Site icon Vistara News

ರಾಜ ಮಾರ್ಗ ಅಂಕಣ : ಕನ್ನಡದ ಚಾರ್ಲಿ ಚಾಪ್ಲಿನ್‌, ಬಗೆಬಗೆಯಾಗಿ ನಗಿಸಿದ ಹಾಸ್ಯಚಕ್ರವರ್ತಿ; ನರಸಿಂಹರಾಜು @100

Comedian Narasimharaju

ಕನ್ನಡದ ಅತ್ಯಂತ ಶ್ರೇಷ್ಠ ಹಾಸ್ಯ ನಟ (Comedian in Kannada) ನರಸಿಂಹರಾಜು (Narasimharaju @100) ಅವರು ಬದುಕಿದ್ದರೆ ಇಂದವರಿಗೆ ನೂರು ತುಂಬುತ್ತಿತ್ತು. ಕನ್ನಡಿಗರಿಗೆ ನಗಲು ಕಲಿಸಿದ ಹಾಸ್ಯ ಚಕ್ರವರ್ತಿಗೆ (Hasya Chakravarty) ಇಂದು ಹುಟ್ಟುಹಬ್ಬ. ಅವರನ್ನು ಸ್ಮರಿಸಲು ನೂರಾರು ಕಾರಣಗಳಿವೆ. ಡಾಕ್ಟರ್ ರಾಜಕುಮಾರ್ (Dr. Rajakumar) ಅವರು ಸಾಧನೆಯ ಶಿಖರದಲ್ಲಿ ಇದ್ದಾಗ ಅವರಷ್ಟೇ ಜನಪ್ರಿಯತೆ ಮತ್ತು ಬೇಡಿಕೆಗಳನ್ನು ಹೊಂದಿದ ನಟ ಒಬ್ಬರಿದ್ದರೆ ಅದು ನರಸಿಂಹರಾಜು. 1954-1979ರ ಅವಧಿಯಲ್ಲಿ ಕನ್ನಡದ 250 ಸಿನಿಮಾಗಳಲ್ಲಿ ಮಿಂಚಿದ್ದ ನರಸಿಂಹರಾಜು ಅವರ ಎತ್ತರಕ್ಕೆ ನಿಲ್ಲಬಲ್ಲ ಇನ್ನೊಬ್ಬ ಹಾಸ್ಯನಟ ಮತ್ತೆ ಕನ್ನಡಕ್ಕೆ ಬಂದಿಲ್ಲ. ಆ ಸ್ಥಾನ ಇಂದಿಗೂ ರಿಕ್ತವಾಗಿಯೇ ಇದೆ (ರಾಜ ಮಾರ್ಗ ಅಂಕಣ).

4ನೇ ವರ್ಷಕ್ಕೆ ನಾಟಕದ ವೇದಿಕೆಯಲ್ಲಿ

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಹುಟ್ಟಿದ ( 1923 ಜುಲೈ 24) ನರಸಿಂಹರಾಜು ಅವರ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲ್ಯದಲ್ಲಿ ತುಂಬಾ ಬಡತನ ಇತ್ತು. ಅವರು ಶಾಲೆಗೆ ಹೋದ ಯಾವ ಉಲ್ಲೇಖವೂ ದೊರೆಯುವುದಿಲ್ಲ. ಹಸಿವಿನ ಕಾರಣಕ್ಕೆ ಅವರ ಮಾವ ಅವರನ್ನು ನಾಲ್ಕನೇ ವರ್ಷಕ್ಕೆ ಕರೆದುಕೊಂಡು ಬಂದು ಆಗ ತಿಪಟೂರಿನಲ್ಲಿ ಪ್ರದರ್ಶನ ಕೊಡುತ್ತಿದ್ದ ಟೂರಿಂಗ್ ಟಾಕೀಸ್ ಚಂದ್ರಮೌಳೇಶ್ವರ ನಾಟಕ ಮಂಡಳಿಗೆ ಸೇರಿಸಿದರು. ಬಾಲ ಪ್ರಹ್ಲಾದ, ಲೋಹಿತಾಶ್ವ ಮೊದಲಾದ ಪಾತ್ರಗಳು ಅವರಿಗೆ ದೊರೆಯುತ್ತಿದ್ದವು. ಮುಂದೆ ಸ್ವಲ್ಪ ದೊಡ್ಡವರಾದ ಮೇಲೆ ಅವರದ್ದೇ ನಾಟಕ ಮಂಡಳಿಯನ್ನು ಮಾಡಿ ನರಸಿಂಹರಾಜು
ಕೈಸುಟ್ಟುಕೊಂಡರು.

ಮತ್ತೆ ಐದು ಬೇರೆ ಬೇರೆ ನಾಟಕ ಮಂಡಳಿಗಳಲ್ಲಿ 27 ವರ್ಷ ನಾಟಕ ಕಲಾವಿದರಾಗಿ ಅವರು ದುಡಿದರು. ಎಲ್ಲ ರೀತಿಯ ಪಾತ್ರಗಳನ್ನು ಮಾಡಿದರು. ಅವರು ಬಂದು ವೇದಿಕೆಯಲ್ಲಿ ನಿಂತರೆ ಸಾಕು ಪ್ರೇಕ್ಷಕರ ನಗು ಸ್ಫೋಟ ಆಗುತ್ತಿತ್ತು. ನಾಟಕ ಮಂಡಳಿಯ ಗಲ್ಲಾ ಪೆಟ್ಟಿಗೆ ಭರ್ತಿ ಆಗುತ್ತಿತ್ತು.

Comedian Narasimharaju @100

ಗುಬ್ಬಿ ವೀರಣ್ಣ ನಾಟಕ ಮಂಡಳಿ, ರಾಜಕುಮಾರ್ ಗೆಳೆತನ

ಸುದೀರ್ಘ ಕಾಲ ಗುಬ್ಬಿ ವೀರಣ್ಣ ಅವರ ನಾಟಕ ಮಂಡಳಿಯಲ್ಲಿ ನರಸಿಂಹರಾಜು ಕಲಾವಿದರಾಗಿ ಮಿಂಚುತ್ತಿದ್ದ ಸಂದರ್ಭ ರಾಜಕುಮಾರ್ ಅವರೂ ಕೂಡಾ ಅದೇ ಮಂಡಳಿ ಸೇರಿದರು. ಇಬ್ಬರ ಗೆಳೆತನ ಗಟ್ಟಿಯಾದ ಸಂದರ್ಭ ಅದು. ಆ ಗೆಳೆತನ ಕೊನೆಯವರೆಗೂ ಅದೇ ರೀತಿ ಉಳಿಯಿತು. ರಾಜಕುಮಾರ್ ಅವರು ‘ಬೇಡರ ಕಣ್ಣಪ್ಪ’ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದಾಗ ಅದೇ ಸಿನಿಮಾದಲ್ಲಿ ಕಾಶಿಮಾಣಿಯ ಪಾತ್ರದಲ್ಲಿ ನರಸಿಂಹರಾಜು ಮಿಂಚಿದರು.

ಸಣಕಲು ಶರೀರ, ಕೀರಲು ಧ್ವನಿ, ವಿಶೇಷವಾದ ಮ್ಯಾನರಿಸಂ, ಉಬ್ಬು ಹಲ್ಲು, ಸದ್ದು ಮಾಡುವ ನಗು…ಇವುಗಳ ಮೂಲಕ ನರಸಿಂಹರಾಜು ಕನ್ನಡಿಗರಿಗೆ ಭಾರೀ ಇಷ್ಟ ಆದರು. ಮುಂದಿನ 25 ವರ್ಷಗಳಲ್ಲಿ ನರಸಿಂಹರಾಜು 250 ಸಿನಿಮಾಗಳಲ್ಲಿ ಮಿಂಚಿ ಕನ್ನಡ ಸಿನೆಮಾದ ಸೂಪರ್ ಸ್ಟಾರ್ ಆಗಿಬಿಟ್ಟರು. ಆಗಿನ ಕಾಲದ ಅತ್ಯಂತ ಬೇಡಿಕೆಯ ನಟ ಆದರು. ಖ್ಯಾತ ನಟ ಚಾರ್ಲಿ ಚಾಪ್ಲಿನ್ ಅವರಿಂದ ಪ್ರಭಾವಿತರಾಗಿದ್ದ ನರಸಿಂಹರಾಜು ಅವರನ್ನೂ ಕಾಪಿ ಮಾಡದೆ ತಮ್ಮದೇ ಒಂದು ಜನಪ್ರಿಯ ಶೈಲಿ ಅಳವಡಿಸಿಕೊಂಡರು. ರಾಜಕುಮಾರ್ ಅವರ ನೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನರಸಿಂಹರಾಜು ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ.

ಆಗ ದಿನಗಳಲ್ಲಿ ಮೂರು ಮೂರು ಶಿಫ್ಟ್‌ಗಳಲ್ಲಿ ಅವರು ದುಡಿಯುತ್ತಿದ್ದರು. ನಿರ್ಮಾಪಕರು ಎಷ್ಟೋ ಬಾರಿ ಅವರ ಕಾಲ್ ಶೀಟ್ ಮೊದಲು ಪಡೆದುಕೊಂಡು ನಂತರ ಉಳಿದವರ ಕಾಲ್ ಶೀಟ್ ಹೊಂದಿಸಲು ಹೋಗುತ್ತಿದ್ದ ದಿನಗಳು ಅವು!

ರಾಜಕುಮಾರ್‌ ಅವರ ಜತೆ ನರಸಿಂಹರಾಜು: ಅದ್ಭುತ ಜೋಡಿ

ನೂರಾರು ಸಿನಿಮಾಗಳು, ನೂರಾರು ಯಶಸ್ವೀ ಪಾತ್ರಗಳು!

ಇತ್ತೀಚಿನ ಕೆಲವು ನಟರನ್ನು ಆ ಸಿನಿಮಾದ ಖ್ಯಾತಿಯ, ಈ ಸಿನಿಮಾದ ಖ್ಯಾತಿಯ ಎಂದೆಲ್ಲ ಪರಿಚಯ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ನರಸಿಂಹರಾಜು ಅವರ ಎಲ್ಲ 250 ಸಿನೆಮಾಗಳ 250 ಪಾತ್ರಗಳೂ ಮಾಸ್ಟರ್ ಪೀಸ್! ಒಂದರ ಹಾಗೆ ಇನ್ನೊಂದಿಲ್ಲ. ಒಂದು ಪಾತ್ರ ಅವರು ಮಾಡಿದ ನಂತರ ಅದೇ ಪಾತ್ರವನ್ನು ಬೇರೆ ಯಾರೂ ಅಷ್ಟು ಚೆನ್ನಾಗಿ ಮಾಡಲು ಸಾಧ್ಯ ಇಲ್ಲ ಅನ್ನುವುದು ಸತ್ಯ.

ಶ್ರೀ ಕೃಷ್ಣ ದೇವರಾಯ ಸಿನಿಮಾದ ತೆನಾಲಿ ರಾಮಕೃಷ್ಣ, ಹರಿಶ್ಚಂದ್ರ ಸಿನಿಮಾದ ನಕ್ಷತ್ರಿಕ, ಬೇಡರ ಕಣ್ಣಪ್ಪ ಸಿನಿಮಾದ ಕಾಶೀ ಮಾಣಿ, ಪ್ರೊಫೆಸರ್ ಹುಚ್ಚೂರಾಯದ ಲೀಡ್ ಪಾತ್ರ, ರತ್ನ ಮಂಜರಿಯ ಮಂತ್ರವಾದಿ ಇವುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಬೇಡರ ಕಣ್ಣಪ್ಪ ನಾಟಕದ ಸಾವಿರಾರು ಪ್ರಯೋಗಗಳು ಆಗಿದ್ದು ಅಷ್ಟೂ ಬಾರಿ ಕಾಶಿಯ ಮಾಣಿಯ ಪಾತ್ರವನ್ನು ನರಸಿಂಹರಾಜು ಅವರೇ ಮಾಡಿದ್ದರು. ಜನರು ಅವರ ಕಾಶೀ ಮಾಣಿಯ ಪಾತ್ರವನ್ನು ನೋಡಲೆಂದೇ ನಾಟಕ ನೋಡಲು ಬರುತ್ತಿದ್ದರು. ಪೆದ್ದ, ಪೊಲೀಸ್ ಪೇದೆ, ಮಂತ್ರವಾದಿ, ಕೌಬಾಯ್, ಮಾಣಿ, ಭಿಕ್ಷುಕ, ದೂತ, ರಾಕ್ಷಕ, ಬ್ರಾಹ್ಮಣ, ವಟು….ಯಾವ ಪಾತ್ರವನ್ನು ನರಸಿಂಹರಾಜು ಮಾಡಿದ್ದರೂ ಅದರಲ್ಲಿ ಒಂದು ಸಿಗ್ನೇಚರ್ ಸ್ಟೈಲ್ ಉಳಿದುಹೋಗುತ್ತಿತ್ತು. ಅದು ನರಸಿಂಹರಾಜು ಅವರ ಶ್ರೇಷ್ಠತೆಯ ಹೆಗ್ಗುರುತು.

ಸ್ಕೂಲ್ ಮಾಸ್ಟರ್, ಕುಲಗೌರವ, ಕಸ್ತೂರಿ ನಿವಾಸ, ಗಂಧದ ಗುಡಿ, ಜೇಡರ ಬಲೆ, ಇಮ್ಮಡಿ ಪುಲಕೇಶಿ, ಬೆಂಗಳೂರು ಮೇಲ್, ಸಂಧ್ಯಾ ರಾಗ, ವೀರಕೇಸರಿ, ಕಣ್ತೆರೆದು ನೋಡು, ಗೋವಾದಲ್ಲಿ CID 999, ಪ್ರೀತಿ ಮಾಡು ತಮಾಷೆ ನೋಡು ಅವರ ಜನಪ್ರಿಯ ಸಿನಿಮಾಗಳು.

ಎಂಥೆಂಥಾ ಪಾತ್ರಗಳಲ್ಲಿ ಮಿಂಚಿದ್ದರು ಈ ಮಹಾನ್‌ ನಟ

ಬಿ.ಆರ್ ಪಂತುಲು ಅವರ ಸ್ಕೂಲ್ ಮಾಸ್ಟರ್ ಸಿನಿಮಾದಲ್ಲಿ ‘ಭಾಮೆಯ ನೋಡಲು ತಾ ಬಂದ ‘ ಹಾಡಿಗೆ ನರಸಿಂಹರಾಜು ಪಿಳಿ ಪಿಳಿ ಕಣ್ಣು ಬಿಡುತ್ತಾ ಕೂತ ದೃಶ್ಯವನ್ನು ನೋಡಿ ನೀವು ನಗದಿದ್ದರೆ ಮತ್ತೆ ಹೇಳಿ! ‘ ಅಂಡ ಪಿಂಡ ಬ್ರಹ್ಮಾಂಡ ‘ ಎಂದು ಹೇಳುತ್ತ ಸತ್ಯ ಹರಿಶ್ಚಂದ್ರ ಇಡೀ ಸಿನಿಮಾದಲ್ಲಿ ಅರಸನನ್ನು ಕಾಡುವ ನಕ್ಷತ್ರಿಕನ ಪಾತ್ರವನ್ನು ಅವರಷ್ಟು ಚೆನ್ನಾಗಿ ಬೇರೆ ಯಾರಿಗೂ ಚಿತ್ರಿಸಲು ಸಾಧ್ಯವೇ ಇಲ್ಲ ಎಂದವರು ಆಗಿನ ಭಾರೀ ದೊಡ್ಡ ನಿರ್ದೇಶಕ ಪಂತುಲು ಅವರು! ಕನ್ನಡದಲ್ಲಿ ಹಲವಾರು ಮಂದಿ ತೆನಾಲಿ ರಾಮಕೃಷ್ಣನ ಪಾತ್ರವನ್ನು ಮಾಡಿದ್ದು ಅದ್ಯಾವುದೂ ನರಸಿಂಹರಾಜು ಅವರ ತೆನಾಲಿಯ ಹತ್ತಿರ ಕೂಡ ಬಂದಿಲ್ಲ ಅನ್ನೋದು ಕೂಡ ನಿಜ!

ಆಗಿನ ಇನ್ನೊಬ್ಬ ಖ್ಯಾತ ನಟ ಬಾಲಕೃಷ್ಣ ಮತ್ತು ನರಸಿಂಹರಾಜು ಅವರದ್ದು ಅದ್ಭುತವಾದ ಕಾಂಬಿನೇಶನ್. ಅವರು ಜೊತೆಗಿದ್ದ ಯಾವ ಸಿನಿಮಾ ಕೂಡ ಸೋತ ಉದಾಹರಣೆ ಇಲ್ಲ.

ತನ್ನ ಕಠಿಣ ದುಡಿಮೆಯ ಒಂದೊಂದು ರೂಪಾಯಿ ಉಳಿಸಿ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿದ ಮೊದಲ ಕಲಾವಿದ ನರಸಿಂಹರಾಜು. ಅವರಿಗೆ ಯಾವ ದುರಭ್ಯಾಸವೂ ಇರಲಿಲ್ಲ. ಸಿಟ್ಟು ಮಾಡಿಕೊಳ್ಳುವುದು, ಬೇರೆಯವರ ಬಗ್ಗೆ ಕಾಮೆಂಟ್ಸ್ ಮಾಡುವುದು, ಸಹ ಕಲಾವಿದರ ಜೊತೆಗೆ ಜಗಳ ಮಾಡುವುದು, ಸಿನಿಮಾ ಶೂಟಿಂಗ್ ಸ್ಪಾಟ್‌ಗೆ ಲೇಟ್ ಮಾಡಿಕೊಂಡು ಬರುವುದು ಇಲ್ಲವೇ ಇಲ್ಲ! ಸಿನಿಮಾ ನಟನಾಗಿ ಜನಪ್ರಿಯತೆಯ ತುತ್ತತುದಿಯಲ್ಲಿ ಇದ್ದರೂ ನಾಟಕ ಮಂಡಳಿಗಳು ಕರೆದಾಗ ಹೋಗಿ ನಾಟಕ ಮಾಡಿಕೊಂಡು ಬರುವುದನ್ನು ಅವರು ಕೊನೆಯವರೆಗೂ ಬಿಡಲಿಲ್ಲ!

Comedian Narasimharaju @100

ಚಾರ್ಲಿ ಚಾಪ್ಲಿನ್ ಅನುಕರಣೆಯ ಅವರ ಮಾಸ್ಟರ್ ಪೀಸ್ ಸಿನಿಮಾ ‘ಪ್ರೊಫೆಸರ್ ಹುಚ್ಚೂರಾಯ’. ಅದರಲ್ಲಿ ಪ್ರಮುಖ ಪಾತ್ರ ಅವರದ್ದೇ. ಚಿತ್ರ ನಿರ್ಮಾಣ ಕೂಡ ಅವರದ್ದೇ. ಆ ಸಿನಿಮಾ ಒಮ್ಮೆ ನೋಡಿದರೆ ಅವರೆಂತಹ ಅದ್ಭುತ ನಟ ಎಂದು ನಿಮಗೆ ಖಂಡಿತ ಅರ್ಥ ಆಗುತ್ತದೆ. ಅವರ ಮಗಳು ಸುಧಾ ನರಸಿಂಹರಾಜು ಕೂಡ ಉತ್ತಮ ನಟಿ ಮತ್ತು ನಿರೂಪಕಿ ಆಗಿ ಹೆಸರು ಮಾಡಿದ್ದಾರೆ.

ನಗುಮುಖದ ಹಿಂದೆ ನೂರಾರು ನೋವು

ಇಂತಹ ಮಹಾನ್ ನಟನ ಜೀವನದ ಅಂತ್ಯದಲ್ಲಿಯೂ ತುಂಬಾ ನೋವಿನ ಘಟನೆಗಳು ನಡೆದವು. ಅವರ ಒಬ್ಬನೇ ಮಗ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಾಗ ನರಸಿಂಹರಾಜು ಕುಸಿದುಹೋದರು. ಆ ನೋವಿನಿಂದ ಅವರಿಗೆ ಕೊನೆಯವರೆಗೂ ಹೊರಬರಲು ಆಗಲಿಲ್ಲ. 1979 ಜುಲೈ ತಿಂಗಳಲ್ಲಿ ಅವರು ಹೃದಯಾಘಾತದಿಂದ ನಮ್ಮನ್ನು ಅಗಲಿದಾಗ ಇಡೀ ಚಿತ್ರರಂಗವು ಕಣ್ಣೀರು ಸುರಿಸಿತು.

ನಕ್ಷತ್ರಿಕನಾಗಿ ನರಸಿಂಹರಾಜು

‘ ನನ್ನ ಜೀವನದ ಅದ್ಭುತ ಗೆಳೆಯನನ್ನು ಕಳೆದುಕೊಂಡೆ’ ಎಂದು ರಾಜಕುಮಾರ್ ಕಣ್ಣೀರು ಸುರಿಸಿದ ದೃಶ್ಯವು ನಮಗೆ ಮರೆತುಹೋಗುವುದಿಲ್ಲ. ಆಗ ಅವರಿಗೆ ಕೇವಲ 56 ವರ್ಷ.

ಅವರ ನಿರ್ಗಮನದ ನಂತರ ಅವರನ್ನು ನೆನಪಿಸುವ ಯಾವ ಕೆಲಸವನ್ನೂ ಚಿತ್ರರಂಗ ಮಾಡಿಲ್ಲ ಅನ್ನುವುದು ವಿಷಾದನೀಯ. ಅವರಿಗೆ ಬದುಕಿದ್ದಾಗ ಒಂದೇ ಒಂದು ಪ್ರಶಸ್ತಿಯನ್ನು ಸಿನಿಮಾರಂಗ ಅಥವಾ ಸರ್ಕಾರಗಳು ಅವರಿಗೆ ಕೊಡಲಿಲ್ಲ. ಇವತ್ತಿಗೂ ಒಂದು ರಸ್ತೆ ಅಥವಾ ಒಂದು ಸರ್ಕಲಿಗೆ ಅವರ ಹೆಸರು ಇಲ್ಲ!

Comedian Narasimharaju @100

ಅವರ ಹೆಸರಿನಲ್ಲಿ ಪ್ರತೀ ವರ್ಷ ಒಂದು ಪ್ರಶಸ್ತಿ ಕೊಡುವ ಕೆಲಸ ಬಿಟ್ಟರೆ ಫಿಲ್ಮ್ ಚೇಂಬರ್ ಬೇರೇನೂ ಮಾಡಿಲ್ಲ.

‘ನಗಬೇಕು, ನಗಿಸಬೇಕು ಇದು ನನ್ನ ಧರ್ಮ, ನಗಲಾರೆ ಅಳುವೆ ಎಂದರೆ ಅದು ನಿನ್ನ ಕರ್ಮ ‘ ಇದು ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ‘ನಕ್ಕರದೇ ಸ್ವರ್ಗ’ ಸಿನಿಮಾದ ಒಂದು ಹಾಡಿನ ಸಾಲು. ಅದರಂತೆ ಬದುಕಿದ, ಜಗವನ್ನು ನಗಿಸಿದ, ನಗುತ್ತ ನಿರ್ಗಮಿಸಿದ ಹಾಸ್ಯ ಚಕ್ರವರ್ತಿಗೆ ಇಂದು ಒಂದೆರಡು ಹನಿ ಕಣ್ಣೀರು ಸುರಿಸದಿದ್ದರೆ ನಾವು ಕನ್ನಡಿಗ ಆದದ್ದಕ್ಕೆ ಅರ್ಥವೇ ಇಲ್ಲ!

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಹ್ಯಾಪಿ ಬರ್ತ್‌ ಡೇ ಸಿಂಗಂ ಸೂರ್ಯ!; ಅವನು ಕೇವಲ ಸ್ಟಾರಲ್ಲ, ನಿಜಕ್ಕೂ ಧರೆಗಿಳಿದ ನಕ್ಷತ್ರ!

Exit mobile version