ಪ್ರೀತಿಯ ಶಂಕರಾ….
ಹೇಗಿದ್ದೀ? ಸ್ವರ್ಗದಲ್ಲಿ ಕೂತು ರೋಪ್ ವೇ, ಮೆಟ್ರೋ ಕನಸು ಕಾಣುತ್ತಾ ಇದ್ದೀಯೋ ಏನೋ! ಅಥವಾ ಇನ್ನಷ್ಟು ಕನ್ನಡದ ಪ್ರಾಯೋಗಿಕ ಸಿನೆಮಾಗಳ ಸ್ಕ್ರಿಪ್ಟ್ ಬರೆಯುತ್ತ ಇರಬಹುದು! ನೀನೆಲ್ಲಿ ಸುಮ್ಮನೆ ಕೂರುತ್ತೀ ಹೇಳು?
ಸತ್ತ ಮೇಲೆ ಸಮಾಧಿಯಲ್ಲಿ ಮಲಗೋದು ಇದ್ದೇ ಇದೆ. ಬದುಕಿದ್ದಾಗ ಏನು ಮಾಡಬೇಕು ಅಂತ ಕನಸಿದೆಯೋ ಅದನ್ನು ಬೇಗ ಮಾಡಿ ಮುಗಿಸು ಎಂದು ಜೀವಂತ ಆಗಿದ್ದಾಗಲೇ ನಮಗೆ ಹೇಳಿದವನು ನೀನು! ನಿನಗೆ ನಿನ್ನ ಆಯಸ್ಸು ಕೇವಲ 35 ವರ್ಷ ಎಂದು ಮೊದಲೇ ಗೊತ್ತಿತ್ತಾ? ಅದಕ್ಕಾಗಿ 12 ವರ್ಷಗಳ ಸಿನೆಮಾ ಬದುಕಿನಲ್ಲಿ ಒಂದಕ್ಕಿಂತ ಒಂದು ಅದ್ಭುತವಾದ ಸಿನೆಮಾ ಮಾಡಿ ಮುಗಿಸಿಬಿಟ್ಟದ್ದು ಅಲ್ವಾ ಶಂಕರಾ!
ನೀನು ಹುಟ್ಟಿದ್ದು ಉಡುಪಿಯಲ್ಲಿ ಎಂಬಲ್ಲಿಗೆ ನೀನು ನಮಗೆ ಹತ್ತಿರ! ನಕ್ಷತ್ರದ ಪ್ರಕಾರ ನಿನ್ನ ಹೆತ್ತವರು ಇಟ್ಟ ಹೆಸರು ಅವಿನಾಶ್ ಎಂಬಲ್ಲಿಗೆ ನೀನು ಅವಿನಾಶಿ! ಚಿರಂಜೀವಿ! ಇಂದಿಗೆ ನೀನು ಸ್ವರ್ಗವನ್ನು ಸೇರಿಕೊಂಡು 32 ವರ್ಷಗಳು ಪೂರ್ತಿಯಾದರೂ ನೀನು ನಮ್ಮ ಕನ್ನಡಿಗರ ಹೃದಯದಲ್ಲಿ ನಿಜವಾಗಿ ಅವಿನಾಶಿ! ನಿನಗ್ಯಾವ ಸಾವು? ನಿನಗ್ಯಾವ ಅಂತ್ಯ?
ನೀನೆಷ್ಟು ಪ್ರತಿಭಾವಂತ ಎಂದರೆ ನೀನು ಅಭಿನಯ ಮಾಡಿದ ಮೊದಲ ಕನ್ನಡ ಸಿನೆಮಾ ‘ಒಂದಾನೊಂದು ಕಾಲದಲ್ಲಿ’ ರಾಷ್ಟ್ರ ಪ್ರಶಸ್ತಿಯನ್ನು ಪಡೆಯಿತು! ನೀನು ಸ್ಕ್ರಿಪ್ಟ್ ಬರೆದ ಮೊದಲ ಮರಾಠಿ ಸಿನೆಮಾ ಕೂಡ ರಾಷ್ಟ್ರಪ್ರಶಸ್ತಿ ಗೆದ್ದಿತು! ನೀನು ನಿರ್ದೇಶನ ಮಾಡಿದ ಮೊದಲ ಸಿನೆಮಾ ‘ಮಿಂಚಿನ ಓಟ ‘ ಒಟ್ಟು ಏಳು ರಾಜ್ಯಪ್ರಶಸ್ತಿಗಳನ್ನು ಪಡೆಯಿತು! ಭಾರತದ ಮೊಟ್ಟಮೊದಲ ಅಂಡರ್ ವಾಟರ್ ಶೂಟ್ ಆದ ಸಿನಿಮಾ ‘ಒಂದು ಮುತ್ತಿನ ಕಥೆ ‘ನಿರ್ದೇಶನ ಮಾಡಿದ್ದು ನೀನೇ! ಅದು ಕೂಡ ಕನ್ನಡದ ಮಹಾನಟ ಡಾಕ್ಟರ್ ರಾಜಕುಮಾರ್ ಅವರನ್ನು ಇಟ್ಟುಕೊಂಡು! ನೀನೇ ಒಂದು ಅದ್ಭುತ ಶಂಕರಾ…
ನಿನ್ನಷ್ಟು ಪ್ರಯೋಗಾತ್ಮಕ ಸಿನೆಮಾಗಳನ್ನು ಕನ್ನಡದಲ್ಲಿ ಬೇರೆ ಯಾರೂ ಈವರೆಗೆ ಮಾಡಿಲ್ಲ ಕಣೋ! ನೀನು ಬದುಕಿದ್ದರೆ ಕನ್ನಡ ಸಿನೆಮಾ ರಂಗವು ಇಂದು ಯಾವ ಲೆವೆಲ್ಲಿಗೆ ತಲುಪುತ್ತಿತ್ತು, ಎಷ್ಟು ರಾಷ್ಟ್ರಪ್ರಶಸ್ತಿಗಳನ್ನು ಪಡೆಯುತ್ತಿತ್ತು ಎಂದು ಕಲ್ಪನೆ ಮಾಡಿದರೆ ನನಗೆ ನಿಜಕ್ಕೂ ಅಚ್ಚರಿಯೇ ಮೂಡುತ್ತದೆ! ಅಷ್ಟೊಂದು ದೊಡ್ಡದಾಗಿ ಕಲ್ಪನೆ ಮಾಡುವ ಶಕ್ತಿ ನಮಗೆಲ್ಲ ಕೊಟ್ಟದ್ದು ನೀನೇ ಶಂಕರಾ! ನೀನು ಕನ್ನಡದ ಬಹಳ ದೊಡ್ಡ ಕನಸುಗಾರ!
ನೀನು ಅಭಿನಯ ಮಾಡಿದ ಕಮರ್ಷಿಯಲ್ ಸಿನೆಮಾಗಳದ್ದೇ ಒಂದು ತೂಕ ! ಸೀತಾ ರಾಮು, ಆಟೋ ರಾಜಾ, ಆರದ ಗಾಯ, ಸಾಂಗ್ಲಿಯಾನ, ಸಿಬಿಐ ಶಂಕರ್, ನ್ಯಾಯ ಎಲ್ಲಿದೆ? ಭಾರಿ ಭರ್ಜರಿ ಬೇಟೆ…ಹೀಗೆ! ಹನ್ನೆರಡು ವರ್ಷಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಸಿನೆಮಾಗಳು! ಮೂರು ಮೂರು ಶಿಫ್ಟ್‌ಗಳಲ್ಲಿ ಶೂಟಿಂಗ್, ಕಾಲಿಗೆ ಚಕ್ರ ಕಟ್ಟಿದ ಹಾಗೆ ಮಿಂಚಿನ ಓಟ, ಅದರ ನಡುವೆ ಸ್ಕ್ರಿಪ್ಟ್ ರಚನೆ, ಸಂಭಾಷಣೆ, ಶೂಟಿಂಗ್, ನಾಟಕ, ಧಾರಾವಾಹಿ…ನಿನ್ನ ಕನಸುಗಳಿಗೆ ಮತ್ತು ಸಾಧನೆಗಳಿಗೆ ಆಕಾಶವೇ ಮಿತಿ ಕಣೋ! ನೀನು ನಿಜವಾದ ಅರ್ಥದಲ್ಲಿ ಕನ್ನಡದ ಮುತ್ತು!
ನಿನಗೆ ಗೊತ್ತಿರಲಿ ಶಂಕರಾ. ನಿನ್ನ ಹುಟ್ಟಿದ ಹಬ್ಬವಾದ ನವೆಂಬರ್ ಒಂಬತ್ತನ್ನು ಇಡೀ ಕರ್ನಾಟಕದ ರಿಕ್ಷಾ ಚಾಲಕರು ‘ಆಟೋರಿಕ್ಷಾ ದಿನ’ ಎಂದು ಆಚರಿಸುತ್ತಾರೆ! ಮಹಾ ನಗರಗಳಲ್ಲಿ ಓಡುತ್ತಿರುವ ಮೂರರಲ್ಲಿ ಒಂದು ರಿಕ್ಷಾದ ಹಿಂದೆ ನಿನ್ನ ಚಿತ್ರ ಇದೆ! ಅದಕ್ಕೆ ಕಾರಣ ನೀನು ಅಭಿನಯ ಮಾಡಿದ ‘ಆಟೋ ರಾಜ’ ಸಿನೆಮಾ! ನಿನ್ನನ್ನು ಯಾರು ಮರೆತರೂ ರಿಕ್ಷಾ ಚಾಲಕರು ಮರೆತಿಲ್ಲ ಕಣೋ! ನೀನು ಅಷ್ಟರ ಮಟ್ಟಿಗೆ ಜನ ಸಾಮಾನ್ಯರ ಸ್ಟಾರ್ ಆಗಿ ಬಿಟ್ಟಿದ್ದೀ! ಅದು ಕನ್ನಡಿಗರ ಹೆಮ್ಮೆ!
ನೀನು ನಿರ್ದೇಶನ ಮಾಡಿದ ಪ್ರಯೋಗಾತ್ಮಕ ಸಿನಿಮಾಗಳದ್ದು ಇನ್ನೊಂದು ತೂಕ! ಅವೆಲ್ಲವೂ
‘ಅಹೆಡ್ ಆಫ್ ಟೈಮ್’ ಎಂದು ಕರೆಸಿಕೊಂಡಿವೆ!
‘ಮಿಂಚಿನ ಓಟ’ ಎಂಬುದು ಇಬ್ಬರು ಕಳ್ಳರ ಕತೆಯಾದರೆ, ಬೆಂಗಳೂರಿನ ಬೇರೆಯೇ ಮುಖವನ್ನು ಪರಿಚಯ ಮಾಡಿದ ‘ನೋಡಿ ಸ್ವಾಮಿ ನಾವಿರೋದು ಹೀಗೆ’ ಕನ್ನಡದ ಮಟ್ಟಿಗೆ ಕ್ಲಾಸಿಕ್ ಸಿನೆಮಾ! ನೈಜ ಘಟನೆಯ ಹಸಿಹಸಿ ಚಿತ್ರಣವನ್ನು ನೀಡಿದ ‘ ಆಕ್ಸಿಡೆಂಟ್’ ರಾಷ್ಟ್ರಪ್ರಶಸ್ತಿಯನ್ನು ಪಡೆಯಿತು. ಮೀನುಗಾರ ಕುಟುಂಬ ಒಂದರ ನೈತಿಕ ಪತನದ ಕತೆಯನ್ನು ಹೊಂದಿದ ‘ಒಂದು ಮುತ್ತಿನ ಕತೆ’.. ಈ ಸಿನೆಮಾಗಳು ಇವತ್ತಿಗೂ ಕನ್ನಡದ ಮಹೋನ್ನತ ಸಿನೆಮಾಗಳು!
ಅದೇ ರೀತಿ ಪುನರ್ಜನ್ಮದ ಕತೆ ಹೊಂದಿದ ‘ ಜನುಮ ಜನುಮದ ಅನುಬಂಧ’, ಕ್ಯಾನ್ಸರ್ ವಿರುದ್ದ ಹೋರಾಟದ ಕತೆಯನ್ನು ಹೊಂದಿದ್ದ ‘ಗೀತಾ’ ಈ ಸಿನೆಮಾಗಳನ್ನು ನಾವು ಮರೆಯುವುದು ಹೇಗೆ? ನೀನು ಕನ್ನಡ ಸಿನೆಮಾಗಳನ್ನು ಬಹಳ ಎತ್ತರಕ್ಕೆ ಏರಿಸಿದ ಶಿಲ್ಪಿ ಕಣೋ! ನಿನಗೆ ಇವತ್ತಿಗೂ ಪರ್ಯಾಯ ಕನ್ನಡದಲ್ಲಿ ಸಿಕ್ಕಿಲ್ಲ ಅನ್ನುವುದು ನಮ್ಮ ದುರಂತ!
ನೀನು ಉತ್ಸಾಹದಲ್ಲಿ ನಿರ್ದೇಶನ ಮಾಡಿದ ‘ಮಾಲ್ಗುಡಿ ಡೇಸ್’ ಧಾರಾವಾಹಿಯ ಬಗ್ಗೆ ಏನು ಹೇಳೋದು ಶಂಕರಾ? ಆರ್ ಕೆ ನಾರಾಯಣ್ ಬರೆದ ಕತೆ ಆಧರಿಸಿ ನೀನು ನಿರ್ದೇಶನ ಮಾಡಿದ ಈ ಧಾರಾವಾಹಿಯು ರಾಷ್ಟ್ರೀಯ ವಾಹಿನಿಯಲ್ಲಿ ಅಂದು ನಿರ್ಮಿಸಿದ ದಾಖಲೆಯು ಇಂದಿಗೂ ಅಚ್ಚರಿ! ಕನ್ನಡದ ಶ್ರೇಷ್ಠ ನಟರಾದ ವಿಷ್ಣುವರ್ಧನ್, ಅನಂತ್ ನಾಗ್, ರಮೇಶ್ ಭಟ್, ಮಾಸ್ಟರ್ ಮಂಜುನಾಥ್ ಮೊದಲಾದವರನ್ನು ನಾವು ದೊಡ್ಡ ಕಣ್ಣಿಂದ ಒಂದು ರಾಷ್ಟ್ರಮಟ್ಟದ ವಾಹಿನಿಯಲ್ಲಿ ನೋಡಲು ಸಾಧ್ಯ ಆದದ್ದು ಅದು ನಿನ್ನ ಕಾರಣಕ್ಕೆ! ಅದು ಕರ್ನಾಟಕದ ಆಗುಂಬೆಯಲ್ಲಿ ಶೂಟಿಂಗ್ ಆಯಿತು ಅನ್ನುವುದು ಇನ್ನೊಂದು ಹೆಗ್ಗಳಿಕೆ!
ಅದೇ ವರ್ಷ ‘ಸ್ವಾಮಿ ಆಂಡ್ ಹಿಸ್ ಫ್ರೆಂಡ್ಸ್’ ಧಾರಾವಾಹಿಯನ್ನು ಕೂಡ ನೀನು ನಿರ್ದೇಶನ ಮಾಡಿದ್ದು ನಮಗೆಲ್ಲ ಒಂದು ಹೆಮ್ಮೆಯ ಸಂಗತಿ! ನೀನು ನಮಗೆಲ್ಲ ಅವಿನಾಶಿ ಕಲಾವಿದ ಕಣೋ!
ನನ್ನನ್ನು ಸ್ಟಾರ್ ಎಂದು ಕರೆಯಬೇಡಿ, ನಾನೊಬ್ಬ ಸಾಮಾನ್ಯ ಕಲಾವಿದ ಅಂದದ್ದು ನೀನೇ ಅಲ್ಲವೇ? ಸಿನೆಮಾಕ್ಕೆ ಇರುವ ಎಲ್ಲ ಸಾಧ್ಯತೆಗಳು ನಾಟಕಕ್ಕೆ ಇವೆ, ಆದರೆ ನಾಟಕಕ್ಕೆ ಇರುವ ಸಾಧ್ಯತೆಗಳು ಸಿನೆಮಾಕ್ಕೆ ಇಲ್ಲ, ನಾನೊಬ್ಬ ಸಿನೆಮಾ ನಟ ಅನ್ನೋದಕ್ಕಿಂತ ನಾಟಕ ಕಲಾವಿದ ಎಂದು ಕರೆಸಿಕೊಳ್ಳಲು ಇಷ್ಟ ಪಡುತ್ತೇನೆ, ಎಂದದ್ದು ಕೂಡ ನೀನೇ ಅಲ್ವಾ ಶಂಕರಾ!
ನೀನೊಬ್ಬ ಬಹಳ ದೊಡ್ಡ ಕನಸುಗಾರ ಶಂಕರಾ…. ಎಂಬತ್ತರ ದಶಕದಲ್ಲಿಯೇ ಬೆಂಗಳೂರು ಮೆಟ್ರೋ ರೈಲಿನ ನಿನ್ನ ಕನಸು ನೀನು ನಮ್ಮನ್ನು ಬಿಟ್ಟು ಹೋದನಂತರ ಪೂರ್ತಿ ಆಯ್ತು. ನೀನು ನಂದಿಬೆಟ್ಟಕ್ಕೆ ರೋಪ್ ವೇ, ಕೇಬಲ್ ಕಾರ್ ಆಗಬೇಕೆಂದು ಸರಕಾರವನ್ನು ಒತ್ತಾಯಿಸಿದ್ದು ನಮಗೆ ಮರೆತು ಹೋಗುವುದಿಲ್ಲ! ಸಣ್ಣ ಆದಾಯದ ಕುಟುಂಬಗಳಿಗೆ ಕಡಿಮೆ ಬಜೆಟ್ ಮನೆಗಳ ಯೋಜನೆಯ ನೀಲಿ ನಕಾಶೆ ರಚಿಸಿ ಆ ಕಾಲದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮುಂದೆ ಧರಣಿ ಕೂತದ್ದನ್ನು ನಾವು ಹೇಗೋ ಮರೆಯುವುದು?
ನಿನ್ನ ಕನಸುಗಳಲ್ಲಿ ಕೆಲವು ನಿನ್ನ ನಂತರ ಪೂರ್ತಿ ಆಗಿವೆ. ಇನ್ನೂ ಕೆಲವು ಬಾಕಿ ಇವೆ. ಅದನ್ಯಾಕೊ ಬಾಕಿ ಇಟ್ಟು ನೀನು ಅರ್ಜೆಂಟಲ್ಲಿ ಹೊರಟದ್ದು? ಏನವಸರ ಇತ್ತು ನಿನಗೆ?
ನಿನ್ನ ನೆನಪನ್ನು ಜೀವಂತವಾಗಿ ಇಟ್ಟಿರುವ ಸಂಕೇತ್ ಸ್ಟುಡಿಯೋ, ಸಂಕೇತ ನಾಟಕ ತಂಡ, ‘ರಂಗ ಶಂಕರ’ ನಾಟಕ ಮಂದಿರ ಎಲ್ಲವೂ ಪೂರ್ತಿ ಆಗಿವೆ! ಕನ್ನಡಿಗರು ನಿನ್ನನ್ನು ಮರೆತಿಲ್ಲ ಶಂಕರಾ…. ಮರೆಯಲು ಸಾಧ್ಯವೇ ಇಲ್ಲ! ನೀನು ಅಭಿನಯ ಮಾಡಿದ, ನಿರ್ದೇಶನ ಮಾಡಿದ, ಸ್ಕ್ರಿಪ್ಟ್ ಬರೆದ ನೂರಾರು ಸಿನೆಮಾಗಳು ಇನ್ನೂ ಜೀವಂತ ಇವೆ. ನಿನ್ನ ನೆನಪುಗಳು ಹೇಗೋ ಸಾಯೋದು? ನಿನ್ನ ಅಣ್ಣ ಅನಂತ ನಾಗ್ ಬರೆದ ‘ನನ್ನ ತಮ್ಮ ಶಂಕರ’ ಪುಸ್ತಕವನ್ನು ಹಲವು ಬಾರಿ ಓದಿ ಹಾಗೆಯೇ ಎದೆಯ ಮೇಲೆ ಒರಗಿಸಿ ಕಣ್ಣೀರು ಸುರಿಸುತ್ತೇನೆ ಶಂಕರಾ! ಗಣೇಶ್ ಕಾಸರಗೋಡು ಬರೆದ
‘ನೆನಪಿನಂಗಳದಲ್ಲಿ ಶಂಕರನಾಗ್’ ಪುಸ್ತಕವೂ ನನಗೆ ಕಣ್ಣೀರು ತರಿಸುತ್ತದೆ. ಯಾಕೋ ಅವಸರ ಮಾಡಿದೆ?
ಅದೊಂದು ರಾತ್ರಿ ನೂರಾರು ಜನರು ಬೇಡ ಶಂಕರಾ ಅಂದರೂ ಕಿವಿಗೆ ಹಾಕಿಕೊಳ್ಳದೆ
‘ಜೋಕುಮಾರ ಸ್ವಾಮಿ’ ಸಿನೆಮಾದ ಚಿತ್ರೀಕರಣಕ್ಕೆ ಯಾಕೋ ಅವಸರ ಅವಸರವಾಗಿ ಹೊರಟೆ? ಚಿತ್ರದುರ್ಗ ಜಿಲ್ಲೆಯ ಹೊರವಲಯದಲ್ಲಿ ಅನಗೊಡು ಎಂಬ ಊರಿನ ಹೆದ್ದಾರಿಯಲ್ಲಿ ಕಾದು ಕೂತ ಯಮಧರ್ಮನಿಗೂ ಕರುಣೆ ಬರಲಿಲ್ಲವೇ? ಆ ಸುದ್ದಿಯನ್ನು ನಂಬದೇ ಹೋದ ಕೋಟಿ ಕೋಟಿ ಕನ್ನಡಿಗರು ಮುಂದೆ ಸುರಿಸಿದ ಕಣ್ಣೀರು ಅದೆಷ್ಟು?
ನಿನ್ನದೇ ಸಿನೆಮಾದ ಇಳಯರಾಜ ಸಂಗೀತ ನೀಡಿದ ಅದ್ಭುತ ಹಾಡು ನೆನಪಾಗುತ್ತದೆ ಶಂಕರಾ!
ಕೇಳದೆ ನಿಮಗೀಗ, ದೂರದಲ್ಲಿ ಯಾರೋ..! ಅದು ನೀನೇ ಇರಬೇಕು.
ಜೀವಂತ ಇರುವವರಿಗೆ ಶೃದ್ಧಾಂಜಲಿ ಕೊಡುವ ಕ್ರಮ ಇಲ್ಲ. ಆದ್ದರಿಂದ ನಿನಗೆ ಕನ್ನಡಿಗರು ಶ್ರದ್ಧಾಂಜಲಿ ಕೊಡುವುದಿಲ್ಲ ಆಯ್ತಾ ಶಂಕರಾ! ಒಮ್ಮೆ ಹಾಗೆ ಹೋಗಿ ಹೀಗೆ ಬಾ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಪ್ಪ ಮಗನಾದ, ಮಗ ಅಪ್ಪನಾದ ಅಪರೂಪದ ಸಿನಿಮಾ ʻಪಾʼ: ಬಿಗ್ ಬಿ ಬದ್ಧತೆಯ ಸಾಕ್ಷ್ಯ ಚಿತ್ರ!