ನಾಡಿನ ಸಮಸ್ತ ಜನತೆಗೆ ಮಹಾ ನವರಾತ್ರಿ (Happy Navaratri) ಹಬ್ಬದ ಶುಭಾಶಯಗಳು. ದೇವಿಯು ಒಂಬತ್ತು ದಿನ, ಒಂಬತ್ತು ಅವತಾರಗಳನ್ನು ತಾಳಿದ್ದು ಮತ್ತು ರಾಕ್ಷಸರ ಸಂಹಾರ ಮಾಡಿದ್ದು ಇಡೀ ಜಗತ್ತಿಗೆ ಪ್ರೇರಣೆ ಕೊಟ್ಟ ಘಟನೆ. ನವರಾತ್ರಿ ಎಂದರೆ ಅದು ಸ್ತ್ರೀ ಶಕ್ತಿಯ ಆರಾಧನೆ.
ಅದೇ ತತ್ವದ ಹಿನ್ನೆಲೆಯಲ್ಲಿ ಆಧುನಿಕ ಭಾರತದಲ್ಲಿ ವಿವಿಧ ಸಾಮಾಜಿಕ ಹೋರಾಟಗಳನ್ನು ನಡೆಸಿದ ಸಾವಿರಾರು ಮಹಿಳೆಯರು ಭಾರತವನ್ನು ಪ್ರಭಾವಿಸಿದ್ದಾರೆ. ಅವರನ್ನು ನೆನಪಿಸುವ ಮೂಲಕ ನಾವು ಮಹಾ ನವರಾತ್ರಿ ಹಬ್ಬದ ಆಚರಣೆ ಮಾಡಿದರೆ ಅದು ಇನ್ನೂ ಹೆಚ್ಚು ಅರ್ಥಪೂರ್ಣ ಆದೀತು ಎಂಬ ಭಾವನೆಯಿಂದ ಈ ಲೇಖನ ನಿಮ್ಮ ಮುಂದೆ (Raja Marga Column). ಇಲ್ಲಿ ಉಲ್ಲೇಖ ಮಾಡಿದ್ದು ಇಡೀ ಭಾರತದ ಸ್ತ್ರೀ ಶಕ್ತಿಯ (Women power of India) ಒಂಬತ್ತು ಆಯ್ದ ಮಾದರಿಗಳು ಮಾತ್ರ.
1. ಪೋರ್ಚುಗೀಸ್ ಆಕ್ರಮಣ ತಡೆಹಿಡಿದ ರಾಣಿ ಅಬ್ಬಕ್ಕ
ಮಂಗಳೂರಿನ ಉಳ್ಳಾಲದ ರಾಣಿ ಆಗಿದ್ದ ಅಬ್ಬಕ್ಕ ತುಳುನಾಡಿನ ಸಾಹಸದ ಪ್ರತೀಕ. 16ನೆಯ ಶತಮಾನದ ಉತ್ತರಾರ್ಧದಲ್ಲಿ ತನ್ನ ಉಳ್ಳಾಲದ ರಾಜ್ಯದ ಮೇಲೆ ನಡೆದ ಪೋರ್ಚುಗೀಸರ ಆಕ್ರಮಣವನ್ನು 40 ವರ್ಷಗಳ ಕಾಲ ತಡೆಹಿಡಿದ ಆಕೆಯ ನೌಕಾಸೇನೆಯ ಹೋರಾಟ ನಿಜಕ್ಕೂ ಅದ್ಭುತವೇ ಆಗಿದೆ. ಅವರ ಹೋರಾಟ ನಡೆಯದೆ ಇದ್ದರೆ ಗೋವಾದಲ್ಲಿ ಮುಂದೆ ನಡೆದ ವ್ಯಾಪಕವಾದ ನರಮೇಧಗಳು, ಸಾಮೂಹಿಕ ಮತಾಂತರಗಳು, ರಕ್ತಪಾತಗಳು ಇಲ್ಲಿ ನಡೆಯುತ್ತಿದ್ದವು ಎಂದು ಯೋಚನೆ ಮಾಡಿದಾಗ ನಾನು ಬೆಚ್ಚಿ ಬೀಳುತ್ತೇನೆ.
2. ಸ್ವಾತಂತ್ರ್ಯ ಹೋರಾಟದ ಮೊದಲ ಕಿಡಿ ಕಿತ್ತೂರು ರಾಣಿ ಚೆನ್ನಮ್ಮ
‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ಕಾನೂನನ್ನು ಮಾಡಿ ಬ್ರಿಟಿಷರು ಭಾರತದ ಒಂದೊಂದೇ ಸಾಮ್ರಾಜ್ಯವನ್ನು ವಶ ಪಡಿಸಿಕೊಳ್ಳಲು ಮುಂದಾದಾಗ ಕಿತ್ತೂರು ರಾಣಿಯಾಗಿ ಆಕೆ ಮಾಡಿದ ಹೋರಾಟ ಅದು ಅದ್ಭುತವೇ ಹೌದು. 1824ರಲ್ಲಿ ಸಶಸ್ತ್ರ ಹೋರಾಟದ ಮೂಲಕ ಬ್ರಿಟಿಷ್ ಸೈನ್ಯವನ್ನು ಸೋಲಿಸಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಜೀವಿತದ ಕೊನೆಯ ಭಾಗವನ್ನು ಬ್ರಿಟಿಷರಿಂದ ಬಂಧಿಸಲ್ಪಟ್ಟ ರಾಣಿ ಕತ್ತಲೆಯ ಸೆರೆಮನೆಯಲ್ಲಿ ಕಳೆದರು ಎಂಬಲ್ಲಿಗೆ ಆಕೆ, ಆಕೆಯ ಹೋರಾಟಗಳು ಮುಂದೆ ನಡೆದ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ಕೊಟ್ಟದ್ದು ಖಂಡಿತವಾಗಿ ಹೌದು.
3. ಮಗಳಿಗೆ ನ್ಯಾಯಕೊಡಿಸಿದ ನಿರ್ಭಯಾ ಅಮ್ಮ ಆಶಾದೇವಿ
ದೆಹಲಿಯಲ್ಲಿ 2012ರ ಡಿಸೆಂಬರ್ 16ರ ರಾತ್ರಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣ ಇಡೀ ಭಾರತವನ್ನು ಬೆಚ್ಚಿ ಬೀಳಿಸಿತ್ತು. ದೇಶದಾದ್ಯಂತ ಮುಂದೆ ನಡೆದ ವ್ಯಾಪಕವಾದ ರ್ಯಾಲಿಗಳು, ಕ್ಯಾಂಡಲ್ ಮಾರ್ಚ್ಗಳು ತೀವ್ರವಾದ ಜನಾಭಿಪ್ರಾಯವನ್ನು ರೂಪಿಸಿದವು. ಆಗ ಮುಂದೆ ನಿಂತು ಹೋರಾಟ ಮಾಡಿದ್ದು ಇದೇ ನಿರ್ಭಯಾ ಅಮ್ಮ ಆಶಾದೇವಿ. ಏಳು ವರ್ಷಗಳ ಕಾಲ ಆಕೆ ಮಾಡಿದ ನ್ಯಾಯಾಂಗ ಹೋರಾಟ, ಆಕೆಯ ತಾಳ್ಮೆ ಅವುಗಳು ಅದ್ಭುತವೇ ಆಗಿವೆ. ತನ್ನ ಮಗಳ ಮೇಲೆ ಕ್ರೂರವಾಗಿ ರೇಪ್ ಮಾಡಿದ ಆ ನಾಲ್ಕು ಜನರಿಗೆ ಶಿಕ್ಷೆ ಆಗುವ ತನಕವೂ ಹೋರಾಟವನ್ನು ಜೀವಂತವಾಗಿಟ್ಟ ಆ ಮಹಾ ತಾಯಿ ಆಶಾದೇವಿ ಖಂಡಿತವಾಗಿ ಆಧುನಿಕ ನವ ದುರ್ಗೆಯರಲ್ಲಿ ಸ್ಥಾನ ಪಡೆಯುತ್ತಾರೆ.
4. ವಿಶಾಖಾ ಕಾನೂನಿನಗೆ ಕಾರಣವಾದ ಭನ್ವಾರಿ ದೇವಿ
ರಾಜಸ್ಥಾನದ ಬುಡಕಟ್ಟು ಜನಾಂಗದ ಈ ಮಹಿಳೆಯು ತನ್ನ ಹಳ್ಳಿಯಲ್ಲಿ ಬಲಾಢ್ಯವಾದ ಗುಜ್ಜರ್ ಜಮೀನ್ದಾರರಿಂದ ಕ್ರೂರವಾಗಿ ಗ್ಯಾಂಗ್ ರೇಪ್ಗೆ ಬಲಿ ಆಗುತ್ತಾರೆ. ಮುಂದೆ ವಿವಿಧ ಸ್ತ್ರೀ ಸಂಘಟನೆಗಳ ಸಹಾಯ ಪಡೆದು ಆಕೆ ದೇಶದಾದ್ಯಂತ ಮಾಡಿದ ರ್ಯಾಲಿಗಳು, ಸುಪ್ರೀಮ್ ಕೋರ್ಟಿನವರೆಗೆ ಆಕೆಯು ಹೋಗಿ ನ್ಯಾಯ ಪಡೆದದ್ದು ಒಂದು ಐತಿಹಾಸಿಕ ಘಟನೆ. ಆಕೆಯ ಪರವಾಗಿ ಸುಪ್ರೀಂ ಕೋರ್ಟು ನೀಡಿದ ತೀರ್ಪು ಮುಂದೆ ಭಾರತದ ಸಂಸದ್ ಭವನದಲ್ಲಿ ‘ವಿಶಾಖಾ’ ಎಂಬ ಹೆಸರಿನಲ್ಲಿ ಕಾನೂನು ರೂಪವನ್ನು ಪಡೆದು ಸಾವಿರಾರು ಮಹಿಳೆಯರಿಗೆ ಅವರ ಉದ್ಯೋಗ ಕ್ಷೇತ್ರದಲ್ಲಿ ರಕ್ಷಣೆ ನೀಡಿತು.
5. ಪ್ರಾಣ ಒತ್ತೆ ಇಟ್ಟು ಉಗ್ರರ ಜತೆ ಕಾದಾಡಿದ ನೀರಜಾ ಭಾನೋಟ್
1986ರ ಸೆಪ್ಟೆಂಬರ್ ಐದರಂದು ಪಾನ್ ಆಮ್ ವಿಮಾನದಲ್ಲಿ ಗಗನ ಸಖಿಯಾಗಿದ್ದ ನೀರಜಾ ಭಾನೋಟ್ ವಿಮಾನವನ್ನು ಹೈ ಜಾಕ್ ಮಾಡಿದ ಪ್ಯಾಲೆಸ್ತೀನ್ ಭಯೋತ್ಪಾದನಾ ಸಂಘಟನೆಯ ಉಗ್ರರ ಜೊತೆಗೆ ಮಾಡಿದ ಹೋರಾಟ ಅದು ಮೈ ನವಿರೇಳಿಸುತ್ತದೆ. 17 ಘಂಟೆಗಳ ಕಾಲ ವಿಮಾನದ ನೂರಾರು ಪ್ರಯಾಣಿಕರ ರಕ್ಷಣೆಗೆ ಆಕೆ ಹೋರಾಡಿದ್ದು, ಕೊನೆಗೆ ತುರ್ತು ನಿರ್ಗಮನ ದ್ವಾರವನ್ನು ತೆಗೆಯುವುದರ ಮೂಲಕ ಪ್ರಯಾಣಿಕರನ್ನು ರೆಸ್ಕ್ಯೂ ಮಾಡಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಸಿಟ್ಟಿಗೆದ್ದ ಉಗ್ರರು ಗುಂಡಿನ ಮಳೆಯನ್ನು ಸುರಿದು ಆಕೆಯನ್ನು ಕೊಂದು ಹಾಕಿದ್ದು ದುರಂತ. ಮುಂದೆ ಆಕೆ ಮರಣೋತ್ತರವಾಗಿ ಅಶೋಕ ಚಕ್ರ ಪ್ರಶಸ್ತಿಯನ್ನು ಪಡೆದರು. ಸಾಯುವಾಗ ಆಕೆಯ ವಯಸ್ಸು ಕೇವಲ 23!
6. ನೇತಾಜಿ ಆರ್ಮಿಯ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್
ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯ ಒಬ್ಬ ಮಹಿಳಾ ಕ್ಯಾಪ್ಟನ್ ಆಗಿ ಬ್ರಿಟಿಷ್ ಸರಕಾರದ ವಿರುದ್ಧ ದೊಡ್ಡ ಹೋರಾಟ ಆಕೆ ಸಂಘಟನೆ ಮಾಡಿದರು. ಅದರಲ್ಲಿಯೂ ದ್ವಿತೀಯ ವಿಶ್ವ ಸಮರದ ಸಂದರ್ಭ ಆಕೆ ಬರ್ಮಾದಲ್ಲಿ ಮಾಡಿದ ಹೋರಾಟವನ್ನು ಭಾರತವು ಎಂದಿಗೂ ಮರೆಯುವುದಿಲ್ಲ.
7. 1500ಕ್ಕೂ ಅಧಿಕ ಅನಾಥ ಮಕ್ಕಳ ಅಮ್ಮ ಸಿಂಧುತಾಯಿ ಸಪ್ಕಲ್
ಹೆಣ್ಣು ಮಕ್ಕಳನ್ನು ಹೆತ್ತರು ಎಂಬ ಕಾರಣಕ್ಕೆ ತನ್ನ ಗಂಡನಿಂದ ತಿರಸ್ಕೃತರಾದ ಸಿಂಧುತಾಯಿ ಸಪ್ಕಲ್ ಸ್ವತಃ ಒಬ್ಬ ಅನಾಥೆ ಆಗಿ ತನ್ನ ಮಕ್ಕಳನ್ನು ಎದೆಗೆ ಅವುಚಿಕೊಂಡು ಸ್ಮಶಾನದಲ್ಲಿ ಮಲಗುತ್ತಾರೆ. ಮುಂದೆ ಆಕೆ ಪೂನಾದಲ್ಲಿ ರೈಲ್ವೆ ಸ್ಟೇಶನಿನಲ್ಲಿ ಹಾಡುಗಳನ್ನು ಹಾಡಿ ಭಿಕ್ಷೆ ಬೇಡುತ್ತಾ ದುಡ್ಡು ಸಂಗ್ರಹ ಮಾಡಿದ್ದು, ಆ ದುಡ್ಡಿನಿಂದ ಪೂನಾದಲ್ಲಿ ನಾಲ್ಕು ಅನಾಥಾಶ್ರಮಗಳನ್ನು ಕಟ್ಟಿ 1500ಕ್ಕೂ ಅಧಿಕ ಮಕ್ಕಳಿಗೆ ಆಶ್ರಯ, ಆಹಾರ, ಶಿಕ್ಷಣ ನೀಡಿದ್ದು ಭಾರೀ ದೊಡ್ಡ ಸಾಧನೆ.
8. ದಲಿತ ಮಹಿಳೆಯರ ಸ್ವಾಭಿಮಾನ ಸವಿತಾ ಅಂಬೇಡ್ಕರ್
ಭಾರತರತ್ನ ಭೀಮರಾವ್ ಅಂಬೇಡ್ಕರ್ ಅವರ ಪತ್ನಿಯಾಗಿ ಆಕೆ ತನ್ನ ಗಂಡನಿಗೆ ದಲಿತಪರ ಹೋರಾಟದಲ್ಲಿ ಕೊಟ್ಟ ಪ್ರೇರಣೆ ನಿಜವಾಗಿ ಗ್ರೇಟ್. ಅಷ್ಟೇ ಮುಖ್ಯವಾದದ್ದು ಆಕೆ ದಲಿತ ಪ್ಯಾಂಥರ್ಸ್ ಚಳುವಳಿಯಲ್ಲಿ ಮುಂದೆ ನಿಂತು ಮಾಡಿದ ಹೋರಾಟ. ಸಾವಿರಾರು ದಲಿತ ಮಹಿಳೆಯರಿಗೆ ಸ್ವಾಭಿಮಾನದ ಬದುಕು ನೀಡಿದ ಆಕೆಯ ಬಗ್ಗೆ ನಾವು ಹೆಮ್ಮೆ ಪಡಬೇಕು.
9. ದೇಶದ ಮೊಟ್ಟಮೊದಲ ಮಹಿಳಾ ಡಾಕ್ಟರ್ ಆನಂದಿ ಬಾಯಿ ಜೋಶಿ
ಹೆಣ್ಣು ಮಕ್ಕಳು ಶಾಲೆಗೆ ಬರಲು ಹೆದರುತ್ತಿದ್ದ ಕಾಲದಲ್ಲಿ ಈ ಮಹಾರಾಷ್ಟ್ರದ ಮಹಿಳೆ ಬಾಲ್ಯದಲ್ಲಿಯೇ ಮದುವೆ ಆದ ನಂತರ ತನ್ನ ಗಂಡನ ಬೆಂಬಲ ಪಡೆದು ಶಿಕ್ಷಣ ಮುಂದುವರೆಸುತ್ತಾರೆ. ಒಂದು ಮಿಷನರಿ ಸಂಸ್ಥೆಯ ಸಹಾಯ ಪಡೆದು ಅಮೇರಿಕಾಕ್ಕೆ ಹೋಗಿ ಅಲ್ಲಿಯ ವುಮನ್ಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದು ಭಾರತಕ್ಕೆ ಹಿಂದೆ ಬರುತ್ತಾರೆ. ತೀವ್ರ ಸಾಂಕ್ರಾಮಿಕ ಕಾಯಿಲೆಗೆ ಒಳಗಾಗಿ ಆಕೆ ಸಣ್ಣ ಪ್ರಾಯದಲ್ಲಿ ತೀರಿ ಹೋದರೂ ‘ಭಾರತದ ಮೊಟ್ಟ ಮೊದಲ ಮಹಿಳಾ ವೈದ್ಯೆ’ ಎಂಬ ಕೀರ್ತಿ ಪಡೆದದ್ದನ್ನು ಮರೆಯೋದು ಹೇಗೆ? ಅಮೆರಿಕಾದಲ್ಲಿ ಆಕೆ ಒಬ್ಬಂಟಿ ಆಗಿ ಶೈಕ್ಷಣಿಕ ಸಾಧನೆ ಮಾಡಿದ್ದನ್ನು ಗಮನಿಸಿದಾಗ ರೋಮಾಂಚನ ಆಗುತ್ತದೆ.
ಇದನ್ನೂ ಓದಿ : Raja Marga Column : ಪೋಲಿಯೊ ಲಸಿಕೆ ಕಂಡುಹಿಡಿದ ಜೋನಾಸ್ ಸಾಲ್ಕ್ ಕೊನೆಗೆ ಮಾಡಿದ್ದೇನು?
ಭರತ ವಾಕ್ಯ
ಮಹಾ ನವರಾತ್ರಿಯ ಸಂದರ್ಭದಲ್ಲಿ ನವ ರೂಪದಲ್ಲಿ ದೇವಿಯ ಆರಾಧನೆ ಮಾಡುತ್ತ ಈ ಆಧುನಿಕ ದುರ್ಗೆಯರ ನೆನಪು ಮಾಡಿಕೊಂಡರೆ ನವರಾತ್ರಿಯ ಹಬ್ಬ ಇನ್ನೂ ವಿಶೇಷ ಆಗುತ್ತದೆ.