Site icon Vistara News

ರಾಜ ಮಾರ್ಗ ಅಂಕಣ : ಸ್ವದೇಶಿ ಬ್ರಾಂಡ್‌ ರಾಯಭಾರಿ; ಪೆಪ್ಸಿ, ಕೋಕ್ ಬೇಡ; ಎಳನೀರು, ಮಜ್ಜಿಗೆ ಕುಡೀರಿ ಅಂತಿದ್ದರು ರಾಜೀವ್‌ ದೀಕ್ಷಿತ್

Rajeev dixit

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಾಂಧೀಜಿಯವರು ಆರಂಭ ಮಾಡಿದ ಬಹಳ ದೊಡ್ಡ ಅಭಿಯಾನ ಅಂದರೆ ಸ್ವದೇಶೀ ಅಭಿಯಾನ. ಭಾರತದ್ದೇ ಉತ್ಪನ್ನಗಳನ್ನು ಭಾರತದಲ್ಲಿ ಬಳಕೆ ಮಾಡಿದರೆ ಭಾರತದ ದುಡ್ಡನ್ನು ಭಾರತದಲ್ಲಿ ಉಳಿಸಬಹುದು ಎನ್ನುವುದು ಅವರ ದೊಡ್ಡ ಆಶಯವಾಗಿತ್ತು. ಅದಕ್ಕೆ ಪೂರಕವಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಟ್ಟೆಗಳನ್ನು ಅವರು ಬೀದಿಗೆ ತಂದು ಕಾರ್ಯಕರ್ತರ ಜೊತೆಯಲ್ಲಿ ಸುಡುವ ಕೆಲಸ ಮಾಡಿದರು. ಅದಕ್ಕೆ ಪರ್ಯಾಯವಾಗಿ ಭಾರತದ್ದೇ ಆದ ಖಾದಿಯನ್ನು ಅವರು ಜನಪ್ರಿಯ ಮಾಡಿದರು. ತಾವೇ ತಕಲಿಯಿಂದ ನೂಲು ತೆಗೆದು ಖಾದಿ ಬಟ್ಟೆ ಮಾಡಿ ಅದನ್ನೇ ತೊಟ್ಟರು. ಕಾಂಗ್ರೆಸ್ ನಾಯಕರೂ ಖಾದಿ ಬಟ್ಟೆ ತೊಟ್ಟು ಪೂರ್ಣವಾಗಿ ಸ್ವದೇಶಿ ಆದರು. ಈ ಅಭಿಯಾನವು ಆ ಕಾಲಕ್ಕೆ ಒಂದು ಹಂತಕ್ಕೆ ಯಶಸ್ವೀ ಆಯಿತು.

ಆದರೆ ಮುಂದೆ ಬಂದ ಗ್ಯಾಟ್ ಒಪ್ಪಂದ?

ಬ್ರಿಟಿಷರೇನೋ ಭಾರತ ಬಿಟ್ಟು ಹೋದರು. ಆದರೆ ಮುಂದೆ ಪಿ.ವಿ ನರಸಿಂಹ ರಾವ್ ಸರಕಾರವು 1990ರ ದಶಕದಲ್ಲಿ ಗ್ಯಾಟ್ ಒಪ್ಪಂದಕ್ಕೆ ಸಹಿ ಮಾಡುವುದರ ಮೂಲಕ ನೂರಾರು ವಿದೇಶಿ ಕಂಪೆನಿಗಳನ್ನು ಭಾರತಕ್ಕೆ ರತ್ನಗಂಬಳಿ ಹಾಕಿ ಸ್ವಾಗತ ಮಾಡಿತು! ಇದರಿಂದ ಮತ್ತೆ ಭಾರತವು ವಿದೇಶಿ ಕಂಪನಿಗಳ ಬಹುದೊಡ್ಡ ಮಾರುಕಟ್ಟೆ ಆಯಿತು! ಭಾರತದ ದುಡ್ಡು ವಿದೇಶಿ ವಿನಿಮಯದ ಹೆಸರಿನಲ್ಲಿ ದೇಶದ ಹೊರಗೆ ಹರಿಯಲು ತೊಡಗಿತು. ಆಗ ಅದನ್ನು ಪ್ರತಿಭಟನೆ ಮಾಡಲು ಸಿಡಿದು ನಿಂತವರು ರಾಜೀವ್ ದೀಕ್ಷಿತ್ (೧೯೬೭-೨೦೧೦) ಎಂಬ ಹುಟ್ಟು ಹೋರಾಟಗಾರ!

ಅದೊಂದು ರಾಷ್ಟ್ರವ್ಯಾಪಿ ಅಭಿಯಾನ

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಭಾರತವನ್ನು ಸುತ್ತಿದ ಈ ಶ್ರೇಷ್ಠವಾದ ಭಾಷಣಕಾರ ವಿದೇಶಿ ಕಂಪೆನಿಗಳ ವಿರುದ್ಧ ರಣಕಹಳೆಯನ್ನು ಮೊಳಗಿಸಿದ್ದರು. ಅವರ ವೀರಾವೇಶದ ಭಾಷಣಗಳು ಭಾರತೀಯರಲ್ಲಿ ಸ್ವದೇಶೀ ಜಾಗರಣ ಮಾಡಿದ್ದು ಮಾತ್ರವಲ್ಲ ವಿದೇಶಿ ಕಂಪೆನಿಗಳಿಗೆ ನಡುಕ ಹುಟ್ಟಿಸಿದ್ದು ಸುಳ್ಳಲ್ಲ. ಅವರ ಪ್ರಬಲವಾದ ಅಭಿಯಾನವು ದೇಶದಾದ್ಯಂತ ಕಾಡ್ಗಿಚ್ಚಿನ ಹಾಗೆ ದೇಶದಲ್ಲಿ ಹರಡಲು ಆರಂಭ ಆಯಿತು ಅನ್ನುವಾಗ ಅತೀ ಸಣ್ಣ ಪ್ರಾಯದಲ್ಲೇ ಅವರು ನಿಧನರಾದರು. ಅವರ ಅಸಹಜ ಸಾವಿನ ಹಿಂದೆ ವಿದೇಶೀ ಕಂಪೆನಿಗಳ ಕೈವಾಡ ಇತ್ತು ಎಂದು ಭಾರತೀಯ ಮಾಧ್ಯಮಗಳು ಬರೆದವು. ಅದನ್ನು ಈಗಲೂ ನಂಬುವ ಕೋಟಿ ಭಾರತೀಯರು ಇದ್ದಾರೆ. ರಾಜೀವ್ ದೀಕ್ಷಿತ್ ಅವರ ಮರಣದ ನಂತರ ಈ ಅಭಿಯಾನವನ್ನು ಯಾರೂ ಮುಂದುವರಿಸಿಕೊಂಡು ಹೋಗಲಿಲ್ಲ ಅನ್ನುವುದು ದುರಂತ.

ಯಾವುದು ಸ್ವದೇಶೀ, ಯಾವುದು ವಿದೇಶೀ?

ನಾವು ಬೆಳಿಗ್ಗೆ ಉಪಯೋಗ ಮಾಡುವ ಟೂತ್ ಪೇಸ್ಟ್, ಬ್ರಷ್, ಟಾಯ್ಲೆಟ್ ಕ್ಲೀನರ್‌ಗಳಿಂದ ಹಿಡಿದು ನಾವು ಕುಡಿಯುವ ಪಾನೀಯಗಳು, ಬಳಸುವ ಮೌತ್ ಫ್ರೆಶನರ್, ಶೇವಿಂಗ್ ಕ್ರೀಮ್, ಧರಿಸುವ ಬಟ್ಟೆಗಳು, ಕಾಲಿಗೆ ಹಾಕುವ ಚಪ್ಪಲಿ, ಪ್ರತೀ ದಿನವೂ ಉಪಯೋಗಿಸುವ ಇಲೆಕ್ಟ್ರಾನಿಕ್ ವಸ್ತುಗಳಲ್ಲಿ 60% ವಸ್ತುಗಳು ವಿದೇಶಿ ಆಗಿವೆ. ವಿದೇಶಿ ಕಂಪೆನಿಗಳನ್ನು ಮತ್ತು ಬಹುರಾಷ್ಟ್ರೀಯ ಕಂಪೆನಿಗಳನ್ನು ರಾಜೀವ್ ದೀಕ್ಷಿತ್ ಅವರು ಭಸ್ಮಾಸುರನಿಗೆ ಹೋಲಿಸುತ್ತಾರೆ. ಅವುಗಳನ್ನು ಖರೀದಿ ಮಾಡುವುದರಿಂದ ನಾವು ಕಷ್ಟಪಟ್ಟು ಸಂಪಾದನೆ ಮಾಡಿದ ದುಡ್ಡು ವಿದೇಶಿ ವಿನಿಮಯದ ರೂಪದಲ್ಲಿ ವಿದೇಶಕ್ಕೆ ಹೋಗುತ್ತದೆ. ಭಾರತವು ವಿದೇಶಿ ಕಂಪೆನಿಗಳಿಗೆ ಅತಿ ದೊಡ್ಡ ಮಾರ್ಕೆಟ್ ಆಗಿ ಆಗಿದೆ. ಅದಕ್ಕೆ ರಾಜೀವ್ ದೀಕ್ಷಿತ್ ಅವರು ಯಾವ ವಸ್ತು ಸ್ವದೇಶಿ ಮತ್ತು ಯಾವುದು ವಿದೇಶಿ ಎಂದು ಸರಿಯಾಗಿ ವರ್ಗೀಕರಣ ಮಾಡಿ ಹಲವಾರು ಪುಸ್ತಕಗಳನ್ನು ಬರೆದರು. ವಿಡಿಯೊಗಳನ್ನು ಮಾಡಿದರು. ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಲ್ಲಿ ಅವರ ಮಾತುಗಳನ್ನು ಕೇಳುವುದೇ ಚಂದ.

ಪೆಪ್ಸಿ, ಥಮ್ಸ್‌ಅಪ್ ಬೇಡ, ಸೀಯಾಳ ಮಜ್ಜಿಗೆ ಕುಡಿಯಿರಿ!

ನಾವು ಬಾಯಾರಿಕೆಗಾಗಿ ಕುಡಿಯುವ ಪೆಪ್ಸಿ, ಥಮ್ಸ್‌ ಅಪ್‌ ಮೊದಲಾದ ವಿದೇಶದ ಕಂಪೆನಿಗಳು ಭಾರತದಲ್ಲಿ ಕೋಟಿ ಕೋಟಿ ದುಡ್ಡು ಮಾಡುತ್ತವೆ. ಅದರಲ್ಲಿಯೂ ಪೆಪ್ಸಿ ಒಂದು ಟಾಯ್ಲೆಟ್ ಕ್ಲೀನರ್ ಎಂದು ಅವರು ಲೇವಡಿ ಮಾಡಿದರು! ಅದಕ್ಕೆ ಪರ್ಯಾಯವಾಗಿ ಎಳನೀರು, ಮಜ್ಜಿಗೆ ಕುಡಿದರೆ ರೈತನಿಗೂ ಉಪಯೋಗ ಆಗುತ್ತದೆ ಮತ್ತು ನಮ್ಮ ದುಡ್ಡು ಭಾರತದಲ್ಲಿ ಉಳಿಯುತ್ತದೆ ಎಂದು ಅವರು ಎಲ್ಲ ಕಡೆಯಲ್ಲಿಯೂ ಹೇಳುತ್ತಾ ಬಂದರು. ಅದು ಆ ಕಾಲಕ್ಕೆ ಯುವಕರನ್ನು ಭಾರಿ ಆಕರ್ಷಣೆ ಮಾಡಿ ಪೆಪ್ಸಿ ಕಂಪೆನಿಯು ಭಾರೀ ನಷ್ಟಕ್ಕೆ ತುತ್ತಾಯಿತು. ಆ ಕಂಪನಿಯಿಂದ ಬಂದ ಬಹುದೊಡ್ಡ ಆಮಿಷವನ್ನು ಅವರು ತಿರಸ್ಕಾರ ಮಾಡಿದರು. ಬೆದರಿಕೆಗೂ ಬಗ್ಗಲಿಲ್ಲ!

ಯಾವುದು ಪ್ರಮುಖ ವಿದೇಶದ ಕಂಪೆನಿಗಳು?

ಸ್ಯಾಮ್ಸಂಗ್, ಎಲ್. ಜಿ, ವರ್ಲ್ ಪೂಲ್, ಸೋನಿ, ಪ್ಯಾನಾಸೊನಿಕ್, ಡೈಕೀನ್, ಹಿಟಾಚಿ, ಫಿಲಿಪ್ಸ್, ತೋಷಿಬಾ, ಡೇಲ್, ರೋಲೆಕ್ಸ್, ನಿಕೊನ್, ಕೆನಾನ್‌, ಪೆಪ್ಸಿ ಮೊದಲಾದವುಗಳು ವಿದೇಶೀ ಕಂಪೆನಿಗಳು. ಇವು ತಯಾರು ಮಾಡುತ್ತಿರುವ ಸಾವಿರಾರು ಉತ್ಪನ್ನಗಳು ಇಂದು ನಮ್ಮ ಮನೆಯ ತುಂಬಾ ಇವೆಯಲ್ಲ! ಯೋಚನೆ ಮಾಡಿ. ಅವುಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಹೆಚ್ಚಿವೆ.

ಯಾವುದು ಸ್ವದೇಶೀ ಉತ್ಪನ್ನಗಳು?

ಬಜಾಜ್, ಗಾಡ್ರೆಜ್, ಟೈಟಾನ್, ವಿಪ್ರೋ, ವಿಡಿಯೋಕಾನ್, ಓರಿಯೆಂಟ್, ಉಷಾ, ಲಾಯ್ಡ್, ವೊಲ್ಟಾಸ್, ಎಕ್ಸೈಡ್, ಹಾವೆಲ್ಸ್, ಸೂರ್ಯ, ಎವರೆಡಿ, ಕ್ರಾಂಪ್ಟನ್, ಸೊನಾಟ, ಪ್ರೆಸ್ಟೀಜ್, ನಿಪ್ಪೋ, ಖೇತಾನ್ ಮೊದಲಾದವುಗಳು ಭಾರತದ ಹೆಮ್ಮೆಯ ಕಂಪೆನಿಗಳು. ವಿಶೇಷವಾಗಿ ಟಾಟಾ ಕಂಪೆನಿಯು ನಾವು ಬಳಸುವ ಉಪ್ಪು, ಟೀ ಪುಡಿಯಿಂದ ಹಿಡಿದು ಟ್ರಕ್ ವರೆಗೆ ಸಾವಿರಾರು ಉತ್ಪನ್ನಗಳನ್ನು ತಯಾರು ಮಾಡಿ ಭಾರತಕ್ಕೆ ಅತಿ ದೊಡ್ಡ ಕೊಡುಗೆ ಕೊಟ್ಟಿದೆ. ವಿಪ್ರೋ ಕಂಪೆನಿಯ ಮುಖ್ಯಸ್ಥರಾದ ಅಜೀಂ ಪ್ರೇಂಜಿ ಅವರು ನೂರಾರು ಕೋಟಿ ದಾನ ಮಾಡಿದ್ದಾರೆ. ಇನ್ಫೋಸಿಸ್, ಬಿರ್ಲಾ ಮೊದಲಾದ ಕಂಪೆನಿಗಳು ಸರಕಾರಕ್ಕೆ ಸರಿಯಾದ ತೆರಿಗೆ ಕಟ್ಟುತ್ತವೆ ಮತ್ತು ಚಾರಿಟಿಯಲ್ಲಿ ಭಾರಿ ಮುಂದಿವೆ. ವಿದೇಶದ ಕಂಪೆನಿಗಳು ತಮ್ಮ ಪ್ರಚಾರಕ್ಕೆ ದುಡ್ಡು ವ್ಯಯಿಸುವುದು ಬಿಟ್ಟರೆ ಭಾರತಕ್ಕೆ ಬೇರೇನು ಕೊಡುಗೆ ನೀಡಿವೆ?

ಈ ಬಗ್ಗೆ ಭಾರತೀಯರಿಗೆ ಶಿಕ್ಷಣ ಮತ್ತು ಜಾಗೃತಿಗಳು ಬೇಕಿತ್ತು! ಭಾರತವನ್ನು ಮತ್ತೆ ಬಡರಾಷ್ಟ್ರ ಮಾಡಲು ಹೊರಟ ವಿದೇಶಿ ಕಂಪೆನಿಗಳ ವಿರುದ್ಧ ಇನ್ನೊಂದು ಬಹುದೊಡ್ಡ ಅಭಿಯಾನ ನಡೆಯಬೇಕಾದ ಅಗತ್ಯ ಈಗ ಹೆಚ್ಚಿದೆ. ಆದರೆ ಮಾಡುವವರು ಯಾರು? ರಾಜೀವ್ ದೀಕ್ಷಿತ್ ಅಷ್ಟು ಬೇಗ ನಿರ್ಗಮಿಸಬಾರದಿತ್ತು!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಪರೀಕ್ಷೆ ಒಂದು ಯುದ್ಧ ಅಲ್ಲ, ಸಮಸ್ಯೆ ಅಲ್ಲವೇ ಅಲ್ಲ; ಅದೊಂದು ಅವಕಾಶ! ಅದೊಂದು ಹಬ್ಬ!

Exit mobile version