ಮಾಡಲು ರಾಜ್ಯಸರ್ಕಾರ 2015ರಲ್ಲಿ ನಿರ್ಧಾರ ಮಾಡಿತ್ತು. ಅವರಿಗೆ ಜ್ಞಾನಪೀಠ, ಪಂಪ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ, ಕರ್ನಾಟಕ ರತ್ನ ಪ್ರಶಸ್ತಿ ಎಲ್ಲವೂ ದೊರೆತಿವೆ. ಕನ್ನಡದ ಒಂದು ಶ್ರೇಷ್ಠ ವಿವಿಗೆ, ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡಲಾಗಿದೆ.

ಇದನ್ನೂ ಓದಿ : Raja Marga Column : ಬದುಕಿದರೆ ಬದುಕಬೇಕು ಇವರ ಹಾಗೆ..; ಪುರಾಣದಲ್ಲಿವೆ ನೂರಾರು ಮಾದರಿ

ಒಬ್ಬ ಕನ್ನಡದ ಶ್ರೇಷ್ಟ ಕವಿಯಾಗಿ, ಪ್ರಾಧ್ಯಾಪಕರಾಗಿ, ಮೈಸೂರು ವಿವಿಯ ಉಪಕುಲಪತಿಯಾಗಿ ಅವರು ಮಾಡಿದ ಕನ್ನಡದ ಸೇವೆಯನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಮಗ ಪೂರ್ಣಚಂದ್ರ ತೇಜಸ್ವಿ ಬರೆದ ‘ಅಣ್ಣನ ನೆನಪು’ ಕೃತಿ ಮತ್ತು ಕುವೆಂಪು ಅವರ ಆತ್ಮಚರಿತ್ರೆಯ ಪುಸ್ತಕ ‘ನೆನಪಿನ ದೋಣಿ’ ಓದಿದರೆ ನಮಗೆ ಕುವೆಂಪು ಅವರ ಸಾಹಿತ್ಯ ಶಕ್ತಿಯ ಅರಿವು ಆಗುತ್ತದೆ. 1994ರಲ್ಲಿ ಅವರು ನಮ್ಮನ್ನು ಅಗಲಿದಾಗ ಭರ್ತಿ ತೊಂಬತ್ತು ವರ್ಷ ಸಾರ್ಥಕ ಬದುಕು ಬದುಕಿದ್ದರು.

Exit mobile version