1527ರ ಹೊತ್ತಿಗೆ ರಜಪೂತ ದೊರೆ ರಾಣಾ ಸಂಗನನ್ನು ಸೋಲಿಸಿದ ಮೊಗಲ್ ದೊರೆ ಬಾಬರ್ ಗಂಗಾ ನದಿಯ ಬಯಲನ್ನು ಆಕ್ರಮಿಸಿದನು. ಮುಂದೆ ಅವನು ಅಯೋಧ್ಯೆಯ ಮೇಲೆ ದಾಳಿ (Attack on Ayodhye) ಮಾಡಿದನು. ಆಗ ತನ್ನ ಸೇನಾಧಿಪತಿ ಆದ ಮೀರ್ ಬಾಕಿಯನ್ನು ಕರೆದು ಶ್ರೀ ರಾಮ ಜನ್ಮಭೂಮಿ (Shri Rama Janmabhumi) ಮಂದಿರವನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸುವಂತೆ ಆಜ್ಞೆ ಮಾಡಿದನು. ಅದರಂತೆ ಮೀರ್ ಬಾಕಿ ಕಟ್ಟಿದ್ದು ಜನ್ಮಭೂಮಿ ಮಸೀದಿ. ಅದನ್ನೇ ಮುಂದೆ ಬಾಬರಿ ಮಸೀದಿ (Babri mosque) ಎಂದು ಕರೆಯಲಾಯಿತು. ಆಗ ರಾಮ ಮಂದಿರ ಉಳಿಸಿಕೊಳ್ಳಲು ನಡೆದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ರಾಮ ಭಕ್ತರ ಸಂಖ್ಯೆ ಮೂರು ಲಕ್ಷಕ್ಕೂ ಅಧಿಕ (Raja Marga Column).
ಆದರೂ ಹಿಂದೂ ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದವು!
ಮಂದಿರದ ಮೇಲೆ ಮೂರು ಮಸೀದಿಯ ಬುರುಜುಗಳನ್ನು ಕಟ್ಟಿದ್ದರೂ ಹಿಂದೂ ಪೂಜಾ ಪದ್ಧತಿಯ ಪ್ರಕಾರ ಧಾರ್ಮಿಕ ವಿಧಿಗಳು ನಡೆಯುತ್ತಿದ್ದವು. ಮುಂದೆ ಬಾಬರನ ಮೊಮ್ಮಗ ಅಕ್ಬರ್ ಆ ರಾಮ ಜನ್ಮಭೂಮಿ ಮಂದಿರಕ್ಕೆ ಐದು ಭಿಗಾ ಜಮೀನು ಉಂಬಳಿಯಾಗಿ ನೀಡಿದ ದಾಖಲೆ ಇದೆ. ಮುಂದೆ ಜೈಪುರದ ಅರಸನಾಗಿದ್ದ ಎರಡನೇ ಜೈ ಸಿಂಘ್ 1717-1 721ರಲ್ಲಿ ಮಸೀದಿಯ ಹೊರಗೆ ರಾಮ ಚಬೂತರ್ ರಚಿಸಿ ಅಲ್ಲಿ ರಾಮನ ಪೂಜೆಗೆ ಹೆಚ್ಚು ಅವಕಾಶ ನೀಡಿದನು. ಮಸೀದಿಯಲ್ಲಿ ವಾರಕ್ಕೊಮ್ಮೆ ಶುಕ್ರವಾರ ಮಾತ್ರ ನಮಾಝ್ ನಡೆಯುತ್ತಿತ್ತು. 1853ರವರೆಗೂ ಎಲ್ಲವೂ ಸೌಹಾರ್ದ ಆಗಿಯೇ ಇತ್ತು.
1853ರಲ್ಲಿ ಮೊದಲ ಕೋಮು ದಂಗೆಯು ನಡೆದೇ ಹೋಯಿತು
ಯುದ್ಧವಿಲ್ಲದ ನಗರ ಎಂದು ಕರೆಸಿಕೊಂಡ ಅಯೋಧ್ಯೆ ಈ ಬಾರಿಗೆ ಮತ್ತೆ ರಕ್ತತರ್ಪಣ ಪಡೆಯಿತು. ಆಗ ಬ್ರಿಟಿಷರು ಎರಡೂ ಧರ್ಮದವರನ್ನು ಕರೆದು ಮಾತುಕತೆ ಮಾಡಿ ಸೌಹಾರ್ದವನ್ನು ಸ್ಥಾಪನೆ ಮಾಡಬಹುದಾಗಿತ್ತು. ಆದರೆ ಅವರಿಗೆ ಅದು ಬೇಕಾಗಿರಲಿಲ್ಲ. ಅವರು ಎರಡು ಧರ್ಮದವರು ಸಂಧಿಸುವುದನ್ನು ತಡೆಯಲು ಮಂದಿರ ಮತ್ತು ಮಸೀದಿಯ ನಡುವೆ ತಡೆಗೋಡೆಯನ್ನು ಕಟ್ಟಿದರು. ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಕಂದಕವನ್ನು ಕಟ್ಟಿದ ಮೊದಲ ವಿಲನ್ ಇದ್ದರೆ ಅದು ಬ್ರಿಟಿಷ್ ಸರಕಾರವೇ ಆಗಿದೆ. ಮುಂದಿನ ಮೂರು ದಶಕಗಳ ಕಾಲ ಕಾನೂನು ಹೋರಾಟವನ್ನು ಅಯೋಧ್ಯೆ ನೋಡಬೇಕಾಯಿತು. ಕೋರ್ಟಿನ ಹೊರಗೆ ಮಾತುಕತೆಯ ಮೂಲಕ ವಿವಾದವನ್ನು ಇತ್ಯರ್ಥ ಮಾಡುವ ಹಲವಾರು ಅವಕಾಶಗಳು ಎರಡೂ ಸಮುದಾಯದವರಿಗೆ ಇತ್ತು.
1949ರ ಡಿಸೆಂಬರ್ 23ರ ರಾತ್ರಿ…
ಭಾರತವು ಸ್ವಾತಂತ್ರ್ಯ ಪಡೆದ ನಂತರ ಈ ಸಮಸ್ಯೆಯು ಮತ್ತಷ್ಟು ಜಟಿಲ ಆಯ್ತು. 1949ರ ಡಿಸೆಂಬರ್ 23ರ ರಾತ್ರಿ ಅಯೋಧ್ಯೆಯ ಮಸೀದಿಯ ಮೊದಲ ಬುರುಜಿನ ಕೆಳಗೆ ರಾಮ ಲಲ್ಲಾನ ಸುಂದರವಾದ ಮೂರ್ತಿ ಕಂಡು ಬಂದಿತು. ಇದು ಕೋಮು ಗಲಭೆಗೆ ಕಾರಣ ಆದೀತು ಎಂಬ ಗ್ರಹಿಕೆಯಿಂದ ಅದನ್ನು ಅಲ್ಲಿಂದ ತೆಗೆಯಲು ಸರಕಾರ ಮುಂದಾಯಿತು. ಆದರೆ ಅಯೋಧ್ಯಾ ನಗರದ ಆಗಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆ.ಕೆ ನಾಯರ್ ಆ ಮೂರ್ತಿಯನ್ನು ಸ್ಥಳಾಂತರ ಮಾಡಲು ಅಂಗೀಕಾರ ನೀಡಲಿಲ್ಲ. ಆಗ ಮತ್ತೆ ಹಿಂದೂಗಳ ಹೋರಾಟ ಸಂಸ್ಥೆ ಆದ ನಿರ್ಮೋಹಿ ಆಖಾಡ ರಾಮ ಜನ್ಮಭೂಮಿಯ ಹಕ್ಕಿಗಾಗಿ ಕೋರ್ಟಿಗೆ ಹೋಯಿತು. ನ್ಯಾಯಾಂಗ ಹೋರಾಟ ಫಲಿತಾಂಶ ಕೊಡುವುದು ಭಾರೀ ವಿಳಂಬ ಆಯಿತು. ಸರಯೂ ನದಿಯಲ್ಲಿ ಎಷ್ಟೋ ನೀರು ಹರಿದು ಹೋಗಿ ಸಮುದ್ರವನ್ನು ಸೇರಿತು.
ಆಡ್ವಾಣಿಯವರ ರಥಯಾತ್ರೆ ಇತ್ಯಾದಿ
ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಅವರ ರಥಯಾತ್ರೆ ಉಂಟು ಮಾಡಿದ ಸಂಚಲನದ ಬಗ್ಗೆ ಹಿಂದೆ ಬರೆದಿದ್ದೆ. ಗುಜರಾತಿನ ಸೋಮನಾಥದಿಂದ ಉತ್ತರ ಪ್ರದೇಶದ ಅಯೋಧ್ಯೆಯತನಕ ಅಂದಾಜು 10,000 ಕಿಲೋಮೀಟರ್ ದೂರದ ರಥಯಾತ್ರೆ ಹೋದಲ್ಲೆಲ್ಲ ಭಾರೀ ಜನಪ್ರಿಯತೆ ಪಡೆಯಿತು. ಅದೇ ಹೊತ್ತಿಗೆ ಭಾರತದ ಗ್ರಾಮ ಗ್ರಾಮಗಳಲ್ಲಿ ರಾಮಮಂದಿರದ ಇಟ್ಟಿಗೆಗಳನ್ನು ಪೂಜೆ (ಶ್ರೀರಾಮ ಶಿಲಾ ಪೂಜನ) ಮಾಡಿ ಅಯೋಧ್ಯೆಗೆ ಕಳುಹಿಸಿ ಕೊಡಲಾಗಿತ್ತು. ಅದೇ ರೀತಿಯಲ್ಲಿ ರಾಮ ಜ್ಯೋತಿ ರಥಯಾತ್ರೆ, ರಾಮ ಪಾದುಕಾ ಯಾತ್ರೆ ಇಡೀ ಭಾರತವನ್ನು ಸಂಚರಿಸಿ ಹಿಂದೂ ಸಮಾಜವನ್ನು ಜಾಗೃತಿ ಮಾಡುವ ಕೆಲಸ ಮಾಡಿತು.
1984 ವಿಶ್ವ ಹಿಂದೂ ಪರಿಷತ್ ಸಂಕಲ್ಪ
1984ರಲ್ಲಿ ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯಲ್ಲಿಯೇ ರಾಮ ಮಂದಿರ ಕಟ್ಟುವ ಸಂಕಲ್ಪವನ್ನು ತೆಗೆದುಕೊಂಡಿತು.
ವಿಶ್ವಹಿಂದೂ ಪರಿಷತ್ ಮತ್ತು ಆದರ ನಾಯಕರಾದ ಅಶೋಕ್ ಸಿಂಘಾಲ್ ಅವರ ಹೋರಾಟವನ್ನು ಭಾರತೀಯರು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ವಿಶ್ವ ಹಿಂದೂ ಪರಿಷತ್ ಅವರ ಜೊತೆಗೆ ಹಿಂದೂ ಸಂಘಟನೆಯಾದ ಶಿವ ಸೇನಾದ ನಾಯಕ ಬಾಳಾ ಠಾಕ್ರೆ ಜೊತೆಗೆ ಸೇರಿ ದೇಶದಾದ್ಯಂತ ರಾಮಜನ್ಮಭೂಮಿಯ ಹೋರಾಟಕ್ಕೆ ಕಿಚ್ಚು ಹತ್ತಿತ್ತು. ಆಗಲೂ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸುವ ಅವಕಾಶ ಮುಕ್ತವಾಗಿಯೇ ಇತ್ತು.
ಆದರೆ ಕೆಲವರ ಮನಸಿನಲ್ಲಿ ಬೇರೆಯೇ ಸಮೀಕರಣ ಓಡುತ್ತಿತ್ತು
ಅಯೋಧ್ಯೆಯ ಮಂದಿರದ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಡಾಕ್ಟರ್ ಬಿ.ಬಿ ಲಾಲ್ ಅವರ ನೇತೃತ್ವದ ಪ್ರಾಚ್ಯವಸ್ತು ಸಂಶೋಧನಾ ಸಮಿತಿಯು ಉತ್ಖನನದ ಅನುಮತಿ ಪಡೆಯಿತು. ಆಗ ನಿರ್ಣಾಯಕ ದಾಖಲೆಗಳನ್ನು ಸಂಗ್ರಹಿಸಿದವರು ಆರ್ಕಿಯಾಲಜಿ ಸರ್ವೇ ಆಫ್ ಇಂಡಿಯಾದ ಪ್ರಾದೇಶಿಕ ನಿರ್ದೇಶಕರಾದ ಡಾ. ಕೆ.ಕೆ ಮೊಹಮ್ಮದ್ ಅವರು. ಅವರು ವಿವಾದಿತ ಕಟ್ಟಡದ ಕೆಳಭಾಗದಲ್ಲಿ ಮಂದಿರದ ನೂರಾರು ಅವಶೇಷಗಳು, ಪಂಚಾಂಗದ ಕುರುಹುಗಳು, ಕಂಬಗಳು ಇವನ್ನೆಲ್ಲ ಕಂಡು ಬೆರಗಾದರು. ಅದನ್ನು ಅವರು ಸುಪ್ರೀಂ ಕೋರ್ಟಿಗೆ ನೀಡಿದಾಗ ನ್ಯಾಯಾಲಯವು ಮಂದಿರದ ಪರವಾಗಿ ತೀರ್ಪು ನೀಡುವುದು ಸುಲಭ ಆಯಿತು. ಆದರೆ ಆಗಲೂ ಇರ್ಫಾನ್ ಹಬೀಬ್ ಅಂತಹ ಕೆಲವು ಇತಿಹಾಸದ ವಿದ್ವಾಂಸರು, ದೆಹಲಿಯ ಜೆ.ಎನ್.ಯು ವಿವಿಯಲ್ಲಿ ಓದಿದ ನಾಲ್ಕು ವಿದ್ವಾಂಸರು ನ್ಯಾಯಾಲಯದ ವಿಚಾರಣೆಯನ್ನು ದಾರಿ ತಪ್ಪಿಸಿದರು. ಇದರಿಂದಾಗಿ ಅಯೋಧ್ಯೆಯಲ್ಲಿ ಎರಡನೇ ಉತ್ಖನನ ನಡೆಯಿತು. ಆಗಲೂ ಮಂದಿರದ ಪರವಾಗಿ 263 ಸಾಕ್ಷ್ಯಗಳು ದೊರೆತವು. ಇದರಿಂದ 2019ನೇ ಇಸವಿ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ ಅಯೋಧ್ಯಾ ವಿವಾದಕ್ಕೆ ಶಾಶ್ವತವಾದ ಪರಿಹಾರ ನೀಡಿತು.
ಇದೀಗ ನಾಲ್ಕೇ ವರ್ಷಗಳಲ್ಲಿ ಅತ್ಯಂತ ಭವ್ಯವಾದ ರಾಮ ಮಂದಿರವು ಅಯೋಧ್ಯೆಯ ಜನ್ಮಭೂಮಿಯಲ್ಲಿ ತಲೆ ಎತ್ತಿ ನಿಂತಿದೆ. ಈ ಮಂದಿರವು ಜಗತ್ತಿನ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳ ಆಗುವುದು ಖಂಡಿತ.
ಇದನ್ನೂ ಓದಿ : Raja Marga Column : ಕೌಸಲ್ಯಾ ಸುಪ್ರಜಾ ರಾಮ; ಶ್ರೀರಾಮನೆಂಬ ಶಾರ್ದೂಲ ಸದೃಶ ವ್ಯಕ್ತಿತ್ವ
ಭರತವಾಕ್ಯ
ಕೆಲವು ಸುಳ್ಳು ಇತಿಹಾಸಕಾರರು, ಕೆಲವು ಮತೀಯ ನಾಯಕರು ತಮ್ಮ ಇಗೋ ಬಿಟ್ಟು ವಿಶಾಲವಾಗಿ ಯೋಚನೆ ಮಾಡಿದ್ದರೆ ಅಯೋಧ್ಯಾ ವಿವಾದ ಯಾವತ್ತೋ ಮುಗಿದು ಹೋಗುತ್ತಿತ್ತು. ಇಷ್ಟು ಸುದೀರ್ಘವಾದ ಹೋರಾಟ, ರಕ್ತಪಾತ, ಕೋಮುಗಲಭೆಗಳು ನಡೆಯುತ್ತಲೇ ಇರಲಿಲ್ಲ. ಈ ನೂತನ ಮಂದಿರವು ಎಲ್ಲರನ್ನೂ ಬೆಸೆಯುವ ಕೆಲಸ ಮಾಡಲಿ ಎನ್ನುವುದೇ ಹಾರೈಕೆ.