Site icon Vistara News

ರಾಜ ಮಾರ್ಗ ಅಂಕಣ : ಹಾಸಿಗೆ ಇದ್ದಷ್ಟೇ ಯಾಕೆ ಕಾಲು ಚಾಚಬೇಕು? ಕಾಲಿದ್ದಷ್ಟು ಉದ್ದದ ಹಾಸಿಗೆ ಯಾಕೆ ಮಾಡಿಸಬಾರದು?

Raja marga column

#image_title

‘ಗಾದೆಗಳು ವೇದಕ್ಕೆ ಸಮ’ ಎಂದರು ನಮ್ಮ ಹಿರಿಯರು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದರು ಅವರು!
ಬಾಲ್ಯದಲ್ಲಿ ನಾವೆಲ್ಲರೂ ಕಲಿತ ಈ ಮೇಲಿನ ಗಾದೆಯು ನಮಗೆ ಸಂತೃಪ್ತ ಬದುಕಿನ ಅಗತ್ಯವನ್ನು ಸೂಚಿಸುತ್ತದೆ. ನಮ್ಮ ಮಿತಿಗಳನ್ನು ಮೀರಿ ದೊಡ್ಡ ಆಸೆ ಇಟ್ಟುಕೊಳ್ಳುವುದು ಬೇಡ ಅಂತ ಅದರ ಅರ್ಥ. ಅವರು ಹಾಗೆ ಹೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ..?

ಆದರೆ ಬದುಕಿನಲ್ಲಿ ಭರವಸೆಯನ್ನು ಇಡಬಾರದು ಎಂದು ಯಾರೂ ಹೇಳಿಲ್ಲ! ಈ ಭರವಸೆಗಳೇ ಮುಂದೆ ನಮ್ಮ ಆಕಾಂಕ್ಷೆಗಳಾಗಿ, ನಮ್ಮ ಕನಸುಗಳಾಗಿ ನಮ್ಮನ್ನು ಕೈ ಹಿಡಿದು ಯಶಸ್ಸಿನ ಕಡೆಗೆ ಮುನ್ನಡೆಸುತ್ತವೆ. ಆದ್ದರಿಂದ ದೊಡ್ಡ ಕನಸುಗಳನ್ನು ಕಾಣುವುದರಲ್ಲಿ ಯಾವ ತಪ್ಪು ಕೂಡ ಇಲ್ಲ. ನಮಗೆ ಆ ಕನಸುಗಳನ್ನು ನನಸು ಮಾಡುವ ಸಂಕಲ್ಪ ಶಕ್ತಿಯು ಇದೆ ಅಂತಾದರೆ ನಾವು ಎಷ್ಟು ದೊಡ್ಡ ಕನಸು ಕೂಡ ಕಾಣಬಹುದು. ಏಕೆಂದರೆ….

ಈ ಕೆಳಗಿನವರು ಹಾಸಿಗೆ ಇದ್ದಷ್ಟೇ ಕಾಲು ಚಾಚಿದ್ದರೆ…?

1) ಪೆಟ್ರೋಲ್ ಬಂಕ್ ಹುಡುಗ ಧೀರೂಭಾಯಿ ಅಂಬಾನಿ ಮುಂದೆ ಭಾರತದ ಅತೀ ದೊಡ್ಡ ಉದ್ಯಮಿ ಆಗಲು ಸಾಧ್ಯವೇ ಇರಲಿಲ್ಲ!
2) ಅಮೆರಿಕದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ಹುಡುಗ ಜಾರ್ಜ್ ವಾಷಿಂಗ್ಟನ್ ಅಮೆರಿಕದ ಮೊದಲ ಅಧ್ಯಕ್ಷ ಆಗಲು ಸಾಧ್ಯವೇ ಇರಲಿಲ್ಲ!
3) ಗುಡಿಸಲಲ್ಲಿ ಹುಟ್ಟಿದ ಅಬ್ರಹಾಂ ಲಿಂಕನ್ ಅಮೆರಿಕದ ಅತ್ಯುತ್ತಮ ಅಧ್ಯಕ್ಷ ಆಗುತ್ತಲೇ ಇರಲಿಲ್ಲ!
4) ಅಮೆರಿಕದಲ್ಲಿ ತನ್ನ ಬಾಲ್ಯದಲ್ಲಿ ಸ್ಮಶಾನದಲ್ಲಿದ್ದ ಎಲುಬುಗಳನ್ನು ಹುಡಿ ಮಾಡಿ ಮಾರಾಟ ಮಾಡಿ ಚಿಲ್ಲರೆ ಹಣವನ್ನು ಸಂಪಾದನೆ ಮಾಡುತ್ತಿದ್ದ ರಾಕ್ ಫೆಲ್ಲರ್ ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿ ಆಗುತ್ತಲೇ ಇರಲಿಲ್ಲ!
5) ಕಿವುಡ ಮತ್ತು ಮೂಕ ಆದ ಬೇಥೋವೆನ್ ಜಗತ್ತಿನ ಅದ್ಭುತ ಸಂಗೀತಗಾರ ಆಗುತ್ತಲೇ ಇರಲಿಲ್ಲ!
6) ಎರಡೂ ಕಿವಿ ಕೇಳದ ಮತ್ತು ಬಾಲ್ಯದಲ್ಲಿ ‘ಗುಡ್ ಫಾರ್ ನಥಿಂಗ್’ ಎಂದು ಅಧ್ಯಾಪಕರಿಂದ ಬೈಸಿಕೊಂಡ ಎಡಿಸನ್ ಮುಂದೆ ಜಗತ್ತಿನ ಅತ್ಯುತ್ತಮ ವಿಜ್ಞಾನಿ ಆಗುತ್ತಲೇ ಇರಲಿಲ್ಲ!

7) ಒಂದು ಕಾಲು ಕಳೆದುಕೊಂಡ ನಂತರ ಅರುಣಿಮಾ ಸಿನ್ಹಾ ಮೌಂಟ್ ಎವರೆಸ್ಟನ್ನು ಏರುವ ಸಾಹಸವನ್ನು ಮಾಡುತ್ತಲೇ ಇರಲಿಲ್ಲ!

ಅರುಣಿಮಾ ಸಿನ್ಹಾ, ಯಶ್‌ ಮತ್ತು ಸುಧಾಚಂದ್ರನ್‌

8) ಕನ್ನಡದ ಸಿನಿಮಾ ನಟನಾಗುವ ಆಸೆಯಿಂದ ರಾತ್ರಿ ತನ್ನ ಅಪ್ಪನ ಕಿಸೆಯಿಂದ 300 ರೂ.ಗಳನ್ನು ಎಗರಿಸಿ ಬೆಂಗಳೂರು ಬಸ್ ಹತ್ತಿದ ಯಶ್ ಇಂದು ಕನ್ನಡದ ಅತೀ ಶ್ರೀಮಂತ ಪಾನ್ ಇಂಡಿಯಾ ಸಿನೆಮಾಗಳ ಹೀರೋ ಆಗಲು ಸಾಧ್ಯವೇ ಇರಲಿಲ್ಲ!
9) ಬಾಲ್ಯದಲ್ಲಿ ರಿಕ್ಷಾ ಅಪಘಾತದಲ್ಲಿ ಬಲಕಾಲನ್ನು ಕಳೆದುಕೊಂಡ ಸುಧಾಚಂದ್ರನ್ ಮುಂದೆ ಕೃತಕ ಚರ್ಮದ ಕಾಲು ಜೋಡಿಸಿ ಭರತನಾಟ್ಯದ ಕಲಿಕೆಯನ್ನು ಮುಂದುವರಿಸಿ ‘ನಾಟ್ಯ ಮಯೂರಿ’ ಆಗಲು ಸಾಧ್ಯವೇ ಇರಲಿಲ್ಲ!

10) ಹೆಚ್ಚು ವಿದ್ಯಾಭ್ಯಾಸವನ್ನು ಪಡೆಯಲು ಅನುಕೂಲ ಇಲ್ಲದ, ಯಾವ ಗಾಡ್ ಫಾದರ್ ಕೂಡ ಇಲ್ಲದ ಅಡ್ವೆಯ ಜಯ ಸಿ ಸುವರ್ಣ ಅವರು ಬಾಲ್ಯದಲ್ಲಿಯೇ ಮುಂಬೈಗೆ ಹೋಗಿ ಹಸಿವನ್ನು ಗೆದ್ದು, ಉದ್ಯಮಗಳ ಸಾಮ್ರಾಜ್ಯವನ್ನು, ಭಾರತ್ ಬ್ಯಾಂಕನ್ನು ಸ್ಥಾಪನೆ ಮಾಡಲು ಸಾಧ್ಯವೇ ಇರಲಿಲ್ಲ!
11) ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದ ರಜನೀಕಾಂತ್ ಸೂಪರ್ ಸ್ಟಾರ್ ಆಗಿ ಜಗತ್ತಿನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಪಡೆಯಲು ಸಾಧ್ಯವೇ ಇರಲಿಲ್ಲ!
12) ಬಾಲ್ಯದಲ್ಲಿ ಉಪ್ಪಿನಕಾಯಿ ಮಾರುತ್ತಿದ್ದ ರಾಮೋಜಿ ರಾವ್ ಏಷಿಯಾದ ಅತೀ ದೊಡ್ಡ ಸ್ಟುಡಿಯೋವನ್ನು ಹೈದರಾಬಾದ್‌ನಲ್ಲಿ ಕಟ್ಟಲು ಸಾಧ್ಯವೇ ಇರಲಿಲ್ಲ!
13) ತೊಟ್ಟಿಗಳಲ್ಲಿ ಬಿಸಾಡುತ್ತಿದ್ದ ಎಂಜಲು ಎಲೆಯ ಆಹಾರವನ್ನು ಹಸಿವಿಗಾಗಿ ಹೆಕ್ಕಿ ತಿನ್ನುತ್ತಿದ್ದ ಸಾಧು ಕೋಕಿಲ ಮುಂದೆ ಕನ್ನಡದ ಅತ್ಯುತ್ತಮ ಹಾಸ್ಯನಟ, ಸಂಗೀತ ನಿರ್ದೇಶಕ ಆಗಲು ಸಾಧ್ಯವೇ ಇರಲಿಲ್ಲ!
14) ‘ಧ್ವನಿ ಸರಿ ಇಲ್ಲ’ ಎಂಬ ಕಾರಣಕ್ಕೆ ಆಕಾಶವಾಣಿಯಲ್ಲಿ ರಿಜೆಕ್ಟ್ ಆಗಿದ್ದ, ಮುಖ ಫೋಟೊಜೆನಿಕ್ ಇಲ್ಲ ಎಂಬ ಕಾರಣಕ್ಕೆ ದೂರದರ್ಶನದಲ್ಲಿ ರಿಜೆಕ್ಟ್ ಆಗಿದ್ದ ಅಮಿತಾಬ್ ಬಚ್ಚನ್ ಇಂದು ಭಾರತದ ಅತೀ ಹೆಚ್ಚು ಬೇಡಿಕೆಯ ಸ್ಟಾರ್ ನಟ ಆಗುತ್ತಲೇ ಇರಲಿಲ್ಲ!
15) ಮಂಗಳೂರು ಹಂಪನಕಟ್ಟೆಯಲ್ಲಿ ಮೂಸಂಬಿ, ಕಿತ್ತಳೆ ಮಾರುತ್ತಿದ್ದ ಹರೇಕಳ ಹಾಜಬ್ಬ ತನ್ನೂರಿನ ಮಕ್ಕಳಿಗಾಗಿ ಶಾಲೆಯ ಕಟ್ಟಡವನ್ನು ಕಟ್ಟಲು ಸಾಧ್ಯವೇ ಇರಲಿಲ್ಲ!

16) ಮೂರನೇ ಕ್ಲಾಸ್ ಮಾತ್ರ ಕಲಿತ ಮತ್ತು ಇಡೀ ಜೀವನ ಬಡತನವನ್ನೇ ಹೊದ್ದು ಮಲಗಿದ್ದ ಎನ್. ನರಸಿಂಹಯ್ಯ 350ಕ್ಕಿಂತ ಹೆಚ್ಚು ಕನ್ನಡದ ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ಸಾಧ್ಯವೇ ಇರಲಿಲ್ಲ!
17) ಬಾಲ್ಯ ಮತ್ತು ಯೌವ್ವನದಲ್ಲಿ ಬೀಡಿ ಎಲೆಗಳನ್ನು ಬೈಸಿಕಲಲ್ಲಿ ಕಟ್ಟಿಕೊಂಡು ಮನೆ ಮನೆಗೆ ಮಾರುತ್ತಿದ್ದ ಬಡ ಕುಟುಂಬದ ಹುಡುಗ ಆಗಿದ್ದ ಕಾರ್ಕಳದ ಬೊಂಬೆತಡ್ಕದ ಮಂಜುನಾಥ್ ಪೈ ಮುಂದೆ ಭಾರತ್ ಬೀಡಿ, ಭಾರತ್ ಮಾಲ್, ಭಾರತ್ ಬುಕ್ ಮಾರ್ಕ್, ಭಾರತ್ ಮೋಟಾರ್ಸ್ ಮೊದಲಾದ ಮಹಾ ಉದ್ಯಮ ಸಂಸ್ಥೆಗಳನ್ನು ಆರಂಭ ಮಾಡಲು ಸಾಧ್ಯವೇ ಇರಲಿಲ್ಲ!

ಎನ್‌. ನರಸಿಂಹಯ್ಯ, ಮಂಜುನಾಥ ಪೈ, ರವಿ ಬೆಳಗೆರೆ, ಜಾನ್‌ ಮಿಲ್ಟನ್‌ ಮುದ್ದಣ ಕೆ.ಎಸ್‌. ಹೆಗ್ಡೆ

18) ತೀವ್ರವಾದ ಬಡತನದಿಂದ ಬಾಲ್ಯದಲ್ಲಿ ಹಸಿವನ್ನೇ ಒಡನಾಡಿ ಮಾಡಿಕೊಂಡ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ರವಿ ಬೆಳಗೆರೆ ಕನ್ನಡದ ಶ್ರೇಷ್ಠ ಪತ್ರಕರ್ತ ಆಗುತ್ತಿರಲಿಲ್ಲ!
19) ಬಾಲ್ಯದಲ್ಲಿ ಇಂಗ್ಲಿಷ್ ವ್ಯಾಕರಣ ಬರುವುದಿಲ್ಲ ಎಂದು ಅಪಮಾನಕ್ಕೆ ಒಳಗಾಗುತ್ತಿದ್ದ ಜಾನ್ ಮಿಲ್ಟನ್ ಇಂಗ್ಲಿಷ್ ಸಾಹಿತ್ಯದ ಅತ್ಯುತ್ತಮ ಕವಿ ಆಗುತ್ತಿರಲಿಲ್ಲ!
20) ಹಸಿವು, ಕಾಯಿಲೆ, ಬಡತನ, ಅಪಮಾನ ಇವುಗಳ ಜೊತೆಗೆ ಉಸಿರುಕಟ್ಟುತ್ತಿದ್ದ ನಂದಳಿಕೆಯ ಲಕ್ಷ್ಮೀನಾರಣಪ್ಪ (ಮುದ್ದಣ) ಮುಂದೆ ಜಗತ್ತು ಮೆಚ್ಚುವ ಕನ್ನಡದ ಕಾವ್ಯಗಳನ್ನು ಬರೆಯಲು ಸಾಧ್ಯವೇ ಇರಲಿಲ್ಲ!
21) ಒಬ್ಬ ಕೃಷಿಕನ ಮಗನಾಗಿ ಕಾರ್ಕಳ ತಾಲೂಕಿನ ಕೌಡೂರು ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿದ ಹಾಗೂ ಕನ್ನಡ ಮಾಧ್ಯಮದ ಸರಕಾರಿ ಶಾಲೆಯಲ್ಲಿ ಓದಿದ ಕೆ.ಎಸ್ ಹೆಗ್ಡೆಯವರು ಮುಂದೆ ಸುಪ್ರೀಮ್ ಕೋರ್ಟಿನ ಜಸ್ಟೀಸ್ ಮತ್ತು ಲೋಕಸಭೆಯ ಸ್ಪೀಕರ್ ಆಗಲು ಸಾಧ್ಯವೇ ಇಲ್ಲ!

ನನ್ನ ಅಭಿಪ್ರಾಯ ಹೀಗೆ… ಎಲ್ಲರೂ ಒಪ್ಪಬೇಕು ಎಂಬ ಹಠ ನನಗಿಲ್ಲ!

ಇವರಿಷ್ಟು ಮಾತ್ರವಲ್ಲ. ಇಂಥಹ ನೂರಾರು ವ್ಯಕ್ತಿಗಳನ್ನು ನಾನು ನೋಡಿದ್ದೇನೆ. ಅವರ ಬದುಕಿನ ಬಗ್ಗೆ ಅಧ್ಯಯನ ಮಾಡಿದ್ದೇನೆ ಮತ್ತು ಅವರಿಂದ ಸಾಕಷ್ಟು ಪ್ರೇರಣೆಯನ್ನು ಪಡೆದಿದ್ದೇನೆ. ಅವರೆಲ್ಲರೂ ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಮಲಗಿದ್ದರೆ ಈ ರೀತಿಯ ಸಾಧಕರು ಆಗಲು ಸಾಧ್ಯವೇ ಇರಲಿಲ್ಲ! ಅದಕ್ಕಾಗಿ ನಾನು ಹಳೆಯ ಗಾದೆಯನ್ನು ನನ್ನ ಸಣ್ಣದಾದ ಅನುಭವದ ಆಧಾರದಲ್ಲಿ ಒಂದಿಷ್ಟು ತಿದ್ದಿ ಬರೆಯಬಹುದೇ?

ಭರತ ವಾಕ್ಯ

ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚುವುದಕ್ಕಿಂತ ಕಾಲುಗಳು ಉದ್ದವಿದ್ದಷ್ಟು ಹಾಸಿಗೆಯನ್ನು ಮಾಡಬಹುದಲ್ಲ? ಕನಸು ಕಾಣುವಷ್ಟು ಕೈ ಚಾಚುವುದು ಮತ್ತು ಅದನ್ನು ನನಸು ಮಾಡಲು ಪ್ರಯತ್ನ ಮಾಡುವುದು ಖಂಡಿತ ಸಾಧ್ಯ ಇದೆ. ನಮ್ಮ ಇಚ್ಛಾಶಕ್ತಿಯು ಖಂಡಿತವಾಗಿ ತುಂಬಾ ಸ್ಟ್ರಾಂಗ್ ಆಗಿರಬೇಕು ಅಷ್ಟೇ! ಏನಂತೀರಿ?

ಇದನ್ನೂ ಓದಿ : ರಾಜ ಮಾರ್ಗ ಅಂಕಣ: ರಾಷ್ಟ್ರವೇ ಮೊದಲು ಎನ್ನುತ್ತಾ ಉಗ್ರರ ಜೊತೆ ಹೋರಾಡಿ ಪ್ರಾಣ ಕಳೆದುಕೊಂಡಾಗ ಆ ಸೈನಿಕನ ವಯಸ್ಸು ಕೇವಲ 23!

Exit mobile version