ಈ ವರ್ಷದ ಮೊದಲ ದಿನದ ಸಂಭ್ರಮದಲ್ಲಿ ಇದ್ದ ಕರಾವಳಿಯ ಕನ್ನಡಿಗರಿಗೆ ಕೇಳಿ ಬಂದ ಶಾಕಿಂಗ್ ನ್ಯೂಸ್ ಏನೆಂದರೆ ನೌಶಾದ್ ಹಾಜಿ ಸೂರಲ್ಪಾಡಿ ಅವರು ಕಾರು ಅಪಘಾತದಲ್ಲಿ ಮೃತಪಟ್ಟರು ಎಂಬುದು! ನಿಧಾನವಾಗಿ ಆ ಸುದ್ದಿ ಹರಡುತ್ತಿದ್ದಂತೆ ಅವರಿಂದ ಪ್ರಯೋಜನ ಪಡೆದುಕೊಂಡ ಸಾವಿರ ಸಾವಿರ ಜನರು ಸೇರಿ ಅವರ ಅಂತಿಮ ಯಾತ್ರೆಯಲ್ಲಿ ಪಾಲುಗೊಂಡದ್ದು, ತಮ್ಮ ಮನೆಯ ಸೋದರನನ್ನು ಕಳೆದುಕೊಂಡ ಹಾಗೆ ಕಣ್ಣೀರು ಮಿಡಿದದ್ದು ನಿಜಕ್ಕೂ ಭಾವ ಸ್ಪರ್ಶದ ಘಟನೆಯಾಗಿತ್ತು! ಅದು ಕೇವಲ 44 ವರ್ಷ ಬದುಕಿದ್ದ ಮಹಾ ಮಾನವತಾವಾದಿ ನೌಶಾದ್ ಹಾಜಿ ಅವರ ಬದುಕಿನ ಸಾರ್ಥಕತೆಯ ದ್ಯೋತಕವೂ ಆಗಿತ್ತು! ಅವರು ಬದುಕಿದ ರೀತಿಯೇ ಹಾಗಿತ್ತು!
ಓರ್ವ ಸಂತನ ಹಾಗೆ ಬದುಕಿದರು ನೌಶಾದ್!
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅರಳ ಎಂಬಲ್ಲಿ ಜನಿಸಿದ ನೌಶಾದ್ ಹಾಜಿ ಅವರು ಮುಂದೆ ಬಂದು ನೆಲೆಸಿದ್ದು ಮಂಗಳೂರು-ಮೂಡುಬಿದಿರೆಗಳ ನಡುವೆ ಇರುವ ಸೂರಲ್ಪಾಡಿಯಲ್ಲಿ. ಸಣ್ಣ ವಯಸ್ಸಿನಲ್ಲೇ ವ್ಯಾಪಾರ ಮತ್ತು ಸಮಾಜಸೇವೆಗಳು ಅವರ ಆಸಕ್ತಿಯ ಕ್ಷೇತ್ರಗಳು. ಆರಂಭದಲ್ಲಿ ಸುರತ್ಕಲ್ ಪರಿಸರದಲ್ಲಿ ಸಣ್ಣ ಹೂವಿನ ವ್ಯಾಪಾರವನ್ನು ಆರಂಭ ಮಾಡಿದ ನೌಶಾದ್ ಮುಂದಿನ 10 ವರ್ಷಗಳ ಒಳಗೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಬೆಳೆದರು. ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವಗಳು ಅವರನ್ನು ಕೈ ಹಿಡಿದು ಮುನ್ನಡೆಸಿದವು! ಕೆಲವೇ ವರ್ಷಗಳ ಅವಧಿಯಲ್ಲಿ ಅವರು ಯಶಸ್ವೀ ಉದ್ಯಮಿಯಾಗಿ ಬೆಳೆದರು. ಇದು ಅವರ ಹೋರಾಟದ ಒಂದು ಮುಖ!
ಸಮಾಜಸೇವೆಯೇ ನೌಶಾದ್ ಹಾಜಿ ಅವರ ಉಸಿರು!
ಆದರೆ ಒಬ್ಬ ಶ್ರದ್ಧಾವಂತ ಮುಸ್ಲಿಂ ಆಗಿ ಅವರು ತಮ್ಮ ಸಂಪಾದನೆಯ ಬಹುದೊಡ್ಡ ಭಾಗವನ್ನು ಸಮಾಜಕ್ಕಾಗಿ ವಿನಿಯೋಗ ಮಾಡಲು ಮುಂದಾದರು. ಸದಾ ನಗುಮುಖ, ಸಾಮಾಜಿಕ ಕಾಳಜಿ, ಒಳ್ಳೆಯ ಮಾತುಗಾರಿಕೆ ಮತ್ತು ನಾಯಕತ್ವದ ಗುಣಗಳು ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು.
ಅವರು ಎಲ್ಲ ಧರ್ಮದವರನ್ನು ಪ್ರೀತಿಸಿದರು. ಹೃದಯ ವೈಶಾಲ್ಯತೆ ಮೆರೆದರು. ಯಾವುದೇ ಪ್ರಚಾರ ಇಲ್ಲದೆಯೂ ದಾನ ಮಾಡಲು ಸಾಧ್ಯ ಇದೆ ಎಂದು ಸಾಧಿಸಿ ತೋರಿಸಿದರು. ಸಹಾಯ ಕೇಳಿಕೊಂಡು ಬಂದ ಯಾರನ್ನೂ ಹಿಂದೆ ಕಳುಹಿಸದೆ ಅವರಿಗೆ ತನ್ನಿಂದಾದ ಸಹಾಯವನ್ನು ಮಾಡಿ ಕಳುಹಿಸುವುದು ಅವರ ಶ್ರೇಷ್ಠತೆ! ಅವರಿಂದ ಪ್ರಯೋಜನ ಪಡೆದವರು ಎಲ್ಲ ಧರ್ಮದವರೂ ಇದ್ದಾರೆ ಅನ್ನುವುದು ಅವರ ದೈವಿಕವಾದ ಗುಣ!
‘ನೀವು ಮಾಡುವುದೆಲ್ಲ ಅಲ್ಲಾಹನ ವೀಕ್ಷಣೆಯಲ್ಲಿ ಇದೆ’ ಎಂಬ ಪವಿತ್ರ ಖುರಾನನ ನುಡಿಯಂತೆ ಅವರು ಬದುಕಿದರು ಮತ್ತು ಎಲ್ಲರಿಗೂ ಮಾದರಿ ಆದರು.
ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಟ್ರಸ್ಟ್ ಮೂಲಕ 353 ಬಡ ಹೆಣ್ಮಕ್ಕಳಿಗೆ ಮದುವೆ!
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಇದರ ಅಧೀನ ಸಂಸ್ಥೆಯಾದ ಮತ್ತು ಅವರೇ ಆರಂಭಿಸಿದ ‘ ನನ್ನ ಸಹೋದರಿ’ ಎಂಬ ಶ್ರೇಷ್ಟವಾದ ಅಭಿಯಾನವನ್ನು ಅವರು ಅತ್ಯಂತ ಯಶಸ್ವೀ ಆಗಿ ಮುಂದುವರಿಸಿಕೊಂಡು ಹೋದರು. ವಿವಾಹದ ವಯಸ್ಸು ಮೀರಿ ಮನೆಯ ಕತ್ತಲ ಕೋಣೆಯಲ್ಲಿ ಮುದುಡಿ ಕುಳಿತಿದ್ದ ಮೂವತ್ತು ವರ್ಷ ದಾಟಿದ ಸಮಾಜದ ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಯನ್ನು ತಾನೇ ಮುಂದೆ ನಿಂತು ನಡೆಸುವ ಸಂಕಲ್ಪವನ್ನು ಪ್ರಕಟ ಮಾಡಿದರು.
ತನ್ನ ಹಾಗೆ ಯೋಚನೆಯನ್ನು ಮಾಡುವ ಹತ್ತಾರು ಸಮಾನ ಮನಸ್ಕ ಸ್ನೇಹಿತರ ಸಂಘಟನೆಯನ್ನು ಮಾಡಿದರು. ದಾನಿಗಳನ್ನು ನಿರಂತರ ಭೇಟಿ ಮಾಡಿ ಅವರ ಮನಸನ್ನು ಒಲಿಸಿದರು. ಜಿಲ್ಲೆಯಾದ್ಯಂತ ಬಡ ಕುಟುಂಬಗಳನ್ನು ಸರ್ವೇ ಮಾಡಿದರು. ಆ ಮೂಲಕ ನೆರವು ಕೋರಿ ಮುಂದೆ ಬಂದ 350ಕ್ಕಿಂತ ಹೆಚ್ಚು ಸಂಖ್ಯೆಯ ಹೆಣ್ಣು ಮಕ್ಕಳ ವಿವಾಹವನ್ನು ತಾವೇ ಮುಂದೆ ನಿಂತು ಮಾಡಿ ಮುಗಿಸಿದರು! ಇದಕ್ಕಾಗಿ ತನ್ನ ಸಂಪಾದನೆಯ ಬಹುದೊಡ್ಡ ಭಾಗವನ್ನು ಈ ಅಭಿಯಾನದ ಉದ್ದೇಶಕ್ಕೆ ಅವರು ವಿನಿಯೋಗ ಮಾಡಿದರು. ಅದನ್ನು ಎಲ್ಲಿಯೂ ತನ್ನ ಹೆಸರಿಗೆ, ಕೀರ್ತಿಗೆ ಬಳಸಿಕೊಳ್ಳದೆ ಎಲ್ಲವೂ ‘ಅಲ್ಲಾಹನ ಕೃಪೆ’ ಎಂದು ನಿರ್ಲಿಪ್ತರಾಗಿ ನಿಂತರು. ಪ್ರಚಾರದಿಂದ ಗಾವುದ ದೂರ ಉಳಿದರು! ಅವರ ಪಾದರಸದ ಚುರುಕುತನ ಮತ್ತು ವೇಗ ಅಸಾಧಾರಣ ಆಗಿತ್ತು! ಅವರ ಅಲ್ಪಾಯುಷ್ಯ ಅವರಿಗೆ ಮೊದಲೇ ತಿಳಿದಿತ್ತೋ ಏನೋ!
ಅವರ ಹೃದಯ ಶ್ರೀಮಂತಿಕೆ – ನೂರು ರೀತಿ, ನೂರಾರು ಆಯಾಮ!
ಅವರ ಸೂರಲ್ಪಾಡಿಯ ಮನೆಯ ಮುಂದೆ ದಿನವೂ ಬೆಳಿಗ್ಗೆ ನೂರಾರು ಜನರು ಸಹಾಯ ಕೇಳಿಕೊಂಡು ಬರುತ್ತಿದ್ದರು. ಯಾರನ್ನೂ ಬರಿಗೈಯಿಂದ ಕಳುಹಿಸದೆ ದುಡ್ಡು, ಧವಸ ಧಾನ್ಯ, ಊಟಕ್ಕೆ ಅಕ್ಕಿ, ಬಡ ಮಕ್ಕಳ ಶಿಕ್ಷಣದ ಖರ್ಚು, ಮನೆಯ ರಿಪೇರಿ ಖರ್ಚು… ಎಲ್ಲವನ್ನೂ ಭರಿಸುತ್ತಿದ್ದರು. ರೋಗಿಗಳ ಆಸ್ಪತ್ರೆಯ ಖರ್ಚು ಭರಿಸುತ್ತಿದ್ದರು. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ತನ್ನ ಕಾರಿಗೆ ಪೆಟ್ರೋಲ್ ಹಾಕಿ ಉಚಿತವಾಗಿ ಕೊಡುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ತನ್ನ ಕಾರಿನಲ್ಲಿ ಆಹಾರದ ಕ್ವಿಂಟಾಲ್ ತೂಕದ ಆಹಾರ ಧಾನ್ಯಗಳ ಪೊಟ್ಟಣಗಳನ್ನು ತುಂಬಿಸಿಕೊಂಡು ಬಡವರ ಮನೆ ಮನೆಗೆ ಹೋಗಿ ಕೊಟ್ಟು ಬರುತ್ತಿದ್ದರು. ಬಡವರ ಮದುವೆಗೆ ದುಡ್ಡಿನ ಅಥವಾ ಬಂಗಾರದ ಕೊರತೆ ಆದಾಗ ಹಿಂದೆ ಮುಂದೆ ನೋಡದೆ ಸಹಾಯ ಮಾಡಿದ ನೂರಾರು ಉದಾಹರಣೆಗಳು ನಮಗೆ ದೊರೆಯುತ್ತವೆ!
ಬಡವರ ಹಸಿವು ನೀಗಿಸುವುದು ನನ್ನ ಆದ್ಯತೆಯ ಕೆಲಸ ಎಂದು ಅವರು ಪದೇಪದೆ ಹೇಳುತ್ತಿದ್ದರು. ಕೊರೊನಾ ಕಾಲದಲ್ಲಿ ಕೂಡ ನೌಶಾದ್ ಹಾಜಿ ಮನೆಯಲ್ಲಿ ಕೂರದೆ ಟ್ರಕ್ ತುಂಬಾ ಆಹಾರ ಧಾನ್ಯಗಳ ಚೀಲಗಳನ್ನು ತುಂಬಿಸಿಕೊಂಡು ಹೋಗಿ ಬಡವರಿಗೆ ನೆರವು ನೀಡಿದರು. ಇದೆಲ್ಲ ವ್ಯವಸ್ಥೆಗಳಿಗೆ ಅವರ ಸದುದ್ದೇಶವನ್ನು ಅರ್ಥ ಮಾಡಿಕೊಂಡ ದಾನಿಗಳ ನೆರವು ಇದ್ದೇ ಇತ್ತು.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮದ್ರಸಾಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ನೌಶಾದ್ ಹಾಜಿ ಧರ್ಮ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಎರಡೂ ಪ್ರಾಮುಖ್ಯ ಎಂದು ಪ್ರತಿಪಾದಿಸುತ್ತ ಬಂದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣದ ನೆರವಿಗೆ ನಿಂತರು. ದಾನಿಗಳ ನೆರವು ಪಡೆದು ಹಲವು ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೆ ತಂದರು.
ನಿಜವಾದ ಸೆಕ್ಯೂಲರ್ ಸಂತ!
ಯಾವ ಧರ್ಮದವರು ಮದುವೆಯ ಕಾಗದ ಕೊಟ್ಟರೂ ಅವೆಲ್ಲಾ ಮದುವೆಗಳಿಗೆ ಹಾಜರಾಗಿ ಅವರಿಗೆ ಉಡುಗೊರೆ ಕೊಟ್ಟು ಶುಭ ಹಾರೈಸಿ ಬರುವುದು ಅವರು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯ. ಹಿಂದೂಗಳ ಮತ್ತು ಕ್ರೈಸ್ತ ಬಂಧುಗಳ ಹಬ್ಬಗಳಿಗೆ ಅವರ ಮನೆಗಳಿಗೆ ಹೋಗಿ ಶುಭಾಶಯ ಕೋರಿ ಸಿಹಿತಿಂಡಿ ಕೊಟ್ಟು ಬರುವುದು ಅವರಿಗೆ ತುಂಬಾ ಖುಷಿ ಕೊಡುವ ಕೆಲಸ. ಎಲ್ಲ ಧರ್ಮದವರ ಜೊತೆಗೆ ಉತ್ತಮ ಸಂಬಂಧ ಹೊಂದಿ ಬದುಕಲು ಅವರು ಆಸೆ ಪಟ್ಟರು. ಅವರಿಗೆ ಎಲ್ಲ ಧರ್ಮಗಳಲ್ಲಿಯೂ ನೂರಾರು ಜನ ಸ್ನೇಹಿತರು, ಒಡನಾಡಿಗಳು ಇದ್ದರು. ಹೀಗೆ ನೌಶಾದ್ ಹಾಜಿ ಅವರು ಮಹಾ ಮಾನವತಾವಾದಿ ಆಗಿ ಬದುಕಿದರು.
ಅಂತಿಮ ಯಾತ್ರೆಯಲ್ಲಿ ಹರಿದು ಬಂತು ಜನಸಾಗರ!
ಈ ವರ್ಷದ ಮೊದಲ ದಿನ ಅವರು ವೇಣೂರು ಸಮೀಪ ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಾಗ ಅವರಿಗೆ ಕೇವಲ 44 ವರ್ಷ ವಯಸ್ಸು! ಸೂರಲ್ಪಾಡಿ ಮಸೀದಿಯ ಆವರಣದಲ್ಲಿ ನಡೆದ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು ಹರಿದು ಬಂದು ಅವರಿಗೆ ಭಾವಪೂರ್ಣ ವಿದಾಯವನ್ನು ಕೋರಿದರು. ಅಲ್ಲಿ ಎಲ್ಲ ಧರ್ಮಗಳ ಜನರೂ ಹರಿದು ಬಂದಿದ್ದರು. ಎಲ್ಲರ ಬಾಯಿಂದ ಬಂದ ಒಂದೇ ಮಾತು – ನೌಶಾದ್ ಭಾಯಿ ನಿಜವಾಗಿಯೂ ಒಬ್ಬ ದೇವದೂತ! ಅಂತಹವರು ಹುಟ್ಟುವುದು ಶತಮಾನಕ್ಕೊಮ್ಮೆ!
ನೌಶಾದ್ ಹಾಜಿ ಅವರಿಗೆ ನಮ್ಮ ಶೃದ್ಧಾಂಜಲಿ
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಮಹಿಳಾ ಕ್ರಿಕೆಟ್‌ನ ಸಿಡಿಲಮರಿ ಸ್ಮೃತಿ ಮಂಧಾನಾ; ಸೌಂದರ್ಯ- ಪ್ರತಿಭೆಗಳ ಸುಂದರ ಸಮ್ಮಿಲನ!