Site icon Vistara News

ರಾಜ ಮಾರ್ಗ ಅಂಕಣ | ಭೂಮಿಯ ಜೀವರಕ್ಷಕ ಪದರ ಕೊರೆದು ಹೋಗುತ್ತಿದೆ! ಓಝೋನ್‌ ರಕ್ಷಣೆ ನಮ್ಮೆಲ್ಲರ ಹೊಣೆ

ozone

ನಾವೆಲ್ಲರೂ ವಾಸ ಮಾಡುವ ಭೂಮಿ ಹೊಂದಿರುವ ನೈಸರ್ಗಿಕ ರಕ್ಷಣಾ ವ್ಯವಸ್ಥೆಯಲ್ಲಿ ಓಝೋನ್ ಪದರವು ಕೂಡ ಒಂದು. ಭೂಮಿಯಿಂದ 20 ಕಿಲೋಮೀಟರ್ ಎತ್ತರದಲ್ಲಿ ಭೂಮಿಯ ಸುತ್ತ ಆವರಿಸಿರುವ ತೆಳುವಾದ ಪದರವೇ ಓಝೋನ್ ಪದರ. ಅದು ಸೂರ್ಯನಿಂದ ಭೂಮಿಯ ಕಡೆಗೆ ಧಾವಿಸುವ ಅತ್ಯಂತ ಅಪಾಯಕಾರಿಯಾದ ನೇರಳಾತೀತ ಕಿರಣಗಳಿಂದ ಭೂಮಿಗೆ ರಕ್ಷಣೆ ಕೊಡುತ್ತದೆ. ಆ ಕಿರಣಗಳೇನಾದರೂ ಭೂಮಿಗೆ ನೇರವಾಗಿ ತಲುಪಿದರೆ ಭೂಮಿಯ ಮೇಲೆ ಇರುವ ಸಕಲ ಜೀವರಾಶಿಗಳು, ಸಸ್ಯಗಳನ್ನು ಸೇರಿಸಿ ಪೂರ್ತಿ ನಾಶವಾಗುತ್ತಿದ್ದವು.

ಓಝೋನ್ ಎಂದರೇನು?
ಆಮ್ಲಜನಕದ ಮೂರು ಪರಮಾಣುಗಳು ಸೇರಿ ಉಂಟಾದ ಧಾತುವೇ ಓಝೋನ್. ಅದನ್ನು ಸ್ವಿಸ್ ವಿಜ್ಞಾನಿ ಕ್ರಿಶ್ಚಿಯನ್ ಫ್ರೆಡ್ರಿಕ್ 1840ರಲ್ಲಿ ಕಂಡು ಹಿಡಿದರು. ಅದರ ಬಣ್ಣ ತಿಳಿ ನೀಲಿ. ನೀರಿನಲ್ಲಿ ಸ್ವಲ್ಪ ವಿಲೀನ ಆಗುತ್ತದೆ. ಒಂದು ವೇಳೆ ಅದು ಕುದಿಯುವ ಬಿಂದುವಿಗೆ ತಲುಪಿತು ಎಂದಾದರೆ ಅದು ಸ್ಫೋಟವಾಗಿ ಅಪಾಯಕಾರಿ ಮಟ್ಟವನ್ನು ತಲುಪುತ್ತದೆ. ಈಗ ಆಗಿರುವುದು ಹಾಗೆಯೇ! ಓಝೋನ್ ಪದರದ ನಾಶದಿಂದ ಆಗುತ್ತಿರುವ ಅಪಾಯವನ್ನು ವಿಜ್ಞಾನಿಗಳು ಈಗಾಗಲೇ ಜಗತ್ತಿನ ಮುಖಕ್ಕೆ ತೋರಿದ್ದಾರೆ. 1885ರ ವಿಜ್ಞಾನಿಗಳ ವಿಯೆನ್ನಾ ಸಮಾವೇಶ, 1887ರ ಮಾಂಟ್ರಿಯಲ್ ಸಮಾವೇಶ, 1990ರ ಲಂಡನ್ ಸಮಾವೇಶಗಳು ಈಗಾಗಲೇ ಈ ಅಪಾಯವನ್ನು ಗ್ರಹಿಸಿ ಜಗತ್ತನ್ನು ಎಚ್ಚರಿಸಿವೆ.

ಓಝೋನ್ ಪದರ ಸವೆಯಲು ಕಾರಣ ಏನು?
ಐದು ಕಾರಣಗಳಿಗೆ ಓಝೋನ್ ಪದರದ ಸವಕಳಿ ಆಗ್ತಾ ಇದೆ ಎಂದು ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ.
೧) ಕ್ಲೋರೋಫ್ಲೋರೋ ಕಾರ್ಬನ್ ( CFC ಅನಿಲ)- ನಾವು ಬಳಸುವ ಏರ್ ಕಂಡೀಷನರ್, ಕೂಲರ್,
ಫ್ರಿಜ್‌ಗಳಿಂದ ಈ ಅನಿಲ ಉತ್ಪಾದನೆ ಆಗುತ್ತದೆ.
೨) ಕಾರ್ಬನ್ ಟೆಟ್ರಾ ಕ್ಲೋರೈಡ್ – ನಾವು ಉಪಯೋಗಿಸುವ ಕೃತಕ ಬಣ್ಣಗಳು, ಕೀಟ ನಾಶಕಗಳು ಇತ್ಯಾದಿಗಳಿಂದ ಕಾರ್ಬನ್ ಟೆಟ್ರಾ ಕ್ಲೋರೈಡ್ ಉಂಟಾಗುತ್ತದೆ.
೩)ಹ್ಯಾಲೊಜೆನ್ – ನಾವು ಉಪಯೋಗ ಮಾಡುವ ಅಗ್ನಿಶಾಮಕ ಯಂತ್ರ ಮತ್ತು ನೌಕೆಗಳಲ್ಲಿ ಈ ಅನಿಲ ಬಿಡುಗಡೆ ಆಗುತ್ತದೆ.
೪) ಮಿಥೈಲ್ ಕ್ಲೋರೋಫಾರಂ – ಕಾರ್ಖಾನೆಗಳಲ್ಲಿ, ವಿಶೇಷವಾಗಿ ರಸಗೊಬ್ಬರದ ಕಾರ್ಖಾನೆಗಳಲ್ಲಿ ಈ ಅನಿಲ ಉತ್ಪಾದನೆ ಆಗಿ ಓಝೋನ್ ಪದರವನ್ನು ನಾಶ ಮಾಡುತ್ತದೆ.
೫) ಮಾನವನ ಅಂತರಿಕ್ಷ ನೌಕೆ ಹಾಗೂ ಕಾಡಿನ ನಾಶದಿಂದ ಕೂಡ ಓಝೋನ್ ಪದರವು ನಾಶ ಆಗುತ್ತದೆ.

ಓಝೋನ್ ಪದರ ನಾಶ ಆದರೆ ಮುಂದೆ ಹೇಗೆ?
ಓಝೋನ್ ಪದರದ ಸವಕಳಿಯ ಕಾರಣದಿಂದಾಗಿ ಸೂರ್ಯನಿಂದ ಬರುವ ನೇರಳಾತೀತ ಕಿರಣಗಳು ಭೂಮಿಯನ್ನು ನೇರವಾಗಿ ತಲುಪಿದರೆ ಏನಾಗಬಹುದು?
೧) ಸಸ್ಯಗಳ ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ.
೨) ಸಮುದ್ರದ ಒಳಗೆ ಇರುವ ಆಲ್ಗೆ ಎಂಬ ಜೀವಿಗಳು ಸಾವನ್ನು ಅಪ್ಪುತ್ತವೆ.
೩) ಆಹಾರ ಸರಪಣಿಗೆ ತೊಂದರೆ ಉಂಟಾಗುತ್ತದೆ.
೪) ಐತಿಹಾಸಿಕ ಸ್ಮಾರಕಗಳು ತಮ್ಮ ನೈಸರ್ಗಿಕ ಬಣ್ಣ ಕಳೆದುಕೊಳ್ಳುತ್ತವೆ.
೫) ಮಾನವರಲ್ಲಿ ಚರ್ಮದ ಕ್ಯಾನ್ಸರ್ ಉಂಟಾಗುತ್ತದೆ.
೬) ವಂಶವಾಹಿಗಳಲ್ಲಿ ಏರುಪೇರು ಉಂಟಾಗುತ್ತದೆ ಮತ್ತು ವಿಕಲತೆ ಇರುವ ಜನಾಂಗದ ಹುಟ್ಟಿಗೆ ಕಾರಣ ಆಗುತ್ತದೆ.
೭) ಪ್ರಾಣಿಗಳ ದೇಹದೊಳಗಿನ ಚಯಾಪಚಯ ಕ್ರಿಯೆಗಳು ( Metabolic processes) ಏರುಪೇರು ಆಗುತ್ತವೆ.

ನಾವು ತಕ್ಷಣ ಮಾಡಬೇಕಾದದ್ದು ಏನು?
೧) ಏರ್ ಕಂಡೀಷನರ್ ಮತ್ತು ಫ್ರಿಜ್ ಬಳಕೆ ತಕ್ಷಣ ಕಡಿಮೆ ಮಾಡುವುದು.
೨) ಡಿಯೋಡರೆಂಟ್, ಹೇರ್ ಸ್ಪ್ರೇ, ರಾಸಾಯನಿಕ ಬಣ್ಣಗಳು, ಡೈಗಳು ಇವುಗಳ ಬಳಕೆಯನ್ನು ಕಡಿಮೆ ಮಾಡುವುದು.
೩)ಥರ್ಮೋಕೊಲ್ ಉತ್ಪಾದನೆ ಬಳಕೆ ಕಡಿಮೆ ಮಾಡುವುದು.
೪) ಕೃತಕ ಪರಿಮಳ ದೃವ್ಯ ಮತ್ತು ನೋವು ನಿವಾರಕ ಸ್ಪ್ರೇಗಳಲ್ಲಿ CFC ಬಿಡುಗಡೆ ಆಗುತ್ತದೆ. ಅವುಗಳ ಬಳಕೆ ಕಡಿಮೆ ಮಾಡುವುದು.
೫) ಪೆಟ್ರೋಲಿಯಂ ಮತ್ತು ಕಲ್ಲಿದ್ದಲು ಆಧಾರಿತ ಕಾರ್ಖಾನೆಗಳ ಹೊಗೆಯಿಂದ CFC ಬಿಡುಗಡೆ ಆಗುತ್ತದೆ. ಅವುಗಳನ್ನು ನಿಯಂತ್ರಣ ಮಾಡುವುದು.
೬) ಭೂಮಿಯ ಹಸಿರನ್ನು ಹೆಚ್ಚಿಸುವುದು, ಗಿಡ ಮರಗಳನ್ನು ಹೆಚ್ಚಿಸುವುದು ಇವುಗಳಿಂದ ಓಝೋನ್ ಸವೆತವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣ ಮಾಡಬಹುದು.

ಓಝೋನ್ ಪದರದ ಸವೆತವು ನಮ್ಮ ಮನುಕುಲದ ನಾಶಕ್ಕೆ ಕಾರಣ ಆಗುವುದರಿಂದ ಅದನ್ನು ತಡೆಯುವುದು ನಮ್ಮೆಲ್ಲರ ಹೊಣೆ. ಅಲ್ವೇ?

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಗೊಂಬೆ ಹೇಳುತೈತೆ..: ಹಾಡುತ್ತಲೇ ಸಾವಿರಾರು ಮಕ್ಕಳ ಹೃದಯಕ್ಕೆ ಜೀವ ತುಂಬಿದ ಪಲಕ್‌ ಮುಚ್ಚಲ್‌ ಕತೆ!

Exit mobile version