Site icon Vistara News

ರಾಜ ಮಾರ್ಗ ಅಂಕಣ: ಬಂಜರು ಭೂಮಿಯಲ್ಲಿ ದಾಳಿಂಬೆ ಬೆಳೆದು ಲಕ್ಷ ಲಕ್ಷ ಗಳಿಸಿದ ಸಂತೋಷಿ ದೇವಿ!

raja-marga-column-santhoshi-devi grown pommegranate in Barren land!

raja-marga-column-santhoshi-devi grown pommegranate in Barren land!

ಇಂದು ಕೃಷಿ ಭೂಮಿ ಇದ್ದೂ ಬಿಳಿ ಕಾಲರಿನ ಉದ್ಯೋಗವನ್ನು ಹುಡುಕುವ ಯುವಜನತೆಗೆ ಈಕೆಯ ಸಾಧನೆ ಚಾಟಿ ಬೀಸಿದ ಹಾಗಿದೆ! ರಾಜಸ್ಥಾನದ ಸಿಕಾರ್ ಜಿಲ್ಲೆಯ ಅತೀ ಸಣ್ಣ ಗ್ರಾಮದ ಸಂತೋಷಿ ದೇವಿ ಅವರಿಂದು ಬಂಜರು ಭೂಮಿಯಲ್ಲಿ ದಾಳಿಂಬೆ ಬೆಳೆದು ಲಕ್ಷ ಲಕ್ಷ ದುಡ್ಡು ಗಳಿಸಿದ್ದಾರೆ! ನಿಜವಾಗಿಯೂ ಆಕೆ ಗೆದ್ದಿದ್ದಾರೆ!

ಸಂತೋಷಿ ದೇವಿ ಅವರಿಗೆ 15 ವರ್ಷ ಪ್ರಾಯದಲ್ಲಿ ಮದುವೆ ಆಯಿತು. ತಾಯಿಯ ಮನೆಯಲ್ಲಿ ಕೃಷಿ ಭೂಮಿ ಇದ್ದ ಕಾರಣ ಅವರಿಗೆ ಕೃಷಿಯಲ್ಲಿ ಆಸಕ್ತಿಯಿತ್ತು. ಅವರ ಗಂಡ ರಾಮಕರಣ್ ಒಬ್ಬ ಹೋಂ ಗಾರ್ಡ್ ಆಗಿದ್ದು ತಿಂಗಳಿಗೆ ಕೇವಲ 3,000 ರೂಪಾಯಿ ಸಂಪಾದನೆ ಇತ್ತು. ಇದರಿಂದ ಗಂಡನ ಮನೆಯಲ್ಲಿ ಚುಚ್ಚುಮಾತು ಆಕೆ ಕೇಳಬೇಕಾಯಿತು. “ಗಂಡನ ಸಂಪಾದನೆಯಿಂದ ನಿನ್ನ ಮಕ್ಕಳು ಹೊಟ್ಟೆ ತುಂಬಾ ಉಣ್ಣುವುದು ಸಾಧ್ಯವೇ ಇಲ್ಲ” ಎನ್ನುತ್ತಿದ್ದರು. 2008ರ ಹೊತ್ತಿಗೆ ಹಿರಿಯರ ಆಸ್ತಿ ಪಾಲಾಗಿ ಇವರ ಪಾಲಿಗೆ ಬಂದದ್ದು ನೀರಿನ ಒರತೆ ಇಲ್ಲದ ಒಂದೂವರೆ ಎಕರೆ ಬಂಜರು ಭೂಮಿ. ಸಾರವೇ ಇಲ್ಲದ ಭೂಮಿ ಅದು.

ಆದರೆ ಆಕೆ ಕೃಷಿಯ ಮೂಲಕ ಅಪಮಾನ ಮೆಟ್ಟಿ ನಿಲ್ಲುವ ಪಣ ತೊಟ್ಟಾಗಿತ್ತು! ಆಕೆಗೆ ತಾಯಿಯ ಮನೆಯಲ್ಲಿ ಕೃಷಿಯ ಬಗ್ಗೆ ಅನುಭವ ಇತ್ತು ಮತ್ತು ದುಡಿಯಲು ಹುಮ್ಮಸ್ಸು ಇತ್ತು!

ದಾಳಿಂಬೆ ಬೆಳೆ ಅವರ ಕೈ ಹಿಡಿಯಿತು

ಒಬ್ಬ ಕೃಷಿ ಅಧಿಕಾರಿಯು ಮಣ್ಣಿನ ಪರೀಕ್ಷೆಯನ್ನು ಮಾಡಿ ದಾಳಿಂಬೆ ಗಿಡ ಬೆಳೆಯಲು ಸಲಹೆ ನೀಡಿದರು. ಆಕೆ ತಮ್ಮಲ್ಲಿ ಇದ್ದ ಒಂದು ಕೋಣವನ್ನು ಮಾರಿ ಆ ದುಡ್ಡಿನಿಂದ 220 ದಾಳಿಂಬೆ ಗಿಡ ತಂದರು. ಸ್ವಲ್ಪ ಹಣವನ್ನು ಉಳಿಸಿ ಕೊಳವೆ ಬಾವಿ ತೋಡಿದರು. ಆಗ ಅವರ ಊರಲ್ಲಿ ಕರೆಂಟ್ ಇರಲಿಲ್ಲ. ಅದಕ್ಕಾಗಿ ಬಾಡಿಗೆಯ ಜನರೇಟರ್ ತಂದರು. ರೇಶನ್ ಅಂಗಡಿಯ ಸೀಮೆ ಎಣ್ಣೆ ತಂದು ಪಂಪ್ ಚಾಲೂ ಮಾಡಿದರು. ಹನಿ ನೀರಾವರಿಯ ವ್ಯವಸ್ಥೆಯು ಸಿದ್ಧವಾಯಿತು. ಕಳೆ ಕಿತ್ತು ದಾಳಿಂಬೆಯ ಗಿಡಗಳನ್ನು ನೆಟ್ಟರು.

ನೀರಾವರಿ ವ್ಯವಸ್ಥೆಯನ್ನು ಹೇಗೆ ಅಚ್ಚುಕಟ್ಟಾಗಿ ಮಾಡಿದ್ದಾರೆ ನೋಡಿ

ಗಿಡಗಳಿಗೆ ಕೇವಲ ಸಾವಯವ ಗೊಬ್ಬರ ಹಾಕಿ ಬೆಳೆಸಿದರು. ಹಣ್ಣು ಬಿಡಲು ಶುರುವಾದಾಗ ಗಿಡದ ಅಡ್ಡ ರೆಂಬೆಗಳನ್ನು ಕತ್ತರಿಸಿದರು. ಇದರಿಂದ ಮಣ್ಣಿನ ಸತ್ವವು ಪೂರ್ತಿ ಹಣ್ಣಿಗೆ ದೊರೆಯಿತು. ಇದರ ಪರಿಣಾಮವಾಗಿ ಗಾತ್ರದಲ್ಲಿ ತುಂಬಾ ದೊಡ್ಡದಾದ ಮತ್ತು ರುಚಿಯಾದ ದಾಳಿಂಬೆ ಹಣ್ಣುಗಳು ಸಿಕ್ಕಿದವು.
ಮೂರು ವರ್ಷಗಳ ಬೆವರಿನ ಫಲವು ದಾಳಿಂಬೆ ತೋಟದಲ್ಲಿ ಎದ್ದು ಕಂಡಿತು! ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಹಣ್ಣಿನ ವ್ಯಾಪಾರಿಗಳು ನೇರವಾಗಿ ತೋಟಕ್ಕೆ ಬಂದು ಖರೀದಿ ಮಾಡಲು ಅವರನ್ನು ಒಪ್ಪಿಸಿದರು. ಇದರ ಫಲವಾಗಿ ಮೊದಲ ಫಸಲಲ್ಲಿ ಮೂರು ಲಕ್ಷ ರೂ. ಉಳಿತಾಯ ಆಗಿತ್ತು!

ಇದರ ಪರಿಣಾಮ ಸಂತೋಷಿ ಅವರಿಗೆ ಧೈರ್ಯ ಬಂದಿತ್ತು. ಮುಂದೆ ಅವರು ಮಾಡಿದ ಇನ್ನೂ ಕೆಲವು ಸುಧಾರಣೆಗಳು ಅವರಿಗೆ ಇನ್ನಷ್ಟು ಲಾಭವನ್ನು ತಂದವು.

ಸಾವಯವ ಗೊಬ್ಬರಕ್ಕೆ ಬೆಲ್ಲ ಬೆರೆಸಿದ ಕಾರಣ ಹೆಚ್ಚು ದುಂಬಿಗಳು ಆಕರ್ಷಿತವಾಗಿ ಪರಾಗಸ್ಪರ್ಶ ಕ್ರಿಯೆ ಹೆಚ್ಚಾಯಿತು. ದಾಳಿಂಬೆ ಮರಗಳ ನಡುವೆ ಸೇಬು, ಲಿಂಬೆ, ಮೂಸಂಬಿ ಗಿಡಗಳನ್ನು ನೆಟ್ಟರು. ದಾಳಿಂಬೆ ಗಿಡದ ಬುಡವನ್ನು ಬಿಡಿಸಿ, ಕಟ್ಟೆ ಕಟ್ಟಿ, ನಿರಂತರ ನೀರು ನಿಲ್ಲಿಸಿ ಮಣ್ಣು ಒದ್ದೆಯಿರುವ ಹಾಗೆ ನೋಡಿಕೊಂಡರು. ಸೋಲಾರ್ ಪ್ಯಾನೆಲ್ ಅಳವಡಿಸಿ ವಿದ್ಯುತ್ತಿನ ಉಳಿತಾಯವನ್ನು ಮಾಡಿದರು. ದಾಳಿಂಬೆ ಗಿಡದ ಗೆಲ್ಲುಗಳನ್ನು ಕತ್ತರಿಸಿ ಸ್ವಂತ ನರ್ಸರಿ ಮಾಡಿ ಮಾರಿದರು.

ಸಂತೋಷಿ ದೇವಿ ತೋಟದ ದಾಳಿಂಬೆ ಗಾತ್ರವೂ ದೊಡ್ಡದೆ..

ಒಂದೊಂದು ಬೆವರ ಹನಿಯು ಮುತ್ತಾಯ್ತು!

ಕಾರ್ಮಿಕರನ್ನು ನೇಮಕ ಮಾಡದೆ ಹೆಂಡತಿ, ಗಂಡ ಮತ್ತು ಸಂಜೆ ಶಾಲೆಯಿಂದ ಬಂದ ಮಕ್ಕಳು ಸತತವಾಗಿ ದುಡಿದರು. ಈಗ ಅದೇ ಒಂದೂವರೆ ಎಕರೆ ಭೂಮಿಯಲ್ಲಿ ದಾಳಿಂಬೆ ಕೃಷಿಯ ಮೂಲಕ ವರ್ಷಕ್ಕೆ 15ರಿಂದ 20 ಲಕ್ಷ ರೂ. ಮೀರಿದ ಆದಾಯವನ್ನು ಆಕೆ ಪಡೆಯುತ್ತಿದ್ದಾರೆ! ನರ್ಸರಿಯ ಮೂಲಕವೂ ಲಾಭ ಬರುತ್ತಿದೆ.

ಭಾರತ ಸರಕಾರವು ಅವರಿಗೆ 2016ರಲ್ಲಿ ‘ಕೃಷಿ ಮಂತ್ರ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅವರ ಇಬ್ಬರು ಹೆಣ್ಣು ಮಕ್ಕಳಿಗೆ ಕೂಡ ಮದುವೆಯಾಗಿದೆ. ಮದುವೆಗೆ ಬಂದವರಿಗೆಲ್ಲ ದಾಳಿಂಬೆ ಗಿಡಗಳನ್ನು ಗಿಫ್ಟ್ ನೀಡಿದ್ದಾರೆ. ಅವರ ಮೂವರು ಮಕ್ಕಳು ಕೂಡ ಕೃಷಿ ವಿಜ್ಞಾನದ ಪದವಿ ಪಡೆದಿದ್ದಾರೆ. ಸಂತೋಷಿ ದೇವಿ ಅವರು ಇಂದು ತನ್ನ ಕೃಷಿಯ ಸಾಧನೆಗಳ ಮೂಲಕ ಸಾವಿರಾರು ಯುವಜನರಿಗೆ ಪ್ರೇರಣೆಯಾಗಿದ್ದಾರೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ದೇಶದ ಪ್ರಪ್ರಥಮ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್‌ ಷಾ ಬಯೋಪಿಕ್‌ ಬರ್ತಿದೆ!

Exit mobile version