ಈಗಿನ ಸಾಕಷ್ಟು ಮಾಸ್ ಹೀರೋಗಳು ಹತ್ತಿಪ್ಪತ್ತು ವರ್ಷಗಳ ಅವಧಿಯಲ್ಲಿ 100-120 ಸಿನಿಮಾಗಳಲ್ಲಿ ಅಭಿನಯ ಮಾಡಿ ಅಷ್ಟಕ್ಕೆ ಸುಸ್ತು ಹೊಡೆಯುತ್ತಾರೆ! ತಮ್ಮ ವರ್ಚಸ್ಸನ್ನು ಕಳೆದುಕೊಂಡು ಮೂಲೆಗುಂಪಾಗುತ್ತಾರೆ. ಆದರೆ ಈ ಮಲಯಾಳಂ ಹೀರೋ ಅಭಿನಯ ಮಾಡಿದ್ದು ಬರೋಬ್ಬರಿ 700ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ! ಅದರಲ್ಲಿ ಹೀರೋ ಆಗಿ ಅಭಿನಯ ಮಾಡಿದ್ದು 570 ಸಿನಿಮಾಗಳಲ್ಲಿ!
1952ರಿಂದ 1985ರವರೆಗೆ ಅಂದಾಜು ಮೂವತ್ತಮೂರು ವರ್ಷಗಳ ಅವಧಿಯಲ್ಲಿ ಆತನಿಗೆ ಮಲಯಾಳಂ ಸಿನಿಮಾ ರಂಗದಲ್ಲಿ ಸ್ಪರ್ಧೆಯೇ ಇರಲಿಲ್ಲ!
ಆತ ಪ್ರೇಮ್ ನಝೀರ್. ಮಲಯಾಳಂ ಚಿತ್ರರಂಗದ ‘ಎವರ್ ಗ್ರೀನ್ ಹೀರೋ’ ಎಂದು ಕರೆಸಿಕೊಂಡವನು. ಆತ ಕ್ರಿಯೇಟ್ ಮಾಡಿದ್ದು ಹತ್ತಾರು ಗಿನ್ನೆಸ್ ದಾಖಲೆಗಳನ್ನು! ಆತ ಅಭಿನಯ ಮಾಡಿದ ಸಿನಿಮಾಗಳ ಸಕ್ಸಸ್ ರೇಟ್ ಕೂಡ 80% ಆಗಿತ್ತು.
ಮಲಯಾಳಂ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಮೆರೆದ ಪ್ರೇಮ್ ನಝೀರ್ ಕಾಲೇಜು ದಿನಗಳಲ್ಲಿ ನಾಟಕ ಕಲಾವಿದ ಆಗಿ ಮಿಂಚಿದವರು. 1952ರಲ್ಲಿ ‘ಮರು ಮಕಲ್ ‘ಎಂಬ ಸಿನಿಮಾದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಅವರು 1985ರಲ್ಲಿ ‘ವೆಲ್ಲಾನಿಕ ಪಟ್ಟಣಮ್’ ಮೂಲಕ ತನ್ನ ಚಿತ್ರಗಳ ಪ್ರಯಾಣ ಮುಗಿಸಿದರು.
ಅವರ ಚಿತ್ರ ಜೀವನದಲ್ಲಿ ಅವರು ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಸಾಮಾಜಿಕ, ಪತ್ತೆದಾರಿಕೆಯ, ಪೌರಾಣಿಕ, ಐತಿಹಾಸಿಕ, ಕಲಾತ್ಮಕ, ಹಾಸ್ಯ, ಕಥಾ ಪ್ರಧಾನ ಮೊದಲಾದ ಎಲ್ಲ ಜಾನರಿನ ಸಿನಿಮಾಗಳಲ್ಲಿ ಅವರು ಅಭಿನಯ ಮಾಡಿದ್ದರು. ದಿನಕ್ಕೆ ಮೂರು ಮೂರು ಶಿಫ್ಟ್ ಗಳಲ್ಲಿ ಅಭಿನಯ ಮಾಡಿದರೂ ಅವರು ಒಂದಿಷ್ಟು ದಣಿವು ಇಲ್ಲದೆ ಮತ್ತೆ ಬಂದು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರು.ಹಾಗೆ ಅವರು ಚಿರಂಜೀವಿ ನಟ! ವಿಶ್ವ ದಾಖಲೆಯ ಮೇರು ನಟ!
ಅವರ ಗಿನ್ನೆಸ್ ದಾಖಲೆಗಳ ವಿವರ ನೋಡಿದರೆ ನೀವು ಖಂಡಿತ ಅಚ್ಚರಿ ಪಡುತ್ತೀರಿ.
೧) ಒಟ್ಟು ಏಳುನೂರು ಸಿನಿಮಾಗಳಲ್ಲಿ ಅಭಿನಯ. ಅದರಲ್ಲೂ 570 ಸಿನೆಮಾಗಳಲ್ಲಿ ಹೀರೋ! ಎರಡೂ ದಾಖಲೆಗಳು.
೨) ತಮ್ಮ ಚಿತ್ರ ಜೀವನದಲ್ಲಿ 80 ನಾಯಕಿಯರ ಜೊತೆಗೆ ಅಭಿನಯ ಕೂಡ ಗಿನ್ನೆಸ್ ದಾಖಲೆ!
೩) ಖ್ಯಾತ ನಟಿ ಶೀಲಾ ಜೊತೆಗೆ 130 ಸಿನಿಮಾಗಳಲ್ಲಿ ಹೀರೋ! ಈ ದಾಖಲೆ ಮುಂದೆ ಕೂಡ ಯಾರೂ ಮುರಿಯುವ ಹಾಗೆ ಇಲ್ಲ!
೪) ಖ್ಯಾತ ಹಾಸ್ಯನಟ ಆಡೂರ್ ಬಾಸಿ ಜೊತೆಗೆ ನೂರಕ್ಕಿಂತ ಹೆಚ್ಚು ಸಿನಿಮಾಗಳು!
೫) 1973ರಲ್ಲಿ ಮೂವತ್ತು ಸಿನಿಮಾ ಬಿಡುಗಡೆ, 1977ರಲ್ಲಿ ಮತ್ತೆ ಮೂವತ್ತು, 1979ರಲ್ಲಿ ಬರೋಬ್ಬರಿ ಮೂವತ್ತೊಂಬತ್ತು ಸಿನಿಮಾಗಳು! ಎಲ್ಲವೂ ದಾಖಲೆ.
೬) ಒಟ್ಟು 40 ಸಿನಿಮಾಗಳಲ್ಲಿ ದ್ವಿ ಪಾತ್ರದ ನಿರ್ವಹಣೆಯೂ ದಾಖಲೆ!
ಇಷ್ಟೆಲ್ಲ ದಾಖಲೆಗಳನ್ನು ಸೃಷ್ಟಿಸಿದ ಪ್ರೇಮ್ ನಝೀರ್ 1989ರಲ್ಲಿ ನಿಧನರಾಗುವ ದಿನ ಹೇಳಿದ ಮಾತು ಇದು – ನನ್ನ ಇನ್ನೂ ಕೆಲವು ಕನಸಿನ ಪಾತ್ರಗಳು ಬಾಕಿ ಆದವು! ದೇವರು ಇನ್ನೊಂದು ಜನ್ಮ ಕೊಟ್ಟರೆ ಆ ಕನಸುಗಳನ್ನು ಪೂರ್ತಿ ಮಾಡಿಯೇ ಮಾಡುತ್ತೇನೆ!
ಇದನ್ನೂ ಓದಿ| ರಾಜ ಮಾರ್ಗ ಅಂಕಣ| ಧೀರೂಭಾಯಿ ಅಂಬಾನಿ ಮಾನವೀಯ ಮುಖಗಳು, ಜವಾನನಿಗೂ ಬಹುವಚನದ ಗೌರವ