ನಾನು ತುಂಬಾ ದಿನಗಳಿಂದಲೂ ಬರೆಯಬೇಕು ಎಂದುಕೊಂಡಿದ್ದ ಅದ್ಭುತ ನಟನ ಬಗ್ಗೆ ಈ ದಿನ ಬರೆಯುತ್ತಿರುವೆ. ದತ್ತಣ್ಣ ಅವರ ಆದರ್ಶ ಬದುಕು, ಸಾಧನೆ, ಮತ್ತು ನಟನೆಗಳ ಬಗ್ಗೆ ಓದುತ್ತಾ ನಾನಂತೂ ವಿಸ್ಮಯ ಪಟ್ಟಿದ್ದೇನೆ. ಅವರೊಂದು ಅದ್ಭುತವಾದ ಯಶೋಗಾಥೆ (ರಾಜ ಮಾರ್ಗ ಅಂಕಣ)!
ಎ ಗ್ರೇಟ್ ಪರ್ಸನಾಲಿಟಿ ಆಲ್ ಟು ಗೆದರ್. ದತ್ತಣ್ಣ ಅವರ ಪೂರ್ತಿ ಹೆಸರು ಹರಿಹರ ಗುಂಡೂರಾವ್ ದತ್ತಾತ್ರೇಯ (Actor Dattanna). ಅವರ ತಂದೆಯವರು ಚಿತ್ರದುರ್ಗದಲ್ಲಿ ವಕೀಲ ಆಗಿದ್ದವರು. ದತ್ತಣ್ಣ ಹುಟ್ಟಿದ್ದು ಮತ್ತು ಬಾಲ್ಯವನ್ನು ಕಳೆದದ್ದು ಚಿತ್ರದುರ್ಗದಲ್ಲಿ, ಮಠದ ಕೇರಿಯಲ್ಲಿ. ಅವರ ಹೆತ್ತವರಿಗೆ ಐದು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಎಲ್ಲರೂ ಮಹಾ ಜೀನಿಯಸ್!
ದತ್ತಣ್ಣ ಎಸೆಸೆಲ್ಸಿ ರಾಜ್ಯಕ್ಕೇ ಮೊದಲ ರ‍್ಯಾಂಕ್ !
ದತ್ತಣ್ಣ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲನೆಯ ರ‍್ಯಾಂಕ್ ಬಂದಿದ್ದರು! ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್! ಮುಂದೆ ಐಐಟಿ ಚೆನ್ನೈಯಲ್ಲಿ ಸೀಟ್ ದೊರಕಿದರೂ ಅಲ್ಲಿ ಓದುವ ಮನಸ್ಸಾಗಲಿಲ್ಲ. ಪ್ರೀತಿಯ ಮಗನನ್ನು ಅಷ್ಟು ದೂರ ಕಳುಹಿಸುವುದು ಹೆತ್ತವರಿಗೆ ಕಷ್ಟ ಆಗಿತ್ತು.
ಅದಕ್ಕಾಗಿ ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ನಂತರ ನಮ್ಮ ಹೆಮ್ಮೆಯ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISC) ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿ ಪಡೆದರು. ಮುಂದೆ 21 ವರ್ಷಗಳ ಕಾಲ ಭಾರತೀಯ ವಾಯುಸೇನೆಯ ತಾಂತ್ರಿಕ ಅಧಿಕಾರಿ ಆಗಿ ಸೇವೆ ಸಲ್ಲಿಸುವ ಅವಕಾಶ ಪಡೆದರು! ಆ ಅವಧಿಯಲ್ಲಿ ಬೆಂಗಳೂರು, ಚಂಡೀಗಢ, ಕಾನ್ಪುರ್, ಭಟಿಂಡಾ, ಅಂಡಮಾನ್ ಮೊದಲಾದ ಕಡೆಗಳಲ್ಲಿ ಭಾರತೀಯ ವಾಯುಸೇನೆಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದರು. ಮುಂದೆ Commissioned Officer ಆಗಿ ವಾಯುಸೇನೆಯ ಉನ್ನತ ಅಧಿಕಾರಿ ಹುದ್ದೆ! 1986ರಲ್ಲಿ ವಿಂಗ್ ಕಮ್ಯಾಂಡರ್ ಆಗಿ ನಿವೃತ್ತಿ ಎಂಬಲ್ಲಿಗೆ ಒಂದು ಅಧ್ಯಾಯ ಮುಗಿದಿತ್ತು!
ದತ್ತಣ್ಣ ಮುಂದೆ ಮೇಷ್ಟ್ರು ಆದರು!
ದತ್ತಣ್ಣ ಮುಂದೆ ಹಿಂದುಸ್ಥಾನ್ ಏರೋನಾಟಿಕಲ್ ಲಿಮಿಟೆಡ್( HAL) ಸಂಸ್ಥೆಯ ಆಡಳಿತ ತರಬೇತಿ ಸಂಸ್ಥೆಯಲ್ಲಿ ಮೊದಲು ಪ್ರಾಧ್ಯಾಪಕ, ನಂತರ ಡಿಜಿಎಂ ಹೀಗೆ ಉನ್ನತ ಮಟ್ಟದ ಹುದ್ದೆಗಳನ್ನು ಪಡೆದರು. ಕೊನೆಗೆ ಪ್ರಿನ್ಸಿಪಾಲ್ ಆಗಿ ನಿವೃತ್ತಿ ಆದರು. ಅವರ ವಿದ್ಯಾರ್ಥಿಗಳ ಅಭಿಪ್ರಾಯದಲ್ಲಿ ಅವರು ಪರ್ಫೆಕ್ಟ್ ಟೀಚರ್ ಆಗಿದ್ದರು. ವಿಜ್ಞಾನದ ಕ್ಲಿಷ್ಟ ವಿಷಯಗಳನ್ನು ಸುಲಭವಾಗಿ ಹಾಸ್ಯದ ಜೊತೆಗೆ ವಿವರಣೆ ಕೊಡುವುದು ಅವರ ಸಾಮರ್ಥ್ಯ ಆಗಿತ್ತು. ಇದು ದತ್ತಣ್ಣ ಅವರ ಪ್ರೊಫೈಲಿನ ಎರಡನೆಯ ಆಯಾಮ.
ನಾಟಕ, ಸಿನಿಮಾ ದತ್ತಣ್ಣ ಅವರ ಸಾಮರ್ಥ್ಯದ ಮೂರನೇ ಆಯಾಮ!
ಇಂತಹ ಹೈ ಕ್ಯಾಲಿಬರ್ ಇರುವ ವ್ಯಕ್ತಿಯು ನಾಟಕ ಮತ್ತು ಸಿನಿಮಾರಂಗಕ್ಕೆ ಬಂದದ್ದು, ಚಾರಿತ್ರಿಕ ಪಾತ್ರಗಳ ಮೂಲಕ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದು ಕನ್ನಡ ಕಲಾ ಸರಸ್ವತಿಯ ಅನುಗ್ರಹ ಎಂದು ಖಚಿತವಾಗಿ ಹೇಳಬಹುದು!
ತನ್ನ ಪ್ರೌಢಶಾಲೆಯ ಹಂತದಲ್ಲಿ ದತ್ತಣ್ಣ ಹಲವು ನಾಟಕಗಳಲ್ಲಿ ಅಭಿನಯ ಮಾಡಿದ್ದರು. ಮುಂದೆ HAL ಕರ್ತವ್ಯಗಳ ಸಂದರ್ಭದಲ್ಲಿ ದೆಹಲಿಯಲ್ಲಿ ಹತ್ತಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಅದರಲ್ಲಿ ಅವರ ಬಿಜ್ಜಳನ ಪಾತ್ರ ಟ್ರೆಂಡ್ ಸೆಟ್ಟರ್ ಆಗಿತ್ತು. ಕರ್ನಾಟಕದಲ್ಲಿ ಕೂಡ ಅವರು ನೂರಾರು ನಾಟಕಗಳಲ್ಲಿ ಅಭಿನಯ ಮಾಡಿದರು. ಅದೇ ಹೊತ್ತಿಗೆ ನಾಗಾಭರಣ ಅವರ ನಿರ್ದೇಶನದ ಕನ್ನಡ ಚಿತ್ರ ‘ಆಸ್ಫೋಟ’ದಲ್ಲಿ ಮೊದಲ ಬಾರಿಗೆ ರಾಜಕಾರಣಿಯ ಮುಖ್ಯವಾದ ಪಾತ್ರವನ್ನು ಮಾಡಿದರು(1988). ಆಗ ಅವರಿಗೆ 46 ವರ್ಷ ದಾಟಿತ್ತು! ಮೊದಲ ಸಿನೆಮಾಕ್ಕೆ ಅವರಿಗೆ ಶ್ರೇಷ್ಠ ನಟ ರಾಜ್ಯ ಪ್ರಶಸ್ತಿ ಕೂಡ ದೊರೆಯಿತು!
ಕನ್ನಡ ಸಿನಿಮಾದ ಅನಿವಾರ್ಯ ನಟ
ಅಲ್ಲಿಂದ ಆರಂಭಿಸಿ ದತ್ತಣ್ಣ ಕನ್ನಡದ ಅನಿವಾರ್ಯ ನಟ ಆಗಿಬಿಟ್ಟರು. ಪಿ.ಶೇಷಾದ್ರಿ, ನಾಗಾಭರಣ ಮೊದಲಾದ ನಿರ್ದೇಶಕರು ಅವರ ಒಳಗಿದ್ದ ಅದ್ಭುತ ನಟನನ್ನು ಹೊರಗೆ ಎಳೆದು ತಂದರು. ದತ್ತಣ್ಣ ಕೀರ್ತಿಯ ಶಿಖರ ಏರಿದರು.
ಸೀತಾರಾಂ ಅವರ ‘ಮಾಯಾ ಮೃಗ’ ಧಾರಾವಾಹಿಯ ಶಾಸ್ತ್ರಿಗಳ ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಮೌನಿ, ಚಿನ್ನಾರಿ ಮುತ್ತ, ಮೈಸೂರು ಮಲ್ಲಿಗೆ, ಅಮೆರಿಕ ಅಮೆರಿಕ, ರಾಮ ಭಾಮ ಶಾಮ, ಸಂತ ಶಿಶುನಾಳ ಶರೀಫ, ಕೊಟ್ರೇಶಿ ಕನಸು, ಅಂಡಮಾನ್, ಅನಂತು ವರ್ಸಸ್ ನುಸ್ರತ್, ನೀರ್ ದೋಸೆ…….ಹೀಗೆ 225 ಸಿನೆಮಾಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾದ ಪಾತ್ರಗಳಲ್ಲಿ ದತ್ತಣ್ಣ ಮಿಂಚಿದರು. ಎರಡು ರಾಷ್ಟ್ರ ಪ್ರಶಸ್ತಿ, ಎರಡು ರಾಷ್ಟ್ರೀಯ ತೀರ್ಪುಗಾರರ ಮಂಡಳಿಯ ಪ್ರಶಸ್ತಿ, ಎರಡು ರಾಜ್ಯ ಪ್ರಶಸ್ತಿ, ಫಿಜಿ ರಾಷ್ಟ್ರದ ಫಿಲ್ಮ್ ಉತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ, ಹಲವು ಫಿಲ್ಮ್ ಫೇರ್ ಪ್ರಶಸ್ತಿಗಳು ಅವರಿಗೆ ದೊರೆತಿವೆ.
ಕನ್ನಡದ ಚಿತ್ರದಲ್ಲಿ ಯಾವುದಾದ್ರೂ ವಿಶಿಷ್ಟ ವ್ಯಕ್ತಿತ್ವದ ಅಥವಾ ಸವಾಲಿನ ಪಾತ್ರಗಳು ಇದ್ದರೆ ನಿರ್ದೇಶಕರು ದತ್ತಣ್ಣ ಅವರನ್ನೇ ಹುಡುಕಿಕೊಂಡು ಬರುವ ಸಂದರ್ಭಗಳು ಇಂದಿಗೂ ಇವೆ. ಅವೆಲ್ಲಾ ಪಾತ್ರಕ್ಕೂ ಪರಕಾಯ ಪ್ರವೇಶ ಮಾಡಿ ನ್ಯಾಯ ಒದಗಿಸುವ ಶಕ್ತಿ ಅವರಿಗೆ ಒಲಿದು ಬಂದಿದೆ.
ದತ್ತಣ್ಣ ಟಾಪ್ ಟೆನ್ ಪಾತ್ರಗಳು
ಅವರ ಟಾಪ್ 10 ಸಿನೆಮಾ ಮತ್ತು ಟಾಪ್ 10 ಪಾತ್ರಗಳನ್ನು ಚಿತ್ರ ವಿಮರ್ಶಕರು ಆರಿಸಿಟ್ಟು ನನ್ನ ಕೆಲಸವನ್ನು ಹಗುರ ಮಾಡಿ ಬಿಟ್ಟಿದ್ದಾರೆ. ಅವುಗಳನ್ನು ಇಲ್ಲಿ ನಾನು ಉಲ್ಲೇಖ ಮಾಡಲೇಬೇಕು.
1) ಮೌನಿ – ಇಡೀ ಸಿನಿಮಾದ ಆತ್ಮವೇ ದತ್ತಣ್ಣ ಅವರ ಮೇರು ಅಭಿನಯ. ಅಸಹಾಯಕ ಸನ್ನಿವೇಶಗಳಿಂದ ಮನುಷ್ಯ ಹೇಗೆ ಮೌನಿ ಆಗಿ ಬಿಡುತ್ತಾನೆ ಎಂದು ದತ್ತಣ್ಣ ಸಶಕ್ತವಾಗಿ ಅಭಿನಯಿಸಿ ತೋರಿಸಿಕೊಟ್ಟಿದ್ದಾರೆ. ಅದರ ಕ್ಲೈಮಾಕ್ಸ್ ನನಗೆ ಕಣ್ಣೀರು ತರಿಸಿದೆ.
2) ಕಾಡ ಬೆಳದಿಂಗಳು- ವಯಸ್ಸಾದ ಅಪ್ಪ ತನ್ನ ಮಗನಿಂದ ನಿರ್ಲಕ್ಷ್ಯಕ್ಕೆ ಒಳಗಾದಾಗ ಒಳಗೊಳಗೆ ಬೇಗುದಿ ಅನುಭವಿಸುವ ಪಾತ್ರ. ಇಲ್ಲಿ ಇಡೀ ಪಾತ್ರವನ್ನೇ ದತ್ತಣ್ಣ ಜೀವಿಸಿದ್ಧಾರೆ.
3) ಕ್ರೌರ್ಯ – ರಂಗಜ್ಜಿಯ ಸಾತ್ವಿಕವಾದ ಸಹಜ ಭಾವನೆಗಳನ್ನು ಖಂಡಿಸುವ ನೆಗೆಟಿವ್ ಶೇಡ್ ಪಾತ್ರ. ಸ್ವಾರ್ಥದ ಪರಾಕಾಷ್ಠೆ!
4) ಬೆಟ್ಟದ ಜೀವ- ಶಿವರಾಮ ಕಾರಂತರ ಅತ್ಯುತ್ತಮ ಕಾದಂಬರಿ ಆಧಾರಿತ ಸಿನೆಮಾ ಇದು. ಅದರಲ್ಲಿ ಸಂಪ್ರದಾಯವನ್ನು ಉಳಿಸಿಕೊಳ್ಳಲು ಹೆಣಗಾಡುವ ಮಲೆನಾಡಿನ ಕುಟುಂಬದ ಹಿರಿಯ ಗೋಪಾಲಯ್ಯನ ಪಾತ್ರ. ಅದೊಂದು ಮಾಸ್ಟರ್ ಪೀಸ್ ಪರ್ಫಾರ್ಮೆನ್ಸ್!
5) ಭಾರತ್ ಸ್ಟೋರ್ಸ್ – ಗೋವಿಂದ ಶೆಟ್ಟಿ ಎನ್ನುವ ಪಾತ್ರ. ಮಾಲ್ ಸಂಸ್ಕೃತಿಯ ಧಾಳಿಯಿಂದ ತನ್ನ ಪುಟ್ಟ ಜೀನಸು ಅಂಗಡಿಯನ್ನು ಉಳಿಸಿಕೊಳ್ಳಲು ಹೆಣಗಾಡುವ ಪಾತ್ರ. ಅಲ್ಲಿ ದತ್ತಣ್ಣ ಸೂಪರ್.
6) ಮುನ್ನುಡಿ – ಅತೀ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿ ಮತ್ತು ದತ್ತಣ್ಣ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ತಂದು ಕೊಟ್ಟ ಪಾತ್ರ. ಇಲ್ಲಿ ದತ್ತಣ್ಣ ಸ್ಮರಣೀಯ ಅಭಿನಯ ನೀಡಿದ್ದಾರೆ.
7) ಅತಿಥಿ – ಒಬ್ಬ ಹಳ್ಳಿಯ ವೈದ್ಯನಾಗಿ ಆಕಸ್ಮಿಕವಾಗಿ ಒಬ್ಬ ಭಯೋತ್ಪಾದಕನಿಗೆ ಚಿಕಿತ್ಸೆ ನೀಡುವ ಸನ್ನಿವೇಶ ಬಂದಾಗ ಅಲ್ಲಿ ಸಾತ್ವಿಕತೆ ಮತ್ತು ಕ್ರೌರ್ಯಗಳ ಮುಖಾಮುಖಿ! ಇಲ್ಲಿ ದತ್ತಣ್ಣ ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ.
8) ಬೇರು – ಒಬ್ಬ ಸಾಮಾನ್ಯ ಸರಕಾರಿ ಗುಮಾಸ್ತನಾಗಿ ಭ್ರಷ್ಟವಾದ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹೆಣಗಾಡುವ ಪಾತ್ರ. ಇಲ್ಲಿ ದತ್ತಣ್ಣ ನಮ್ಮ ರಕ್ತ ಬಿಸಿ ಮಾಡುತ್ತಾರೆ.
9) ಆಸ್ಫೋಟ – ಮೊದಲ ಸಿನಿಮಾದಲ್ಲಿ ಸವಾಲಿನ ಪಾತ್ರ. ರಾಜಕಾರಣಿಯ ಭಿನ್ನವಾದ ಮುಖ. ದತ್ತಣ್ಣ ಇಲ್ಲಿ ಕ್ಲಿಕ್.
10) ಕೆಂಪಿರ್ವೆ – ಓರ್ವ ವಿಧುರ ತನ್ನ ನಿವೃತ್ತಿ ನಂತರ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಪ್ರವೇಶಿಸಿ ತನ್ನ ಮನೆಯವರ ಸಿಟ್ಟಿಗೆ ಒಳಗಾಗುವ ಪಾತ್ರ.
ಕಲಾತ್ಮಕ ಮತ್ತು ಕಮರ್ಷಿಯಲ್ ಎರಡಕ್ಕೂ ಸಲ್ಲುತ್ತಾರೆ ದತ್ತಣ್ಣ
ಒಂದೆಡೆ ಕಲಾತ್ಮಕ ಚಿತ್ರಗಳು, ಇನ್ನೊಂದೆಡೆ ಕಮರ್ಷಿಯಲ್ ಚಿತ್ರಗಳು, ಅದರ ಮಧ್ಯೆ ಹುಟ್ಟಿಕೊಂಡ ಬ್ರಿಜ್ ಚಿತ್ರಗಳು ಇವೆಲ್ಲವಕ್ಕೂ ಹೊಂದಿಕೊಳ್ಳುವ ಒಬ್ಬ ಸಶಕ್ತ ಕನ್ನಡದ ನಟ ಇದ್ದರೆ ಅದು ದತ್ತಣ್ಣ ಎನ್ನುವುದು ನನ್ನ ನಂಬಿಕೆ! ಅದು ನೂರು ಶೇಕಡಾ ನಿಜ ಅನ್ನುವುದನ್ನು ಅವರು ಸಾಧಿಸಿದ್ದಾರೆ.
ದತ್ತಣ್ಣ ಯಾಕೆ ಮದುವೆ ಆಗಿಲ್ಲ?
ಅವರ ಮದುವೆಯ ಸ್ವಾರಸ್ಯದ ಬಗ್ಗೆ ನಾನು ಹೇಳಬೇಕು. ದತ್ತಣ್ಣ HAL ಉದ್ಯೋಗದಲ್ಲಿ ಇರುವಾಗ ಅವರಿಗೆ ಮದುವೆ ಮಾಡಬೇಕು ಎನ್ನುವ ಮನೆಯವರ ಪ್ರಯತ್ನ ನಡೆದಿತ್ತು.
“ನೀನು ಯಾರನ್ನಾದ್ರೂ ಪ್ರೀತಿ ಮಾಡಿದ್ರೆ ಹೇಳು. ನಮಗೆ ಜಾತಿಯ ಪ್ರಶ್ನೆ ಇಲ್ಲ. ಯಾವ ಹುಡುಗಿ ಆದರೂ ಪರವಾಗಿಲ್ಲ” ಎಂಬ ಮಾತು ಬಂದಿತ್ತು. ಆದರೆ ಎರಡು ಕಾರಣಕ್ಕೆ ತಾನು ಮದುವೆ ಆಗಿಲ್ಲ ಎಂದು ದತ್ತಣ್ಣ ಹೇಳುತ್ತಾರೆ. ಒಂದು ವೃತ್ತಿ ಜೀವನ ಮತ್ತು ನಾಟಕಗಳ ನಡುವೆ ಅವರಿಗೆ ಪುರುಸೊತ್ತು ಸಿಗಲಿಲ್ಲವಂತೆ. ಇನ್ನೊಂದು ಮದುವೆ ಅನಿವಾರ್ಯ ಅಂತ ಅವರಿಗೆ ಅನ್ನಿಸಲೇ ಇಲ್ಲವಂತೆ!
“ನಾನು ಬ್ರಹ್ಮಚಾರಿಯಾಗಿಯೂ ಸಂತೋಷವಾಗಿ ಇದ್ದೇನೆ. ನನ್ನ ನೆಮ್ಮದಿ ಹಾಳು ಮಾಡ್ಬೇಡಿ. ಈ ಸ್ವಾತಂತ್ರ್ಯವನ್ನು ನಾನು ಎಂದಿಗೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ!” ಎಂದು ಹೇಳಿ ಗಟ್ಟಿಯಾಗಿ ನಗುತ್ತಾರೆ.
ಅವರ ಮಾನವೀಯ ಮುಖಗಳ ಬಗ್ಗೆ ಕೂಡ ನೂರಾರು ನಿದರ್ಶನಗಳು ಸಿಗುತ್ತವೆ. ಅವುಗಳ ಬಗ್ಗೆ ಇನ್ನೊಮ್ಮೆ ಬರೆಯುವೆ.
ದತ್ತಣ್ಣ ಅವರಿಗೆ ಈಗ 81 ವರ್ಷ. ಇಂದಿಗೂ ಸರಳವಾಗಿ ಬದುಕುತ್ತಿರುವ, ಗಟ್ಟಿ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಗಣನೀಯವಾದ ಕೊಡುಗೆ ನೀಡುತ್ತಿರುವ, ಸಜ್ಜನಿಕೆಯ ಸಾಕಾರಮೂರ್ತಿ ಆಗಿರುವ, ಅಹಂ ಇಲ್ಲದೆ ಎಲ್ಲರನ್ನೂ ಮಾತಾಡಿಸುವ ದತ್ತಣ್ಣ ನಮಗೆ ನಿಜವಾಗಿಯೂ ಐಕಾನ್ ಎಂದು ನನ್ನ ಭಾವನೆ. ನನ್ನನ್ನು ಇಂದಿಗೂ ಕಾಡುವ ಪ್ರಶ್ನೆ ಎಂದರೆ ಅವರಿಗೆ ಪದ್ಮಶ್ರೀ ಮೊದಲಾದ ಪ್ರಶಸ್ತಿಗಳು ಯಾಕೆ ದೊರೆತಿಲ್ಲ?
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಮಕ್ಕಳಿಗಾಗಿ ಅಮರ ಚಿತ್ರಕಥಾ ಲೋಕ ಸೃಷ್ಟಿಸಿದ ಅಂಕಲ್ ಪೈಗೆ ಮಕ್ಕಳೇ ಇರಲಿಲ್ಲ!