Site icon Vistara News

ರಾಜ ಮಾರ್ಗ ಅಂಕಣ : ಇದು ಪಂಚತಂತ್ರದ ಕಥೆಯಲ್ಲ, ಜಗತ್ತನ್ನೇ ಮಂತ್ರಮುಗ್ಧಗೊಳಿಸಿದ ಪಂಚತಂತ್ರ ಎಂಬ ಮಹಾಕಲ್ಪನೆ ಹುಟ್ಟಿದ ಕಥೆ!

pancha tantra

#image_title

ಯಾರೆಲ್ಲ ಬಾಲ್ಯದಲ್ಲಿ ಅಜ್ಜಿ, ಅಜ್ಜ, ಅಮ್ಮ, ಮಾವ ಅಥವಾ ಗುರುಗಳ ಬಾಯಿಂದ ಸುಂದರವಾದ ಪ್ರಾಣಿ, ಪಕ್ಷಿಗಳ ಕಥೆಗಳನ್ನು ಕೇಳಿದ್ದೀರಾ? ಸಂಜೆಯ ಹೊತ್ತು ಗೋಧೂಳಿ ಮುಹೂರ್ತದಲ್ಲಿ ಅಜ್ಜಿಯ ಕಾಲ ಮೇಲೆ ಬೆಚ್ಚಗೆ ಕುಳಿತು ನೀರವ ಮಹಾ ಮೌನದಲ್ಲಿ ರೋಚಕ ಕತೆಗಳನ್ನು ಕೇಳುತ್ತಾ, ಅದ್ಭುತ ರಮ್ಯಲೋಕವನ್ನು ಕಟ್ಟಿಕೊಳ್ಳುವ ಮತ್ತು ಅನುಭವಿಸುವ ಆನಂದ ಇದೆಯಲ್ಲ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ!
ಅವುಗಳು ನಾವು ಮುಂದೆ ಬೆಳೆಯುತ್ತ ಹೋದಂತೆ ನಮ್ಮ ಭಾವಕೋಶದ ಭಾಗವಾಗಿ ಉಳಿದು ಬಿಡುತ್ತವೆ.

ಜಗತ್ತಿಗೆ ಭಾರತದ ಮಹಾನ್ ಕೊಡುಗೆಗಳಲ್ಲಿ ‘ಪಂಚ ತಂತ್ರ’ ಕತೆಗಳೂ ಕೂಡ ಒಂದು ಎಂದು ನನ್ನ ಭಾವನೆ. ಕ್ರಿಸ್ತ ಪೂರ್ವ ಮೂರನೇ ಶತಮಾನದ ಹೊತ್ತಿಗೆ ವಿಷ್ಣು ಶರ್ಮ ಎನ್ನುವ ವಿದ್ವಾಂಸನು ಈ ಕತೆಗಳನ್ನು ಬರೆದನು ಎಂದು ಉಲ್ಲೇಖ ದೊರೆಯುತ್ತದೆ. ಅದಕ್ಕೂ ಒಂದು ಹಿನ್ನೆಲೆ ಇದೆ.

ಒಬ್ಬ ಅರಸನಿಗೆ ಮೂರು ಜನ ದಡ್ಡ ಮಕ್ಕಳು ಹುಟ್ಟಿದರಂತೆ. ಅದರಿಂದ ಅರಸನಿಗೆ ಭಾರಿ ಚಿಂತೆ ಆರಂಭ ಆಯ್ತು. ನನ್ನ ನಂತರ ರಾಜ್ಯಭಾರವನ್ನು ಮಾಡುವವರು ಯಾರು? ಎಂದು ಯೋಚನೆ ಮಾಡುತ್ತಾ ಅರಸನ ದುಃಖಕ್ಕೆ ಸೀಮೆ ಇರಲಿಲ್ಲ.

ಕೊನೆಯ ಪ್ರಯತ್ನವಾಗಿ ಅರಸನು ಊರಿಡೀ ಡಂಗುರ ಸಾರಿಸುತ್ತಾನೆ. ಯಾರು ತನ್ನ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುತ್ತಾರೋ ಅವರಿಗೆ ತನ್ನ ಅರ್ಧ ರಾಜ್ಯವನ್ನು ಧಾರೆ ಎರೆದು ಕೊಡುವುದಾಗಿ ಸವಾಲು ಹಾಕಿದನು.

ಆಗ ಆ ಸವಾಲನ್ನು ಸ್ವೀಕಾರ ಮಾಡಿದವನು ವಿದ್ವಾಂಸ ಮತ್ತು ಗುರುವಾದ ವಿಷ್ಣು ಶರ್ಮ. ಆತನು ಅರಸನ ಅನುಮತಿಯನ್ನು ಪಡೆದು ರಾಜಕುಮಾರರನ್ನು ತನ್ನ ದಟ್ಟವಾದ ಕಾಡಿನ ಆಶ್ರಮಕ್ಕೆ ಕರೆದುಕೊಂಡು ಹೋದನು. ಅಲ್ಲಿ ತೀರಾ ಹೊಸದಾದ ಪಠ್ಯಕ್ರಮವನ್ನು ಆರಂಭಿಸಿದನು.

ವಿಷ್ಣು ಶರ್ಮನು ರಾಜಕುಮಾರರನ್ನು ದಿನವೂ ಮುಂಜಾನೆ ಆಶ್ರಮದ ಎದುರಿನ ಅಶ್ವತ್ಥ ವೃಕ್ಷದ ಕಟ್ಟೆಯಲ್ಲಿ ಕೂರಿಸಿ ಪ್ರಾಣಿ, ಪಕ್ಷಿಗಳ ಕಾಲ್ಪನಿಕ ನೀತಿ ಕತೆಯನ್ನು ಚಂದವಾಗಿ ಹೇಳುತ್ತಾ ಹೋಗುತ್ತಾನೆ. ಕಥೆಯು ಮುಗಿದ ತಕ್ಷಣ ಅರಸನ ಮಕ್ಕಳು ಆ ಕಥೆಯ ನೀತಿಯನ್ನು ಹೇಳಬೇಕು. ಒಂದು ಕತೆಯ ನೀತಿಯನ್ನು ಅವರು ಹೇಳಿ ಆದ ನಂತರ ವಿಷ್ಣು ಶರ್ಮನು ಮುಂದಿನ ಕತೆಯನ್ನು ಆರಂಭ ಮಾಡುತ್ತಿದ್ದನು. ಹೀಗೆ ಕಥೆಗಳನ್ನು ಹೇಳುವುದು, ಅದರ ನೀತಿಯನ್ನು ಕೇಳುವುದು ಮಾಡುತ್ತಾ ವಿಷ್ಣು ಶರ್ಮನು ಸಾವಿರಾರು ಕಥೆಗಳನ್ನು ರಚಿಸುತ್ತಾನೆ. ಆಶ್ರಮದ ಕಟ್ಟೆಯಲ್ಲಿ ಹಲವು ವರ್ಷಗಳ ಕಾಲ ಇದೇ ರೀತಿಯ ಪಠ್ಯಕ್ರಮವು ನಡೆಯಿತು. ಸಾವಿರಾರು ರಮ್ಯಕಥೆಗಳು ಸೃಷ್ಟಿ ಆಗುತ್ತವೆ!

ಗುರು ಶಿಷ್ಯರ ನಡುವಿನ ನಡುವಿನ ಸಂವಾದವೂ ಅತ್ಯಂತ ರೋಚಕವಾಗಿ ಇತ್ತು. ಈ ಸಂವಾದದ ಮೂಲಕ ಅರಸನ ಮಕ್ಕಳು ಬುದ್ಧಿವಂತರಾದರು ಮತ್ತು ಅರಸನು ತಾನು ಕೊಟ್ಟ ಮಾತಿನಂತೆ ಗುರುವಿಗೆ ತನ್ನ ಅರ್ಧ ರಾಜ್ಯವನ್ನು ಧಾರೆಯೆರೆದು ಕೊಟ್ಟನು.

ಈ ಕತೆಗಳನ್ನು ‘ಪಂಚತಂತ್ರದ ಕತೆಗಳು’ ಎಂದೇ ಕರೆಯಲಾಗಿದೆ. ಅದರಲ್ಲಿ ಐದು ವಿಭಾಗಗಳು ಇದ್ದು ಎಲ್ಲವೂ ಒಂದೇ ರೀತಿಯ ಫಾರ್ಮ್ಯಾಟ್ ಹೊಂದಿವೆ. ಆ ಎಲ್ಲಾ ಕಥೆಗಳು ಕೂಡ ಒಂದೆರಡು ನಿಮಿಷಗಳಲ್ಲಿ ಹೇಳಿ ಮುಗಿಯುವ ಸಣ್ಣ ಸಣ್ಣ ಕಥೆಗಳು. ಆದರೆ ಅದರಲ್ಲಿ ಇರುವ ವೈವಿಧ್ಯ, ಸ್ವಾರಸ್ಯ, ಮನರಂಜನೆ, ರೋಚಕತೆ, ಕಲ್ಪನೆಗಳು ಮತ್ತು ಜೀವನ ಮೌಲ್ಯಗಳು ತುಂಬಾ ಅದ್ಭುತವಾಗಿ ಇವೆ.

ಮಕ್ಕಳು ದಿನವೂ ತಮ್ಮ ಸುತ್ತ ಮುತ್ತಲೂ ನೋಡುವ ಪ್ರಾಣಿಗಳು, ಪಕ್ಷಿಗಳು, ಬ್ರಾಹ್ಮಣ, ಸನ್ಯಾಸಿ, ಮಂತ್ರವಾದಿ, ಮುದುಕಿ, ಆನೆ, ಗುಬ್ಬಚ್ಚಿ, ಹಂಸ ಪಕ್ಷಿಗಳು, ಭಿಕ್ಷುಕ, ಆಮೆ, ಜಿಂಕೆ ಮೊದಲಾದ ಪಾತ್ರಗಳೇ ಇಲ್ಲಿ ವಿಜೃಂಭಿಸುವ ಕಾರಣ ಈ ಕತೆಗಳು ತುಂಬ ಆಪ್ತವಾಗುತ್ತವೆ.

ನಾವು ಬಾಲ್ಯದಲ್ಲಿ ಕೇಳಿದ ಕಾಗೆಯು ಬಾಯಾರಿದ ಕಥೆ, ನರಿಯು ಮೋಸ ಮಾಡಿದ ಕತೆ, ವೃದ್ಧ ಬ್ರಾಹ್ಮಣನ ಕತೆ, ಮೃಗರಾಜ ಸಿಂಹದ ಕತೆ, ಕೋತಿಯ ಕತೆ, ಮೊಲದ ಕತೆ, ಕರಡಿ ಜೇನು ಸವಿದ ಕತೆ, ಇಲಿ ಮತ್ತು ಸನ್ಯಾಸಿಯ ಕಥೆ, ಇಲಿ ಮತ್ತು ಸಿಂಹದ ಕಥೆ, ವಾಚಾಳಿಯಾದ ಆಮೆಯ ಕತೆ, ನರಿಯು ದ್ರಾಕ್ಷಿ ಹುಳಿ ಎಂದು ಹೇಳಿದ ಕಥೆ, ಜಿಂಕೆ ತನ್ನ ಸೌಂದರ್ಯದ ಬಗ್ಗೆ ಹೆಮ್ಮೆ ಪಟ್ಟ ಕಥೆ… ಇವೆಲ್ಲವೂ ಪಂಚತಂತ್ರದಲ್ಲಿ ಮೆರೆದ ಕತೆಗಳೇ ಆಗಿವೆ. ಇಲ್ಲಿ ಪ್ರಾಣಿ ಪಕ್ಷಿಗಳು ನಮ್ಮ ಹಾಗೆ ಮಾತಾಡುತ್ತವೆ ಮತ್ತು ಕತೆಗಳಲ್ಲಿ ನವಿರಾದ ತಿರುವು ಇದೆ. ಬದುಕಿಗೆ ಶ್ರೇಷ್ಠವಾದ ಸಂದೇಶಗಳು ಇವೆ. ಅದರಿಂದ ಈ ಕತೆಗಳು ಬಹಳ ಬೇಗ ಲೋಕದ ಗಮನ ಸೆಳೆದವು.

ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ 200ಕ್ಕಿಂತ ಹೆಚ್ಚು ಆವೃತ್ತಿಗಳಲ್ಲಿ ಪಂಚತಂತ್ರ ಪ್ರಕಟವಾಗಿದೆ! 50 ವಿದೇಶದ ಭಾಷೆಗಳಿಗೆ ಅನುವಾದ ಆಗಿದೆ! ಇಂಗ್ಲಿಷ್ ಭಾಷೆಗೆ ನೂರಾರು ಲೇಖಕರು ಅದನ್ನು ಅನುವಾದ ಮಾಡಿದ್ದಾರೆ.

ಹನ್ನೊಂದನೇ ಶತಮಾನಕ್ಕೆ ಈ ಕತೆಗಳು ಯುರೋಪ್ ಖಂಡದಲ್ಲಿ ಭಾರಿ ಜನಪ್ರಿಯ ಆದವು. ಇಂಗ್ಲೆಂಡ್, ಜರ್ಮನಿ, ಇಟೆಲಿ, ಫ್ರಾನ್ಸ್, ಪೋರ್ಚುಗಲ್, ಸ್ಪೇನ್ ದೇಶಗಳು ಈ ಕತೆಗಳನ್ನು ತಮ್ಮ ಪ್ರಾಥಮಿಕ ಶಾಲೆಗಳ ಪಠ್ಯದಲ್ಲಿ ಮುದ್ರಿಸಿದವು. ಮುಂದೆ ಅದರ ಆಕರ್ಷಕ ವಿಡಿಯೊಗಳು ಶಾಲಾ ಮಕ್ಕಳ ತರಗತಿಗಳಲ್ಲಿ ಮಕ್ಕಳ ಮನಸ್ಸು ತಣಿಸಿದವು.

ಭಾರತದಲ್ಲಿ ಶಿವಾಜಿಯ ತಾಯಿಯಾದ ಜೀಜಾಬಾಯಿ, ವಿವೇಕಾನಂದರ ತಾಯಿ ಭುವನೇಶ್ವರಿ ದೇವಿ ಅಂತವರು ಈ ಕತೆಗಳನ್ನು ಬಳಸಿಕೊಂಡು ತಮ್ಮ ಮಕ್ಕಳ ವಿಕಾಸವನ್ನು ಮಾಡಿದ ಉಲ್ಲೇಖಗಳು ದೊರೆಯುತ್ತವೆ. ದೂರದರ್ಶನ ರಾಷ್ಟ್ರೀಯ ವಾಹಿನಿಗಳಲ್ಲಿ ‘ಪಂಚ ತಂತ್ರ’ ಆನಿಮೇಟೆಡ್ ಧಾರಾವಾಹಿ ಆಗಿ ಪ್ರಸಾರವಾಗಿ ಪಡೆದ ಮನ್ನಣೆಯು ಅದ್ಭುತವಾಗಿತ್ತು. ಮರಾಠಿ, ಕನ್ನಡ, ಗುಜರಾತಿ, ಬಿಹಾರಿ, ಮಲಯಾಳಂ, ತೆಲುಗು, ಇಂಗ್ಲಿಷ್, ಹಿಂದೀ ಭಾಷೆಗಳಲ್ಲಿ ಪಂಚತಂತ್ರದ ಆನಿಮೇಟೆಡ್ ವಿಡಿಯೋಗಳು ಭಾರೀ ಜನಪ್ರಿಯ ಆಗಿವೆ.

ಮನೋವೈಜ್ಞಾನಿಕವಾಗಿ ಕೂಡ ಈ ಕತೆಗಳು ಬಹಳ ಇಂಪ್ಯಾಕ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಸಂಜೆ ಹೊತ್ತು ಕತೆಗಳನ್ನು ಧ್ವನಿ ವೈವಿಧ್ಯದ ಜೊತೆಗೆ ಮಕ್ಕಳು ಕೇಳಲು ಸಾಧ್ಯವಾದರೆ ಮಕ್ಕಳಲ್ಲಿ ಲಾಜಿಕಲ್ ಥಿಂಕಿಂಗ್ ಮತ್ತು ರೀಸನಿಂಗ್ ಬಲಗೊಳ್ಳುತ್ತವೆ ಅನ್ನುತ್ತಾರೆ ಮನೋ ವಿಜ್ಞಾನಿಗಳು ಮತ್ತು ಶಿಕ್ಷಣತಜ್ಞರು.

ಮನೋ ವಿಕಾಸಕ್ಕೆ ಈ ಕತೆಗಳು ಪೂರಕವೇ ಆಗಿವೆ. ಈ ಕತೆಗಳು ಸಣ್ಣ ಮಕ್ಕಳಲ್ಲಿ ಆರೋಗ್ಯಪೂರ್ಣ ಆದ ಕನಸುಗಳನ್ನು ಕೂಡ ಕಟ್ಟುತ್ತವೆ ಮತ್ತು ಮಾನಸಿಕ ಆರೋಗ್ಯವನ್ನು ಖಾತರಿ ಪಡಿಸುತ್ತವೆ. ಕತೆಗಳಲ್ಲಿ ಅಡಗಿರುವ ಜೀವನ ಮೌಲ್ಯಗಳು ಮತ್ತು ಸಂದೇಶಗಳು ಖಂಡಿತವಾಗಿ ಬೋನಸಗಳು.

ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಎಲ್ಲ ವಯಸ್ಸಿನವರಿಗೂ ಈ ಕತೆಗಳು ಅಷ್ಟೇ ಖುಷಿ ಕೊಡುತ್ತವೆ. ಅದನ್ನು ಬರೆದ ವಿಷ್ಣು ಶರ್ಮನಿಗೆ ಮತ್ತು ತಮ್ಮ ಮೊಮ್ಮಕ್ಕಳಿಗೆ ರಂಗಾಗಿ ಹೇಳುತ್ತಿರುವ ಭಾರತದ ಅಜ್ಜಿಯಂದಿರಿಗೇ ಎಷ್ಟು ಧನ್ಯವಾದ ಹೇಳಿದರೂ ಸಾಲದು!

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಅಪ್ಪನ ಪ್ರೀತಿಯ ಆ ಮಗಳು ಒಂದು ವರ್ಷದಿಂದ ಬಾರಿ ಬಾರಿಗೆ ಹುಡುಕಿದ್ದು ಅದೊಂದೇ ಸಬ್ಜೆಕ್ಟ್!

Exit mobile version