2023ರ ವಿಧಾನಸಭಾ ಚುನಾವಣೆಯ ಫಲಿತಾಂಶ ಸ್ವಲ್ಪ ಹೊತ್ತಲ್ಲಿ ಬಂದೇ ಬಿಡುತ್ತದೆ. ಯಾರೋ ಒಬ್ಬರು ಗೆಲ್ಲಬಹುದು. ಹಲವರು ಸೋಲು ಕಾಣಬಹುದು. ಅಲ್ಲಿಗೆ ಸರಕಾರ ರಚಿಸುವ ಕಸರತ್ತು, ಬಹುಮತಕ್ಕೆ ಬೇಕಾದ ಸಂಖ್ಯೆಯನ್ನು ಜೋಡಿಸಲು ಒಂದಿಷ್ಟು ಕಸರತ್ತು, ಅಸಾಂವಿಧಾನಿಕ ವಿಧಾನಗಳು, ಸಮ್ಮಿಶ್ರ ಸರ್ಕಾರಗಳು, ಅಕ್ರಮ ಹೊಂದಾಣಿಕೆಯ ಸರಕಾರಗಳು…….ಏನೂ ಬೇಕಾದರೂ ಆಗಬಹುದು.
1977ರಿಂದ ಎಲ್ಲಾ ಸ್ತರದ ಚುನಾವಣೆಗಳನ್ನು ನೋಡುತ್ತಾ, ಹತ್ತಿರದಿಂದ ಗಮನಿಸುತ್ತ ಬಂದ ನನಗೆ, ನನ್ನಂತಹವರಿಗೆ ಬಹಳ ಇರಸುಮುರಸು ಉಂಟು ಮಾಡುವ ಘಟನೆಗಳು ಈ ಬಾರಿ ನಡೆದಿವೆ. ಇವೆಲ್ಲವೂ ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ವಿಷಯಗಳು ಅಲ್ಲವೇ ಅಲ್ಲ.
ವಾಜಪೇಯಿ – ಇಂದಿರಾ ಮಾದರಿ ನಡೆಗಳು
ಇಂದಿರಾ ಗಾಂಧಿ 1975-77ರ ಹೊತ್ತಿಗೆ ದೇಶದ ಮೇಲೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಆಗ ವಿರೋಧ ಪಕ್ಷದ ಕಾರ್ಯಕರ್ತರು ಪ್ರಧಾನಿ ಇಂದಿರಾ ಅವರ ನಡೆಯನ್ನು ಖಂಡಿಸಿ ದೇಶದಾದ್ಯಂತ ಒಂದು ಸಹಿ ಸಂಗ್ರಹ ಅಭಿಯಾನ ಆರಂಭಿಸಿದರು. ಆ ಪತ್ರವು ಸಹಿಗಾಗಿ ಆಗಿನ ಪ್ರಮುಖ ವಿಪಕ್ಷ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರ ಟೇಬಲ್ಲಿಗೆ ಬಂದಿತು. ವಾಜಪೇಯಿ ಆ ಪತ್ರವನ್ನು ಪೂರ್ತಿಯಾಗಿ ಓದಿದರು. ಅದರ ಶೀರ್ಷಿಕೆಯು ‘ಇಂದಿರಾ, ಜವಾಬ್ ದೋ’ ಎಂದಾಗಿತ್ತು. ಅದನ್ನು ವಾಜಪೇಯಿ ಆಕ್ಷೇಪಿಸಿ ಅದನ್ನು ಹೀಗೆ ಬದಲಾವಣೆ ಮಾಡಿದರು.
‘ಇಂದಿರಾಜಿ, ಜವಾಬ್ ದೀಜಿಯೆ’ ಎಂದು ತಿದ್ದಿ ನಂತರ ಸಹಿ ಮಾಡಿದರು. ತನ್ನ ರಾಜಕೀಯ ಶತ್ರುವನ್ನು ಕೂಡ ಗೌರವಿಸಬೇಕು ಎಂದು ಅವರು ತಮ್ಮ ನಡೆಯಿಂದ ಮಾಡಿ ತೋರಿಸಿದ್ದರು. ಅದೇ ಇಂದಿರಾ ಗಾಂಧಿ ಹಿಂದೆ ಬಾಂಗ್ಲಾ ಯುದ್ಧವನ್ನು ಗೆದ್ದು ಬಂದಾಗ ಅದೇ ವಾಜಪೇಯಿ ಇಂದಿರಾ ಅವರನ್ನು ದುರ್ಗಾ ಎಂದು ಕರೆದು ಅಭಿನಂದಿಸಿದರು!
ಹಾಗೆಯೇ ಪ್ರಧಾನಿ ಇಂದಿರಾ ಗಾಂಧಿ ಅವರು ಮುಂದುವರಿದು, ‘ನಾನು ವಾಜಪೇಯಿಜಿ ಅವರ ಭಾಷಣಗಳ ಅಭಿಮಾನಿ. ಎಷ್ಟೋ ಸಲ ಅವರ ಭಾಷಣಗಳನ್ನು ಕೇಳಲು ಪರ್ದಾ ಹಾಕಿಕೊಂಡು ಹೋಗಿ ರಾಮ್ ಲೀಲಾ ಮೈದಾನದಲ್ಲಿ ನಿಂತಿರುತ್ತಿದ್ದೆ!’ ಎಂದು ಹೇಳಿ ವಾಜಪೇಯಿ ಅವರನ್ನು ಗೌರವಿಸಿದ್ದರು. ಆ ಕಾಲದಲ್ಲಿ ರಾಜಕೀಯ ಭಾಷಣಗಳಲ್ಲಿ ವ್ಯಂಗ್ಯ, ಮೊನಚು ಇರುತ್ತಿದ್ದವು, ಹೊರತು ಏಕವಚನದ ಪ್ರಯೋಗವು ಇರಲೇ ಇಲ್ಲ!
ಆ ಕಾಲದ ರಾಜಕೀಯ ನಾಯಕರಾದ ಜಾರ್ಜ್ ಫರ್ನಾಂಡಿಸ್, ಮಧು ದಂಡವತೆ, ಜಗಜೀವನ್ ರಾಮ್, ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಶರದ್ ಪವಾರ್, ಶರದ್ ಯಾದವ್, ರಾಮಕೃಷ್ಣ ಹೆಗಡೆ ಇವರ್ಯಾರೂ ಯಾವುದೇ ರಾಜಕೀಯ ವೇದಿಕೆಗಳಲ್ಲಿ ವೈಯಕ್ತಿಕ ಟೀಕೆ, ಏಕವಚನ ಪ್ರಯೋಗ ಮಾಡಿದ್ದು ನಾನು ಕೇಳಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ವೇದಿಕೆಯಲ್ಲಿ ಸಂಯಮವನ್ನು ಕಾಪಾಡಿಕೊಂಡು ಬರುತ್ತಿದ್ದವು. ಆದರೆ ಈಗ…?
ಚುನಾವಣೆಗಳಲ್ಲಿ ಯಾರು ಬೇಕಾದರೂ ಸೋಲಬಹುದು!
ಚುನಾವಣೆಗಳು ನಮ್ಮ ದೇಶದ ಪ್ರಜಾಪ್ರಭುತ್ವದ ಅತೀ ದೊಡ್ಡ ಉತ್ಸವ ಎಂದು ಹೇಳುತ್ತಾರೆ. ಅದು ನೂರಕ್ಕೆ ನೂರರಷ್ಟು ಸತ್ಯ. ಚುನಾವಣೆಯಲ್ಲಿ ಯಾರು ಬೇಕಾದರೂ ಸೋಲಬಹುದು. ಪ್ರಧಾನಿ ಇಂದಿರಾ ಗಾಂಧಿ 1977ರ ಚುನಾವಣೆಯಲ್ಲಿ ಸೋತದ್ದು ಒಬ್ಬ ಸಾಮಾನ್ಯ ನಾಯಕರಾದ ರಾಜ್ ನಾರಾಯಣ್ ಎದುರು! ರಾಜ್ಯದ ಮುಖ್ಯಮಂತ್ರಿ ಆಗಿದ್ದ ಗುಂಡೂ ರಾವ್ ಅವರು ಸೋತದ್ದು ಅನಾಮಧೇಯ ವ್ಯಕ್ತಿ ಜೀವಿಜಯ ಅವರ ಎದುರು! ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಚುನಾವಣೆಯನ್ನು ಸೋತಿದ್ದರು. ವಾಜಪೇಯಿ, ಇಂದಿರಾ ಗಾಂಧಿ ಮೊದಲಾದ ಮಹಾ ನಾಯಕರು ಚುನಾವಣೆಗಳಲ್ಲಿ ಸೋತವರೇ ಆಗಿದ್ದಾರೆ.
ವಾಜಪೇಯಿ ಲೋಕಸಭೆಯಲ್ಲಿ ವಿಶ್ವಾಸಮತವನ್ನು ಗೆಲ್ಲಲು ಒಂದು ಮತದ ಕೊರತೆಯಾದಾಗ ಯಾವುದೇ ವಿಷಾದ ಇಲ್ಲದೆ ‘ ಮೈ ಸತ್ತಾ ಚೋಡ್ ದೂಂಗ’ ಎಂದು ರಾಜೀನಾಮೆ ಕೊಟ್ಟು ನಿರ್ಗಮಿಸಿದ್ದರು! ಬಹುಮತ ಪಡೆಯಲು ಅಡ್ಡದಾರಿಗಳನ್ನು ಆಗ ಅವರು ಹುಡುಕಲಿಲ್ಲ! ಸೇಡಿನ ರಾಜಕಾರಣವು ಕಡಿಮೆ ಇತ್ತು. ರಾಜಕಾರಣವು ಆಗ ಕೇವಲ ದುಡ್ಡು ಮಾಡುವ ಒಂದು ವೇದಿಕೆಯು ಆಗಿರಲಿಲ್ಲ. ಈಗ?
ಒಬ್ಬರನ್ನು ಒಬ್ಬರು ಗೌರವಿಸುವ ಕಾಲ ಅದು!
ನೆಹರೂ ಪ್ರಧಾನಿ ಆಗಿದ್ದಾಗ ಒಬ್ಬ ಬಿಸಿರಕ್ತದ ಒಬ್ಬ ಸಂಸದರು ಚೆನ್ನಾಗಿ ಸಂಸತ್ ಕಲಾಪದಲ್ಲಿ ಮಾತಾಡುವುದನ್ನು ಕಂಡಾಗ ಹೋಗಿ ಬೆನ್ನು ತಟ್ಟಿ ‘ನೀನು ಮುಂದೆ ಖಂಡಿತವಾಗಿ ಪ್ರಧಾನಿ ಆಗ್ತೀಯಾ’ ಎಂದು ಭವಿಷ್ಯ ಹೇಳಿದ್ದರು. ಆ ಯುವ ಸಂಸದನಿಗೆ ದೊರಕಿದ್ದ ಅತೀ ದೊಡ್ಡ ಪ್ರಶಸ್ತಿ ಅದು! ಆ ಯುವ ಸಂಸದ ಬೇರೆ ಯಾರೂ ಅಲ್ಲ, ಅದು ವಾಜಪೇಯಿ!
ವಿವಿಧ ಸಾಧನಾ ರಂಗಗಳಲ್ಲಿ ಇರುವ ಹಾಗೆ ರಾಜಕೀಯದಲ್ಲಿ ಗುರು ಶಿಷ್ಯ ಪರಂಪರೆಯು ಇತ್ತು. ಅವರು ನನ್ನ ರಾಜಕೀಯ ಗುರು, ಇವರು ನನ್ನ ರಾಜಕೀಯ ಗುರು ಎಂದು ಹೇಳುವುದು ಮಾತ್ರವಲ್ಲ ಅದನ್ನು ಗೌರವದಿಂದ ಪಾಲಿಸುವ ಪರಂಪರೆಯ ನೂರಾರು ಉದಾಹರಣೆಗಳು ನಮ್ಮ ಮುಂದೆ ಇವೆ. ಆದರೆ ಇಂದು..?
ದಿಕ್ಕು ತಪ್ಪಿಸುವ ಸಾಮಾಜಿಕ ಜಾಲತಾಣಗಳು!
2000ದ ಇಸವಿಯವರೆಗೂ ಚುನಾವಣೆಗಳು ಬಹಿರಂಗ ಪ್ರಚಾರ, ಸಾರ್ವಜನಿಕ ಭಾಷಣಗಳು, ಮನೆಮನೆ ಭೇಟಿ, ಟಿವಿ ಡಿಬೇಟಗಳು…ಇಷ್ಟಕ್ಕೆ ಸೀಮಿತ ಆಗಿದ್ದವು. ಒಂದಿಷ್ಟು ಶಬ್ದ ಮಾಲಿನ್ಯ ಇತ್ತು ಎನ್ನುವುದು ನಿಜ. ಆದರೆ ಭ್ರಮೆಯನ್ನು ಹುಟ್ಟಿಸುವ ಮತ್ತು ಸುಳ್ಳು ಹರಡುವ ಜಾಲತಾಣಗಳು ಇರಲಿಲ್ಲ! ಇತ್ತೀಚಿನ ಚುನಾವಣೆಗಳಲ್ಲಿ ಜಾಲತಾಣಗಳೇ ನಿರ್ಣಾಯಕ ಅಂತ ಅನ್ನಿಸಿಬಿಟ್ಟಿವೆ! ದ್ವೇಷ ಮತ್ತು ಹಿಂಸೆಗಳನ್ನು ಹಾರಾಡುವ ಟ್ವೀಟರ್, ಫೇಸ್ ಬುಕ್, ವಾಟ್ಸಪ್, ಮಾರಾಟವಾದ ಸೈಟಗಳು, ಫೇಕ್ ಬರಹಗಳು ಮತ್ತು ವೀಡಿಯೊಗಳು ಚುನಾವಣೆಯನ್ನು ಗೆಲ್ಲಲು ಸಹಾಯ ಮಾಡುತ್ತವೆ ಅನ್ನೋದಕ್ಕಿಂತ ದ್ವೇಷ ಹಂಚುವ ತಾಣಗಳು ಆದದ್ದು ನಿಜಕ್ಕೂ ಬೇಸರದ ವಿಷಯ! ಈ ತಾಣಗಳು ಯುವ ಜನತೆಯ ತುಂಬಾ ಕ್ರಿಯೇಟಿವ್ ವಿಚಾರಗಳಿಗೆ ವೇದಿಕೆ ಆಗುವ ಸಾಧ್ಯತೆ ಇತ್ತು. ಆದರೆ ಈ ಚುನಾವಣೆಯ ಹೊತ್ತಲ್ಲಿ ವೈರಲ್ ಆದ (ಎಡಿಟೆಡ್) ವೀಡಿಯೊಗಳನ್ನು ಒಮ್ಮೆ ಗಮನಿಸಿ. ನಮ್ಮ ಯುವಜನತೆಯ ಕ್ರಿಯೇಟಿವ್ ಸಾಮರ್ಥ್ಯಗಳು ಈ ರೀತಿಯಲ್ಲಿ ವ್ಯರ್ಥವಾಗುವುದನ್ನು ಗಮನಿಸಿದಾಗ ನೋವಾಗುತ್ತದೆ. ತಮ್ಮ ರಾಜಕೀಯ ಎದುರಾಳಿಗಳ ಖಾಸಗಿ ಜೀವನದ ಮೇಲೆ ಕ್ಯಾಮೆರಾಗಳನ್ನು ಇಟ್ಟು ಕಾದು ಕುಳಿತುಕೊಳ್ಳುವ ಅತೃಪ್ತ ಆತ್ಮಗಳಿಗೆ ಏನೆಂದು ಹೇಳೋಣ?
ಇಂದಿನ ರಾಜಕೀಯ ನಾಯಕರಲ್ಲಿ ಬಹಳಷ್ಟು ಮಂದಿ ಯುವಜನತೆಗೆ ಮಾದರಿ ಆಗಿಲ್ಲ ಎಂಬಲ್ಲಿಗೆ ಈ ಚುನಾವಣೆಗಳು ಕೂಡ ಕಲುಷಿತ ಆದವು ಎನ್ನುವ ನೋವು ಬಹುಕಾಲ ಉಳಿಯುತ್ತದೆ.
ಇದಕ್ಕೆ ಕಾರಣರಾದ ರಾಜಕೀಯ ಪಕ್ಷಗಳನ್ನು, ನಾಯಕರನ್ನು ದೇವರು ಕ್ಷಮಿಸಲಿ ಎನ್ನುವುದು ಆಶಯ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ದಾದಿಯರ ದಿನ; ಸದಾ ನೆನಪಾಗುವ ದೀಪಧಾರಿ ದೇವತೆ ಫ್ಲಾರೆನ್ಸ್ ನೈಟಿಂಗೇಲ್