1983ರಿಂದ ಆರಂಭಗೊಂಡು ಸಾವಿರಾರು ವೇದಿಕೆಯ ಕಾರ್ಯಕ್ರಮಗಳ ನಿರೂಪಣೆ (Anchoring programmes) ಮಾಡಿದ್ದೇನೆ. ತುಂಬಾ ಸವಾಲಿನ ಹೈ ಪ್ರೋಟೋಕಾಲ್ ಕಾರ್ಯಕ್ರಮಗಳ ನಿರೂಪಣೆ ಕೂಡ ಮಾಡಿದ್ದೇನೆ. ಎಷ್ಟೋ ಬಾರಿ ಕಾರ್ಯಕ್ರಮ ನಿರೂಪಣೆಯು ಒಂದು ‘ಥ್ಯಾಂಕ್‌ಲೆಸ್ ಜಾಬ್’ ಅಂತ ಅನ್ನಿಸಿದ್ದು ಇದೆ. ಆದರೆ ಸಾವಿರಾರು ಜನರು ಸೇರಿದ ದೊಡ್ಡ ದೊಡ್ಡ ಸಮ್ಮೇಳನಗಳ ವೇದಿಕೆಯ ನಿರೂಪಣೆಯು ಖಂಡಿತ ಸುಲಭ ಅಲ್ಲ ಎಂದು ನನಗೆ ಅರಿವಾಗಿದೆ. ಇಂದು ‘ಮಾಸ್ಟರ್ ಆಫ್ ಸೆರೆಮನಿ’ (Master of Ceremony) ಒಂದು ಚಾರ್ಮಿಂಗ್ ಉದ್ಯೋಗ ಆಗಿದೆ. ವೃತ್ತಿಪರ ಕಾರ್ಯಕ್ರಮ ನಿರೂಪಕರಾಗಿ ಮರೆಯಲು ಇಂದು ಸಾವಿರಾರು ಯುವಕರು, ಯುವತಿಯರು ಮುಂದೆ ಬರುತ್ತಿದ್ದಾರೆ ಮತ್ತು ಹಲವರು ಗೆಲ್ಲುತ್ತಿದ್ದಾರೆ ಕೂಡ (ರಾಜ ಮಾರ್ಗ ಅಂಕಣ)!
ಕಲಿಯಲು ಆಸಕ್ತಿ ಇರುವವರಿಗೆ ಇಲ್ಲಿ ಬೇಕಾದಷ್ಟು ಅವಕಾಶ ಇದೆ. ಅಂತಹ ಆಸಕ್ತರಿಗೆ ವೇದಿಕೆಯ ಸಭಾ ಕಾರ್ಯಕ್ರಮಗಳ (ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆ ಅಲ್ಲ) ನಿರೂಪಣೆಯ ಬಗ್ಗೆ ಒಂದಿಷ್ಟು ಮಾರ್ಗದರ್ಶಿ ಸೂತ್ರಗಳನ್ನು ತಮ್ಮ ಮುಂದೆ ತೆರೆದು ಇಡುತ್ತಿದ್ದೇನೆ.
ಮಾರ್ಗದರ್ಶಿ ಸೂತ್ರಗಳು
1) ಕಾರ್ಯಕ್ರಮ ನಿರೂಪಣೆ ಮಾಡಲು ಹೊರಟವರು ಅತ್ಯಂತ ಕಡಿಮೆ ಮಾತಾಡಬೇಕು. ಆದರೆ ಸ್ವಾರಸ್ಯಕರವಾಗಿ ಮಾತಾಡುವುದನ್ನು ಕಲಿಯಬೇಕು.
2) ವೇದಿಕೆಯ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಭಾಷೆಯು ತುಂಬಾ ಮುಖ್ಯ. ಸ್ಪಷ್ಟವಾದ ಉಚ್ಛಾರ, ಮಾತಿನ ಓಘ, ಪದಗಳ ಬಳಕೆ, ಅಲ್ಪಪ್ರಾಣ ಮಹಾಪ್ರಾಣಗಳ ಖಚಿತತೆ ಇಲ್ಲದೆ ನಿರೂಪಣೆ ಮಾಡಲು ಹೋಗಬೇಡಿ. ನಿರಂತರ ಪ್ರಯತ್ನದ ಮೂಲಕ ಯಾವ ಭಾಷೆಯನ್ನಾದರೂ ಕಲಿಯಬಹುದು.
3) ಕಾರ್ಯಕ್ರಮದ ಸಂಘಟಕರ ಜೊತೆ ಸೇರಿಕೊಂಡು ಕಾರ್ಯಕ್ರಮದ ಅಜೆಂಡಾ ಮಾಡುವುದು ಬಹಳ ಮುಖ್ಯ. ಅದನ್ನು ಆದಷ್ಟು ಪೂರ್ವಭಾವಿಯಾಗಿ ಮಾಡಿದರೆ ಒಳ್ಳೆಯದು. ಅಜೆಂಡಾದಲ್ಲಿ ಯಾರು ಎಷ್ಟು ಹೊತ್ತು ಮಾತಾಡಬೇಕು? ಯಾರು ಮೊದಲು ಮಾತಾಡಬೇಕು? ಯಾರು ನಂತರ ಮಾತಾಡಬೇಕು ಎಂಬ ಸ್ಪಷ್ಟತೆ ಇರಬೇಕು.
4) ಕಾರ್ಯಕ್ರಮ ನಿರೂಪಣೆ ಮಾಡುವವರಿಗೆ ಪ್ರೋಟೋಕಾಲ್ ಮತ್ತು ಸಭಾ ನಡವಳಿಕೆಗಳ ಸ್ಪಷ್ಟ ಜ್ಞಾನ ಇರಬೇಕು.
5) ಮೈಕ್ರೋಫೋನ್ ನಿಮ್ಮ ಪ್ರಮುಖವಾದ ಆಯುಧ. ಅದನ್ನು ಹೇಗೆ ಬಳಕೆ ಮಾಡಬೇಕು ಎಂದು ನೀವು ಖಂಡಿತವಾಗಿಯೂ ಕಲಿಯಬೇಕು. ಮೈಕ್ ನಿಮ್ಮ ತುಟಿಗಳಿಗಿಂತ 2-3 ಇಂಚು ಕೆಳಗೆ ಇರಬೇಕು. ಹಾಗೆಯೇ ಮೈಕ್ ನಿಮ್ಮ ತುಟಿಗಳಿಗಿಂತ ಆರು ಇಂಚು ದೂರ ಇದ್ದರೆ ನಿಮ್ಮ ಧ್ವನಿಯು ಸ್ಪಷ್ಟವಾಗಿ ಕೇಳುತ್ತದೆ. ಸೂಕ್ತವಾದ ಮಾನಿಟರ್ ಬಳಕೆ ಮಾಡಲು ನೀವು ಕಲಿತರೆ ನೀವು ಅರ್ಧ ಗೆದ್ದಂತೆ.
6) ನಿಮ್ಮ ಡ್ರೆಸ್ ಕೋಡ್ ಅಂದಿನ ಕಾರ್ಯಕ್ರಮದ ಔಚಿತ್ಯಕ್ಕೆ ಕನ್ನಡಿ ಹಿಡಿದಂತೆ ಇರಬೇಕು. ಅತ್ಯಂತ ಸರಳವಾದ ಡ್ರೆಸ್ ಸಾಕು. ಕಣ್ಣು ಕುಕ್ಕುವ ಡ್ರೆಸ್ ಖಂಡಿತ ಬೇಡ.
7) ವೇದಿಕೆಯಲ್ಲಿ ಇಡೀ ಕಾರ್ಯಕ್ರಮದ ಉದ್ದಕ್ಕೂ ತುಳುಕುವ ನಿಮ್ಮ ನಗು ನಿಮ್ಮನ್ನು ಖಂಡಿತ ಗೆಲ್ಲಿಸುತ್ತದೆ. ಆ ನಗು ಬರುವುದು ಆತ್ಮವಿಶ್ವಾಸದಿಂದ. ಆತ್ಮವಿಶ್ವಾಸ ಬರುವುದು ನಿರಂತರವಾದ ಅಭ್ಯಾಸದ ಮೂಲಕ.
8) ಶಬ್ದಗಳ ಆಡಂಬರಕ್ಕಿಂತ ಸರಳವಾದ ಹೃದಯದ ಭಾಷೆ ನಿಮ್ಮನ್ನು ಗೆಲ್ಲಿಸುತ್ತದೆ. ಹೆಚ್ಚು ಗ್ರಾಂಥಿಕವಾದ ಭಾಷೆ ಬೇಡ. ಎಲ್ಲರಿಗೂ ಅರ್ಥವಾಗುವ ಸರಳ ಭಾಷೆ ಬೇಕು.
9) ಸಂಘಟಕರ ಜೊತೆ ನಿಮ್ಮ ಪೂರ್ವಭಾವಿ ಮೀಟಿಂಗಗಳು ಸಭಾ ಕಾರ್ಯಕ್ರಮಗಳ ವ್ಯವಸ್ಥೆಗೆ ಹೆಚ್ಚು ನೆರವಾಗುತ್ತವೆ.
10) ನಿಮ್ಮ ಹಾಸ್ಯಪ್ರಜ್ಞೆ ನಿಮ್ಮನ್ನು ಸದಾ ಗೆಲ್ಲಿಸುತ್ತದೆ. ಸರಸವಾದ ನಿರೂಪಣೆ ಇಂದಿನ ಅಗತ್ಯ. ಹಾಗೆಂದು ಯಾರನ್ನೋ ನೋಯಿಸುವ ಜೋಕ್ಸ್, ಪದ ಪ್ರಯೋಗಗಳು ಬೇಡ.
11) ವೇದಿಕೆಯ ಮೇಲಿನ ಭೌತಿಕ ಸಿದ್ಧತೆಗಳು ಸಾಕಷ್ಟು ಮೊದಲು ಮುಗಿದರೆ ಒಳ್ಳೆಯದು. ಉದಾಹರಣೆ ಸೀಟಿಂಗ್, ಬ್ಯಾನರ್, ಸ್ಮರಣಿಕೆ, ಕುಡಿಯುವ ನೀರು, ಬ್ಯಾಜ್, ನೇಮ್ ಬೋರ್ಡ್, ಪುಷ್ಪ ಗುಚ್ಛ, ಕಾಲುದೀಪ ಇತ್ಯಾದಿ! ಯಾವುದು ಎಲ್ಲಿದೆ ಎನ್ನುವುದು ಕಾರ್ಯಕ್ರಮ ನಿರೂಪಕರಿಗೆ ಸರಿಯಾಗಿ ಗೊತ್ತಿರಬೇಕು.
12) ವೇದಿಕೆಯ ಗಣ್ಯರನ್ನು ಸಂಬೋಧನೆ ಮಾಡುವಾಗ ಪ್ರೋಟೋಕಾಲ್ ಸರಿಯಾಗಿ ಪಾಲಿಸಿ. ಅವರ ಪ್ರೊಫೈಲ್ ಮೊದಲು ಹೇಳಿ ನಂತರ ಹೆಸರು ಹೇಳಬೇಕು. ಉದಾಹರಣೆಗೆ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರೇ…. ಇದು ಸರಿ. ಯಾರ ಹೆಸರನ್ನೂ ತಪ್ಪಾಗಿ ಹೇಳಬೇಡಿ. ತಿರುಚಬೇಡಿ. ಉದ್ದುದ್ದ ಪರಿಚಯ ಮಾಡಲು ಹೊರಡಬೇಡಿ.
13) ಸಮಯದ ಹೊಂದಾಣಿಕೆ ಮಾಡಿಕೊಳ್ಳುವುದು ತುಂಬಾ ಅಗತ್ಯ. ಸಾಧ್ಯವಾದಷ್ಟು ಸರಿಯಾದ ಹೊತ್ತಿಗೆ ಕಾರ್ಯಕ್ರಮ ಆರಂಭ ಮಾಡಿ ಸರಿಯಾದ ಹೊತ್ತಿಗೆ ಮುಗಿಸಲು ಇಚ್ಛಾಶಕ್ತಿ ಬೇಕು.
14) ಅತಿಥಿಗಳು ಮಾತಾಡುವ ಮೊದಲೇ ಅವರ ಸಮಯವನ್ನು ಅವರಿಗೆ ಸೂಚ್ಯವಾಗಿ ಹೇಳಿ. ಮಾತಾಡಲು ನಿಂತ ನಂತರ ಮಧ್ಯೆ ಬಾಯಿ ಹಾಕಬೇಡಿ. ಅನಿವಾರ್ಯ ಆದರೆ ಚೀಟಿ ಕೊಡಬಹುದು.
15) ವೇದಿಕೆಯಲ್ಲಿ ಇರುವ ಯಾವುದೇ ಅತಿಥಿಗಳನ್ನು ಇಂಪ್ರೆಸ್ ಮಾಡುವುದು ನಿಮ್ಮ ಕೆಲಸ ಅಲ್ಲ. ಅದನ್ನು ದಯವಿಟ್ಟು ಮಾಡಬೇಡಿ.
16) ಒಬ್ಬ ಭಾಷಣಕಾರರು ಮಾತನಾಡಿದ ನಂತರ ಅವರ ಮಾತುಗಳ ಬಗ್ಗೆ ಪುನರಪಿ ವಿಮರ್ಶೆ ಮಾಡಲು ಹೊರಡಬೇಡಿ. ಅದು ನಿಮ್ಮ ಕೆಲಸ ಅಲ್ಲ. ಅವರಿಗೆ ಧನ್ಯವಾದ ಕೂಡ ನೀವು ಕೊಡುವ ಅಗತ್ಯ ಇಲ್ಲ.
17) ಸಭೆಗೆ ತಡವಾಗಿ ಬಂದು, ಅವಸರವಸರದಲ್ಲಿ ಭಾಷಣ ಮಾಡಿ ಹೋಗುವ ವಿಐಪಿ ಅತಿಥಿಗಳು ಇರುತ್ತಾರೆ. ಆಗ ಸ್ವಲ್ಪ ತಾಳ್ಮೆಯಿಂದ ವ್ಯವಹರಿಸಿ. ಯಾವುದೇ ಅತಿಥಿಗಳಿಗೆ ಮಾತು ನಿರಾಕರಣೆ ಮಾಡಬೇಡಿ.
18) ಸಭೆಯ ಉದ್ದಕ್ಕೂ ಪ್ರೇಕ್ಷಕರ ಮೂಡ್ ಮತ್ತು ಸಭೆಯ ಗೌರವವನ್ನು ಕಾಪಾಡುವುದು ನಿಮ್ಮ ಕರ್ತವ್ಯ. ಯಾವುದೇ ಹೊತ್ತಿನಲ್ಲಿ ಸಭೆ ಹಳಿ ತಪ್ಪುತ್ತಾ ಇದೆ ಅನ್ನುವಾಗ ಅದನ್ನು ಸರಿಪಡಿಸುವ ಚಾಕಚಕ್ಯತೆ ನಿಮಗೆ ಬೇಕು. ಅದು ಪ್ರಾಕ್ಟೀಸ್ ಮೂಲಕ ಬರುತ್ತದೆ.
19) ವೇದಿಕೆಯ ಕೆಳಗಿರುವ ಗಣ್ಯ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಅತ್ಯಂತ ಅಪಾಯಕಾರಿ. ಯಾರ ಹೆಸರು ಬಿಟ್ಟು ಹೋದರೂ ಅಪಾಯ ಗ್ಯಾರಂಟೀ. ಆ ಕೆಲಸವನ್ನು ಸ್ವಾಗತ ಅಥವಾ ಧನ್ಯವಾದದಲ್ಲಿ ಮುಗಿಸಬಹುದು.
20) ಸ್ಕ್ರಿಪ್ಟ್ ಹಿಡಿದುಕೊಂಡು ನಿರೂಪಣೆ ಮಾಡಲು ಹೊರಡಬೇಡಿ. ಆಗ ನಿಮ್ಮ ನಿರೂಪಣೆಯು ಪೂರ್ತಿ ಯಾಂತ್ರಿಕ ಆಗಿ ಬಿಡುತ್ತದೆ. ಆದರೆ ಹೈ ಪ್ರೊಫೈಲ್ ಕಾರ್ಯಕ್ರಮಗಳಲ್ಲಿ (ಉದಾ – ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು ಇತ್ಯಾದಿ ಇರುವ ಕಾರ್ಯಕ್ರಮ) ನಿಮಗೆ ಮೊದಲೇ ಸ್ಕ್ರಿಪ್ಟ್ ಕೊಟ್ಟಿರುತ್ತಾರೆ. ಒಂದಕ್ಷರ ಆಚೆ ಈಚೆ ಮಾಡದೆ ಆ ಸ್ಕ್ರಿಪ್ಟ್ ಒಪ್ಪಿಸುವುದು ಮಾತ್ರ ನಿಮ್ಮ ಕರ್ತವ್ಯ ಆಗಿರುತ್ತದೆ.
21) ಎಷ್ಟೇ ಪ್ಲಾನಿಂಗ್ ಮಾಡಿದರೂ ಕೆಲವೊಮ್ಮೆ ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇದೆ. ಆಗೆಲ್ಲ ನಿಮ್ಮ ಪ್ರಸಂಗಾವಧಾನತೆ ಮತ್ತು ತಾಳ್ಮೆ ನಿಮ್ಮನ್ನು ಕಾಪಾಡುತ್ತವೆ.
22) ಸಂದೇಶ ಕೊಡುವುದು, ಅಭಿಪ್ರಾಯ ಮಂಡಿಸುವುದು ನಿಮ್ಮ ಕೆಲಸ ಅಲ್ಲ. ಅದಕ್ಕೆ ಸಭಾಧ್ಯಕ್ಷರು ಇರುತ್ತಾರೆ. ಅಧ್ಯಕ್ಷರ ಭಾಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಅದು ಕಾರ್ಯಕ್ರಮದ ಕೊನೆಯಲ್ಲಿ ಇರುತ್ತದೆ. ಅಧ್ಯಕ್ಷರ ಭಾಷಣದ ನಂತರ ಧನ್ಯವಾದ ಮಾತ್ರ ಇರುತ್ತದೆ. ಬೇರೆ ಯಾರೂ ಮಾತಾಡುವ ಅವಕಾಶ ಇರುವುದಿಲ್ಲ.
23) ವೇದಿಕೆಯಲ್ಲಿ ಇರುವ ಎಲ್ಲರೂ ಮಾತಾಡಬೇಕು ಎಂಬ ನಿಯಮ ಇಲ್ಲ. ಅವರ ಪರವಾಗಿ ಕೆಲವರು ಮಾತಾಡಿದರೆ ಸಾಕು. ಆದರೆ ಇದು ತುಂಬಾ ಸೆನ್ಸಿಟಿವ್ ವಿಷಯ. ಸಂಘಟಕರ ಜೊತೆ ಮುಂಚಿತವಾಗಿ ಮಾತಾಡಿ ಅಂತಿಮ ಮಾಡಿ. ನೀವೇ ತೀರ್ಮಾನ ಮಾಡುವುದು ತುಂಬಾ ಅಪಾಯಕಾರಿ.
24) ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಇಲ್ಲದವರು ಕೂಡ ವೇದಿಕೆಗೆ ಬೇಕಾಗಬಹುದು. ಅದು ಸಂಘಟಕರ ಅನಿವಾರ್ಯತೆ. ಅದನ್ನು ನಿರಾಕರಣೆ ಮಾಡಬೇಡಿ.
25) ಕಾರ್ಯಕ್ರಮ ನಿರೂಪಣೆ ಅಂದರೆ ಮಲ್ಲಿಗೆಯ ಮೊಗ್ಗುಗಳನ್ನು ಹೆಣೆದಂತೆ ಇರಬೇಕು. ನೀವು ಮೊಗ್ಗುಗಳನ್ನು ಹೆಣೆಯುವ ನೂಲಾಗಬೇಕೇ ಹೊರತು ನೀವೇ ಮಾಲೆ ಆಗಬಾರದು. ಇದನ್ನು ಅರ್ಥ ಮಾಡಿಕೊಂಡರೆ ನೀವು ಗೆಲ್ಲುತ್ತೀರಿ ಮತ್ತು ಸಭೆಯನ್ನೂ ಗೆಲ್ಲಿಸುತ್ತೀರಿ. ನಿಮಗೆ ಒಳ್ಳೆದಾಗಲಿ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಕನ್ನಡದ ಚಾರ್ಲಿ ಚಾಪ್ಲಿನ್, ಬಗೆಬಗೆಯಾಗಿ ನಗಿಸಿದ ಹಾಸ್ಯಚಕ್ರವರ್ತಿ; ನರಸಿಂಹರಾಜು @100