ಜಗತ್ತಿನ ಎಲ್ಲ ಜೀವಿಗಳು ಒಂದಕ್ಕೊಂದು ಬೆಸೆದುಕೊಂಡು ಬದುಕುತ್ತಿರುವುದು ನಿಜಕ್ಕೂ ಅಚ್ಚರಿಯೇ ಆಗಿದೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಕೆಲವು ಜೀವಿಗಳು ಅಳಿವಿನ ಅಂಚಿನಲ್ಲಿರುವ ಕಾರಣ ಪರಿಸರದ ಅಸಮತೋಲನ ಉಂಟಾಗಿದೆ. ಭಾರತದಲ್ಲಿ ಪರಿಸರ ಸಚಿವಾಲಯ ಕೈಗೊಂಡ ಕೆಲವು ಸಂಶೋಧನೆಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ! ಜೀವ ವೈವಿಧ್ಯದ ನಾಶದಿಂದ ಪರಿಸರ ವ್ಯವಸ್ಥೆಗೆ ಮತ್ತು ಪರಿಸರದ ಸಮತೋಲನಕ್ಕೆ ಆಗುತ್ತಿರುವ ಗಂಡಾಂತರ ಅರ್ಥ ಮಾಡಿಕೊಳ್ಳಲು ನಾನು ನಿಮಗೆ ಕೆಲವು ಉದಾಹರಣೆ ಕೊಡಬೇಕು.
ಉದಾಹರಣೆ ೧) ಉತ್ತರ ಕರ್ನಾಟಕದ ಗೇರುಸೊಪ್ಪ ಅರಣ್ಯದಲ್ಲಿ ಇರುವ ಕಾನುಗೇರು ಮರ!
ಉತ್ತರ ಕರ್ನಾಟಕದ ಗೇರುಸೊಪ್ಪ ಪ್ರದೇಶದಲ್ಲಿ ದಟ್ಟವಾಗಿ ಹರಡಿದ್ದ ಕಾಡುಗಳನ್ನು ‘ಕತ್ತಲೆ ಕಾನ್’ ಎಂದು ಕರೆಯುತ್ತಿದ್ದರು. ಅದರಲ್ಲಿ ಇರುವ ಅಪರೂಪದ ವೃಕ್ಷ ಪ್ರಬೇಧವೇ ‘ಕಾನು ಗೇರು’! ಇದು ಮಾವಿನ ಕುಟುಂಬವನ್ನು ಹೋಲುವ ಮರ. ಅದಕ್ಕೆ ವಿಜ್ಞಾನಿಗಳು ಇಟ್ಟ ಹೆಸರು ‘ಸೆಮಿ ಕಾರ್ಪಸ್ ಕತ್ತಲೆ ಕಾನಾಸ್ಸಿಸ್’ ಎಂದು! ವಿಜ್ಞಾನಿಗಳು ಈ ಪ್ರಬೇಧದ ಬಗ್ಗೆ ಸಂಶೋಧನೆ ಮಾಡುತ್ತ ಹೋದಾಗ ತಿಳಿದ ಅಂಶವು ಆಘಾತಕಾರಿ ಆಗಿತ್ತು! ಅದೇನೆಂದರೆ ಇಡೀ ಜಗತ್ತಿನಲ್ಲಿ ಆ ಪ್ರಬೇಧದ ಮರಗಳು ಕೇವಲ 14 ಇದ್ದವು! ಮತ್ತು ಅಷ್ಟೂ ಮರಗಳು ವಿನಾಶದ ಅಂಚಿನಲ್ಲಿದ್ದವು! ಕೆಲವು ಮರಗಳಲ್ಲಿ ಹೂವು ಕಟ್ಟುತ್ತಿತ್ತು. ಆದರೆ ಕಾಯಿ ಕಟ್ಟುತ್ತಲೇ ಇರಲಿಲ್ಲ!
ವಿಜ್ಞಾನಿಗಳಿಗೆ ಈಗ ಅಪಾಯದ ಗಂಟೆ ಕೇಳಿಸಿತು. ಹೀಗೇಕೆ? ಎಂದು ಉತ್ತರವನ್ನು ಹುಡುಕುತ್ತ ಹೋದಾಗ ತಿಳಿದ ಸತ್ಯಗಳು ಏನೆಂದರೆ ಆ ಮರದ ಹೂಗಳ ಪರಾಗಸ್ಪರ್ಶಕ್ಕೆ ‘ಮಲಬಾರ್ ನಿಂಫ್’ ಎಂಬ ಚಿಟ್ಟೆಯು ಬೇಕಾಗಿತ್ತು. ಆ ಚಿಟ್ಟೆ ಕೂಡ ಆಗ ವಿನಾಶದ ಅಂಚಿನಲ್ಲಿತ್ತು!
ಈ ಅಪರೂಪದ ಮರಗಳ ಬೀಜ ಪ್ರಸಾರಕ್ಕೆ ಸಿಂಗಲೀಕ ಕಪಿಯು ಬೇಕಾಗಿತ್ತು! ಅದೂ ಕೂಡ ವಿನಾಶದ ಅಂಚಿನಲ್ಲಿತ್ತು! ವಿಜ್ಞಾನಿಗಳು ಸ್ವಲ್ಪ ಮೈಮರೆತಿದ್ದರೆ ಕಾನುಗೇರು ವೃಕ್ಷ, ಮಲಬಾರ್ ನಿಂಫ್ ಚಿಟ್ಟೆ, ಸಿಂಗಲೀಕ ಕಪಿ ಈ ಮೂರನ್ನೂ ಉಳಿಸಿಕೊಳ್ಳಲು ಕಷ್ಟ ಆಗುತ್ತಿತ್ತು!
ಉದಾಹರಣೆ ೨ – ರೈತರ ಸಮಸ್ಯೆಗೆ ಪರಿಹಾರ ನೀಡಿದ ‘ ಔರಿಜಾ ನಿಹಾರ್’ ಬತ್ತದ ತಳಿ!
1970ರ ದಶಕದಲ್ಲಿ ನಮ್ಮ ದೇಶದ ಬತ್ತದ ಬೆಳೆಗೆ ವೈರಸ್ ಕಾಯಿಲೆಯು ಅಮರಿತು. ಬಹಳ ಕಡಿಮೆ ಸಮಯದಲ್ಲಿ ಈ ರೋಗವು ದೇಶದಾದ್ಯಂತ ಹರಡಿ ಆಗ್ನೇಯ ಏಷ್ಯಾದವರೆಗೆ ಹರಡಿತು. ಸುಮಾರು 1,10,000 ಚದರ ಕಿಲೋ ಮೀಟರ್ ವಿಸ್ತೀರ್ಣದ ಬತ್ತದ ಗದ್ದೆಗಳು ಪೂರ್ತಿ ನಾಶ ಆಗುವ ಅಪಾಯದಲ್ಲಿ ಇದ್ದವು! ಆಗ ಭಾರತದ ವಿಜ್ಞಾನಿಗಳು ಈ ವೈರಸ್ ಕಾಯಿಲೆಯ ಬೇಟೆಗೆ ಹೊರಟರು. ಹಲವಾರು ವರ್ಷಗಳ ಸಂಶೋಧನೆಯ ನಂತರ ಉತ್ತರ ಪ್ರದೇಶದ ಗೊಂಡ ಅರಣ್ಯ ಪ್ರದೇಶದಲ್ಲಿ ಹರಡಿರುವ ‘ ಔರಿಜಾ ನಿಹಾರ್ ‘ ಎಂಬ ಬತ್ತದ ತಳಿಯನ್ನು ಬೆಳೆಯುವುದರ ಮೂಲಕ ಆ ವೈರಸ್ ಕಾಯಿಲೆಯು ಅದರಷ್ಟಕ್ಕೆ ನಿಯಂತ್ರಣಕ್ಕೆ ಬಂದಿತು!
ಉದಾಹರಣೆ ೩ – ಮಾರಿಷಸ್ ದ್ವೀಪದ ಡೋಡೋ!
ದ್ವೀಪ ರಾಷ್ಟ್ರದಲ್ಲಿ ವಿಪುಲ ಆಗಿದ್ದ ಡೋಡೋ ಪಕ್ಷಿಗಳ ಸಂತತಿಯು ಮುಂದೆ ಅಲ್ಲಿನ ತಾಳೆ ಮರಗಳ ನಾಶದಿಂದ ಹೇಗೆ ಅವನತಿ ಹೊಂದಿತು ಎಂದು ನಾನು ಹಿಂದೆ ಬರೆದಿದ್ದೆ! ಇಂದು ಜಗತ್ತಿಗೆ ತೋರಿಸಲು ಕೂಡ ಒಂದೇ ಒಂದು ಡೋಡೋ ಪಕ್ಷಿಯೂ ಇಲ್ಲ ಎಂಬಲ್ಲಿಗೆ ಜೀವ ವೈವಿಧ್ಯದ ನಾಶದಿಂದ ಆಗುವ ಅನಾಹುತಗಳು ಕಣ್ಣಿಗೆ ಕಟ್ಟುತ್ತವೆ!
ಉದಾಹರಣೆ ೪ – ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಗಳು
ಸುಮಾರು 18 ಕೆಜಿ ತೂಕ ಇರುವ ಬಿಳಿಯ ಕತ್ತು ಮತ್ತು ಕಂದು ದೇಹದ ಈ ಸುಂದರ ಹಕ್ಕಿಗಳನ್ನು ‘ಭಾರತದ ರಾಷ್ಟ್ರೀಯ ಹಕ್ಕಿಗಳು’ ಎಂದು ಕರೆಯಬೇಕು ಎಂದು ಖ್ಯಾತ ಹಕ್ಕಿ ವಿಜ್ಞಾನಿ ಸಲೀಂ ಆಲಿ ಅವರು ಅಭಿಪ್ರಾಯ ಪಟ್ಟಿದ್ದರು. ಆಗ ಈ ಹಕ್ಕಿಗಳ ಸಂಖ್ಯೆಯು ಸಾವಿರ, ಸಾವಿರ ಸಂಖ್ಯೆಯಲ್ಲಿ ಇತ್ತು. ಆದರೆ ಮಾಂಸಕ್ಕಾಗಿ ಆ ಹಕ್ಕಿಗಳನ್ನು ಮತ್ತು ಅದರ ಮೊಟ್ಟೆಗಳನ್ನು ಮನುಷ್ಯರು ಬಳಸಲು ಆರಂಭ ಮಾಡಿದರು. ಹಕ್ಕಿಗೆ ಅನುಕೂಲಕರ ಆವಾಸ ಆದ ಕುರುಚಲು ಪೊದೆಗಳು ಪೂರ್ತಿ ನಾಶ ಆಗಿರುವ ಕಾರಣ ಇಂದು ಇಡೀ ಜಗತ್ತಿನಲ್ಲಿ ಇರುವ ಆ ಹಕ್ಕಿಗಳ ಒಟ್ಟು ಸಂಖ್ಯೆಯು 200-250 ಮಾತ್ರ ಎಂದು ಅರಣ್ಯ ಇಲಾಖೆ ಘೋಷಣೆ ಮಾಡಿದೆ! ಮತ್ತು ಈ ಹಕ್ಕಿಗಳು ಮುಂದಿನ ಐದಾರು ವರ್ಷಗಳ ಒಳಗೆ ಪೂರ್ತಿ ನಾಶವಾಗುತ್ತವೆ ಎಂದು ಜೀವ ವಿಜ್ಞಾನ ಇಲಾಖೆ ಅಭಿಪ್ರಾಯ ಪಟ್ಟಿದೆ!
ಜೀವ ವೈವಿಧ್ಯದ ಸಂರಕ್ಷಣೆ ಇಂದಿನ ತುರ್ತು!
ಮಾನವನ ಸ್ವಾರ್ಥಕ್ಕೆ ಬಲಿಯಾಗಿ ಜಗತ್ತಿನ ನೂರಾರು ಪ್ರಾಣಿ ಮತ್ತು ಸಸ್ಯ ಪ್ರಬೇಧಗಳು ಪೂರ್ತಿ ಅಳಿದು ಹೋಗಿವೆ. ಪ್ರತಿಯೊಂದು ಸಸ್ಯ ಮತ್ತು ಪ್ರಾಣಿಗಳು ತಮ್ಮ ಅಸ್ತಿತ್ವಕ್ಕಾಗಿ ಇನ್ನೊಂದು ಸಸ್ಯ ಮತ್ತು ಪ್ರಾಣಿಯನ್ನು ಅವಲಂಬನೆ ಆಗಿರುತ್ತದೆ. ಮೆಕ್ಸಿಕೋದ ಅರಣ್ಯದಲ್ಲಿ ಬೆಳೆಯುತ್ತಿದ್ದ ಗೋಧಿಯ ತಳಿಯೊಂದು ಇಡೀ ವರ್ಷ ಇಳುವರಿ ಕೊಡುತ್ತಿತ್ತು ಮತ್ತು ಅತೀ ಹೆಚ್ಚು ಪ್ರೊಟೀನ್ ಅಂಶ ಹೊಂದಿತ್ತು. ಅದೀಗ ಪೂರ್ತಿಯಾಗಿ ನಾಶವಾಗಿ ಹೋಗಿದೆ.
ಜೀವ ವೈವಿಧ್ಯದ ಸಂರಕ್ಷಣೆ ಹಾಗೂ ಅದಕ್ಕೆ ಸಂಬಂಧ ಪಟ್ಟ ಸಂಶೋಧನೆಗಳು ಇಂದು ಆದ್ಯತೆ ಪಡೆಯಬೇಕು. ಅಳಿವಿನ ಅಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳ ಉಳಿವಿಗೆ ಕಾಳಜಿ ಅತೀ ಅಗತ್ಯವಾಗಿದೆ.
ಇದು ಪ್ರತಿಯೊಬ್ಬ ಮಾನವನ ಆದ್ಯತೆಯ ಕರ್ತವ್ಯ ಆಗಬೇಕು!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ದೇವರು ಯಾವ ರೂಪದಲ್ಲಾದರೂ ಬರಬಹುದು! ಗುರುತಿಸುವ ಆ್ಯಂಟೆನಾ ನಮಗಿರಬೇಕು ಅಷ್ಟೆ!