Site icon Vistara News

ರಾಜ ಮಾರ್ಗ ಅಂಕಣ : ಪುಣ್ಯಕೋಟಿ ಎಂಬ ಗೋವು, ಹುಲಿ ಮತ್ತು ಮುಗ್ಧತೆ! ಆ ಹಸಿದ ಹೆಬ್ಬುಲಿ ಬೆಟ್ಟದಿಂದ ಹಾರಿ ಸತ್ತಿದ್ದು ಸರೀನಾ?

punyakoti

#image_title

ಬಾಲ್ಯದಲ್ಲಿ ನಮ್ಮೆಲ್ಲರ ಭಾವಕೋಶದಲ್ಲಿ ಕೂಡ ಭದ್ರವಾಗಿ ಕೂತಿರುವ ಕಥೆ ಎಂದರೆ ಅದು ಪುಣ್ಯಕೋಟಿಯ ಕಥೆ! ಅದನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ. ‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂದು ಹೇಳಿದ, ನುಡಿದಂತೆ ನಡೆದ ಪುಣ್ಯಕೋಟಿ ಎಂಬ ಗೋವಿನ ಮುಗ್ಧತೆಯು ನನಗೆ ಇಂದಿಗೂ ವಿಸ್ಮಯವೇ ಆಗಿದೆ!

ನಾನು ಅದರ ಕಥೆಯನ್ನು ಮತ್ತೆ ನಿಮಗೆ ಹೇಳಲು ಹೋಗುವುದಿಲ್ಲ. ಯಾಕೆಂದರೆ ಆ ಕಥೆಯು ಪ್ರತಿಯೊಬ್ಬರಿಗೂ ನೆನಪಿದೆ. ಭಾವನಾತ್ಮಕವಾಗಿ ಕಲಿತ ಅಂಶಗಳು ಎಂದಿಗೂ ಮರೆತುಹೋಗುವುದಿಲ್ಲ.

ಸತ್ಯಮೇವ ಜಯತೇ…

ಮಂಡೂಕ ಉಪನಿಷತ್ತಿನ ‘ಸತ್ಯಮೇವ ಜಯತೇ’ ಎಂಬ ಆರ್ಷೇಯ ವಾಕ್ಯವನ್ನು ನಮ್ಮ ರಾಷ್ಟ್ರದ ಘೋಷವಾಕ್ಯವನ್ನಾಗಿ ಮಾಡಲು ಪುಣ್ಯಕೋಟಿಯ ಕಥೆಯೇ ಪ್ರೇರಣೆ ಆಗಿರಬಹುದು. ಆದರೆ, ಅದೇ ಉಪನಿಷತ್ ವಾಕ್ಯದಲ್ಲಿ ಸತ್ಯಮೇವ ಜಯತೇ, ನಾನೃತಂ ( ಸತ್ಯವೇ ಗೆಲ್ಲುತ್ತದೆ, ಸುಳ್ಳಲ್ಲ) ಎಂಬ ಪೂರ್ಣ ಪಾಠವು ದೊರೆಯುತ್ತದೆ! ಈ ಪೂರ್ಣ ಪಾಠ ಬಂದಿದ್ದರೆ ನಮ್ಮ ಘೋಷವಾಕ್ಯವು ಇನ್ನೂ ಹೆಚ್ಚು ಪರಿಣಾಮಕಾರಿ ಆಗುತ್ತಿತ್ತು ಎಂದು ನನಗೆ ಅನ್ನಿಸುತ್ತದೆ. ಇರಲಿ.
ಈಗ ಮತ್ತೆ ಪುಣ್ಯಕೋಟಿ ಎಂಬ ಗೋವಿನ ಕತೆಗೆ ಬರೋಣ.

ಗೋವು ಅದ್ಭುತವೇ ಹೌದು! ಆದರೆ ಹುಲಿ…?

ಪುಣ್ಯಕೋಟಿ ತನ್ನ ಸತ್ಯ ವಾಕ್ಯವನ್ನು ಉಳಿಸಿಕೊಳ್ಳಲು ಹುಲಿಯ ಮುಂದೆ ಹೋಗಿ ನಿಂತು
‘ಖಂಡವಿದೆಕೋ, ಮಾಂಸವಿದೆಕೋ’ ಎಂದು ತಲೆತಗ್ಗಿಸಿ ನಿಂತಿತು. ಅದಕ್ಕಿಂತ ಮೊದಲು ಅದು ತನ್ನ ಕರುವಿಗೆ ಹೊಟ್ಟೆ ತುಂಬಾ ಹಾಲುಣಿಸಿ, ಅದರ ಹೊಣೆಯನ್ನು ತನ್ನ ಓರಗೆಯವರಿಗೆ ಪ್ರೀತಿಯಿಂದ ಹೊರಿಸಿ ಕರ್ತವ್ಯ ಪ್ರಜ್ಞೆಯನ್ನು ಮೆರೆದಿತ್ತು. ನಂತರ ಕೊಟ್ಟ ಮಾತಿನಂತೆ ಹುಲಿಯ ಮುಂದೆ ಬಂದು ನಿಂತಿತು.

ಹಸಿದ ಹುಲಿಯು ತನ್ನ ಬೇಟೆಯನ್ನು ಕೊಂದು ತಿನ್ನುವುದು ಅದರ ಧರ್ಮ. ಹಿಂದೆ ಮುಂದೆ ನೋಡದೆ ಆ ಹುಲಿಯು ಆ ಗೋವಿನ ಮೇಲೆ ಎರಗಿ ತಿಂದು ತೇಗಬಹುದಿತ್ತು! ಆದರೆ ಆ ಹುಲಿ ತನ್ನ ಬಗ್ಗೆ ತಾನೇ ಬೇಸರ ಮಾಡಿಕೊಳ್ಳುತ್ತದೆ. ದೇವತೆಯಾದ ನಿನ್ನನ್ನು ಕೊಂದು ತಿನ್ನುವ ಯೋಚನೆ ಮಾಡಿದೆನಲ್ಲ ಎಂದು ತಪ್ಪಿತಸ್ಥ ಮನೋಭಾವಕ್ಕೆ ಹೋಗುತ್ತದೆ! ಕನ್ಯೆ ಇವಳನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎಂದು ದುಃಖ ಪಡುತ್ತದೆ. ಅದು ಗೋವಿನ ಕ್ಷಮೆ ಕೇಳಿ ಗುಡ್ಡದಿಂದ ಕೆಳಗೆ ಹಾರಿ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತದೆ! ಆ ಕ್ಷಣಕ್ಕೆ ನನಗೆ ಮೌಲ್ಯದಲ್ಲಿ ಹುಲಿಯು ಗೋವಿಗಿಂತ ಮೇಲೆದ್ದು ಕಾಣುತ್ತದೆ! ಪುಣ್ಯಕೋಟಿಯ ಮುಗ್ಧತೆ, ಸತ್ಯಸಂಧತೆ ಅದ್ಭುತಗಳೇ ಆಗಿವೆ. ಆದರೆ ಆ ಹುಲಿಯ ಹೆಂಗರುಳು, ಪಾಪ ಪ್ರಜ್ಞೆ, ಕೊನೆಗೆ ಮಾಡಿಕೊಂಡ ಪ್ರಾಯಶ್ಚಿತ್ತ ಗ್ರೇಟ್ ಹೌದಲ್ಲ? ಆ ಕ್ಷಣಕ್ಕೆ ಅದು ನನಗೆ ‘ಹುಲಿಯ ಹಾಡು’ ಎಂದನ್ನಿಸಿತ್ತು! ಬೇಟೆಯಾಡುವ ತನ್ನ ಸಹಜ ಧರ್ಮವನ್ನು ಮರೆತು ಅದು ಆಹಾರ ಮತ್ತು ಪ್ರಾಣ ಎರಡನ್ನೂ ತ್ಯಾಗ ಮಾಡಿತು ಎಂದರೆ ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ ಆದದ್ದು ಸರಿ ಎಂದು ನಾನು ಕಾಲೇಜು ದಿನದಲ್ಲಿ ವಾದ ಮಾಡುತ್ತಿದ್ದೆ! ಇರಲಿ.

ಮುಗ್ಧತೆ ದೇವರ ಕೊಡುಗೆ ಹೌದು, ಆದರೆ…?

ಮುಗ್ಧತೆಯು ದೇವರ ಕೊಡುಗೆ ಎಂದು ಇಂಗ್ಲಿಷ್ ಕವಿ ಬ್ಲೇಕ್ ಹೇಳುತ್ತಾನೆ. ಅಬ್ದುಲ್ ಕಲಾಂ ನಮಗೆ ಇಷ್ಟವಾದದ್ದು ಅದೇ ಕಾರಣಕ್ಕೆ! ಸಾಲುಮರದ ತಿಮ್ಮಕ್ಕ, ಶಾಲೆ ಕಟ್ಟಿದ ಹರೇಕಳ ಹಾಜಬ್ಬ…ಮೊದಲಾದವರು ಲೆಜೆಂಡ್ ಆದದ್ದು ಅದೇ ಮುಗ್ಧತೆಯಿಂದ! ಆದರೆ ಯೋಚಿಸಿ ಸುತ್ತಮುತ್ತ ಹಿಪಾಕ್ರಸಿ, ಮುಖವಾಡ, ನಯವಂಚಕತನ ತುಂಬಿದ ಈ ಜಗತ್ತಿನಲ್ಲಿ ಮುಗ್ಧತೆ ನಿಮಗೆ, ನಮಗೆ ಶಾಪವೇ ಆಗಬಹುದು! ನಿಮ್ಮ ಒಳ್ಳೆತನ, ಮುಗ್ಧತೆಗಳನ್ನು ಹುರಿದು ಮುಕ್ಕಲು ವ್ಯಕ್ತಿಗಳು ನಿಮ್ಮ ಸುತ್ತಮುತ್ತ ಹೊಂಚುಹಾಕಿ ನಿಂತಿರುವಾಗ ನಮ್ಮ, ನಿಮ್ಮ ಮುಗ್ಧತೆಗಳು ಖಂಡಿತವಾಗಿ ಹೊರೆ ಆಗಬಹುದು!

ಮುಗ್ಧತೆ ಬೇಡ ಎಂದು ನಾನು ಖಂಡಿತವಾಗಿ ಹೇಳುವುದಿಲ್ಲ. ಆದರೆ ಯಾರು ನಮ್ಮ ಭಾವನೆಗಳನ್ನು ಮತ್ತು ಮುಗ್ಧತೆಗಳನ್ನು ಗೌರವಿಸುತ್ತಾರೆಯೋ ಅವರ ಜೊತೆಗೆ ಮುಗ್ಧತೆಯಿಂದಲೇ ವ್ಯವಹಾರ ಮಾಡಬಹುದು. ಆದರೆ, ಕ್ರೌರ್ಯ, ಮೋಸ ತುಂಬಿರುವ ಜನರ ಮುಂದೆ ಹೋಗಿ ನನ್ನನ್ನು ಕೊಂದು ಬಿಡು ಎನ್ನುವ ಗೋವಿನ ಮುಗ್ಧತೆಯು ಖಂಡಿತವಾಗಿಯೂ ವರ್ಕ್ ಆಗೋದಿಲ್ಲ! ನಾವು ಪ್ರಾಕ್ಟಿಕಲ್ ಆಗಿ ಬದುಕಲು ಕಲಿಯದಿದ್ದರೆ ಯಾರೂ ನಮ್ಮ ನೆರವಿಗೆ ಬರುವುದಿಲ್ಲ.

ಯಾರಾದರೂ ನಮ್ಮನ್ನು ದಬ್ಬಾಳಿಕೆ ಮಾಡುತ್ತಿದ್ದಾರೆ ಅಂದರೆ ಅದಕ್ಕೆ ಅವರು ಕಾರಣ ಆಗುವುದಿಲ್ಲ. ಅದಕ್ಕೆ ನಮ್ಮ ಮುಗ್ಧತೆ ಮತ್ತು ಅತಿಯಾದ ವಿಧೇಯತೆಗಳೇ ಕಾರಣ ಆಗಿರಬಹುದು. ಆಗ ಅವರನ್ನು ಝಾಡಿಸಿ ಮುಂದೆ ಹೋಗುವ ಗೋವು ನೀವಾದರೆ ಮಾತ್ರ ಗೆಲ್ಲುತ್ತೀರಿ. ಪ್ರಾಕ್ಟಿಕಲ್ ಆಗಿ ಬದುಕುವುದನ್ನು ಕಲಿಯುವತನಕ ನಮ್ಮ ಮುಗ್ಧತೆಗೆ ಯಾವ ಬೆಲೆಯೂ ಇರುವುದಿಲ್ಲ!

ಅಲ್ಲಿಗೆ ಮೌಲ್ಯಗಳು ಬದಲಾಗಿ ಹೋದವೇ ಎಂದು ಯೋಚಿಸಬೇಡಿ. ಮೌಲ್ಯಗಳು ಪುಣ್ಯಕೋಟಿಯ ಸತ್ಯನಿಷ್ಠೆಯ ಹಾಗೆ ಸಾಯುವುದೇ ಇಲ್ಲ! ಆದರೆ ನಮಗೆ ತನ್ನ ತಪ್ಪನ್ನು ಒಪ್ಪಿಕೊಂಡು ಗೋವಿನ ಜೊತೆಗೆ ಗೆಳೆತನ ಮಾಡಿ ಬದುಕುವ ಹುಲಿ ಬೇಕು. ಗುಡ್ಡದಿಂದ ಕೆಳಗೆ ಹಾರಿ ಸಾಯುವ ಹುಲಿ ಬೇಡ! ಏನಂತೀರಿ?

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಜಿ.ಆರ್.‌ ವಿಶ್ವನಾಥ್‌ ಆ ನಿರ್ಧಾರದಿಂದ ಭಾರತ ಸೋತಿತ್ತು, ಆದರೆ, ಕ್ರಿಕೆಟ್‌ ಗೆದ್ದಿತ್ತು!

Exit mobile version