Site icon Vistara News

ರಾಜ ಮಾರ್ಗ ಅಂಕಣ | ಪಂಡಿತ್‌ ಬಿರ್ಜು ಮಹಾರಾಜ್‌: ಕಥಕ್‌ ನೃತ್ಯ ಪ್ರಕಾರಕ್ಕೆ ತಾರಾಮೌಲ್ಯ ತಂದುಕೊಟ್ಟ ಮಹಾ ಗುರು

Pandit Birju maharaj

ಪದ್ಮವಿಭೂಷಣ ಪಂಡಿತ್ ಬಿರ್ಜು ಮಹಾರಾಜರು ಕಳೆದ ವರ್ಷ ನಮ್ಮನ್ನು ಅಗಲಿದಾಗ ಅವರ ವಯಸ್ಸು 83 ಆಗಿತ್ತು. ಆ ವಯಸ್ಸಿನಲ್ಲಿಯೂ ಅವರು ನೃತ್ಯ ಪ್ರದರ್ಶನ ಮತ್ತು ನೃತ್ಯ ಸಂಯೋಜನೆ ಮಾಡುತ್ತಾ ಬ್ಯುಸಿ ಆಗಿದ್ದರು. ಒಡಿಸ್ಸಿ ನೃತ್ಯಕ್ಕೆ ಕೇಳು ಚರಣ ಮಹಾಪಾತ್ರ ಹೇಗೋ, ಕಥಕ್ ನೃತ್ಯಕ್ಕೆ ಪಂಡಿತ್ ಬಿರ್ಜು ಮಹಾರಾಜರು ಹಾಗೆ ಅನ್ನುವುದು ಜನಜನಿತ! ಅವರಿಬ್ಬರೂ ಭಾರತೀಯ ಸಂಸ್ಕೃತಿಯ ನಿಜ ಪಥ ದರ್ಶಕರು ಅನ್ನುವುದರಲ್ಲಿ ಅನುಮಾನವಿಲ್ಲ!

ನಾಲ್ಕನೇ ವಯಸ್ಸಿಗೇ ಸ್ಟೇಜ್ ಶೋ ಕೊಟ್ಟ ಹುಡುಗ!
ಪಂಡಿತ್ ಬ್ರಿಜ್ ಮೋಹನ್ ನಾಥ್ ಮಿಶ್ರಾ ಎಂಬುದು ಅವರ ಪೂರ್ಣ ಹೆಸರು. ಹುಟ್ಟಿದ ಊರು ಉತ್ತರ ಪ್ರದೇಶದ ಹಾಂಡಿಯಾ (1938). ಸಂಗೀತ ಮತ್ತು ನೃತ್ಯದ ಪ್ರತಿಭೆಗಳು ಅವರಿಗೆ ರಕ್ತದಲ್ಲಿಯೇ ಬಂದಿತ್ತು ಎಂದು ಹೇಳಬಹುದು. ಅವರ ತಂದೆ ಪಂಡಿತ್ ಜಗನ್ನಾಥ್ ಮಹಾರಾಜರು ಕೂಡ ಕಥಕ್ ನೃತ್ಯಕ್ಕೆ ಹೆಸರಾದವರು. ಅವರು ಲಕ್ನೋದ ‘ಕಲ್ಕಾ ಬಿಂದಾದೀನ’ ಘರಾನಾ ಪರಂಪರೆಯ ಮಹಾ ಗುರುಗಳು. ಅವರೇ ಮಗನಿಗೆ ಮೊದಲನೇ ಗುರು ಆಗಿದ್ದರು. ವೇದಿಕೆಯಲ್ಲಿ ತಮ್ಮ ಮೊದಲ ನೃತ್ಯದ ಪ್ರದರ್ಶನವನ್ನು ನೀಡುವಾಗ ಬಿರ್ಜು ವಯಸ್ಸು ಕೇವಲ ನಾಲ್ಕು ವರ್ಷ ಆಗಿತ್ತು ಅಂದರೆ ನಂಬುವುದು ಕಷ್ಟ!

9ನೆಯ ವಯಸ್ಸಿನಲ್ಲಿ ಅಪ್ಪನ ಸಾವೆಂಬ ಸಿಡಿಲು ಬಡಿಯಿತು!
ಆದರೆ ಒಂಬತ್ತನೇ ವಯಸ್ಸಿಗೆ ಕಾಲಿಡುವಾಗ ತಂದೆಯ ಸಾವು ಅವರನ್ನು ತುಂಬಾನೆ ಖಾಲಿ ಮಾಡಿತ್ತು. ಆದರೆ ನೃತ್ಯದ ತರಬೇತು ನಿಲ್ಲಲೇ ಇಲ್ಲ. ಆಗ ಚಿಕ್ಕಪ್ಪಂದಿರಾದ ಶಂಭು ಮಹಾರಾಜ್ ಮತ್ತು ಲಚ್ಚು ಮಹಾರಾಜ್ ಅವರು ತಮ್ಮ ನೃತ್ಯದ ಪ್ರತಿಭೆಯನ್ನು ಈ ಹುಡುಗನಿಗೆ ಧಾರೆ ಎರೆದರು.

ಹಿಂದುಸ್ತಾನಿ ಸಂಗೀತದ ಮಹಾ ದೈತ್ಯ ಪ್ರತಿಭೆಯ ಸಹೋದರರಾದ ರಾಜನ್ ಸಾಜನ್ ಮಿಶ್ರಾ ಅವರು ಮಹಾರಾಜರ ಭಾವಂದಿರು. ಅವರಿಂದ ಸ್ಫೂರ್ತಿಯನ್ನು ಪಡೆದು ಮಹಾರಾಜರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕೂಡ ಅಭ್ಯಾಸ ಮಾಡಿದರು. ನೂರಾರು ಕಡೆ ಸಂಗೀತ ಕಛೇರಿಯನ್ನು ನೀಡಿದರು. ಆದರೆ ನೃತ್ಯವು ಮುಂದೆ ಅವರ ಉಸಿರಾಯಿತು.

ಕಥಕ್ ನೃತ್ಯವು ಒಂದು ವಿಶೇಷ ಪ್ರಕಾರವಾಗಿದೆ. ಇಲ್ಲಿ ವೇಷಭೂಷಣಕ್ಕೆ ಹೆಚ್ಚು ಪ್ರಾಮುಖ್ಯತೆಯು ಇಲ್ಲ. ಆದರೆ ಹೆಜ್ಜೆಯ ಗತಿ ಮತ್ತು ಮುಖದ ಭಾವನೆಗಳು ತುಂಬಾ ತೀವ್ರವಾಗಿರುತ್ತವೆ.

ಅದರಲ್ಲಿಯೂ ನಮ್ಮ ರಾಮಾಯಣ, ಮಹಾಭಾರತ ಹಾಗೂ ಭಾಗವತಗಳಿಂದ ಆರಿಸಿರುವ ಶ್ರೇಷ್ಠವಾದ ಕಥಾವಸ್ತುಗಳನ್ನು ಹಿನ್ನೆಲೆ ಸಂಗೀತಕ್ಕೆ ಅಳವಡಿಸಿ (ಮುಖ್ಯವಾಗಿ ಸಿತಾರ್) ಹಿನ್ನೆಲೆಯ ಹಾಡುಗಳಿಂದ ಸಿಂಗರಿಸಿ ವೇದಿಕೆಗೆ ತರುವುದು ಕಥಕ್ ನೃತ್ಯದ ಗೈರತ್ತು. ಇಲ್ಲಿ ಕಥಕ್ ನೃತ್ಯ ಕಲಾವಿದ ಅನ್ನುವುದಕ್ಕಿಂತ ಆತ ‘ಕಥಕ್ ಕಥಾ ವಿವರಣೆಗಾರ’ ಅನ್ನುವುದು ಹೆಚ್ಚು ಪ್ರಚಲಿತ ಆಗಿದೆ.

ಪಂಡಿತ್ ಬಿರ್ಜು ಮಹಾರಾಜರು ನೃತ್ಯದ ಜೊತೆಗೆ ಸ್ವತಃ ಸಂಗೀತದ ಕಲಾವಿದರೂ ಆದ್ದರಿಂದ ತಮ್ಮ ನೃತ್ಯಕ್ಕೆ ಸಂಗೀತವನ್ನು ತಾವೇ ಕಂಪೋಸ್ ಮಾಡುತ್ತಿದ್ದರು. ತಮ್ಮದೇ ನೃತ್ಯದ ನಡುನಡುವೆ ಅವರೇ ಹಾಡುವ ಟುಮ್ರಿಗಳು ಭಾರೀ ಮೆರಗನ್ನು ತರುತ್ತಿದ್ದವು. ಅವರ ಹೆಜ್ಜೆಯ ಗತಿಯು ಅತ್ಯಂತ ವೇಗವಾಗಿತ್ತು. ಒಮ್ಮೆ ತಮ್ಮ ತಬಲಾ ನುಡಿಸುತ್ತಾ ಅದಕ್ಕೆ ಮಹಾರಾಜರು ಮಾಡಿದ ನೃತ್ಯವನ್ನು ನೋಡುತ್ತಾ ನಾನು ತಬಲಾ ನುಡಿಸುವುದನ್ನು ಕೂಡ ಮರೆತುಬಿಟ್ಟೆ ಎಂದು ಖ್ಯಾತ ತಬಲಾ ಕಲಾವಿದರಾದ ಉಸ್ತಾದ್ ಝಾಕೀರ್ ಹುಸೇನರು ಹೇಳಿದ್ದು ಉಲ್ಲೇಖನೀಯ!

ಅತೀ ಸಣ್ಣ ವಯಸ್ಸಿನಲ್ಲಿ ಬಂತು ರಾಷ್ಟ್ರಪ್ರಶಸ್ತಿ!
ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದ ಅತ್ಯಂತ ಸಣ್ಣ ವಯಸ್ಸಿನ ಕಲಾವಿದರು ಇವರು. ಆ ಪ್ರಶಸ್ತಿ ಪಡೆಯುವಾಗ ಅವರ ವಯಸ್ಸು ಕೇವಲ 27 ವರ್ಷ! ಪದ್ಮವಿಭೂಷಣ ಪ್ರಶಸ್ತಿ ಪಡೆದ ಮೊದಲ ಕಥಕ್ ಕಲಾವಿದರು ಇವರು. ಆದರೆ ಈ ಪ್ರಶಸ್ತಿಗಿಂತ ತಾನು ಕಲಿಸಿದ ಅಪಾರ ಸಂಖ್ಯೆಯ ಶಿಷ್ಯ ವರ್ಗವೇ ನಿಜವಾದ ಪ್ರಶಸ್ತಿ ಎಂದು ನಂಬಿದವರು ಅವರು. ತಾನೇ ಆರಂಭ ಮಾಡಿದ ‘ಕಲಾಶ್ರಮ ‘ ಎಂಬ ಸಂಸ್ಥೆಯ ಮೂಲಕ ಅವರು ಮಾಡಿದ ಕಲಾ ಸೇವೆಯು ಅದು ಅತೀ ಶ್ರೇಷ್ಠವಾದದ್ದು. ಭಾರತದ ಎಲ್ಲ ನೃತ್ಯ ಸಂಗೀತ ಮಹೋತ್ಸವಗಳಲ್ಲಿ ಕೂಡ ಇವರು ನೃತ್ಯ ಪ್ರದರ್ಶನ ನೀಡಿದ್ದಾರೆ.

ಆದರೆ ಪ್ರಪಂಚವು ಮಹಾರಾಜರನ್ನು ನೆನಪು ಇಟ್ಟುಕೊಳ್ಳುವುದೇ ಬೇರೆ ಕಾರಣಕ್ಕೆ!
ಮಹಾರಾಜರನ್ನು ಇಂದು ಜಗತ್ತು ನೆನಪಿಸಿಕೊಳ್ಳುವುದು ಅವರು ಹಲವು ಸಿನಿಮಾಗಳಿಗೆ ಮಾಡಿದ ಅದ್ಭುತವಾದ ನೃತ್ಯ ನಿರ್ದೇಶನದ ಮೂಲಕ!

‘ಶತರಂಜ್ ಕೆ ಖಿಲಾಡಿ’ ಹಿಂದೀ ಸಿನಿಮಾಕ್ಕೆ ಅವರು ಮಾಡಿದ ಕೊರಿಯೋಗ್ರಾಫಿಯು ಆ ಕಾಲಕ್ಕೆ ಭಾರೀ ಫೇಮಸ್ ಆಗಿತ್ತು. ರೇಖಾ ಅಭಿನಯಿಸಿದ ಸೂಪರ್ ಹಿಟ್ ಆದ ‘ಉಮ್ರಾವೋ ಜಾನ್’ ಸಿನೆಮಾದಲ್ಲಿ ಅದ್ಭುತವಾದ ಮುಜ್ರಾಗಳನ್ನು ಕಥಕ್ ನೃತ್ಯಕ್ಕೆ ಅಳವಡಿಸಿದ್ದು ಅವರ ಪ್ರತಿಭೆಗೆ ಜ್ವಲಂತ ಸಾಕ್ಷಿ. ಮುಂದೆ ಮಾಧುರಿ ದೀಕ್ಷಿತ್ ಜಿಂಕೆಯಂತೆ ಬಳುಕುತ್ತ ಕುಣಿದ ‘ದಿಲ್ ತೋ ಪಾಗಲ್ ಹೈ’ ಸಿನಿಮಾ ನೃತ್ಯಗಳು ಇವರದ್ದೇ ಸಂಯೋಜನೆಗಳು. ದೀಪಿಕಾ ಪಡುಕೋಣೆ ಅದ್ಭುತವಾಗಿ ಕುಣಿದ ‘ಬಾಜಿರಾವ್ ಮಸ್ಥಾನೀ’ ಹಿಂದಿ ಸಿನಿಮಾದ ‘ಮೋಹೆ ರಂಗ್ ದೋ ಲಾಲ್’ ಎಂಬ ಹಾಡನ್ನು ಕೇಳಿದ ನಂತರ ಮತ್ತು ನೃತ್ಯ ನೋಡಿದ ನಂತರ ನೀವು ಮೈ ಮರೆಯದಿದ್ದರೆ ಮತ್ತೆ ಹೇಳಿ! ಅದು ಬಿರ್ಜು ಮಹಾರಾಜರ ಅದ್ಭುತ ಸೃಷ್ಟಿಯೇ ಹೌದು.

ಅದೇ ರೀತಿ ತಮಿಳಿನ ‘ವಿಶ್ವರೂಪಂ’ ಸಿನೆಮಾದಲ್ಲಿ ಕಮಲ್ ಹಾಸನ್ ಅಂತಹ ಮೆಗಾ ಸ್ಟಾರ್ ನಟನನ್ನು ಅದ್ಭುತವಾಗಿ ಕುಣಿಸಿ ಅತ್ಯುತ್ತಮ ನೃತ್ಯ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪಡೆದ ಕೀರ್ತಿಯು ಕೂಡ ಪಂಡಿತ್ ಬಿರ್ಜು ಮಹಾರಾಜರಿಗೆ ದೊರೆಯುತ್ತದೆ. ಅವರ ಬಗ್ಗೆ ಪಬ್ಲಿಶ್ ಆಗಿರುವ ಅತ್ಯುತ್ತಮ ಪುಸ್ತಕ ‘ನೃತ್ಯ ಸಾಮ್ರಾಟ್’ ದಲ್ಲಿ ಪಂಡಿತರ ಬಗ್ಗೆ ಬೇರೆ ಬೇರೆ ಲೇಖಕರು ಬರೆದಿರುವ 96 ಪ್ರಬಂಧಗಳು ಇವೆ ಮತ್ತು ಅವರ ಕಲಾಪ್ರೇಮವನ್ನು ಪಸರಿಸುತ್ತದೆ.

ಕಳೆದ ವರ್ಷ ಜನವರಿ 17ರಂದು 83 ವರ್ಷದ ಪಂಡಿತ್ ಬಿರ್ಜು ಮಹಾರಾಜರು ಯಾವುದೇ ವಿಷಾದ ಇಲ್ಲದೆ ತಮ್ಮ ಇಹ ಲೋಕದ ವ್ಯಾಪಾರ ಮುಗಿಸಿದ್ದಾರೆ. ಅವರ ನಾಲ್ಕು ಜನ ಮಕ್ಕಳು ಕೂಡ ತರಬೇತು ಪಡೆದು ಅತ್ಯುತ್ತಮ ನೃತ್ಯ ಕಲಾವಿದರಾಗಿ ಮಿಂಚುತ್ತಿದ್ದಾರೆ. ಆದರೆ, ವೇದಿಕೆಯಲ್ಲಿ ಗೆಜ್ಜೆ ಕಟ್ಟಿ ನೃತ್ಯ ಮಾಡುತ್ತಾ ತಮ್ಮ ಪ್ರಾಣವನ್ನು ನೀಗಬೇಕು ಎಂಬ ಅವರ ಕೊನೆಯ ಆಸೆ ಮಾತ್ರ ಪೂರ್ತಿ ಆಗಲೇ ಇಲ್ಲ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ತಮಿಳುನಾಡಿನ ಚಹರೆಯನ್ನೇ ಬದಲಾಯಿಸಿದ ಮಹಾನಾಯಕ ಪುರಚ್ಚಿ ತಲೈವರ್‌ ಎಂ.ಜಿ.ಆರ್

Exit mobile version