Site icon Vistara News

ರಾಜ ಮಾರ್ಗ ಅಂಕಣ | ರಿಯಾಲಿಟಿ ಸ್ಪರ್ಧೆಗಳು ಮಕ್ಕಳ ಬಾಲ್ಯವನ್ನು ಕಸಿಯುತ್ತಿವೆ, ನಿಮ್ಮ ಮಕ್ಕಳ ಬಗ್ಗೆ ಹುಷಾರು!

reality show

ಪ್ರಣವ್ ಧನವಾಡೇ. ಈ ಹೆಸರನ್ನು ಎಲ್ಲೋ ಕೇಳಿದ ನೆನಪು ನಿಮಗಿದೆಯಾ? ಹೌದು!
2015ರಲ್ಲಿ ಮುಂಬೈಯ ಈ 15 ವರ್ಷದ ಹುಡುಗನು ಒಂದು ಪಂದ್ಯದಲ್ಲಿ ಬರೋಬ್ಬರಿ 1000+ ರನ್ ಬಾರಿಸಿ ಮಿಂಚಿದ್ದ! ಅವನಿಗೆ ಆ ದಿನಗಳಲ್ಲಿ ಜಾಗತಿಕ ಮಟ್ಟದ ಪ್ರಚಾರವು ಸಿಕ್ಕಿತ್ತು. ಸಚಿನ್ ತೆಂಡುಲ್ಕರ್ ಜೊತೆಗೆ ಆತನ ಭರ್ಜರಿ ಹೋಲಿಕೆಯು ಕೂಡ ನಡೆಯಿತು. ನೂರಾರು ಸನ್ಮಾನಗಳು ಮತ್ತು ನಗದು ಬಹುಮಾನಗಳು ಆತನಿಗೆ ದೊರೆತವು!

ಆದರೆ ಅವನು ಅದೇ ವೇಗದಲ್ಲಿ ಮುಂದೆ ಹೋಗಿರುತ್ತಿದ್ದರೆ ಅವನಿಗೆ ಈಗ 22 ವರ್ಷ ಆಗಿರಬೇಕಿತ್ತು! ಅವನು ಕನಿಷ್ಠ ಪಕ್ಷ ರಣಜಿ ಪಂದ್ಯ ಆದರೂ ಆಡಬೇಕಿತ್ತು! ಆದರೆ ಅವನು ಈಗ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎನ್ನುವುದು
ಯಾರಿಗೂ ಗೊತ್ತಿಲ್ಲ!

ಅದೇ ರೀತಿಯಲ್ಲಿ ನೂರಾರು ಟಿವಿ ವಾಹಿನಿಗಳಲ್ಲಿ ನೂರಾರು ಮಕ್ಕಳ ರಿಯಾಲಿಟಿ ಶೋಗಳು, ಸ್ಪರ್ಧೆಗಳು ನಡೆಯುತ್ತಿವೆ. ಹಿಂದೆಯೂ ನಡೆದಿವೆ. ಅದರ ಎಲ್ಲ ವಿಜೇತರ ಪ್ರತಿಭೆಯ ಮೇಲೆ ಗೌರವ ಇಟ್ಟುಕೊಂಡು ನಾನು ನಿಮಗೆ ಕೇಳುವ ಪ್ರಶ್ನೆ – ಅದರ ಸಾವಿರಾರು ವಿಜೇತರು ಮುಂದೆ ಎಲ್ಲಿಗೆ ಹೋಗುತ್ತಾರೆ? ಅವರ ಅನನ್ಯ ಪ್ರತಿಭೆಗಳನ್ನು ಅವರು ಎಷ್ಟು ಬೆಳೆಸಿದ್ದಾರೆ? ಅದರಿಂದ ನಾಡಿನ ಸಂಸ್ಕೃತಿಗೆ ಎಷ್ಟು ಲಾಭ ಆಗಿದೆ?

ಶಾಲಾಮಟ್ಟದಲ್ಲಿ ನೂರಾರು ಸಾಂಸ್ಕೃತಿಕ ಸ್ಪರ್ಧೆಗಳು, ಪ್ರತಿಭಾ ಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿವೆ. ವಿಜೇತರ ಘೋಷಣೆ ಆಗುತ್ತದೆ. ಅದರಲ್ಲಿ ಎಷ್ಟು ಜನ ಮುಂದೆ ಅವರ ಪ್ರತಿಭೆಯನ್ನು ತಮ್ಮ ಬಂಡವಾಳವಾಗಿ ಮಾಡುತ್ತಾರೆ? ತಮ್ಮ ಕಲೆಯಿಂದ ಸಮಾಜವನ್ನು ಬೆಳಗುತ್ತಾರೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಾಗ ನಮಗೆ ಹಲವು ಕಡೆ ನಿರಾಸೆ ಆಗುತ್ತದೆ ಮತ್ತು ಕಹಿ ಸತ್ಯಗಳು ಗೋಚರ ಆಗುತ್ತವೆ.

ಹಾಗಾದರೆ ಟಿವಿ ವಾಹಿನಿಗಳಿಂದ, ಸಾಂಸ್ಕೃತಿಕ ಸ್ಪರ್ಧೆಗಳಿಂದ ಪ್ರತಿಭಾ ಶೋಧ ಆಗ್ತಾ ಇಲ್ಲವೇ ಎನ್ನುವ ಪ್ರಶ್ನೆ ನೀವು ಕೇಳಬಹುದು. ಖಂಡಿತ ಆಗುತ್ತಿದೆ! ಆದರೆ ಅವುಗಳ ಅಡ್ಡ ಪರಿಣಾಮಗಳ ಬಗ್ಗೆ ಇದುವರೆಗೆ ಯಾರೂ ಯೋಚನೆ ಮಾಡಿದ ಹಾಗಿಲ್ಲ.

ಉದಾಹರಣೆಗೆ ಇಂದು ಬಾಲಿವುಡ್ ಹಿನ್ನೆಲೆ ಗಾಯನ ಲೋಕದ ಸೂಪರ್ ಸ್ಟಾರ್‌ಗಳಾದ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಇವರೆಲ್ಲರೂ ಬೇರೆ ಬೇರೆ ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದವರು. ಕನ್ನಡದಲ್ಲಿಯೂ ಅಂತವರು ತುಂಬಾ ಮಂದಿ ಇದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಒಳ್ಳೆಯ ನಿರ್ಣಾಯಕರ ಮೂಲಕ ಆಯ್ಕೆ ಆದವರು. ಇನ್ನೂ ವಿವರವಾಗಿ ಹೇಳಬೇಕೆಂದರೆ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಆಯ್ಕೆ ಆಗುವಾಗ ಲತಾ ಮಂಗೇಶ್ಕರ್ ಅಂತವರು ನಿರ್ಣಾಯಕರಾಗಿದ್ದರು! ಪ್ರತಿಭೆಗಳಿಗೆ ಆಗ ಒಂದಿಷ್ಟೂ ಅನ್ಯಾಯ ಆಗುತ್ತಾ ಇರಲಿಲ್ಲ.

ಅಪಾಯಕಾರಿ ಆದ ಇಂಟರ್ನೆಟ್ ವೋಟಿಂಗ್!
ಆದರೆ ಮುಂದೆ ಯಾವಾಗ ಇಂಟರ್ನೆಟ್ ಮೆಸೇಜ್ ಮೂಲಕ ವೋಟಿಂಗ್ ಆರಂಭ ಆಯಿತೋ ಅಲ್ಲಿಗೆ ದುಡ್ಡು, ಪ್ರಭಾವ ಇದ್ದವರು ವೋಟನ್ನು ಖರೀದಿ ಮಾಡುವುದು ಆರಂಭ ಆಯಿತು. ಕನ್ನಡದಲ್ಲಿ ಕೂಡ ಆರಂಭದ ಎದೆ ತುಂಬಿ ಹಾಡುವೆನು, ಕಾಮಿಡಿ ಕಿಲಾಡಿ, ಮಜಾ ಟಾಕೀಸ್, ಡ್ರಾಮಾ ಜೂನಿಯರ್ ರಿಯಾಲಿಟಿ ಶೋನಲ್ಲಿ ಗೆದ್ದವರು ಮುಂದೆ ನೂರಾರು ಅವಕಾಶಗಳನ್ನು ಪಡೆದರು. ಅವರ ಪ್ರತಿಭೆಯನ್ನು ನಾಡು ಗುರುತಿಸಿ ಬೆಳೆಸಿತು. ಆದರೆ ಇಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ಯಾವಾಗ ಇಂಟರ್ನೆಟ್ ವೋಟಿಂಗ್ ಆರಂಭ ಆಯಿತೋ ಅಲ್ಲಿಂದ ವೋಟ್ ಖರೀದಿಗಳು, ಪ್ರಭಾವಗಳು ಆರಂಭ ಆದವು. ಆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ತರಬೇತು ಕೊಡುವ ಶಾಲೆಗಳು ಮಹಾ ನಗರಗಳಲ್ಲಿ ಆರಂಭ ಆದವು. ಹೆತ್ತವರು ತಮ್ಮ ಮಕ್ಕಳನ್ನು ಸೂಪರ್ ಹೀರೋ ಮಾಡುವ ಜಿದ್ದಿಗೆ ಬಿದ್ದು ದುಡ್ಡು ಸುರಿಯಲು ತೊಡಗಿದರು.

ಆದರೆ ಇಲ್ಲಿ ಕೂಡ ಬಡವರ ಮಕ್ಕಳು, ಗ್ರಾಮಾಂತರ ಮಕ್ಕಳು ನಿಜವಾಗಿಯೂ ಅವಕಾಶ ವಂಚಿತರಾದರು! ಒಂದು ಸಮೀಕ್ಷೆ ಮಾಡಿ ನೋಡಿ. ಇತ್ತೀಚಿನ ರಿಯಾಲಿಟಿ ಶೋಗಳಲ್ಲಿ ಗೆದ್ದವರಲ್ಲಿ ಎಷ್ಟು ಮಂದಿ ಹಳ್ಳಿಯ ಮಕ್ಕಳಿದ್ದಾರೆ? ಎಷ್ಟು ಮಂದಿ ಬಡವರ ಮಕ್ಕಳಿದ್ದಾರೆ? ಎಷ್ಟು ಮಂದಿ ಕನ್ನಡ ಮಾಧ್ಯಮದ ಮಕ್ಕಳಿದ್ದಾರೆ?
ಖಂಡಿತ ಇದ್ದಾರೆ. ಆದರೆ ಅವರ ಪ್ರಮಾಣ ತುಂಬಾ ಕಡಿಮೆ ಇದೆ!

ಜಗತ್ತಿನ ಪ್ರತೀ ಮಗುವೂ ಪ್ರತಿಭಾವಂತ ಮಗುವೇ!
ಈ ಜಗತ್ತಿನ ಪ್ರತೀ ಮಕ್ಕಳೂ ಪ್ರತಿಭಾವಂತರೇ ಆಗಿದ್ದಾರೆ. ಅವರಲ್ಲಿ ಒಂದಲ್ಲ ಒಂದು ಪ್ರತಿಭೆಯನ್ನು ಲೋಡ್ ಮಾಡಿ ಭಗವಂತ ಈ ಜಗತ್ತಿಗೆ ಅವರನ್ನು ಕಳುಹಿಸಿರುತ್ತಾನೆ. ನೀವು ಯಾರನ್ನು ವಿಶೇಷ ಚೇತನ ಮಕ್ಕಳು ಎಂದು ಕರೆಯುತ್ತೀರೋ ಅವರಲ್ಲಿಯೂ ಒಂದಲ್ಲ ಒಂದು ಪ್ರತಿಭೆಯು ಇರುತ್ತದೆ. ಆ ಪ್ರತಿಭೆಯ ಪೋಷಣೆಗೆ ವೇದಿಕೆ ಬೇಕು. ತರಬೇತು ಬೇಕು. ಹೆತ್ತವರ, ಶಿಕ್ಷಕರ, ಸಮಾಜದ ಪ್ರೋತ್ಸಾಹ ಬೇಕು.

ಆದರೆ ನಮ್ಮ ಮಕ್ಕಳು ಎಷ್ಟು ಪ್ರತಿಭೆ ಹೊಂದಿದ್ದಾರೆ ಎಂದರೆ ಅವರು ಸ್ಪರ್ಧೆಯ ಸೋಂಕಿಲ್ಲದೆ ಕೂಡ ತಮ್ಮ ಪ್ರತಿಭೆಯನ್ನು ಬೆಳೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ! ಅವರನ್ನು ರೇಸಿನ ಕುದುರೆ ಮಾಡಿ ರೇಸಿಗೆ ನಿಲ್ಲಿಸುವ ಅಗತ್ಯ ಖಂಡಿತ ಇಲ್ಲ!

ಡಾ. ಶಿವರಾಮ ಕಾರಂತರು

ಸ್ಪರ್ಧೆಗಳ ಬಗ್ಗೆ ಶಿವರಾಮ ಕಾರಂತರು ಹೇಳಿದ್ದೇನು?
ಖ್ಯಾತ ಸಾಹಿತಿ ಮತ್ತು ಶಿಕ್ಷಣ ತಜ್ಞರಾದ ಶಿವರಾಮ ಕಾರಂತರು ಚಿಕ್ಕ ಮಕ್ಕಳನ್ನು ಸ್ಪರ್ಧೆಗೆ ನಿಲ್ಲಿಸಬೇಡಿ ಎಂದು ಹೇಳುತ್ತಿದ್ದರು. 12 ವರ್ಷಗಳವರೆಗೆ ಮಕ್ಕಳಿಗೆ ಯಾವ ಸ್ಪರ್ಧೆಯನ್ನು ಕೂಡ ಮಾಡಬಾರದು ಎನ್ನುವುದು ಅವರ ಖಚಿತ ಅಭಿಪ್ರಾಯ. ಸ್ಪರ್ಧೆ ಮಾಡಿದರೂ ಎಲ್ಲ ಮಕ್ಕಳಿಗೂ ಸಮಾನ ಬಹುಮಾನ ಕೊಡಿ ಎನ್ನುತ್ತಿದ್ದರು ಕಾರಂತರು.

ಆದರೆ ಇಂದು ಆಗುತ್ತಿರುವುದೇನು?
ಆದರೆ ಸ್ಪರ್ಧೆಯ ಗೆಲುವನ್ನು ತಮ್ಮ ಪ್ರತಿಷ್ಠೆಯನ್ನಾಗಿ ಮಾಡಿಕೊಂಡ ಶಿಕ್ಷಕರು ಮತ್ತು ಹೆತ್ತವರು ಮಕ್ಕಳನ್ನು ರೇಸಿನ ಕುದುರೆ ಮಾಡಿ ಈಗಾಗಲೇ ನಿಲ್ಲಿಸಿ ಆಗಿದೆ! ಈ ಸ್ಪರ್ಧೆಯಲ್ಲಿ ಸೋತವರ ಕಣ್ಣೀರನ್ನು ಮತ್ತು ಗೆದ್ದವರ ಆನಂದ ಬಾಷ್ಪವನ್ನು ತಮ್ಮ ಟಿ ಆರ್ ಪಿ ಸರಕನ್ನಾಗಿ ಮಾಡಿಕೊಂಡ ಟಿವಿ ವಾಹಿನಿಗಳಿಗೆ ಈ ಸ್ಪರ್ಧೆಗಳು ಬೇಕೇ ಬೇಕು! ಮಕ್ಕಳ ಗೆಲುವನ್ನು ತಮ್ಮ ಪ್ರತಿಷ್ಠೆ ಎಂದು ಭಾವಿಸುವ ಹೆತ್ತವರು ಇರುವವರೆಗೆ ಈ ಮಕ್ಕಳ ರಿಯಾಲಿಟಿ ಶೋಗಳು ಖಂಡಿತ ನಿಲ್ಲುವುದಿಲ್ಲ. ಈ ಸ್ಪರ್ಧೆಗಳು ಮೆಗಾ ಮನರಂಜನೆಯ ಭಾಗ ಎಂದು ಪರಿಗಣಿಸುವ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ತಮ್ಮ ಮಕ್ಕಳನ್ನು ಸೂಪರ್ ಹೀರೋ ಅಥವ ಸೂಪರ್ ಹೀರೋಯಿನ್ ಮಾಡಲು ಹೊರಟ ಹೆತ್ತವರು ಮಕ್ಕಳ ಬಾಲ್ಯವನ್ನು ಬರಿದು ಮಾಡುತ್ತಿದ್ದಾರೆ! ತಮ್ಮ ಮಕ್ಕಳು ಒಮ್ಮೆ ಟಿವಿಯಲ್ಲಿ ಕಂಡರೆ ಸಾಕು ಎಂದು ತೆವಲಿಗೆ ಪೋಷಕರು ಬಿದ್ದಿರುವ ಈ ದಿನಗಳಲ್ಲಿ ಅವರು ಬುದ್ಧಿ ಕಲಿಯುವುದು ಯಾವಾಗ?

ಇಲ್ಲೊಬ್ಬರು ತಾಯಿ ತನ್ನ ಎರಡನೇ ಕ್ಲಾಸಿನ ಪುಟ್ಟ ಮಗಳನ್ನು ದಿನವೂ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಕರಾಟೆ, ಚೆಸ್, ಕ್ರಿಕೆಟ್, ಯಕ್ಷಗಾನ, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್ ಕೋಚಿಂಗ್ ಎಂದೆಲ್ಲ ಉಸಿರು ಬಿಗಿದು ಓಡುತ್ತಿರುವಾಗ ಆ ಮಗುವಿನ ಮೇಲಾಗುತ್ತಿರುವ ಒತ್ತಡವನ್ನು ನನಗೆ ಊಹೆ ಮಾಡಲು ಕಷ್ಟ ಆಗುತ್ತಾ ಇದೆ! ಯಾವುದೇ ಕಲಿಕೆಯು ಮಕ್ಕಳಿಗೆ ಹೊರೆ ಆಗಬಾರದು ಎಂಬ ಸಾಮಾನ್ಯ ಪ್ರಜ್ಞೆ ಹೆತ್ತವರಿಗೆ ಬೇಡವಾ?

ಡ್ಯಾಡಿ ನಂಬರ್ ಒನ್, ಮಮ್ಮಿ ನಂಬರ್ ಒನ್ ಮೊದಲಾದ ನಾನ್ಸೆನ್ಸ್ ಸ್ಪರ್ಧೆಯ ಮೂಲಕ ಅಪ್ಪ, ಅಮ್ಮನ ಪ್ರೀತಿಯು ಅಳೆಯಲ್ಪಡಬೇಕಾ?

ನನ್ನ ಸಲಹೆ ಏನೆಂದರೆ ಮುಂದಿನ ಕೆಲವು ವರ್ಷಗಳ ಕಾಲ ಎಲ್ಲ ಟಿವಿ ವಾಹಿನಿಗಳ ಸ್ಪರ್ಧಾತ್ಮಕವಾದ ರಿಯಾಲಿಟಿ ಶೋಗಳನ್ನು ನಿಲ್ಲಿಸುವುದು ಒಳ್ಳೆಯದು! ಅಥವಾ ಅವುಗಳಿಗೆ ಒಂದು ಸಣ್ಣ ಬ್ರೇಕ್ ಆದರೂ ಬೇಕು. ವರ್ಷಾನುಗಟ್ಟಲೆ ಈ ಸ್ಪರ್ಧೆಗಳು ಮುಂದುವರಿದರೆ ಆ ಮಕ್ಕಳ ಶಿಕ್ಷಣದ ಮೇಲೆ ಆಗುವ ಕರಾಳತೆಯ ಬಗ್ಗೆ ಕೂಡ ನಾವು ಯೋಚನೆ ಮಾಡಬೇಕು ಅಲ್ಲವೇ?

ರಿಯಾಲಿಟಿ ಶೋಗಳ ಹಂಗಿಲ್ಲದೆ ಇಂದು ಸ್ಟಾರ್ ಆಗಿ ಮಿಂಚುತ್ತಿರುವ ನೂರಾರು ಪ್ರತಿಭೆಗಳು ನನ್ನ ಪಟ್ಟಿಯಲ್ಲಿ ಇವೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಕಿರಣ್ ಬೇಡಿ ಎಂಬ ಕ್ರಾಂತಿಯ ಕಿಡಿ, 73 ವರ್ಷದ ಆಕೆ ಇಂದಿಗೂ ದೇಶದ ಯೂತ್‌ ಐಕಾನ್‌!

Exit mobile version