ಕಳೆದ ವರ್ಷಗಳ ಐಪಿಲ್ ಪಂದ್ಯಗಳನ್ನು ನೀವು ಗಮನಿಸುತ್ತಾ ಬಂದಿದ್ದೀರಿ ಎಂದಾದರೆ ಈ ಕ್ರಿಕೆಟರ್ ನಿಮ್ಮ ಗಮನವನ್ನು ಥಟ್ಟನೆ ಸೆಳೆದಿರುತ್ತಾನೆ. ತನ್ನ ಸಾಹಸದ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಸಾಮರ್ಥ್ಯದ ಮೂಲಕ, ಬ್ಯಾಟಿಂಗ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯ ಮೂಲಕ, ಅದ್ಭುತವಾದ ಹೀರೋಯಿಕ್ ಇನ್ನಿಂಗ್ಸ್‌ಗಳ ಮೂಲಕ ಆತ ಜಗತ್ತಿನ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದು ಖಂಡಿತವಾಗಿಯೂ ಸುಳ್ಳಲ್ಲ. ಆತನ ಫೀಲ್ಡಿಂಗ್ ಬಗ್ಗೆ ಸಚಿನ್ ಹೇಳಿದ ಮಾತುಗಳು ನನಗೆ ನೆನಪಿವೆ – ಇಂತಹ ಸಾಹಸವನ್ನು ನಾನು ಇದುವರೆಗೆ ಕ್ರಿಕೆಟ್ ಕಣದಲ್ಲಿ ನೋಡಿದ್ದೇ ಇಲ್ಲ!
ಅವನೇ ‘ಕ್ರಿಕೆಟ್ ಜಗತ್ತಿನ ಕಪ್ಪು ವಜ್ರ’ ಎಂದೇ ಎಲ್ಲರಿಂದ ಕರೆಯಲ್ಪಡುವ ನಿಕೋಲಸ್ ಪೂರನ್! ವೆಸ್ಟ್ ಇಂಡೀಸ್‌ನ ಸೀಮಿತ ಓವರ್ ಕ್ರಿಕೆಟ್ ಟೀಮಿನ ವರ್ತಮಾನದ ಕಪ್ತಾನ! ಆತನ ಫೈಟಿಂಗ್ ಸ್ಪಿರಿಟ್ ನನಗೆ ಅಚ್ಚರಿ ಮೂಡಿಸುತ್ತದೆ.
ಇಂದು ದಿವಾಳಿಯ ಅಂಚಿನಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಬಗ್ಗೆ ನಾನು ಏನು ಹೇಳಲಿ? ಅಲ್ಲಿ ಪ್ರತಿಭೆಗಳಿಗೆ ಬೆಲೆಯೇ ಇಲ್ಲ. ಟೆಸ್ಟ್ ಪಂದ್ಯಗಳು ಇಲ್ಲವೇ ಇಲ್ಲ! ಇತ್ತೀಚಿನ ಯಾವ ಐಸಿಸಿ ಕೂಟದಲ್ಲಿ ಕೂಡ ಅವರ ಸಾಧನೆ ಇಲ್ಲ! ಅಲ್ಲಿ ಇರುವ ಸ್ಟಾರ್ ಆಟಗಾರರು ಬೇರೆ ದೇಶಗಳ ಲೀಗ್ ಪಂದ್ಯಾವಳಿಗಳಲ್ಲಿ ಮಾತ್ರ ಆಡುವ ದುರ್ದೆಸೆ.
ಇದರಿಂದಾಗಿ ಆತನ ಪ್ರತಿಭೆಗೆ ಬೆಂಬಲ ದೊರೆಯದೆ ನಿಕೋಲಸ್ ಜಗತ್ತಿನ ಬೇರೆ ಬೇರೆ ದೇಶಗಳ ಚುಟುಕು ಕ್ರಿಕೆಟ್ ಲೀಗಗಳಲ್ಲಿ ಆಡಬೇಕಾದದ್ದು ನಿಜವಾಗಿಯು ದುರಂತ! ಆತ ನಿಜವಾಗಿಯೂ ಮಹಾ ಪ್ರತಿಭಾವಂತ. ಟ್ರಿನಿಡಾಡ್ ಆತನ ಕರ್ಮಭೂಮಿ. ತನ್ನ ಬಾಲ್ಯದಿಂದಲೂ ಕ್ರಿಕೆಟ್ ಬಿಟ್ಟರೆ ಆತನಿಗೆ ಬೇರೆ ಜಗತ್ತು ಇಲ್ಲ. ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ವಿವಿಯನ್ ರಿಚರ್ಡ್ಸ್ ಇವರ ಆಟವು ಅವನಿಗೆ ಪ್ರೇರಣೆ. ಶಾಲೆಗೆ ಹೋಗುವುದನ್ನು ಮರೆತು ಹಗಲು ರಾತ್ರಿ ಎನ್ನದೆ ಕ್ರಿಕೆಟ್ ತರಬೇತಿಯಲ್ಲಿ ಮುಳುಗಿಬಿಡುತ್ತಿದ್ದ ನಿಕೋಲಸ್. ಸಿಕ್ಕಾಪಟ್ಟೆ ಬೆವರು ಹರಿಸುತ್ತಿದ್ದ. ಲೆಫ್ಟ್ ಹ್ಯಾಂಡ್ ಬ್ಯಾಟ್ಸ್‌ಮನ್ ಆಗಿದ್ದ ಆತ ರೈಟ್ ಹ್ಯಾಂಡ್ ಬೌಲರ್ ಕೂಡ ಆಗಿದ್ದ! ಆತನ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಅಂತೂ ಅಮೇಜಿಂಗ್!
2013ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗಿನ ಮೂಲಕ ಕ್ರಿಕೆಟ್ ಜಗತ್ತಿಗೆ ಆತನ ಪ್ರವೇಶ ಆಗಿತ್ತು. ಮೊದಲ ಪಂದ್ಯದಲ್ಲಿಯೇ 24 ಎಸೆತಗಳಲ್ಲಿ 54 ರನ್ ಚಚ್ಚಿದ್ದ! ಆಗ ಅವನಿಗೆ ಕೇವಲ 16 ವರ್ಷ ಪ್ರಾಯ!
ಮುಂದೆ ಅಂಡರ್19 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಪರವಾಗಿ ಆಡಿ ಆರು ಪಂದ್ಯಗಳಲ್ಲಿ 303 ರನ್ ಗುಡ್ಡೆ ಹಾಕಿದ್ದ ನಿಕೋಲಸ್! ಅದರ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡಿದ್ದ. ಆತನ ಸ್ಟ್ರೈಕ್ ರೇಟ್ 145ರ ಕೆಳಗೆ ಬಂದದ್ದೇ ಇಲ್ಲ! ಆಗಲೇ ಆತನ ಬದುಕಿನಲ್ಲಿ ಕರಾಳ ದಿನಗಳು ಬಂದವು!
ಒಂದು ಸಂಜೆ ಕ್ರಿಕೆಟ್ ತರಬೇತಿ ಮುಗಿಸಿ ಕಾರ್ ಡ್ರೈವ್ ಮಾಡುತ್ತ ಮನೆ ಕಡೆ ಬರುವಾಗ ಭೀಕರವಾದ ಅಪಘಾತವು ನಡೆದುಹೋಯಿತು. ಎರಡೂ ಕಾಲುಗಳು ಹುಡಿ ಹುಡಿ ಆದವು. ಬಲಗಾಲಿನ ಮೊಣಗಂಟು ಹುಡಿ ಆಗಿತ್ತು. ಕಾಲಿನ ಮತ್ತು ಕೈಗಳ ಬೆರಳುಗಳು ಜರ್ಜರಿತ ಆಗಿದ್ದವು. ಪ್ರಜ್ಞೆಯು ಬಂದಾಗ ಎರಡೂ ಕಾಲುಗಳಿಗೆ ಬ್ಯಾಂಡೇಜು ಸುತ್ತಿ ಆತ ಆಸ್ಪತ್ರೆಯಲ್ಲಿ ಮಲಗಿದ್ದ! ಕಣ್ಣು ತೆರೆದು ಆತ ವೈದ್ಯರಿಗೆ ಕೇಳಿದ ಮೊದಲ ಪ್ರಶ್ನೆ – ಡಾಕ್ಟರ್, ನಾನಿನ್ನು ಕ್ರಿಕೆಟ್ ಆಡಬಹುದಾ?
ವೈದ್ಯರು ಯಾವ ಭರವಸೆ ಕೂಡ ಕೊಡಲಿಲ್ಲ. ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ನೋವು ನುಂಗುತ್ತಾ ಮಲಗಿದ್ದ! ಮತ್ತೆ ಆರು ತಿಂಗಳು ವೀಲ್ ಚೇರ್ ಮೇಲೆ ಉಸಿರು ಕಟ್ಟುವ ಪರಾವಲಂಬಿ ಬದುಕು! ಹಲವು ಶಸ್ತ್ರಚಿಕಿತ್ಸೆಗಳು ಮತ್ತು ನೋವು ನಿಕೋಲಸ್ ಎಂಬ ಅದ್ಭುತ ಹುಡುಗನ ಆತ್ಮವಿಶ್ವಾಸ ಕರಗಿಸಲಿಲ್ಲ ಎಂಬುದು ವಿಶ್ವ ಕ್ರಿಕೆಟಿನ ಅದೃಷ್ಟ ಎಂದೇ ಹೇಳಬಹುದು!
ಅಂಥ ನಿಕೋಲಸ್ ಮತ್ತೆ ಒಂದೇ ವರ್ಷದೊಳಗೆ ಕ್ರಿಕೆಟ್ ಜಗತ್ತಿಗೆ ಮರಳಿದ! ತನ್ನ ಆಟದ ಕಸುವನ್ನು ಹೆಚ್ಚಿಸಿಕೊಂಡಿದ್ದ. ಕೆರಿಬಿಯನ್ ಲೀಗ್‌ನ ಎಂಟು ಪಂದ್ಯಗಳಲ್ಲಿ 217 ರನ್ ಗಳಿಸಿದ. ಅದೇ ವರ್ಷ ಪಾಕ್ ತಂಡದೊಂದಿಗೆ ವೆಸ್ಟ್ ಇಂಡೀಸ್ T20 ಮುಖಾಮುಖಿ ಆದಾಗ ಬಿರುಸಿನ ಆಟವಾಡಿದ. ಎಲ್ಲಾ ಮುಗಿದು ಸೆಟ್ಲ್ ಆದ ಅನ್ನುವಾಗಲೇ ಇನ್ನೊಂದು ದುರಂತ ನಡೆಯಿತು. ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡಿನ ಕರಾಳ ತೀರ್ಪಿನ ಫಲವಾಗಿ ಆತ 10 ತಿಂಗಳು ನಿಷೇಧವನ್ನು ಎದುರಿಸಬೇಕಾಯಿತು.
ಅದಕ್ಕೆ ಕಾರಣ ದೇಸೀ ಕ್ರಿಕೆಟ್ ಸರಣಿಯು ನಡೆಯುವ ಹೊತ್ತಲ್ಲಿ ಅದನ್ನು ನಿರ್ಲಕ್ಷ್ಯ ಮಾಡಿ ಬಾಂಗ್ಲಾ ದೇಶದ ಪ್ರೀಮಿಯರ್ ಲೀಗ್ ಆಡಲು ಹೋದದ್ದು! ಮತ್ತೆ ಹತ್ತು ತಿಂಗಳು ಅವನ ಕ್ರಿಕೆಟ್ ಭವಿಷ್ಯಕ್ಕೆ ಮಂಕು ಕವಿಯಿತು!
ಆದರೆ ಇದಕ್ಕೆಲ್ಲ ಸೊಪ್ಪು ಹಾಕುವ ವ್ಯಕ್ತಿತ್ವ ಅವನದ್ದು ಅಲ್ಲವೇ ಅಲ್ಲ! ನಂತರ ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ20 ಲೀಗ್ ಆತನ ದೈತ್ಯ ಸಾಮರ್ಥ್ಯವನ್ನು ಜಗತ್ತಿಗೆ ತೆರೆದು ತೋರಿಸಿತು. ಎರಡು ವರ್ಷ ನಿಕೋಲಸ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಐಪಿಲ್ ಆಡಿದ್ದಾನೆ. ಇಪ್ಪತ್ತೊಂದು ಪಂದ್ಯಗಳಲ್ಲಿ 521 ರನ್ ಸೂರೆ ಮಾಡಿದ್ದಾನೆ. 36 ಸಿಡಿಲಬ್ಬರದ ಸಿಕ್ಸರಗಳು ಆತನ ಬ್ಯಾಟಿನಿಂದ ಚಿಮ್ಮಿವೆ! ಸ್ಟ್ರೈಕ್ ರೇಟ್ 165.4 ಆಗಿತ್ತು. ಅದರ ಜೊತೆಗೆ ಆತ ವಿಕೆಟ್ ಕೀಪಿಂಗ್ ಕೂಡ ಮಾಡಿದ್ದಾನೆ. ಅದರ ಜೊತೆಗೆ ಅವನ ಅಕ್ರೋಬ್ಯಾಟಿಕ್ ಕ್ಯಾಚುಗಳು ಹೆಚ್ಚು ಸುದ್ದಿ ಆಗಿವೆ.
ಭುವನೇಶ್ವರ್ ಕುಮಾರ್, ಚಹಾಲ್, ಬುಮ್ರಾ, ನಟರಾಜನ್, ರಶೀದ್ ಖಾನ್ ಮೊದಲಾದ ಸ್ಟಾರ್ ಬೌಲರಗಳು ಕೂಡ ಅವನ ಬ್ಯಾಟಿನಿಂದ ಸಿಕ್ಸರ್ ಹೊಡೆಸಿಕೊಂಡಿದ್ದಾರೆ! ಅವನ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಗಳ ಬಗ್ಗೆ ತಂಡದ ಮಾಲಕಿ ಪ್ರೀತಿ ಝಿಂಟಾ ಮತ್ತು ಫೀಲ್ಡಿಂಗ್ ಕೋಚ್ ಜಾಂಟೀ ರೊಡ್ಸ್ ಬಹಳ ಅಭಿಮಾನದ ಮಾತನ್ನು ಹೇಳಿದ್ದರು. ಆತನನ್ನು ‘ಮರಿ ಕ್ರಿಸ್ ಗೇಲ್’ ಎಂದು ಈಗಾಗಲೇ ಅಭಿಮಾನಿಗಳು ಕರೆಯಲು ಆರಂಭಿಸಿದ್ದಾರೆ. ಮುಂದೆ ಹೈದರಾಬಾದ್ ತಂಡಕ್ಕೆ ಆತ ಆಯ್ಕೆ ಆದ ಸುದ್ದಿಗಳು ಬಂದಿವೆ. ಆತ ಯಾವ ತಂಡದಲ್ಲಿ ಇದ್ದರೂ ತಂಡದ ಧೈರ್ಯ ಜಾಸ್ತಿಯೇ ಆಗಿರುತ್ತದೆ.
ಅವನ ಕಣ್ಣು ಮತ್ತು ಕೈಗಳ ಅದ್ಭುತವಾದ ಹೊಂದಾಣಿಕೆ, ಅಸಾಧಾರಣವಾದ ವೇಗ, ವಿಕೆಟ್ ನಡುವಿನ ಓಟ, ಹೊಡೆತಗಳ ಆಯ್ಕೆ, ಚುರುಕಿನ ಪಾದಗಳ ಚಲನೆ, ಪರ್ಫೆಕ್ಟ್ ಟೈಮಿಂಗ್, ಬ್ಯಾಟಿನ ಬೀಸು ಮತ್ತು ಆತ್ಮವಿಶ್ವಾಸಗಳು ಅವನನ್ನು ಮಹೋನ್ನತ ಕ್ರಿಕೆಟ್ ಸ್ಟಾರ್‌ಗಳ ಸಾಲಿನಲ್ಲಿ ತಂದುನಿಲ್ಲಿಸಿವೆ. ಆತ ಬ್ಯಾಟಿಂಗ್ ಮಾಡುವಾಗ ಆತನ ಕಣ್ಣಲ್ಲಿ ಒಂದಿಷ್ಟು ಭೀತಿಯು ಕೂಡ ಕಂಡು ಬರುವುದಿಲ್ಲ. ಸೆಹವಾಗ್ ಹಾಗೆ ತಾನು ಎದುರಿಸಿದ ಮೊದಲ ಬಾಲಿಗೆ ಸಿಕ್ಸರ್ ಹೊಡೆಯುವ ಶಕ್ತಿ ಆತನಿಗೆ ಇದೆ! ಒಂಥರಾ ಉಡಾಫೆ ಕ್ರಿಕೆಟರ್ ಆತ! ಅವನ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಕೆಲವು ಬಾರಿ ಅನಿಶ್ಚಿತತೆ ಆತನ ಪ್ರತಿಭೆಯನ್ನು ಮಸುಕು ಮಾಡಿದ್ದು ಉಂಟು. ಆತನ ಬದುಕಿನ ಹೋರಾಟವು ಅದಕ್ಕಿಂತ ರೋಮಾಂಚಕ ಎಂದು ಖಂಡಿತವಾಗಿ ಹೇಳಬಹುದು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಮರಣಕ್ಕೂ ಗೌರವ ತಂದ ಷರೀಫ್ ಚಾಚಾ: ಅವರು ಅಂತ್ಯಸಂಸ್ಕಾರಗೈದ ಅನಾಥ ಶವಗಳು 25,000!