ಅಮೆರಿಕಾದ ಓಹಿಯೋದಲ್ಲಿ ಆತನ ಅಮ್ಮ ಅವನಿಗೆ 1997ರಲ್ಲಿ ಜನ್ಮ ಕೊಟ್ಟಾಗ ಎರಡೂ ಕಾಲುಗಳು ಇರಲಿಲ್ಲ! ಡ್ರಗ್ ಸೇವನೆ ಮಾಡುತ್ತಿದ್ದ ಅವನ ಅಮ್ಮ ಈ ವಿಕಲಚೇತನ ಮಗುವಿಗೆ ಜನ್ಮ ನೀಡಿದಾಗ ಮಗುವಿನ ಮೇಲೆಯೇ ಜಿಗುಪ್ಸೆ ಬಂದು ಒಂದು ಅನಾಥಾಶ್ರಮದಲ್ಲಿ ಬಿಟ್ಟು ಹೋಗಿದ್ದರು.
ಈ ಕಾಯಿಲೆಗೆ ವೈದ್ಯರು ಚಿತ್ರ ವಿಚಿತ್ರ ಹೆಸರನ್ನು ಬೇರೆ ಇಟ್ಟರು. ಮೆದುಳುಬಳ್ಳಿಯ ಕೆಳಗಿನ ಭಾಗವು ಶಕ್ತಿ ಕಳೆದುಕೊಳ್ಳುವ ವಿಚಿತ್ರವಾದ ಖಾಯಿಲೆ ಅದು! ಅದಕ್ಕೆ ಬಲಿಪಶು ಆದದ್ದು ಮಾತ್ರ ಜಿಯೊನ್ ಕ್ಲಾರ್ಕ್! ಮುಂದೆ ಏಳರಿಂದ ಎಂಟರಷ್ಟು ಅನಾಥಾಶ್ರಮಗಳಿಗೆ ಈ ಮಗು ಅಲೆಯಬೇಕಾಯಿತು. ಕಿರುಕುಳ, ಪೆಟ್ಟು, ನೋವು ಹಾಗೂ ಉಪವಾಸಗಳಿಂದ ಆ ಮಗು ತೀರಾ ಜರ್ಜರಿತವಾಯಿತು. ಅದರ ಗೋಳನ್ನು ಯಾರೂ ಕೇಳುವವರೇ ಇರಲಿಲ್ಲ. ಆಗ ನೆಲದ ಮೇಲೆ ತೆವಳುತ್ತಿದ್ದ ಆ ಬಾಲಕನ ಪಾಲಿಗೆ ದೇವರೇ ಕಳುಹಿಸಿಕೊಟ್ಟ ಹಾಗೆ ಒಬ್ಬರು ದತ್ತು ತಾಯಿ ದೊರಕಿದರು.
ಆ ಮಹಾ ತಾಯಿಯೇ ಕಿಂಬರ್ಲಿ ಹಾಕಿನ್. ಆಕೆಯ ಮಡಿಲಲ್ಲಿ ಆಗಲೇ ಹಲವು ದತ್ತುಮಕ್ಕಳು ಇದ್ದರು. ಅದರ ಜೊತೆಗೆ ಆಕೆ ಈ ಮಗುವನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಲಾಲನೆ ಪಾಲನೆ ಮಾಡಿದರು. ಸ್ವಂತ ಮಗುವಿಗಿಂತ ಹೆಚ್ಚು ಪ್ರೀತಿಯನ್ನು ಕೊಟ್ಟರು. ಇದು ಈ ತೆವಳುವ ಬಾಲಕನ ಜೀವನದಲ್ಲಿ ಮೊದಲ ಟರ್ನಿಂಗ್ ಪಾಯಿಂಟ್ ಆಯಿತು. ಮುಂದೆ ಗಿಲಬರ್ಟ್ ಡೋನಾಹ್ಯೂ ಎಂಬ ಕೋಚ್ ಆ ಬಾಲಕನನ್ನು ಉತ್ತಮ ಕ್ರೀಡಾಪಟು ಆಗಿ ರೂಪಿಸಿದರು.
ಜಿಯೋನ್ ಹಠವಾದಿ ಯುವಕ! ತಾನು ಏನಾದರೂ ಸಾಧನೆ ಮಾಡಬೇಕು ಎಂಬ ದೊಡ್ಡ ಕನಸು! ತಾನು ದುರ್ಬಲ ಅಲ್ಲ ಎಂದು ಪ್ರೂವ್ ಮಾಡುವ ಕಿಚ್ಚು! ಅದಕ್ಕೆ ಪೂರಕ ಆಗಿ NO EXCUSE ಎಂಬ ಕ್ಯಾಪ್ಶನ್ ಆರಿಸಿಕೊಂಡರು. ಅದನ್ನು ಬೆನ್ನಿನ ಮೇಲೆ ಟ್ಯಾಟೂ ಹಾಕಿಕೊಂಡರು. ತೀವ್ರವಾದ ಪ್ರಯತ್ನವು ಆರಂಭವಾಗಿಯೇ ಬಿಟ್ಟಿತು!
ಅವರಿಗೆ ಬಾಲ್ಯದಲ್ಲಿ ತನ್ನ ಬೆನ್ನು ನೆಟ್ಟಗೆ ಮಾಡಿ ಕುಳಿತುಕೊಳ್ಳಲು ಶಕ್ತಿ ಇರಲಿಲ್ಲ. ಆಗ ಹಲವು ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಗೆ ಅವರು ಒಳಗಾಗಬೇಕಾಯಿತು. ಇಡೀ ದೇಹವನ್ನು ಎರಡು ಕೈಗಳ ಮೇಲೆ ಎತ್ತಿ ನಿಲ್ಲಿಸುವ ಕಾರಣ ಕೈಗಳ ಮಾಂಸಖಂಡಗಳು ಶಕ್ತಿಶಾಲಿ ಆಗಲು ಪಟ್ಟ ಪಾಡು ಸುಲಭದ್ದು ಆಗಿರಲಿಲ್ಲ! ಕುಸ್ತಿಗೆ ಅನುಕೂಲ ಆಗಲು ಹಲವು ಪಟ್ಟುಗಳನ್ನು ಕಲಿಯುವಾಗ ಜಿಯೊನ್ ಭಾರೀ ದೊಡ್ಡ ಸವಾಲುಗಳನ್ನು ಎದುರಿಸಬೇಕಾಯಿತು! ಹಾಗೆಯೇ ವೀಲ್ ಚೇರ್ ರೇಸ್ ಅವರ ಇನ್ನೊಂದು ಇವೆಂಟ್ ಆದ ಕಾರಣ ಅವರು ಅದಕ್ಕೂ ಇನ್ನಷ್ಟು ಬೆವರು ಹರಿಸಬೇಕಾಯಿತು!
ಕೇವಲ 96 ಸೆಂಟಿಮೀಟರ್ ಎತ್ತರ ಇರುವ, 56 ಕೆಜಿ ತೂಕ ಇರುವ, ತನ್ನ ಇಡೀ ದೇಹವನ್ನು ಕೈಗಳ ಮೇಲೆ ತೆಗೆದುಕೊಂಡು ನಡೆಯುವ, ಜಿಮ್ ಮೂಲಕ ತನ್ನ ದೇಹವನ್ನು ಹುರಿಗೊಳಿಸಿರುವ ಜಿಯೊನ್ ಮುಂದೆ ಕ್ರೀಡೆಯಲ್ಲಿ ಮಾಡಿದ್ದೆಲ್ಲವೂ ಚಮತ್ಕಾರಗಳೇ ಆಗಿವೆ!
ರೆಸ್ಲಿಂಗ್ ಕ್ಷೇತ್ರದಲ್ಲಿ ಅವರು ಈಗಾಗಲೇ ರಿಂಗ್ಸಲ್ಲಿ ಹಲವು ಪಂದ್ಯ ಗೆದ್ದಾಗಿದೆ! ಅದಕ್ಕೆ ಪೂರಕವಾಗಿ ತನ್ನ ದೇಹವನ್ನು ಹುರಿಗೊಳಿಸುವ ಪ್ರಯತ್ನದಲ್ಲಿ ಅವರು ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ರೆಸ್ಲಿಂಗ್ ರಿಂಗ್ಸಲ್ಲಿ ಅವರಿಗೆ ದೊಡ್ಡ ಕನಸುಗಳು ಇವೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಜಿಯೊನ್ ಒಂದು ಗಿನ್ನೆಸ್ ದಾಖಲೆ ಕೂಡ ಪೂರ್ತಿ ಮಾಡಿದರು. ಎರಡೂ ಕೈಗಳ ಮೇಲೆ ದೇಹದ ಭಾರವನ್ನು ಎತ್ತಿ ಹಿಡಿದು ಇಪ್ಪತ್ತು ಮೀಟರ್ ದೂರವನ್ನು ಅವರು 4.78 ಸೆಕೆಂಡಲ್ಲಿ ಓಡುವ ದಾಖಲೆ ಅವರು ಮಾಡಿದ್ದಾರೆ. ಈ ದೂರವನ್ನು ಇನ್ನೂ ಕಡಿಮೆ ಅವಧಿಯಲ್ಲಿ ಪೂರ್ತಿ ಮಾಡಬೇಕು ಎನ್ನುವ ತುಡಿತ ಕೂಡ ಅವರ ಹತ್ತಿರ ಇದೆ.
ಇದುವರೆಗೆ ಜಗತ್ತಿನಲ್ಲಿ ಯಾರೂ ಮಾಡದ ಒಂದು ಅನನ್ಯ ಸಾಧನೆ ಮಾಡಲು ಅವರು ಈಗ ಯುದ್ಧದ ರೀತಿಯಲ್ಲಿ ಸನ್ನದ್ಧರಾಗುತ್ತಿದ್ದಾರೆ! ಅದೆಂದರೆ 2024ರ ಪ್ಯಾರಿಸ್ ಒಲಿಂಪಿಕ್ಸಲ್ಲಿ ಒಂದಾದರೂ ಪದಕ ಗೆಲ್ಲುವುದು. ಅದರ ಜೊತೆಗೆ ಒಲಿಂಪಿಕ್ಸ್ ಬೆನ್ನಿಗೆ ನಡೆಯುವ ಪಾರಾ ಒಲಿಂಪಿಕ್ಸಲ್ಲಿ ಕೂಡ ಒಂದಲ್ಲ ಒಂದು ಪದಕ ಗೆಲ್ಲುವುದು! ಹಾಗೊಮ್ಮೆ ಅದು ಸಾಧ್ಯವಾಯಿತು ಅಂತಾದರೆ ಜಿಯೋನ್ ವಿಶ್ವ ವಿಜಯೀ ಆಗುವುದು ಖಂಡಿತ!
ಇದಕ್ಕಾಗಿ ಅವರು ಪವರ್ ಲಿಫ್ಟಿಂಗ್, ವೀಲ್‌ಚೇರ್ ಬಾಡಿ ಬಿಲ್ಡಿಂಗ್, ವೀಲ್ ಚೇರ್ ರೇಸ್, ಬಾಕ್ಸಿಂಗ್, ರೆಸ್ಲಿಂಗ್…. ಹೀಗೆ ಹಲವು ವಿಭಾಗಗಳಲ್ಲಿ ಪ್ರಯತ್ನ ಮಾಡುತ್ತಿದ್ದಾರೆ! ದಿನಕ್ಕೆ ಕನಿಷ್ಠ 10 ಘಂಟೆಗಳ ಕಾಲ ಮೈದಾನದಲ್ಲಿಯೇ ಕಳೆಯುತ್ತಿದ್ದಾರೆ!
ಇವೆಲ್ಲದರ ಜೊತೆಗೆ ಅವರ ಇತರ ಹವ್ಯಾಸಗಳ ಬಗ್ಗೆ ತಿಳಿದರೆ ನೀವು ಖಂಡಿತ ಬೆರಗಾಗುತ್ತೀರಿ! ಗೆಳೆಯರನ್ನು ಸಂಪಾದನೆ ಮಾಡುವುದು ಅವರ ಬಹಳ ದೊಡ್ಡ ಪ್ಯಾಶನ್. ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಐದು ಲಕ್ಷಕ್ಕಿಂತ ಅಧಿಕ ಸಂಖ್ಯೆಯ ಗೆಳೆಯರಿದ್ದಾರೆ! ಅವರೊಬ್ಬ ಬಿಸಿನೆಸ್ ಮ್ಯಾನ್, ಆಕ್ಟರ್, ಮೋಟಿವೇಶನ್ ಸ್ಪೀಕರ್, ಲೇಖಕ, ಕ್ರೀಡಾಪಟು ಎಲ್ಲವೂ ಆಗಿದ್ದಾರೆ!
ತನ್ನ ಇಷ್ಟೊಂದು ಸಾಧನೆಗಳಿಗೆ ತನ್ನ ದತ್ತು ತಾಯಿಯ ಮಮತೆ ಮತ್ತು ವಾತ್ಸಲ್ಯ, ಕೋಚ್ ಅವರ ಸರಿಯಾದ ಮಾರ್ಗದರ್ಶನ ಮತ್ತು ಗೆಳೆಯರ ಪ್ರೋತ್ಸಾಹಗಳು ಕಾರಣ ಎಂದು ಹೇಳುವ ಜಿಯೋನ್ ಒಂದೆರಡು ವರ್ಷಗಳಲ್ಲಿ ವಿಶ್ವವನ್ನು ಗೆಲ್ಲಲು ಹೊರಟಿದ್ದಾರೆ. ಅವರಿಗೆ ನಿಮ್ಮದೊಂದು ಹಾರೈಕೆ ಇರಲಿ.
ಿಇದನ್ನೂ ಓದಿ| ರಾಜ ಮಾರ್ಗ ಅಂಕಣ |ಬಾಲಿವುಡ್ ಚಾಚಾ ಅಚ್ಯುತ್ ಪೋತದಾರ್ ಚಿತ್ರರಂಗ ಪ್ರವೇಶ ಮಾಡಿದ್ದೇ 46ನೇ ವಯಸ್ಸಲ್ಲಿ!