Site icon Vistara News

ರಾಜ ಮಾರ್ಗ ಅಂಕಣ | ಭಾರತೀಯ ರಾಜಕಾರಣದ ಅಜಾತಶತ್ರು ಅಟಲ್ ಜೀ: ಇಂದು ಅವರ ಹುಟ್ಟುಹಬ್ಬ

vajapayee

“ನನಗೆ ಅಷ್ಟೊಂದು ಎತ್ತರ ಕೊಡಬೇಡ ದೇವರೇ,
ನನ್ನ ಆತ್ಮೀಯರು ನನ್ನನ್ನು ಆಲಂಗಿಸಲು ಆಗದಷ್ಟು!”
ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ಆದ ರಾಜಕಾರಣಿ, ಪ್ರಖರ ಭಾಷಣಕಾರ, ಕವಿ ಹೃದಯದ ಪ್ರಧಾನಿ ಆದ ಅಟಲ್‌ ಬಿಹಾರಿ ವಾಜಪೇಯಿ ಅವರ ಬಗ್ಗೆ ಹತ್ತಾರು ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ ಅವರ ಜೀವನ ಸಂದೇಶ! ಅವರ ಚಿಂತನೆ ಮತ್ತು ಭಾಷಣಗಳು ನವ ನವೊನ್ಮೇಷಶಾಲಿ!
ವಾಜಪೇಯಿ ಬದುಕಿದ ರೀತಿಯೇ ಹಾಗೆ!

ಆರೆಸ್ಸೆಸ್ ಪೂರ್ಣಕಾಲಿಕ ಪ್ರಚಾರಕ ಅಟಲ್
ಅಟಲ್ ಜೀ ಅವರು ಹುಟ್ಟಿದ್ದು 1924 ಡಿಸೆಂಬರ್ 25ರಂದು ಒಬ್ಬ ಅಧ್ಯಾಪಕನ ಮಗನಾಗಿ. ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಪದವಿ ಪಡೆದ ನಂತರ ಅವರು ರಾಜನೀತಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬಾಲ್ಯದಲ್ಲಿಯೇ ಆರ್.ಎಸ್.ಎಸ್. ಪ್ರಭಾವಕ್ಕೆ ಒಳಗಾದ ವಾಜಪೇಯಿ ಒಬ್ಬ ಪೂರ್ಣಕಾಲಿಕ ಪ್ರಚಾರಕರಾಗಿ ದುಡಿದರು. ದೀನ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮಪ್ರಸಾದ ಮುಖರ್ಜಿ ಅವರ ದಟ್ಟವಾದ ಪ್ರಭಾವಕ್ಕೆ ಒಳಗಾಗಿ ಜನಸಂಘ ಸೇರಿದರು. ಬಹುಕಾಲ ಪತ್ರಕರ್ತರಾಗಿ ದುಡಿದರು. ಪಾಂಚಜನ್ಯ ಮತ್ತು ರಾಷ್ಟ್ರಧರ್ಮ ಹಿಂದಿ ಪತ್ರಿಕೆಗಳಲ್ಲಿ ಅವರ ಪ್ರಖರ ಲೇಖನ ಮತ್ತು ಕವಿತೆಗಳು ಭಾರಿ ಜನಪ್ರಿಯ ಆದವು.

52 ವರ್ಷಗಳ ಕಾಲ ನಿರಂತರ ಲೋಕಸಭೆಯಲ್ಲಿ!
1957ರಲ್ಲಿ ಅವರು ಮೊದಲನೇ ಬಾರಿಗೆ ಲೋಕಸಭೆಗೆ ಆಯ್ಕೆ ಆದರು. ವಿಪಕ್ಷದ ಎಂಪಿ ಆಗಿದ್ದ ಅವರು ಲೋಕಸಭೆಯಲ್ಲಿ ಮಾಡುತ್ತಿದ್ದ ಭಾಷಣಗಳನ್ನು ಗಮನಿಸಿದ ಪ್ರಧಾನಿ ನೆಹರು ಅವರ ಬಳಿಗೆ ಬಂದು ಬೆನ್ನು ತಟ್ಟಿ “ನೀನು ಖಂಡಿತವಾಗಿ ಮುಂದೆ ಪ್ರಧಾನಿ ಆಗ್ತೀಯಾ” ಎಂದಿದ್ದರು. 1957ರಿಂದ 2009ರ ವರೆಗೆ 52 ವರ್ಷಗಳ ಕಾಲ ಹತ್ತು ಅವಧಿಗೆ ವಾಜಪೇಯಿ ಲೋಕಸಭೆಯ ಸದಸ್ಯರಾಗಿ ಮೆರೆದರು.1984ರ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ನಡೆದ ಲೋಕಸಭೆಯ ಚುನಾವಣೆಯಲ್ಲಿ ಅವರು ಒಮ್ಮೆ ಗ್ವಾಲಿಯರನಿಂದ ಸೋತಿದ್ದರು. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಅಟಲ್ ಜೀ ಜೈಲುವಾಸ ಕೂಡ ಅನುಭವಿಸಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವ
1977ರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿ ಆದರು. ಅದು ಭಾರತದ ಮೊದಲ ಕಾಂಗ್ರೆಸೇತರ ಸರಕಾರ ಆಗಿತ್ತು. ಅದರಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾಗಿ ಭಾರಿ ಜನಪ್ರಿಯರಾದರು. ಅವರ ಎರಡು ವರ್ಷಗಳ ಅವಧಿಯು ಅತ್ಯಂತ ಸ್ಮರಣೀಯ ಆದದ್ದು. ಅದೇ ಹೊತ್ತಲ್ಲಿ ಅವರು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದಿ ಭಾಷಣ ಮಾಡಿದ್ದು! ಅದೊಂದು ಚಾರಿತ್ರಿಕ ದಾಖಲೆ. ನಾನು ಆ ಭಾಷಣವನ್ನು ಮತ್ತೆ ಮತ್ತೆ ಕೇಳಿ ರೋಮಾಂಚನ ಪಡೆಯುತ್ತೇನೆ.

ಬಿಜೆಪಿಯ ಸ್ಥಾಪಕ ಅಧ್ಯಕ್ಷ ಅಟಲ್ ಜೀ
ಮುಂದೆ ಬಿಜೆಪಿಯ ಸ್ಥಾಪನೆ ಆದಾಗ (1980) ವಾಜಪೇಯಿಜಿ ಅದರ ಮೊದಲ ಅಧ್ಯಕ್ಷ ಆದರು. ಮುಂದೆ ಮೂರು ಬಾರಿ ಅವರು ಭಾರತದ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

1996ರಲ್ಲಿ ಕೇವಲ 13 ದಿನ ಪ್ರಧಾನಿ ಆದರು. ಆದರೆ ಬಹುಮತದ ಕೊರತೆಯಿಂದ ಅಧಿಕಾರ ಕಳೆದುಕೊಂಡರು. ಎರಡನೇ ಬಾರಿ 1999ರಲ್ಲಿ ಮತ್ತೆ ಪ್ರಧಾನಿ ಆದರು. ಈ ಬಾರಿ 13 ತಿಂಗಳು ಪ್ರಧಾನಿ ಆಗಿದ್ದರು. ಈ ಬಾರಿ ಕೇವಲ ಒಂದು ಮತದ ಕೊರತೆಯಿಂದ ಅಧಿಕಾರ ತ್ಯಜಿಸಿದರು. “ಮೈ ಸತ್ತಾ ಚೋಡ್ ದೂಂಗಾ “ಎಂದು ಅವರು 1999 ಏಪ್ರಿಲ್ 17ರಂದು ಲೋಕಸಭೆಯಲ್ಲಿ ಮಾಡಿದ ನಿರ್ಗಮನ ಭಾಷಣವು ಎಲ್ಲರಿಗೂ ಕಣ್ಣೀರು ತರಿಸಿತ್ತು. ಸಣ್ಣ ಅಡ್ಡ ಮಾರ್ಗ ಹಿಡಿದಿದ್ದರೆ ಆ ಒಂದು ಮತವನ್ನು ಅವರು ಖರೀದಿ ಮಾಡಬಹುದಿತ್ತು. ಆದರೆ ಅಟಲ್ ಜೀ ಅದನ್ನೆಲ್ಲ ಮಾಡುವವರಲ್ಲ!

ಮೂರನೇ ಬಾರಿ ಐದು ವರ್ಷ ಪ್ರಧಾನಿ
ಮುಂದೆ 1999ರ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಅವರು ಅಧಿಕಾರಕ್ಕೆ ಬಂದರು. ಈ ಬಾರಿ ಐದು ವರ್ಷ ಪೂರ್ತಿ ಅಧಿಕಾರ ನಡೆಸಿದರು. ಈ ಅವಧಿಯನ್ನು ತಮ್ಮ ಚಾಣಾಕ್ಷ ನಡೆಗಳಿಂದ, ಪ್ರಭಾವಶಾಲಿ ಭಾಷಣಗಳಿಂದ, ತನ್ನ ಶ್ರೇಷ್ಟ ನಾಯಕತ್ವದ ಗುಣಗಳಿಂದ ಸ್ಮರಣೀಯ ಆಗಿ ಮಾಡಿದರು. ಅವರ ಅಧಿಕಾರದ ಅವಧಿಯಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಹರಣ, ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕರ ದಾಳಿ ಮೊದಲಾದ ಸಂಕಷ್ಟಗಳು ಎದುರಾದರೂ ವಾಜಪೇಯಿ ಎಲ್ಲವನ್ನೂ ಗೆದ್ದರು. ಎಲ್ಲರನ್ನೂ ಗೆದ್ದರು.

ಕಾರ್ಗಿಲ್ ವಿಜಯ, ಪಾಕಿಸ್ತಾನಕ್ಕೆ ಸಂಝೋತಾ ಎಕ್ಸ್‌ಪ್ರೆಸ್ ಓಡಿಸಿ ಸೌಹಾರ್ದ ಹಸ್ತವನ್ನು ಚಾಚಿದ್ದು, ಅತ್ಯಂತ ಯಶಸ್ವೀ ಆದ ಪೋಖ್ರಾನ್‌ ನ್ಯೂಕ್ಲಿಯರ್ ಟೆಸ್ಟ್, ಕಠಿಣವಾದ ಭಯೋತ್ಪಾದನಾ ನಿಗ್ರಹ ಕಾನೂನು, ಸರ್ವ ಶಿಕ್ಷಾ ಅಭಿಯಾನದ ಆರಂಭ, ದೇಶದ ಉದ್ದಗಲ ಬೆಸೆಯುವ ಸುವರ್ಣ ಚತುಷ್ಪಥ ಹೆದ್ದಾರಿಯ ಕಾಮಗಾರಿ ಮೊದಲಾದ ವಿಧಾಯಕ ನಡೆಗಳಿಂದ ಅವರ ಅವಧಿಯು ಅತ್ಯಂತ ಯಶಸ್ವೀ ಆಯಿತು. ಗೃಹ ಮಂತ್ರಿ ಆಗಿದ್ದ ಅಡ್ವಾಣಿ, ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್ ಅವರ ಜೋಡಿ ಸೂಪರ್ ಹಿಟ್ ಆಗಿತ್ತು! ವಾಜಪೇಯಿ ಅವರ ವರ್ಚಸ್ಸು, ಬುದ್ಧಿವಂತಿಕೆ, ಹೊಂದಾಣಿಕೆ ಮನೋಭಾವ, ಭಾರಿ ದಿಟ್ಟ ನಡೆಗಳು ಇವೆಲ್ಲವೂ ಭಾರತೀಯರ ಹೃದಯದಲ್ಲಿ ಅವರಿಗೆ ಶಾಶ್ವತ ಸ್ಥಾನವನ್ನು ತಂದುಕೊಟ್ಟವು. ಒಂದು ಡಜನ್ ರಾಜಕೀಯ ಪಕ್ಷಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಸರಕಾರ ನಡೆಸುವುದು ಸುಲಭ ಅಲ್ಲ!

ಅಟಲ್ ಜೀ ಅವರ ಅದ್ಭುತ ಭಾಷಣಗಳು
ನಾನು ವಾಜಪೇಯಿಜಿ ಅವರನ್ನು ಆರಾಧನೆ ಮಾಡಲು ಪ್ರಮುಖ ಕಾರಣ ಅವರ ಅದ್ಭುತವಾದ ಭಾಷಣಗಳು. ಎದುರಿನ ಕುರ್ಚಿಯಲ್ಲಿ ಕುಳಿತು ಅವರ 15-20 ಭಾಷಣಗಳನ್ನು ಆಸ್ವಾದಿಸುವ ಆವಕಾಶ ನನಗೆ ಬೇರೆ ಬೇರೆ ಕಡೆ ಸಿಕ್ಕಿತ್ತು. ಅವರು ನನ್ನ ಊರು ಕಾರ್ಕಳಕ್ಕೆ ಕೂಡ ಬಂದಿದ್ದರು. ಅವರ ಭಾಷಣಗಳ ಶಕ್ತಿ ಅದ್ಭುತ! ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಅವರ ಭಾಷಣಕ್ಕೆ ಮಾರು ಹೋಗದವರೆ ಇಲ್ಲ. ಹಿಂದಿ ಭಾಷೆಯಲ್ಲಿ ಅವರ ಭಾಷಣಗಳು ಹಾಸ್ಯ, ವ್ಯಂಗ್ಯ, ಶಾಯರಿ, ಗಾದೆ, ಉದಾಹರಣೆ, ಕುಟುಕು, ಮೊನಚು, ಲಾಲಿತ್ಯ… ಮೊದಲಾದವುಗಳಿಂದ ಶ್ರೀಮಂತ ಆಗಿರುತ್ತಿದ್ದವು. ಎಂದಿಗೂ ಅವರು ಸಭಾ ಮರ್ಯಾದೆಯನ್ನು ಮೀರಿದ ಉದಾಹರಣೆಯೇ ಇಲ್ಲ!

“ಇಂದಿರಾಜೀ, ಮುಜೆ ಜವಾಬ್ ದೀಜಿಯೆ” ಎಂದು ಅವರು ಗೌರವಪೂರ್ಣವಾಗಿ ತಮ್ಮ ಮಾತುಗಳನ್ನು ಆರಂಭ ಮಾಡುತ್ತಿದ್ದರು. ಅವರಷ್ಟು ದೊಡ್ಡ ಸಂಖ್ಯೆಯ ಜನಸಂದೋಹವನ್ನು ಭಾಷಣದ ಮೂಲಕ ಆಕರ್ಷಣೆ ಮಾಡುವ ಶಕ್ತಿ ಆಗ ಯಾರಿಗೂ ಇರಲಿಲ್ಲ! ದೇಶದ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಕೂಡ ತಾನು ವಾಜಪೇಯಿ ಅವರ ಭಾಷಣದ ಅಭಿಮಾನಿ, ಅವರ ಭಾಷಣಗಳನ್ನು ಕೇಳಲು ಪರ್ದಾ ಹಾಕಿಕೊಂಡು ಹೋಗಿ ಮೈದಾನದಲ್ಲಿ ನಿಲ್ಲುತ್ತಿದ್ದೆ ಎಂದಿದ್ದಾರೆ! ವಾಜಪೇಯಿ ಕೂಡ 1971ರ ಯುದ್ಧವನ್ನು ಇಂದಿರಾ ಗಾಂಧಿ ಗೆದ್ದಾಗ ಆಕೆಯನ್ನು ದುರ್ಗಾ ಎಂದು ಸಂಬೋಧನೆ ಮಾಡಿದ್ದರು! ವಾಜಪೇಯಿ ಎಂದಿಗೂ ಕೆಸರು ಎರಚುವ ಭಾಷಣ ಮಾಡಿದ್ದೇ ಇಲ್ಲ. ಅವರ ಭಾಷಣಗಳ ಬಗ್ಗೆ ಹತ್ತಾರು ಪುಸ್ತಕಗಳು ಬಂದಿವೆ.

ಅಟಲ್ ಜೀ ಯುಗಾಂತ್ಯ
2009ರಲ್ಲಿ ವಾಜಪೇಯಿಜಿ ಸಕ್ರಿಯವಾದ ರಾಜಕಾರಣದಿಂದ ನಿವೃತ್ತರಾದರು. 2015ರಲ್ಲಿ ಅವರಿಗೆ ಭಾರತರತ್ನ ಪ್ರಶಸ್ತಿ ದೊರೆಯಿತು. 2018 ಆಗಸ್ಟ್ 16ರಂದು ಅವರು ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು.
ಅವರ ಹುಟ್ಟುಹಬ್ಬದ ದಿನ( ಡಿಸೆಂಬರ್ 25)ವನ್ನು ಭಾರತ ಸರಕಾರವು ರಾಷ್ಟ್ರೀಯ ಸುಶಾಸನ ದಿನ (Good Governance Day) ಆಗಿ 2014ರಿಂದ ಆಚರಿಸಿಕೊಂಡು ಬರುತ್ತಿದೆ. ಅವರಿಗೆ ನಮ್ಮ ನಮನಗಳು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಟೈಮ್ಸ್ ಕಿಡ್ ಆಫ್ ದಿ ಇಯರ್ ಗೀತಾಂಜಲಿ ರಾವ್: 17ನೇ ವಯಸ್ಸಿಗೆ ವಿಶ್ವ ವಿಖ್ಯಾತಿ!

Exit mobile version