ಹಿಂದಿ ಸಿನಿಮಾದಲ್ಲಿ 1950-70ರ ದಶಕದಲ್ಲಿ ಅತ್ಯಂತ ಮಾಧುರ್ಯಪೂರ್ಣ ಹಾಡುಗಳನ್ನು ಪರಿಚಯಿಸಿದ ಕೀರ್ತಿ ಓ.ಪಿ. ನಯ್ಯರ್ ಅವರಿಗೆ ದೊರೆಯುತ್ತದೆ. ನಯಾ ದೌರ್, ಸಿಐಡಿ, ಹೌರಾ ಬ್ರಿಜ್, ಫಾಗುನ್, ಏಕ್ ಮುಸಾಫಿರ್ ಏಕ್ ಹಸೀನಾ, ಕಾಶ್ಮೀರ್ ಕೀ ಕಲಿ, ಮೇರೆ ಸನಮ್, ಸಾವನ್ ಕೀ ಘಟ, ಎ ರಾತ್ ಫಿರ್ ನಾ ಆಯೇಗಿ, ಪ್ರಾಣ್ ಜಾಯೇ ಪರ್ ವಚನ ನಾ ಜಾಯೇ ಮೊದಲಾದ ಆಲ್ ಟೈಮ್ ಮೆಲೊಡಿ ಸಿನಿಮಾಗಳಿಗೆ ಸಂಗೀತವನ್ನು ಕೊಟ್ಟು ಮಾಧುರ್ಯದ ಪರಾಕಾಷ್ಠೆಯನ್ನು ಪರಿಚಯ ಮಾಡಿದವರು (ರಾಜ ಮಾರ್ಗ ಅಂಕಣ) ನಯ್ಯರ್ ಸಾಬ್.
ಪಂಜಾಬ್‌ನಲ್ಲಿ 1926ರ ಜನವರಿ 16ರಂದು ಜನಿಸಿದ ಓಂಕಾರ್ ಪ್ರಸಾದ್ ನಯ್ಯರ್ ಪ್ರಸಿದ್ಧ ಹಾರ್ಮೋನಿಯಂ ವಾದಕರಾಗಿ ಇದ್ದವರು. ಅವರಿಗೆ ಯಾವ ಶಾಸ್ತ್ರೀಯ ಸಂಗೀತದ ತರಬೇತೂ ಆಗಿರಲಿಲ್ಲ. ಆದರೆ ಆ ಕಾಲದ 600ಕ್ಕಿಂತ ಹೆಚ್ಚು ಹಾಡುಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ ಅಂದರೆ ನಿಜಕ್ಕೂ ಆಶ್ಚರ್ಯ ಮೂಡುತ್ತದೆ ಮತ್ತು ಅವರ ಅಭಿಮಾನ ಮೂಡುತ್ತದೆ.
ನಯ್ಯರ್ ಸಾಬ್ ಸ್ವಾಭಿಮಾನವನ್ನು ಬಿಟ್ಟುಕೊಟ್ಟ ಉದಾಹರಣೆಯೇ ಇಲ್ಲ!
ನಾನಿಂದು ಅವರ ಹಾಡುಗಳ ಬಗ್ಗೆ ಬರೆಯುವುದಕ್ಕಿಂತ ಅವರ ಸ್ವಾಭಿಮಾನದ ಬಗ್ಗೆ ಹೆಚ್ಚು ಬರೆಯಬೇಕು.
ನಮಗೆಲ್ಲ ತಿಳಿದಿರುವ ಹಾಗೆ 1950-70 ಈ ಇಪ್ಪತ್ತು ವರ್ಷಗಳು ಲತಾ ಮಂಗೇಷ್ಕರ್ ಅವರ ಸಾಧನೆಯ ಶಿಖರ ವರ್ಷಗಳು. ಲತಾ ತನ್ನ ಪ್ರತಿಭೆಯ ಮೂಲಕ ಇಡೀ ಬಾಲಿವುಡ್ ಪ್ರಪಂಚವನ್ನು ಆಕ್ರಮಿಸಿಕೊಂಡ ವರ್ಷಗಳು ಅವು!
ಆದರೆ ಈ ಇಪ್ಪತ್ತು ವರ್ಷಗಳಲ್ಲಿ 600 ಹಾಡುಗಳಿಗೆ ಸಂಗೀತ ನಯ್ಯರ್ ಸಾಬ್ ಕೊಟ್ಟಿದ್ದರೂ ಒಂದೇ ಒಂದು ಹಾಡನ್ನು ಲತಾ ಮಂಗೇಷ್ಕರ್ ಮೂಲಕ ಹಾಡಿಸಿಲ್ಲ ಅಂದರೆ ನಿಮಗೆ ಆಶ್ಚರ್ಯವೇ ಆಗಬಹುದು. ಅದಕ್ಕೆ ಕಾರಣ ಲತಾ ಅವರಿಗೆ ಇದ್ದ ಸಣ್ಣ ಅಹಂ ಮತ್ತು ನಯ್ಯರ್ ಸಾಬ್ ಅವರಿಗೆ ಇದ್ದ ಅತಿಯಾದ ಸ್ವಾಭಿಮಾನ ಎಂದು ಎಲ್ಲರಿಗೂ ಗೊತ್ತಿತ್ತು!
ಈ ಘಟನೆಗಳನ್ನು ನಯ್ಯರ್ ಸಾಬ್ ಮಾತಲ್ಲಿ ಕೇಳುತ್ತ ಮುಂದೆ ಹೋಗೋಣ.
‘ನನಗೆ ಲತಾಜಿ ಅವರ ಪ್ರತಿಭೆಯ ಬಗ್ಗೆ ಅಪಾರ ಗೌರವ ಇದೆ. ಅವರು ನಿಜವಾಗಿಯೂ ಭಾರತದ ಕೋಗಿಲೆಯೇ ಸರಿ. ಅವರನ್ನು ಧಿಕ್ಕರಿಸಿ ನಿಲ್ಲುವಷ್ಟು ನಾನು ದೊಡ್ಡವನಲ್ಲ. ನಾನು ಸ್ವತಂತ್ರ ಸಂಗೀತ ಸಂಯೋಜನೆ ಮಾಡಿದ ಮೊದಲ ಸಿನಿಮಾ ಆಸ್ಮಾನ್ (1952). ಅದರ ಮೊದಲ ಹಾಡನ್ನು ಹಾಡಲು ಲತಾ ಅವರು ಒಪ್ಪಿದ್ದರು. ಆದರೆ ಇಡೀ ದಿನ ಸ್ಟುಡಿಯೋದಲ್ಲಿ ಕಾದು ಕೂತರೂ ಲತಾಜಿ ಬರಲಿಲ್ಲ. ನಾನು ಬ್ಯುಸಿ ಇದ್ದೆ ಎಂದು ಲತಾಜಿ ನನಗೆ ಆನಂತರ ಹೇಳಿದ್ದರು. ಅದು ಸುಳ್ಳು ಆಗಿತ್ತು. ನಾನು ಇಂಡಸ್ಟ್ರಿಗೆ ಹೊಸಬ ಆದ್ದರಿಂದ ಅವರಿಗೆ ನನ್ನ ಹಾಡುಗಳನ್ನು ಹಾಡಲು ಮುಜುಗರ ಆಗಿರಬಹುದು. ನಾನು ಹಟಕ್ಕೆ ಬಿದ್ದು ಆ ಹಾಡನ್ನು ಆಗಿನ ಕಾಲದ ಯುವ ಗಾಯಕಿ ಗೀತಾದತ್ ಅವರ ಮೂಲಕ ಹಾಡಿಸಿದೆ. ಹಾಡು ಸೂಪರ್ ಹಿಟ್ ಆಯಿತು. ಮುಂದೆ ಖ್ಯಾತ ನಿರ್ಮಾಪಕ ಗುರುದತ್ ಅವರ ಎರಡು ಸಿನಿಮಾಗಳಲ್ಲಿ ಕೂಡ ಗೀತಾ ದತ್ ಹಾಡಿದರು. ಆರ್ ಪಾರ್ ಸಿನಿಮಾ ಸೂಪರ್ ಹಿಟ್ ಆಯಿತು. (ಬಾಬೂಜಿ ಧೀರೆ ಚಲ್ನಾ ಹಾಡು ನೆನಪು ಮಾಡಿಕೊಳ್ಳಿ). ಆಗ ನಿರ್ಮಾಪಕ ಗುರುದತ್ ಅವರು ಲತಾ ಮಂಗೇಷ್ಕರ್ ಅವರನ್ನು ಕರೆಸಿ ಹಾಡಿಸಬಹುದಲ್ಲಾ ಎಂದು ನನಗೆ ವಿನಂತಿ ಮಾಡಿದರು. ನಾನು ಹೇಳಿದೆ – ನನ್ನ ಸಂಗೀತ ಸಂಯೋಜನೆಯ ಹಾಡುಗಳಿಗೆ ಲತಾ ಧ್ವನಿ ಸೂಟ್ ಆಗುವುದಿಲ್ಲ! ಗುರುದತ್ ಮುಂದೆ ಒತ್ತಾಯ ಮಾಡಲಿಲ್ಲ.
ಲತಾ ಹಾಡಿದ ಹಾಡುಗಳನ್ನು ರದ್ದು ಮಾಡುವ ದಿಟ್ಟತನ!
ಮುಂದೆ ನಾನು ‘ಮೆಹಬೂಬ್’ ಸಿನಿಮಾಕ್ಕೆ ಸಂಗೀತ ಕೊಡುವ ಅವಕಾಶ ಪಡೆದುಕೊಂಡೆ. ಆ ಚಿತ್ರಕ್ಕೆ ಇನ್ನೋರ್ವ ಸಂಗೀತ ನಿರ್ದೇಶಕ ರೋಷನ್ ಅವರು ಆಗಲೇ ಎರಡು ಹಾಡು ರೆಕಾರ್ಡಿಂಗ್ ಮಾಡಿ ಆಗಿತ್ತು. ಆ ಎರಡೂ ಹಾಡುಗಳನ್ನು ಲತಾಜಿ ಹಾಡಿದ್ದರು. ನಾನು ಆ ಎರಡೂ ಹಾಡುಗಳನ್ನು ರದ್ದು ಮಾಡಿ, ಹೊಸದಾಗಿ ರಾಗ ಸಂಯೋಜನೆ ಮಾಡಿ ಹೊಸ ಗಾಯಕರಿಂದ ಹಾಡಿಸಿದೆ. ಲತಾಜಿ ಇದರ ಬಗ್ಗೆ ಭಾರಿ ಬೀದಿ ರಂಪ ಮಾಡಿದರು. ಪತ್ರಿಕೆಗಳು ನನ್ನ ವಿರುದ್ಧ ಬರೆದವು. ನಾನು ಕ್ಯಾರೇ ಅನ್ನಲಿಲ್ಲ. ನನ್ನ ಹಠ ಎಂದಿಗೂ ಬಿಡಲಿಲ್ಲ ಅನ್ನುವುದು ನನ್ನ ಸಮಾಧಾನ.
ಲತಾ ಹೆಸರಿನ ದೊಡ್ಡ ಪ್ರಶಸ್ತಿ ನಿರಾಕರಿಸಿದರು ನಯ್ಯರ್ ಸಾಬ್!
ಮಧ್ಯಪ್ರದೇಶ ಸರಕಾರವು ಪ್ರತೀ ವರ್ಷ ಶ್ರೇಷ್ಟ ಸಂಗೀತಗಾರ ಅಥವಾ ಗಾಯಕರಿಗೆ ‘ಲತಾ ಮಂಗೇಷ್ಕರ್ ಸಮ್ಮಾನ್’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಆ ಪ್ರಶಸ್ತಿ ಒಂದು ವರ್ಷ ನನಗೆ ಘೋಷಣೆ ಆಯಿತು. ಆ ಪ್ರಶಸ್ತಿಯ ಮೊತ್ತ ತುಂಬಾ ದೊಡ್ಡದು ಇತ್ತು ಮತ್ತು ಆಗ ನನಗೆ ತೀವ್ರ ದುಡ್ಡಿನ ಕೊರತೆ ಇತ್ತು. ನಾನು ಪ್ರಶಸ್ತಿಯನ್ನು ನಿರಾಕರಣೆ ಮಾಡಿದೆ. ಸ್ವತಃ ಲತಾಜಿ ಫೋನ್ ಮಾಡಿ ಪ್ರಶಸ್ತಿ ಸ್ವೀಕಾರ ಮಾಡಲು ವಿನಂತಿ ಮಾಡಿದರು! ನಾನು ನಯವಾಗಿ ನಿರಾಕರಿಸಿದೆ!
ಲತಾಜಿ ನಯ್ಯರ್ ಅವರ ಬಗ್ಗೆ ಹೇಳಿದ ಮಾತು ಒಮ್ಮೆ ಕೇಳಿ
‘ ನನಗೆ ನಯ್ಯರ್ ಸರ್ ಅವರ ಬಗ್ಗೆ ತುಂಬಾ ಹೆಮ್ಮೆ ಮತ್ತು ಗೌರವ ಇದೆ. ಅವರು ಸಂಗೀತ ಕೊಟ್ಟ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ. ಆದರೆ ನಮ್ಮ ನಡುವೆ ಇದ್ದ ಇಗೋ ಕ್ಲ್ಯಾಶ್ ನಮ್ಮನ್ನು ಒಂದು ಮಾಡಲಿಲ್ಲ. ಅವರ ಸಂಗೀತ ನಿರ್ದೇಶನದ ಕೆಲವು ಹಾಡುಗಳನ್ನು ನಾನು ಹಾಡಬೇಕು ಎಂದು ನನಗೆ ಆಸೆ ಇತ್ತು! ಆದರೆ ದೈವೇಚ್ಛೆ ಅದಕ್ಕೆ ಅವಕಾಶ ಕೊಡಲಿಲ್ಲ ಅನ್ನುತ್ತಾರೆ ಲತಾ ಮಂಗೇಷ್ಕರ್.
ಮೊಹಮ್ಮದ್ ರಫಿ ವಿಷಯದಲ್ಲಿ ಕೂಡ ಹಾಗೇ ಆಗಿತ್ತು!
ಲೆಜೆಂಡ್ ಸಿಂಗರ್ ಮೊಹಮ್ಮದ್ ರಫಿ ಅವರ ಮೂಲಕ ನೂರಾರು ಅತ್ಯುತ್ತಮ ಹಾಡುಗಳನ್ನು ಪರಿಚಯಿಸಿದವರು ಇದೇ ನಯ್ಯರ್ ಸಾಬ್. ಆದರೆ ಒಮ್ಮೆ ಏನಾಯಿತೆಂದರೆ ರಫೀ ಅವರು ನಯ್ಯರ್ ಅವರ ನಿರ್ದೇಶನದ ಹಾಡು ಹಾಡಲು ಸ್ಟುಡಿಯೊಗೆ ಬರಲು ಒಪ್ಪಿಕೊಂಡಿದ್ದರು. ಎಲ್ಲವೂ ರೆಡಿ ಆಗಿತ್ತು. ಆದರೆ ಅಂದು ರಫೀ ಎರಡು ಘಂಟೆ ತಡವಾಗಿ ಬಂದರು. ನಯ್ಯರ್ ಸಾಬ್ ಭಾರೀ ಸಿಟ್ಟು ಮಾಡಿಕೊಂಡರು. ರಫೀ ಅವರ ಮುಂದೆಯೇ ರೆಕಾರ್ಡಿಂಗ್ ಇಂದು ರದ್ದಾಗಿದೆ ಎಂದು ಸಿಟ್ಟಿನಲ್ಲಿ ಹೇಳಿ ಎದ್ದು ಹೋದರು! ಮುಂದೆ ಎರಡು ಮೂರು ವರ್ಷ ನಯ್ಯರ್ ಸಾಬ್ ಹಾಡುಗಳನ್ನು ರಫೀ ಹಾಡಲೆ ಇಲ್ಲ. ಮುಂದೆ ನಯ್ಯರ್ ಅವರೇ ಕ್ಷಮೆ ಕೇಳಿ ರಫೀ ಅವರನ್ನು ಕರೆಸಿ ಮತ್ತೆ ಹಾಡಿಸಿದರು ಮತ್ತು ಅವೆಲ್ಲವೂ ಸೂಪರ್ ಹಿಟ್ ಆದವು.
ಲತಾ ಸಹೋದರಿ ಆಶಾ ಭೋಂಸ್ಲೆ ಅವರಿಂದ ಅತೀ ಹೆಚ್ಚು ಹಾಡುಗಳನ್ನು ನಯ್ಯರ್ ಹಾಡಿಸಿದ್ದಾರೆ. ಹೇಮಂತ್ ಕುಮಾರ್, ಗೀತಾ ದತ್ತ್, ನೂರ್ ಜಹಾನ್, ಉಷಾ ಮಂಗೇಷ್ಕರ್ ಮೊದಲಾದ ಶ್ರೇಷ್ಠ ಗಾಯಕರನ್ನು ತುಂಬಾ ಚಂದವಾಗಿ ಬಳಕೆ ಮಾಡಿಕೊಂಡ ಕೀರ್ತಿ ಅವರಿಗೆ ಸಲ್ಲಬೇಕು!
ಮಾಧುರ್ಯ ಮತ್ತು ದೇಸಿ ಸಂಗೀತದ ರಸಪಾಕ!
ನಯ್ಯರ್ ಸಾಬ್ ಹಾಡುಗಳೆಂದರೆ ಅವುಗಳು ಮಾಧುರ್ಯ ಮತ್ತು ದೇಸಿ ಸಂಗೀತದ ರಸಪಾಕ ಎಂದೇ ಹೇಳಬಹುದು. ಎಲ್ಲ ಸಂಗೀತ ವಾದ್ಯಗಳನ್ನು ಅವರು ತಮ್ಮ ಸಂಗೀತದಲ್ಲಿ ಉಪಯೋಗ ಮಾಡಿದ್ದಾರೆ. ತೆಂಗಿನ ಗೆರಟೆ, ಗೆಜ್ಜೆ, ಚಪ್ಪಾಳೆ, ಸಿಳ್ಳೆ ಎಲ್ಲವೂ ಅವರ ಹಾಡುಗಳಲ್ಲಿ ಬಳಕೆ ಆಗಿದೆ! ಆ ಕಾಲಕ್ಕೆ ಒಂದು ಸಿನೆಮಾದ ಸಂಗೀತ ನಿರ್ದೇಶನಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆದ ಮೊದಲ ಸಂಗೀತ ನಿರ್ದೇಶಕ ಅಂದರೆ ಅದು ನಯ್ಯರ್ ಸಾಬ್. ಸಿನಿಮಾ ಪೋಸ್ಟರ್ ಮತ್ತು ಹಾಡುಗಳ ಧ್ವನಿ ತಟ್ಟೆಯ ಮೇಲೆ ಫೋಟೊ ಮುದ್ರಿಸಲ್ಪಟ್ಟ ಮೊದಲ ಸ್ಟಾರ್ ನಿರ್ದೇಶಕ ಅಂದರೆ ಅದು ಕೂಡಾ ನಯ್ಯರ್ ಸಾಬ್!
ಕಾಶ್ಮೀರ್ ಕಲಿ ಚಿತ್ರದ ‘ ತಾರೀಫ್ ಕರೂ ಕ್ಯಾ ಇಸಕಿ!’ ಹಾಡು ಒಮ್ಮೆ ಕೇಳಿ ನೋಡಿ. ಅದನ್ನು ಅವರಿಗಾಗಿಯೇ ಸಾಹಿತಿ ಬರೆದ ಹಾಗೆ ನನಗೆ ಅನ್ನಿಸುತ್ತಿದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ದೊಡ್ಡವರ ಸಣ್ಣತನಗಳು: ಸೆಲೆಬ್ರಿಟಿ ಸ್ಥಾನ ಪಡೆದ ನಂತರ ನಮ್ಮ ವರ್ತನೆಗಳು ಹೇಗಿರಬೇಕು?