Site icon Vistara News

Raja Marga Column : ಇಂದು ಪಟೇಲರ ಜನ್ಮ ದಿನ, ಅವರ ವ್ಯಕ್ತಿತ್ವ ಪ್ರತಿಮೆಗಿಂತಲೂ ಸಾವಿರ ಪಟ್ಟು ಎತ್ತರ

sardar Vallabhbhai patel birthday on October 31

ಸರ್ದಾರ್ ವಲ್ಲಭಭಾಯ್ ಪಟೇಲ್ (Sardar Vallabhbhai Patel) ಅವರ ಬಗ್ಗೆ ತುಂಬಾ ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ. ಅವರ ಬಗ್ಗೆ ನಮಗೆ ಇರುವ ಗೌರವ, ಅವರ ಸಾಧನೆಗಳ ಬಗ್ಗೆ ನಮಗೆ ಇರುವ ಅಭಿಮಾನ ಇವು ಕಡಿಮೆ ಆಗೋದಿಲ್ಲ. ಇದೀಗ ಅವರ ಜನುಮ ದಿನದ (31-10-1875) ಸಂದರ್ಭದಲ್ಲಿ ಅವರ ಭೀಮ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವ ಸಮಯ (Raja Marga Column).

ಗುಜರಾತಿನಲ್ಲಿ ಸರ್ದಾರ್ ಪಟೇಲರ ಲೋಹದ ಪ್ರತಿಮೆಯು ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಆಗಿದೆ. ಅದರ ಎತ್ತರವೇ 182 ಮೀಟರ್ (ಅಂದಾಜು 600 ಅಡಿ). ಅದನ್ನು ಏಕತಾ ಪ್ರತಿಮೆ (Statue of Unity) ಎಂದು ಕರೆಯುತ್ತಾರೆ. ಪಟೇಲರ ವ್ಯಕ್ತಿತ್ವವು ಆ ಪ್ರತಿಮೆಗಿಂತ ಸಾವಿರಾರು ಪಟ್ಟು ಎತ್ತರ ಎಂದು ಖಚಿತವಾಗಿ ಹೇಳಬಹುದು.

‘ಉಕ್ಕಿನ ಮನುಷ್ಯ’ ಆದದ್ದು ಸುಮ್ಮನೆ ಅಲ್ಲ!

1909ರಲ್ಲಿ ನಡೆದ ಒಂದು ಘಟನೆ. ಪಟೇಲರು ನ್ಯಾಯಾಲಯದಲ್ಲಿ ವಕೀಲರಾಗಿ ವಾದ ಮಂಡಿಸುತ್ತಿದ್ದರು. ಆಗ ಅವರಿಗೆ ಕೋರ್ಟ್ ಗುಮಾಸ್ತ ಒಂದು ಚೀಟಿ ತಂದು ಕೊಟ್ಟರು. ಅದನ್ನು ಓದಿದ ಪಟೇಲರು ಒಂದು ಕ್ಷಣ ಮೌನವಾದರು. ಒಂದು ಹನಿ ಕಣ್ಣೀರು ಗಲ್ಲದ ಮೇಲೆ ಉದುರಿತು. ಮರುಕ್ಷಣ ಎಚ್ಚೆತ್ತುಕೊಂಡ ಅವರು ತನ್ನ ವಾದವನ್ನು ಮುಂದುವರಿಸಿ ಆ ಕೇಸನ್ನು ಗೆದ್ದರು. ಅದು ರೈತರ ಸ್ವಾಭಿಮಾನದ ಕೇಸ್ ಆಗಿತ್ತು. ಆ ಚೀಟಿಯಲ್ಲಿ ಏನಿತ್ತು ಎಂದರೆ ಅವರ ಪ್ರೀತಿಯ ಹೆಂಡತಿ ಜವೇರ್ಬಾ ಪಟೇಲ್ ನಿಧನರಾಗಿದ್ದಾರೆ ಎಂಬ ಸುದ್ದಿ! ಪಟೇಲರು ಒಂದು ಕ್ಷಣ ವಿಚಲಿತರಾದರೂ ತಕ್ಷಣ ಸಾವರಿಸಿಕೊಂಡು ತನ್ನ ನ್ಯಾಯವಾದಿಯ ಕರ್ತವ್ಯವನ್ನು ಪೂರ್ತಿ ಮಾಡಿದ್ದು ನಿಜಕ್ಕೂ ಗ್ರೇಟ್.

ಹಾಗೆಯೇ ತಾವು ಕೈಗೆ ಎತ್ತಿಕೊಂಡ ಯಾವುದೇ ಹೋರಾಟ ಅಥವಾ ಪ್ರಾಜೆಕ್ಟ್ ಪೂರ್ತಿ ಆಗದೇ ಅವರು ವಿಶ್ರಾಂತಿಯನ್ನು ಪಡೆದ ಒಂದು ಉದಾಹರಣೆ ಕೂಡ ದೊರೆಯುವುದಿಲ್ಲ. ಅವರು ಬ್ರಿಟಿಷರ ವಿರುದ್ಧ ಸಂಘಟನೆ ಮಾಡಿದ ಕಾರ್ಮಿಕರ, ರೈತರ, ಜನ ಸಾಮಾನ್ಯರ ಹೋರಾಟಗಳು ಎಲ್ಲವೂ ಗುರಿ ಮುಟ್ಟಿವೆ.
1928ರಲ್ಲಿ ಅವರು ಬಾರ್ಡೋಲಿ ಎಂಬಲ್ಲಿ ಸಂಘಟನೆ ಮಾಡಿದ ಬ್ರಿಟಿಷರ ವಿರುದ್ಧದ ಭಾರೀ ದೊಡ್ಡ ರೈತರ ಹೋರಾಟವು ಅವರಿಗೆ ಭಾರೀ ಹೆಸರು ತಂದುಕೊಟ್ಟಿತ್ತು. ಹಲವು ವರ್ಷಗಳ ಕಾಲ ಪಟೇಲರು ಸೆರೆಮನೆ ವಾಸ ಅನುಭವಿಸಿದ್ದರು.

ಪಟೇಲ್ – ಗಾಂಧಿ – ನೆಹರೂ

ತನ್ನದೇ ರಾಜ್ಯದ ಗಾಂಧಿಯವರ ಪ್ರಭಾವದಿಂದ ಪಟೇಲರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ಗಾಂಧೀಜಿಯವರ ಎಲ್ಲ ಸತ್ಯಾಗ್ರಹ ಮತ್ತು ಹೋರಾಟಗಳಲ್ಲಿ ಮುಂಚೂಣಿಯ ನಾಯಕರಾಗಿ ಕಾಣಿಸಿಕೊಂಡರು. ಗಾಂಧೀಜಿಯವರ ಪ್ರಭಾವದಿಂದ ಖಾದಿ ಬಟ್ಟೆ ತೊಟ್ಟು ಕೋರ್ಟಿನಲ್ಲಿ ವಾದ ಮಂಡಿಸುತ್ತಿದ್ದರು. ಕಪ್ಪು ಕೋಟನ್ನು ತ್ಯಾಗ ಮಾಡಿದ್ದರು. ಆದರೆ ಗಾಂಧೀಜಿಯವರ ಕೆಲವು ತತ್ವಗಳನ್ನು ಅವರು ಕೊನೆಯವರೆಗೂ ಒಪ್ಪಲಿಲ್ಲ. ಪಟೇಲರು ಪ್ರಬಲವಾದ ಹಿಂದೂ ನಾಯಕ. ಭಾರತ-ಪಾಕಿಸ್ತಾನ ವಿಭಜನೆಯನ್ನು ಅವರು ಒಪ್ಪಲಿಲ್ಲ.

ನೆಹರೂ ಅವರ ಬಗ್ಗೆ ಕೂಡ ಪಟೇಲರಿಗೆ ಗೌರವ ಇತ್ತು. ಆದರೆ ಹಲವು ವಿಷಯಗಳಲ್ಲಿ ನೆಹರೂ ಅವರ ಜೊತೆಗೆ ತಾತ್ವಿಕ ಭಿನ್ನಮತ ಇದ್ದೇ ಇತ್ತು. ಹಾಗೆಂದು ಅವರು ಗಾಂಧಿ ಅಥವಾ ನೆಹರೂ ಅವರನ್ನು ಬಹಿರಂಗವಾಗಿ ಎಲ್ಲಿಯೂ ಟೀಕೆ ಮಾಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಪಟೇಲರು ಗಾಂಧಿಯವರ ನಂತರ ನಂಬರ್ 2 ನಾಯಕ ಆಗಿದ್ದವರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಭಾರತದ ಮೊದಲ ಪ್ರಧಾನಿ ಆಗುವಷ್ಟು ಬಹುಮತ ಅವರಿಗೆ ಇದ್ದರೂ ಕೂಡ ಗಾಂಧೀಜಿ ಅವರ ಮಾತನ್ನು ಒಪ್ಪಿ ಹಿಂದೆ ಸರಿದು ನೆಹರೂ ಅವರಿಗೆ ಪಟ್ಟಾಭಿಷೇಕ ಆಯಿತು. ಪಟೇಲರು ಭಾರತದ ಮೊದಲ ಉಪ ಪ್ರಧಾನಿ ಮತ್ತು ಗೃಹ ಸಚಿವರಾಗಿ ಆಯ್ಕೆ ಆದರು. ಈ ಬಗ್ಗೆ ಕೂಡ ಅವರು ಗಾಂಧೀಜಿಯವರ ನಿಲುವನ್ನು ಬಹಿರಂಗವಾಗಿ ಖಂಡಿಸಲೇ ಇಲ್ಲ!

ಭಾರತದ ಏಕೀಕರಣದ ಪಿತಾಮಹ

1947ರಲ್ಲಿ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯವೇನೋ ಬಂದಿತ್ತು. ದೇಶವು ಸಂಭ್ರಮದ ಅಲೆಯಲ್ಲಿ ತೇಲುತ್ತಿತ್ತು. ಆದರೆ ಭಾರತದ ಏಕೀಕರಣಕ್ಕೆ ಭಾರಿ ದೊಡ್ಡ ಸವಾಲು ಇತ್ತು. ಭಾರತದ ಒಳಗಿದ್ದ 565 ಸಂಸ್ಥಾನಗಳು ಬೇರೆ ಬೇರೆ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದವು. ಅವರು ಭಾರತದ ಸಾರ್ವಭೌಮತೆಯ ಕೊಡೆಯ ಅಡಿಯಲ್ಲಿ ಬರಲು ಒಪ್ಪಲಿಲ್ಲ. ಆಗ ಮೂರು ವರ್ಷಗಳ ಅವಧಿಯಲ್ಲಿ ಪಟೇಲರು ಮಾಡಿದ ಹೋರಾಟ (ಅದರ ಬಗ್ಗೆ ಹಿಂದೆ ಬರೆದಿದ್ದೆ) ಅದು ಅದ್ಭುತವೇ ಆಗಿತ್ತು.

ಪಟೇಲರ ವ್ಯಕ್ತಿತ್ವದ ಶಕ್ತಿಯನ್ನು ಭಾರತವು ಬೆರಗುಗಣ್ಣುಗಳಿಂದ ನೋಡಿದ್ದು ಆಗಲೇ! ಸಾಮ, ದಾನ, ಬೇಧ, ದಂಡ ಎಲ್ಲವನ್ನೂ ಪಟೇಲರು ಪ್ರಯೋಗ ಮಾಡಬೇಕಾಯಿತು. ಕೆಲವು ಕಡೆ ಸೇನೆಯನ್ನು ನುಗ್ಗಿಸಬೇಕಾಯಿತು. ಹೈದರಾಬಾದ್ ನಿಜಾಮರಂತಹ ಬಲಿಷ್ಠರನ್ನು ಬಗ್ಗಿಸುವುದು ಸುಲಭ ಇರಲಿಲ್ಲ. ಆಗ ಪಟೇಲರು ತೋರಿದ ಧೈರ್ಯ, ಸ್ವಾಭಿಮಾನ ಮತ್ತು ಕೌಶಲ್ಯಗಳು ಇಡೀ ಭಾರತವನ್ನು ಒಂದು ಮಾಡಿದವು. ಜಮ್ಮು ಕಾಶ್ಮೀರವನ್ನು ಕೂಡ ಭಾರತದ ತೆಕ್ಕೆಯ ಒಳಗೆ ತರುವ ಅವರ ಪ್ರಯತ್ನಕ್ಕೆ ಸರಿಯಾದ ಬೆಂಬಲ ಆಗ ದೊರೆತಿದ್ದರೆ ಕಾಶ್ಮೀರ ಸಮಸ್ಯೆ ಆಗಲೇ ಮುಗಿದು ಹೋಗುತ್ತಿತ್ತು ಎಂದು ಇತಿಹಾಸಕಾರರು ಬರೆದಿದ್ದಾರೆ. ಈ ಒಂದು ಕೊರಗಿನೊಂದಿಗೆ ಅವರು 1950 ಡಿಸೆಂಬರ್ 15ರಂದು ಕಣ್ಣು ಮುಚ್ಚಿದರು.

ಇದನ್ನೂ ಓದಿ : Raja Marga Column : ಅವನಿಗೆ ಎರಡೂ ಕಾಲಿಲ್ಲ; ಆದರೆ, ಮೌಂಟ್‌ ಎವರೆಸ್ಟೇ ಅವನ ಪಾದದ ಕೆಳಗಿತ್ತು!

ಪ್ರಧಾನಿ ಆಗುವ ಎಲ್ಲ ಅರ್ಹತೆ ಮತ್ತು ಬೆಂಬಲ ಇದ್ದರೂ ಅವರು ಆ ಪದವಿಯನ್ನು ಪಡೆಯಲಿಲ್ಲ. ಅದರ ಜೊತೆಗೆ ಅವರಿಗೆ ‘ಭಾರತ ರತ್ನ ‘ ಪ್ರಶಸ್ತಿಯನ್ನು ಕೂಡ ತುಂಬಾ ವಿಳಂಬವಾಗಿ ನೀಡಲಾಯಿತು (1991- ಮರಣೋತ್ತರ) ಎನ್ನುವುದು ಕೂಡ ನೋವಿನ ಸಂಗತಿ.

Exit mobile version