Site icon Vistara News

ರಾಜ ಮಾರ್ಗ ಅಂಕಣ : ಶಾಸ್ತ್ರೀಯ ಸಂಗೀತದ ಬೆರಗು ಕೌಶಿಕೀ ಚಕ್ರವರ್ತಿ; ವಯಸ್ಸು ಸಣ್ಣದು, ಸಾಧನೆ ದೊಡ್ಡದು

Vidushi Kaushikee Chakraborty Raja Marga column

ಆಕೆಯ ತಂದೆ, ತಾಯಿ, ಅಜ್ಜ, ಅಜ್ಜಿ ಎಲ್ಲರೂ ಶಾಸ್ತ್ರೀಯ ಸಂಗೀತದ ದಿಗ್ಗಜ ಕಲಾವಿದರು. ಅವರ ತಂದೆ ಪಂಡಿತ್ ಅಜೊಯ್ ಚಕ್ರವರ್ತಿ (Pandit Ajoy Chakraborty) ಅವರಂತೂ ಅಂತಾರಾಷ್ಟ್ರೀಯ ಕೀರ್ತಿ ಪಡೆದ ಕಲಾವಿದರು. ಹಾಗೆ ಸಂಗೀತವು ಈ ಹುಡುಗಿಯ ರಕ್ತದಲ್ಲೇ ಬಂದಿತ್ತು. ಅದರ ಜೊತೆಗೆ ಸತತವಾದ ಪ್ರಯತ್ನ, ಪ್ರತಿಭೆ, ಸೌಂದರ್ಯ, ಅದೃಷ್ಟ ಹಾಗೂ ದೈವಬಲ…ಇವೆಲ್ಲವೂ ಸೇರಿದರೆ ಬೇರೇನು ಬೇಕು ಯಶಸ್ಸಿಗೆ? (ರಾಜ ಮಾರ್ಗ ಅಂಕಣ) ಹೌದು, ವಿದುಷಿ ಕೌಶಿಕೀ ಚಕ್ರವರ್ತಿ (Vidushi Kaushiki Chakraborty) ಇಂದು ಭಾರತೀಯ ಸಂಗೀತದ ಜಾಗತಿಕ ಯುವ ರಾಯಭಾರಿ (Young ambassador of indian music). ಅವರು ಶಾಸ್ತ್ರೀಯ ಸಂಗೀತದ ಬೆರಗು (Indian classical vocalist and a composer). ಭಾರತದ ಹೆಮ್ಮೆ.

ಎರಡು ವರ್ಷಗಳ ಮಗುವಿಗೆ ಹಲವು ರಾಗ, ತಾಳಗಳ ಪರಿಚಯ ಇತ್ತು

ಅಮ್ಮನ ಕಾಲ ಮೇಲೆ ಕೂತ ಎರಡು ವರ್ಷದ ಮಗು ಅಪ್ಪನ ಹಾಡುಗಳಿಗೆ ಒಂದಿಷ್ಟೂ ತಪ್ಪದೆ ತಾಳ ಹಾಕಿದಾಗ ಮಗುವಿನ ಪ್ರತಿಭೆ ಎಲ್ಲರಿಗೂ ಗೊತ್ತಾಗಿತ್ತು. ಅಪ್ಪ ಹಾಡಿದ ಅಷ್ಟೂ ಗೀತೆಗಳ ರಾಗಗಳನ್ನು ಸಲೀಸಾಗಿ ಗುರುತಿಸುವ ಮಗಳ ಪ್ರತಿಭೆಗೆ ಎಲ್ಲರೂ ತಲೆದೂಗುತ್ತಿದ್ದರು. ಅಪ್ಪನ ಎಲ್ಲ ಸಂಗೀತ ಕಚೇರಿಗಳಲ್ಲಿ ಹಿಂದೆ ಕೂತು ಧ್ವನಿ ಸೇರಿಸುವ ಪ್ರಯತ್ನ ಪುಟ್ಟ ಮಗಳು ಮಾಡುತ್ತಿದ್ದಳು. ಆದರೆ ಮೊದಲ ಬಾರಿಗೆ ವೇದಿಕೆಯಲ್ಲಿ ಹಾಡಿದ್ದು ಏಳನೆಯ ವರ್ಷದಲ್ಲಿ. ಅಲ್ಲಿಂದ ಮುಂದೆ ಗುರು ಪಂಡಿತ್ ಜ್ಞಾನಪ್ರಕಾಶ್ ಅವರಲ್ಲಿ ಸಂಗೀತ ಅಭ್ಯಾಸ ಆರಂಭ ಆಯಿತು. ನಂತರ ತಂದೆಯೇ ಗುರು. ಕರ್ನಾಟಕ ಸಂಗೀತಕ್ಕೆ ಬಾಲಮುರಳಿ ಕೃಷ್ಣ ಅವರು ಗುರು. ಆಕೆ ಮಹಾ ಪ್ರತಿಭಾವಂತೆ. ಗುರುಗಳು ಹೇಳಿಕೊಟ್ಟ ಅಷ್ಟೂ ಪಾಠಗಳನ್ನು ಮರುದಿನವೇ ಒಪ್ಪಿಸುವ ಶಕ್ತಿಯು ಅವಳಿಗೆ ಇತ್ತು.

18ನೆಯ ವರ್ಷದಲ್ಲಿ ದೆಹಲಿಯ ರಾಷ್ಟ್ರಮಟ್ಟದ ಐಟಿಸಿ ಸಂಗೀತ ಸಮ್ಮೇಳನದಲ್ಲಿ ಅತ್ಯುತ್ತಮ ಯುವ ಗಾಯಕಿ ಪುರಸ್ಕಾರ ಪಡೆದು ಮಿಂಚಿದವರು ಆಕೆ.

ಪಟಿಯಾಲ ಘರಾಣೆಯ ಗೈರತ್ತು

ಹಿಂದುಸ್ತಾನಿ ಸಂಗೀತವು ಹಲವು ಘರಾಣೆಗಳ ಮೂಲಕ ಪ್ರಸಿದ್ಧಿ ಪಡೆದಿದೆ. ಕೌಶಿಕೀ ಅವರು ಪಟಿಯಾಲಾ ಘರಾಣೆಯ ಗಾಯಕಿಯಾಗಿ ಮಿಂಚು ಹರಿಸುತ್ತಿದ್ದಾರೆ. ಖಯಾಲ್, ಆಲಾಪ್, ತಾನ್, ಬಂದೀಶ್ ಇವುಗಳನ್ನು ಅತೀ ಕಿರಿಯ ವಯಸ್ಸಿನಲ್ಲಿ ಕೌಶಿಕಿ ಕರತಲಾಮಲಕ ಮಾಡಿಕೊಂಡಿದ್ದಾರೆ. ಟುಮ್ರಿ, ಫೋಕ್, ಫ್ಯೂಷನ್, ಭಜನ್, ಸೆಮಿ ಕ್ಲಾಸಿಕ್, ಫಿಲ್ಮಿ, ರವೀಂದ್ರ ಸಂಗೀತ, ರೀಮಿಕ್ಸ್, ಗಜಲ್……… ಹೀಗೆ ಸಂಗೀತದ ಎಲ್ಲಾ ಪ್ರಕಾರಗಳಲ್ಲೂ ಅವರು ಸಾಧನೆ ಮಾಡಿದ್ದಾರೆ. ಸಂಗೀತದ ಪರಂಪರೆ ಮತ್ತು ನಾವೀನ್ಯತೆ ಎರಡನ್ನೂ ಎರಕ ಹೊಯ್ದ ಹಾಗೆ ಕೌಶಿಕೀ ನಮಗೆ ಕಂಡುಬರುತ್ತಾರೆ.

ಅಪ್ಪನಿಗೋ, ತನ್ನ ಮಗಳು ಸಂಗೀತದ ಲೋಕದಲ್ಲಿ ಪ್ರಜ್ವಲಿಸುವ ನಕ್ಷತ್ರವಾದ ಬಗ್ಗೆ ಭಾರೀ ಖುಷಿ. ಇಷ್ಟು ಸಣ್ಣ ಪ್ರಾಯದಲ್ಲಿ ಭಾರತದ ಎಲ್ಲ ಸಂಗೀತ ಮಹೋತ್ಸವಗಳಲ್ಲಿ, ಎಲ್ಲ ಸಂಗೀತದ ಮಹಾ ವೇದಿಕೆಗಳಲ್ಲಿ ಹಾಡಿದ ದಾಖಲೆಯನ್ನು ಆಕೆ ಹೊಂದಿದ್ದಾರೆ.

ಆಕೆ ಜುಗಲ್ಬಂದಿಗಳ ಚಾಂಪಿಯನ್

ವೇದಿಕೆ ಮೇಲೆ ಕುಳಿತು ಸಂಗೀತವನ್ನು ಅನುಭವಿಸಿ, ಆವಾಹನೆ ಮಾಡಿ ಆಕೆ ಹಾಡುವಾಗ ಎಂ.ಎಸ್. ಸುಬ್ಬಲಕ್ಷ್ಮಿ ಕಣ್ಣ ಮುಂದೆ ಬಂದು ಬಿಡುತ್ತಾರೆ. ಸೌರಭ್ ದೇಶಪಾಂಡೆ, ಮಹೇಶ್ ಕಾಳೆ ಮೊದಲಾದ ಶ್ರೇಷ್ಠ ಗಾಯಕರ ಜೊತೆಗೆ ಅವರ ಸುಲಲಿತ, ಶ್ರೀಮಂತ ಜುಗಲ್ಬಂದಿಗಳನ್ನು ಕೇಳುವುದೇ ಒಂದು ಸಂಗೀತದ ಆರಾಧನೆ. ಮಹೇಶ್ ಕಾಳೆ, ಸೌರಭ್ ದೇಶಪಾಂಡೆ ಜೊತೆಗಿನ ಅವರ ಜುಗಲಬಂದಿ ಕಾರ್ಯಕ್ರಮಗಳಿಗೆ ವಿದೇಶಗಳಲ್ಲಿಯೂ ಭಾರಿ ಬೇಡಿಕೆ ಇದೆ. ಅವರು ಮೂರೂ ಜನ ಸೇರಿ ಹಾಡಿದ ಅಭಂಗ ‘ಕಾನಡಾ ರಾಜಾ ಪಂಡರೀಚಾ’ ಎಷ್ಟು ಬಾರಿ ಕೇಳಿದರೂ ಹಳತು ಆಗುವುದೇ ಇಲ್ಲ. ಎಷ್ಟೋ ಬಾರಿ ಪಂಡಿತ್ ಮಹೇಶ್ ಕಾಳೆ ಮತ್ತು ಕೌಶಿಕೀ ಅವರ ತಾರ – ಮಂದ್ರ ಸ್ವರ ವಿಸ್ತಾರಗಳನ್ನು ಕೇಳುತ್ತಾ ನಾನು ಮೈ ಮರೆತಿದ್ದೇನೆ. ಅವರಿಗೆ ಸಂಗೀತ ಸರಸ್ವತಿಯು ಪೂರ್ಣ ಪ್ರಮಾಣದಲ್ಲಿ ಒಲಿದು ಬಂದಿರುವುದು ನಿಶ್ಚಿತ.

ಈ ಸಾಧನೆಯ ಹಿಂದೆ ಅಪಾರ ಪರಿಶ್ರಮ ಇದೆ

‘ಸಂಗೀತ ನನ್ನ ಜೀನ್ ಮೂಲಕ ಹರಿದು ಬಂದಿರಬಹುದು. ಆದರೆ ಇದುವರೆಗೆ ನನ್ನ ಸಾಧನೆ ನನ್ನ ಅವಿರತ ಪರಿಶ್ರಮ ಮತ್ತು ರಿಯಾಝ್‌ಗಳ ಫಲ ಇದೆ ಎನ್ನುತ್ತಾರೆ ಕೌಶಿಕೀ. ಸಂಗೀತ ಪಾಠ ಅಪ್ಪ ಒಪ್ಪಿಸುವಾಗ ಒಂದು ಸ್ವರ ತಪ್ಪಿದರೂ ಅಪ್ಪ ಮತ್ತೆ ಮತ್ತೆ ಹಾಡಿಸುತ್ತಿದ್ದರಿಂದ ಸಂಗೀತದಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯ ಆಯಿತು ಎಂದು ಅವರು ಹೇಳಿದ್ದಾರೆ.

ಕೌಶಿಕೀ ಚಟರ್ಜಿ ಲತಾ ಮಂಗೇಶ್ಕರ್‌ ಜತೆ

ಲಂಡನ್ನಿನಲ್ಲಿ ಆಕೆಯ ಶಿಖರ ಸಾಧನೆ!

ಅವರ ಕೀರ್ತಿ ಪತಾಕೆಯು ಶಿಖರಕ್ಕೆ ತಲುಪಿದ್ದು 2005ರಲ್ಲಿ ಬಿಬಿಸಿಯು ನಡೆಸಿದ ವಿಶ್ವ ಸಂಗೀತದ ಮಹಾ ಸಮ್ಮೇಳನದಲ್ಲಿ. ಅಲ್ಲಿ ಜಗತ್ತಿನ ಶ್ರೇಷ್ಠ ಮಟ್ಟದ ಕಲಾವಿದರು ಭಾಗವಹಿಸಿದ್ದರು. ಆದರೂ ಕೌಶಿಕೀ ಅದ್ಭುತವಾಗಿ ಹಾಡಿ ಮೂರು ವಿಶ್ವಮಟ್ಟದ ಪ್ರಶಸ್ತಿಗಳನ್ನು ಪಡೆದರು. ಈ ಸಾಧನೆ ಮಾಡಿದ ಭಾರತದ ಮೊದಲ ಕಲಾವಿದೆ ಆಕೆ!

ಲಂಡನ್ ನಗರದ ದರ್ಬಾರ್ ಸಂಗೀತ ಮಹೋತ್ಸವದಲ್ಲಿ ಅವರು ಭೀಮ ಪಲಾಸ್ ರಾಗದ ಬಂದೀಶ್ ‘ಜಾ ಜಾರೇ ಆಪನೇ’ ಹಾಡಿ ಮುಗಿಸಿದಾಗ ತುಂಬಿದ್ದ ಪ್ರೇಕ್ಷಕರು ಎದ್ದು ನಿಂತು ಓವೇಶನ್ ಕೊಟ್ಟದ್ದು ಸ್ಮರಣೀಯ ಆಗಿತ್ತು. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ವಿದೇಶದ ಪ್ರೇಕ್ಷಕರುಇದ್ದರು. ಅಂದು ಅವರು ಹಾಡಿದ ಬಂದಿಶ್ ಯು ಟ್ಯೂಬ್ ವೇದಿಕೆಯಲ್ಲಿ ಇದುವರೆಗೆ ನಾಲ್ಕೂವರೆ ಕೋಟಿ ವೀಕ್ಷಣೆ ಪಡೆದದ್ದು ಭಾರತದ ದಾಖಲೆ! ಭಾರತದ ಯಾವ ಸಂಗೀತ ಕಲಾವಿದರಿಗೂ ಈ ದಾಖಲೆಯನ್ನು ಇದುವರೆಗೆ ಮುರಿಯಲು ಸಾಧ್ಯವಾಗಿಲ್ಲ ಅನ್ನುವುದು ಕೌಶಿಕೀ ಅವರ ಪ್ರತಿಭೆಯ ಒಂದು ಸಣ್ಣ ರುಜುವಾತು.

Celebrating WOMANHOOD!

ಕ್ಯಾಲಿಫೋರ್ನಿಯಾದ ವಸಂತ ಉತ್ಸವ, ಲಾಸ್ ಏಂಜಲೀಸ್ ಪರಂಪರಾ ಸಂಗೀತ ಉತ್ಸವ, ಲಂಡನ್ ವಿಶ್ವಸಂಗೀತ ಮಹಾ ಉತ್ಸವ….ಹೀಗೆ ನೂರಾರು ವಿಶ್ವ ವೇದಿಕೆಗಳಲ್ಲಿ ಅವರು ಈಗಾಗಲೇ ಹಾಡಿದ್ದಾರೆ. ನಮ್ಮ ಭಾರತದ ಎಲ್ಲ ಸಂಗೀತ ಉತ್ಸವಗಳು ಕೌಶಿಕೀ ಅವರು ಹಾಡದೆ ಉತ್ಸವ ಪರಿಪೂರ್ಣತೆ ಪಡೆಯುವುದಿಲ್ಲ ಎಂಬ ಪ್ರತೀತಿ ಇದೆ. ಅದು ನಿಜ ಕೂಡ! ಬೆಂಗಳೂರಿನಲ್ಲಿ ಅವರು ಪ್ರತೀ ವರ್ಷ ಬಂದು ಹಾಡುತ್ತಿದ್ದು ಸಭಾಂಗಣ ಕಿಕ್ಕಿರಿದು ತುಂಬುವುದು ಅವರ ಜನಪ್ರಿಯತೆಗೆ ಸಾಕ್ಷಿ. ಹಿಂದಿ, ತಮಿಳು, ಮಲಯಾಳಂ ಸಿನೆಮಾಗಳಲ್ಲಿ ಕೂಡ ಅವರು ಹಾಡಿದ್ದಾರೆ.

ಸಖೀ ಎಂಬ ಹೆಸರಿನ ಒಂದು ಸಂಗೀತ ತಂಡ ಅವರು ರಚಿಸಿದ್ದು ಅದರಲ್ಲಿ ಎಲ್ಲರೂ ಮಹಿಳೆಯರೇ ಇರುವುದು ವಿಶೇಷ! ಆ ತಂಡ ಕೊಡುವ ಕಾರ್ಯಕ್ರಮದ ಶೀರ್ಷಿಕೆ – Celebrating WOMANHOOD!

ಅತೀ ಸಣ್ಣ ವಯಸ್ಸಿನಲ್ಲಿ (42 ವರ್ಷ) ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ, ಆದಿತ್ಯ ಬಿರ್ಲಾ ಕಲಾ ಕಿರಣ್ ಪುರಸ್ಕಾರ, ಶೇರಾ ಬೆಂಗಾಲಿ ಪುರಸ್ಕಾರಗಳನ್ನು ಪಡೆದಿರುವ ಕೌಶಿಕೀ ಚಕ್ರವರ್ತಿ ಅವರು ನಿಜವಾದ ಅರ್ಥದಲ್ಲಿ ಶಾಸ್ತ್ರೀಯ ಸಂಗೀತದ ಯುವ ರಾಯಭಾರಿಯಾಗಿ ನನಗೆ ಕಾಣಿಸುತ್ತಿದ್ದಾರೆ. ಇಂದು ಭಾರತದಲ್ಲಿ ಸಾವಿರಾರು ಯುವಜನರು ಶಾಸ್ತ್ರೀಯ ಸಂಗೀತದ ಕಡೆಗೆ ಹರಿದು ಬರುತ್ತಿದ್ದರೆ ಅದಕ್ಕೆ ಕಾರಣ ಕೌಶಿಕಿಯಂತಹ ದೈವಿಕ ಕಲಾವಿದರು.

ಅವರಿಗೆ ಶುಭವಾಗಲಿ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಅಮೆರಿಕದ ಐಟಿ ಜಾಬ್‌ ಬಿಟ್ಟು FARMER BRAND ಮಾಡಿ ಗೆದ್ದ ಯುವ ದಂಪತಿ

Exit mobile version